Friday, 20th September 2024

ಸರ್ಕಸ್ಸಿನ ನಡುವೆಯೂ ಬೊಮ್ಮಾಯಿ ವರ್ಚಸ್ಸು ಹೆಚ್ಚುತ್ತಿದೆ

Basavaraj Bommai

ಮೂರ್ತಿಪೂಜೆ

ಆರ್‌.ಟಿ.ವಿಠ್ಠಲಮೂರ್ತಿ

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಟಿವಿ ಕಾರ್ಯಕ್ರಮವೊಂದಕ್ಕೆ ಹೋಗುತ್ತಾರೆ. ಅಲ್ಲಿ ಮಕ್ಕಳು ಕೇಳುವ ಪ್ರಶ್ನೆಗಳಿಗೆ ಉತ್ತರಿಸುತ್ತಾ, ಮುಖ್ಯಮಂತ್ರಿಯಾಗಿ ತಾವು ಸರಳವಾಗಿರಲು ಏನು ಕಾರಣ? ಅಂತ ಹೇಳುತ್ತಾರೆ. ಬಾನಿಗೊಂದು ಎಲ್ಲೆ ಎಲ್ಲಿದೆ ಎಂದು ಹಾಡುತ್ತಾರೆ.

ಒಬ್ಬ ಮುಖ್ಯಮಂತ್ರಿ ಹೀಗೆಲ್ಲ ಮಾಡಲು ಸಾಧ್ಯವೇ? ಎಂದು ಅಲ್ಲಿದ್ದವರು ಅಚ್ಚರಿ ವ್ಯಕ್ತಪಡಿಸಿದರೆ ನಾನು ಸಿಎಂ, ಸಿಎಂ ಎಂದರೆ ‘ಕಾಮನ್ ಮ್ಯಾನ್’ ಎನ್ನುತ್ತಾರೆ. ಅವರ ಮಾತು ಕೇಳಿ ನೆರೆದವರು ಹರ್ಷೋದ್ಗಾರ ಮಾಡುತ್ತಾರೆ. ಇದೇ ರೀತಿ ಅವರು ಮುಖ್ಯಮಂತ್ರಿಯಾದ ದಿನವೇ ಒಂದು ವಿಡಿಯೊ ಬಿಡುಗಡೆಯಾಗುತ್ತದೆ. ಅದರಲ್ಲಿ ಅವರ ಕುಟುಂಬ ಸದಸ್ಯರು ಪುನೀತ್ ರಾಜ್‌ಕುಮಾರ್ ಅವರ ಚಿತ್ರದ ಬೊಂಬೆ ಹೇಳುತೈತೆ ಹಾಡನ್ನು ಹೇಳುವಾಗ ತಾವು ಕುಳಿತು ಆನಂದಿಸು ತ್ತಿರುತ್ತಾರೆ. ಇದಾದ ಕೆಲವೇ ದಿನಗಳಲ್ಲಿ ಮತ್ತೊಂದು ವಿಡಿಯೊ ಹೊರಬರುತ್ತದೆ.

ಅದರಲ್ಲಿ ಬಸವರಾಜ ಬೊಮ್ಮಾಯಿ ಅವರು: ‘ಒಂದು ಕಾಲದಲ್ಲಿ ಜಗತ್ತು ದುಡ್ಡಿದ್ದವರದು, ಆದರೆ ಈಗ ವಿದ್ಯೆ ಇರುವವರದು’ ಎನ್ನುತ್ತಾರೆ. ಇನ್ನು ಮುಖ್ಯಮಂತ್ರಿ ಯಾಗಿ ಪ್ರಮಾಣ ವಚನ ಸ್ವೀಕರಿಸಿದ ತಕ್ಷಣ ಅವರು ರೈತರು, ವೃದ್ಧರು ಸೇರಿದಂತೆ ವಿವಿಧ ವರ್ಗದ ಜನರಿಗೆ ನೆರವಾಗುವ ಕಾರ್ಯಕ್ರಮಗಳನ್ನು ಘೋಷಿಸು ತ್ತಾರೆ. ಅದರ ಬೆನ್ನ, ನನಗೆ ಝೀರೋ ಟ್ರಾಫಿಕ್ ಬೇಡ ಎನ್ನುವುದರಿಂದ ಹಿಡಿದು ಸರಕಾರದ ಆಡಳಿತ ವೆಚ್ಚವನ್ನು ಕಡಿತಗೊಳಿಸುವ ಮಾತನಾಡುತ್ತಾರೆ. ಅಷ್ಟೇ ಏಕೆ? ಸ್ವಾತಂತ್ರ್ಯೋತ್ಸವದ ಭಾಷಣದಲ್ಲಿ ರಾಜ್ಯದ ಜನರಿಗೆ ತಲುಪುವ ಹಲ ಕಾರ್ಯ ಕ್ರಮಗಳನ್ನು ಕೊಡುವುದಾಗಿ ಘೋಷಿಸುತ್ತಾರೆ.

