Saturday, 23rd November 2024

ಅತಿಯಾದರೆ ಅಮೃತವೂ ವಿಷ

ಅಶ್ವತ್ಥಕಟ್ಟೆ

ರಂಜಿತ್ ಎಚ್.ಅಶ್ವತ್ಥ

ranjith.hoskere@gmail.com

ಕರ್ನಾಟಕದಲ್ಲಿ ಕಳೆದ ಕೆಲ ತಿಂಗಳಿನಿಂದ ಧರ್ಮದ ಹೆಸರಲ್ಲಿ ಆರಂಭವಾಗಿರುವ ವಿವಾದಗಳಿಗೆ ಕೊನೆಯಿಲ್ಲವಾಗಿದೆ. ಅದರಲ್ಲಿಯೂ ಕಳೆದೊಂದು ತಿಂಗಳಿನಿಂದ ನಡೆಯುತ್ತಿರುವ ಕೆಲ ಚರ್ಚೆಗಳು ಅತಿರೇಕ ಎನಿಸಿದ್ದೂ ಸುಳ್ಳಲ್ಲ.

ಹಿಂದು ಸಂಘಟನೆಗಳ ವಿರುದ್ಧ ಮುಸ್ಲಿಮರ ಆಕ್ರೋಶ, ಬಹಿಷ್ಕಾರ, ಮುಸ್ಲಿಮರ ವಿರುದ್ಧ ಹಿಂದುಗಳ ಆಕ್ರೋಶ, ನಿರ್ಬಂಧದ ಹೆಸರಲ್ಲಿ ನಡೆಯುತ್ತಿರುವ ಚಟುವಟಿಕೆ ಗಮನಿಸಿದರೆ, ರಾಜ್ಯ ಎತ್ತ ಸಾಗುತ್ತಿದೆ ಎನ್ನುವ ಆತಂಕ ಒಂದು ಕ್ಷಣ ಮೂಡುವುದರಲ್ಲಿ ಅನುಮಾನವಿಲ್ಲ.
ಉಡುಪಿಯ ಶಾಲೆಯಲ್ಲಿ ಆರೆಂಟು ವಿದ್ಯಾರ್ಥಿನಿಯರಿಂದ ಶುರುವಾದ ಹಿಜಾಬ್ ಗದ್ದಲ, ಈ ಧರ್ಮ ಸಂಘರ್ಷಕ್ಕೆ ನಾಂದಿ ಹಾಡಿದೆ. ಅಲ್ಲಿಂದ ಶುರುವಾದ ಈ ವಿವಾದ ಇದೀಗ ತನ್ನ ಸ್ವರೂಪವನ್ನೇ ಬದಲಾಯಿಸಿಕೊಂಡು, ಹಿಂದು-ಮುಸ್ಲಿಮರ ವ್ಯವಹಾರಕ್ಕೆ ಇತಿಶ್ರೀ ಹಾಡುವ ಹಂತಕ್ಕೆ ಬಂದು ತಲುಪಿದೆ. ಈ ವಿವಾದದಿಂದ, ಇದು ಸಾಧ್ಯವೇ ಎನ್ನುವುದು ಎರಡನೇ ಮಾತಾದರೂ, ಎರಡು ಧರ್ಮದ ನಡುವಿನ ಕಂದಕಕ್ಕೆ ಇಂದಿನ ಈ ಬೆಳವಣಿಗೆಯಂತೂ ದೊಡ್ಡ ಪ್ರಮಾಣದಲ್ಲಿಯೇ ಪ್ರಭಾವ ಬೀರಿದೆ.

