Wednesday, 11th December 2024

ಸ್ವಾತಂತ್ರ‍್ಯವೆಂದರೆ ಪ್ರೀತಿಯ ಬಂಧನ

ದಾಸ್ ಕ್ಯಾಪಿಟಲ್‌

ಟಿ.ದೇವಿದಾಸ್

ನಾವೇ ಮಾಡಿಕೊಂಡ ನಿಯಮಗಳಿಗೆ ಬದ್ಧರಾಗಿ ಬದುಕುವುದೇ ನಿಜವಾದ ಸ್ವಾತಂತ್ರ್ಯ. ಆದ್ದರಿಂದ ಸ್ವಾತಂತ್ರ್ಯವೆಂದರೆ independence ಅಲ್ಲ, self-dependence. ನನಗೆ ಬೇಕಾದಂತೆ ಬದುಕುವುದು, ಬೇಕಾದ ಹಾಗೆ ಬದುಕುವುದು. ಹಾಗಾದರೆ ಸ್ವಾತಂತ್ರ್ಯವೆಂಬುದು ದೇಹ, ಮನಸಿಗೆ ಸಂಬಂಧಿಸಿದ್ದಾ? ಅಹುದು, ಸ್ವಾತಂತ್ರ್ಯವೆಂಬುದು ದೇಹ ಮತ್ತು ಮನಸ್ಸೆರಡಕ್ಕೂ ಸಂಬಂಧಿಸಿದ್ದು.

ದೇಹಕ್ಕೆ ನಾವೇ ಹಾಕಿಕೊಂಡ ಬಂಧನವೂ ಸ್ವಾತಂತ್ರ್ಯ ಎನಿಸಿಬಿಡುತ್ತದೆ. ಆಹಾರ-ವಿಹಾರ, ಉಡುಗೆ-ತೊಡುಗೆ ಗಳಲ್ಲಿ ಸ್ವಚ್ಛಂದವಾಗಿ ಬದುಕುತ್ತಿದ್ದರೂ ನಮಗೆ ನಾವೇ ಬೇಲಿಗಳನ್ನು ಹಾಕಿಕೊಂಡಿದ್ದೇವೆ. ಮನಸಿಗೆ ಅಂದರೆ ಮಾತು, ನಗು, ಚಿಂತನೆ, ಅಭಿವ್ಯಕ್ತಿಗಳಿಗೆ ಮಿತಿಗಳನ್ನು ಹಾಕಿಕೊಂಡು ಬದುಕುತ್ತಿದ್ದೇವೆ. ಒಟ್ಟಲ್ಲಿ,
ಸ್ವಾತಂತ್ರ್ಯವೆಂದರೆ ನಾವೇ ಹಾಕಿಕೊಂಡ ನಿಯಮಗಳಿಗೆ ನಿಷ್ಠರಾಗಿ ಬದುಕುವುದು. ನಮ್ಮನ್ನು ನಾವೇ ಆಳಿಕೊಳ್ಳುವುದು. ಅನ್ಯರು ನಡೆಸುವ ಪಾರತಂತ್ರ್ಯ ಸ್ವಾತಂತ್ರ್ಯವಲ್ಲ. ಅನ್ಯರ ಬಂಧನ ಹಿತವೆನಿಸಿದರೆ ಅದು ಸ್ವಾತಂಪ್ತ್ರ್ಯರೀತಿಯ ವೆನಿಸುತ್ತದೆ. ಅದರರ್ಥ ಪಾರತಂತ್ರ್ಯವೂ ಆಂತರ್ಯದಲ್ಲಿ ಸ್ವಾತಂತ್ರ್ಯವೇ ಆಗಿರುತ್ತದೆ.

