Friday, 20th September 2024

ದೇವಾನು ದೇವತೆಗಳ ಆಹಾರ – ಗಾಂಜಾ !

ಹಿಂದಿರುಗಿ ನೋಡಿದಾಗ

ಡಾ.ನಾ.ಸೋಮೇಶ್ವರ

nasomeshwara@gmail.com

ನಮ್ಮ ಪೂರ್ವಸೂರಿಗಳ ಹೆಗಲೇರಿ ಒಂದು ಸಲ ವಿಸ್ತೃತವಾದ ಪಕ್ಷಿನೋಟವನ್ನು ಹರಿಸಿದರೆ, ನಮ್ಮ ಪೂರ್ವಜರು ಮೊದ ಮೊದಲು ಬೆಳೆದ ಸಸ್ಯಗಳಲ್ಲಿ ಭಂಗಿಗಿಡ ಅಥವ ಗಾಂಜಾ ಸಸ್ಯವೂ (ಕೆನಾಬಿಸ್) ಒಂದಾಗಿತ್ತು ಎನ್ನುವ ಕಟುಸತ್ಯವು ನಮಗೆ ತಿಳಿಯುತ್ತದೆ.

ಜಪಾನಿನ ಓಕಿ ದ್ವೀಪದಲ್ಲಿ, ಸುಮಾರು ಕ್ರಿ.ಪೂ. 8000 ವರ್ಷಗಳ ಹಿಂದೆ, ಗಾಂಜಾ ಕೃಷಿಯನ್ನು ನಡೆಸುತ್ತಿದ್ದರು. ಗಾಂಜಾಗಿಡದ ಹೂವು ಮತ್ತು ಕಾಯಿಯನ್ನು ಆಹಾರವನ್ನಾಗಿ ಬಳಸುತ್ತಿದ್ದರು. ನಾರನ್ನು ಪ್ರತ್ಯೇಕಿಸಿ, ಬಲವಾದ ಹಗ್ಗಗಳನ್ನು ಹೊಸೆಯುತ್ತಿದ್ದರು ಹಾಗೂ ಬಹುಶಃ ಗಾಂಜಾ ಸೇವನೆಯನ್ನೂ ಮಾಡುತ್ತಿದ್ದಿರ ಬಹುದು. ಗಾಂಜಾ ಸೇವನೆಯು ಅವರ ಮೈಕೈ ನೋವನ್ನು ನಿವಾರಿಸುವುದರ ಜೊತೆಗೆ, ಅವರಿಗೆ ಆನಂದವನ್ನು ನೀಡುತ್ತಿದ್ದಿರಬಹುದು.

ಕ್ರಿ.ಪೂ. 5000 ವರ್ಷಗಳ ಹಿಂದೆ ಚೀನಾ ದೇಶದಲ್ಲಿ ಅಸ್ತಿತ್ವದಲ್ಲಿದ್ದ ಯಾಂಗ್‌ಶಾವೋ ಸಂಸ್ಕೃತಿಯ ಜನರು ಗಾಂಜಾ ನಾರಿನಿಂದ ಬಟ್ಟೆಯನ್ನು ನೇಯುತ್ತಿದ್ದರು. ಹಗ್ಗವನ್ನು ಹೊಸೆಯುತ್ತಿದ್ದರು. ಬೂಟುಗಳನ್ನು ತಯಾರಿಸು ತ್ತಿದ್ದರು ಹಾಗೂ ಇಂದು ನಾವು ಬಳಸುತ್ತಿರುವ ಕಾಗದದ ಆದಿರೂಪವನ್ನು ಸಿದ್ಧಪಡಿಸುತ್ತಿದ್ದರು. ಚೀನಾ ದೇಶದ ಯಾಂಘಾಯ್ ಸಮಾಧಿಯು ಕ್ರಿ.ಪೂ.2700ಗಳಷ್ಟು ಹಿಂದಿನದು. ಒಂದು ಸಮಾಧಿಯಲ್ಲಿ ಓರ್ವ ಅಭಿಚಾರಿಯ (ಶಮನ್) ಶವವಿತ್ತು. ಆ ಶವದ ತಲೆ ಮತ್ತು ಕಾಲಿನ ಬುಡದಲ್ಲಿ ಇದ್ದ ಬುಟ್ಟಿಗಳಲ್ಲಿ 789 ಗ್ರಾಂ ಗಾಂಜಾವಿತ್ತು. ಈ ಅಭಿಚಾರಿಗಳು ಗಾಂಜಾ ವನ್ನು ಸೇವಿಸಿ, ಆ ಮತ್ತಿನಲ್ಲಿ ಭವಿಷ್ಯವನ್ನು ನುಡಿಯು ತ್ತಿದ್ದಿರಬಹುದು.