ಅದರಲ್ಲಿಯೂ ಇತ್ತೀಚಿಗೆ ಕೆಲ ಹಿಂದು ಪರ ಸಂಘಟನೆಗಳು ಹೇಳುತ್ತಿರುವ ಕೆಲ ಅಂಶ ಗಳು ‘ಅತಿರೇಕ’ ಎನಿಸುವುದರಲ್ಲಿ ಅನುಮಾನವೇ ಇಲ್ಲ. ಆರಂಭದಲ್ಲಿ ಹಿಜಾಬ್ ಗಲಾಟೆ ಎದ್ದಾಗ, ಹೈಕೋರ್ಟ್ ತೀರ್ಪು ನೀಡಿರುವುದರಿಂದ ಶಾಲೆಯಲ್ಲಿ ಒಬ್ಬೊಬ್ಬರಿಗೆ ಒಂದೊಂದು ಕಾನೂನು, ಸಮವಸ ಮಾಡಲು ಸಾಧ್ಯವಿಲ್ಲ. ಆದ್ದರಿಂದ ಮುಸ್ಲಿಂ ವಿದ್ಯಾರ್ಥಿನಿಯರು ಶಾಲೆ ಪ್ರವೇಶಿಸುವಾಗ ಹಿಜಾಬ್ ತಗೆದಿಟ್ಟು ಬರಬೇಕು ಎನ್ನುವುದು ಸರಿಯಾದ ವಾದ. ಇದಾದ ಬಳಿಕ ಭುಗಿಲೆದ್ದ ವಿವಾದವೆಂದರೆ, ಹಿಂದು ದೇವಾಲಯ ಗಳ ವ್ಯಾಪ್ತಿ ಅಥವಾ ಪ್ರಾಂಗಣದಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ಅವಕಾಶ ನೀಡಬಾರದು ಎನ್ನುವುದು.

ಇದಕ್ಕೆ ಕೆಲವರು ವಿರೋಽಸಿದರೂ, ಧಾರ್ಮಿಕ ಭಾವನೆ ಹಾಗೂ 2002ರಲ್ಲಿಯೇ ಕಾನೂನು ಇರುವುದರಿಂದ ಅದನ್ನು ಒಂದು ಹಂತಕ್ಕೆ ಒಪ್ಪಿಕೊಂಡರು. ಇನ್ನು ಹಲಾಲ್ ಕಟ್ ವಿಷಯ ಬಂದಾಗ, ಆಹಾರ ಸೇವನೆ ವೈಯಕ್ತಿಕ ಸ್ವಾತಂತ್ರ್ಯ. ಆದ್ದರಿಂದ ಹಲಾಲ್ ಕಟ್‌ಅನ್ನೇ ಹಿಂದುಗಳು ಸೇವಿಸಬೇಕು ಎಂದು ಹೇರಿಕೆ ಮಾಡುವುದು ತಪ್ಪು. ಝಟ್ಕಾ ಬೇಕಿದ್ದರೆ ಝಟ್ಕಾ ಸೇವಿಸಲು ಒಂದು ಅವಕಾಶವಿರಬೇಕು ಎನ್ನುವ ವಾದವನ್ನು ಅನುಮೋದಿಸಲಾಯಿತು.

ಇದಾದ ಬಳಿಕ ಬಂದಿರುವ ಆಜಾನ್ ಅನ್ನು ಧ್ವನಿ ವರ್ಧಕದ ಮೂಲಕ ಕೂಗಿದರೆ, ಶಬ್ದ ಮಾಲಿನ್ಯವಾಗುತ್ತದೆ. ಆದ್ದರಿಂದ ಅದನ್ನು  ನಿಷೇಧಿಸಬೇಕು ಎಂದಾಗ, ಮೊದಲಿಗೆ ಧ್ವನಿ ವರ್ಧಕಗಳ ಬಳಕೆಗೆ ಸಂಬಂಧಿಸಿ ದಂತೆ ಈಗಾಗಲೇ ಹೈಕೋರ್ಟ್ ಆದೇಶವಿದೆ. ಅದನ್ನು ಪಾಲಿಸಬೇಕು. ಈ ಆದೇಶ ಕೇವಲ ಮಸೀದಿಗಳಿಗೆ ಮಾತ್ರ ಸೀಮಿತವಾಗಿಲ್ಲ. ಇದರೊಂದಿಗೆ ಬೆ.೫ಗಂಟೆ ಹೊತ್ತಿಗೆ ಜೋರಾಗಿ ಆಜಾನ್ ಕೂಗುವುದರಿಂದ, ಅಕ್ಕಪಕ್ಕದವರಿಗೆ ಕಿರಿಕಿರಿಯಾಗುತ್ತದೆ. ಆದ್ದರಿಂದ ಅದರ ವಿರುದ್ಧ ಹಿಂದುಗಳು ಧ್ವನಿ ಎತ್ತಿದಾಗಲೂ ಬಹುತೇಕರು ಒಪ್ಪಿದರು.

