Thursday, 19th September 2024

ಕುಮಾರಸ್ವಾಮಿ ಕೈಲಿ ಕೆಸಿಆರ್‌ ಸುಪಾರಿ

ಮೂರ್ತಿ ಪೂಜೆ

ಕೆಲ ದಿನಗಳ ಹಿಂದೆ ಮಾಜಿ ಮುಖ್ಯಮಂತ್ರಿ, ಜೆಡಿಎಸ್ ನಾಯಕ ಎಚ್.ಡಿ. ಕುಮಾರಸ್ವಾಮಿ ಅವರು ತೆಲಂಗಾಣದ ಮುಖ್ಯ ಮಂತ್ರಿ ಕೆ. ಚಂದ್ರಶೇಖರರಾವ್‌ರನ್ನು ಭೇಟಿ ಮಾಡಿದರು. ಈಚೀಚೆಗೆ ಜೆಡಿಎಸ್‌ನ ಸರ್ವೋಚ್ಚ ನಾಯಕ ಎಚ್.ಡಿ.ದೇವೇಗೌಡ ರನ್ನು ಕಂಡರೆ ವಿಪರೀತ ವಿಶ್ವಾಸ ಬೆಳೆಸಿಕೊಂಡಿರುವ ಚಂದ್ರಶೇಖರರಾವ್, ಈ ಭೇಟಿಯ ವೇಳೆ ಕುಮಾರಸ್ವಾಮಿ ಅವರಿಗೆ ಒಂದು ಸುಪಾರಿ ನೀಡಿದ ರಂತೆ.

ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಶತಾಯಗತಾಯ ಹೋರಾಡಿ, 130ರಿಂದ 140 ಸೀಟು ಗೆದ್ದು ಸ್ವಯಂಬಲದ ಮೇಲೆ ಅಧಿಕಾರ ಹಿಡಿಯಲು ಯತ್ನಿಸಿ. ಇದಕ್ಕೆ ನನ್ನಿಂದ ನಿಮಗೆ ನೆರವು ಸಿಗುತ್ತದೆ ಎಂಬುದೇ ಆ ಸುಪಾರಿ. ಕರ್ನಾಟಕ ರಾಜಕಾರಣದ ಕುರಿತಂತೆ ಇದುವರೆಗೆ ನಡೆದ ಸಮೀಕ್ಷೆಗಳು ಜೆಡಿಎಸ್ ಪಕ್ಷವನ್ನು 3ನೇ ಸ್ಥಾನದಲ್ಲಿರಿಸಿವೆ. ಪ್ರತಿಪಕ್ಷ ಕಾಂಗ್ರೆಸ್ ಮೊದಲ ಸ್ಥಾನದಲ್ಲಿದ್ದರೆ, ಆಡಳಿತಾರೂಢ ಬಿಜೆಪಿ 2ನೇ ಸ್ಥಾನದಲ್ಲಿದೆ ಎಂಬುದು ಈ ಸಮೀಕ್ಷೆಗಳ ಸದ್ಯದ ಲೆಕ್ಕಾಚಾರ.

ಆದರೆ ಇಂಥ ಪರಿಸ್ಥಿತಿ ಬದಲಿಸಿ ಕರ್ನಾಟಕದಲ್ಲಿ ಜೆಡಿಎಸ್ ನಂಬರ್ 1 ಆಗಿ ಹೊರಹೊಮ್ಮಬೇಕು, ಒಂದೊಮ್ಮೆ ಇದು ಸಾಧ್ಯವಾಗದಿದ್ದರೂ ಜೆಡಿಎಸ್ ಪ್ರಬಲ ಶಕ್ತಿಯಾಗಿ ಮೇಲೆದ್ದು ನಿಲ್ಲಬೇಕು ಎಂಬುದು ಚಂದ್ರಶೇಖರರಾವ್ ಬಯಕೆ. ಅವರ ಈ ಬಯಕೆಗೆ ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಮೇಲಿನ ಸಿಟ್ಟೇ ಕಾರಣ. ಏಕೆಂದರೆ ತೆಲಂಗಾಣ ಪ್ರತ್ಯೇಕ ರಾಜ್ಯದ ಸ್ಥಾನಮಾನ ಪಡೆಯಲು ಮುಖ್ಯ ಕಾರಣರಾದ ಚಂದ್ರಶೇಖರರಾವ್ ತೆಲಂಗಾಣದ ನಿರ್ವಿವಾದ ಚಕ್ರವರ್ತಿಯಾಗಲು ಬಯಸಿದ್ದರು.

