Saturday, 30th November 2024

ಅಳಿವಿನಂಚಿನ ಜೀವಿಗಳ ಸಾಲಿಗೆ ನಾವೂ – ನೀವೂ

ಸುಪ್ತ ಸಾಗರ

ರಾಧಾಕೃಷ್ಣ ಎಸ್.ಭಡ್ತಿ

rkbhadti@gmail.com

ವರ್ಷಕ್ಕೆ 45 ಸಾವಿರ ಟನ್ ಕೀಟನಾಶಕವನ್ನು ಬಳಸುತ್ತಿರುವ ಭಾರತದಲ್ಲಿ ಬಹುಶಃ ಇದಕ್ಕಿಂತ ಇನ್ನೂ ಉತ್ತಮ ಗುಣಮಟ್ಟದ ನೀರು ಸಿಗಲು ಸಾಧ್ಯವೇ ಇಲ್ಲವೆನಿಸುತ್ತದೆ. ಎಷ್ಟೇ ಸಂಸ್ಕರಿಸಿದರೂ ಅಂತರ್ಜಲವೇ ವಿಷಯುಕ್ತವಾಗಿರು ವಾಗ ಶುದ್ಧ ನೀರು ಮರೀಚಿಕೆಯಾಗು ವುದು ಸಹಜ.

ಹೀಗೆಯೇ ಮುಂದುವರಿದರೆ, ಮನುಷ್ಯನೂ ಭೂಮಿಯ ಮೇಲಿನ ಅಳಿವಿನಂಚಿನ ಜೀವಿಯಾಗಿಯೋ ಬದಲಾದರೆ, ಕೊನೆಗೆ ಡೈನೋಸಾರ್‌ ಗಳಂತೆ ಅಳಿದು ಹೋದರೂ ಅಚ್ಚರಿಯಿಲ್ಲ!  ಹೌದು, ಒಂದು ರೀತಿಯಲ್ಲಿ ದೇಶಕ್ಕೆ ದೇಶವೇ ಕಂಗಾಲಾಗಿ ಕುಳಿತಿದೆ. ಒಗ್ಗರಣೆ ಘಾಟಿಗೆ ಒಂದೇ ಒಂದು ಸೀನು ಬಂದರೂ ಇಡೀ ಮನೆಯವರು ಒಮ್ಮೆ ಕಂಗಾ ಲಾಗುತ್ತಿದ್ದಾರೆ. ತಿನ್ನುವಾಗ ನೆತ್ತಿಗೆ ಹತ್ತಿ ಕೆಮ್ಮು ಬಂದರೂ ಕ್ಯಾನ್ಸರ್ರೇ ಕದ ಬಡಿದವ ರಂತೆ ಆಡುತ್ತಿದ್ದಾರೆ. ಮಾಮೂಲಿಗಿಂತ ಮೈ ಒಂಚೂರು ಬೆಚ್ಚಗಾದರೂ ಬೆಚ್ಚಿ ಬೀಳು ತ್ತಿದ್ದಾರೆ.

ಮಕ್ಕಳ ತಲೆ ತುಸು ಬಿಸಿಯಾದರೂ ಸಾಕು ಅಪ್ಪ ಅಮ್ಮಂದಿರಿಗೆ ತಲೆಬಿಸಿಯೋ ತಲೆ ಬಿಸಿ. ಹಿಂದೆ ಮುಂದೆ ಯಾರಾದರೂ ಒಬ್ಬರು ಹಚ್ಚೆ ಹಾಕಿಸಿಕೊಂಡವರು ಸರಿದುಹೋದರೂ ಸಾಕು ಇಡೀ ಬಡಾವಣೆಯೇ ಜ್ವರಕ್ಕೆ ಬಿದ್ದು ಹೊರಳಾಡುವಂತೆ ಆಡುತ್ತದೆ. ಏನಿದು? ನಿಜವಾಗಿ ಮಹಾಮಾರಿಯೊಂದು ನಮ್ಮನ್ನು ಆವರಿಸಿದೆಯೇ? ಅಥವಾ ಸನ್ನಿಗೊಳಗಾಗಿ ಹೀಗಾಡುತ್ತಿದ್ದೇವೆಯೇ ? ಹೌದು, ಯಾವುದನ್ನೂ ಹಗುರವಾಗಿ ಪರಿಗಣಿಸುವ ಸ್ಥಿತಿಯಲ್ಲಿ ಇಂದು ಜಗತ್ತಿಲ್ಲ.

