Thursday, 19th September 2024

ಮೂರು ನಾಲ್ಕರ ಸೂತ್ರ ಪಾಲಿಸಿ ಪದ್ಯ ಕಟ್ಟುವ ರೀತಿಯು

ತಿಳಿರು ತೋರಣ

ಶ್ರೀವತ್ಸ ಜೋಶಿ

ಅಧಿಕಮಾಸ ಮುಗಿದು ನಿಜ ಆಶ್ವಯುಜ ಮಾಸ ಆರಂಭವಾಗಿದೆ. ನವರಾತ್ರಿಯ ಪರ್ವಕಾಲ. ಈಗ ಶಿಕ್ಷಣವೆಲ್ಲ ಆನ್‌ಲೈನ್ ಆದ್ದರಿಂದ ಈ ಬಾರಿ ಸರಸ್ವತಿ ಪೂಜೆಗೆ ಪುಸ್ತಕಗಳನ್ನಿಡಬೇಕೇ ಅಥವಾ ಮೊಬೈಲ್ ಫೋನ್/ ಲ್ಯಾಪ್‌ಟಾಪ್ ಇಡಬೇಕೇ ಎಂದು ಮೊನ್ನೆ ವಾಟ್ಸಪ್‌ನಲ್ಲಿ ಒಂದು ಜೋಕು ಹರಿದಾಡಿತ್ತು. ಸರಸ್ವತಿಯನ್ನೇ ಕೇಳಿದರೆ ಬಹುಶಃ ಎರಡನೆಯ ಆಯ್ಕೆಯೇ ಬೆಟರ್ ಎಂದಾಳು. ಆ ನೆಪದಲ್ಲಾದರೂ ಎರಡು – ಮೂರು ದಿನ ಮನೆಮಂದಿಯೆಲ್ಲ ಮೊಬೈಲ್‌ಗಳನ್ನು ದೂರವಿಟ್ಟು ಪುಸ್ತಕಗಳ ಓದಿಗೆ ತೊಡಗಿಯಾರು ಎಂದು ಆಕೆಯ ಲೆಕ್ಕಾಚಾರ.

ಇರಲಿ, ಜೋಕು ಗಳನ್ನು ಬದಿಗಿಟ್ಟು ಈಗೊಂದಿಷ್ಟು ಅಕ್ಷರ ಸರಸ್ವತಿಯ ಆರಾಧನೆ ಮಾಡುವಾ. ಆರಾಧನೆ ಅಂದರೆಪೂಜೆ – ಪ್ರಸಾದ – ಪಾಯಸ – ಪನಿವಾರ ಅಲ್ಲ. ಪದಪದಗಳನ್ನು ಪೋಣಿಸಿ ಪದ್ಯ ಕಟ್ಟುವ ಕಾರ್ಯಾಗಾರ! ಅದೂ ಹೇಗೆ? ಗದ್ಯದಂತೆ ತೋರುವ (‘ಎ.ಉ.ಹೊ’ ರೀತಿಯಂತೆ ಕಾಣುವ?) ಮುಕ್ತಛಂದದ ನವ್ಯ ಕತೆ ಅಲ್ಲ. ಛಂದಸ್ಸಿಗೆ ಹೊಂದಿಕೊಂಡು ಮಾತ್ರೆಗಳ ಟ್ಯಾಲಿ ಸರಿಯಾಗಿ ಇರುವಂತೆ, ಬರೆದಾಗ ನೀಟಾಗಿ ಕಾಣುವಂತೆ, ಹಾಡಿಸಿಕೊಳ್ಳಲಿಕ್ಕೆ ಸಿದ್ಧವಾಗಿರುವ ಪದ್ಯದ ರಚನೆ!

ರೆಡಿನಾ? ಅಯ್ಯೋ ನಮ್ಮಿಂದಾಗುವಂಥದ್ದಲ್ಲ ಎಂದು ಓಡಿಹೋಗಬೇಡಿ. ಹಾಗೆ ನೋಡಿದರೆ ನಾನೇನು ಕಮ್ಮಿಯೇ? ಅಲ್ಲವಲ್ಲ!
ಆದರೆ ಆರನೆಯ ತರಗತಿಯ ಕನ್ನಡಭಾರತಿ ಪಠ್ಯಪುಸ್ತಕದಲ್ಲಿಧ್ರುವನಿಗೆ ನಾರದಮಹರ್ಷಿ ಹೇಳಿದ್ದ ಮಾತನ್ನು ನಾನು ಮರೆತಿಲ್ಲ,
ಮರೆಯಲಾರೆ. ಏನೆಂದರೆ – ‘ಸಾಧನೆಗೆ ಅಸಾಧ್ಯವಾದುದು ಯಾವುದೂ ಇಲ್ಲ ಮಗು. ಸಾಽಸುವ ಛಲ ಮನುಷ್ಯನಿಗೆ ಇರಬೇಕು!’ ಹಾಗಾಗಿ ಆ ಛಲವನ್ನೇ ದಾರವಾಗಿಸಿಕೊಂಡು, ಕೈಗೆ ಸಿಕ್ಕಿದ(ಮನಸ್ಸಿಗೆ ಹೊಳೆದ) ಪದಗಳೆಂಬ ಹೂವುಗಳನ್ನು ಪೋಣಿಸಿ ಇಂದು ಒಂದು ಛಂದೋಬದ್ಧ ಪದ್ಯ ಕಟ್ಟೋದೇಯಾ.