ತೆಲಂಗಾಣದಲ್ಲಿ ಕಾಂಗ್ರೆಸ್ ಶಕ್ತಿ ಕಳೆದುಕೊಂಡರೆ ಸಹಜವಾಗಿಯೇ ತಮ್ಮ ಬಯಕೆ ಈಡೇರುತ್ತದೆ ಎಂದು ಲೆಕ್ಕ ಹಾಕಿದ್ದರು. ಕುತೂಹಲದ ಸಂಗತಿ ಎಂದರೆ ಅವರಂದುಕೊಂಡಂತೆ ತೆಲಂಗಾಣದಲ್ಲಿ ಕಾಂಗ್ರೆಸ್ ಪಕ್ಷದ ಶಕ್ತಿ ಕ್ಷೀಣಿಸುತ್ತ ಹೋಯಿತು. ಒಂದೆಡೆ ಕಾಂಗ್ರೆಸ್ ಶಕ್ತಿ ಕಡಿಮೆಯಾಗುತ್ತ ಹೋಗುತ್ತಿದ್ದಾಗ ಮತ್ತೊಂದೆಡೆ ಚಂದ್ರಶೇಖರರಾವ್ ಪ್ರಧಾನಿ ಮೋದಿ ಅವರನ್ನು ಸಿಕ್ಕಾಪಟ್ಟೆ ಹೊಗಳುತ್ತಿದ್ದರು. ಕಾರಣ? ರಾಜ್ಯದಲ್ಲಿ ಶತ್ರುಬಾಧೆ ಕುಂಠಿತವಾಗಿ, ಕೇಂದ್ರದ ಒಲವು ತೆಲಂಗಾಣದ ಮೇಲೆ ಇದ್ದರೆ ತಮ್ಮ ಲೆಕ್ಕಾಚಾರ ಈಡೇರುತ್ತದೆ ಎಂದು ಅವರು ಭಾವಿಸಿದ್ದರು.

ಆದರೆ ಇಡೀ ಭಾರತವನ್ನು ವಶಪಡಿಸಿಕೊಳ್ಳಲು ತಂತ್ರ ರೂಪಿಸುತ್ತಿರುವ ಮೋದಿ-ಅಮಿತ್ ಶಾ ತೆಲಂಗಾಣದ ವಿಷಯದಲ್ಲಿ ಸುಮ್ಮನೆ ಕೂರಲು ಸಾಧ್ಯವೇ? ಹಾಗಂತಲೇ ಅವರು ತೆಲಂಗಾಣದ ಮೇಲೂ ಕಣ್ಣು ಹಾಕಿದರು. ಅಷ್ಟೊತ್ತಿಗಾಗಲೇ ತೆಲಂಗಾಣದ ಮೊದಲ ಹಣಕಾಸು ಸಚಿವರಾದ, ಕರೀಂನಗರ ಜಿಲ್ಲೆ ಹುಜೂರಾಬಾದ್ ಕ್ಷೇತ್ರದ ಈಟಲ ರಾಜೇಂದ್ರ ಮತ್ತು ಮುಖ್ಯಮಂತ್ರಿ ಚಂದ್ರಶೇಖರರಾವ್ ನಡುವಣ ಸಂಬಂಧ ಹಳಸಿತ್ತಲ್ಲ? ಇದನ್ನು ಮೋದಿ- ಅಮಿತ್ ಶಾ ಜೋಡಿ ಎನ್‌ಕ್ಯಾಶ್ ಮಾಡಿಕೊಂಡಿತು.

ನೋಡನೋಡುತ್ತಿದ್ದಂತೆಯೇ ಈಟಲ ರಾಜೇಂದ್ರ ಕಮಲ ಪಾಳಯದ ಜತೆ ಕೈಜೋಡಿಸಿದರು. ಮತ್ತೋರ್ವ ನಾಯಕ
ರಘುನಂದನರಾವ್ ಕೂಡಾ ಕಮಲದ ಪಕಳೆಯ ಮೇಲೆ ಹಾರಿ ಕುಳಿತರು. ಪರಿಣಾಮ? ಒಂದು ಕಾಲದಲ್ಲಿ ರಾಜಾಸಿಂಗ್
ಅವರಂಥ ನಾಯಕರ ಕ್ಷೀಣಧ್ವನಿಗೆ ಸೀಮಿತವಾಗಿದ್ದ ಬಿಜೆಪಿ ತೆಲಂಗಾಣದಲ್ಲಿ ಇದ್ದಕ್ಕಿದ್ದಂತೆ ನಾಗಾಲೋಟ ಶುರು ಮಾಡಿತು.
ಹೈದರಾಬಾದ್‌ನ ಆರ್‌ಎಸ್‌ಎಸ್ ಕಚೇರಿ ಚುರುಕಾಯಿತು.