ದೇಹ, ಮನಸ್ಸು, ಮನೆ, ಮದುವೆ, ಕುಟುಂಬ, ಶಾಲೆ, ಸಮಾಜ, ರಾಜ್ಯ, ದೇಶ, ಕಾನೂನು-ಇವೆಲ್ಲವೂ ಸ್ವಚ್ಛಂದಕ್ಕೆ ಬಂಧಗಳೆನಿಸಿಯೂ ಸ್ವಾತಂತ್ರ್ಯವೆನಿಸಿದೆ. ಹಾಗಾದರೆ ಸ್ವಾತಂತ್ರ್ಯವೆಂಬುದು ದೈಹಿಕ ಮತ್ತು ಮಾನಸಿಕ ಕ್ರಿಯೆಗೆ ಸಂಬಂಧಿಸಿದ್ದು ಅಂತಾಯ್ತು. ಬದುಕಿನ ಕಟ್ಟಳೆಗಳಿಗೆ, ಭಾವನೆಗಳಿಗೆ, ಆಸೆಗಳಿಗೆ, ನಂಬಿಕೆ ಗಳಿಗೆ ಬಂಧಿಯಾದರೂ ಅವುಗಳಿಂದ ಹೊರಬರಲು ನಾವು ಇಷ್ಟಪಡುವುದಿಲ್ಲ. ಯಾಕೆಂದರೆ ಅವು ನಾವಿಷ್ಟ ಪಟ್ಟು ರೂಢಿಸಿಕೊಂಡ ಸ್ವಾತಂತ್ರ್ಯವೆಂಬ ಪ್ರೀತಿಯ ಬಂಧನ! ಇಂದ್ರಿಯಗಳ ನಿಯಂತ್ರಣದ ಜೀವಿಸುತ್ತೇವೆ. ಅನ್ಯರ ಅಧೀನದಲ್ಲೂ Self Dependence ಆದ ಸ್ವಾತಂತ್ರ್ಯವೆಂದುಕೊಳ್ಳುತ್ತೇವೆ.

ಅಂದರೆ ನಮ್ಮ ಸುತ್ತಲೂ ಸದಾ ಒಂದು ಆವರಣ ಇರಲೇಬೇಕೆಂದು ಬಯಸುವ, ಆ ಮೂಲಕ ನಿಯಂತ್ರಣವೊಂದು ಇರುವಂತೆ ಎಚ್ಚರದಿಂದ ಕಟ್ಟಿಕೊಂಡ ಬದುಕು ಹಲವು ಬಂಧನಗಳಲ್ಲಿ ಇರುವುದಕ್ಕೇ ಬಯಸುತ್ತದೆ. ಆ ಆವರಣಗಳು ನಮಗೆ ಸೆರೆಯಾಗಬಾರದೆಂಬ ಎಚ್ಚರದಲ್ಲಿರುತ್ತೇವೆ. ಆದರೆ, ವಾಸ್ತವದಲ್ಲಿ ಅವು ಸೆರೆಯೇ ಆಗಿರುತ್ತವೆ. ಅಂಥ ಸೆರೆಗಳು ಬದುಕನ್ನು ಎಲ್ಲ ಬಗೆಯ ಅದ್ವಾನಗಳಿಂದ ಕಾಯುತ್ತವೆ. ಬ್ರಿಟಿಷರ ಆಳ್ವಿಕೆಯಲ್ಲಿ ನಿತ್ಯ ಬದುಕಿಗೆ ಧಕ್ಕೆಯಿಲ್ಲದಿzಗಲೂ ನಮಗದು ಸ್ವಾತಂತ್ರ್ಯವೆನಿಸಿತ್ತು.

ಅವರು ಈ ದೇಶವನ್ನು ಬಿಟ್ಟು ಹೋದಮೇಲೂ ಅವರು ರೂಢಿಸಿದಂತೆ ನಾವೀಗ ಬದುಕುವಾಗಲೂ ಅಂದಿಗೂ ಇಂದಿಗೂ ಸ್ವಾತಂತ್ರ್ಯದ ಅರ್ಥದಲ್ಲಿ ಅಂಥಾದ್ದೇನೂ
ವ್ಯತ್ಯಯ ನಮಗೆ ಕಾಣಿಸುವುದಿಲ್ಲ. ಈಗಲೂ ಅವರ ಭಾಷೆಯ ಗುರುತಿಸಿಕೊಳ್ಳುತ್ತಿದ್ದೇವೆ. ರಾಜಪ್ರಭುತ್ವದಲ್ಲಿ ನಮ್ಮ ಪೂರ್ವಿಕರು ಸ್ವಾತಂತ್ರ್ಯವನ್ನು ಅನುಭವಿಸಿ ದವರು. ನಮ್ಮನ್ನು ನಾವು ಆಳಿಕೊಳ್ಳುವುದು ಅಸಾಧ್ಯವಾದಾಗ ಅನ್ಯವೆನಿಸಿದರೂ ನಮ್ಮದ್ದೇ ಆದ ಪ್ರಭುತ್ತ್ವವೊಂದು ನಮ್ಮನ್ನಾಳುವ ಹಾಗೆ ಮಾಡಿ
ಸ್ವಾತಂತ್ರ್ಯವನ್ನು ಅನುಭವಿಸುತ್ತೇವೆ. ಅಂದರೆ ನಮ್ಮನ್ನು ಬಾಹ್ಯಶಕ್ತಿಯೊಂದು ಆಳುತ್ತಲೇ ಇರಬೇಕೆಂಬ ಗಾಢಪ್ರಜ್ಞೆಯೊಂದು ಆವರಿಸಿರುವುದರಿಂದ ಸ್ವಾತಂತ್ರ್ಯದ ಪರಿಕಲ್ಪನೆ ನಮಗೆ ಮತ್ಯಾವ ರೂಪದಲ್ಲೂ ಅರ್ಥವಾದಂತಿಲ್ಲ.

