Friday, 22nd November 2024

ಬೆಕ್ಕಿನ ಕೊರಳಿಗೆ ಗಂಟೆ ಕಟ್ಟುವರಾರು?

-ವಿನಾಯಕ ಮಠಪತಿ

ಲೋಕಸಭಾ ಚುನಾವಣಾ ಕದನಕ್ಕೆ ದೇಶಾದ್ಯಂತ ಅಖಾಡ ಸಿದ್ಧಗೊಳ್ಳುತ್ತಿದೆ. ವರ್ಷಗಳಿಂದ ಪರಸ್ಪರ ಮೈಪರಚಿಕೊಂಡವರೆಲ್ಲ ಒಂದಾಗುವ ಕಾಲ ಸನ್ನಿಹಿತವಾಗಿದೆ. ಪ್ರಧಾನಿ ನರೇಂದ್ರ ಮೋದಿಯವರಿಗೆ ಈ ಸಲ ಶತಾಯಗತಾಯ ಸೋಲಿನ ರುಚಿ ತೋರಿಸಲು ವಿಪಕ್ಷಗಳ ಒಕ್ಕೂಟ ಇನ್ನಿಲ್ಲದಂತೆ ಬೆವರು ಸುರಿಸುತ್ತಿದೆ. ಸಭೆಯ ಮೇಲೆ ಸಭೆ ಮಾಡುವ ಮೂಲಕ ೧೦ ವರ್ಷಗಳ ಬಿಜೆಪಿ ಆಡಳಿತಕ್ಕೆ ಅಂತ್ಯಹಾಡುವ ಉತ್ಸಾಹದಲ್ಲಿರುವ ಈ ವಿರೋಧಿ ಪಾಳಯ ‘ಮಾಡು ಇಲ್ಲವೇ ಮಡಿ’ ಎಂಬಂಥ ಪರಿಸ್ಥಿತಿಯಲ್ಲಿದೆ. ೨೦೧೪ರ ಚುನಾವಣೆಯಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರದ ವಿರುದ್ಧ, ಅಂದು ಗುಜರಾತಿನ ಮುಖ್ಯಮಂತ್ರಿಯಾಗಿದ್ದ ‘ನರೇಂದ್ರ ಮೋದಿ’ ಎಂಬ ಅಸವನ್ನು ಬಿಜೆಪಿ ಪ್ರಯೋಗಿಸಿತ್ತು. ಯುಪಿಎ ಸರಕಾರದ ಸಾಲುಸಾಲು ಭ್ರಷ್ಟಾಚಾರ, ಬೆಲೆಯೇರಿಕೆ ಮತ್ತು ಆಡಳಿತ-ವಿರೋಧಿ ಅಲೆಯ ನಡುವೆ, ಅಭಿವೃದ್ಧಿ ಹಾಗೂ ಹಿಂದುತ್ವದ ಬಾವುಟ ಹಿಡಿದು ದೇಶಾದ್ಯಂತ ಸಂಚರಿಸಿ ಜನಾಶೀರ್ವಾದ ಪಡೆದ ಬಿಜೆಪಿ ಈವರೆಗೂ ಆಡಳಿತ ನಡೆಸುತ್ತಿದೆ. ಪೂರ್ಣ ಬಹುಮತವಿದ್ದ ಕಾರಣ, ಮಹತ್ವದ ನಿರ್ಧಾರಗಳು ಈ ಸರಕಾರದಿಂದ ಹೊಮ್ಮಿದ್ದಿದೆ. ಮೋದಿಯವರ ಜನಪ್ರಿಯತೆಯಿಂದಾಗಿ, ‘ಯಾವುದೇ ಚುನಾವಣೆ ಬರಲಿ, ಗೆಲುವು ನಮ್ಮದೇ’ ಎಂಬ ಆತ್ಮವಿಶ್ವಾಸ ಬಿಜೆಪಿಗಿತ್ತು. ಆದರೀಗ ಪರಿಸ್ಥಿತಿ ಬದಲಾಗಿದೆ. ದಶಕಗಳಿಂದ ಪರಸ್ಪರ ವೈರಿಗಳ ರೀತಿಯಲ್ಲಿ ಹೊಡೆದಾಡಿಕೊಂಡು
ರಾಜಕಾರಣ ಮಾಡಿದ್ದವರೆಲ್ಲ ಈಗ ಮೋದಿ ವಿರುದ್ಧ ಒಂದಾಗಿದ್ದಾರೆ. ಮೋದಿಯವರ ವಿಜಯದ ಓಟಕ್ಕೆ ಬ್ರೇಕ್ ಹಾಕಲು ಹೀಗೆ ಒಂದಾಗಿರುವವರಲ್ಲಿ ‘ಒಲ್ಲದ ಮನಸ್ಸಿನ ಸಮನ್ವಯತೆ’ ಎದ್ದುಕಾಣುತ್ತಿದೆ. ವಿರೋಧಿ ಒಕ್ಕೂಟ ಒಂದಾದರಷ್ಟೇ ಸಾಲದು, ಜನಾ ಭಿಪ್ರಾಯ ಹೇಗಿದೆ ಎಂಬುದರ ಮೇಲೆಯೂ ರಾಜಕೀಯ ಭವಿಷ್ಯ ನಿರ್ಧಾರವಾಗುತ್ತದೆ.