ಹೀಗಾಗಿ, ತಮಿಳುನಾಡಿನ ರಾಜಕೀಯದಲ್ಲಿ ಮೂಗು ತೂರಿಸಿದಂತೆ ತೆಲಂಗಾಣದ ರಾಜಕಾರಣದಲ್ಲೂ ಬಿಜೆಪಿ ಮೂಗು ತೂರಿಸುತ್ತಿದೆ. ಮುಂದಿನ ದಿನಗಳಲ್ಲಿ ತಮ್ಮ ಪಕ್ಷವನ್ನು ದುರ್ಬಲಗೊಳಿಸಿ ಅಧಿಕಾರ ಹಿಡಿಯಲು ಅದು ಬಯಸಿದೆ ಎಂಬುದು ಚಂದ್ರಶೇಖರರಾವ್ ಅವರಿಗೆ ಪಕ್ಕಾ ಆಯಿತು. ಹೀಗಾಗಿ ಪ್ರಧಾನಿ ಮೋದಿ ವಿರುದ್ಧ ತಿರುಗಿಬಿದ್ದ ಚಂದ್ರಶೇಖರರಾವ್ ಎಂದರಲ್ಲಿ ಅವರನ್ನು ಟೀಕಿಸತೊಡಗಿದರು. ಅಷ್ಟೇ ಅಲ್ಲ, ಬಿಜೆಪಿಯ ವಿರುದ್ಧ ರಾಷ್ಟ್ರಮಟ್ಟದಲ್ಲಿ ಒಂದು ಒಕ್ಕೂಟ ಮೇಲೇಳಬೇಕು ಅಂತ ಬಯಸಿದರು.

ಈ ಹಿನ್ನೆಲೆಯಲ್ಲಿ ಅವರು ತಮಿಳುನಾಡಿನ ಡಿ.ಎಂ.ಕೆ. ನಾಯಕ ಎಂ.ಕೆ. ಸ್ಟಾಲಿನ್ ಅವರಿಗೆ ಸ್ನೇಹಹಸ್ತ ಚಾಚಿದರು. ಅಲ್ಲಿ ತಲೆಯೆತ್ತಲು ಹೋರಾಟ ನಡೆಸಿದ್ದ ಬಿಜೆಪಿಗೆ ಹೊಡೆತ ಕೊಡಲು ಸ್ಟಾಲಿನ್ ಅವರಿಗೆ ತಮ್ಮಿಂದಾದ ನೆರವು ನೀಡಿದರು.
ಅವರ ನೆರವಿನಿಂದಲೇ ಡಿಎಂಕೆ ತಮಿಳುನಾಡಿನ ಅಧಿಕಾರ ಹಿಡಿಯಿತು ಎನ್ನಲಾಗದಿದ್ದರೂ, ಚಂದ್ರಶೇಖರಾವ್ ಸಹಕಾರ
ಸ್ಟಾಲಿನ್‌ರಿಗೆ ಅನುಕೂಲ ಮಾಡಿಕೊಟ್ಟಿದ್ದು ನಿಜ. ಹೀಗೆ ನೋಡನೋಡುತ್ತಿದ್ದಂತೆ ಚಂದ್ರಶೇಖರರಾವ್ ಮೋದಿ ವಿರುದ್ಧ ರಾಷ್ಟ್ರಮಟ್ಟದಲ್ಲಿ ಒಂದು ಒಕ್ಕೂಟ ಕಟ್ಟಲು ಹೊರಟಿದ್ದಾರೆ.

