Thursday, 19th September 2024

ಹುಲಿ ಸಂರಕ್ಷಣೆಯಿಂದ ಸಂಸ್ಕೃತಿ ರಕ್ಷಣೆ ಸಾಧ್ಯ

ವಿಶ್ವವಾಣಿ ಕ್ಲಬ್‌ಹೌಸ್‌ ಸಂವಾದ – 78

ವಿಶ್ವವಾಣಿ ಕ್ಲಬ್‌ಹೌಸ್‌ನಲ್ಲಿ ಹುಲಿ ಸಂರಕ್ಷಕ ಡಾ.ಉಲ್ಲಾಸ ಕಾರಂತ್

ಬೆಂಗಳೂರು: ಹುಲಿ ರಕ್ಷಣೆಯಿಂದ ನಮ್ಮ ಸಂಸ್ಕೃತಿ ರಕ್ಷಣೆ ಸಾಧ್ಯ. ನಮಗಿಂತಲೂ ಮೊದಲಿದ್ದ ಜೀವಿಗಳ, ನಿಸರ್ಗದ ನಾಶ ಮಾಡಲು ನಮಗೆ ನೈತಿಕ ಹಕ್ಕಿಲ್ಲ. ನಿಸರ್ಗವನ್ನು ಹಾಳು ಮಾಡಿಕೊಂಡರೆ ಅಜ್ಜ ಕೂಡಿಟ್ಟ ಇನ್ಷೂರೆನ್ಸ್‌ನ್ನು ಸುಟ್ಟು ಹಾಕಿದಂತೆ. ಹುಲಿ ನಮ್ಮದಲ್ಲ. ಹುಲಿ ಇಡೀ ವಿಶ್ವದ್ದು ಎಂದು ಹುಲಿ ಸಂರಕ್ಷಕ ಡಾ.ಉಲ್ಲಾಸ ಕಾರಂತ್ ಹೇಳಿದರು.

ವಿಶ್ವವಾಣಿ ಕ್ಲಬ್‌ಹೌಸ್‌ನಲ್ಲಿ ಹಮ್ಮಿಕೊಂಡಿದ್ದ ‘ಹುಲಿ ಏಕೆ ಬೇಕು’ ಅರಿವಿನ ಉಪನ್ಯಾಸ ಸಂವಾದ ಕಾರ್ಯಕ್ರಮ ದಲ್ಲಿ ಮಾತನಾಡಿ, ಮಕ್ಕಳಿದ್ದಾಗ ಎಲ್ಲರಿಗೂ ವನ್ಯ ಪ್ರಾಣಿಗಳ ಬಗ್ಗೆ ಆಸಕ್ತಿ ಇರುತ್ತದೆ. ಆದರೆ ಶಿಕ್ಷಣ ವ್ಯವಸ್ಥೆ ಯಿಂದ ಆಸಕ್ತಿ ಕಡಿಮೆಯಾಗುತ್ತಾ ಹೋಗುತ್ತದೆ. ನಮ್ಮ ತಂದೆ ಶಿವರಾಮ ಕಾರಂತರಿಂದ ನನಗೆ ಈ ಅಭ್ಯಾಸ ಬಂದಿದೆ. ಪ್ರಾಣಿಗಳು, ಪಕ್ಷಿಗಳು ಅಂದರೆ ಅವರಿಗೂ ಅದಮ್ಯ ಆಸಕ್ತಿ. ನಮ್ಮ ತಂದೆಯವರು ಆಸಕ್ತಿ ಬೆಳೆಸಿ ಕೊಳ್ಳಿ ಎಂದಷ್ಟೇ ಹೇಳಿದ್ದರು.

