Saturday, 23rd November 2024

ಪಿರಮಿಡ್ಡುಗಳು ನಮ್ಮ ಹಿರಿಯರನ್ನು ನೆನಪಿಸುವ ಸೇತುವೆಗಳು

ಈಜಿಪ್ತ್ ಡೈರಿ – ಪ್ರವಾಸದ ಒಳ-ಹೊರಗಿನ ಕಥನ- 4

ಮನುಷ್ಯನ ನಿಜವಾದ ತಾಕತ್ತಿರುವುದು ಆತನ ಎತ್ತರ, ಗಾತ್ರದಲ್ಲಲ್ಲ, ಬದಲಿಗೆ ಆತನ ಯೋಚನೆ, ಕಲ್ಪನೆಯಲ್ಲಿ

ಈಜಿಪ್ಟ್‌ನ ಪಿರಮಿಡ್ಡುಗಳು ಈ ಬ್ರಹ್ಮಾಂಡಕ್ಕೆ ಮನುಷ್ಯ ಎಸೆದ ಸವಾಲು. ಇಡೀ ಬ್ರಹ್ಮಾಂಡಕ್ಕೆ ಹೋಲಿಸಿದರೆ, ಈ ಮರುಭೂ ಮಿಯ ಮೇಲೆ ನಿರ್ಮಿಸಿದ ಪಿರಮಿಡ್ಡುಗಳು ಚಿಕ್ಕದಾಗಿರಬಹುದು, ಆದರೆ ಮನುಕುಲಕ್ಕೆ ಬಹು ದೊಡ್ಡದು. ಮನುಷ್ಯ ಸಣ್ಣವ ನಾಗಿದ್ದರೂ ತನಗಿಂತ ದೊಡ್ಡದಾದ ಸಾಹಸ ಮಾಡಬಲ್ಲ.

ಮನುಷ್ಯನ ನಿಜವಾದ ತಾಕತ್ತಿರುವುದು ಆತನ ಎತ್ತರ, ಗಾತ್ರದಲ್ಲಿ ಅಲ್ಲ, ಆತನ ಯೋಚನೆ ಮತ್ತು ಕಲ್ಪನೆಯಲ್ಲಿ. ಆತ ತನ್ನ ಯೋಚನೆಗೆ ತಕ್ಕದಾದ ಪರಿಸರವನ್ನು ನಿರ್ಮಿಸುತ್ತಾನೆ. ಇದು ಈಜಿಪ್ಟ್ ರಾಜಧಾನಿ ಕೈರೋದಿಂದ ಅರ್ಧ ಗಂಟೆ ಕಾರು ಪ್ರಯಾಣ ದಷ್ಟು ದೂರದಲ್ಲಿರುವ, ಗಿಜಾ ಪಿರಮಿಡ್ಡುಗಳ ಪ್ರವೇಶ ದ್ವಾರದಲ್ಲಿದ್ದ ಅಂಗಡಿಯ ಗೋಡೆಯ ಮೇಲಿದ್ದ ಈ ಬರಹ. ಈ ಸಾಲುಗಳನ್ನು ಸುಮ್ಮನೆ ಓದುತ್ತಾ ಪಿರಮಿಡ್ಡುಗಳು ಇರುವ ಕಡೆ ಹೆಜ್ಜೆ ಹಾಕುತ್ತಾ ಹೋದಾಗ, ಮುಗಿಲೆತ್ತರಕ್ಕೆ ಚಾಚಿದ ಪಿರಮಿಡ್ಡುಗಳ ಶೃಂಗ ವನ್ನು ಕಕ್ಕಾಬಿಕ್ಕಿಯಾಗಿ ನೋಡುತ್ತಾ ನಿಂತುಬಿಟ್ಟೆ.

ಆ ಕಲ್ಲು ರಾಶಿಗಳ ಮುಂದೆ, ಸಾವಿರಾರು ವರ್ಷಗಳ ಹಿಂದೆ ಅದನ್ನೇ ನಿರ್ಮಿಸಿದ ಮನುಷ್ಯ ಅದೆಷ್ಟು ಸಣ್ಣವ ಎಂದು ಅನಿಸಿದ್ದು ಸುಳ್ಳಲ್ಲ. ಇಂಗ್ಲಿಷಿನಲ್ಲಿ ಒಂದು ಮಾತಿದೆ – The power of faith can be a strong force, but the power of thinking is even stronger ಈ ಮಾತು ಪಿರಾಮಿಡ್ಡುಗಳ ವಿಷಯದಲ್ಲಿ ಅಕ್ಷರಶಃ ಸತ್ಯ. ಹೀಗೆ ಯೋಚಿಸು ತ್ತಿದ್ದಾಗ ನಮ್ಮ ಗೈಡ್, ‘Some people call structures like the Egyptian Pyramids as ‘Ancient Ruins’, but we call them ‘Perfect Bridges’ where we can reach and touch the wonderful masters of the past!’ (ಕೆಲವರು ಈಜಿಪ್ಟ್ ನ ಪಿರಮಿಡ್ಡುಗಳನ್ನು ಪ್ರಾಚೀನ ಹಾಳು ಅವಶೇಷ ಎನ್ನಬಹುದು. ಆದರೆ ನಾವು ಪರಿಪೂರ್ಣ ವಾದ ಸೇತುವೆ ಎಂದು ಕರೆಯುತ್ತೇವೆ.

