ಇಂಫಾಲ: ವಿಧಾನಸಭೆ ಚುನಾವಣೆ(2022 ರಲ್ಲಿ) ನಡೆಯಲಿರುವ ಮಣಿಪುರದಲ್ಲಿ ಈ ನಾಗರಿಕರ ಹತ್ಯೆ ವಿಚಾರವು ಭಾರಿ ಸದ್ದು ಮಾಡಿದೆ. ಈ ವಿವಾದದ ನಡುವೆ AFSPA ಕಾಯ್ದೆ ಇನ್ನೊಂದು ವರ್ಷಕ್ಕೆ ವಿಸ್ತರಣೆ ಮಾಡಿದೆ. ಆದರೆ, ರಾಜಧಾನಿ ಇಂಫಾಲವನ್ನು ಕಾಯ್ದೆಯಿಂದ ಹೊರಗಿಡಲಾಗಿದೆ.
ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಈ ಹಿಂದೆ, ರಾಜ್ಯದಲ್ಲಿ ಕಾಯಿದೆಯನ್ನು ಭಾಗಶಃ ಹಿಂತೆಗೆದುಕೊಳ್ಳುವ ಬಗ್ಗೆ ಸುಳಿವು ನೀಡಿದ್ದರು. ಇದನ್ನು ಕಾಂಗ್ರೆಸ್ ಪಕ್ಷವು ಮುಕ್ತವಾಗಿ ಸ್ವಾಗತಿಸಿತ್ತು. ಡಿಸೆಂಬರ್‌ನಲ್ಲಿ ನಾಗಾಲ್ಯಾಂಡ್‌ನಲ್ಲಿ ಕಾಯಿದೆಯನ್ನು ಇನ್ನೂ 6 ತಿಂಗಳ ಅವಧಿಗೆ ವಿಸ್ತರಿಸಲಾಯಿತು.
ಉತ್ತರ ಪ್ರದೇಶ, ಉತ್ತರಾಖಂಡ, ಗೋವಾ, ಪಂಜಾಬ್, ಮಣಿಪುರದಲ್ಲಿ ವಿಧಾನಸಭೆ ಚುನಾವಣೆಯು ನಡೆಯ ಲಿದೆ. ಉತ್ತರ ಪ್ರದೇಶ ಸೇರಿ ನಾಲ್ಕು ರಾಜ್ಯಗಳು ಹೆಚ್ಚು ರಾಜಕೀಯವಾಗಿ ಸದ್ದು ಮಾಡುತ್ತಿದ್ದರೂ ಮಣಿಪುರವು ಹೆಚ್ಚು ರಾಜಕೀಯ ಸದ್ದು ಮಾಡಿರಲಿಲ್ಲ. ಆದರೆ ಈಗ ಈ ಬಿಜೆಪಿ ಆಡಳಿತ ಇರುವ ರಾಜ್ಯದ ನೆರೆ ರಾಜ್ಯ ನಾಗಾಲ್ಯಾಂಡ್‌ನಲ್ಲಿ ನಡೆದ ನಾಗರಿಕರ ಹತ್ಯೆಯು ಮಣಿಪುರದಲ್ಲಿ ಪ್ರಮುಖ ವಿಚಾರವಾಗುತ್ತಿದೆ. ಅದಕ್ಕೆ ಮುಖ್ಯ ಕಾರಣ ರಾಜ್ಯದಲ್ಲಿ ಪ್ರಸ್ತುತ ಜಾರಿಯಲ್ಲಿ ಇರುವ ಸಶಸ್ತ್ರ ಪಡೆಗಳ ವಿಶೇಷ ಅಧಿಕಾರ ಕಾಯ್ದೆ (AFSPA) 1958 ಆಗಿದೆ.
ಏನಿದು ಸಶಸ್ತ್ರ ಪಡೆಗಳ ವಿಶೇಷ ಅಧಿಕಾರ ಕಾಯ್ದೆ (AFSPA)?
ಆಂತರಿಕ ಗಲಭೆಯನ್ನು ತಡೆಯಲು ಅಸಮರ್ಥವಾಗಿರುವ ರಾಜ್ಯ ಸರ್ಕಾರಗಳಿಗೆ ಸಹಾಯ ಮಾಡಲು ಇದನ್ನು ಜಾರಿಗೊಳಿಸಲಾಗಿದೆ ಎಂದು ಕಾಯ್ದೆಯಲ್ಲಿ ಉಲ್ಲೇಖ ಮಾಡಲಾಗಿದೆ. ಕಾಯ್ದೆಯು ಸಶಸ್ತ್ರ ಪಡೆಗಳಿಗೆ ವಿಶೇಷ ಅಧಿಕಾರ ಹಾಗೂ ಕಾನೂನು ವಿನಾಯಿತಿ ನೀಡಲಾಗುತ್ತದೆ. ಕಾನೂನು ಮತ್ತು ಸುವ್ಯವಸ್ಥೆಗೆ ವಿರುದ್ಧವಾಗಿ ವರ್ತಿಸುವ ಯಾರೊಬ್ಬರ ಮೇಲೆ ಗುಂಡು ಹಾರಿಸುವುದು, ವಾರಂಟ್ ಇಲ್ಲದೆ ಯಾರನ್ನಾದರೂ ಬಂಧಿಸುವುದು, ಯಾವುದೇ ವಾಹನ ಅಥವಾ ಹಡಗನ್ನು ನಿಲ್ಲಿಸುವುದು ಮತ್ತು ಹುಡುಕುವುದು ಮತ್ತು ಐದು ಅಥವಾ ಅದಕ್ಕಿಂತ ಹೆಚ್ಚು ಜನರ ಸಭೆಯನ್ನು ನಿಷೇಧಿಸುವುದು ಮೊದಲಾದ ಅಧಿಕಾರಗಳು ಇದರಲ್ಲಿ ಸೇರಿದೆ. ನಾಗರಿಕರು ಬಂದೂಕು ಹೊಂದುವುದು ಕೂಡಾ ಈ ಕಾಯ್ದೆಯಡಿಯಲ್ಲಿ ನಿಷೇಧವಾಗಿದೆ.