ಜೊತೆಯಲ್ಲಿ ನಿಮ್ಮ ತಲೆಯೊಳಗೂ ಈ ರೀತಿಯ ಪದ್ಯರಚನೆಯ ಗುಂಗಿಹುಳ ಬಿಡೋದೇಯಾ. ಮತ್ತೆ ಅದೇನೂ ಪುಟಗಟ್ಟಲೆ
ಉದ್ದದ ಪದ್ಯವಲ್ಲ. ಜಸ್ಟ್ ಒಂದೆರಡು, ಹೆಚ್ಚೆಂದರೆ ನಾಲ್ಕು ಸಾಲುಗಳು ಮಾತ್ರ. ಆಮೇಲೆ ಇಂಪ್ರುವೈಸೇಷನ್ ಮಾಡಿದರಾಯ್ತು.
ನಿಮಗೆ ಬಸಳೆ, ತೊಂಡೆಕಾಯಿ, ದ್ರಾಕ್ಷಿ ಮುಂತಾದುವನ್ನು ಬೆಳೆಸಿ ಗೊತ್ತಿದೆಯಾದರೆ, ಅಥವಾ ಅವುಗಳ ಬಳ್ಳಿ ಹೇಗೆ ಬೆಳೆಯುತ್ತದೆ ಎಂದು ಗಮನಿಸಿದ್ದೀರಾದರೆ- ಬಳ್ಳಿ ಹಬ್ಬುವುದಕ್ಕೆ ಆರಂಭದಲ್ಲಿ ಚಿಕ್ಕಚಿಕ್ಕ ಗೂಟಗಳೂ, ಆಮೇಲೆ ದೊಡ್ಡದೊಂದು ಚಪ್ಪರವೂ ಬೇಕಾಗುತ್ತದೆ ಅಲ್ಲವೇ? ಅದು ಬಳ್ಳಿಯ ಬೆಳವಣಿಗೆಗೆ ಗೈಡ್‌ಲೈನ್ ಇದ್ದಹಾಗೆ. ಅದನ್ನು ಚಪ್ಪರ ಅಂತ ಮಾತ್ರವಲ್ಲದೆ, ತಡಿಕೆ ಎನ್ನುತ್ತೇವೆ (ಬಳ್ಳಿ ಅನಪೇಕ್ಷಿತ ರೀತಿಯಲ್ಲಿ ಹರಡದಂತೆ ತಡೆಯುತ್ತದೆ ಎಂಬ ಕಾರಣಕ್ಕೆ). ಅಥವಾ ‘ಹಂದರ’ ಅಂತಲೂ
ಹೇಳಬಹುದು.

ಇಲ್ಲಿ ನನಗೆ ಶಂ.ಗು.ಬಿರಾದಾರರ ಪದ್ಯ ‘ನಾವು ಎಳೆಯರು ನಾವು ಗೆಳೆಯರು ಹೃದಯ ಹೂವಿನ ಹಂದರ| ನಾಳೆ ನಾವೇ ನಾಡ ಹಿರಿಯರು ನಮ್ಮ ಕನಸದೊ ಸುಂದರ…’ ತತ್ ಕ್ಷಣಕ್ಕೇ ನೆನಪಾಗುತ್ತಿದೆ, ಹಂದರ ಎಂಬ ಪದದಿಂದಾಗಿ. ಆ ನೆನಪು ಕೂಡ ಸಮಯೋಚಿತವೇ. ಹೇಗೆ ಎಂಬುದನ್ನು ಆಮೇಲೆ ನೋಡೋಣ. ನಮ್ಮ ಪದ್ಯರಚನೆಗೆ ಚಪ್ಪರ ಅಥವಾ ಹಂದರ ಯಾವುದೆಂದರೆ ಕುವೆಂಪು ಅವರು ಬರೆದ, ಕನ್ನಡಿಗರೆಲ್ಲರಿಗೂ  ಚಿರಪರಿಚಿತವೂ ಅತಿ ಜನಪ್ರಿಯವೂ ಆದ, ಮಿಸ್ ಲೀಲಾವತಿ ಚಿತ್ರದಲ್ಲಿ ಯಾರೂ ಮಿಸ್ ಮಾಡಿಕೊಳ್ಳದ ‘ದೋಣಿ ಸಾಗಲಿ ಮುಂದೆ ಹೋಗಲಿ…’ ಪದ್ಯ. ಅದನ್ನು ಹಾಡುವ ಧಾಟಿ ಅಥವಾ ಲಯ ಏನಿದೆಯೋ, ಅಂತೆಯೇ ನಮ್ಮ ಪದ್ಯವನ್ನುಹಾಡುವುದಕ್ಕಾಗುತ್ತದೆ. ಇಂಗ್ಲಿಷ್ ಕ್ರಿಯಾಪದವನ್ನು ಬಳಸಬಹುದಾದರೆ ‘ಹಮ್ಮು’ವುದಕ್ಕಾಗು ತ್ತದೆ.

