ದೇಶದಲ್ಲಿ ಕರೋನಾ ಕಾಣಿಸಿಕೊಂಡ ದಿನದಿಂದ `ಕಠಿಣ ಕ್ರಮ’ ಎನ್ನುವ ಶಬ್ದವನ್ನು ಜನಪ್ರತಿನಿಧಿಗಳು, ಸರಕಾರ ನಡೆಸುವವವರು ಹೇಳುತ್ತಲೇ ಇದ್ದಾರೆ. ಅದ ರಲ್ಲಿಯೂ ಕರ್ನಾಟಕದಲ್ಲಿ ಕರೋನಾ ಮೊದಲ ಹಾಗೂ ಎರಡನೇ ಅವಧಿಯಲ್ಲಿ ಈ ಮಾತುಗಳನ್ನು ಹಲವು ಬಾರಿ ಮುಖ್ಯಮಂತ್ರಿಗಳು, ಸಚಿವರು ಹೇಳುತ್ತಲೇ ಬಂದಿದ್ದಾರೆ.
ಆದರೆ ಸರಕಾರ ಕಠಿಣ ಕ್ರಮವೆಂದು ಲಾಕ್‌ಡೌನ್, ಕರ್ಫ್ಯೂ ಮಾಡಿದರೆ ಅದು ಕೇವಲ ಬಾಯಿ ಮಾತಿಗೆ ಆಗುತ್ತಿತ್ತು. ಮೊದಲ ಅಲೆಯ ಆರಂಭದಲ್ಲಿ ಲಾಕ್‌ಡೌನ್ ಹೇರಿದ್ದಾಗ ಇದ್ದ ಕಠಿಣ ಕ್ರಮ, ಬೆದರಿಕೆ ಎರಡನೇ ಅಲೆಯ ವೇಳೆ ಬರಲಿಲ್ಲ. ಅದರಲ್ಲಿಯೂ ರಾಜಧಾನಿ ಬೆಂಗಳೂರಿನಲ್ಲಿ ಕರೋನಾ ಸೋಂಕು ಉತ್ತುಂಗ ದಲ್ಲಿದ್ದರೂ ಜನ ಮಾತ್ರ ಬೇಕಾಬಿಟ್ಟು ಓಡಾಡುತ್ತಿದ್ದರು. ಇವರನ್ನು ನಿಯಂತ್ರಿಸಬೇಕಾದ ಸರಕಾರ, ಪೊಲೀಸ್ ಇಲಾಖೆ ಎಲ್ಲರಿಗೂ ಕಾಣುವಂತೆ ಕಠಿಣ ಕ್ರಮ ಕೈಗೊಂಡರೂ, ಗಲ್ಲಿಗಳಲ್ಲಿ ಕರೋನಾ ನಿರ್ಬಂಧ ಮೀರಿ ನಡೆಯುತ್ತಿದ್ದ ಕಾರ್ಯಗಳನ್ನು ನಿಯಂತ್ರಿಸುವ ಪ್ರಯತ್ನ ಮಾಡಲಿಲ್ಲ.
ಇನ್ನು ಎರಡನೇ ಅವಧಿಯಲ್ಲಿ ಅಕ್ಕಪಕ್ಕದವರು, ಸಂಬಂಧಿಗಳು ಕರೋನಾ ಸಂಕಷ್ಟಕ್ಕೆ ಈಡಾದರೂ, ಕೆಲವರು ಸತ್ತು ಹೋದರು `ನಮಗೆ ಏನು ಆಗುವುದಿಲ್ಲ’ ಎನುವ ನಿರ್ಲಕ್ಷ್ಯವನ್ನು ಅನೇಕರು ಮಾಡಿದರು. ಇದರಿಂದ ಕರೋನಾ ಸೋಂಕು ಇನ್ನಷ್ಟು ಹೆಚ್ಚಾಗಲು ಕಾರಣವಾಯಿತು. ಇದೀಗ ಕರೋನಾ ಮೂರನೇ ಅಲೆಯ ಆತಂಕ ದಲ್ಲಿ ಸರಕಾರವಿದೆ. ಇದನ್ನು ನಿಯಂತ್ರಿಸಲು ಆರಂಭಿಕ ಹಂತದಲ್ಲಿಯೇ ಲಾಕ್‌ಡೌನ್ ಅಥವಾ ವಿಕೇಂಡ್ ಕರ್ಫ್ಯೂ ಹೇರುವುದಕ್ಕೆ ಚಿಂತನೆ ಆರಂಭವಾಗಿದೆ. ಈಗಾಗಲೇ ಗಡಿ ಜಿಲ್ಲೆಗಳಲ್ಲಿ ನಾಮ್‌ಕೆವಸ್ತೆ ವೀಕೆಂಡ್ ಕರ್ಫ್ಯೂ, ನೈಟ್ ಕರ್ಫ್ಯೂ ಹೇರಲಾಗಿದೆ.
ಇದನ್ನು ಮುಂದಿನ ವಾರದಿಂದ ಬೆಂಗಳೂರಿನಲ್ಲಿಯೂ ಹೇರುವ ಪ್ರಯತ್ನದಲ್ಲಿ ಸರಕಾರವಿದೆ. ಸೋಂಕು ನಿಯಂತ್ರಣಕ್ಕೆ ಇದು ಅನಿವಾರ್ಯ ಎನ್ನುವುದಾದರೆ,
ಹೇರಲೇಬೇಕಾಗುತ್ತದೆ. ಆದರೆ ಈ ಬಾರಿ ಲಾಕ್‌ಡೌನ್ ಹೇರಿದರೆ, ಅದು ಕಠಿಣವಾಗಿರಬೇಕು. ಅದನ್ನು ಬಿಟ್ಟು ಕೇವಲ ಹೆಸರಿಗೆ, ಅಂಗಡಿ ಹಾಗೂ ಆರ್ಥಿಕ ವ್ಯವಹಾರ ಮುಚ್ಚುವುದಕ್ಕೆ ಸೀಮಿತವಾಗಿ ಲಾಕ್‌ಡೌನ್ ಮಾಡುವುದರಿಂದ, ಆರ್ಥಿಕ ನಷ್ಟವಾಗುತ್ತದೆ ಹೊರತು ಅದಕ್ಕಿಂತ ಹೆಚ್ಚಿನ ಲಾಭವೇನು ಆಗುವುದಿಲ್ಲ.