ಕಾರಣ ಈ ಮೂಲಕ ನಮ್ಮ ಅಸಾಮಾನ್ಯ ಪೂರ್ವಿಕರನ್ನು ತಲುಪಬಹುದು ಮತ್ತು ಸ್ಪರ್ಶಿಸಬಹುದು) ಎಂದು ಹೇಳಿದ್ದು
ಮಾರ್ಮಿಕವಾಗಿತ್ತು. ಅಷ್ಟಕ್ಕೂ ಆ ಮರುಭೂಮಿಯಲ್ಲಿ ಪಿರಮಿಡ್ಡುಗಳನ್ನು ನಿರ್ಮಿಸಿದ್ದಾದರೂ ಏಕೆ? ಯಾವ ಪುರುಷಾರ್ಥ ಸಾಧನೆಗಾಗಿ ಇಂಥ ಅಗಾಧ ರಚನೆಯನ್ನು ಕಟ್ಟಿದ್ದಾದರೂ ಯಾಕೆ? ಈ ಬಗ್ಗೆ ಅಸಂಖ್ಯ ಇತಿಹಾಸಕಾರರು ವಾದ ಮಂಡಿಸಿದ್ದಾರೆ. ಕ್ರಿಸ್ತ ಶಕ ಪೂರ್ವ 2551-2528ರ ಅವಧಿಯಲ್ಲಿ , ಅಂದರೆ ಸುಮಾರು 4500 ವರ್ಷಗಳ ಹಿಂದೆ, ಮೊದಲ ಪಿರಮಿಡ್ಡನ್ನು ಖುಫು ದೊರೆ ನಿರ್ಮಿಸಿದ. ಎರಡನೆಯ ಪಿರಮಿಡ್ಡನ್ನು ಖಾ- ದೊರೆ ಕ್ರಿ.ಪೂ. 2520-2494ರಲ್ಲಿ ಮತ್ತು ಮೂರನೆಯದನ್ನು ಮೆಂಕೌರೆ ದೊರೆ ಕ್ರಿ.ಪೂ. 2490- 2472 ರಲ್ಲಿ ನಿರ್ಮಿಸಿದನಂತೆ.

ಒಂದೊಂದು ಪಿರಮಿಡ್ಡು ನಿರ್ಮಾಣಕ್ಕೆ ಕನಿಷ್ಠ ಇಪ್ಪತ್ತು ಲಕ್ಷ ಕಲ್ಲುಗಳನ್ನು ಬಳಸಿರಬಹುದು. ಈ ಕಲ್ಲುಗಳಾದರೂ ಹೇಗಿವೆ? ಇವು 2 ಟನ್‌ನಿಂದ 50 ಟನ್ ಗಳಷ್ಟು ಭಾರವಾಗಿದ್ದಿರಬಹುದು. ಈ ಕಲ್ಲುಗಳನ್ನು ಕನಿಷ್ಠ ನೂರಾ ನಲವತ್ತು ಕಿ.ಮೀ. ದೂರ ದಿಂದ ತಂದಿರಬಹುದು. ಕೆಲವು ಕಲ್ಲು ಬಂಡೆಗಳನ್ನು ಮುನ್ನೂರು ಕಿ.ಮೀ. ದೂರದಿಂದ ಸಾಗಿಸಿ ತಂದಿರ ಬಹುದು. ಆದರೆ ಅವುಗಳನ್ನು ಅಷ್ಟು ದೂರದಿಂದ ಹೇಗೆ ಸಾಗಿಸಿ ತಂದಿರಬಹುದು ಎಂಬುದು ಇಂದಿಗೂ ನಿಗೂಢ. ಒಂದೊಂದು ಪಿರಮಿಡ್ಡು ನಿರ್ಮಾಣಕ್ಕೆ ಇಪ್ಪತ್ತರಿಂದ ಇಪ್ಪತ್ನಾಲ್ಕು ವರ್ಷ ತಗುಲಿರಬಹುದು. ಅಷ್ಟೇ ಅಲ್ಲ, ಒಂದು ಪಿರಮಿಡ್ಡು ನಿರ್ಮಾಣದಲ್ಲಿ ಏನಿಲ್ಲ ವೆಂದರೂ ಒಂದು ಲಕ್ಷ ಜನ ತೊಡಗಿಕೊಂಡಿರಬಹುದು ಎಂದು ಅಂದಾಜು ಮಾಡಲಾಗಿದೆ.