ಮೋದಿಯವರ ಕಾರ್ಯವೈಖರಿ ಮೆಚ್ಚುವ ದೊಡ್ಡವರ್ಗ ಈಗಲೂ ದೇಶಾದ್ಯಂತ ಇದೆ. ಹೀಗಾಗಿ ವಿಪಕ್ಷಗಳ ಒಕ್ಕೂಟವು ಜನರ ಮನಸ್ಸನ್ನುಗೆಲ್ಲುವುದು ಸುಲಭದ ಮಾತಲ್ಲ, ಸಾಮಾನ್ಯದ ಸಂಗತಿಯಲ್ಲ. ವಿಪಕ್ಷಗಳ ನಾಯಕರು ದೈಹಿಕವಾಗಿ ಒಕ್ಕೂಟದಲ್ಲಿ ಗುರುತಿಸಿಕೊಂಡಿದ್ದರೂ ಮಾನಸಿಕವಾಗಿ ಅವರಲ್ಲಿ ಹಲವಾರು ಲೆಕ್ಕಾಚಾರಗಳಿವೆ. ಈ ನಾಯಕರಿಗೆ ಸ್ಥಳೀಯ ಮಟ್ಟದ ಕಾರ್ಯಕರ್ತರ ಪಡೆಯನ್ನೂ ಈ ಮೈತ್ರಿಕೂಟದ
ವ್ಯವಸ್ಥೆಯೊಳಗೆ ತರಲು ಸಾಧ್ಯವಾಗುತ್ತಾ? ಅಥವಾ ಹತ್ತಾರು ವರ್ಷದಿಂದ ಬೆವರು ಬಸಿದು ಪಕ್ಷ ಸಂಘಟನೆ ಮಾಡಿದ ಕಾರ್ಯಕರ್ತರು, ನಾಯಕರ ಈ ನಿರ್ಧಾರದಿಂದಾಗಿ ನೊಂದು ಅನಿವಾರ್ಯವಾಗಿ ಬಿಜೆಪಿ ಪರ ವಾಲುತ್ತಾರಾ? ಎಂಬುದನ್ನು ಕಾಲವಷ್ಟೇ ಹೇಳಬಲ್ಲದು. ಇಂದಿರಾ ಗಾಂಧಿ ಮತ್ತು ರಾಜೀವ್ ಗಾಂಧಿ ನೇತೃತ್ವದ ಸರಕಾರಗಳ ನಂತರ ಕಾಂಗ್ರೆಸ್ ಪಕ್ಷದ ಬಾಹ್ಯ ಬೆಂಬಲದೊಂದಿಗೆ ರೂಪುಗೊಂಡ ಸರಕಾರಗಳ ಹಾಗೂ ಆ ವೇಳೆ ಪ್ರಾದೇಶಿಕ ಪಕ್ಷಗಳ ಕೆಲ ನಾಯಕರು ಅನುಭವಿಸಿದ ಕರಾಳ ಅನುಭವಗಳ ಇತಿಹಾಸವು ದೇಶದ ಮುಂದಿದೆ. ಜತೆಗೆ ಅಧಿಕಾರವಿಲ್ಲದ ಸಂದರ್ಭದಲ್ಲಿ ಮೈತ್ರಿಕೂಟದ ಸಹಭಾಗಿಗಳನ್ನು ಕಾಂಗ್ರೆಸ್ ನಡೆಸಿಕೊಂಡ ರೀತಿಯೂ ಪ್ರಸ್ತುತ ಮೋದಿ-ವಿರೋಧಿ ಒಕ್ಕೂಟದಲ್ಲಿ ಗುರುತಿಸಿಕೊಂಡಿರುವವರಿಗೆ ಗೊತ್ತಿಲ್ಲ ಎಂದೇನಲ್ಲ.