ಛಂದೋಬದ್ಧ ಪದ್ಯರಚನೆ ಅಂತೀರಿ, ದೋಣಿ ಸಾಗಲಿ ಮುಂದೆ ಹೋಗಲಿ ಹಾಡಿನ ಧಾಟಿ ಅಂತೀರಿ, ಹಾಗಾದರೆ… ದೋಣಿ ಸಾಗಲಿ ಪದ್ಯ ಛಂದಸ್ಸಿನ ಪ್ರಕಾರ ಬರೆದದ್ದೇ? ಖಂಡಿತವಾಗಿಯೂ ಹೌದು! ಬೇಕಿದ್ದರೆ ಅದರ ಮೊದಲೆರಡು ಸಾಲುಗಳ ಡಿಸೆಕ್ಷನ್ ಮಾಡುವಾ. ‘ದೋಣಿ’(1 ಗುರು 1 ಲಘು ಒಟ್ಟು 3 ಮಾತ್ರೆ), ‘ಸಾಗಲಿ’(೧ ಗುರು ತಲಾ ಒಂದೊಂದು ಲಘು ಒಟ್ಟು 4 ಮಾತ್ರೆ), ‘ಮುಂದೆ’(1 ಗುರು 1 ಲಘು ಒಟ್ಟು 3 ಮಾತ್ರೆ), ಹೀಗೆ… ‘ಹೋಗಲಿ’(೪ ಮಾತ್ರೆ), ‘ದೂರ’(3 ಮಾತ್ರೆ), ‘ತೀರವ’(4 ಮಾತ್ರೆ), ‘ಸೇರಲಿ’(3  ಮಾತ್ರೆ ಮತ್ತು ಕೊನೆಯಕ್ಷರವು ಪಾದದ ಕೊನೆಯದಾದ್ದರಿಂದ ಗುರು ಎಂದು ಪರಿಗಣನೆ). ಅಂದರೆ ಏನಾಯಿತು? 3,4,3,4,3,4,3  ಮಾತ್ರೆಗಳು ಮತ್ತೊಂದು ಗುರು. ‘ಬೀಸು ಗಾಳಿಗೆ ಬೀಳು ತೇಳುತ ತೆರೆಯ ಮೇಗಡೆ ಹಾರಲಿ’ ಈ ಎರಡನೆಯ ಸಾಲಿನಲ್ಲೂ
3,4,3,4,3,4,3  ಮಾತ್ರೆಗಳು ಮತ್ತೊಂದು ಗುರು. ಮುಂದೆ ಎಲ್ಲ ಚರಣಗಳ ಪ್ರತಿಯೊಂದು ಸಾಲು ಕೂಡ ಹೀಗೆಯೇ.

3,4,3,4,3,4 .. ಪಥಸಂಚಲನ. ತಬಲಾದಲ್ಲಿ ಈ ಪದ್ಯವನ್ನು ನುಡಿಸುವುದಾದರೆ ಒಂದೊಂದು ಸಾಲು ಕೂಡ ‘ತಕಿಟ ತಕಧಿಮಿ
ತಕಿಟ ತಕಧಿಮಿ ತಕಿಟ ತಕಧಿಮಿ ತಕಿಟ ತಾ’. ನನಗೆ ತಬಲಾ ಬಾರಿಸಲಿಕ್ಕೆ ಬರುವುದಿಲ್ಲ ಆದರೆ ಇದನ್ನು ‘ಮಿಶ್ರಛಾಪು ತಾಳ’
ಎನ್ನುತ್ತಾರೆ ಎಂದು ಕೇಳಿ ಬಲ್ಲೆ. ಈಗ ನಿಮಗೊಂದು ಈಸ್ಟರ್ ಎಗ್ ತೋರಿಸುತ್ತೇನೆ. ಈಸ್ಟರ್ ಎಗ್ ಅಂದರೆ ಕಂಡೂಕಾಣದಂತೆ
ಇರುವ ಸ್ವಾರಸ್ಯ. ಇಂದಿನ ಲೇಖನದ ತಲೆಬರಹವನ್ನು ಈಗ ಇನ್ನೊಮ್ಮೆ ನೋಡಿ. ಅಲ್ಲಿ ನಿಮಗೆ 3,4,3,4,3,4,3  ಮತ್ತೊಂದು
ಗುರು ಈ ತೆರನಾಗಿ ಮಾತ್ರೆಗಳು ಕಾಣಿಸುತ್ತಿವೆಯಾ? ಹೌದಲ್ವಾ!