ಹಿಂದೆಲ್ಲ ಇದ್ದ ಪ್ಲೇಗು, ಮಲೇರಿಯಾ, ಕಾಲರಾದ ಬಳಿಕ ಆಧುನಿಕ ಯುಗದಲ್ಲಿ ಅವತರಿಸಿದ ಡೆಂ, ಚಿಕೂನ್ ಗುನ್ಯಾ, ಹಕ್ಕಿ ಜ್ವರ, ಹಂದಿ ಜ್ವರ, ಇದೀಗ ಕರೋನಾ… ಹೀಗೆ ದಿನಕ್ಕೊಂದು ಕಾಯಿಲೆಗಳು ನಮ್ಮನ್ನು ಬಾಧಿಸುತ್ತಲೇ ಇವೆ. ಈ ಹಿಂದೆ ಇವೆಲ್ಲ ಎಲ್ಲಿದ್ದವು. ಇದ್ದಕ್ಕಿದ್ದಂತೆ ಇವು ಬರುತ್ತಿರುವು ದಾದರೂ ಏಕೆ? ಒಮ್ಮೆಯೂ ನಾವು ಯೋಚಿಸುತ್ತಿಲ್ಲ. ಇಷ್ಟೆಲ್ಲ ಭಾನಗಡಿ ಆದದ್ದು ಚೀನಾದ ವೂಹಾನ್ ಮಾಂಸದ ಮಾರುಕಟ್ಟೆ ಯಿಂದ.

ಕಳೆದ ಡಿಸೆಂಬರ್‌ನಲ್ಲೇ ಆರಂಭವಾದ ಕರೋನಾ ಸಮಸ್ಯೆ ದಿನದಿಂದ ದಿನಕ್ಕೆ ವ್ಯಾಪಿಸುತ್ತಲೇ ಇದೆಯೇ ವಿನಃ ತಣಿಯುತ್ತಿಲ್ಲ. ಇವತ್ತಿನ ಸನ್ನಿವೇಶದಲ್ಲಿ ಒಂದೊಮ್ಮೆ ಈ ವೈರಸ್ ನಿಯಂತ್ರಣಕ್ಕೆ ಬಾರದಿದ್ದರೆ ಇಡೀ ಮನುಕುಲವೇ ವಿನಾಶದಂಚಿಗೆ ಹೋಗಿ ನಿಲ್ಲುವುದರಲ್ಲಿ ಅತಿಶಯವಿಲ್ಲ.

ಔಷಧ ಕಂಪನಿಗಳು, ವ್ಯಾಪಾರಿಗಳು ಇದನ್ನೇ ಬಂಡವಾಳ ಮಾಡಿಕೊಂಡು ತಮ್ಮ ಆದಾಯದ ಮಟ್ಟ ಏರಿಸಿಕೊಳ್ಳುತ್ತಿವೆ. ಟಾಮಿ ಫ್ಲೂ, ರೆಲೆನ್ಸಾ, ಪ್ಯಾರಾಸಿಟಮಾಲ್ ಮತ್ತಿತರ ಔಷಧಗಳಿಗೆ ಬೇಡಿಕೆ ಪ್ರಮಾಣ ಹೇಗೆ ಏರಿದೆ ಎಂದರೆ ಅದು ಕೂಡ ಕಾಳಸಂತೆಯ ಸರಕಾಗಿ ಬದಲಾಗಿದೆ. ಜೀವ ರಕ್ಷಕ ಔಷಧ ಮಾರಾಟವೂ ದಂಧೆಯಾಗಿ ಪರಿವರ್ತಿತವಾಗಿದೆ. ಆ ಹೆಸರಿನಲ್ಲಿ ಯಾವುದೇ ನೀರನ್ನು
ಚುಚ್ಚಿದರೂ, ಮಾಮೂಲಿ ಜ್ವರದ ಮಾತ್ರೆ ಕೊಟ್ಟರೂ ಕ್ಷಣವೂ ಯೋಚಿಸದೇ ಸಾವಿರಾರು ರುಪಾಯಿ ತೆತ್ತು ನುಂಗಿ ನೀರು ಕುಡಿ ಯುವ ಹಂತವನ್ನು ತಲುಪಿದ್ದೇವೆ.

