Sunday, 8th September 2024

ಮಾಯಾವಿ ಅಮೆರಿಕ ಜೀವ ಡಾಲರಿನಲ್ಲಿ

ಶಿಶಿರ ಕಾಲ

ಶಿಶಿರ್‌ ಹೆಗಡೆ

shishirh@gmail.com

ನಾನು ಉರುಗ್ವೆ ದೇಶಕ್ಕೆ ಹೋಗುವಲ್ಲಿಯವರೆಗೆ ಹೀಗೊಂದು ಆರ್ಥಿಕ ವ್ಯವಸ್ಥೆಯಿದೆ ಎನ್ನುವ ಅಂದಾಜಿರಲಿಲ್ಲ. ಭಾರತವೆಂದರೆ ಅಲ್ಲಿ
ರುಪಾಯಿ, ಅಮೆರಿಕ ಎಂದರೆ ಅಲ್ಲಿ ಡಾಲರ್ ಹೇಗೋ ಹಾಗೆ ದೇಶವೆಂದರೆ ಅದಕ್ಕೊಂದು ಕರೆನ್ಸಿ ಎನ್ನುವುದೇ ನನ್ನ ನಂಬಿಕೆಯಾಗಿತ್ತು. ಆದರೆ, ಮೊದಲ ಬಾರಿ ಉರುಗ್ವೆಗೆ ಬಂದಿಳಿದು ಅಲ್ಲಿನ ಎಟಿಎಂ ಒಳಕ್ಕೆ ಹೊಕ್ಕು ಪಿನ್ ಹಾಕಿದಾಗ – ಹಣ ಅಮೆರಿಕನ್ ಡಾಲರ್‌ನಲ್ಲಿ ಬೇಕೋ ಅಥವಾ ಉರುಗ್ವೆಯನ್ ಪೆಸೊನಲ್ಲಿಯೋ ಎಂಬ ಪ್ರಶ್ನೆ ವಿಚಿತ್ರವೆನ್ನಿಸಿತ್ತು.

ಡಾಲರ್ ಎಂದರೆ ಹಣ ಎಟಿಎಂನಿಂದ ಹೊರಬರುವ ಆ ಚಿಕ್ಕ ಕಿಂಡಿಯೇ ಬೇರೆ, ಪೆಸೊ ಎಂದರೆ ಇನ್ನೊಂದು ಕಿಂಡಿ. ಅಂಗಡಿಗೆ, ಹೋಟೆಲ್ಲಿಗೆ ಹೀಗೆ ಎಲ್ಲ ಕಡೆ ಹಣ ಕೊಡುವಾಗ ಯಾವುದರಲ್ಲಿ ಕೊಡುತ್ತೀರಿ ಎನ್ನುವುದು ಮೊದಲ ಪ್ರಶ್ನೆ. ನನ್ನ ಸಂಬಳ, ಬ್ಯಾಂಕ್ ಅಕೌಂಟ್‌ನಲ್ಲಿರುವ ಮೊತ್ತ ಎಲ್ಲ ಅಮೆರಿಕನ್ ಡಾಲರ್‌ನಲ್ಲಿ. ಎಲ್ಲ ಅಂಗಡಿಗಳಲ್ಲೂ ಇವತ್ತಿನ ಡಾಲರ್‌ನ ಬೆಲೆ ಅಲ್ಲಿನ ಲೋಕಲ್ ಕರೆನ್ಸಿಗೆ ಎಷ್ಟು ಎನ್ನುವ ಹೋಲಿಕೆ. ಡಾಲರ್‌ನಲ್ಲಿ ಕೊಟ್ಟು ವಸ್ತು ಖರೀದಿಸಿದರೆ ಉಳಿದ ಚಿಲ್ಲರೆ ಅಲ್ಲಿನ ಸ್ಥಳೀಯ ಕರೆನ್ಸಿ ಯಲ್ಲಿ. ಕಿಸೆಯಲ್ಲಿ ಪೆಸೊ ಮತ್ತು ಡಾಲರ್- ಎರಡೂ ಇರುತ್ತಿತ್ತು.