ಬ್ಯಾಕ್ಟಿರಿಯಾ ಮತ್ತು ಮಾರ್ಜಿಯಾನ ಪ್ರದೇಶದಲ್ಲಿ ನಡೆದ ಉತ್ಖನನಗಳಲ್ಲಿ ದೊರೆತ ಮನೆಗಳ ಕೋಣೆಗಳಲ್ಲಿ ಧಾರ್ಮಿಕ ಆಚರಣೆಯ ಅನೇಕ ವಸ್ತುಗಳು ಪತ್ತೆಯಾಗಿವೆ. ಅವುಗಳಲ್ಲಿ ಗಾಂಜಾ, ಅಫೀಮು ಮತ್ತು ಎಫಿಡ್ರಾ ಮಿಶ್ರಣವೂ ಒಂದು. ಭಾರತದಲ್ಲಿ ಗಾಂಜಾಗಿಡವು ವೇದಗಳ ಕಾಲದಿಂದಲೂ ಚಿರಪರಿಚಿತ ವಾಗಿದೆ. ಮೆಹದಿಹಸನ್ ಅವರ ಅನ್ವಯ, ವೇದಗಳಲ್ಲಿ ಉಕ್ತವಾಗಿರುವ ಸೋಮವು ಗಾಂಜಾಗಿಡವೇ ಆಗಿರಬೇಕಂತೆ.

ಚೀನಿ ಭಾಷೆಯಲ್ಲಿ ಗಾಂಜಾ ಗಿಡದ ಹೆಸರು ಹೊ-ಮ (ho-ma). ಜ಼ೆಂಡಾ ಅವೆಸ್ತದ ಅವೆಸ್ತನ್ ಭಾಷೆಯಲ್ಲಿ ಇದು ಹಓ-ಮ (ho-ma) ಹಾಗೂ ವೇದಕಾಲದ ಸಂಸ್ಕೃತದಲ್ಲಿ ಸೋಮ (so-ma) ಎಂದಾಗಿದೆ. ಅವೆಸ್ತನ್ ಭಾಷೆಯ ಹ ಅಕ್ಷರವು ಸಂಸ್ಕೃತದಲ್ಲಿ ಸ ಎಂದಾಗುವುದು ಸಾಮಾನ್ಯ. (ಸಿಂಧು ಶಬ್ದವು ಹಿಂದು ಆದಂತೆ) ಆದರೆ ಈ ವಾದವು ನಿಜವಿರ ಲಾರದು. ಅಥರ್ವ ವೇದದ 11.8.15ನೆಯ ಮಂತ್ರವು ಸೋಮಲತೆ, ದರ್ಭೆ,

ಬಾರ್ಲಿ, ಬತ್ತ ಮತ್ತು ಭಂಗ ಎಂಬ ಐದು ಸಸ್ಯಗಳು ಪವಿತ್ರ ಮತ್ತು ಪೂಜಾರ್ಹವಾಗಿರುವಂತಹವು ಎನ್ನುತ್ತದೆ. ಇಲ್ಲಿ ಸೋಮಲತೆಯನ್ನು ಹಾಗೂ ಭಂಗಿಗಿಡವನ್ನು ಪ್ರತ್ಯೇಕವಾಗಿ ಹೇಳಲಾಗಿದೆ. ಹಾಗಾಗಿ ಗಾಂಜಾಗಿಡವು ಸೋಮಲತೆ ಯಾಗಿರಲಾರದು. ಇದು ದೇವತೆಗಳ ಆಹಾರ ಎಂದೂ ಹೆಸರನ್ನು ಪಡೆದಿತ್ತು. ದಕ್ಷಿಣ ಭಾರತದಲ್ಲಿ ಪ್ರಸಿದ್ಧರಾದ ೧೮ ಸಿದ್ಧರಲ್ಲಿ ಕೊರೋಕ್ಕರ್ ಒಬ್ಬರು. ಇವರು ಗಾಂಜಾಗಿಡದ ಮಹತ್ವವನ್ನು ಬಲ್ಲವರಾಗಿದ್ದ ಕಾರಣ,