ದೇವರ ಕೃಪೆಗೆ ಪಾತ್ರರಾಗಬೇಕೆಂಬ ಆಸೆಯೂ ಪಾರತಂತ್ರ್ಯದೊಳಗೆ ಅನುಭವಿಸುವ ಸ್ವಾತಂತ್ರ್ಯ! ರಾಜಪ್ರೀತಿ ಮತ್ತು ವಿಶ್ವಾಸಕ್ಕೆ ಹಾತೊರೆಯುವುದರ ಹಿಂದೆ ಸ್ವಾತಂತ್ರ್ಯವನ್ನು ಅವನ ಅಧೀನದಲ್ಲಿ ಹಂಬಲಿಸುತ್ತದೆ; ತಾಯ ಬಂಧದ ಮಗು ಬಯಸುವ ಸ್ವಾತಂತ್ರ್ಯದಂತೆ. ಈಗ ಪ್ರಜಾಪ್ರಭುತ್ವ ಬಂದಿದೆ. ಆದರೂ ಆಳಿಸಿ ಕೊಳ್ಳುವ ಬಯಕೆ ಈಡೇರಿದಂತಿಲ್ಲ. ಅದಕ್ಕಾಗಿ ನಮ್ಮಿಂದಲೇ ರಚಿತವಾದ ಸರಕಾರದಲ್ಲಿ ಸ್ವಾತಂತ್ರ್ಯ ಹೊಂದಿದವರಾಗಿ ಬದುಕುತ್ತಿದ್ದೇವೆ. ಬ್ರಿಟಿಷರ
ಪಾರ ತಂತ್ರ್ಯವೂ ಅಸಹ್ಯವಾಗಿ ಹೀನವಾಗಿ ಸ್ವತ್ಮಾಭಿಮಾನಕ್ಕೆ ಕುಂದಾಗಿ ದಶಕಗಳ ನಿರಂತರ ಹೋರಾಟದ ಫಲಸ್ವರೂಪವಾಗಿ ನಮ್ಮವರು ಜಯಿಸಿಕೊಟ್ಟ ಸ್ವಾತಂತ್ರ್ಯದಲ್ಲಿ ನಾವಿಂದು ಬಯಸಿದಂತೆ ಬದುಕುವ ಸ್ವೇಚ್ಛೆಯೂ ಅಲ್ಲದ ನಮ್ಮವರಲ್ಲದ ಹೊರಗಿನ ಯಾವ ಶಕ್ತಿಯೂ ನಮ್ಮನ್ನು ನಿಯಂತ್ರಿಸದಂತೆ ನಾವೇ ಹೆಣೆದುಕೊಂಡ ಬಂಧನಗಳಿಂದ ಸ್ವತಂತ್ರರಾಗಿದ್ದೇವೆ.