ಮುಖಕ್ಕೆ ಕರವಸ್ತ್ರ ಕಟ್ಟಿಕೊಂಡು ಓಡಾಡಿದರೆ ತೃಪ್ತಿ ಇಲ್ಲ. ತ್ರೀ ಮೈಕ್ರಾನ್ ಗಾತ್ರದ ಸೂಕ್ಷ್ಮ ಜೀವಾಣುಗಳೂ ಒಳ ಪ್ರವೇಶಿಸದಂತೆ ತಡೆಯುವ ಮೆಡಿಕೇಟೆಡ್ ಮಾಸ್ಕ್ ಅನ್ನೇ ಹಾಕಿಕೊಂಡು ಮಕ್ಕಳೂ ಖಾಲಿ ಬೀದಿಗಳಲ್ಲಿ ಕ್ರಿಕೆಟ್ ಆಡುತ್ತಿವೆ. ಮಕ್ಕಳು ಎಷ್ಟು ದಿನ ಪಂಜರದಲ್ಲಿ ಕುಳಿತಾವು? ಆಡಲು ಹೋಗಲೇಬೇಕೆಂದು ಹಠ ಮಾಡುವ ಅವರನ್ನು ಮಾಸ್ಕ್ ಕಳಚದಂತೆ ಹೆತ್ತವರು ತಾಕೀತು ಮಾಡಿ ಕಳಿಸಿರುತ್ತಾರೆ. ಅನಿವಾರ್ಯವಾಗಿ ಮೂರು ರುಪಾಯಿಯ ಮಾಸ್ಕ್‌ಗೆ ನೂರಾರು ರು. ತೆರುತ್ತಿದ್ದೇವೆ. ಅದು ಕಿರಿಕಿರಿ
ಎನಿಸು ತ್ತಿದ್ದರೂ ಮಕ್ಕಳು ಸಹಿಸಿಕೊಂಡು ಆಡುತ್ತಿವೆ.

ಮನೆಯಲ್ಲೇ ಲಾವಂಚದ ಬೇರು, ಜೀರಿಗೆ, ತುಳಸಿ ಹಾಕಿ ಕುದಿಸಿದ, ಪಚ್ಚ ಕರ್ಪೂರ ಬೆರೆಸಿದ ಸುವಾಸನಾಯುಕ್ತ ನೀರಿನ ಮೇಲೆ ನಮಗೆ ನಂಬಿಕೆ ಬರುವುದೇ ಇಲ್ಲ. ನೂರಾರು ರುಪಾಯಿ ಕೊಟ್ಟರೂ ಪರವಾಗಿಲ್ಲ, ರಿಸ್ಕ್ ಏಕೆಂದುಕೊಂಡು ಲಾಕ್‌ಡೌನ್ ಎಷ್ಟು ದಿನದವರೆಗೋ ಎಂದುಕೊಂಡು ಮಿನರಲ್ ವಾಟರ್ ಕ್ಯಾನ್‌ಗಳನ್ನೇ ತರಿಸಿ ಮನೆಯಲ್ಲಿ ಪೇರಿಸಿಟ್ಟುಕೊಳ್ಳುತ್ತೇವೆ. ಸತ್ಯ, ಇವೆಲ್ಲಕ್ಕೂ ಒಂದಲ್ಲ ಒಂದು ರೀತಿಯಲ್ಲಿ ನಾವು ಸೇವಿಸುತ್ತಿರುವ ನೀರು-ಗಾಳಿಯೇ ಕಾರಣ. ಅವುಗಳ ಬಗೆಗಿನ ಶುದ್ಧತೆಯ ಕಾಳಜಿ ದೈನಂದಿನ ಬದುಕಿನ ಭಾಗವಾಗಿರಬೇಕು.

