Saturday, 23rd November 2024

ಶಾರುಖ್ ಪುತ್ರ ಆರ್ಯನ್ ಖಾನ್ ಗೆ ಜೈಲೇ ಗತಿ

ಮುಂಬೈ: ಡ್ರಗ್ ಪ್ರಕರಣದಲ್ಲಿ ಜೈಲು ಸೇರಿರುವ ಬಾಲಿವುಡ್ ನಟ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು, ಮುಂಬೈನ ಎನ್ ಡಿ ಪಿಎಸ್ ವಿಶೇಷ ನ್ಯಾಯಾಲಯ ವಜಾಗೊಳಿಸಿದೆ.

ಜಾಮೀನು ಅರ್ಜಿಯ ಕುರಿತಂತೆ ವಿಚಾರಣೆ ನಡೆಸಿದ್ದ ಎನ್ಡಿಪಿಎಸ್ ಕೋರ್ಟ್, ಆರ್ಯನ್ ಖಾನ್, ಅರ್ಬಾಜ್ ಮರ್ಚೆಂಟ್ ಮತ್ತು ಮುನ್ಮುನ್ ಧಮೇಚಾ ಅವರ ಜಾಮೀನು ಅರ್ಜಿಯನ್ನು ವಜಾಗೊಳಿಸಿದೆ. ಈ ಮೂಲಕ ನಟ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಗೆ ಜೈಲೇ ಗತಿ ಎನ್ನುವಂತೆ ಆಗಿದೆ.

ಎನ್‍ಡಿಪಿಎಸ್ ಅಧಿಕಾರಿಗಳು, ಆರ್ಯನ್ ಖಾನ್ ವಾಟ್ಸ್ ಅಪ್ ಚಾಟ್‍ಗಳ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಿದ್ದಾರೆ.

ಬಾಲಿವುಡ್‍ನ ಸೂಪರ್ ಸ್ಟಾರ್ ಶಾರುಕ್‍ಖಾನ್ ಅವರ ಪುತ್ರ ಆರ್ಯನ್ ಖಾನ್ (23)ನನ್ನು ಅ.3ರಂದು ಎನ್‍ಡಿಪಿಎಸ್ ಅಧಿಕಾರಿಗಳು ಮುಂಬೈನಿಂದ ಗೋವಾಕ್ಕೆ ಮೂರು ದಿನ ಗಳ ಮೋಜಿನ ಪ್ರವಾಸಕ್ಕೆ ತೆರಳುತ್ತಿದ್ದ ಹಗಡಿನಲ್ಲಿ ಬಂಧಿಸಿದ್ದರು. ತಪಾಸಣೆ ವೇಳೆ 5 ಗ್ರಾಂ ಕೊಕೈನ್, 21 ಗ್ರಾಮ್ ಚರಸ್, 22 ಎಂಡಿಎಂಎ ಮಾತ್ರೆಗಳು ಸೇರಿ 1.33 ಲಕ್ಷ ರೂ.ಮೌಲ್ಯದ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿದ್ದರು.

ಆರ್ಯನ್ ಖಾನ್ ಅಮಾಯಕನಾಗಿದ್ದು, ಯಾವುದೇ ಅಪರಾಧ ಮಾಡಿಲ್ಲ, ಆತನಿಂದ ಮಾದಕ ವಸ್ತುಗಳನ್ನು ವಶ ಪಡಿಸಿಕೊಂಡಿಲ್ಲ. ಎನ್‍ಡಿಪಿಎಸ್ ಅಧಿಕಾರಿಗಳು ಬುದ್ದಿ ಉಪಯೋಗಿಸದೆ ಕೇಸು ದಾಖಲಿಸಿ ಬಂಧಿಸಿದ್ದಾರೆ ಎಂದು ಆರ್ಯನ್ ಪರ ವಕೀಲರು ಜಾಮೀನು ಅರ್ಜಿ ವಿಚಾರಣೆ ವೇಳೆ ವಾದ ಮಂಡಿಸಿದ್ದರು.