Friday, 18th October 2024

ಈ ಆಯ್ಕೆ ಕೊನೆಯದಾಗಿರಲಿ

ಲತಿಕಾ ಭಟ್ ಶಿರಸಿ

‘ಮೇಡಂ, ನಮಸ್ತೇ ನನ್ನ ಹೆಸರು ದೇವರಾಯ ಅಂತ. ಅರವತ್ತೈದು ವರ್ಷ. ನಿಮ್ಮ ಆಶ್ರಮಕ್ಕೆ ಸೇರಬೇಕಿತ್ತು.’ ಅವರ ಕಣ್ಣು ಕೆಂಪಗಾಗಿತ್ತು. ಮುಖ ಇಳಿದಿತ್ತು. ಕಣ್ ಸುತ್ತಲೂ ದಪ್ಪಗಾಗಿತ್ತು. ‘ನಮಸ್ತೇ ರಾಯರೇ. ಬಹಳ ಸಂತೋಷ ಸೇರಲು ನಮ್ಮ ಆಶ್ರಮವನ್ನು ಆಯ್ಕೆ ಮಾಡಿಕೊಂಡಿದ್ದಕ್ಕೆ.

ಅಂದ ಹಾಗೇ ಆಶ್ರಮಕ್ಕೆ ಸೇರುವಂತ ಸ್ಥಿತಿ ಯಾಕೆ ಬಂತು?’ ‘ಮೇಡಂ, ನನ್ನ ಪತ್ನಿ ಐದು ತಿಂಗಳ ಹಿಂದೆ ಕರೋನಾದಿಂದ ಸತ್ಹೋದ್ಲು. ನನ್ನ ಜೀವನ ದುಸ್ತರವಾಗಿದೆ.’

‘ಓ… ಮಕ್ಕಳಿಲ್ವಾ?’
‘ಇದ್ದಾರೆ ಮೇಡಂ. ಒಬ್ಬ ಮಗ, ಒಬ್ಬಳು ಮಗಳು. ಇಬ್ರಿಗೂ ಮದ್ವೆಯಾಗಿ ಮಕ್ಕಳೂ ಆಗಿದ್ದಾರೆ.’
‘ಮಗ ಎಲ್ಲಿರೋದು?’
‘ನನ್ನ ಜೊತೆನೇ ಇರ್ತಾನೆ. ಸೊಸೆ, ಮೊಮ್ಮಗು ಇಬ್ರಿಗೂ ನಾನಂದ್ರೆ ಜೀವ. ಮಗನೂ ಒಳ್ಳೆಯವ್ನೇ. ಆದರೆ ನನಗೆ ಸರಿ ಬರೋದಿಲ್ಲ.’

‘ಓಹೋ… ಆರ್ಥಿಕ ತೊಂದರೆಯೇನಾದ್ರೂ ಇದ್ಯಾ?’
‘ಖಂಡಿತ ಇಲ್ಲ ಮೇಡಂ. ಎರಡು ಮನೆಗಳಿವೆ. ನಮಗೊಂದು, ಮಗನಿಗೊಂದು ಅಂತ ಕಟ್ಕೊಂಡಿದ್ದು. ನಾನೇ ಕಟ್ಟಿ ಬೆಳೆಸಿದ ನನ್ನ ಬಿಸಿನೆಸ್ ಇದೆ. ಹದಿನೈದು ಜನಕ್ಕೆ ಕೆಲಸಾನೂ ಕೊಟ್ಟಿದ್ದೇನೆ. ನಿಮ್ಮಲ್ಲಿ ಬಂದ್ರೆ ನಾನೇನೂ ಫ್ರೀಯಾಗಿ ಇರಲ್ಲ ಮೇಡಂ. ಹದಿನೈದು ಲಕ್ಷ ಡಿಪಾಸಿಟ್ ಇಡ್ತೇನೆ.’
‘ಓಹೋ… ತುಂಬಾ ಸಂತೋಷ. ನಿಮಗೆ ಖಂಡಿತ ಬದಲಾವಣೆಯ ಅವಶ್ಯಕತೆ ಇದೆ. ಅಂದ ಹಾಗೇ ಮಗನ ಬಗ್ಗೆ ಯಾಕೆ ಅಷ್ಟು ಬೇಸರ ನಿಮಗೆ?’
‘ಮೇಡಂ , ಅವನು ಸಂಸ್ಥೆಯೊಂದರಲ್ಲಿ ಮ್ಯಾನೇಜರ್. ಆದರೆ ಸ್ವಲ್ಪವೂ ಜವಾಬ್ದಾರಿಯಿಲ್ಲ. ನೆಟ್ಟಗೆ ಒಂದು ತರಕಾರಿ ತರೋದೂ ಗೊತ್ತಿಲ್ಲ.’
‘ಓ ನೀವು ಎಂದಾದರೂ ತರಕಾರಿ ತರೋಕೆ ಮಗನನ್ನ ಕರ್ಕೊಂಡು ಹೋಗಿದಾ?’