ಇದಕ್ಕೆ ಪೂರಕವೆಂಬಂತೆ ಮನೆಯಲ್ಲಿ ಸಾವಿರಾರು ಪುಸ್ತಕಗಳೂ ಇದ್ದವು. ಹುಲಿಗಳ ಬಗ್ಗೆ ಆಗಿನಿಂದಲೂ ಆಸಕ್ತಿ ಇತ್ತು. ದಿನಕಳೆದಂತೆ ಬೆಳೆಯುತ್ತಾ ಹೋಯಿತು ಎಂದು ತಮ್ಮ ಹುಲಿ ಬಗೆಗಿನ ಆಸಕ್ತಿ ಬಗ್ಗೆ ಹೇಳಿದರು. ನನ್ನಲ್ಲಿದ್ದ ಹುಲಿಗಳ ಕುರಿತಾದ ಆಸಕ್ತಿ ಬೆಳೆಯಲು ಮತ್ತೊಂದು ಕಾರಣ ನಾನು 8 ವರ್ಷದವನಿರುವಾಗ
ನಮ್ಮೂರು ಪುತ್ತೂರಿಗೆ ಸರ್ಕಸ್ ಕಂಪನಿ ಬಂದಿತ್ತು. ಅಲ್ಲಿ ಚಿಕ್ಕದಾದ ಗೂಡಿನಲ್ಲಿ ದೊಡ್ಡ ಹುಲಿಯನ್ನು ಕೂಡಿ ಹಾಕಲಾಗಿತ್ತು. ಅದನ್ನು ನೋಡಿದಾಗ ಹುಲಿ ಬಗೆಗಿನ ಆಸಕ್ತಿ ಹೆಚ್ಚಾಯಿತು.

ಆಗ ಪಾಠದಲ್ಲಿಯೂ ಆಸಕ್ತಿ ಇರಲಿಲ್ಲ. ಸುತ್ತಮುತ್ತ ಕಾಣುತ್ತಿದ್ದ ಪರಿಸರದ ಬಗ್ಗೆ ಜೀವಿಗಳ ಬಗ್ಗೆಯೇ ಆಸಕ್ತಿ ಹೆಚ್ಚಾಗಿತ್ತು. ಆ ಸಂದರ್ಭದಲ್ಲಿ ಭಾರತದಲ್ಲಿ ಪ್ರಾಣಿ ಬೇಟೆಯೂ ಅವ್ಯಾಹತವಾಗಿತ್ತು. ಬೇಟೆಗಾರರು ಪ್ರಾಣಿ ಯನ್ನು ಕೊಂದು ಪ್ರದರ್ಶನ ಮಾಡುತ್ತಿದ್ದರು. ಹೀಗಾಗಿ ಅವುಗಳ ಜೀವನಶೈಲಿ ಹಾಗೂ ಜೀವಿಸುವಿಕೆಯ ಕಡೆಗೆ ಗಮನ ಹೋಯಿತು. ನಮ್ಮ ತಂದೆ ಶಿವರಾಮ ಕಾರಂತರು ತಮ್ಮ ಪುಸ್ತಕವೊಂದರಲ್ಲಿ ನಮ್ಮ ಮಲೆನಾಡಿನಲ್ಲಿ ಎಷ್ಟು ಬೇಟೆಯಾಡಿದರೂ ಮುಗಿಯದಷ್ಟು ಹುಲಿಗಳು ಇವೆ ಎಂದೂ ಉಲ್ಲೇಖಿಸಿದ್ದರು. ಈ ಸಂದರ್ಭದಲ್ಲಿ ನಾನು ಅವರೊಂದಿಗೆ ಜಗಳವಾಡಿದ್ದೆ. ಯಾಕೆ ಈ ರೀತಿ ಬರೆದಿದ್ದೀರಿ? ನಿಮ್ಮ ಅನುಯಾಯಿಗಳು ಇನ್ನು ಹೆಚ್ಚು ಹೆಚ್ಚು ಹುಲಿ ಬೇಟೆಯಲ್ಲಿ ತೊಡಗುತ್ತಾರೆ ಎಂದು ವಾದಿಸಿದ್ದೆ ಎಂದು ನೆನಪಿಸಿಕೊಂಡರು.