ಇದೇ ಕಾರಣಕ್ಕಾಗಿ ಬಿಹಾರದಲ್ಲಿ ನಿತೀಶ್ ಕುಮಾರ್ ಮತ್ತು ಆರ್.ಜೆ.ಡಿ.ಯ ತೇಜಸ್ವಿ ಯಾದವ್, ಕೇರಳದ ಪಿಣರಾಯಿ ವಿಜಯನ್, ತಮಿಳುನಾಡಿನ ಎಂ.ಕೆ.ಸ್ಟಾಲಿನ್, ಉತ್ತರ ಪ್ರದೇಶದ ಅಖಿಲೇಶ್ ಯಾದವ್, ಕರ್ನಾಟಕದ ದೇವೇಗೌಡ ಸೇರಿ ದಂತೆ ಹಲವರ ಆಪ್ತ ಸಂಪರ್ಕದಲ್ಲಿದ್ದಾರೆ. ಇಂಥ ನಾಯಕರನ್ನೆಲ್ಲ ಒಗ್ಗೂಡಿಸಿ ಒಕ್ಕೂಟ ರಚಿಸಿದರೆ ಮತ್ತು ಸಾಧ್ಯವಿರುವ ಕಡೆಯಲ್ಲಿ ಬಿಜೆಪಿಯನ್ನು ತಡೆದರೆ ಮುಂದಿನ ಲೋಕಸಭಾ ಚುನಾವಣೆ ವೇಳೆಗೆ ದೇಶದ ರಾಜಕಾರಣದಲ್ಲಿ ಹೊಸ ಅಲೆ
ಶುರುವಾಗಬಹುದು ಮತ್ತು ಈ ಅಲೆ ತೆಲಂಗಾಣದ ಚಕ್ರಾಧಿಪತಿಯಾಗುವ ತಮ್ಮ ಕನಸಿಗೆ ತಂಪೆರೆಯುತ್ತದೆ ಎಂಬುದು ಚಂದ್ರಶೇಖರರಾವ್ ಅವರ ಲೆಕ್ಕಾಚಾರ.

***
ಇಂಥ ಲೆಕ್ಕಾಚಾರ ಇರುವ ಕಾರಣಕ್ಕೇ ಚಂದ್ರಶೇಖರರಾವ್ ಕರ್ನಾಟಕದಲ್ಲಿ ಜೆಡಿಎಸ್ ಮೇಲೆದ್ದು ನಿಲ್ಲಲಿ, ಅಧಿಕಾರ
ಹಿಡಿಯಲಿ ಎಂದು ಬಯಸುತ್ತಿದ್ದಾರೆ. ಮುಂದಿನ ಚುನಾವಣೆಯಲ್ಲಿ ಜೆಡಿಎಸ್ ಸ್ವಯಂಬಲದ ಮೇಲೆ ಗೆದ್ದು ಅಧಿಕಾರ ಹಿಡಿದರೆ, ಇಲ್ಲವೇ ದೊಡ್ಡಶಕ್ತಿಯಾಗಿ ಹೊರಹೊಮ್ಮಿದರೆ 2024ರ ಲೋಕಸಭಾ ಚುನಾವಣೆಯಲ್ಲಿ ಹೈದರಾಬಾದ್-ಕರ್ನಾಟಕ ಭಾಗದ ಬೀದರ್, ರಾಯಚೂರು, ಕೊಪ್ಪಳದಂಥ ಕ್ಷೇತ್ರಗಳಲ್ಲಿ ತಮಗೆ ಬೇಕಿರುವವರು ಗೆಲ್ಲುವಂತೆ ನೋಡಿಕೊಳ್ಳಬಹುದು ಎಂಬುದು ಅವರ ಯೋಚನೆ.