ಆದರೆ, ಇಂಥ ಸಾಂಕ್ರಾಮಿಕಗಳ ಭೀತಿ ಬಂದಾಗ ಮಾತ್ರ ಗರಬಡಿದವರಂತೆ ಆಡುತ್ತ, ಶುದ್ಧತೆಯ ಮಾತನಾಡುವ ನಾವು ಉಳಿದ ಸಂದರ್ಭದಲ್ಲಿ ಅಸೀಮ ನಿರ್ಲಕ್ಷ್ಯದೊಂದಿಗೆ ಇದ್ದು ಬಿಡುವುದೇಕೋ? ಒಂದು ಮಾತು ನೆನಪಿಡಲೇಬೇಕು, ನೀರು ಸೇರಿದಂತೆ ಅಶುದ್ಧ ಪರಿಸರ ಇಡೀ ಮಾನವ ಬದುಕನ್ನೇ ಅಸ್ಥಿರಗೊಳಿಸುತ್ತಿದೆ. ದೇಶದ ಸಾಮಾಜಿಕ-ಆರ್ಥಿಕ ಅಭಿವೃದ್ಧಿಯನ್ನೇ ಇದು
ಬುಡಮೇಲು ಮಾಡುತ್ತಿದೆ ಎಂದರೆ ಅಚ್ಚರಿ ಎನಿಸಬಹುದು. ಆದರೆ ಇದು ಸತ್ಯ.

ಶುದ್ಧ, ಕಲುಷಿತರಹಿತ, ಆರೋಗ್ಯಪೂರ್ಣ ನೀರು- ಗಾಳಿ ಮಾತ್ರ ಅಭಿವೃದ್ಧಿ ಸೂಚ್ಯಂಕವನ್ನು ಏರುಮುಖಗೊಳಿಸಬಹುದು. ಸಾಂಕ್ರಾಮಿಕಗಳಿಂದ ಮುಕ್ತ, ಬ್ಯಾಕ್ಟೀರಿಯಾ ರಹಿಷಿಕ್ಷಿ, ರಾಸಾಯನಿಕಗಳಿಂದ ದೂರವಿರುವ ನೀರು ನಿಜವಾದ ಅಭಿವೃದ್ಧಿಯ ಸಂಕೇತ. ನಿಮಗೆ ಗೊತ್ತೇ? ವರ್ಷಕ್ಕೆ ೪೫ ಸಾವಿರ ಟನ್ ಕೀಟನಾಶಕವನ್ನು ಬಳಸುತ್ತಿರುವ ಭಾರತದಲ್ಲಿ ಇದಕ್ಕಿಂತ ಉತ್ತಮ ಗುಣ
ಮಟ್ಟದ ನೀರು-ಗಾಳಿ ಸಿಗಲು ಸಾಧ್ಯವೇ? ಮುಂದುವರಿದ ರಾಷ್ಟ್ರಗಳ ಸಾಲಿನತ್ತ ದಾಪುಗಾಲಿಡುತ್ತಿರುವ ಭಾರತ ಈ ದೃಷ್ಟಿಯಿಂದ ಎಷ್ಟರ ಮಟ್ಟಿಗೆ ಅಭಿವೃದ್ಧಿಯನ್ನು ಸಾಧಿಸಿದೆ? ಬಹುಶಃ ಇದು ಪ್ರಶ್ನೆಯಾಗಿಯೇ ಉಳಿದುಕೊಳ್ಳುತ್ತದೆ.