ನಾನು ಪಿಯುಸಿ ಮುಗಿಸಿದ ಬಳಿಕ ಯಾವ ವಿಷಯ ತೆಗೆದುಕೊಳ್ಳಬೇಕೆಂಬ ಗೊಂದಲದಲ್ಲಿದ್ದೆ. ಬಯಾಲಜಿ ತೆಗೆದುಕೊಂಡು ಡಾಕ್ಟರ್ ಆಗುವ ಇಚ್ಛೆಯಿರಲಿಲ್ಲ,
ಹಾಗಾಗಿ ಎಂಜಿನಿಯರಿಂಗ್ ಆರಿಸಿಕೊಂಡು ಅಭ್ಯಾಸ ಮಾಡಿದೆ. 1964ರಲ್ಲಿ ಜಾರ್ಜ್ ಶೆಲ್ಲರ್ ಮೊದಲ ಬಾರಿಗೆ ಭಾರತದಲ್ಲಿ ಹುಲಿಗಳ ಬಗ್ಗೆ ಅಧ್ಯಯನ ಮಾಡಿದರು. ಅವರ ಕೃತಿ ಈಯರ‍್ಸ್ ಆಫ್ ಟೈಗರ್‌ನ್ನು ಓದಿದ ಬಳಿಕ ನನ್ನ ಆಸಕ್ತಿಯೂ ಹೆಚ್ಚಾಗಿತ್ತು. 60 ರಿಂದ 67ನೇ ಇಸವಿಯವರೆಗೆ ಹುಲಿ ನೋಡುವ ಆಸೆಯಿಂದ ಎಲ್ಲ ಕಡೆಗಳಲ್ಲಿ ಅಲೆದಾಡಿದೆ. ಕುದುರೆಮುಖದಲ್ಲಿ ಒಂದು ಹೆಜ್ಜೆ ಕಂಡಿದ್ದೆ. ಆದರೂ ನನ್ನ ಆಸೆ ನಿಂತಿರಲಿಲ್ಲ.

ಇನ್ನು 1973ರ ಸಮಯದಲ್ಲಿ ಇಂದಿರಾ ಗಾಂಧಿ ಅವರು ವನ್ಯ ಜೀವಿಗಳನ್ನು ಉಳಿಸಿ ಎಂಬ ಅಭಿಯಾನಕ್ಕೆ ಸ್ಪಂದಿಸಿ ವನ್ಯಜೀವಿ ಬೇಟೆ ನಿಯಂತ್ರಣ ಕಾಯಿದೆ ಜಾರಿಗೆ ತಂದರು. ಇದರಿಂದ ಅನೇಕ ಕಡೆಗಳಲ್ಲಿ ಹುಲಿ ರಕ್ಷಣೆ ಸಾಧ್ಯವಾಯಿತು. ಅರಣ್ಯ ಇಲಾಖೆಗೆ ಮರ ಸಂರಕ್ಷಣೆಯ ಅರಿವಿತ್ತು. ಆದರೆ ಹುಲಿ ರಕ್ಷಣೆಯ ಅರಿವಿರಲಿಲ್ಲ. ಅವರ ಶಿಸ್ತು, ಕಾನೂನಿನೊಂದಿಗೆ ಹುಲಿ ಸಂರಕ್ಷಣೆ ಪ್ರಾರಂಭ ವಾಯಿತು ಎಂದು ತಿಳಿಸಿದರು.

ಹುಲಿ ಕುರಿತು ಅಧ್ಯಯನ: ನಾನು ಫ್ಲೋರಿಡಾಗೆ ಹೋಗಿ ಹುಲಿ ಸಂರಕ್ಷಣೆಯ ಕುರಿತಂತೆ ವೈಜ್ಞಾನಿಕ ಅಧ್ಯಯನದಲ್ಲಿ ತೊಡಗಿಕೊಂಡೆ. 1986 ರಿಂದ 1996 ರವರೆಗೆ ನಾಗರ ಹೊಳೆ ಅಭಿಯಾರಣ್ಯದಲ್ಲಿ ಹುಲಿಯ ಬಗ್ಗೆ ಅಧ್ಯಯನ ಶುರು ಮಾಡಿದೆ. ಇದಕ್ಕಾಗಿ ಹೆಚ್ಚು ಸಮಯ ನಾಗರಹೊಳೆ ಅಭಯಾರಣ್ಯದಲ್ಲಿಯೇ ಕಳೆದೆ. ಹುಲಿ ಕುರಿತಂತೆ ನಮ್ಮಲ್ಲಿ ವೈಜ್ಞಾನಿಕವಾದ ಮಾಹಿತಿ ಇರಲಿಲ್ಲ. ಮಾಹಿತಿ ತೆಗೆದುಕೊಳ್ಳಬೇಕು ಎಂದು ಹೊರಟೆ. ಆಗ ಕೊಡಗಿನಲ್ಲಿ ೨೭ ಹುಲಿ ಕೊಂದವರೊಬ್ಬರ ಬಳಿ ಕೇಳಿದೆ, ಅವರು ಹುಲಿ ಬಗ್ಗೆ ವಿವರಿಸುತ್ತಾ, ಹುಲಿಗಳು ಸಾಮಾನ್ಯವಾಗಿ 9 ಅಡಿಗಳಿರುತ್ತವೆ.