ಹೀಗೆ ನೋಡುತ್ತಾ ಹೋದರೆ ಮುಖ್ಯಮಂತ್ರಿಯಾದ ಒಂದು ತಿಂಗಳಲ್ಲಿ ಅವರು ಕರ್ನಾಟಕದ ಜನರ ಗಮನ ಸೆಳೆಯುವಲ್ಲಿ ಒಂದು ಮಟ್ಟದ ಯಶಸ್ಸು ಕಂಡಿದ್ದಾರೆ. ತಾವು ಸಾಮಾನ್ಯ ಜನರ ಮುಖ್ಯಮಂತ್ರಿ ಎಂಬ ಸಂದೇಶ ರವಾನೆಯಾಗುವಂತೆ ಮಾಡಿದ್ದಾರೆ. ಆದರೆ ಹೀಗೆ ವೈಯಕ್ತಿಕವಾಗಿ ಅವರ ಇಮೇಜ್ ಹೆಚ್ಚಾದರೂ ಅದು ಬಿಜೆಪಿ ಸರಕಾರಕ್ಕೆ ಎಷ್ಟರ ಮಟ್ಟಿಗೆ ಪ್ಲಸ್ ಆಗುತ್ತದೆ? ಎಂಬುದನ್ನು ಈಗಲೇ ತೀರ್ಮಾನಿಸುವುದು ಕಷ್ಟ.

ಅಂದ ಹಾಗೆ ಮುಖ್ಯಮಂತ್ರಿಯಾದ ನಂತರ ಬಸವರಾಜ ಬೊಮ್ಮಾಯಿ ಅವರ ಮುಂದಿರುವ ದೊಡ್ಡ ಸವಾಲು ಎಂದರೆ ಯಡಿಯೂರಪ್ಪ ಅವರ ಹಿಡಿತದಿಂದ ತಪ್ಪಿಸಿಕೊಳ್ಳುವುದು. ಆದರೆ ಖುದ್ದು ಯಡಿಯೂರಪ್ಪ ಅವರ ಬೆಂಬಲ ದಿಂದಲೇ ಈ ಜಾಗಕ್ಕೆ ಬಂದು ಕುಳಿತ ಬಸವರಾಜ ಬೊಮ್ಮಾಯಿ ಅವರಿಗೆ ನಿಜಕ್ಕೂ ಇದು ದೊಡ್ಡ ಸವಾಲು ಎಂಬುದರಲ್ಲಿ ಅನುಮಾನವೇನಿಲ್ಲ. ಆಡಳಿತದ ವಿಷಯದಲ್ಲಿ ಬಸವರಾಜ ಬೊಮ್ಮಾಯಿ ಅವರು ಈ ಹಿಡಿತದಿಂದ ತಪ್ಪಿಸಿಕೊಂಡಿzರೆ ಅನ್ನಿಸದಿದ್ದರೂ ಕೆಲವೇ ದಿನಗಳಲ್ಲಿ ‘ಸಂಘಂ ಶರಣಂ ಗಚ್ಛಾಮಿ’ ಎಂಬ ಮಂತ್ರವನ್ನಂತೂ ಚೆನ್ನಾಗಿ ಕಂಠ ಪಾಠ ಮಾಡಿದ್ದಾರೆ.