ಹೀಗಾಗಿ, ಸದ್ಯ ಮೋದಿ ಸರಕಾರವನ್ನು ಕಿತ್ತುಹಾಕುವ ಭರದಲ್ಲಿರುವ ‘ಇಂಡಿಯ’ ಮೈತ್ರಿಕೂಟದ ಸದಸ್ಯರು ತಮ್ಮ ಭವಿಷ್ಯದ ಕುರಿತಾದ ಚಿಂತೆಯಲ್ಲಿದ್ದಾರೆ. ಅದು ೧೯೯೬ರ ಕಾಲಘಟ್ಟ. ಭಾರತದ ೧೧ನೇ ಲೋಕಸಭೆಗೆ
ನಡೆದ ಚುನಾವಣೆಯಲ್ಲಿ ಯಾವ ಪಕ್ಷಕ್ಕೂ ಸ್ಪಷ್ಟ ಬಹುಮತ ಬರದೆ ಅತಂತ್ರ ಸ್ಥಿತಿ ನಿರ್ಮಾಣವಾದಾಗ, ಅತಿಹೆಚ್ಚು (೧೬೧) ಸ್ಥಾನ ಪಡೆದಿದ್ದ ಬಿಜೆಪಿಯನ್ನು ಸರಕಾರ ರಚಿಸಲು ಅಂದಿನ ರಾಷ್ಟ್ರಪತಿ ಶಂಕರ್ ದಯಾಳ್ ಶರ್ಮ ಆಹ್ವಾನಿಸಿದರು. ಅಟಲ್ ಬಿಹಾರಿ ವಾಜಪೇಯಿ ಅವರು ಸರಕಾರ ರಚಿಸಿದ್ದೂ ಆಯಿತು; ಆದರೆ ಬಹುಮತ ಸಾಬೀತು ಸಾಧ್ಯವಾಗದ ಕಾರಣ ೧೩ ದಿನಗಳಲ್ಲೇ ಸರಕಾರ ಪತನವಾಯಿತು. ಆಗ ಕಾಂಗ್ರೆಸ್ ಎರಡನೇ ಅತಿಹೆಚ್ಚು ಸದಸ್ಯಬಲ ಹೊಂದಿದ್ದರೂ ಅಖಾಡಕ್ಕಿಳಿದು ಸರಕಾರ ರಚಿಸದೆ, ಜನತಾದಳವನ್ನೊ ಳಗೊಂಡ ‘ಸಂಯುಕ್ತರಂಗ’ ಸರಕಾರಕ್ಕೆ ಬಾಹ್ಯ ಬೆಂಬಲ ನೀಡಿತು. ಆಗ ಪ್ರಧಾನಿಯಾಗಿ ಆಯ್ಕೆಯಾಗಿದ್ದು ಕರ್ನಾಟಕದ ಎಚ್.ಡಿ. ದೇವೇಗೌಡರು. ಈ ಸಂದರ್ಭದಲ್ಲಿ ಅವರಿಗೂ, ಅಂದು ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಸೀತಾರಾಂ ಕೇಸರಿಯವರಿಗೂ ನಡುವೆ ತಾತ್ವಿಕ ಭಿನ್ನಾಭಿಪ್ರಾಯ ಉಂಟಾಗಿ, ಅದೇ ಕಾರಣವನ್ನು ಮುಂದಿಟ್ಟುಕೊಂಡು ದೇವೇಗೌಡರನ್ನು ಪ್ರಧಾನಿ ಹುದ್ದೆಯಿಂದ ಕೆಳಗಿಳಿಸಿತು ಕಾಂಗ್ರೆಸ್.