‘ಇಲ್ಲ ಮೇಡಂ. ಬಹಳ ಸುಖದಲ್ಲಿ ಬೆಳೆಸಿದ್ವಿ. ಕಾಮನ್ ಸೆನ್ಸೇ ಇಲ್ಲ.’
‘ಅ ಇದೆ ನೋಡಿ ತಪ್ಪು. ಈಗ ಮದುವೆಯಾಗಿದೆ. ಹೆಂಡ್ತಿ ಕಲಿಸ್ತಾಳೆ ಬಿಡಿ. ನೀವು ತರೋದು ಬಿಟ್ನೋಡಿ. ಮನೆಯಲ್ಲಿ ಒಂದು ಮೀಟಿಂಗ್ ಕರೆದು ಸಂಪೂರ್ಣ ಮನೆಯ ಜವಾಬ್ದಾರಿಯನ್ನು ಮಗ-ಸೊಸೆಗೆ ಬಿಡಿ.‘

‘ಅದು ಹೇಗಾಗತ್ತೆ ಮೇಡಂ ? ಗುಡಿಸಿ ಗುಂಡಾಂತರ
ಮಾಡ್ಬಿಡ್ತಾನೆ.’
‘ಯಾಕಾಗಲ್ಲ? ನೀವು ಆಶ್ರಮಕ್ಕೆ ಬರ್ತೀರಲ್ವಾ? ಮತ್ತೆ ಮನೆ ಕಡೆ ಯಾರು ನೋಡೋದು?’
‘ನಾನು ಮನೆಗೆ ಹೋಗ್ಬರ್ತಿರ್ತೀನಿ ಮೇಡಂ..’
‘ಎರಡು ದೋಣಿ ಮೇಲೆ ಕಾಲಿಟ್ರೆ ಮುಳ್ಗೋಗ್ತೀವಿ. ಒಂದೋ ಆಶ್ರಮ. ಇಲ್ಲ ಮನೆ. ನಿಮಗೆ ಬದಲಾವಣೆ ಬೇಕಾದ್ರೆ ಒಂದು ತಿಂಗಳು ಬಂದು ಉಳ್ಕೊಂಡು ಹೋಗಿ. ಇಷ್ಟು ಕಾಳಜಿಮಾಡುವ ಮಕ್ಕಳು ಸಿಗೋದು ಅಪರೂಪ ರಾಯರೇ. ಒಂದು ಸಲ ಸುಮ್ನೇ ಮನಸ್ಸು ಮುರಿದುಕೊಂಡು ಬಂದ್ರೂ ಮತ್ತೆ ಜೋಡ್ಸೋದು ಕಷ್ಟ.

ನೀವು ಮನೆ ಕಟ್ವಾಗ್ಲೇ ನಮಗೊಂದು, ಮಗಂಗೊಂದು ಅಂತ ಕಟ್ಟಿರೋದೇ ತಪ್ಪು. ನಾವೆಲ್ಲ ಒಟ್ಗಿರೋಣ ಅಂತ ಒಂದೇ ಮನೆ ಕಟ್ಬೇಕಿತ್ತು. ಆದರೂ ಅವರೆಲ್ಲರೂ ನಿಮ್ಮ ಜೊತೆಗೇ ಇರೋಕೆ ಇಷ್ಟ ಪಡ್ತಿದಾರೆ ಅಂದ್ರೆ ನೀವು ಪುಣ್ಯ ಮಾಡಿದ್ದೀರಿ. ಮಗನ ಮೇಲೆ ಜವಾಬ್ದಾರಿ ಬಿಟ್ನೋಡಿ. ಹೊಸ ಜನರೇಷನ್ನ ವರು ನಮ್ಮ ಹಾಗೆ ಕಷ್ಟ ಪಡಲ್ಲ. ಸುಲಭವಾಗಿ ಎಲ್ಲಾ ಕೆಲಸಗಳನ್ನೂ ಮಾಡ್ತಾರೆ. ನೀವು ಇನ್ನೂ ಗಟ್ಟಿಯಾಗಿ ಇದ್ದೀರಿ. ನಿಮ್ಮಿಂದ ಅನ್ನ ಸಿಕ್ತಾ ಇರೋರ ಬಗ್ಗೆ ವಿಚಾರ ಮಾಡಿ.