ಇದು ಕೊಡುವ ಸುಖ-ದುಃಖಕ್ಕೆ ಆತುಕೊಂಡಿದ್ದೇವೆ. ನಮ್ಮವರೇ ನಮ್ಮನ್ನು ಆಳುತ್ತಾರೆಂಬಲ್ಲಿಗೆ ಅದು ನಮ್ಮ ಸ್ವಾತಂತ್ರ್ಯಕ್ಕೆ ಅಡ್ಡಿಯಾಗಿ ಬಲಹೀನವಾಗಿ ಕಂಡರೂ ನೆಮ್ಮದಿಯ ಬದುಕನ್ನು ಸಾಗಿಸುತ್ತಿದ್ದೇವೆ. ಯಾಕೆಂದರೆ ನಮ್ಮನ್ನು ನಾವು ನಿಯಂತ್ರಿಸಲು ಕಟ್ಟಿಕೊಂಡ ಪ್ರೀತಿಯ ಬಂಧನ. ನಮ್ಮೊಳಗಿರುವ ಕಂದಕಗಳನ್ನು
ಹೋಗಲಾಡಿಸಲು ಅವ್ಯಾಹತವಾಗಿ ಪ್ರಯತ್ನಿಸುತ್ತಾ ಅದೆಷ್ಟೋ ಸಂಘರ್ಷಗಳನ್ನು ಎದುರಿಸಿಯೂ ಒಗ್ಗಟ್ಟನ್ನು ಕಾಣಲಾರದೆ ಕಂಡೆವು ಎಂದು ಬದುಕುತ್ತಿರುವ ನಮಗೆ ಸ್ವಾತಂತ್ರ್ಯವೆಂದರೆ ಒಳಾರ್ಥದಲ್ಲಿ ಪಾರತಂತ್ರ್ಯ ಎಂಬುದು ಅಷ್ಟು ಸುಲಭವಾಗಿ ಅರ್ಥವಾಗಲಾರದು. ನಮ್ಮೊಳಗಿನ ಎಲ್ಲ ಬಗೆಯ ಅಪಸವ್ಯಗಳು ನಮಗೆ ಮುದವನ್ನೋ ನೋವನ್ನೋ ಕೊಟ್ಟರೂ ನಮ್ಮ ಸ್ವಾತಂತ್ರ್ಯವೆಂಬ ಪರಿಭಾಷೆಯ ಅಡಿಯಲ್ಲಿ ನಮಗದು ಒಪ್ಪಿತವಾಗಿದೆ.

ಈ ಒಪ್ಪಿತವೂ ನಮ್ಮ ಸ್ವಾತಂತ್ರ್ಯವನ್ನು ಹತ್ತಿಕ್ಕಲಾರದೆಂದು ನಂಬಿದ್ದೇವೆ. ನಾವೇ ರಚಿಸಿಕೊಂಡ ಪ್ರಭುತ್ತ್ವದೊಂದಿಗೆ ನಿತ್ಯವೂ ಗುದ್ದಾಡುತ್ತಾ ಬದುಕುವ ನಮಗೆ ಅದನ್ನು ಬಿಟ್ಟು ಬದುಕಲು ಅಸಾಧ್ಯವೆನಿಸಿದೆ. ಅದರೊಂದಿಗಿನ ಬದುಕ ತೃಪ್ತಿಯನ್ನು ಕಾಣುತ್ತಿದ್ದೇವೆ. ನಾವೇ ರೂಪಿಸಿಕೊಂಡ ಈ ಬಂಧನದೊಳಗೆ ಬದುಕುವುದು ಸ್ವಾತಂತ್ರ್ಯವೆಂದು ಪರಿಗಣಿತವಾದರೆ, ರಾಜಕೀಯ ಸ್ವಾತಂತ್ರ್ಯವನ್ನು ಬ್ರಿಟಿಷರಿಂದ ದಕ್ಕಿಸಿಕೊಂಡು ನಮ್ಮನ್ನು ನಾವೇ ಆಳಿಕೊಳ್ಳುತ್ತಾ ಬಂದಿರುವ ಈ ಸ್ವಾತಂತ್ರ್ಯಕ್ಕೆ ಈಗ ಎಪ್ಪತ್ತೈದರ ಸಂಭ್ರಮ.