ಬಿಜೆಪಿಯ ನಾಯಕರ ಪೈಕಿ ‘ಸಂಘ ಶರಣಂ ಗಚ್ಛಾಮಿ’ ಎಂಬ ಮಂತ್ರವನ್ನು ಸದಾ ಜಪಿಸುತ್ತಾ ಬಂದ ಇತ್ತೀಚಿನ ನಾಯಕರಲ್ಲಿ ಕೆ.ಎಸ್. ಈಶ್ವರಪ್ಪ ಅವರೇ ಅಗ್ರಗಣ್ಯರು. ಉಳಿದಂತೆ ಯಡಿಯೂರಪ್ಪ ಅವರಾಗಲೀ, ಅನಂತಕುಮಾರ್ ಅವರಂತಹ ನಾಯಕರೇ ಆಗಲಿ ಈ ಮಂತ್ರ ಜಪಿಸಿದರೂ ಅದಕ್ಕೆ ಅಂಟಿಕೊಂಡ ವರಲ್ಲ. ಅಂದ ಹಾಗೆ ಈಶ್ವರಪ್ಪ ಅವರು ಸಂಘದ ಪ್ರಾಡಕ್ಟ್. ಆದರೆ ಬಸವರಾಜ ಬೊಮ್ಮಾಯಿ ಸಂಘದ ಪ್ರಾಡಕ್ಟ್ ಅಲ್ಲ, ಆದರೂ ಅವರು ಈಶ್ವರಪ್ಪ ಅವರಷ್ಟೇ ಪರಿಣಾಮ ಕಾರಿಯಾಗಿ ‘ಸಂಘಂ ಶರಣಂ ಗಚ್ಛಾಮಿ’ ಮಂತ್ರವನ್ನು ಉಚ್ಚರಿಸಬಲ್ಲರು ಎಂಬುದು ವಿಶೇಷ.

ಹೀಗಾಗಿಯೇ ಮುಖ್ಯಮಂತ್ರಿಗಳ ಸುತ್ತ ಮುತ್ತ ಇದ್ದ ಅಧಿಕಾರಿಗಳ ತಂಡ ಪೂರ್ಣ ಬದಲಾವಣೆ ಆಗದಿದ್ದರೂ ಕೆಲವು ಆಯಕಟ್ಟಿನ ಹುದ್ದೆಗಳಿಗೆ ಸಂಘ ನಿಷ್ಠರು ಬಂದು ಸೇರಿಕೊಳ್ಳಲು ಸಾಧ್ಯವಾಗಿದೆ. ಆದರೆ ಇಲ್ಲೂ ಬಸವರಾಜ ಬೊಮ್ಮಾಯಿ ಮಾಡುತ್ತಿರುವುದು ಹುಲಿ ಸವಾರಿ. ಅವರು ಘೋಷಿಸಿರುವ ಹಲವು ಕಾರ್ಯ ಕ್ರಮಗಳ ಹಿಂದೆ ಅವರ ತಂದೆ, ಜನತಾ ಪರಿವಾರದ ನಾಯಕ ಎಸ್.ಆರ್.ಬೊಮ್ಮಾಯಿ ಅವರ ನೆರಳಿದೆ. ಎಸ್.ಆರ್.ಬೊಮ್ಮಾಯಿ ಅವರು ಎಂ.ಎನ್.ರಾಯ್ ಅವರ ವಿಚಾರಧಾರೆಗಳಿಂದ ಪ್ರಭಾವಿತರಾದವರು.