ಕರೋನಾ ನೀರು-ಗಾಳಿಯಿಂದ ಹರಡುವುದಿಲ್ಲ ಎಂದು ತಜ್ಞರು ಹೇಳುತ್ತಿದ್ದಾರೆ. ಆದರೆ, ನಮ್ಮಿಂದಾಗಿ ಆಗಿರುವ ಪರಿಸರ ಮಾಲಿನ್ಯ ಕರೋನಾಕ್ಕಿಂತಲೂ ಭೀಕರ ಭವಿಷ್ಯವನ್ನು ಬರೆಯುತ್ತಿದೆ. ಮೇಲ್ನೋಟಕ್ಕೆ ನಾವು ಪಟ್ಟಿ ಮಾಡಹೊರಟರೆ ನೀರಿ ನಿಂದಲೇ ಹರಡುವ ಏನಿಲ್ಲವೆಂದರೂ ಒಂದು ಹತ್ತಿಪ್ಪತ್ತು ಕಾಯಿಲೆಗಳನ್ನು ಹೆಸರಿಸಬಹುದು. ನೀರಿನ ವೈರಾಣುಗಳಿಂದ ಹರಡ ಬಹುದಾದ ವೈರಲ್ ಫೀವರ್, ಹೆಪಟೈಟಿಸ್, ಪೊಲಿಯೋ ಇತ್ಯಾದಿಗಳು ಸಾಮಾನ್ಯವೆಂಬಂತಾಗಿದೆ.

ಇನ್ನು ಬ್ಯಾಕ್ಟೀರಿಯಾಗಳಿಂದ ಬರುವ ಟೈಫಾಯ್ಡ್, ಪ್ಯಾರಾ ಟೈಫಾಯ್ಡ್, ಕಾಲರಾ, ಸೂಕ್ಷ್ಮಾಣುಗಳಿಂದ ಬರುವ ಭೇದಿ (ಬ್ಯಾಸೆಲರಿ ಡೀಸೆಂಟ್ರಿ) ಡಯೇರಿಯಾ ಇತ್ಯಾದಿಗಳಲ್ಲದೆ ಅಮೀಬಿ ಯಾಸಿಸ್‌ನಂಥ ಮಾರಕ ರೋಗಗಳ ನಿರ್ಮೂಲನೆ ನಮ್ಮಿಂದ ಸಾಧ್ಯವೇ ಆಗಿಲ್ಲ. ಜಂತುಗಳ ಹಾವಳಿಯಂತೂ ಅಶುದ್ಧ ನೀರಿನ ಬಹುದೊಡ್ಡ ಬಳುವಳಿ. ಇದಲ್ಲದೇ ಸ್ಕಿಸ್ಟೋಸೋಮಿಯಾಸಿಸ್, ಗುನ್ಯಾ, ಮೀನಿನ ಬಾಲದ ಜಂತುವಿನ ಬಾಧೆ ಅಸಹನೀಯ ವೇದನೆಗೆ ಮಾನವನನ್ನು ತುತ್ತಾಗಿಸುತ್ತಿವೆ.

ಚರ್ಮ ಸಂಬಂಧಿ ರೋಗಗಳು, ಹಲ್ಲಿನ ತೊಂದರೆಗಳು, ಮೂಳೆಗಳಿಗಾಗುತ್ತಿರುವ ಧಕ್ಕೆ… ಇಂಥವುಗಳನ್ನು ಬಹುತೇಕರು ಗಂಭೀರ ವಾಗಿ ಪರಿಗಣಿಸುತ್ತಲೇ ಇಲ್ಲ. ಹೀಗಾಗಿ ಇದು ಗಣನೆಗೆ ಸಿಗುತ್ತಿಲ್ಲ. ಆದರೆ ಇವುಗಳು ಉಲ್ಬಣಾವಸ್ಥೆಯಲ್ಲಿ ಮಾತ್ರ ತೀರಾ ಅಸಹ ನೀಯ. ಇನ್ನು ಫ್ಲೋರೋಸಿಸ್‌ನಂಥ ಕಾಯಿಲೆಗಳು ಸಾಮೂಹಿಕ ಪರಿಣಾಮ ಬೀರುತ್ತಿರುವುದರಿಂದ ಹಲವಾರು ವರ್ಷಗಳ ಬಳಿಕ ಇತ್ತೀಚೆಗೆ ಸುದ್ದಿ ಮಾಡಲಾರಂಭಿಸಿದೆ.