ಅಂದರೆ, ಈ ತಲೆಬರಹವನ್ನು ‘ದೋಣಿ ಸಾಗಲಿ ಮುಂದೆ ಹೋಗಲಿ…’ ಪದ್ಯದ ಧಾಟಿಯಲ್ಲಿ ಹಾಡಬಹುದು, ಹಮ್ಮಬಹುದು!
ದೋಣಿಯನ್ನು ಸದ್ಯಕ್ಕೆ ಅಲ್ಲೇ ಬಿಟ್ಟು ಶಾಲೆಯ ಕಡೆಗೆ ನಡೆಯೋಣ. ನಾವು ಕಲಿಯುತ್ತಿದ್ದಾಗ ಶಾಲೆಗಳಲ್ಲಿ ಪ್ರಾರ್ಥನೆ ಗೀತೆ ಯಾವುದಿತ್ತು ನೆನಪಿದೆಯೇ? ‘ಸ್ವಾಮಿ ದೇವನೆ ಲೋಕ ಪಾಲನೆ ತೇನಮೋಸ್ತುನಮೋಸ್ತುತೇ… ಪ್ರೇಮದಿಂದಲಿ ನೋಡು ನಮ್ಮನು ತೇನಮೋಸ್ತುನಮೋಸ್ತುತೇ…’ ಇದನ್ನು ಬರೆದವರು ಸೋಸಲೆ ಅಯ್ಯಾಶಾಸಿಗಳು. ಮೂಲದಲ್ಲಿ ಒಟ್ಟು ಎಂಟು ಚರಣಗಳಿದ್ದವು.

ಆಮೇಲೆ ಸ್ಕೂಲ್‌ಮಾಸ್ಟರ್ ಚಿತ್ರದಲ್ಲಿಅಳವಡಿಸಿಕೊಂಡಿದ್ದು, ಮತ್ತು ಶಾಲೆಗಳಲ್ಲೆಲ್ಲ ಪ್ರಾರ್ಥನೆಯಾಗಿ ಜನಪ್ರಿಯವಾದದ್ದು ಎರಡು ಚರಣಗಳ ಆವೃತ್ತಿ. ಆ ಪದ್ಯದ ಪ್ರತಿಯೊಂದು ಸಾಲು ಕೂಡ 3,4,3,4,3,4…ಗತಿಯ ಪದಸಂಚಲನೆಯೇ. ನಮ್ಮ ಶಾಲೆಯಲ್ಲಿ ವಾರದ ಒಂದೊಂದು ದಿನ ಒಂದೊಂದು ಪ್ರಾರ್ಥನೆಗೀತೆ ಇರುತ್ತಿತ್ತಾದ್ದರಿಂದ ಮುಂಡಾಜೆ ರಾಮಚಂದ್ರ ಭಟ್ಟರು ಬರೆದ ಈ ಪದ್ಯವೂ ಬುಧವಾರದ ಪ್ರಾರ್ಥನೆಯಾಗಿ ಇತ್ತು: ‘ಶಾರದಾಂಬೆಯೆ ವಿಧಿಯ ರಾಣಿಯೆ ನಿನಗೆ ನಾ ವಂದಿಸುವೆನು… ದಾರಿ ಕಾಣದೆ ಬಳಲುತಿರುವೆನು ತೋರಿಸೌ ಸತ್ಪಥವನು…’ ಇದರ ಪ್ರತಿಯೊಂದು ಸಾಲಿನಲ್ಲಿ ಮಾತ್ರೆ ಲೆಕ್ಕ ಮಾಡಿದರೆ ಮತ್ತದೇ
3,4,3,4,3,4,3  ಮತ್ತೊಂದು ಗುರು. ಹೇಗೂ ಶಾಲೆಯಲ್ಲಿ ದ್ದೇವಾದ್ದರಿಂದ ಏಳನೆಯ ತರಗತಿಯ ಕನ್ನಡಭಾರತಿ ಪಠ್ಯಪುಸ್ತಕ
ತೆರೆದು ನೋಡೋಣ.