ಮಾನವನ ಇತಿಹಾಸವೆಂದರೆ ಸ್ವಾತಂತ್ರ್ಯ ಪ್ರಾಪ್ತಿಯ ಇತಿಹಾಸ ಎಂಬ ಮಾತಿದೆ. ಇಂಥ ಸ್ವಾತಂತ್ರ್ಯಕ್ಕಾಗಿ ಸಾಕ್ರಟೀಸ್ ವಿಷ ಕುಡಿದ. ಏಸು ಬಲಿದಾನಗೈದ.
ಮಾರ್ಟಿನ್ ಲೂಥರ್ ಕಿಂಗ್, ಕ್ಯಾಲ್ವಿನ್‌ನಂಥ ಧರ್ಮಗುರುಗಳು ಪ್ರಾಣ ತೆತ್ತರು. ಜಗತ್ತಿನ ಬಹುಪಾಲು ರಾಷ್ಟ್ರಗಳಲ್ಲಿ ಇದಕ್ಕಾಗಿ ಜೀವಗಳು ಉರುಳಿದವು. ಜ್ಞಾನೇಶ್ವರ, ತುಕಾರಾಮ, ರಾಮದಾಸ, ತುಳಸಿದಾಸ, ಗುರುನಾನಕ್ ಮುಂತಾದವರು ದುಡಿದು ಅಮರರಾದರು. ಶಿವಾಜಿಯಂತೂ ತುಳಜಾ ಭವಾನಿಯ ಉಪಾಸನೆಗೈದು ಎದೆಯೊಡ್ಡಿ ಸೆಣೆಸಿದ.

1857ರಲ್ಲಿ ಮಂಗಲಪಾಂಡೆ, ನಾನಾ ಸಾಹೇಬ, ತಾಂತ್ಯಾಟೋಪಿ, ಲಕ್ಷ್ಮೀಬಾಯಿ, ಕುವರ ಸಿಂಹರಿಂದ ಆರಂಭವಾದ ಈ ಪ್ರಕ್ರಿಯೆಯು ನಿರಂತರ 90
ವರ್ಷ ಗಳವರೆಗೆ ನಡೆಯಿತು. ತಿಲಕರು, ಗಾಂಧಿಯೇ ಮುಂತಾದ ಮಹಾನ್ ನಾಯಕರು ತಾಯಿ ಭಾರತಿಯ ಚರಣಗಳಿಗೆ ತಮ್ಮ ಜೀವನವನ್ನು ಅರ್ಪಿಸಿ ಕೊಂಡರು. ಭಗತ್ ಸಿಂಗ್, ರಾಜಗುರು, ಸುಖದೇವ್, ಧಿಂಗ್ರಾ, ಅಲ್ಲೂರಿಯಂಥ ಯವ್ವನದ ಹೊಸ್ತಿಲಲ್ಲಿರುವವರಿಗೆ ಫಾಸೀ ಆಯಿತು. ಸಾವರ್ಕರರಂಥ ಧೀಮಂತ ನಾಯಕರು ದೇಹವನ್ನು ದೇಶಕ್ಕಾಗಿ ಮುಡಿಪಾಗಿಟ್ಟರು.

ಪರಮಹಂಸ, ವಿವೇಕಾನಂದರಂಥ ಸಂನ್ಯಾಸಿಗಳ ದಂಡೇ ಈ ಯಜ್ಞದಲ್ಲಿ ಹವಿಸ್ಸಿನಂತೆ ಜೀವ ಸಮರ್ಪಣೆ ಗೈದರು. ಈ ಪುಣ್ಯಕಾರ್ಯದಲ್ಲಿ ಜೀವ-ಜೀವನ ಸವೆಸಿದವರ ಪ್ರಯತ್ನದ ಫಲವಾಗಿ ನಾವಿಂದು ಸ್ವಾತಂತ್ರ್ಯವನ್ನು ಅನುಭವಿಸುತ್ತಿದ್ದೇವೆ. ಇಲ್ಲಿಂದ ಹೋಗಬೇಕಾದವರು ಹೋಗಿ 75 ವರ್ಷಗಳಾದವು. ಈಗ ನಮಗೇ ನಾವೇ. ವೈಯಕ್ತಿಕ ಮತ್ತು ಸಾಮಾಜಿಕ ಜೀವನಕ್ಕೆ ಬೇಕಾದ ಸಂಹಿತೆಗಳನ್ನು ಅಳವಡಿಸಿಕೊಂಡಿದ್ದೇವೆ. ನಮ್ಮದೇ ಆದ ಸಂವಿಧಾನವಿದೆ. ಕಾಯಿದೆ ಕಾನೂನುಗಳಿವೆ. ನೀತಿ ನಿಯಮಗಳಿವೆ. ಸರಕಾರವಿದೆ. ಇವೆಲ್ಲಕ್ಕೂ ಇತಿಹಾಸವಿದೆ. ನಮ್ಮನ್ನು ನಾವು ಆಳಿಕೊಳ್ಳುತ್ತೇವೆಂಬ ಅರ್ಥದಲ್ಲೂ ಕ್ರಮ ಮತ್ತು ಪದ್ಧತಿ ಯನ್ನು ಮೀರಲಾರೆವು.