ಪೆಟ್ರೋಲ್ ಬೆಲೆ ಏರಿಳಿತ ನೋಡಿಕೊಂಡು ವ್ಯಾವಾಹಾರ ಮಾಡಿದಂತೆ ಅವತ್ತಿನ ಡಾಲರ್- ಪೆಸೊ ಎಕ್ಸ್‌ಚೇಂಜ್ ಬೆಲೆಯನ್ನು ನೋಡಿ ವ್ಯವಹಾರ. ಕೆಲವು ದೇಶಗಳಿವೆ – ಅವು ಡುಯಲ್ ಕರೆನ್ಸಿ ರಾಷ್ಟ್ರಗಳು. ಹೆಚ್ಚಾಗಿ ಈ ರೀತಿ ಎರಡು ನಾಣ್ಯ ಚಲಾವಣೆ ಯಿದ್ದರೆ ಎರಡನೆ ಯದು ಸಾಮಾನ್ಯವಾಗಿ ಅಮೆರಿಕನ್ ಡಾಲರ್ ಇರುತ್ತದೆ. ಇನ್ನು ಯುರೋಪಿನದು ಯುರೋ ಮತ್ತು ಅಲ್ಲಿನ ದೇಶದ ಸ್ಥಳೀಯ ಕರೆನ್ಸಿ. ಇವೆಲ್ಲ ಒಂದಿಡೀ ಅರ್ಥವ್ಯವಸ್ಥೆಯನ್ನು ತೀರಾ ಕ್ಲಿಷ್ಟವಾಗಿಸಿಬಿಡುತ್ತವೆ.

ನಮ್ಮ ದೇಶದದರೆ ಸರಳ – ರುಪಾಯಿ ಒಂದೇ. ಉತ್ತರ-ದಕ್ಷಿಣ ಅಮೆರಿಕದಲ್ಲಿ 35 ರಾಷ್ಟ್ರಗಳಿವೆ. ಅದರಲ್ಲಿ ಬಹುತೇಕ ರಾಷ್ಟ್ರ ಗಳಲ್ಲಿಯೂ ಅಮೆರಿಕನ್ ಡಾಲರ್ ದೈನಂದಿನ ವ್ಯವಹಾರದಲ್ಲಿ, ಸಾಮಾನ್ಯನ ಕಿಸೆಯಲ್ಲಿ, ಅಂಗಡಿಯ ಡ್ರಾವರ್‌ನಲ್ಲಿ ಸರಾಗವಾಗಿ ಅಲ್ಲಿನ ಸ್ಥಳೀಯ ಕರೆನ್ಸಿಯ ಜತೆ ವ್ಯವಹಾರಕ್ಕೆ ಬಳಕೆಯಾಗುತ್ತಿರುತ್ತದೆ. ಅಮೆರಿಕನ್ ಡಾಲರ್ ಎನ್ನುವುದು ಒಂದು ಜಾಗತಿಕ ವ್ಯವಸ್ಥೆ. ನಿಮಗೆ ಗೊತ್ತಿದ್ದದ್ದೇ – ಜಗತ್ತಿನ ಬಹುತೇಕ ಎಲ್ಲ ರಾಷ್ಟ್ರ-ರಾಷ್ಟ್ರಗಳ ನಡುವಿನ ವ್ಯವಹಾರ ನಡೆಯುವುದೇ ಅಮೆರಿಕನ್ ಡಾಲರ್‌ನಲ್ಲಿ. ಚಿಲಿಯಲ್ಲಿ ಬೆಳೆದ ಖರ್ಜೂರ ಫ್ರಾನ್ಸಿಗೆ ಮಾರುವಾಗ ಚಿಲಿ ಹಣವನ್ನು ಅಮೆರಿಕನ್ ಡಾಲರ್ ನಲ್ಲಿ ಪಡೆಯುತ್ತದೆ. ಅದೇ ಚಿಲಿ ಚೀನಾದಿಂದ ಇನ್ನೆನನ್ನೋ ತರಿಸಿಕೊಳ್ಳಬೇಕಾದರೆ ಅದೇ ಡಾಲರ್ ಅನ್ನು ಚೀನಾಕ್ಕೆ ನೀಡುತ್ತದೆ.