ತಮಿಳು ಭಾಷೆಯಲ್ಲಿ ಗಾಂಜಾಗಿಡವು ಕೊರೋಕ್ಕರ್ ಮೂಲಿ ಎಂಬ ಹೆಸರನ್ನು ಪಡೆಯಿತು. ಕ್ರಿ.ಪೂ. 3500-3000 ನಡುವೆ ಅಸ್ತಿತ್ವದಲ್ಲಿದ್ದ ಅಸ್ಸೀರಿಯನ್ನರು ಗಾಂಜಾಗಿಡವನ್ನು ಕುಣಬು ಅಥವ ಕುಣುಬು ಎಂದು ಕರೆಯುತ್ತಿದ್ದರು. ಬಹುಶಃ ಈ ಶಬ್ದದಿಂದ ಕೆನಾಬಿಸ್ ಎನ್ನುವ ಇಂದಿನ ಶಬ್ದವು ರೂಪುಗೊಂಡಿರಬಹುದು. ಗಾಂಜಾಗಿಡದ ಪರಿಚಯವು ಅಸ್ಸೀರಿಯನ್ನರಿಂದ ಸಿಥಿಯಮ್, ಥ್ರಾಸಿಯನ್, ಡಾಸಿಯನ್ ಮತ್ತು ಗ್ರೀಕರಿಗೆ ಪರಿಚಯವಾಯಿತು.

ಗ್ರೀಕ್ ಇತಿಹಾಸಕಾರನಾದ ಹೆರಡೋಟಸ್ (ಕ್ರಿ.ಪೂ.484-ಕ್ರಿ.ಪೂ.425), ಸಿಥಿಯದ ಜನರು ಗಾಂಜಾ ಬೀಜಗಳನ್ನು ಕೆಂಡದ ಮೇಲೆ ಹಾಕಿ, ಅದರಿಂದ ಹೊರ ಬರುವ ಹೊಗೆಯನ್ನು ಸೇವಿಸುತ್ತಿದ್ದರು ಎಂದು ದಾಖಲಿಸಿದ್ದಾನೆ. ಈ ಗಾಂಜಾ ಹೊಗೆ ಸೇವನೆಯು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಾಗಿದ್ದಂತೆ, ಅವರ ಮನರಂಜನಾ ಮಾಧ್ಯಮವೂ ಆಗಿತ್ತು. ಗಾಂಜಾ ಗಿಡವು ಏಕವಾರ್ಷಿಕ ಸಸ್ಯ. ಸುಮಾರು 2 ಮೀ ಎತ್ತರದವರೆಗೆ ಬೆಳೆಯುತ್ತದೆ. ಕಾಂಡ ಟೊಳ್ಳು. ಗಿಡಗಳಲ್ಲಿ

ಗಂಡು ಹೆಣ್ಣು ಬೇರೆ ಬೇರೆ. ಅಪರೂಪಕ್ಕೆ ಒಂದೇ ಗಿಡದಲ್ಲಿ ಗಂಡು ಮತ್ತು ಹೆಣ್ಣು ಹೂಗಳೆರಡನ್ನೂ ಕಾಣಬಹುದು. ಸಾಗುವಳಿಯಲ್ಲಿ ಗಂಡು ಮತ್ತು ಹೆಣ್ಣು ಗಿಡಗಳು ಸಮಾನ ಸಂಖ್ಯೆಗಳಲ್ಲಿ ಇರುತ್ತವೆ. ಪರಾಗೋತ್ಪತ್ತಿಯಾದ ಬಳಿಕ ಗಂಡು ಗಿಡ ಒಣಗಿ ಹೋಗುತ್ತದೆ. ಹೆಣ್ಣು ಗಿಡಗಳು ಬೀಜ ಬಲಿಯುವವರೆಗೂ ಜೀವಂತ ವಾಗಿರುತ್ತವೆ. ನಾರಿನ ಉತ್ಪಾದನೆ ಗಾಗಿ ಗಾಂಜಾಕೃಷಿಯು ಇಂದು ರಷ್ಯಾ, ಇಟಲಿ, ಚೀನಾ, ಯೂಗೋಸ್ಲಾವಿಯ, ರೊಮೇನಿಯ, ಕೊರಿಯ, ಪೋಲೆಂಡ್, ತುರ್ಕಿಸ್ತಾನ, ಹಂಗೇರಿ, ಜಪಾನ್, ಜರ್ಮನಿ, ಚೆಕೋಸ್ಲೊವಾಕಿಯ, ಫ್ರಾನ್ಸ್, ಬಲ್ಗೇರಿಯ, ಚಿಲಿ ಮತ್ತು ಅಮೆರಿಕ ಸಂಯುಕ್ತ ಸಂಸ್ಥಾನಗಳಲ್ಲಿ ನಡೆಯುತ್ತಿವೆ.