ಹೀಗೆ, ವೈಚಾರಿಕ ಸಾಮರ್ಥ್ಯದರಿವಿನಲ್ಲಿ ಸ್ವಾತಂತ್ರ್ಯವೆಂದರೆ ಆತ್ಮಾನುಸಂಧಾನದಂತೆ ಎಂದು ಬದುಕು ಸಾಗಿಸುತ್ತಿದ್ದೇವೆ. ಸ್ವ ಮತ್ತು ತಂತ್ರ ಎಂಬೆರಡು ಪದಗಳ ಸಂಯೋಜನೆಯ ಭಾವವೇ ಸ್ವಾತಂತ್ರ್ಯ. ಸ್ವ ಅಂದರೆ ಅಸ್ಮಿತೆ. ಅದು ಕೃತೃತ್ವ ಶಕ್ತಿಯ ಮೂಲಾಧಾರವಾದರೆ, ತಂತ್ರವೆಂದರೆ ಮಿತಿಗೆ ಹೇತುವಾಗು ತ್ತದೆ. ಅಂದರೆ ಸ್ವಾತ್ಮಾಭಿವ್ಯಕ್ತಿಯ ಸಂಪೂರ್ಣ ಅನಾವರಣ. ನಮ್ಮ ವೈಚಾರಿಕ ನಿಯಮಗಳ ಪಾಲನೆ ಮತ್ತು ಪೋಷಣೆ. ಮನುಷ್ಯ ಬದುಕಿನ ಒಟ್ಟು ಬಯಕೆಯ ಮಿತಿಯೇ ಪಾರತಂತ್ರ್ಯವನ್ನು ಬಯಸುವುದಾದ್ದರಿಂದ ಸ್ವಾತಂತ್ರ್ಯವೆಂದರೆ ಪ್ರೀತಿಯ ಬಂಧನ. ಹೆಚ್ಚು ಹೆಚ್ಚು ಬಂಧನ. ನಾವೇ ಹಾಕಿಕೊಂಡ ಒಲುಮೆಯ ಬಂಧನ.

ನಮ್ಮಿಚ್ಛೆಯಂತೆ ನಾವು ಮಾಡುವ ಕೆಲಸ, ಉದ್ಯೋಗ, ಶ್ರಮ. ನಮ್ಮ ಶರೀರ, ಮನಸ್ಸು, ಇಂದ್ರಿಯಗಳನ್ನು ನಾವೇ ರಚಿಸಿಕೊಂಡ ನಿಯಮಗಳಿಗೆ ಅನುಸಾರ ವಾಗಿ ಬಗ್ಗಿಸುವುದು, ಬಾಗಿಸುವುದು, ಬಾಳಿಸುವುದು. ನೆಮ್ಮದಿ, ಸಂತೋಷವನ್ನು ಕಾಣುವುದು. ಆದರೆ, ವರ್ತಮಾನದಲ್ಲಿ ಸ್ವಾತಂತ್ರ್ಯವೆಂಬುದು ಲೇವಡಿ ಯಾಗುತ್ತಿದೆ. ದುರುಪಯೋಗ ಆಗುತ್ತಿದೆ. ತಪ್ಪಾಗಿ ಅರ್ಥೈಸಲಾಗುತ್ತಿದೆ. ಅತಂತ್ರ, ಕುತಂತ್ರವಾಗಿ ಕಾಣುತ್ತಿದೆ. ಸ್ವರಾಜ್ಯವಾಗದೆ ಸ್ವೈರಾಚಾರದ ಮೆರವಣಿಗೆ ಯಾಗಿದೆ. ಇದು ದುರಂತ! ಸ್ವಾತಂತ್ರ್ಯದ ಹೆಸರಲ್ಲಿ ಸ್ವೇಚ್ಛೆ, ಆತ್ಮಘಾತುಕ ಪ್ರವೃತ್ತಿ ಹೆಚ್ಚಿದೆ. ನಾಗರಿಕ ಸಮಾಜ ಶಿಸ್ತುಗೇಡಿಯಾಗಿದೆ. ಅಸಂಸ್ಕೃತಿ
ಅನಾಗರಿಕತೆ ತುಂಬಿದೆ. ಅಂತರಂಗದ ಸ್ವಾತಂತ್ರ್ಯ ದೈವಾಧೀನವಾದರೆ, ಬಹಿರಂಗದ ಸ್ವಾತಂತ್ರ್ಯ ಲೌಕಿಕ ಪ್ರಪಂಚದ ನಿಯಮಗಳ ನಿಯಂತ್ರಣಾಧೀನ.