ಎಷ್ಟೋ ಬಾರಿ ಅಶುದ್ಧ, ಅಸಮತೋಲಿತ ನೀರಿನ ಸೇವನೆ, ಜಠರ, ಮೂತ್ರಕೋಶಗಳಂಥ ಪ್ರಮುಖ ಅಂಗಗಳಿಗೆ ಹಾನಿ ತಂದು ಜೀವವನ್ನೇ ಬಲಿ ತೆಗೆದುಕೊಂಡಿರುವ ಉದಾಹರಣೆಗಳೂ ಇವೆ. ಇವೆಲ್ಲದರ ನಡುವೆಯೂ ನಾವು ನಲ್ಲಿಯಲ್ಲಿ ಬರುವ ನೀರನ್ನು ಕಣ್ಣು ಮುಚ್ಚಿಕೊಂಡು ಕುಡಿದಿದ್ದೇವೆ; ಕುಡಿಯುತ್ತಿದ್ದೇವೆ. ಕನಿಷ್ಠ ಆ ನೀರಿನ ಮೂಲ ಯಾವುದು ಎಂಬುದರ ಬಗ್ಗೆಯೂ ಯೋಚಿಸಿಲ್ಲ.

ಇಂಥ ಸಂದರ್ಭದಲ್ಲಿ ಸಂಸ್ಕರಣೆ ಎಂಬ ಪ್ರಶ್ನೆಯೇ ಇಲ್ಲ. ಇಷ್ಟಕ್ಕೂ ಸಂಸ್ಕರಣೆ ಎಂದರೇನು? ಸಾಮಾನ್ಯವಾಗಿ ಬೃಹತ್ ಪ್ರಮಾಣ ದಲ್ಲಿ ನೀರು ಪೂರೈಕೆಯ ಸಂದರ್ಭ ದಲ್ಲಿ ಮರಳಿನ ಮೂಲಕ ಸೋಸುವುದೇ ಹೆಚ್ಚು. ನೈಸರ್ಗಿಕವಾಗಿ ಮಣ್ಣು, ಮರಳು ಗಳಲ್ಲಿ ಜಿನುಗಿದಾಗ, ಸೂರ್ಯ ರಶ್ಮಿಯ ನೇರ ಸಂಪರ್ಕದಲ್ಲಿ ನೀರು ಶುದ್ಧಗೊಳ್ಳುತ್ತದೆ. ಇದಲ್ಲದೇ ನೀರನ್ನು ಆಲಂ (ಬಣ್ಣ ರಹಿತವಾದ, ಸಾಮಾನ್ಯವಾಗಿ ಔಷಧಗಳಲ್ಲಿ ಬಳಸುವ ಒಂದು ಸಂಯುಕ್ತ ವಸ್ತು) ಜತೆ ಬೆರೆಸಿಯೂ ಸಂಸ್ಕರಿಸುವ ಪದ್ಧತಿ ಇದೆ. ಇದಾದ ಬಳಿಕ ಮರಳಿನ ಹಾಸಿನ ಮೂಲಕ ನೀರನ್ನು ಹಾಯಿಸಿ, ನಂತರ ಕ್ಲೋರಿನ್‌ಯುಕ್ತ ಅನಿಲ, ದ್ರಾವಣಗಳನ್ನು ಬೆರೆಸಿ ಕೊಳಾಯಿಗಳ ಮೂಲಕ ಪೂರೈಸಲಾಗುತ್ತದೆ.