ಆದರೆ ಅದಾದ ಬಳಿಕ ಬರುತ್ತಿರುವ ಅಭಿಯಾನಗಳಾದ ‘ಮುಸ್ಲಿಮರಿಂದ ಹಣ್ಣು ಖರೀದಿಸಬೇಡಿ’, ’ಮುಸ್ಲಿಂ ಚಾಲಕರೊಂದಿಗೆ ದೇವಾಲಯ ಗಳಿಗೆ ಹೋಗಬೇಡಿ’, ’ಮುಸ್ಲಿಮರ ಅಂಗಂಡಿಗಳಲ್ಲಿ ಖರೀದಿಸಬೇಡಿ’ ಎನ್ನುವ ವಾದ ಅತಿರೇಕ ಎನಿಸುವುದು ಮಾತ್ರವಲ್ಲದೇ, ಹುರು ಳ್ಳಿಲ್ಲದ ವಾದಗಳು. ಈ ರೀತಿಯ ವಾದಗಳಿಂದ ಯಾವುದೇ ಪ್ರಯೋಜನವೂ ಆಗುವುದಿಲ್ಲ. ಈ ರೀತಿಯ ಅಭಿಯಾನದಿಂದ, ಈ ಹಿಂದಿನ ನೈಜ ಅಭಿಯಾನಗಳು ದಾರಿ ತಪ್ಪುವ ಆತಂಕವಿರುತ್ತದೆ ಎನ್ನುವುದನ್ನು ಮರೆಯಬಾರದು.

ಮುಸ್ಲಿಂ ಚಾಲಕರಿರುವ ವಾಹನಗಳನ್ನು ಹಿಂದುಗಳು ಹತ್ತಬಾರದು ಅಥವಾ ಬಾಡಿಗೆಗೆ ಪಡೆಯಬಾರದು ಎಂದರೆ ಒಂದು ವೇಳೆ ಯಾವು ದಾದರೂ ಒಂದು ಬಸ್ಸಿನಲ್ಲಿ ಮುಸ್ಲಿಂ ಚಾಲಕನಿದ್ದರೆ ಕೇವಲ ಮುಸ್ಲಿಮರು ಮಾತ್ರ ಪ್ರಯಾಣಿಸಲು ಸಾಧ್ಯವೇ? ಇದೇ ರೀತಿಯ ಅರ್ಥ ವಿಲ್ಲದ ಅಭಿಯಾನ ನಡೆಸಿ, ಮುಸ್ಲಿಮರ ಅಂಗಂಡಿಗಳಲ್ಲಿ ಪಂಕ್ಚರ್ ಹಾಕಿಸಬೇಡಿ ಎಂದರೆ, ಎಲ್ಲಿ ಹಾಕಿಸಬೇಕು? ಹಾಗೇ ನೋಡಿದರೆ , ದೂರದ ಪ್ರಯಾಣಗಳಿಗೆ ಅಥವಾ ಅಂತಾರಾಜ್ಯ ಟ್ರಕ್‌ಗಳ ಪ್ರಮಾಣಗಳಲ್ಲಿ ಟ್ರಕ್‌ಗಳನ್ನು ಚಾಲನೆ ಮಾಡುವುದು ಸಿಖ್ಖರು ಅಥವಾ ಮುಸ್ಲಿಮರು ಎನ್ನುವುದನ್ನು ಮರೆಯಬಾರದು. ಅವರಿಗೆ ಕೊಡುವುದಿಲ್ಲ ಎಂದರೆ, ಆ ಕೆಲಸವನ್ನು ಯಾರು ಮಾಡಬೇಕು? ಎಲ್ಲ ಕಡೆ, ಎಲ್ಲ ಕೆಲಸವನ್ನು ಹಿಂದುಗಳೇ ಮಾಡಲು ಸಾಧ್ಯವೇ? ಹಾಗೆ ನೋಡಿದರೆ, ಹಿಜಾಬ್ ವಿವಾದದಲ್ಲಿ ಆಗಲಿ, ಹಲಾಲ್ ಸೇವನೆಯ ಲ್ಲಾಗಲಿ, ವ್ಯಾಪಾರ ನಿರ್ಬಂಧದ ವಿಷಯದಲ್ಲಾಗಲಿ ಬಹುತೇಕರು ಅಭಿಯಾನವನ್ನು ಬೆಂಬಲಿಸಿದ್ದರು.