ಒಂದು ಎಕರೆಗೆ ೨೫೦-೮೦೦ ಕೆಜಿ ನಾರು ದೊರೆಯುತ್ತದೆ. ಭಾರತದಲ್ಲಿ ಗಾಂಜಾ ಗಿಡವನ್ನು ನಾರಿಗಿಂತ ಅದರ ಮನೋಪ್ರಚೋದಕ ಗುಣಗಳಿಗಾಗಿ ಹೆಚ್ಚು ಬೆಳೆಯುತ್ತಿರುವುದು ಕಟುಸತ್ಯ. ಇದು ಸರಕಾರಿ ನಿಯಂತ್ರಿತ ಬೆಳೆಯಾಗಿದೆ. ಈ ಹಿನ್ನೆಲೆಯಲ್ಲಿ ಅಕ್ರಮ ಕೃಷಿಯು ಸರ್ವೇಸಾಮಾನ್ಯವಾಗಿ, ದೇಶದ ಕಾನೂನು ವ್ಯವಸ್ಥೆಗೆ ಒಂದು ದೊಡ್ಡ ಸಮಸ್ಯೆ ಯಾಗಿದೆ. ಭಾರತದಲ್ಲಿ ಮಾತ್ರವಲ್ಲ, ಜಗತ್ತಿನ ಹಲವು ದೇಶಗಳ ಯುವಜನತೆಯಲ್ಲಿ ಭಂಗಿ ಸೇವನೆ ಒಂದು ಬೃಹತ್ ಸಮಸ್ಯೆ ಯಾಗಿದೆ. ಪಾಶ್ಚಾತ್ಯ ದೇಶಗಳಲ್ಲಿ ಇದಕ್ಕೆ ಮಾರಿಹುವಾನ, ಹೆಂಪ್, ವೀಡ್, ಪಾಟ್, ಸ್ಟಫ್, ಗ್ರ್ಯಾಸ್, ಇಂಡಿಯನ್ ಹೇ, ಟೀ, ಮೇರಿ ಜೇನ್ ಮುಂತಾದ ಹೆಸರು ಗಳು ರೂಢಿಗೆ ಬಂದಿವೆ. ಗಿಡಗಳನ್ನು ಕಿತ್ತು, ಕತ್ತರಿಸಿ, ಒಣಗಿಸಿ, ಪುಡಿ ಮಾಡಿ ಸಿಗರೇಟು ಚುಟ್ಟಾಗಳಂತೆ ಸೇದುವುದು ಸಾಮಾನ್ಯ.

ಇವಕ್ಕೆ ಇಂಗ್ಲಿಷಿನಲ್ಲಿ ರೀಫರ್ಸ್ ಅಥವಾ ಜಾಯಿಂಟ್ಸ್ ಎಂಬ ಹೆಸರಿದೆ. ಇತ್ತೀಚೆಗೆ ಈ ವಸ್ತುವನ್ನು ದೇಹಕ್ಕೆ ಚುಚ್ಚಿ ಸೇರಿಸಿಕೊಳ್ಳುವುದೂ  ವರದಿಯಾಗಿದೆ. ಪಾನೀಯ, ತಾಂಬೂಲ ಹಾಗೂ ಮಿಠಾಯಿಗಳಲ್ಲಿ ಸೇರಿಸಿ ಸೇವಿಸುವುದು ಮತ್ತೊಂದು ಬಗೆ. ನಮ್ಮ ದೇಶದಲ್ಲಿ ನಡೆಯುವ ಹೋಳಿ ಮುಂತಾದ ಹಬ್ಬಗಳಲ್ಲಿ ರಾಮ ರಸವನ್ನು ತಯಾರಿಸಿ ಕುಡಿಯುವುದು ಸಾಮಾನ್ಯ. ಇದು ವ್ಯಕ್ತಿಯ ದೇಹ ಹಾಗೂ ಮನಸ್ಸುಗಳೆರಡರ ಮೇಲೆ ನಾನಾ ಪರಿಣಾಮಗಳನ್ನು ಉಂಟು ಮಾಡುತ್ತದೆ.