ಇಷ್ಟಾದ ಮಾತ್ರಕ್ಕೆ ನೀರು ಶುದ್ಧವೆನ್ನಲಾಗದು. ಮೇಲ್ನೋಟಕ್ಕೆ ನೀರು ತಿಳಿಯಾಗಿ ಕಂಡರೂ ಅದರಲ್ಲಿ ಜೈವಿಕ, ರಾಸಾಯನಿಕ ಅಂಶ ಇರಬಹುದು. ಸಂಸ್ಕರಣಾ ಕೇಂದ್ರದಿಂದ ಪೂರೈಸಲಾದ ಬಳಿಕವೂ ನೀರು ಅಶುದ್ಧಗೊಳ್ಳುವ ಸಾಧ್ಯತೆಗಳಿವೆ. ವಿಶಾಲ ಪೈಪ್ ಜಾಲದಲ್ಲಿ, ಸಂಗ್ರಹಣಾ ಟ್ಯಾಂಕ್‌ಗಳಲ್ಲಿ, ಡ್ರೈನೇಜ್‌ಗಳ ಸೋರಿಕೆಯಿಂದ ನೀರು ಕಲುಷಿತಗೊಳ್ಳುವುದೇ ನಗರ ಪ್ರದೇಶ ಗಳಲ್ಲಿ ಹರಡುವ ಸಾಂಕ್ರಾಮಿಕ ರೋಗಗಳಿಗೆ ಮೂಲ ಕಾರಣ. ನೀರಿನ ಕಲುಷಿತತೆ, ಅವುಗಳಲ್ಲಿ ಅಪಾಯಕಾರಿ ಕೀಟನಾಶಕ ಅಂಶಗಳಿರುವ ಕುರಿತಾದ ಕೂಗು ಎದ್ದಿರುವುದು ಇಂದು ನಿನ್ನೆಯದಲ್ಲ. ದಶಕಗಳಿಂದಲೂ ಈ ಸಂಬಂಧ ಒಂದಲ್ಲ ಒಂದು ವೇದಿಕೆಯಲ್ಲಿ ಚರ್ಚೆ ನಡೆಯುತ್ತಲೇ ಇದೆ.

೨೦೦೩ರಲ್ಲಿ ದಿಲ್ಲಿಯ ವಿಜ್ಞಾನ ಮತ್ತು ಪರಿಸರ ಕೇಂದ್ರ (ಸಿಎಸ್‌ಇ) ಹಲವು ಕಂಪನಿಗಳ ಬಾಟಲಿ ನೀರಿನ ನಮೂನೆಗಳನ್ನು ಪರೀಕ್ಷೆಗೊಳಪಡಿಸಿ ಬಹುತೇಕವುಗಳಲ್ಲಿ ಅತ್ಯಂತ ವಿಷಯುಕ್ತ ರಾಸಾಯನಿಕ ಅದರಲ್ಲೂ ಕೀಟನಾಶಕಗಳ ಪ್ರಮಾಣ ನಿಗದಿತ ಮಟ್ಟಕ್ಕಿಂತಲೂ ಹೆಚ್ಚಿದೆ ಎಂದು ಸಾರಿತು. ದೇಶದ ತುಂಬೆಲ್ಲ ಆಗ ದೊಡ್ಡ ಹುಯಿಲೆದ್ದಿತ್ತು. ಶುದ್ಧ ಕುಡಿಯುವ ನೀರಿನ ಹಕ್ಕಿನ ಕುರಿತಾಗಿ ಬಹುದೊಡ್ಡ ಚರ್ಚೆ ನಡೆಯಿತು. ಸಿಎಸ್‌ಇ ಯುರೋಪಿಯನ್ ಮಾನದಂಡದಲ್ಲಿ ನೀರಿನ ಪರೀಕ್ಷೆ ನಡೆಸಿತ್ತು ಎಂಬುದು ಗಮನಾರ್ಹ ಅಂಶ.

ಭಾರತ ನಿಗದಿಪಡಿಸಿರುವ ಕುಡಿಯುವ ನೀರಿನ ಗುಣಮಟ್ಟದ ಮಾನದಂಡ ಅಸಮರ್ಪಕ ಹಾಗೂ ಗೊಂದಲಮಯ ಎಂಬುದು ಇದಕ್ಕೆ ಕಾರಣ. ನೀರಿನ ಕುರಿತಾದ ನಮ್ಮ ಅವಸ್ಥೆ ಎಷ್ಟರ ಮಟ್ಟಿಗಿದೆ ಎಂದರೆ ಕೊನೆ ಪಕ್ಷ ಅದಕ್ಕೊಂದು ಸ್ಪಷ್ಟ ಮಾನದಂಡ ವನ್ನೂ ನಾವು ನಿಗದಿ ಪಡಿಸಿಕೊಂಡಿಲ್ಲ. ಬಾಟಲಿ ನೀರಿನಲ್ಲಿ ಕೀಟನಾಶಕ ಅಂಶಗಳು ಕಂಡು ಬಂದದ್ದರಲ್ಲಿ ವಿಶೇಷವೇನಿಲ್ಲ. ಬಹುಶಃ ಇಂದು ಮತ್ತೆ ಪರೀಕ್ಷೆ ನಡೆಸಿದರೆ ಅಂದಿನಕ್ಕಿಂತಲೂ ಹೆಚ್ಚು ವಿಷಕಾರಿ ಅಂಶ ಪತ್ತೆಯಾಗಬಹುದು.