ಏಕೆಂದರೆ ಆ ಎಲ್ಲ ಹೋರಾಟಗಳಿಗೂ ಒಂದು ಸ್ಪಷ್ಟ ಹಾಗೂ ನಿಖರ ಗುರಿಯಿತ್ತು. ಆದರೆ ಅದಾದ ಬಳಿಕ ಬರುತ್ತಿರುವ ಈ ವಿವಾದಗಳಿಗೆ ಗುರಿಯೂ ಇಲ್ಲ, ತಾರ್ತಿಕ ಅಂತ್ಯಗಳೂ ಇಲ್ಲ. ಕೆಲವರ ಪ್ರಚಾರಕ್ಕೆ, ರಾಜಕೀಯ ಕಾರಣಕ್ಕೆ ನಡೆಯುತ್ತಿರುವ ಚರ್ಚೆಗಳು ಎನ್ನುವುದು ಸ್ಪಷ್ಟವಾಗಿ ಕಾಣುತ್ತಿದೆ. ಆರಂಭದಲ್ಲಿ ಶುರುವಾದ ಈ ಧರ್ಮ ಸಂಘರ್ಷದಲ್ಲಿ ಬಿಜೆಪಿ ತನ್ನ ವೋಟ್ ಬ್ಯಾಂಕ್ ಗಟ್ಟಿಗೊಳಿಸಿಕೊಳ್ಳಲು ಹಾಗೂ ಹಿಂದು ಧರ್ಮದ ಮತಗಳ ಕ್ರೋಢೀಕರಣಕ್ಕೆ ಈ ವಿವಾದವನ್ನು ಬಳಸಿಕೊಂಡರು. ಆದರೀಗ ಏಳುತ್ತಿರುವ ವಿವಾದಗಳನ್ನು ನೋಡಿ, ಬೆಚ್ಚಿಬಿದ್ದಿರುವ ರಾಜ್ಯ ನಾಯಕರು ಇದನ್ನು ನಿಲ್ಲಿಸುವುದಾದರೂ ಹೇಗೆ ಎನ್ನುವ ಆತಂಕದಲ್ಲಿದ್ದಾರೆ. ಏಕೆಂದರೆ ಈ ರೀತಿಯ ಬಿಕ್ಕಟ್ಟಿನಿಂದ, ರಾಜ್ಯ ಒಡೆದು ಹೋಗುತ್ತದೆ ಹೊರತು, ಅಭಿವೃದ್ಧಿ ಅಥವಾ ಪಕ್ಷಕ್ಕೆ ಲಾಭ ತರುವುದಿಲ್ಲ ಎನ್ನುವುದು ನಾಯಕರಿಗೆ ಮನವರಿಕೆ ಯಾಗಿದೆ.