ನಂತರ ಪ್ರಧಾನಿ ಗಾದಿಗೇರಿದ ಐ.ಕೆ. ಗುಜ್ರಾಲ್ ಕೂಡ ಕೇವಲ ೧೧ ತಿಂಗಳಲ್ಲಿ ಅಧಿಕಾರ ಕಳೆದುಕೊಳ್ಳುವಂತಾಯಿತು. ಸರಕಾರದ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಕಾಂಗ್ರೆಸ್ ಹೀಗೆ ಬೆಂಬಲ ಹಿಂಪಡೆದ ಕಾರಣ ೨ ವರ್ಷಗಳಲ್ಲಿ ದೇಶ ಇಬ್ಬರು ಪ್ರಧಾನಿಗಳನ್ನು ನೋಡುವಂತಾಯಿತು. ಈ ಕರಾಳ ಇತಿಹಾಸವನ್ನು ಕಂಡಿರುವ ‘ಇಂಡಿಯ’ ಮೈತ್ರಿಕೂಟದ ಪಕ್ಷಗಳಲ್ಲಿ, ಕಾಂಗ್ರೆಸ್ ಒಂದೊಮ್ಮೆ ಅಧಿಕಾರಕ್ಕೆ ಬಂದಿದ್ದೇ ಆದರೆ ತಮ್ಮನ್ನು ಯಾವ ರೀತಿ ನಡೆಸಿಕೊಳ್ಳುತ್ತದೆ ಎಂಬ ಅಳುಕಿದೆ. ವಿಪಕ್ಷಗಳ ‘ಇಂಡಿಯ’ ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರು ಎಂಬ ಯಕ್ಷಪ್ರಶ್ನೆ ಜನರನ್ನು ಕಾಡತೊಡಗಿದೆ. ‘ಭಾರತ್ ಜೋಡೋ’ ಯಾತ್ರೆಯ ಮೂಲಕ ಕಾಂಗ್ರೆಸ್
ಪಕ್ಷವು ರಾಹುಲ್ ಗಾಂಧಿಯವರನ್ನು ಪ್ರಧಾನಿ ಹುದ್ದೆಯ ಅಭ್ಯರ್ಥಿ ಎಂಬಂತೆ ಬಿಂಬಿಸಿದ್ದು ಬಿಟ್ಟರೆ, ಅವರನ್ನು ಒಪ್ಪಲು ಮೈತ್ರಿಕೂಟದಲ್ಲಿ ಹಲವರು ತಯಾರಿಲ್ಲ. ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಕೂಡ ಪ್ರಧಾನಿ ಗಾದಿಯ ಮೇಲೆ ಕಣ್ಣಿಟ್ಟವರೇ. ಈ ಎಲ್ಲ ಕಾರಣದಿಂದ ರಾಹುಲ್‌ರನ್ನು ಬಿಟ್ಟು ಬೇರೆ ಯಾರನ್ನು ಕಾಂಗ್ರೆಸ್ ಮುನ್ನೆಲೆಗೆ ತರುತ್ತದೆ ಎಂಬುದನ್ನು ಕಾದುನೋಡುವಂತಾಗಿದೆ. ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್‌ರನ್ನು ಪ್ರಧಾನಿ ಅಭ್ಯರ್ಥಿಯಾಗಿ ಬಿಂಬಿಸುವ ಲೆಕ್ಕಾಚಾರ ಕೆಲವರಿಗಿದ್ದರೂ ಇದಕ್ಕೆ ಕಾಂಗ್ರೆಸ್ ಒಪ್ಪುವ ಮನಸ್ಥಿತಿಯಲ್ಲಿಲ್ಲ. ಒಂದೊಮ್ಮೆ ಪ್ರಧಾನಿ ಅಭ್ಯರ್ಥಿಯಾಗಿ, ಸದ್ಯ ಇರುವ ಸಿಎಂ ಸ್ಥಾನವನ್ನು ಲಾಲು ಪ್ರಸಾದ್ ಮನೆತನಕ್ಕೆ ಬಿಟ್ಟುಕೊಡುವಂತಾದರೆ, ಭವಿಷ್ಯದಲ್ಲಿ ಒದಗುವ ರಾಜಕೀಯ ಪರಿಣಾಮವನ್ನು ಕಲ್ಪಿಸಿಕೊಂಡು ನಿತೀಶ್ ಹಿಂಜರಿಯುತ್ತಿದ್ದಾರೆ ಎನ್ನಲಾಗುತ್ತಿದೆ. ಈ ಎಲ್ಲ ಕಾರಣಗಳಿಂದ ‘ಇಂಡಿಯ’ ಮೈತ್ರಿಕೂಟದಲ್ಲಿ ‘ಬೆಕ್ಕಿಗೆ ಗಂಟೆ ಕಟ್ಟುವವರಾರು?’ ಎಂಬ ಪರಿಸ್ಥಿತಿಯಿದೆ.