ಹುಲಿಯ ತೂಕ 150 ರಿಂದ 250 ಕೆಜಿ ತೂಕವಿರುತ್ತದೆ. ಹುಲಿಯ ಮೇಲಿನ ಪಟ್ಟೆ, ಕೈ ಬೆರಳಚ್ಚಿ ನಷ್ಟೇ ಸ್ಪಷ್ಟವಾಗಿರುತ್ತದೆ ಎಂದು ತಿಳಿಸಿದರು. ಹುಲಿಗೆ ಬದುಕಲು ವಾರಕ್ಕೊಂದು ಪ್ರಾಣಿಬಲಿ ಬೇಕು. ವರ್ಷಕ್ಕೆ 50 ಪ್ರಾಣಿ ಬೇಟೆಯಾಡುತ್ತದೆ. ಹಾಗೇ ಒಂದು ಹುಲಿಗೆ ಸರಾಸರಿ 500 ಪ್ರಾಣಿ ಬೇಕಾಗುತ್ತವೆ. ಒಂದು ಹೆಣ್ಣು ಹುಲಿಯು 3 ರಿಂದ 4 ಮರಿಗೆ ಜನ್ಮ ನೀಡುತ್ತವೆ. ಜೀವಮಾನದಲ್ಲಿ 15 ಮರಿ ಹಾಕುತ್ತವೆ. ಹೀಗಾಗಿ ಹುಲಿ ಬೇಟೆಯಾಡಿದರೂ ಅವುಗಳ ಸಂತತಿ ಅಭಿವೃದ್ಧಿ ಯಾಗಿದೆ.

200 ವರ್ಷಗಳ ಹಿಂದೆ ಹುಲಿ ಎಲ್ಲ ದೇಶಗಳಲ್ಲೂ ಇತ್ತು. ಬಾಲಿ, ರಷ್ಯನ್, ಇರಾಕ್ ಮುಂತಾದ ಕಡೆಗಳಲ್ಲಿ ಹುಲಿಯ ವಾಸ ಇತ್ತು. ಆದರೆ ಈಗ ಕೇವಲ 11 ದೇಶಗಳಲ್ಲಿ ಮಾತ್ರ ಹುಲಿ ಕಂಡು ಬರುತ್ತಿದೆ. ಶೇ.6ರಷ್ಟು ಮಾತ್ರ ಇದೆ. ಶೇ.20ರಷ್ಟು ಭಾರತ ಹಾಗೂ ಉಳಿದಂತೆ ಇತರ ದೇಶಗಳಲ್ಲಿವೆ ಎಂದು ಮಾಹಿತಿ ನೀಡಿದರು.

ವಾತಾವರಣ ವೈಶಿಷ್ಟ್ಯತೆ
ಹುಲಿಗಳು ಬಹಳ ಅಡಾಪ್ಟೆಬಲ್. ರಷ್ಯನ್ ಅರಣ್ಯದಲ್ಲಿ ಹುಲಿಗಳು ಚಳಿಗಾಲದಲ್ಲಿ -37 ಡಿಗ್ರಿಯಲ್ಲಿ ವಾಸಿಸುತ್ತವೆ. ಪಶ್ಚಿಮ ರಾಜಸ್ಥಾನದಲ್ಲಿ +60 ಡಿಗ್ರಿಯಲ್ಲೂ ಇರುತ್ತವೆ. ಕುದುರೆಮುಖದ ೮೦೦ಮಿ.ಲೀ ಮಳೆಯಲ್ಲೂ ಬದುಕುತ್ತವೆ.