ಹೋಗಲಿ ಎಲ್ಲವನ್ನು ಹಿಂದೂಮಯ ಮಾಡಲು ಹೊರಟಿರುವ ಕೆಲ ಸಂಘಟನೆಗಳು ಒಂದನ್ನು ಅರ್ಥೈಸಿಕೊಳ್ಳುವುದರಲ್ಲಿ ಎಡವಿದ್ದಾರೆ. ಎಲ್ಲ ಕೆಲಸಗಳನ್ನು ನಾವೇ ಮಾಡಲು ಸಾಧ್ಯವಿಲ್ಲ. ಹಂಚಿಕೊಂಡು ಜೀವಿಸಬೇಕಿದೆ. ಧರ್ಮದ ಹೆಸರಲ್ಲಿಯೇ ಹೇಳುವುದಾದರೆ, ನಮ್ಮ ಧರ್ಮಕ್ಕೆ ಧಕ್ಕೆಯಾಗದ ರೀತಿಯಲ್ಲಿ ಸೌಹಾರ್ದಯುತವಾಗಿ ಹೋಗಬೇಕಿದೆ. ಈಗಲೂ ಹಿಂದು-ಮಸ್ಲಿಂ ಸಾಮಾನ್ಯ ಜನರು ರಾಜ್ಯದ ಬಹುತೇಕ ಕಡೆ ಯಲ್ಲಿ ಹಾಗೆಯೇ ಇದ್ದಾರೆ. ರಾಮನ ದೇವಾಲಯಕ್ಕೆ ಮುಸ್ಲಿಮರು ಬರುವುದು, ಮುಸ್ಲಿಮರ ಮೊಹರಂ ವೇಳೆ ಹಿಂದುಗಳು ಸಕ್ಕರೆ ಬೀಸಿಕೊಂಡು ಬರುವ ಪದ್ಧತಿ ಈಗಲೂ ಜೀವಂತವಾಗಿದೆ. ಆದರೆ ಕೆಲವು ಪಟ್ಟಭದ್ರರ ಆಸಕ್ತಿಗಳಿಗೆ ಸಾಮರಸ್ಯ ಹಾಳಾಗುತ್ತಿದೆ.

ಆದರೆ ಕೆಲ ಪಟ್ಟಭದ್ರರ ಹಿತಾಸಕ್ತಿಗಾಗಿ ನಡೆಯುತ್ತಿರುವ ಈ ಹೋರಾಟಗಳಿಂದ, ಕರ್ನಾಟಕದಲ್ಲಿ ಕೋಮು ಸೌಹಾರ್ದಕ್ಕೆ ಧಕ್ಕೆಯಾಗು ತ್ತಿದೆ. ಸರ್ವಜನಾಂಗದ ಶಾಂತಿಯ ತೋಟವಾಗಿದ್ದ ಕರ್ನಾಟಕ, ಇದೀಗ ಹೆಜ್ಜೆ ಹೆಜ್ಜೆಗೂ ಸಮಸ್ಯೆಯ ಆಗರವಾದರೆ ರಾಜ್ಯಕ್ಕೆ ಬಂಡವಾಳ ವಾದರೂ ಎಲ್ಲಿಂದ ಬರಬೇಕು? ಸರಕಾರಕ್ಕೆ ಕಾನೂನು ಸುವ್ಯವಸ್ಥೆ ಕಾಪಾಡುವುದು ಮೊದಲ ಸವಾಲಾದರೆ, ಈ ರೀತಿಯ ಗೊಂದಲ, ವಿವಾದಗಳಿದ್ದರೆ ಹೊರದೇಶ, ರಾಜ್ಯಗಳಿಂದ ಬಂಡವಾಳ ಹೂಡಿಕೆದಾರರನ್ನು ರಾಜ್ಯಕ್ಕೆ ಕರೆತರುವುದು ಬಹುದೊಡ್ಡ ಸವಾಲು. ಇದರಿಂದ ರಾಜ್ಯಕ್ಕೆ ಬರಬಹುದಾದ ಕೋಟ್ಯಂತರ ರೂಪಾಯಿ ಬಂಡಾವಳವೂ ಕೈತಪ್ಪಲಿದೆ ಹಾಗೂ ನೂತನ ಕೈಗಾರಿಕೆಗಳ ಸ್ಥಾಪನೆಯಿಂದ ರಾಜ್ಯದಲ್ಲಿ ಉದಯಿಸಬಹುದಾದ ಸಾವಿರಾರು ಉದ್ಯೋಗಕ್ಕೂ ಕತ್ತರಿ ಬೀಳಲಿದೆ.