ಜಗತ್ತಿನ ಅಂತಾರಾಷ್ಟ್ರೀಯ ವ್ಯವಹಾರದಲ್ಲಿ ಶೇ.89-92 ವ್ಯವಹಾರ ನಡೆಯುವುದೇ ಅಮೆರಿಕನ್ ಡಾಲರ್‌ನಲ್ಲಿ. ಆದರೆ ಪ್ರಶ್ನೆ ಯಿರುವುದು ಅಮೆರಿಕದ ನೋಟು ಹೀಗೆ ಜಾಗತಿಕ ಕರೆನ್ಸಿಯಾದದ್ದಾದರೂ ಹೇಗೆ? ಜಗತ್ತನ್ನೇ ಅಂದು ಆಳಿದ್ದು ಇಂಗ್ಲೆಂಡ್. ಹಾಗೆ ನೋಡಿದರೆ ಇಂಗ್ಲೆಂಡಿನ ಪೌಂಡ್ ಈ ರೀತಿ ಜಾಗತಿಕ ಕರೆನ್ಸಿಯಾಗಿದ್ದರೆ ಅದಕ್ಕೊಂದು ಸುಲಭದ ಅರ್ಥ ಕಲ್ಪಿಸಿಕೊಳ್ಳಬಹುದಿತ್ತು. ಅಮೆರಿಕ ಬೇರೆ ದೇಶಕ್ಕೆ ಹೋಗಿ ಯುದ್ಧ – ಅನಾಚಾರ ಮಾಡಿ ಬಂದದ್ದು ಬಿಟ್ಟರೆ ಬ್ರಿಟಿಷರಂತೆ ಆಳಿದ್ದಿಲ್ಲ. ಅಮೆರಿಕದ ಸುತ್ತಲಿನ ಕೆಲವು ಚಿಕ್ಕ ಪುಟ್ಟ ದ್ವೀಪಗಳನ್ನು ತನ್ನ ಟೆರ್ರಿಟರಿ ಎಂದಿಟ್ಟುಕೊಂಡಿರುವುದು ಬಿಟ್ಟರೆ ಈ ದೇಶದ ದಾಸ್ಯದಲ್ಲಿ ಇನ್ನೊಂದು ದೇಶವಿಲ್ಲ.

ಹೀಗಿರುವಾಗ ಈ ಅಮೆರಿಕನ್ ಡಾಲರ್ ಗ್ಲೋಬಲ್ ಕರೆನ್ಸಿಯಾಗಿದ್ದು ಹೇಗೆ? ಅದೇನು ಬಳಕೆಯಿಂದಾಗಿ ಅದರಕ್ಕಷ್ಟೇ ಬೆಳೆದದ್ದೇ?
1944 – ಆಗ ಎರಡನೇ ವಿಶ್ವಯುದ್ಧ ನಡೆದೇ ಇತ್ತು. ಅದರ ನಡುವೆಯೇ ದೇಶದೇಶಗಳ ನಡುವೆ ವ್ಯವಹಾರ ನಡೆಸಲು ಒಂದು ಕರೆನ್ಸಿಯ ಅವಶ್ಯಕತೆ ಜಾಗತಿಕ ಆರ್ಥಿಕ ವ್ಯವಸ್ಥೆಯ ಮುಂದೆ ಇತ್ತು. ಅದಕ್ಕಿಂತ ಮುಂಚೆ ತೀರಾ ಕಿಚರಾಡಿ ರೀತಿಯಲ್ಲಿ ವ್ಯವಹಾರ. ಒಂದು ದೇಶದಿಂದ ಏನಾದರೂ ಕೊಂಡುಕೊಂಡರೆ ಅಷ್ಟೇ ಬೆಲೆಯದನ್ನು ಆ ದೇಶ ಅದೇ ಇನ್ನೊಂದು ದೇಶದಿಂದ ಖರೀದಿಸಬೇಕಿತ್ತು. ಆ ಇನ್ನೊಂದು ದೇಶದ ಕರೆನ್ಸಿಗೆ ಆ ದೇಶದಲ್ಲಷ್ಟೇ ಬೆಲೆ.