ಮೊದಲ ಪದ್ಯ ಕುವೆಂಪು ರಚನೆ ‘ಭಾರತಾಂಬೆಯೆ ಜನಿಸಿ ನಿನ್ನೊಳು ಧನ್ಯನಾದೆನು ದೇವಿಯೇ… ನಿನ್ನ ಪ್ರೇಮದಿ ಬೆಳೆದು ಜೀವವು ಮಾನ್ಯ ವಾದುದುತಾಯಿಯೇ|’ ಪದ್ಯದ ಮೇಲೆ ಕಣ್ಣುಹಾಯಿಸೋಣ. ಮಾತ್ರೆಗಳ ಲೆಕ್ಕ? 3,4,3,4,3,4,3  ಮತ್ತೊಂದು ಗುರು! ಆಗಲೇ ನೆನಪಾಗಿತ್ತಲ್ವಾ ಶಂ.ಗು.ಬಿರಾದಾರರ ‘ನಾವು ಎಳೆಯರು ನಾವು ಗೆಳೆಯರು ಹೃದಯ ಹೂವಿನ ಹಂದರ…’ – ಇದರ
ಸಾಲುಗಳದೂ ಅದೇ ಲೆಕ್ಕ ಅದೇ ಲಯ. ‘ತಾನ ತಾನನ ತಾನ ತಾನನ ತಾನ ತಾನನ ತಾನ ತಾ’ ಎಂದು ಗುನುಗುನಿಸಿದರೆ ಹೇಗಿರು ತ್ತದೋ ಹಾಗೆ. ಅಂದರೆ ಈ ಗುನುಗುನಿಸುಕೆಯನ್ನೇ ‘ಹಂದರ’ವಾಗಿಸಿದರೆ ನಮಗೆ ‘ದೋಣಿ ಸಾಗಲಿ’ಯೇ ಆಗಬೇಕಂತಿಲ್ಲ, ಮೇಲಿನ ಪದ್ಯಗಳಲ್ಲಿ ಯಾವುದಾದರೂಆಗುತ್ತದೆ, ನಮ್ಮ ಪದ್ಯದ ಬಳ್ಳಿ ಹುಲುಸಾಗಿ ಹಬ್ಬುತ್ತದೆ.

ಇನ್ನೂ ಒಂದಿಷ್ಟು ಇವೆ, ಸ್ವಲ್ಪ ತಾಳಿ. ಗೋಪಾಲಕೃಷ್ಣ ಅಡಿಗರ ವರ್ಲ್ಡ್-ಮಸ್ ಭಾವಗೀತೆ ‘ಯಾವ ಮೋಹನ ಮುರಲಿ ಕರೆಯಿತು ದೂರ ತೀರಕೆ ನಿನ್ನನು… ಯಾವ ಬೃಂದಾವನವು ಸೆಳೆಯಿತು ನಿನ್ನ ಮಣ್ಣಿನ ಕಣ್ಣನು…’ ಹಾಡುವ ಧಾಟಿ(ರಾಗ)
ಬೇರೆ ಇರಬಹುದು. ಲಯ(ತಾಳ) ಅದೇ. ವಿ.ಸೀತಾರಾಮಯ್ಯನವರದೊಂದು ಕತೆ, ‘ಮಹಾತ್ಯಾಗ’ ಚಿತ್ರಕ್ಕಾಗಿ ಪಿ.ಸುಶೀಲಾ
ಹಾಡಿರುವಂಥದ್ದು- ‘ಯಾವ ಜನ್ಮದ ಕೆಳೆಯೊ ಕಾಣೆನು ಕಂಡ ಕೂಡಲೆ ಒಲಿಸಿತು… ಕಣ್ಗೆ ರೂಪವು ಇಳಿವ ಮುನ್ನವೆ ಎದೆಗೆ
ಪ್ರೇಮವು ಹರಿಯಿತು…’ ಇನ್ನೊಂದು ತುಳಸೀದಾಸ ಭಜನೆ- ‘ರಾಮಚಂದ್ರ ಕೃಪಾಳು ಭಜಮನ ಹರಣ ಭವಭಯ ದಾರುಣಂ… ಕಂಜಲೋಚನ ಕಂಜಮುಖಕರ ಕಂಜ ಪದಕಂಜಾರುಣಂ…’ ಹಾಗೆಯೇ ಒಂದು ಹಿಂದೀ ಚಿತ್ರಗೀತೆ-‘ಆಪ್‌ಕೀ ನಜರೋನೇ ಸಮ್‌ಝಾ ಪ್ಯಾರ್‌ಕೇ ಕಾಬಿಲ್ ಮುಝೇ… ದಿಲ್‌ಕೀ ಯೇ ಧಡಕನ್ ಠೆಹರ್‌ಜಾ ಮಿಲ್‌ಗಯೀ ಮಂಜಿಲ್ ಮುಝೇ… ’ (ರಾಜಾ ಮೆಹದೀಆಲೀಖಾನ್ ರಚನೆ ‘ಅನ್‌ಪಢ್’ ಚಿತ್ರದ್ದು).

ವಾದಿರಾಜರ ಕೃಷ್ಣಾಷ್ಟಕದ ಸಾಲುಗಳು: ‘ಪಾಲಯಾಚ್ಯುತ ಪಾಲಯಾಜಿತ ಪಾಲಯಾ ಕಮಲಾಲಯ… ಲೀಲಯಾಧೃತ ಭೂಧರಾಂಬುರುಹೋದರಸ್ವಜನೋದರ’. ಒಂದು ಜನಪದ ಗೀತೆಯನ್ನೂ ಸೇರಿಸಿ ಗೀತಗುಚ್ಛವನ್ನು ಹಿಗ್ಗಿಸೋಣ. ಇದು ತುಳುನಾಡಿನಲ್ಲಿ ಬದುಕಿದ್ದ ನೆನ್ನಲಾದ ಅಗೋಳಿ ಮಂಜಣ್ಣ ಎಂಬ ಐತಿಹಾಸಿಕ ಪುರುಷನ ಕತೆ ಹೇಳುವ ತುಳು ಪಾಡ್ದನ: ‘ಕಡಲ ಕರೆಟುಪು ನಮ್ಮ ಈ ತುಳುನಾಡ ಗದ್ದೆನು ತೂವೊಡು… ಗುತ್ತು ಬರ್ಕೆಡು ಇತ್ತಿ ಬಂಟೆರೆ ಬಾರಗೆರೆ ಕತೆ ಕೇಣೊಡು.’ – ಇವೆಲ್ಲವೂ 3,4,3,4… ಲಯದವು. ನಮ್ಮ ಪದ್ಯಕ್ಕೆ ಹಂದರವಾಗಲು ಅರ್ಹತೆಯುಳ್ಳವು.