ಆದರೆ ಇದು ಸಾಧ್ಯವಾಗಬೇಕು ಎಂದರೆ ಮೊದಲು 2023ರ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ದೊಡ್ಡ ಶಕ್ತಿಯಾಗಿ ಹೊರಹೊಮ್ಮಬೇಕಲ್ಲ? ಹೀಗಾಗಿ ಮೊನ್ನೆ ಕುಮಾರಸ್ವಾಮಿ ಅವರು ತಮ್ಮನ್ನು ಭೇಟಿ ಮಾಡಿದ ಸಂದರ್ಭದಲ್ಲಿ ಆ ಭಾಗದ 30 ವಿಧಾನಸಭಾ ಕ್ಷೇತ್ರಗಳಲ್ಲಿ ಜೆಡಿಎಸ್ ಗೆಲುವಿಗೆ ನನ್ನಿಂದ ಏನು ಮಾಡಲು ಸಾಧ್ಯವೋ ಅದನ್ನು ಮಾಡುತ್ತೇನೆ ಎಂದು ವಚನ
ಕೊಟ್ಟಿzರೆ. ಅಂದರೆ, ಹೈದರಾಬಾದ್-ಕರ್ನಾಟಕ ಭಾಗದ 30 ಕ್ಷೇತ್ರಗಳ ಚುನಾವಣೆಗೆ ಅಭ್ಯರ್ಥಿಗಳನ್ನು ನಿಲ್ಲಿಸುವುದು
ಜೆಡಿಎಸ್ ಕೆಲಸ ಮತ್ತು ಈ ಕ್ಷೇತ್ರಗಳ ಚುನಾವಣಾ ಉಸ್ತುವಾರಿ ನೋಡಿಕೊಳ್ಳುವುದು ನಮ್ಮ ಕೆಲಸ ಅಂತ ಚಂದ್ರಶೇಖರಾವ್ ಹೇಳಿದ್ದಾರೆ.

ಇದೇ ರೀತಿ, ಕರ್ನಾಟಕದ ರಾಜಕಾರಣದಲ್ಲಿ ಜೆಡಿಎಸ್ ಪಕ್ಷದ ಗೆಲುವಿಗೆ ರಣತಂತ್ರ ರೂಪಿಸಲು ಎಲೆಕ್ಷನ್ ಸ್ಪೆಷಲಿಸ್ಟ್
ಪ್ರಶಾಂತ್ ಕಿಶೋರ್‌ರನ್ನು ನಾವೇ ಕಳಿಸುತ್ತೇವೆ. ಅವರು ರೂಪಿಸುವ ಗೇಮ್ ಪ್ಲಾನುಗಳನ್ನು ಜಾರಿಮಾಡುವುದು ನಿಮ್ಮ
ಕೆಲಸ ಎಂದಿದ್ದಾರೆ. ಜೆಡಿಎಸ್ ಬೆಂಬಲಕ್ಕೆ ತಮ್ಮೊಂದಿಗೆ ತಮಿಳುನಾಡಿನ ಸ್ಟಾಲಿನ್, ಉತ್ತರ ಪ್ರದೇಶದ ಅಖಿಲೇಶ್ ಯಾದವ್, ಕೇರಳದ ಪಿಣರಾಯಿ ವಿಜಯನ್ ಕೂಡಾ ಕೈಗೂಡಿಸಲಿದ್ದು ಇದರ ಪರಿಣಾಮವಾಗಿ ಕರ್ನಾಟಕದ ವಿವಿಧ ಭಾಗಗಳಲ್ಲಿ ಗಣನೀಯ ಸಂಖ್ಯೆಯಲ್ಲಿರುವ ಗೊಲ್ಲರು, ತಮಿಳರು, ತೆಲುಗು ಭಾಷಿಕರ ಮೇಜರ್ ಷೇರು ನಿಮಗೆ ದೊರೆಯುತ್ತದೆ ಎಂಬುದು ಚಂದ್ರಶೇಖರರಾವ್ ಮಾತು.

ಮೋದಿಯವರ ವಿರುದ್ಧ ರಾಷ್ಟ್ರಮಟ್ಟದಲ್ಲಿ ತಾವು ಎದ್ದು ನಿಲ್ಲುತ್ತಿರುವುದರಿಂದ ಮುಸ್ಲಿಮರ ಹಲವು ಪಕ್ಷಗಳು ತಮ್ಮ ಮಾತು ಕೇಳುತ್ತವೆ. ಹೀಗಾಗಿ ಜೆಡಿಎಸ್ ಡಾಕ್ ಹಾರ್ಸ್ ಆಗಿ ಹೊರಹೊಮ್ಮುವುದು ಖಚಿತ ಎಂಬುದು ಚಂದ್ರಶೇಖರರಾವ್ ನಂಬಿಕೆ. ಬೆಂಗಳೂರಿನ ಕೆ.ಆರ್. ಪುರಂ, ಹೊಸಕೋಟೆ, ಚಿತ್ರದುರ್ಗ ಜಿಯ ಹಿರಿಯೂರು ಸೇರಿದಂತೆ ಹಲವು ಕ್ಷೇತ್ರಗಳು, ರಾಯ ಚೂರಿನ ಕಲ್ಮಲ ಹೀಗೆ ಕರ್ನಾಟಕದ ೩೦ಕ್ಕೂ ಹೆಚ್ಚು ಕಡೆ ಗೊಲ್ಲರ ಮತಗಳು ಸಾಲಿಡ್ಡಾಗಿವೆ.