ಇವರೆಲ್ಲ ಜೀತದಾಳುಗಳು ಇದ್ದಿರಬಹುದು ಎಂದು ಅಂದಾಜು ಮಾಡಲಾಗಿತ್ತು. ಇಸ್ರೇಲಿನ ಯಹೂದಿ ಜೀತದಾಳುಗಳನ್ನು ಬಳಸಿಕೊಳ್ಳಲಾಗಿದೆ ಎಂದು ಊಹಿಸಲಾಗಿತ್ತು. ಆದರೆ ಈ ಬಗ್ಗೆ ಯಾವುದೇ ಕುರುಹುಗಳು ಸಿಕ್ಕಿಲ್ಲ. ಖುಫು ದೊರೆ ಹಣ ತೆತ್ತು ಈ ಕೂಲಿಕಾರ್ಮಿಕರನ್ನು ನಿಯೋಜಿಸಿಕೊಂಡು ಪಿರಮಿಡ್ಡುಗಳನ್ನು ಕಟ್ಟಿದನಂತೆ. ಗಿಜಾ ಪಿರಮಿಡ್ಡುಗಳಿಗೆ ಬಳಸಿರುವುದು ಲೈಮ್ ಸ್ಟೋನ್‌ಗಳು.

ಇವು ಆರಂಭದಲ್ಲಿ ಅಚ್ಚ ಬಿಳಿ ಬಣ್ಣದಾಗಿತ್ತು. ಪಿರಮಿಡ್ಡಿನ ಮೇಲೆ ಸೂರ್ಯ ಕಿರಣ ಬಿದ್ದಾಗ, ಅದು ಕಣ್ಣು ಕೋರೈಸುವಂತೆ ಹೊಳೆಯುತ್ತಿತ್ತು. ನೂರಾರು ಕಿ.ಮೀ. ದೂರದವರೆಗೂ ಈ ಹೊಳಪಿನಿಂದ ಕಾಣಿಸುತ್ತಿತ್ತು. ಆದರೆ ಸಹಸ್ರಾರು ವರ್ಷಗಳ ಮಾಲಿನ್ಯ ಮತ್ತು ಹವಾಮಾನ ವೈಪರಿತ್ಯದಿಂದ ಲೈಮ್ ಸ್ಟೋನ್ ಹೊಳಪು ಹೊರಟು ಹೋಗಿದೆ. ಈ ಪಿರಮಿಡ್ಡುಗಳಿಗೆ ಬಳಸಿದ ಕಲ್ಲುಗಳು ಭೂಕಂಪದಿಂದಾಗಿ ಅಲ್ಲಲ್ಲಿ ಸಡಿಲಗೊಂಡಿವೆ. ಅಂಥ ಸಡಿಲಗೊಂಡ ಮತ್ತು ಬಿದ್ದು ಹೋದ ಕಲ್ಲುಗಳನ್ನು ಆಗಾಗ ಸಾಗಿಸ ಲಾಗಿದೆ.

ಯುನೆಸ್ಕೊ ಈ ಪಿರಾಮಿಡ್ಡನ್ನು ಸಂರಕ್ಷಿತ ಸ್ಮಾರಕಗಳೆಂದು ಘೋಷಿಸಿದ ಬಳಿಕ, ಕಲ್ಲುಗಳ ಸಾಗಾಣಿಕೆ ನಿಂತಿದೆ. ಈಜಿಪ್ಟಿನ ಜನ ನಂಬಿಕೆ ಮತ್ತು ಮೂಢನಂಬಿಕೆ ಪ್ರಿಯರು. ಪಿರಮಿಡ್ಡುಗಳ ಸುತ್ತ ಇಂಥ ನಂಬಿಕೆ ಮತ್ತು ಮೂಢನಂಬಿಕೆಗಳು ಸುತ್ತಿಕೊಂಡಿವೆ. ಐದು ಸಾವಿರ ವರ್ಷಗಳ ಹಿಂದಿನಿಂದಲೂ ಈಜಿಪ್ಟಿನ ಜನ ಮನುಷ್ಯ ದೇಹದ ಅನಂತತೆಯಲ್ಲಿ ನಂಬಿಕೆ ಹೊಂದಿದವರು. ಮನುಷ್ಯ ದೇಹಕ್ಕೆ ಮುಪ್ಪೂ ಇಲ್ಲ, ಸಾವೂ ಇಲ್ಲ ಎಂದು ನಂಬಿದವರು. ಮನುಷ್ಯನ ಜೀವನ ಬದುಕಿರುವ ತನಕ ಅಷ್ಟೇ ಅಲ್ಲ, ಸತ್ತ ನಂತರವೂ ಮನುಷ್ಯನಿಗೆ ಬದುಕಿದೆ.