ವರ್ಷಕ್ಕೆ ೪೫ ಸಾವಿರ ಟನ್ ಕೀಟನಾಶಕವನ್ನು ಬಳಸುತ್ತಿರುವ ಭಾರತದಲ್ಲಿ ಬಹುಶಃ ಇದಕ್ಕಿಂತ ಇನ್ನೂ ಉತ್ತಮ ಗುಣಮಟ್ಟದ ನೀರು ಸಿಗಲು ಸಾಧ್ಯವೇ ಇಲ್ಲವೆನಿಸುತ್ತದೆ. ಎಷ್ಟೇ ಸಂಸ್ಕರಿಸಿದರೂ ಅಂತರ್ಜಲವೇ ವಿಷಯುಕ್ತವಾಗಿರುವಾಗ ಶುದ್ಧ ನೀರು ಮರೀಚಿಕೆಯಾಗುವುದು ಸಹಜ. ಆದರೆ ಆತಂಕವೆಂದರೆ ಪ್ರತಿದಿನ ಮಿಲಿಯನ್‌ಗಟ್ಟಲೆ ಗ್ಯಾಲನ್ ನೀರನ್ನು ನಮ್ಮ ಹಳ್ಳಿಯ ಮಂದಿ ಭೂಮಿಯಿಂದ ಎತ್ತಿ ಸಂಸ್ಕರಿಸದೇ ನೇರವಾಗಿ ಕುಡಿಯುತ್ತಿದ್ದಾರೆ. ಅವರು ಬಳಸುವ ನೀರಿನಲ್ಲಿ ಇನ್ನೆಷ್ಟು ಪ್ರಮಾಣದ ಕಲ್ಮಷ ವಿದ್ದೀತು? ಪರಿಸರದ ಮೇಲಿನ ದೌರ್ಜನ್ಯ ಹೀಗೆಯೇ ಮುಂದುವರಿದರೆ, ನೀರು-ಗಾಳಿಗಳನ್ನು ಹೀಗೆಯೇ ಕಲುಷಿತಗೊಳಿಸುತ್ತ ಹೋದರೆ, ಅರಣ್ಯಗಳನ್ನು ಕಡಿದು ಬಡಾವಣೆಗಳನ್ನು ಮಾಡುತ್ತಲೇ ಹೋದರೆ, ಎಲ್ಲ ನದಿಗಳಿಗೆ ಕೊಳಚೆಯನ್ನು ಬಿಟ್ಟು ವೃಷಭಾವತಿಗಳನ್ನಾಗಿಸುತ್ತ ಸಾಗಿದರೆ, ಕೆರೆ-ಕುಂಟೆಗಳನ್ನು ಬಯಲಾಗಿಸುತ್ತ, ಬಸ್‌ನಿಲ್ದಾಣ- ಶಾಪಿಂಗ್ ಕಾಂಪ್ಲೆಕ್ಸ್‌ಗಳನ್ನು ಕಟ್ಟುತ್ತಲೇ ಇದ್ದರೆ ಕರೋನಾವನ್ನೂ ಮೀರಿಸುವ ರೋಗಗಳ ದಿನಕ್ಕೊಂದರಂತೆ ಹುಟ್ಟಿ, ಇಡೀ ಜಗತ್ತನ್ನೇ ಆಪೋಷನ ತೆಗೆದು ಕೊಂಡು, ಮನುಷ್ಯನೂ ಭೂಮಿಯ ಮೇಲಿನ ಅಳಿವಿನಂಚಿನ ಜೀವಿಯಾಗಿಯೋ ಬದಲಾದರೆ, ಕೊನೆಗೆ ಡೈನೋಸಾರ್‌ಗಳಂತೆ
ಅಳಿದು ಹೋದರೂ ಅಚ್ಚರಿಯಿಲ್ಲ!