ಇಂತಹ ವಿಚಾರಧಾರೆಗಳಿಗೆ ಪೂರಕವಾದ ಹಲ ಕಾರ್ಯಕ್ರಮಗಳನ್ನು ಬಸವರಾಜ ಬೊಮ್ಮಾಯಿ ಘೋಷಿಸಿದ್ದಾರೆ. ಹೀಗೆ ಏಕಕಾಲಕ್ಕೆ ಸಂಘ ಪರಿವಾರದ ಕಂಪೋಂಡಿನಲ್ಲಿ ಸಿಲುಕಿಕೊಂಡು ರಾಯ್ ವಿಚಾರಧಾರೆಗಳಿಗೆ ಹತ್ತಿರವಾದ ಹಲವು ಕಾರ್ಯಕ್ರಮಗಳನ್ನು ಘೋಷಿಸಿರುವ ಬಸವರಾಜ ಬೊಮ್ಮಾಯಿ ಅದನ್ನು ಎಷ್ಟರ ಮಟ್ಟಿಗೆ ಜಾರಿ ಮಾಡುತ್ತಾರೆ? ಎಂಬುದೂ ಒಂದು ಸವಾಲು. ಈ ಮಧ್ಯೆ ಸದ್ಯದ ಪರಿಸ್ಥಿತಿಯನ್ನು ತೂಗಿಸಲು ಅವರು ಎಷ್ಟೇ ಸಂಘ ನಿಷ್ಠರಾಗಿ ನಡೆದು ಕೊಳ್ಳಲಿ, ಆದರೆ ಅದಷ್ಟರಿಂದಲೇ ಅವರು ಜನನಾಯಕರಾಗಲು ಸಾಧ್ಯವಿಲ್ಲ.

ಮೊದಲ ಬಾರಿ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿದಾಗ ಆ ಜಾಗಕ್ಕೆ ಸದಾನಂದಗೌಡರು ಬಂದು ಕುಳಿತರಲ್ಲ? ಅವರೂ ಸಂಘ ನಿಷ್ಠ ರಾಗಿಯೇ ಬದಲಾಗಿದ್ದರು. ಆದರೆ ಅದು ಅವರಿಗೆ ಜನನಾಯಕನ ಪಟ್ಟ ವನ್ನೇನೂ ತರಲಿಲ್ಲ. ಹೀಗಾಗಿ ಯಡಿಯೂರಪ್ಪ ಅವರು ತಿರುಗಿ ಬಿದ್ದ ಕೂಡಲೇ ಅವರ ಕುರ್ಚಿ ಅಲುಗಾಡಲು ಶುರುವಾಗಿ, ಉರುಳಿಯೇ ಬಿತ್ತು. ಅರ್ಥಾತ್,ಬಸವರಾಜ ಬೊಮ್ಮಾಯಿ ಎಷ್ಟೇ ಸಂಘ ನಿಷ್ಠರಾಗಿ ನಡೆದುಕೊಂಡರೂ, ಯಡಿಯೂರಪ್ಪ ಅವರ ಹಿಡಿತದಿಂದ ಸಂಪೂರ್ಣವಾಗಿ ಹೊರಬರುವುದು ಕಷ್ಟ. ಹಾಗಂತ ಅವರು ಯಡಿಯೂರಪ್ಪ ಅವರಿಗೆ ಕಾಯಂ ನಿಷ್ಠರು ಅಂತಲೂ ಅಲ್ಲ, ಹಿಂದೆ ಯಡಿಯೂರಪ್ಪ ಅವರು ಬಿಜೆಪಿ ತೊರೆದು ಕೆಜೆಪಿಯ ನೆಲೆಗೆ ಹೋದಾಗ ಬಸವರಾಜ ಬೊಮ್ಮಾಯಿ ಕಮಲ ಪಾಳೆಯದ ಉಳಿದುಕೊಂಡಿದ್ದರು.