ಯಾವ ಸ್ವ-ತಂತ್ರ ಕ್ರತೃತ್ವವೂ ಇಲ್ಲದ ಮನುಷ್ಯನ ಸಮಗ್ರ ಬದುಕು ಸೃಷ್ಟಿಯ ಪಾರತಂತ್ರ್ಯದ ಚಲಿಸುತ್ತದೆ. ಸ್ವಾತಂತ್ರ್ಯವೆಂಬುದು ದೇವರು ಕೊಟ್ಟ ಅದ್ಭುತ ಕೊಡುಗೆ. ಭಾಗ್ಯದಿಂದ ಲಭಿಸಿತು, ಕರ್ಮದಿಂದ ಕಳೆಯಿತು ಎಂತಾಗದೆ ಸ್ವಾತಂತ್ರ್ಯವನ್ನು ಅನುಭವಿಸಬೇಕು. ನಿಯಮರಹಿತ ಬದುಕು ಬದುಕಲ್ಲ. ಬಂಧನ ದೊಳಗಿನ ಬದುಕೇ ನಿಜವಾದ ಸ್ವಾತಂತ್ರ್ಯ. ಬ್ರಿಟಿಷರನ್ನು ಓಡಿಸಿ ನಾವು ಪಡೆದ ನಮ್ಮ ಸ್ವಾತಂತ್ರ್ಯಕ್ಕೆ ಎಪ್ಪತ್ತೈದರ ಸಂಭ್ರಮ. ನಮ್ಮನ್ನಾಳುವುದಕ್ಕೆ ಅವರಿಗೆ
ಕೊಟ್ಟುಕೊಂಡು ಹೋರಾಟ ಬಲಿದಾನಗಳ ಮೂಲಕ ಮತ್ತೆ ಪಡೆದ ನಮ್ಮ ಸ್ವಾತಂತ್ರ್ಯಕ್ಕೆ ಎಪ್ಪತ್ತೈದು ವರ್ಷ. ಅಂದರೆ ನಮ್ಮನ್ನು ನಾವೇ ಆಳಿಕೊಳ್ಳುತ್ತ ಬಂದ ಸ್ವಾತಂತ್ರ್ಯಕ್ಕೆ ಎಪ್ಪತ್ತೈದು ವರ್ಷ.

ನಿಜಾರ್ಥದಲ್ಲಿ ಇದೊಂದು ಸಂಭ್ರಮವೇ ಸರಿ. ಆದರೆ ನಮ್ಮ ಸ್ವಾತಂತ್ರ್ಯವನ್ನು ನಾವೇ ಅನ್ಯರಿಗೆ ಕೊಟ್ಟು ಪಡಬಾರದ ಕಷ್ಟಕೋಟಲೆಗಳನ್ನು ಅನುಭವಿಸಿ ಮತ್ತೆ ಪಡೆದ ನಮ್ಮ ಸ್ವಾತಂತ್ರ್ಯ ಎಂದುಕೊಳ್ಳುವಲ್ಲಿ ನಮ್ಮ ಆತ್ಮವಿಸ್ಮೃತಿಯ ಬಗ್ಗೆ ನಾಚಿಕೆಯೆನಿಸುತ್ತದೆ. ಏನೇ ಇರಲಿ, ಇಷ್ಟು ವರ್ಷಗಳಲ್ಲಿ ದೇಶ ಅಸಾಧಾರಣ ವಾದುದನ್ನು ಸಾಧಿಸಿದೆ, ಸಾಧಿಸುತ್ತಲೇ ಇದೆ. ಭಾರತದ ಬಹುತ್ವವೇ ನಿಜವಾದ ಏಕತ್ವ. ಅಂದರೆ ವಿವಿಧತೆಯಲ್ಲೂ ಏಕತೆಯನ್ನು ಕಾಣುತ್ತಿರುವುದು ನಮ್ಮ
ನೆಲದ ವೈಶಿಷ್ಟ್ಯ. ಆ ಏಕತ್ವವೇ ಭಾರತ, ಶ್ರೇಷ್ಠ ಭಾರತ, ಸರ್ವಶ್ರೇಷ್ಠ ಭಾರತ. ಇದು ನಮ್ಮ ಹಿರಿಯರು ಕಟ್ಟಿ ಬೆಳೆಸಿದ ನಾಡಿನ ಒರಿಜಿನಲ್ ಅಸ್ಮಿತೆ. ಇದು ಹಿಂದೂಗಳ ಹಿಂದೂಸ್ಥಾನ.