ಗಾಂಜಾವನ್ನು ಸೇವಿಸಿದ ಕೂಡಲೇ ವ್ಯಕ್ತಿಯ ನಾಡಿಯ ವೇಗ ಹೆಚ್ಚುತ್ತದೆ. ರಕ್ತದ ಒತ್ತಡ ಅಲ್ಪ ಸ್ವಲ್ಪ ಏರುತ್ತದೆ. ಕಣ್ಣು ಗುಡ್ಡೆ ಕೆಂಪಗಾಗುತ್ತದೆ. ರಕ್ತದಲ್ಲಿ ಸಕ್ಕರೆಯ ಅಂಶ ಅಧಿಕಗೊಳ್ಳುತ್ತದೆ. ಪದೇ ಪದೆ ಮೂತ್ರವಿಸರ್ಜನೆಗೆ ಹೋಗಬೇಕೆನಿಸುತ್ತದೆ. ಗಂಟಲೊಣಗುತ್ತದೆ. ಬಾಯಾರಿಕೆಯಾಗುತ್ತದೆ. ವಾಕರಿಕೆ ಮತ್ತು ವಾಂತಿ ಯಾಗುತ್ತದೆ. ಕೆಲವು ಸಲ ಭೇದಿಯೂ ಆಗಬಹುದು. ಕಣ್ಣಿನ ಪಾಪೆಯ ಹೊಂದಾಣಿಕೆಯೂ ತಪ್ಪಿ ದೃಷ್ಟಿಯೂ ಏರುಪೇರಾಗಬಹುದು. ಬೆರಳುಗಳು ಅದುರುವುದು ಸಾಮಾನ್ಯ. ದೈಹಿಕ ಮತ್ತು ಮಾನಸಿಕ ಕೆಲಸ ಕಾರ್ಯಗಳಲ್ಲಿ ಪರಸ್ಪರ ಹೊಂದಾಣಿಕೆಯಿರುವುದಿಲ್ಲ. ನೆಟ್ಟಗೆ ನಿಲ್ಲಲು ಅಥವಾ ನಿಗದಿತ ಕೆಲಸವನ್ನು ಮಾಡಲು ಸಾಧ್ಯವಾಗದೇ ಹೋಗಬಹುದು. ಗಾಂಜಾ ಸೇವನೆಯು ಮಾನಸಿಕ ಸ್ಥಿಮಿತವನ್ನು ತಪ್ಪಿಸುತ್ತದೆ. ಒಂದು ರೀತಿಯ ಸ್ವಪ್ನಾವಸ್ಥೆಯು ಮೂಡಿ, ಗಾಳಿಯಲ್ಲಿ ತೇಲುತ್ತಿರುವ ಅನುಭವವಾಗಬಹುದು.