ಹೀಗಾಗಿ ದೇಹವನ್ನು ಸುಡದೇ, ಹೂಳದೇ ಸಂರಕ್ಷಿಸಿ ಇಡಬೇಕು. ಇದು ಅವರ ಬಲವಾದ ನಂಬಿಕೆ. ಹೀಗಾಗಿ ಆ ಕಾಲದಲ್ಲಿ ಯಾರಾದರೂ ಸತ್ತರೆ ಅವರ ದೇಹವನ್ನು ಜತನದಿಂದ ಸಂರಕ್ಷಿಸಿ ಕಾಪಿಡುತ್ತಿದ್ದರು. ಪಿರಮಿಡ್ಡುಗಳಲ್ಲಿ ಈ ದೇಹಗಳನ್ನು ಇಡು ತ್ತಿದ್ದರು. ಪಿರಮಿಡ್ಡುಗಳಲ್ಲಿ ಮಾತ್ರ ಯಾವತ್ತೂ ಅಂದರೆ ದಿನದ ಎಲ್ಲ ಹೊತ್ತಿನಲ್ಲಿ ಮತ್ತು ವರ್ಷದ ಎಲ್ಲ ದಿನಗಳಲ್ಲಿ ಇಪ್ಪತ್ತು ಡಿಗ್ರಿ ತಾಪಮಾನ ಕಾಪಾಡುವುದು ಸಾಧ್ಯ ಎಂಬುದನ್ನು ಪ್ರಾಚೀನ ಈಜಿಪ್ಟಿನ ಜನ ಕಂಡುಕೊಂಡಿದ್ದರು. ಹೀಗಾಗಿ ರಾಜನಾ ದವನು ತಾನು ಸಾಯುವುದಕ್ಕಿಂತ ಮೊದಲೇ ಪಿರಮಿಡ್ಡುಗಳನ್ನು ನಿರ್ಮಿಸುತ್ತಿದ್ದ. ಆದರೆ ಪಿರಮಿಡ್ಡು ನಿರ್ಮಾಣ ಸುಲಭ
ದ್ದಲ್ಲ ಮತ್ತು ಅದು ಕೆಲವರಿಗೆ ಮಾತ್ರ ಕೈಗೆಟಕುವಂಥದ್ದು ಎಂದು ಗೊತ್ತದ ಬಳಿಕ, ಅವುಗಳ ನಿರ್ಮಾಣವನ್ನು ಕೈಬಿಡಲಾಯಿತು.

ರಾಜರಿಗೆ ಮಾತ್ರ ಅಲ್ಲ, ಉಳಿದವರಿಗೂ ತನ್ನ ಸಾವಿನ ನಂತರ, ದೇಹವನ್ನು ಕಾಪಿಡಬೇಕು ಎಂಬ ಆಸೆ ಬಲವಾಗಿದ್ದರಿಂದ,
ಪಿರಮಿಡ್ಡುಗಳ ಬದಲು, ಗುಹೆ ಅಥವಾ ಭೂಮಿಯೊಳಗೆ ಶವಗಳನ್ನು ಸಂರಕ್ಷಿಸುವ ವಿಧಾನವನ್ನು ಕಂಡು ಹಿಡಿಯಲಾಯಿತು.
ಗಿಜದಲ್ಲಿರುವ ಪಿರಮಿಡ್ಡುಗಳು ಸೇರಿದಂತೆ, ಈಜಿಪ್ಟ್ ನಲ್ಲಿರುವ ಎಲ್ಲ ಪಿರಮಿಡ್ಡುಗಳನ್ನು ನೈಲ್ ನದಿಯ ಪಶ್ಚಿಮದ ದಡದ ಮೇಲೆ ನಿರ್ಮಿಸಿರುವುದನ್ನು ಗಮನಿಸಬಹುದು.