ಬೆಂಗಳೂರು, ಕೋಲಾರ, ಚಾಮರಾಜನಗರ, ಮೈಸೂರು ಜಿಲ್ಲೆಗಳ ಹಲವು ಕ್ಷೇತ್ರಗಳಲ್ಲಿ ತಮಿಳರ ಮತಗಳು ಸಾಲಿಡ್ಡಾಗಿವೆ. ಹೀಗಾಗಿ ಕರ್ನಾಟಕದ ೧೫೦ ಕ್ಷೇತ್ರಗಳಲ್ಲಿ ಹಲವು ವೋಟ್‌ಬ್ಯಾಂಕುಗಳು ಕೈಜೋಡಿಸುತ್ತವೆ, ಆ ಮೂಲಕ ಕಾಸ್ಮೋ ಪಾಲಿಟನ್ ವೋಟ್‌ಬ್ಯಾಂಕ್ ಸೃಷ್ಟಿಯಾಗುತ್ತದೆ, ಜೆಡಿಎಸ್‌ಗೆ ಶಕ್ತಿ ತುಂಬುತ್ತವೆ ಅಂತ ಚಂದ್ರಶೇಖರರಾವ್ ನಂಬಿದ್ದಾರೆ.
***

ಈ ಮಧ್ಯೆ ಬಿಜೆಪಿ-ವಿರೋಧಿ ಮತಗಳನ್ನು ಕನ್ ಸಾಲಿಡೇಟ್ ಮಾಡಬೇಕು ಎಂದರೆ ಜಾತಿರಹಿತವಾದ ಒಂದು ವೇದಿಕೆ ಶುರುವಾಗಬೇಕು ಎಂಬುದು ಚಂದ್ರಶೇಖರರಾವ್ ಮಹತ್ವಾಕಾಂಕ್ಷೆ. ಇದೇ ಕಾರಣಕ್ಕಾಗಿ ದೇಶದ ವಿವಿಧ ರಾಜ್ಯಗಳಲ್ಲಿರುವ ೨೦೦೦ದಷ್ಟು ವಿಧಾನಸಭಾ ಕ್ಷೇತ್ರಗಳಲ್ಲಿ ಭಾರತ್ ಕಿಸಾನ್ ಮಂಚ್ ಅಥವಾ ಭಾರತ್ ಕಿಸಾನ್ ಸಮಿತಿಗಳನ್ನು ಮೇಲೆತ್ತಿ ನಿಲ್ಲಿಸಲು ಅವರು ಬ್ಲೂಪ್ರಿಂಟ್ ರೆಡಿ ಮಾಡಿದ್ದಾರೆ.

ಈಗ ಮೋದಿಯವರು ತರಲು ಹೊರಟಿರುವ ವಿದ್ಯುತ್ ಬಿಲ್ ರೈತರ ಕೃಷಿ ಪಂಪ್‌ಸೆಟ್ಟುಗಳಿಗೆ ಮೀಟರ್ ಅಳವಡಿಸುವ ಉದ್ದೇಶ ಹೊಂದಿದೆ. ಅದನ್ನು ವಿರೋಧಿಸಬೇಕು ಎಂಬುದು ಈ ಮಂಚ್ ಅಥವಾ ಸಮಿತಿಗಳ ಅಜೆಂಡಾ. ಮಾರಕ ಕೃಷಿ ಕಾಯ್ದೆ ಜಾರಿಗೊಳಿಸಲು ಮುಂದಾಗಿದ್ದ ಮೋದಿಯವರ ವಿರುದ್ಧ ಇಡೀ ದೇಶದ ರೈತ ಸಮುದಾಯ ತಿರುಗಿ ಬಿದ್ದಿದೆ. ಹೀಗಿರುವಾಗ ಕೃಷಿ ಪಂಪ್‌ಸೆಟ್ಟುಗಳಿಗೆ ಮೀಟರ್ ಅಳವಡಿಸುವ ವಿದ್ಯುತ್ ಬಿಲ್ ವಿರುದ್ಧ ತಿರುಗಿ ಬೀಳದೆ ಅವರು ಮೌನವಾಗಿರಲು ಸಾಧ್ಯವೇ? ಎಂಬುದು ಚಂದ್ರಶೇಖರರಾವ್ ಪ್ರಶ್ನೆ.