ನಿಮಿಷಗಳು ಗಂಟೆಗಳಂತೆ ಕೆಲವರಿಗೆ ಭಾಸವಾದರೆ, ಉಳಿದವರಿಗೆ ಗಂಟೆಗಳು ನಿಮಿಷಗಳಂತೆ ಆಗಬಹುದು. ಸಣ್ಣ ಕಲ್ಲು ಗುಡ್ಡದಂತೆ ಕಾಣಬಹುದು. ಬಹು ಮಹಡಿಯ ಕಟ್ಟಡವು ಗುಡಿಸಿಲಿನಂತೆ ಭಾಸವಾಗಬಹುದು. ಹತ್ತಿರದಲ್ಲಿರುವ ದೂರದಲ್ಲಿರುವಂತೆ, ದೂರದಲ್ಲಿರುವ ವಸ್ತುಗಳು ಹತ್ತಿರದಲ್ಲಿರುವಂತೆ ಅನಿಸಬಹುದು. ತನ್ನ ಶರೀರವು ಸೊಟ್ಟಗಾದ ಹಾಗೆ, ತಲೆದೊಡ್ಡದಾಗಿ ಬೆಳೆದ ಹಾಗೆ, ತನ್ನ ಶರೀರವೇ ಇಬ್ಭಾಗವಾದ ಹಾಗೆ ಅನಿಸಬಹುದು. ವಿನಾಕಾರಣ ನಗಬಹುದು. ಅಳಬಹುದು. ಉದ್ರೇಕಗೊಳ್ಳಬಹುದು. ಆನಂದ ಅತಿರೇಕಕ್ಕೆ ಒಳಗಾಗಬಹುದು. ನಂತರ ದುಗುಡವು ಆವರಿಸಿ, ಲವಲವಿಕೆಯು ಮರೆಯಾಗಿ ಜಡತ್ವವು ಅಧಿಕ ವಾಗಬಹುದು.

ಅನಗತ್ಯ ಭೀತಿಯು ಕಂಡುಬಂದು ತಾನು ಸಾಯುತ್ತಿದ್ದೇನೆ ಎಂದು ಅನಿಸಬಹುದು. ಗಾಂಜಾ ಸೇವನೆಯಿಂದ ಸಂಭೋಗಾನಂದ ವೃದ್ಧಿಗೊಳ್ಳುತ್ತದೆಂಬುದು ಕೆಲವರ ಅಭಿಪ್ರಾಯ. ಆದರೆ ಇದಕ್ಕೆ ವೈಜ್ಞಾನಿಕ ಆಧಾರಗಳಿಲ್ಲ. ಆದರೆ ಗಾಂಜಾ ಪ್ರಭಾವದಲ್ಲಿ ಗಂಡು-ಹೆಣ್ಣಿನ ನೈತಿಕ ಪರಿಜ್ಞಾನವು ಅಧೋಗತಿಗೆ ಇಳಿದಿ ರುತ್ತದೆ. ಇಂತಹವರಿಗೆ ಆರೋಗ್ಯಕರ ಮಕ್ಕಳು ಹುಟ್ಟುವುದಿಲ್ಲ.

ಗಾಂಜಾಗಿಡದಲ್ಲಿ 483 ರಾಸಾಯನಿಕಗಳಿವೆ. ಅವುಗಳಲ್ಲಿ 65 ರಾಸಾಯನಿಕಗಳು ಕೆನಾಬಿನಾಯ್ಡ್ ಎನ್ನುವ ವರ್ಗಕ್ಕೆ ಸೇರಿವೆ. ಈ ಕೆನಾಬಿನಾಯ್ಡುಗಳಲ್ಲಿ ಟೆಟ್ರಾ ಹೈಡ್ರೋಕೆನಾಬಿನಾಲ್ (ಟಿಎಚ್‌ಸಿ) ಎನ್ನುವುದು ಮುಖ್ಯವಾದದ್ದು. ಎಲ್ಲ ಶಾರೀರಿಕ ಹಾಗೂ ಮಾನಸಿಕ ಕ್ಷೋಭೆಗಳಿಗೆ ಕಾರಣವಾದದ್ದು. ಆದರೆ ಕೆನಾಬಿನಾಯ್ಡು ಗಳ ನಿಯಂತ್ರಿತ ಹಾಗೂ ನಿಗದಿತ ಉಪಯೋಗ ಉತ್ತಮ ಚಿಕಿತ್ಸಾ ಪರಿಣಾಮಗಳನ್ನು ಉಂಟು ಮಾಡಬಲ್ಲುದು.