ಇಷ್ಟೆಲ್ಲ ಪ್ರಖ್ಯಾತ ಪದ್ಯಗಳು ಒಂದೇ ಲಯವನ್ನು ಅನುಸರಿಸಿವೆಯಾದರೆ ಅದಕ್ಕೊಂದು ಹೆಸರಿರಬೇಕಲ್ಲ? ಇದೆ,  ‘ಮಲ್ಲಿಕಾ ಮಾಲೆ’ ವೃತ್ತ ಎಂದು ಹೆಸರು. ತೆಲುಗಿನಲ್ಲಿ ‘ಮತ್ತಕೋಕಿಲ’ ಎಂದು ಹೆಸರು. ಆದರೆ ಮಲ್ಲಿಕಾ ಮಾಲೆ ಅಥವಾ ಮತ್ತಕೋಕಿಲ ಎನ್ನುವಾಗ ಸ್ವಲ್ಪ ಎಚ್ಚರಿಕೆ ಬೇಕು. ಶಾಸೀಯವಾಗಿ ಇದು ಅಕ್ಷರ ವೃತ್ತದ ಛಂದಸ್ಸು, ಅಂದರೆ ಪ್ರತಿಯೊಂದು ಸಾಲಿನಲ್ಲೂ 18 ಅಕ್ಷರಗಳಿರಬೇಕು, ಮತ್ತು ಅವುಗಳನ್ನು ತಲಾ ಮೂರು ಅಕ್ಷರಗಳಂತೆ ವಿಂಗಡಿಸಿ ‘ಯಮಾತಾರಾಜಭಾನಸಲಗಂ’ ಸೂತ್ರದನ್ವಯ ಗುರು-ಲಘು ಪ್ರಸ್ತಾರ ಹಾಕಿದಾಗ ಪ್ರತಿಯೊಂದು ಸಾಲಿನಲ್ಲೂ ಅನುಕ್ರಮವಾಗಿ ರ, ಸ, ಜ, ಜ, ಭ, ಮತ್ತು ರ ಗಣಗಳು ಇರಬೇಕು.
‘ಮಲ್ಲಿಕಾಯುತ ಮಾಲೆಯಪ್ಪುದು ರಂಸಜಂ ಜಭರಂಬರಲ್’ ಎಂದು ಕನ್ನಡದಲ್ಲಿ, ‘ಮಾಲಿಕೋತ್ತರ ಮಾಲಿಕಾರಸ
ಜಾಜ್ಭರೈಶ್ಚಗತಾಗತಾ’ ಎಂದು ಸಂಸ್ಕ ತದಲ್ಲಿ ಅದರ ನೆನೆಗುಬ್ಬಿ.

‘ಮತ್ತಕೋಕಿಲ ಮತ್ತಕೋಕಿಲ ಮತ್ತಕೋಕಿಲ ಕೋಕಿಲಾ’ ಎಂದು ಕೂಡ ನೆನಪಿಟ್ಟುಕೊಳ್ಳಬಹುದು. ಎರಡು ಲಘುಗಳು ಮೂರು
ಬಾರಿ ಜತೆಯಾಗಿ ಬರುತ್ತವೆ. ಎರಡು ಗುರುಗಳು ಜತೆಯಾಗಿ ಬರುವುದಿಲ್ಲ – ಅಂತೆಲ್ಲ ನಿಯಮಗಳಿವೆ. ‘ಜ್ವಾಲಿ ವಾಯು ದಿನೇಶ ಯುಗ್ಮ ಶಶಾಂಕ ಪಾವಕರೆಂಬಿವರ್| ಲೀಲೆಯಂ ಬರೆ ವಿಶ್ರಮಂ ವಸುಸಂಖ್ಯೆಯೊಳ್ ನಿಲೆ ಭಾಮಿನೀ| ನೀಲಲೋಲ ಸಹಸ್ರ ಕುಂತಳೆ ಸಂದುದಿಂತಿದು ಮಲ್ಲಿಕಾ| ಮಾಲೆಯೆಂಬುದು ನಿಶ್ಚಯಂ ಕವಿರಾಜಹಂಸನಿರ್ಮಿತಂ’ – ಇದು ಮಲ್ಲಿಕಾ ಮಾಲೆಯಂತೆ ಹೆಣೆದ ಪದ್ಯ ಮಲ್ಲಿಕಾ ಮಾಲೆಯ ಬಗ್ಗೆಯೇ.