ಹೀಗಿರುವಾಗ ಏನಾದರೂ ಒಂದು ಸುಗಮ ಹಾದಿ ಮಾಡಿಕೊಳ್ಳಬೇಕು ಎಂಬ ನಿಮಿತ್ತ ಅಮೆರಿಕದ ನ್ಯೂ ಹಂಪಿಶೈರ್‌ನ ಮೌಂಟ್ ವಾಷಿಂಗ್ಟನ್ ಹೋಟೆಲ್‌ನಲ್ಲಿ 44 ದೇಶಗಳ ಸುಮಾರು 730 ಡೆಲಿಗೇಟ್‌ಗಳು ಸೇರಿದ್ದರು. ಅಲ್ಲಿದ್ದದ್ದು ಒಂದೇ ಪ್ರಶ್ನೆ – ಹೇಗೆ, ಯಾವ ಕರೆನ್ಸಿಯನ್ನಿಟ್ಟು ಇನ್ನು ಮುಂದೆ ಜಾಗತಿಕ ವ್ಯವಹಾರ ಮಾಡಬೇಕು – ಈ ಕೊಚರಾಠಿ ನೂರೆಂಟು ಕರೆನ್ಸಿಯನ್ನು ಬಳಸುವು ದರಿಂದ ಹೊರಬರಬೇಕು ಎಂಬಿತ್ಯಾದಿ.

ಅಲ್ಲಿ ಇಂಗ್ಲೆಂಡ್ ಸೇರಿದಂತೆ ಅಷ್ಟೊಂದು ದೇಶಗಳು ಸೇರಿದ್ದವೇನೋ ನಿಜ. ಆದರೆ ಅದರಲ್ಲಿ ಹಲವು ದೇಶಗಳು ಎರಡು ವರ್ಲ್ಡ್  ವಾರ್‌ನಿಂದಾಗಿ ದಿವಾಳಿಯಂಚಿನಲ್ಲಿದ್ದವು. ಇಂಗ್ಲೆಂಡ್ – ಭಾರತವೂ ಸೇರಿದಂತೆ ಜಗತ್ತಿನ ಬಹುತೇಕ ರಾಷ್ಟ್ರಗಳಿಂದ ಕೊಳ್ಳೆಹೊಡೆದ ಬಹುತೇಕ ಸಂಪತ್ತನ್ನು ಯುದ್ಧದಲ್ಲಿ ಕಳೆದುಕೊಂಡಿತ್ತು. ಮಹಾಯುದ್ಧದಲ್ಲಿನ ಇಂಗ್ಲೆಂಡಿನ ಖರ್ಚು ಹೆಚ್ಚೂ ಕಡಿಮೆ ಭಾರತದ್ದೇ. ಹಾಗಿರು ವಂತಹ ಸ್ಥಿತಿಯಲ್ಲಿ ಇಂಗ್ಲೆಂಡಿನ ಪೌಂಡ್ ಅನ್ನು ಜಾಗತಿಕ ವ್ಯವಸ್ಥೆಯ ಕರೆನ್ಸಿಯಾಗಿ ಬಳಸುವಂತಿರಲಿಲ್ಲ. ಅಲ್ಲದೆ ಅದು ಚಿನ್ನವನ್ನಿಟ್ಟು ಹಣ ಪ್ರಿಂಟ್ ಮಾಡುತ್ತಿದ್ದ ಸಮಯ – ಇಂಗ್ಲೆಂಡಿನ ಚಿನ್ನವೆಲ್ಲ ಯುದ್ಧಕ್ಕೆ ಖಾಲಿಯಾಗಿತ್ತು. ಆಗ ಗಟ್ಟಿಯಾಗಿದ್ದ, ಅಚಲವಾಗಿದ್ದ ಆರ್ಥಿಕವ್ಯವಸ್ಥೆ ಮತ್ತು ಕರೆನ್ಸಿಯೆಂದರೆ ಅದು ಅಮೆರಿಕದ್ದು ಮಾತ್ರ. ಅಲ್ಲದೆ ಅಂದು ಜಗತ್ತಿನ ಅತಿಹೆಚ್ಚು ಚಿನ್ನದ ರಿಸರ್ವ್ ಇದ್ದದ್ದು ಕೂಡ ಅಮೆರಿಕದ ಬಳಿಯೇ. ಆ ಕಾರಣಕ್ಕೆ ಅಮೆರಿಕನ್ ಡಾಲರ್ ಅನ್ನು ಜಾಗತಿಕ ಕರೆನ್ಸಿಯಂತೆ ಬಳಸುವುದಾಗಿ – ಅಮೆರಿಕದ ಕೈಗೆ ಜುಟ್ಟುಕೊಡುವುದಾಗಿ ಇಷ್ಟೂ ದೇಶಗಳು ಒಪ್ಪಿಕೊಂಡವು.