ಇಲ್ಲಿ ಬದುಕುವವರು ಯಾರೇ ಆದರೂ ಇಲ್ಲಿಯ ಸಂಪ್ರದಾಯ ಮತ್ತು ಪರಂಪರೆಯನ್ನು ಮರೆಯಬಾರದು. ಹಿಂದೂ ಎಂದರೆ ಜೀವನ ಪದ್ಧತಿಯೇ ಹೊರತು ರಾಷ್ಟ್ರವಾಚಕವಲ್ಲ. ಇಲ್ಲಿದ್ದುಕೊಂಡೇ ದೇಶಕ್ಕೆ ಕೇಡು, ಆಪತ್ತು ಬಯಸುವವರನ್ನು ಹೆಡೆಮುರಿ ಕಟ್ಟಿ ದಂಡಿಸುವುದೂ ಇಲ್ಲಿಯ ಕಾನೂನುಗಳೇ! ಈ ದೇಶದ
ಕಾನೂನಿಗೆ ಸವಾಲೆಸೆಯುವಲ್ಲಿ ನಾವು ಸ್ವತಂತ್ರರಲ್ಲ. ಕಾನೂನನ್ನು ಹಣದಿಂದ ಕೊಳ್ಳಲು ಸ್ವತಂತ್ರರಂಬ ಎಚ್ಚರ, ಅದರ ಕುರಿತಾದ ಗೌರವ, ಪೂಜ್ಯಭಾವ ಇರಬೇಕೆಂಬ ಸಾಮಾನ್ಯ ಅರಿವಿರಬೇಕು. ಪರಮ ಸ್ವೇಚ್ಛೆ ಸ್ವಾತಂತ್ರ್ಯವಲ್ಲ!

ನಾವೀಗ ಶ್ರೇಷ್ಠವಾದ ದೊಡ್ಡದಾದ ಪ್ರಜಾಪ್ರಭುತ್ವವನ್ನು ಹೊಂದಿದ ವಿಶ್ವದ ಏಕೈಕ ರಾಷ್ಟ್ರದಲ್ಲಿ ಬದುಕುತ್ತಿದ್ದೇವೆ. ಇಷ್ಟು ದೊಡ್ಡ ಪ್ರಜಾಪ್ರಭುತ್ವ ಮತ್ತು ಬಹುಕೋಟಿ
ಜನಸಂಖ್ಯೆಯುಳ್ಳ ರಾಷ್ಟ್ರಕ್ಕೆ ವೈವಿಧ್ಯವೆಂಬುದು ಪೂರಕವೂ ಮಾರಕವೂ ಆಗಬಲ್ಲದು. ವಸುಧೈವ ಕುಟುಂಬಕಮ್ ಎಂಬ ಉದಾತ್ತತೆಯಲ್ಲಿ ಮನುಷ್ಯ ಸಹಜ ನೆಲೆಯಲ್ಲಿ ಈ ವೈವಿಧ್ಯವನ್ನು ಅರಗಿಸಿಕೊಂಡು ಶತಮಾನಗಳಿಂದ ಸಾಗಿಬಂದ ದಾರಿಯಲ್ಲಿ ಸಾಗೋಣವೆಂದು ಈ ಸಂಭ್ರಮದಲ್ಲಿ ಆಶಿಸೋಣ.