ಏಕೆಂದರೆ ಯಾವುದೇ ಕೈಗಾರಿಕೋದ್ಯಮಿ ಬಂಡವಾಳ ಹೂಡಿಕೆ ಮಾಡುವಾಗ ರಾಜ್ಯ ಅಥವಾ ಆ ದೇಶದ ಶಾಂತಿ ಸುವ್ಯವಸ್ಥೆಯ ಬಗ್ಗೆ ಗಮನ ಹರಿಸುತ್ತಾನೆ. ಇದಾಗದಿದ್ದರೆ, ರಾಜ್ಯದ ಯುವಕರಿಗೆ ಕೆಲಸ ಸಿಗದೆ, ನಿರುದ್ಯೋಗ ಸಮಸ್ಯೆಗೆ ಹೆಚ್ಚು ಸಮಸ್ಯೆಯಾಗುತ್ತದೆ. ಇದೇ ವಾದವನ್ನು ಈಗಾಗಲೇ ರಾಜ್ಯದ ಹಲವು ಕೈಗಾರಿಕೋದ್ಯಮಿಗಳು ಎತ್ತಿದ್ದಾರೆ. ಇಷ್ಟು ದಿನವಿಲ್ಲದ ವಿವಾದಗಳು ಈಗ ಏಕಾಏಕಿ ಭುಗಿಲೇಳುವುದಕ್ಕೂ ಕಾರಣವಿದೆ. ದೇಶದಲ್ಲಿ ಸ್ವಾತಂತ್ರ್ಯ ಬಂದಾಗಿನಿಂದಲೂ ಮತ ಬ್ಯಾಂಕ್ ರಾಜಕಾರಣಕ್ಕೆ, ‘ಅಲ್ಪಸಂಖ್ಯಾತ’
ಬ್ರ್ಯಾಂಡ್‌ನಲ್ಲಿ ಮುಸ್ಲಿಮರ ಓಲೈಕೆಯನ್ನೇ ಬಹುತೇಕ ರಾಜಕೀಯ ಪಕ್ಷಗಳು ಮಾಡಿಕೊಂಡು ಬಂದಿವೆ. ಆದರೀಗ ಬಿಜೆಪಿ ಅಽಕಾರದಲ್ಲಿ ಇರುವ ರಾಜ್ಯದಲ್ಲಿ ಟ್ರೆಂಡ್ ಬದಲಾಗಿ, ಹಿಂದುತ್ವದ ಆಧಾರದಲ್ಲಿ ರಾಜಕೀಯ ನಡೆಯುತ್ತಿದೆ.

ಅದೇ ಕಾರ್ಡ್‌ನ್ನು ಬಳಸಲು ಬಿಜೆಪಿ ನಾಯಕರು ಕರ್ನಾಟಕದಲ್ಲಿಯೂ ಮುಂದಾದರು. ಆರಂಭದಲ್ಲಿ ಕೊಂಚ ಯಶಸ್ಸು ಸಿಕ್ಕರೂ ಇದೀಗ ಈ ರೀತಿಯ ಅರ್ಥವಿಲ್ಲದ ಹೋರಾಟಗಳಿಗೆ ಕಾರಣವಾಗುತ್ತಿದೆ. ಈ ಹಿಂದೆ ಅಲ್ಪಸಂಖ್ಯಾತರ ಓಲೈಕೆಯ ಸಮಯದಲ್ಲಿ ಹಿಂದೂಗಳು ಬಹುಸಂಖ್ಯಾತರಾಗಿದ್ದರೂ, ದೇಶದಲ್ಲಿ ಅಲ್ಪಸಂಖ್ಯಾತರ ರೀತಿಯಲ್ಲಿ ಬದುಕಬೇಕಾದ ಸ್ಥಿತಿಯಿತ್ತು. ಆದರೀಗ ಟ್ರೆಂಡ್ ಬದಲಾಗುತ್ತಿರುವು ದರಿಂದ ಬಹುಸಂಖ್ಯಾತರಾದ ನಮಗೂ ಬಲವಿದೆ ಎನ್ನುವುದನ್ನು ತೋರಿಸುವ ಅತ್ಯುತ್ಸಾಹದಲ್ಲಿ ಕೆಲವೊಮ್ಮೆ ಈ ರೀತಿಯ ಎಡವಟ್ಟು ಗಳನ್ನು ಮಾಡುತ್ತಿದ್ದಾರೆ.