ಅದರ ಬದಲಿಗೆ ಅಮೆರಿಕ ತಾನು ಬೇಕಾಬಿಟ್ಟಿ ಡಾಲರ್ ಅನ್ನು ಪ್ರಿಂಟ್ ಮಾಡುವುದಿಲ್ಲ ಮತ್ತು ಒಂದು ಔನ್ಸ್ ಗೆ 35 ಎಂದು ನಿಗದಿ ಮಾಡಿಕೊಂಡಿತು. ಅಲ್ಲಿಂದ ಮುಂದೆ ಈ ಅಮೆರಿಕನ್ ಡಾಲರ್‌ನ ಜಾಗತಿಕ ಬಳಕೆ. ಎಲ್ಲ ಸರಿಯಾಗಿಯೇ ಇತ್ತು. ಅಮೆರಿಕ ಹೇಳಿದಂತೆ ತೀರಾ ಅಚ್ಚುಕಟ್ಟಿನಿಂದ ಡಾಲರ್ ಪ್ರಿಂಟ್ ಮಾಡುತ್ತಿತ್ತು ಮತ್ತು ಅದಕ್ಕೆ ಅನುಗುಣವಾದ ಸಂಪತ್ತಾಗಿ ಚಿನ್ನವನ್ನು ಕೂಡ ಇಡುವ ಪರಿಪಾಠ ಇಟ್ಟುಕೊಂಡಿತ್ತು. ಆದರೆ ಇದೆಲ್ಲ ಹೆಚ್ಚು ಕಡಿಮೆಯಾಗಿದ್ದು ಅಮೆರಿಕ ವಿಯೆಟ್ನಾಮ್ ಯುದ್ಧ ಮಾಡಿದಾಗ. ಆಗ ಅಮೆರಿಕದ ಅರ್ಥವ್ಯವಸ್ಥೆಯ ಮೇಲಾಗುತ್ತಿದ್ದ ಹೊರೆಯನ್ನು ತಗ್ಗಿಸಲು ಅಮೆರಿಕ ನಿಧಾನಕ್ಕೆ ಬೇಕಾಬಿಟ್ಟಿ ಡಾಲರ್ ಪ್ರಿಂಟ್ ಮಾಡಲು ಶುರುಮಾಡಿತು. ಹೇಗೆ ಪ್ರಿಂಟ್ ಮಾಡಿದ ಹಣವನ್ನು ಬಳಸಿಕೊಂಡು ಖರೀದಿಗೆ, ಆಮದಿಗೆ ಶುರುಮಾಡಿಕೊಂಡಿತು.

ಇದರ ಜತೆ 1971ರಲ್ಲಿ ಗೋಲ್ಡ್ ಸ್ಟ್ಯಾಂಡರ್ಡ್, ಎಂದರೆ ಪ್ರಿಂಟ್ ಮಾಡುವ ಡಾಲರ್‌ಗೆ ಅನುಗುಣವಾಗಿ ಚಿನ್ನವಿಡುವ ಪರಿಪಾಠ ನಿಲ್ಲಿಸಿ ಬಿಟ್ಟಿತು. ಹಾಗೇ ನೋಡಿದರೆ ಇದು ಅಂದು ನ್ಯೂ ಹ್ಯಾಂಪ್‌ಶೈರ್‌ನಲ್ಲಿ ಮಾಡಿಕೊಂಡ ಬ್ರೆಟ್ಟನ್ ವುಡ್ಸ್ ಒಪ್ಪಂದವನ್ನು ಮುರಿದಂತೆ. ಆದರೆ ಅದಾಗಲೇ ಡಾಲರ್ ಅನ್ನು ಜಾಗತಿಕ ಕರೆನ್ಸಿಯಂತೆ ಬಳಸುವುದನ್ನು ನಿಲ್ಲಿಸಲು ಸಾಧ್ಯವಾಗದ ಸ್ಥಿತಿಗೆ ಜಗತ್ತು ತಲುಪಿಯಾಗಿತ್ತು. ಒಂದು ವೇಳೆ ಡಾಲರ್ ಅನ್ನು ಅಪಮೌಲ್ಯ ಮಾಡಿಬಿಟ್ಟರೆ ಅಮೆರಿಕದ ಜತೆ ಜತೆ ಉಳಿದೆಲ್ಲ ದೇಶಗಳೂ ಮುಳುಗುವ ಸ್ಥಿತಿಯಿತ್ತು.