ಬೆಳಗ್ಗೆ ಸೂರ್ಯನ ಕಿರಣ ಈ ಪಿರಮಿಡ್ಡುಗಳ ಮೇಲೆ ನೇರವಾಗಿ ಬೀಳಲಿ ಎಂಬುದಾಗಿತ್ತು. ಅಷ್ಟೇ ಅಲ್ಲ, ಸೂರ್ಯಾಸ್ತ ಮನುಷ್ಯನ ಸಾವಿನ ಸಂಕೇತವಾದ್ದರಿಂದ ಪಶ್ಚಿಮದಲ್ಲಿ ಅವುಗಳನ್ನು ನಿರ್ಮಿಸಿರುವುದು ಗಮನಾರ್ಹ. ಪಿರಮಿಡ್ಡುಗಳ ನಾಲ್ಕು ಮೂಲೆಯಲ್ಲಿ ನಿಂತು ನೋಡಿದರೆ, ಅವುಗಳನ್ನು ಹೇಗೆ ನಿರ್ಮಿಸಿರಬಹುದು ಎಂಬ ಬಗ್ಗೆ ನಿಖರವಾದ ಲೆಕ್ಕಾಚಾರ ಮತ್ತು ಕಲ್ಪನೆ ವಾಸ್ತುಶಾಸ್ತ್ರಜ್ಞರಿಗೆ ಇಂದಿಗೂ ಬಿಡಿಸಲಾಗದ ಒಂದು ಒಗಟು. ಎರಡು ಕಲ್ಲುಗಳ ಮಧ್ಯೆ ಅವುಗಳನ್ನು ಜೋಡಿಸಲು ಯಾವುದೇ ಅಂಟು ಪದಾರ್ಥವನ್ನು ಬಳಸಿಲ್ಲ.

ಒಂದು ಕಲ್ಲಿನ ಪಕ್ಕ ಮತ್ತು ಒಂದರ ಮೇಲೆ ಮತ್ತೊಂದನ್ನು ಇಡುತ್ತಾ, ಜೋಡಿಸುತ್ತಾ ಹೋಗಲಾಗಿದೆ. ಆದರೆ ಎಲ್ಲೂ ಉಬ್ಬು, ತಗ್ಗು ಬರದಂತೆ ಸಮತಟ್ಟನ್ನು ನಾಲ್ಕು ದಿಕ್ಕುಗಳಲ್ಲಿ ಮೇಲಿನಿಂದ ಕೆಳಗಿನ ತನಕ ಕಾಪಾಡಿಕೊಂಡಿರುವುದು ಪ್ರಾಚೀನ ಈಜಿಪ್ಟಿನ ಜನರ ವಾಸ್ತುರಚನೆ ಪರಿಣತಿಗೆ ಹಿಡಿದ ಕೈಗನ್ನಡಿ. ಪಿರಮಿಡ್ಡುಗಳ ಬಗ್ಗೆ ಅವುಗಳ ಗಾತ್ರದಂತೆ ಬೆಟ್ಟದಷ್ಟು ಕತೆಗಳಿವೆ, ಉಪಕತೆ ಗಳಿವೆ, ದೃಷ್ಟಾಂತಗಳಿವೆ, ಕಟ್ಟುಕತೆಗಳಿವೆ ಮತ್ತು ಇವುಗಳಲ್ಲವನ್ನೂ ಮೀರಿಸುವ ನಂಬಿಕೆಗಳಿವೆ. ಪಿರಮಿಡ್ಡುಗಳ ಒಳಗೆ ಅಷ್ಟಕ್ಕೂ ಏನಿವೆ ಎಂಬುದು ಯಾರಿಗೂ ಗೊತ್ತಿಲ್ಲ.

ಅವುಗಳನ್ನು ಉತ್ಖನನ ಮಾಡುವಂತಿಲ್ಲ. ಎಲ್ಲರೂ ತಮ್ಮ ತಮ್ಮ ಮೂಗಿನ ನೇರಕ್ಕೆ ಊಹೆ, ಕಲ್ಪನೆಗಳನ್ನು ಹರಿಬಿಡುತ್ತಿದ್ದಾರೆ. ಗಿಜಾ ಪಿರಮಿಡ್ಡುಗಳ ಪ್ರವೇಶ ದ್ವಾರದಲ್ಲಿದ್ದ ಅಂಗಡಿಯ ಗೋಡೆಯ ಮೇಲಿದ್ದ ಆ ಬರಹ ನಿಜಕ್ಕೂ ಎಷ್ಟು ನಿಜ ಮತ್ತು ಅನ್ವರ್ಥಕ ಎಂದೆನಿಸಿತು.