ಇನ್ನೂ ಹತ್ತು- ಹದಿನೈದು ವರ್ಷ ದುಡೀರಿ. ಸುಮ್ನೇ ಕೂತ್ಕೊಂಡ್ರೆ ಮನಸ್ಸು ಬೇಡದ್ದನ್ನೇ ವಿಚಾರ ಮಾಡುತ್ತೆ. ಮನೆಯ ಜವಾಬ್ದಾರಿಗಳಿಂದ ಕಳಚಿ ಕೊಳ್ಳಿ. ಮನೆಯ ಇರಿ. ಯೋಗ, ಪ್ರಾಣಾಯಾಮ ಮಾಡಿ. ಸಿಟ್ಟು ನಿಗ್ರಹದಲ್ಲಿಡಿ. ಮೊಮ್ಮಗುವಿಗೆ ಗುರುವಾಗಿ. ಈಗಲೇ ಕಾಮನ್ ಸೆನ್ಸ್ ಕಲಿಸಿ….ಇಷ್ಟು ಮಾಡೋದು ಕಷ್ಟವಾಗ್ಬಹುದಾ? ‘ನಮ್ಮ ಆಶ್ರಮದಲ್ಲಿ ಇರೋರು ಯಾರೂ ಇಲ್ಲದವರು ರಾಯರೇ.

ಎಲ್ಲರೂ ಇದ್ದವರನ್ನು ನಾನು ಬಹಳ ಸಬಲ ಕಾರಣ ಇದ್ರೆ ಮಾತ್ರ ಸೇರಿಸಿಕೊಳ್ಳೋದು. ಇಂಥವರ ಜೊತೆ ಎಲ್ಲರೂ ಎಲ್ಲವೂ ಇರುವ ನೀವ್ಯಾಕೆ ಇರ ಬೇಕು? ನೀವು ಹಣ ಡಿಪಾಸಿಟ್ ಇಡ್ತೀರಿ ಅಂತ ಬೇರೆ ಯಾವುದೇ ಆಶ್ರಮಕ್ಕೆ ಹೋದರೂ ನಿಮ್ಮನ್ನು ಸೇರಿಸಿಕೊಳ್ತಾರೆ. ಈಗ ಇದೊಂದು ದೊಡ್ಡ ಬಿಸಿನೆಸ್.

‘ನೀವು ಬಂದ್ರೆ ನಮಗೆ ಹಣ ಸಿಗುತ್ತೆ. ನಮಗೆ ಹಣದ ಅವಶ್ಯಕತೆಯೂ ಇದೆ. ಆದರೂ ದಯವಿಟ್ಟು ನಾನು ಬೇಡ ಅಂತಿರೋದು ಯಾಕಿರಬಹುದು ಅಂತ ವಿಚಾರಮಾಡಿ. ಯಾರೂ ತೀರಾ ತೀರಾ ಅನಿವಾರ್ಯತೆ ಇಲ್ಲದಿದ್ರೆ ವೃದ್ಧಾಶ್ರಮಗಳನ್ನು ಸೇರ್ಬಾರ್ದು ರಾಯರೇ. ಇದ್ದೂ ಸತ್ಹೋಗ್ತೀವಿ. ಮನೆಯಲ್ಲಿ
ಹೊಂದದವರಿಗೆ ಇಲ್ಲಿ ಹೊಂದ್ಬರುತ್ತೆ ಅಂತ ಹೇಗೆ ಅಂದ್ಕೋತೀರಿ? ಇಲ್ಲಿ ನೆಮ್ಮದಿಯಿಂದ ಇರೋಕೆ ನಿಮ್ಗೆ ಸಾಧ್ಯಾನಾ? ದಯವಿಟ್ಟು ನಾಳೆನೇ ಒಂದು ಯೋಗ ಕ್ಲಾಸ್ ಸೇರ್ಕೊಳ್ಳಿ. ದೇವರ ಪೂಜೆ, ಧ್ಯಾನ ಜಾಸ್ತಿ ಮಾಡಿ. ಪತ್ನಿಯ ಹಠಾತ್ ಸಾವಿನಿಂದ ನೊಂದ ಮನಸ್ಸು ನಿಮ್ಮ ಕಂಟ್ರೋಲಿಗೆ ಸಿಗುತ್ತೆ. ನಂತರ ಇನ್ನೊಮ್ಮೆ ಬಂದು ನನ್ನ ಭೇಟಿಮಾಡಿ.. ಆಗಲೂ ಬೇಕಾದರೆ ಖಂಡಿತ ನಿಮಗೊಂದು ರೂಮ್ ಕೊಡ್ತೇನೆ’ ಎಂದು ಹೇಳಿದೆ …ಹೇಳಿದೆ… ಹೇಳಿದೆ….!!!

ಒಂದೂವರೆ ಗಂಟೆಯಲ್ಲಿ ಮುಖದ ಮೇಲಿನ ಸುಕ್ಕು ಕಡಿಮೆಯಾಗಿತ್ತು. ಕಣ್ಣುಗಳು ಅರಳಿದ್ದವು. ಮಂದಹಾಸವೂ ಇಣುಕಿತ್ತು. ನನ್ನ ಕೆಲಸವಾಯಿತು. ವೃದ್ಧಾಶ್ರಮ ಎಂದಿಗೂ ನಿಮ್ಮ ಕಟ್ಟ ಕಡೆಯ ಆಯ್ಕೆಯಾಗಿರಲಿ.