ಈ ಅಂಶ ಗೊತ್ತಿರುವುದರಿಂದ ಯಡಿಯೂರಪ್ಪ ಅವರು ಕೂಡ ಎಚ್ಚರಿಕೆಯಿಂದಲೇ ನಡೆದುಕೊಳ್ಳುವುದು ಸಹಜ. ರಾಜ್ಯಪ್ರವಾಸ ಮಾಡುವ ಅವರ ತೀರ್ಮಾನದ
ಹಿಂದಿರುವುದು ಇದೇ ಎಚ್ಚರಿಕೆ. ಅಂದ ಹಾಗೆ ತಮ್ಮ ಪಕ್ಷದ್ದೇ ಸರಕಾರ ಇರುವಾಗ ಯಡಿಯೂರಪ್ಪ ಅವರು ರಾಜ್ಯ ಪ್ರವಾಸ ಮಾಡುವುದರ ಉದ್ದೇಶವೇನು? ಎಂಬುದು ರಹಸ್ಯವಲ್ಲ. ಯಾವುದೇ ಪರಿಸ್ಥಿತಿ ಎದುರಾದರೂ ನಿಭಾಯಿಸಲು ತಾವು ಜನರ ಬಳಿ ಇರಬೇಕು ಎಂಬುದು ಅವರ ಮುಂದಾಲೋಚನೆ. ಅರ್ಥಾತ್, ಜನನಾಯಕ ಎಂಬ ಪಟ್ಟವನ್ನು ಕಳೆದುಕೊಳ್ಳುವುದು ಅಥವಾ ಅದರ ಶಕ್ತಿ ಕುಗ್ಗಲು ಬಿಡುವುದು ಕ್ಷೇಮವಲ್ಲ ಎಂಬುದು ಯಡಿಯೂರಪ್ಪ ಅವರಿಗೆ ಗೊತ್ತಿದೆ. ಜನರ ಮಧ್ಯೆ ಇರಲು ಅವರು ಬಯಸುವುದಕ್ಕೆ ಇದು ಮುಖ್ಯ ಕಾರಣ.

ಹಾಗೊಂದು ವೇಳೆ ಬಸವರಾಜ ಬೊಮ್ಮಾಯಿ ಸಂಪೂರ್ಣ ವಾಗಿ ತಮ್ಮ ಹಿಡಿತದಿಂದ ಕಳಚಿಕೊಂಡಿದ್ದಾರೆ ಎಂಬುದು ನಿಕ್ಕಿ ಯಾದರೆ ಈ ಸರಕಾರದ ಪಾಲಿಗೆ ಅವರೇ ಮೊದಲ ಕಂಟಕ. ಹೀಗಾಗಿ ಬಸವರಾಜ ಬೊಮ್ಮಾಯಿ ಅವರು ಯಡಿಯೂರಪ್ಪ ಅವರ ಮನಃಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡೇ ಮುಂದಡಿಯಿಡಬೇಕು. ಈಗಲೂ ಅವರಿಗೆ ತಲೆನೋವಾಗಿರುವ ಒಂದು ಸಂಗತಿ ಇದೆ. ಅದೆಂದರೆ, ತಾವು ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿದ ಮೇಲೆ ತಮ್ಮ ಪುತ್ರ ವಿಜಯೇಂದ್ರ ಅವರನ್ನು ಬೊಮ್ಮಾಯಿ ಸಂಪುಟದಲ್ಲಿ ಸಚಿವರನ್ನಾಗಿ ಮಾಡಬೇಕು ಎಂಬ ಆಕಾಂಕ್ಷೆ ಯಡಿಯೂರಪ್ಪ ಅವರಿಗಿತ್ತು. ಅದು ಈಗಲೂ ಇದೆ. ಆದರೆ ವಿಜಯೇಂದ್ರ ಅವರನ್ನು ಸಂಪುಟಕ್ಕೆ ತೆಗೆದುಕೊಂಡರೆ ಪರ್ಯಾಯ ಶಕ್ತಿ ಕೇಂದ್ರವೊಂದನ್ನು ಹುಟ್ಟುಹಾಕಿದಂತೆ ಎಂಬ ಲೆಕ್ಕಾಚಾರಕ್ಕೆ ಬಂದ ಬಿಜೆಪಿ ಹೈಕಮಾಂಡ್ ಅದಕ್ಕೆ ಅವಕಾಶ ಕೊಡಲಿಲ್ಲ.