ಹೀಗೆ ರೈತರ ಜತೆ, ಅಲ್ಪ ಸಂಖ್ಯಾತರು ಮತ್ತು ದಲಿತರು ಮೋದಿ ಸರಕಾರದ ವಿರುದ್ಧ ನಿಂತರೆ ಎಲ್ಲ ರಾಜ್ಯಗಳಲ್ಲೂ ಬಿಜೆಪಿಗೆ ಘಾಸಿಯಾಗಲಿದೆ. ಕರ್ನಾಟಕದಲ್ಲಿ ಜೆಡಿಎಸ್ ನಿರೀಕ್ಷೆ ಮೀರಿದ ಸಾಧನೆ ಮಾಡಲಿದೆ ಅಂತ ಚಂದ್ರಶೇಖರರಾವ್ ಅವರು ಕುಮಾರಸ್ವಾಮಿಯವರಿಗೆ ಹೇಳಿದ್ದಾರೆ. ಅವರ ಈ ಮಾತು ಕುಮಾರಸ್ವಾಮಿ ಅವರ ಆತ್ಮವಿಶ್ವಾಸವನ್ನು ಹೆಚ್ಚು ಮಾಡಿದ್ದರೆ ಅದು ಸಹಜವೇ.
***

ಕುತೂಹಲದ ಸಂಗತಿ ಎಂದರೆ ನರೇಂದ್ರಮೋದಿ ಅವರ ವಿರುದ್ಧ ಒಕ್ಕೂಟ ಕಟ್ಟಲು ಶ್ರಮಿಸುತ್ತಿರುವ ಚಂದ್ರಶೇಖರರಾವ್ ಅವರಿಗೆ ಕಾಂಗ್ರೆಸ್ ಮತ್ತು ಅರವಿಂದ ಕೇಜ್ರೀವಾಲ್ ನೇತೃತ್ವದ ಅಮ್ ಆದ್ಮಿ ಜತೆಗಿನ ಸಖ್ಯ ಬೇಕಾಗಿಲ್ಲ. ಈ ಪೈಕಿ
ಕಾಂಗ್ರೆಸ್ ಪಕ್ಷವನ್ನು ಅವರು ಬಯಸದೆ ಇರಲು ಕಾರಣವಿದೆ.

ಎಷ್ಟೇ ಆದರೂ ತೆಲಂಗಾಣದಲ್ಲಿ ಕಾಂಗ್ರೆಸ್ ಪಕ್ಷವನ್ನು ದುರ್ಬಲಗೊಳಿಸಿಯೇ ಅವರ ಟಿಆರ್‌ಎಸ್ ಚಿಗುರಿದ್ದಲ್ಲವೇ? ಇನ್ನು ಚಂದ್ರಶೇಖರರಾವ್ ಪ್ರಕಾರ, ಅಮ್ ಆದ್ಮಿಯ ಅರವಿಂದ ಕೇಜ್ರೀವಾಲ್ ಮತ್ತು ನರೇಂದ್ರ ಮೋದಿ ಒಂದೇ ಬಳ್ಳಿಯ ಹೂವುಗಳಂತೆ. ನಂಬಿಕೆಗೆ ಅರ್ಹರಲ್ಲವಂತೆ. ಹೀಗಾಗಿ ಅವರ ಜತೆ ಸಖ್ಯ ಬೇಡ ಎಂದೂ ಅವರು ಕುಮಾರಸ್ವಾಮಿ ಅವರಿಗೆ ಹೇಳಿದ್ದಾರೆ.

ಚಂದ್ರಶೇಖರರಾವ್ ಅವರ ಭೇಟಿಯ ನಂತರ ಕುಮಾರಸ್ವಾಮಿ ಎಷ್ಟು ಖುಷಿಯಾಗಿದ್ದಾರೆಂದರೆ ೨೦೨೩ರಲ್ಲಿ ತಾವು ಮರಳಿ
ಕರ್ನಾಟಕದ ಮುಖ್ಯಮಂತ್ರಿಯಾಗುವುದು ಖಚಿತ ಎಂಬ ತೀರ್ಮಾನಕ್ಕೆ ಬಂದಿದ್ದಾರೆ.