ಮೋದಿ-ವಿರೋಧಿ ಬಣದಲ್ಲಿ ಗುರುತಿಸಿಕೊಂಡಿರುವ ಆಮ್ ಆದ್ಮಿ ಪಕ್ಷವು (ಆಪ್) ಪ್ರಸ್ತುತ ದೇಶದ ಕೇಂದ್ರಸ್ಥಾನ ದೆಹಲಿಯಲ್ಲಿ ಅಧಿಕಾರದಲ್ಲಿದೆ. ಆದರೆ, ಟಿಕೆಟ್ ಹಂಚಿಕೆ ವೇಳೆ ಕಾಂಗ್ರೆಸ್‌ಗೆ ಎಷ್ಟು ಪಾಲು ಸಿಗುತ್ತದೆ
ಎಂಬುದರ ಮೇಲೆ ಮೈತ್ರಿಕೂಟದಲ್ಲಿನ ‘ಆಪ್’ ಭವಿಷ್ಯ ಅಡಗಿದೆ. ಪ್ರಸ್ತುತ ದೆಹಲಿಯಲ್ಲಿ ‘ಆಪ್’ಗೆ ಮೊದಲ ಸ್ಥಾನವಿದ್ದರೆ, ನಂತರದ ಅನುಕ್ರಮಿಕ ಸ್ಥಾನಗಳನ್ನು ಬಿಜೆಪಿ ಮತ್ತು ಕಾಂಗ್ರೆಸ್ ಪಡೆದಿವೆ. ಸದ್ಯ ಯಾವುದೇ ಪ್ರಾಬಲ್ಯವಿರದ ಕಾಂಗ್ರೆಸ್ ಜತೆ ಚುನಾವಣೆಯಲ್ಲಿ ‘ಆಪ್’ ಹೇಗೆ ಕೈಜೋಡಿಸುತ್ತದೆ ಎಂಬುದು ಯಕ್ಷಪ್ರಶ್ನೆ. ಮಾತ್ರವಲ್ಲ, ದೇಶದಲ್ಲೇ ಅತಿಹೆಚ್ಚು ಲೋಕಸಭಾ ಕ್ಷೇತ್ರಗಳನ್ನು ಹೊಂದಿರುವ ಉತ್ತರ ಪ್ರದೇಶ ಸೇರಿದಂತೆ ಅನೇಕ ರಾಜ್ಯಗಳಲ್ಲಿ ಅಸ್ತಿತ್ವ ಕಳೆದುಕೊಂಡಿರುವ ಕಾಂಗ್ರೆಸ್‌ಗೆ, ‘ಇಂಡಿಯ’ ಮೈತ್ರಿಕೂಟದ ಮಿತ್ರಪಕ್ಷಗಳು ಸೀಟು ಹಂಚಿಕೆಯಲ್ಲಿ ಎಷ್ಟು ಪಾಲು ನೀಡುತ್ತವೆ ಎಂಬುದರ ಮೇಲೂ ಅದರ ಭವಿಷ್ಯ ಅವಲಂಬಿಸಿದೆ. ಪಶ್ಚಿಮ ಬಂಗಾಳದಲ್ಲಿ ಕಮ್ಯುನಿಸ್ಟರನ್ನು ಹೇಳ ಹೆಸರಿಲ್ಲದಂತೆ ಮಾಡಿರುವ ಮಮತಾ ಬ್ಯಾನರ್ಜಿಯವರು, ಮೈತ್ರಿಕೂಟದ ಛತ್ರಛಾಯೆಯಡಿ ಮಿತ್ರಪಕ್ಷಗಳನ್ನು ಬಿಜೆಪಿ ವಿರುದ್ಧ ಹೇಗೆ ನಡೆಸಿಕೊಂಡು ಹೋಗುತ್ತಾರೆ ಎಂಬುದಕ್ಕೆ ಸ್ಪಷ್ಟ ಉತ್ತರ ಈವರೆಗೂ ಸಿಕ್ಕಿಲ್ಲ.

ಒಟ್ಟಿನಲ್ಲಿ, ಪ್ರಧಾನಿ ಮೋದಿ ನೇತೃತ್ವದ ಎನ್‌ಡಿಎ ಸರಕಾರವನ್ನು ಹಣಿಯಲು ಪಣತೊಟ್ಟಿರುವ ‘ಇಂಡಿಯ’ ಮೈತ್ರಿಕೂಟಕ್ಕೆ ಇರುವ ಸವಾಲುಗಳು ಒಂದೆರಡಲ್ಲ. ಜಗತ್ತಿನ ಭರವಸೆಯ ನಾಯಕನಾಗಿ ಬೆಳೆದಿರುವ ನರೇಂದ್ರ ಮೋದಿಯವರ ದಿಗ್ವಿಜಯ ಯಾತ್ರೆ ಕೊನೆಗೊಳಿಸುವ ಯುದ್ಧಕ್ಕೆ ಮೈತ್ರಿಕೂಟದ ಯಾರಾದರೊಬ್ಬರು ಕಂಕಣ ಕಟ್ಟಿಕೊಳ್ಳಲೇಬೇಕು. ಇಲ್ಲವಾದಲ್ಲಿ ಚುನಾವಣಾ ಅಖಾಡದಲ್ಲಿ ಪಟ್ಟುಹಾಕುವುದು ಅಷ್ಟು ಸುಲಭದ ಕೆಲಸವಲ್ಲ!
(ಲೇಖಕರು ಪತ್ರಕರ್ತರು)