ಇದರಲ್ಲಿ ಜ್ವಾಲಿ = ಅಗ್ನಿ = ರ ಗಣ; ವಾಯು = ಸ ಗಣ; ದಿನೇಶಯುಗ್ಮ = ಇಬ್ಬರು ಸೂರ್ಯರು = ಎರಡು ಜ ಗಣಗಳು. ಶಶಾಂಕ = ಚಂದ್ರ = ಭ ಗಣ; ಪಾವಕ = ಅಗ್ನಿ = ರ ಗಣ. ಹಿಂದಿನ ಕವಿಗಳು ಕಾವ್ಯವನ್ನು ದೈವತ್ವಕ್ಕೇರಿಸುತ್ತಿದ್ದರು ಎಂಬುದಕ್ಕೆ ಬೇರೆ ಪುರಾವೆ ಬೇಕೆ? ಆದರೆ ನಮ್ಮಂಥ ಪಾಮರರಿಗೆ ಅಷ್ಟೆಲ್ಲ ಕಠಿಣ ನಿಯಮಗಳನ್ನು ಪಾಲಿಸಿ ಪದ್ಯರಚನೆ ಕಷ್ಟ. ಪ್ರತಿ ಸಾಲಿನಲ್ಲಿ ಹದಿನೆಂಟೇ ಅಕ್ಷರಗಳಿರಬೇಕು, ರ, ಸ, ಜ, ಜ, ಭ, ರ ಗಣಗಳೇ ಇರಬೇಕು ಅಂತೆಲ್ಲ ಪಾಲಿಸಹೊರಟರೆ ಒಂದು ಸಾಲು ಬರೆದು ಮುಗಿಸಲಿಕ್ಕೆ ಅರ್ಧ ಆಯುಷ್ಯ ಸವೆದೀತು. ಹಾಗಾಗಿ ನಾವೇನು ಮಾಡಬಹುದೆಂದರೆ ಅಕ್ಷರವೃತ್ತಕ್ಕೆ ಬದಲಾಗಿ ಮಾತ್ರಾ ವೃತ್ತವನ್ನು  ಆಧರಿಸುವುದು. ಸಾಲಿನಲ್ಲಿ 18ಕ್ಕಿಂತ ಹೆಚ್ಚು ಅಕ್ಷರಗಳಿರಬಹುದು. ತಲಾ ಮೂರು ಅಕ್ಷರಗಳ ಗಣಗಳಾಗಿಸಲಿಕ್ಕಿಲ್ಲ.

ಬದಲಿಗೆ, 3,4,3,4 ಹೀಗೆ ಮಾತ್ರೆಗಳ ಲೆಕ್ಕದಲ್ಲಿ ವಿಂಗಡಣೆ ಮಾಡಿದರಾಯಿತು. ಬೇಕಿದ್ದರೆ ಈ ನಿಯಮ ಸಡಿಲಿಕೆಯಿಂದಾಗಿ ಮಲ್ಲಿಕಾ ಮಾಲೆ ಎನ್ನುವ ಬದಲು ಜಾಜಿ ಮಾಲೆ ಎನ್ನೋಣ. ಪರಿಮಳಯುಕ್ತ ಬಿಳಿಯ ಹೂವೇ. ಚಂದ ಚಂದವೇ. ಆದರೆ ಮಲ್ಲಿಗೆಯ ಗತ್ತು ಗಾಂಭೀರ್ಯ ಇಲ್ಲ ಅಂತಷ್ಟೇ. ಆ ದೃಷ್ಟಿಯಿಂದ ನೋಡಿದರೆ ‘ದೋಣಿ ಸಾಗಲಿ…’ ಸಹ ಮಲ್ಲಿಕಾ ಮಾಲೆ ಅಲ್ಲ ಜಾಜಿ ಮಾಲೆ! ಕೆಲವು ಸಾಲುಗಳಲ್ಲಿ 18ಕ್ಕಿಂತ ಹೆಚ್ಚು ಅಕ್ಷರಗಳಿವೆ. ಆದರೆ 3,4,3,4,3 ಮಾತ್ರೆಗಳ ವಿಂಗಡಣೆ ಪರ್ಫೆಕ್ಟ್ ಆಗಿ ಬರುತ್ತದೆ. ಅಂದಹಾಗೆ ಲೇಖನದ ತಲೆಬರಹವನ್ನು ಇನ್ನೊಮ್ಮೆ ಗಮನಿಸಿ. ಒಟ್ಟು 18 ಅಕ್ಷರಗಳು;  ರ, ಸ, ಜ, ಜ, ಭ, ರ ಗಣಗಳು. ಅದು ಪರಿಪೂರ್ಣ ಮಲ್ಲಿಕಾ ಮಾಲೆ ಎಂದು ಗೊತ್ತಾಗುತ್ತದೆ!