ಇವು ಕ್ಯಾನ್ಸರ್ ಕೀಮೋಥೆರಪಿಯಲ್ಲಿ ಕಂಡುಬರುವ ವಾಂತಿಯನ್ನು ತಡೆಯುತ್ತವೆ. ಕೆಲವು ಗಂತಿಗಳ ಗಾತ್ರವನ್ನು ಕುಗ್ಗಿಸಬಲ್ಲವು. ಏಡ್ಸ್ ಪೀಡಿತರಲ್ಲಿ ಹಸಿವನ್ನು ಹೆಚ್ಚಿಸಬಲ್ಲವು. ಮೈಗ್ರೇನ್ ತಲೆನೋವು ಹಾಗೂ ಸೆಳವನ್ನು ನಿಗ್ರಹಿಸಬಲ್ಲವು. ಸೋರಿಯಾಸಿಸ್ ಚಿಕಿತ್ಸೆಯಲ್ಲಿ ಉಪಯುಕ್ತ. ಅಸ್ತಮ, ನಿದ್ರಾಹೀನತೆ, ಆತಂಕ, ಋತು ಸಮಸ್ಯೆಗಳು, ಮೂತ್ರ ನಾಳದಲ್ಲಿ ಸೋಂಕು, ಶೀಘ್ರಸ್ಖಲನ ಮುಂತಾದ ಅನಾರೋಗ್ಯಗಳಲ್ಲೂ ಉಪಯುಕ್ತ. ಗಾಂಜಾ ಸಂಯುಕ್ತಗಳನ್ನು ಕೀಟನಾಶಕ ವಾಗಿಯೂ ಬಳಸಲು ಸಾಧ್ಯವಿದೆ.

ಗಾಂಜಾ ಕೃಷಿಯು ವಿವಿಧ ಮುಖಗಳನ್ನು ಗಮನಿಸೋಣ. ಗಾಂಜಾ ಕೃಷಿಯಿಂದ ದೊರೆಯುವ ನಾರು, ಅನೇಕ ಉದ್ಯಮಗಳನ್ನು ಪೋಷಿಸುತ್ತವೆ. ಹಲವು ದೇಶಗಳ ಸರಕಾರಗಳು ನಡೆಸುತ್ತಿರುವ ನಿಯಂತ್ರಿತ ಗಾಂಜಾ ಕೃಷಿಯು ಅಮೂಲ್ಯವಾದ ಔಷಧಗಳ ಉತ್ಪಾದನೆಗೆ ನೆರವಾಗುತ್ತಿದೆ. ಅಕ್ರಮ ಗಾಂಜಾ ಕೃಷಿಯು ಆಯಾ ಸರಕಾರಗಳಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿ ಅಲ್ಲಿನ ಯುವಜನತೆಯನ್ನು ದಾರಿತಪ್ಪಿಸುತ್ತದೆ.

ಕೆಲವು ದೇಶಗಳು ಗಾಂಜಾವನ್ನು ಹಾಗೂ ಅಫೀಮನ್ನು ರಾಜಾರೋಷವಾಗಿ ಬೆಳೆಯುತ್ತವೆ. ಇದರಿಂದ ಬರುವ ಅಪಾರ ಹಣವನ್ನು ಭಯೋತ್ಪಾದಕ ಕೃತ್ಯಗಳಿಗೆ ಬಳಸುತ್ತಿವೆ ಎನ್ನುವ ಗಂಭೀರ ಆರೋಪವಿದೆ. ಜಾಗತಿಕ ಮಾದಕ ಪದಾರ್ಥಗಳ ಸಮಸ್ಯೆಯನ್ನು ನಿವಾರಿಸಲು ವಿಶ್ವಸಂಸ್ಥೆಯು ವಿಫಲವಾಗಿದೆ. ಆಧುನಿಕ ವಿಜ್ಞಾನವು ಟೆಟ್ರಾಹೈಡ್ರೋ ಕೆನಾಬಿನಾಲ್ ಅತ್ಯಂತ ಕಡಿಮೆ ಪ್ರಮಾಣದಲ್ಲಿರುವ ಸಸ್ಯಗಳನ್ನು ರೂಪಿಸುವುದರ ಜತೆಗೆ ಅತ್ಯಂತ ಹೆಚ್ಚಿನ ಪ್ರಮಾಣದ ಟೆಟ್ರಾ ಹೈಡ್ರೋಕೆನಾಬಿನಾಲ್ ಇರುವ ಸಸ್ಯಗಳನ್ನೂ ರೂಪಿಸಿರುವುದು, ನಿಜಕ್ಕೂ ಆಧುನಿಕ ವಿಜ್ಞಾನವು ಎರಡಲುಗಿನ ಖಡ್ಗ ಎನ್ನುವುದನ್ನು ನಿರೂಪಿಸುತ್ತಿದೆ.