ಅಂದಿನಿಂದ ಇಂದಿನವರೆಗೆ ಈ ಜಗತ್ತು ಅಮೆರಿಕಾದ ಡಾಲರ್ ಅನ್ನು ಬಿಟ್ಟು ವ್ಯವಹರಿಸಲು ಸದಾ ಪ್ರಯತ್ನಿಸುತ್ತಲೇ ಇದೆ – ಕೆಲವು ದೇಶಗಳು ತಕ್ಕ ಮಟ್ಟಿಗೆ ಬೇರೆ ಕರೆನ್ಸಿಯನ್ನು ಬಳಸುವಲ್ಲಿ ಯಶಸ್ವಿಯಾಗಿವೆ. ಆದರೂ ಅಂತಾರಾಷ್ಟ್ರೀಯ ವ್ಯವಹಾರಕ್ಕೆ ಅಮೆರಿಕಾದ ಡಾಲರ್‌ನದ್ದೇ ಸಿಂಹಪಾಲು. ಹಾಗಂತ ಅಮೆರಿಕ ಅಲ್ಲಿಂದಿಲ್ಲಿಗೂ ಕೇವಲ ನೋಟು ಪ್ರಿಂಟು ಮಾಡಿಕೊಂಡು ಕೂತದ್ದಷ್ಟೇ ಅಲ್ಲ.
ಡಾಲರ್‌ನ ಬೆಲೆ ಕಾಪಾಡಿಕೊಳ್ಳುವುದರಲ್ಲಿ ಮತ್ತು ಅದನ್ನೇ ಎಲ್ಲ ದೇಶಗಳು ಬಳಸುವಂತೆ ನಿರಂತರವಾಗಿ ಮುತುವರ್ಜಿ ವಹಿಸಿದೆ, ಈ ನಿಟ್ಟಿನಲ್ಲಿ ದೇಶಗಳನ್ನು ಹೆದರಿಸಿದೆ, ಹೆದರದಿದ್ದರೆ ಇದೇ ಡಾಲರ್ ಅನ್ನು ಇಟ್ಟುಕೊಂಡು ಬಗ್ಗಿಸಿದೆ, ಅದಕ್ಕೂ ಹೆದರದಿದ್ದಲ್ಲಿ ಯುದ್ಧಕ್ಕೆ ಕೂಡ ಹೋದದ್ದಿದೆ.

ಯಾವಾಗ ಅಮೆರಿಕ ಡಾಲರ್‌ನ ಗೋಲ್ಡ್ ಸ್ಟ್ಯಾಂಡರ್ಡ್ ಅನ್ನು ತೆಗೆದುಹಾಕಿತೋ ಆಗ ಇದರ ಬೆಲೆ ಮಣ್ಣುಕಚ್ಚಿತ್ತು. ಫ್ರಾನ್ಸ್ ಮೊದಲಾದ ದೇಶಗಳು ಡಾಲರ್ ವಾಪಸ್ ಪಡೆದು ನಮ್ಮ ಚಿನ್ನವನ್ನು ಕೊಟ್ಟುಬಿಡಿ ಎಂದು ಕೇಳಿತು. ಇಡೀ ಜಗತ್ತು ಡಾಲರ್‌ನಿಂದ ವಿಮುಖವಾಗಿ ಹೋರಟ ಸಮಯವದು. ಆಗ ಅಂದಿನ ಅಧ್ಯಕ್ಷ ನಿಕ್ಸನ್, ಸೌದಿ ಅರೇಬಿಯಾಕ್ಕೆ ಹೋಗಿ ಅಂದು ವ್ಯವಹಾರವನ್ನು ಕುದುರಿಸಿದ್ದ. ಅದರ ಪ್ರಕಾರ ಸೌದಿ ಡಾಲರ್‌ನಲ್ಲಿಯೇ ಪೆಟ್ರೋಲ್ ವ್ಯವಹಾರವನ್ನು ನಡೆಸುವುದು, ಅದರ ಬದಲಿಗೆ ಸೌದಿಗೆ ಅಮೆರಿಕದ ಪ್ರೊಟೆಕ್ಷನ್
ಎಂಬ ಒಡಂಬಡಿಕೆಯಾಯಿತು. ಅರಬ್ ಜಗತ್ತು ಇಸ್ರೇಲ್‌ನ ವಿರುದ್ಧ ಸೆಣೆಸಾಟದಲ್ಲಿ ಸೋತ ಸಮಯ ಅದು.