ಆದರೆ ಅದೇ ಕಾಲಕ್ಕೆ ಅದು, ಯಡಿಯೂರಪ್ಪ ಅವರನ್ನು ಎದುರು ಹಾಕಿಕೊಂಡಿದ್ದ ಬಸನಗೌಡ ಪಾಟೀಲ್ ಯತ್ನಾಳ್, ಸಿ.ಪಿ.ಯೋಗೀಶ್ವರ್ ಮತ್ತು ಅರವಿಂದ ಬೆಲ್ಲದ್ ಅವರಂತವರನ್ನೂ ಕ್ಯಾಬಿನೆಟ್ ಗೇಟಿನ ಒಳಗೆ ಬಿಡದೆ ದೂರವಿರಿಸಿ ಪರಿಸ್ಥಿತಿಯನ್ನು ಸರಿದೂಗಿಸಿತ್ತು. ತಮ್ಮ ವಿರೋಧಿಗಳಿಗೆ ಮಂತ್ರಿಗಿರಿ ನೀಡದ ಕ್ರಮ ದಿಂದ ಯಡಿಯೂರಪ್ಪ ಅವರು ಸಂತೃಪ್ತರಾದರೇನೋ ನಿಜ. ಆದರೆ ತಮ್ಮ ಮಗ ವಿಜಯೇಂದ್ರ ಬಹುಕಾಲ ಮಂತ್ರಿಯಾಗದೇ ಇರುವುದು ಕ್ಷೇಮವಲ್ಲ ಎಂಬ ಭಾವನೆ ಅವರಿಗಿದೆ.

ಹಾಗಂತಲೇ ಅವರು, ಸರಕಾರಕ್ಕೆ ಇಮೇಜ್ ಬರಲು ವಿಜಯೇಂದ್ರ ಇರಬೇಕು ಎಂದು ವರಿಷ್ಠರ ಮೇಲೆ ಒತ್ತಡ ಹೇರುವಂತೆ ಬೊಮ್ಮಾಯಿ ಅವರಿಗೂ ಹೇಳು ತ್ತಿದ್ದಾರೆ. ಅದೇ ಕಾಲಕ್ಕೆ ಹೈಕಮಾಂಡ್ ವರಿಷ್ಠರಿಗೂ ತಮ್ಮ ಮನದಿಂಗಿತವನ್ನು ಅರಹುತ್ತಲೇ ಇದ್ದಾರೆ. ಆದರೆ ವಿಜಯೇಂದ್ರ ಅವರನ್ನು ಸಂಪುಟಕ್ಕೆ
ತೆಗೆದುಕೊಂಡರೆ ಯಡಿಯೂರಪ್ಪ ಅವರ ವಿರೋಧಿಗಳಿಗೂ ಅವಕಾಶ ನೀಡಬೇಕಾಗುತ್ತದೆ ಎಂಬ ಕಾರಣ ಹೇಳಿ ಬಿಜೆಪಿ ಹೈಕಮಾಂಡ್ ಸದ್ಯಕ್ಕೇನೋ ಕಾಲ ತಳ್ಳುತ್ತಿದೆ.

ಆದರೆ ಇದೇ ರೀತಿ ಬಹುಕಾಲ ಮುಂದುವರಿಯುವುದೂ ಕಷ್ಟ. ಯಾಕೆಂದರೆ ಸದ್ಯದ ಎದುರಾಗಲಿರುವ ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಚುನಾವಣೆಗಳಲ್ಲಿ ಬಿಜೆಪಿ ದೊಡ್ಡ ಮಟ್ಟದ ಯಶಸ್ಸು ಕಾಣಬೇಕೆಂದರೆ ಯಡಿಯೂರಪ್ಪ ಅವರ ಸಹಕಾರ ಬೇಕೇ ಬೇಕು. ಯಡಿಯೂರಪ್ಪ ಅವರನ್ನು ದೂರವಿಟ್ಟು ಕರ್ನಾಟಕದಲ್ಲಿ ಬಿಜೆಪಿಯನ್ನು ತಮ್ಮ ಬಲದ ಮೇಲೆ ಗೆಲ್ಲಿಸುವ ವಿಶ್ವಾಸ ಖುದ್ದು ಸಂಘ ಪರಿವಾರಕ್ಕೇ ಇಲ್ಲ, ಅಂದ ಮೇಲೆ ಜನನಾಯಕರಾಗಿ ನಿಲ್ಲಲು ಸಾಧ್ಯವಾಗದ ಬಸವರಾಜ ಬೊಮ್ಮಾಯಿ ಅವರಿಗೆ ಎಲ್ಲಿಂದ ವಿಶ್ವಾಸ ಬರಬೇಕು? ಈ ಮಧ್ಯೆ ಬಸವರಾಜ ಬೊಮ್ಮಾಯಿ ಅವರ ವಿಷಯದಲ್ಲಿ ಅವರ ಸಂಪುಟದ ಬಹುತೇಕ ಸಚಿವರಿಗೆ ಇನ್ನೂ ದೊಡ್ಡ ವಿಶ್ವಾಸ ಬಂದಿಲ್ಲ. ಮೂಲ ಬಿಜೆಪಿಯ ಸಚಿವರಿಗೆ, ಇವರು ಹೊರಗಿನವರು ಎಂಬ ಧೋರಣೆ ಇದ್ದರೆ, ಯಡಿಯೂರಪ್ಪ
ಅವರನ್ನು ನೆಚ್ಚಿಕೊಂಡು ಬಂದವರಿಗೆ ಬೊಮ್ಮಾಯಿ ಅವರನ್ನು ನಂಬುವುದು ಹೇಗೆ? ಎಂಬ ಪ್ರಶ್ನೆ ಉಳಿದೇ ಇದೆ.