ಆದರೆ ಧರ್ಮದ ಆಧಾರದಲ್ಲಿಯೇ ದೇಶ ಅಥವಾ ರಾಜ್ಯ ನಡೆಸಲು ಸಾಧ್ಯವಿಲ್ಲ. ಅದರಲ್ಲಿಯೂ ಭಾರತದಂತ ಪ್ರಜಾಪ್ರಭುತ್ವ, ಜಾತ್ಯ ತೀಯ ರಾಷ್ಟ್ರದಲ್ಲಿ ಇದು ಕನಸಿನ ಮಾತು. ನಮ್ಮ ಸಂವಿಧಾನದಲ್ಲಿಯೇ ನಮ್ಮದ್ದು ಜಾತ್ಯತೀತ ರಾಷ್ಟ್ರ ಎಂದು ಹೇಳಿಕೊಂಡಿರುವುದರಿಂದ ಆ ರೀತಿಯ ವ್ಯವಸ್ಥೆ ಇಲ್ಲಿ ಬರಲು ಸಾಧ್ಯವೇ ಇಲ್ಲ. ಪಾಕಿಸ್ತಾನ ಅಥವಾ ಮುಸ್ಲಿಂ ರಾಷ್ಟ್ರಗಳಲ್ಲಿ ಇರುವಂತ ಧರ್ಮಾಧಾರಿತ ಕಾನೂನು ಗಳನ್ನು ಭಾರತ ದಲ್ಲಿ ತರಬೇಕು ಎನ್ನುವ ಕನಸು ಯಾರಾದರೂ ಕಾಣುತ್ತಿದ್ದರೆ, ಅದು ದೇಶಕ್ಕೆ ಹಾಗೂ ನೆಲದ ಕಾನೂನಿಗೆ ಅಪಮಾನ ವಾಗುತ್ತದೆ.

ಯಾವುದೇ ಒಂದು ಹೋರಾಟ, ಅಭಿಯಾನಕ್ಕೆ ತನ್ನದೇ ಯಾದ ತಾರ್ತಿಕ ಅಂತ್ಯ ಎನ್ನುವುದು ಇರಬೇಕು. ಹಿಜಾಜ್, ಹಲಾಲ್, ಹಿಂದು ದೇವಾಲಯದೊಳಗೆ ಮುಸ್ಲಿಂ ವ್ಯಾಪಾರಿಗಳಿಗೆ ನಿರ್ಬಂಧದ ಹೋರಾಟಕ್ಕೆ ತಮ್ಮದೇಯಾದ ವಾದಗಳಿದ್ದವು. ಆದ್ದರಿಂದ ಅದನ್ನು ಒಪ್ಪಲೇ ಬೇಕಿತ್ತು. ಆದರೀಗ ಬರುತ್ತಿರುವ ಹಲವು ಹೋರಾಟದ ದಾರಿಗಳು, ದೇಶ ಕಟ್ಟುವ ಕೆಲಸಕ್ಕಿಂತ ಹಾಳು ಮಾಡುವತ್ತ ಹೆಚ್ಚು ಸೆಳೆಯುವು ದರಲ್ಲಿ ಅನುಮಾನವಿಲ್ಲ. ಈಗಲೂ ರಾಜ್ಯದ ಬಹುತೇಕ ಭಾಗದಲ್ಲಿ ‘ಹಿಂದು-ಮುಸ್ಲಿಂ’ ಭಾಯಿ- ಭಾಯಿ ಎನ್ನುವಂತೆಯೇ ಇದ್ದಾರೆ. ಅಂತಹ ಸಾಮರಸ್ಯವನ್ನು ಯಾವುದೋ ಒಂದು ಸಂಘಟನೆ ಅಥವಾ ಪಕ್ಷ ರಾಜಕೀಯಕ್ಕಾಗಿ ಹಾಳುವ ಮಾಡುವ ಪ್ರಯತ್ನಕ್ಕೆ ಯಾರೂ ಕೈಹಾಕ ಬಾರದು. ಹಾಕಿದರೂ, ಅದನ್ನು ಜನರು ಒಪ್ಪಬಾರದು.