ಹಾಗಾಗಿ ಈ ಪ್ರೊಟೆಕ್ಷನ್ ಅಮೆರಿಕದಿಂದ ಪಡೆಯಲೇಬೇಕಾದ ಸ್ಥಿತಿಯಿತ್ತು. ಮುಂದಿನ ದಿನಗಳಲ್ಲಿ ಇಂಥದ್ದೇ ಒಡಂಬಡಿಕೆಯನ್ನು ಅಮೆರಿಕ ವೆನಿಜುಯೆಲಾ, ಅಲ್ಜೇರಿಯಾ, ಕುವೈಟ್, ಕರ್ತಾ, ನೈಜೆರಿಯಾ ಮೊದಲಾದ ಒಪೆಕ್ ದೇಶಗಳ ಜತೆಯೂ ಮಾಡಿ ಕೊಂಡಿತು. ಇದೊಂದು ಮಾಸ್ಟರ್ ಸ್ಟ್ರೋಕ್ ನಡೆ. ಇದರಿಂದಾಗಿ ಅಂದು ಡಾಲರ್ ಬಚಾವಾಯಿತು. ಅಲ್ಲಿಂದ ಮುಂದೆ ಯಾವುದೇ ದೇಶ ಡಾಲರ್ ಬಿಟ್ಟು ಪೆಟ್ರೋಲ್ ವ್ಯವಹಾರಕ್ಕೆ ಇಳಿದರೆ ಅದು ಅಮೆರಿಕದ ಶತ್ರುರಾಷ್ಟ್ರದಂತೆ ನೋಡಲಾಯಿತು. ಅಸಲಿಗೆ ಸದ್ದಾಂ, ಗದ್ದಾಫಿ ಇವರೆಲ್ಲ ಮಾಡಿದ ದೊಡ್ಡ ತಪ್ಪು ಇದೇ.

ಅಮೆರಿಕದ ನೆಲದ ಮೇಲೆ ಬಿನ್ ಲಾಡೆನ್ ದಾಳಿ ಮಾಡಿದನಲ್ಲ, ಆಗ ದೊಡ್ಡ ಪ್ರಮಾಣದಲ್ಲಿ ಅಮೆರಿಕ ತನ್ನ ಡಾಲರ್ ಶಕ್ತಿಯಿಂದ ಬೇರೆ ದೇಶಗಳ ಮೇಲೆ ಆರ್ಥಿಕ ದಿಗ್ಬಂಧನ ಹೇರುವ ಕೆಲಸ ಶುರುಮಾಡಿಕೊಂಡದ್ದು. ಅಲ್ಲಿಂದ ಮುಂದೆ ಜಗಜ್ಜಾಹೀರವಾಗಿ ದೇಶಗಳನ್ನು ಕಂಟ್ರೋಲ್ ಮಾಡಲು ಅಮೆರಿಕ ತನ್ನ ಡಾಲರನ್ನು ಬಳಸುತ್ತಲೇ ಬಂದಿದೆ. ಭಾರತ ಮತ್ತು ಇರಾನ್ ಹೀಗೆ ಕೆಲವು ರಾಷ್ಟ್ರಗಳು ಡಾಲರ್ ಇಲ್ಲದೇ ವ್ಯವಹರಿಸಲು ಶುರುಮಾಡಿದಾಗ ಕೂಡ ಅಮೆರಿಕ ಒತ್ತಡ ಹೇರಿದೆ, ಉಸಿರುಗಟ್ಟಿಸಿದೆ.