***

ಉಲ್ಲಾಸ ಕಾರಂತರು ಅಂತಾರಾಷ್ಟ್ರೀಯ ಖ್ಯಾತಿಯ ಹುಲಿ ಸಂರಕ್ಷಕರು. 40 ವರ್ಷಗಳಿಂದ ಹುಲಿಗಳ ಅಧ್ಯಯನದಲ್ಲಿ ತೊಡಿಸಿಕೊಂಡಿದ್ದಾರೆ. ಕನ್ನಡಿಗರೊಬ್ಬರು ಹುಲಿ ಸಂರಕ್ಷಣೆಯಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದ್ದು ಹೆಮ್ಮೆಯ ವಿಚಾರ. ಉಲ್ಲಾಸರು ಹುಲಿಗಳ ಬಗ್ಗೆ ಪುಸ್ತಕ ಬರೆದಿದ್ದಾರೆ. ಇವರು ಭಾರತ ಸರಕಾರದ ಅರಣ್ಯ ಸಲಹಾ ಸಮಿತಿ, ರಾಷ್ಟ್ರೀಯ ಹುಲಿ ಸಂರಕ್ಷಣಾ ವಿಭಾಗ ಮುಂತಾದ ಸಂಸ್ಥಗಳಲ್ಲಿ ಸಲಹೆಗಾರರಾಗಿದ್ದಾರೆ. ಉಲ್ಲಾಸರ ಸೇವೆಯನ್ನು ಗಮನಿಸಿ ಪದ್ಮಶ್ರೀ ಪ್ರಶಸ್ತಿ ನೀಡಲಾಗಿದೆ.

– ವಿಶ್ವೇಶ್ವರ ಭಟ್
ವಿಶ್ವವಾಣಿ ಪ್ರಧಾನ ಸಂಪಾದಕರು

***

ಹುಲಿಯ ಅಧ್ಯಯನಕ್ಕೆ ವೈಜ್ಞಾನಿಕ ನಿಖರತೆ ಇಲ್ಲ

ಪ್ರತಿಯೊಂದು ಅಂಶವನ್ನು ಒರೆಗೆ ಹಚ್ಚಿ ನೋಡಬೇಕು

1990ರಲ್ಲಿ ಮೊದಲ ಬಾರಿಗೆ ಬಿಲ್ ಗುಡ್‌ಸನ್‌ನಿಂದ ಕ್ಯಾಮೆರಾ ಟ್ರ್ಯಾಪಿಂಗ್ ಪ್ರಾರಂಭ

2005ರಲ್ಲಿ ಮನಮೋಹನ್ ಸಿಂಗ್ ಅವರಿಂದ ಟೈಗರ್ ಟಾಸ್ಕ್ ಫೋರ್ಸ್ ಪ್ರಾರಂಭ

ಹುಲಿ ಸಂರಕ್ಷಣೆಗೆ ಕಟ್ಟುನಿಟ್ಟಾದ ಕಾನೂನು ಅವಶ್ಯಕ

ನಮ್ಮ ದೇಶದ ಅನೇಕ ರಾಜ್ಯ ಗಳಲ್ಲಿ ಹುಲಿ ಸಂತತಿ ಇಲ್ಲ.

ಹುಲಿ ಹೆಸರಿನಲ್ಲಿ ನಿಸರ್ಗ ಸಂರಕ್ಷಣೆ ಸಾಧ್ಯ

ಹುಲಿ ಹಾಗೂ ನಿಸರ್ಗದ ಸಂರಕ್ಷಣೆಗೆ ನೈತಿಕತೆ ಬೇಕು

ಜೀವ ಸಂತತಿಯನ್ನು ಅಳಿಸುವ ಹಕ್ಕಿಲ್ಲ

Leave a Reply

Your email address will not be published. Required fields are marked *