ಇದಕ್ಕೆ ಬಹುಮುಖ್ಯ ಕಾರಣವೆಂದರೆ, ಬಸವರಾಜ ಬೊಮ್ಮಾಯಿ ಅವರಿಗೆ ರಾಜಕಾರಣದಲ್ಲಿ ದೊಡ್ಡ ಮಿತ್ರರೂ ಇಲ್ಲ, ದೊಡ್ಡ ಶತ್ರುಗಳೂ ಇಲ್ಲ. ಇದು ಅವರ ಅಂತರ್ಮುಖಿ ಗುಣಕ್ಕೆ ಸಾಕ್ಷಿ. ಮತ್ತು ರಾಜಕಾರಣದಲ್ಲಿ ಅಂತರ್ಮುಖಿಗಳನ್ನು ನಂಬುವವರ ಸಂಖ್ಯೆ ಕಡಿಮೆ. ಇದೇ ಕಾರಣಕ್ಕಾಗಿ ಬಸವರಾಜ ಬೊಮ್ಮಾಯಿ ಅವರು ಜನಸಾಮಾನ್ಯರ ನಡುವೆ ತಮ್ಮ ಇಮೇಜ್ ವೃದ್ಧಿಸಿಕೊಳ್ಳಲು ಪ್ರಯತ್ನಿಸುತ್ತಲೇ ಇರುತ್ತಾರೆ. ಹಾಡು ಕೇಳುವುದರಿಂದ ಹಿಡಿದು ಹಾಡು ಹೇಳುವ ತನಕ, ನಾನು ಕಾಮನ್ ಮ್ಯಾನ್ ಎಂದು ಹೇಳುವುದರಿಂದ ಹಿಡಿದು ಸರಳತೆಯೇ ನನಗೆ ಆಧಾರ ಎಂದು ತೋರಿಸಿಕೊಳ್ಳುವ ತನಕ ಹಲವು ವಿಧಗಳಲ್ಲಿ ಇದು ತೋರ್ಪಡಿಕೆಯಾಗುತ್ತಲೇ ಇರುತ್ತದೆ.

ತಾವು ಮಾಡುತ್ತಿರುವುದು ಹುಲಿ ಸವಾರಿ ಎಂಬ ಅರಿವು ಇರುವುದರಿಂದಲೇ ಇದನ್ನವರು ಮಾಡುತ್ತಲೇ ಇರುತ್ತಾರೆ. ಆದರೆ ಅವರು ಇವತ್ತೇನು ಮಾಡುತ್ತಿದ್ದಾರೆ? ಅದು ನಾಳೆ ಜನರ ಆಶೀರ್ವಾದ ಪಡೆಯುವ ಹಂತದಲ್ಲಿ ನೆರವಿಗೆ ಬರುತ್ತದೆಯೇ? ಗೊತ್ತಿಲ್ಲ. ಆ ದೃಷ್ಟಿಯಿಂದ ಅವರ ಅನುದಿನದ ಹೆಜ್ಜೆಗಳು ಕುತೂಹಲ  ಮೂಡಿಸುತ್ತಲೇ ಇರುತ್ತವೆ.