ಇದೇ ಕಾರಣಕ್ಕೆ ಅಮೆರಿಕ ಬಹಳಷ್ಟು ಸಮಯ ಪಾಕಿಸ್ತಾನವನ್ನು, ಕಾಶ್ಮೀರ ಪ್ರತ್ಯೇಕತಾ ವಾದವನ್ನು ಪೋಷಿಸಿದ್ದು. ಇಂದು ಇದೇ ಶಕ್ತಿ ಯಿಂದಾಗಿಯೇ ರಷ್ಯಾದ ಮೇಲೆ ಕೂಡ ಆರ್ಥಿಕ ದಿಗ್ಬಂಧನ ಹೇರಲು ಅಮೆರಿಕಕ್ಕೆ ಸಾಧ್ಯವಾಗಿದ್ದು. ಇದನ್ನು ಗ್ರಹಿಸಲೇಬೇಕು – ಅಮೆರಿಕದ ಟ್ವಿನ್ ಟವರ್‌ನ ಮೇಲೆ ದಾಳಿಮಾಡಿದ 19 ಇಸ್ಲಾಮಿಕ್ ಭಯೋತ್ಪಾದಕರಲ್ಲಿ 15 ಮಂದಿ ಸೌದಿ ದೇಶದವರು. ಉಳಿದ ನಾಲ್ಕು ಮಂದಿ ಯುಎಇ, ಲೆಬನಾನ್ ಮತ್ತು ಈಜಿಪ್ಟಿನವರು.

ಆದರೆ ಅಮೆರಿಕ ಹೋಗಿ ದಾಳಿ ಮಾಡಿದ್ದು ಅಫ್ಗಾನ್‌ನ ಮೇಲೆ. ಅಮೆರಿಕಕ್ಕೆ ಅರಬ್ ದೇಶದ ಒಂದು ಹುಂಡೂ ಪೆಟ್ರೋಲ್ ಕೂಡ ಅವಶ್ಯ ಕತೆಯಿಲ್ಲ. ಆದರೆ ಅದರ ಡಾಲರ್ ಬೆಲೆಯನ್ನು ಎತ್ತಿಹಿಡಿಯಲು ಈ ದೇಶಗಳು ಡಾಲರ್‌ನ ವ್ಯವಹರಿಸಬೇಕು. ಈಗ ಇದಕ್ಕೆ ಸೆಡ್ಡು ಹೊಡೆಯುವಂತೆ ಚೀನಾ, ರಷ್ಯಾ ಮೊದಲಾದ ದೇಶಗಳು ಬೆಳೆಯುತ್ತಿವೆ. ಮೆರಿಕಕ್ಕೆ ಭಾರತ ಕೂಡ ನುಂಗಲಾರದ ತುತ್ತು. ಒಟ್ಟಾರೆ ಎಲ್ಲಿಯವರೆಗೆ ಡಾಲರ್‌ನ ವ್ಯವಹಾರ ಮುಂದುವರಿಯುವುದೋ ಅಲ್ಲಿಯವರೆಗೆ ಅಮೆರಿಕವೇ ದೊಡ್ಡಣ್ಣನಾಗಿ ಉಳಿಯುತ್ತಾನೆ. ಅದು ಹಾಗೆಯೇ ಮುಂದುವರಿಯುವಂತೆ ನೋಡಿಕೊಳ್ಳುವುದು ಅಮೆರಿಕಕ್ಕೆ ಉಳಿವಿನ ಪ್ರಶ್ನೆ. ಮಾಯಾವಿಯ ಜೀವ ಹಕ್ಕಿಯೊಂದರಲ್ಲಿ ಇಟ್ಟಿದ್ದ ಎಂಬ ಕಥೆಯಂತೆ ಅಮೆರಿಕದ ಶಕ್ತಿ ಇರುವುದು ಈ ಕಾರಣಕ್ಕೆ ಅದರ ಡಾಲರ್‌ನಲ್ಲಿ, ಡಾಲರಿನ ಶಕ್ತಿಯಲ್ಲಿ.

error: Content is protected !!