ನನಗೆ ಗೊತ್ತಿರುವ, ಪರಿಚಯವಿರುವ, ಈಗಿನ ಕವಿ ಪ್ರತಿಭೆಗಳ ಪೈಕಿ ಕೆಲವರ ಮಲ್ಲಿಕಾ ಮಾಲೆ(ಕೆಲವು ಜಾಜಿ ಮಾಲೆಯೂ ಇರಬಹುದು) ರಚನೆಗಳನ್ನು ನೋಡೋಣ. ಥಟ್ಟನೆ ಮೊದಲು ನೆನಪಾಗುವುದೇ ಮೋಹಿನಿ ದಾಮ್ಲೆಯವರು ಮಾಡಿದ ಮಾವಿನಕಾಯಿ ಗೊಜ್ಜು: ‘ಕಾಡು ಮಾವಿನಹಣ್ಣು ತನ್ನಿರಿ ತೊಳೆದು ತೊಟ್ಟನು ಕೆತ್ತಿರಿ| ಸುಲಿದು ಸಿಪ್ಪೆಯ ಬಹಳ ಗಮನ ವನಿಡುತ ವಾಟೆಯ ಬಿಡಿಸಿರಿ| ಇನಿತು ಉಳಿಸದೆ ಸಿಪ್ಪೆ ವಾಟೆಯ ರಸವನೆಲ್ಲವ ಹಿಂಡಿರಿ| ಕಠಿಣವಾದರೆ ಮರಿಗೆಯಲಿರಿಸಿ ಗುಂಡುಕಲ್ಲಲಿ ಗುದ್ದಿರಿ|| ಕಾಯಿತುರಿ ಹಸಿಮೆಣಸು ಸಾಸಿವೆ ಅರೆದು ರಸದಲಿ ಬೆರೆಸಿರಿ| ರುಚಿಗೆ ಉಪ್ಪನು ಇನಿತು ಬೆಲ್ಲವ ಒಗ್ಗರಣೆಯನು ಹಾಕಿರಿ| ದೋಣಿ ಸಾಗಲಿ ಮುಂದೆ ಹೋಗಲಿ ಹಾಡಿನಂತಿದ ಹಾಡಿರಿ| ಕಾಡುಮಾವಿನ ಹಣ್ಣ ರುಚಿಕರ ಗೊಜ್ಜು ಮಾಡುತ ಸವಿಯಿರಿ!’ ಇನ್ನು, ಬಿ.ಪಿ.ಕಟ್ಟಿಮನಿ ಎಂಬುವರೊಬ್ಬರು ಬಸ್ ಕಂಡಕ್ಟರ್ ಬಗ್ಗೆ ಬರೆದದ್ದು: ‘ಮುಂದೆ ಸಾಗಿರಿ ಮುಂದೆ ಸಾಗಿರಿ ಮುಂದೆ ಸಾಗಿರಿ ಕೇಳದೇ| ಹಿಂದೆ ಬೀಳದೆ ಮುಂದೆ ಬನ್ನಿರಿ ಸದ್ದುಗದ್ದಲ ಮಾಡದೇ| ಬಂದುನಿಲ್ಲಲು ಅಂದಚಂದದ ಸಾಲು ದಾರಿಯ ನೀಡುತಾ| ನಿಂದು ಕೊಳ್ಳಿರಿ ಚೀಟಿ, ಚಿಲ್ಲರೆ ಮುಂದೆ ನೀಡುವೆ ಕೇಳದೇ!’ ಕ್ಯಾಲಿಫೋರ್ನಿಯಾದಲ್ಲಿರುವ ಸ್ನೇಹಿತ ರಾಮ ಪ್ರಸಾದ್ ರಚನೆ, ಶ್ರೀರಾಮನನ್ನು ಕುರಿತು: ‘ದುಷ್ಟ ಬುದ್ಧಿಯ ಚಿಕ್ಕತಾಯಿಯ ನುಡಿಗೆ ಹೋದೆಯೊ ಕಾಡಿಗೆ| ಬೆಟ್ಟಗುಡ್ಡದ
ಕೋತಿ ಕರಡಿಯ ನಂಬಿ ಸಾಗರ ದಾಟಿದೆ| ಕೆಟ್ಟ ಬಾಯಿಯ ಬೀದಿ ಗುಲ್ಲಿಗೆ ಹೆಂಡತಿಯನೇ ತೊರೆದಿಹೆ| ಒಟ್ಟು ತಿಳಿಯದು ನಿನ್ನ ರೀತಿಯೆ ಮೊಗದಲೆಂತೀ ನಗುವಿದೆ?’ ಅವಧಾನಿ ಉಮೇಶ ಗೌತಮ ನಾಯಕ್ ಬರೆದ, ಕೃಷ್ಣಾರ್ಪಣಮಸ್ತು ಆದ ಮಲ್ಲಿಗೆಯ ಪದ್ಯ: ‘ಎಲ್ಲಿಗೆಲ್ಲಿಗೊ ಕಣ್ಣಿ ಕಿತ್ತಿಹ ಗೋವಿನಂದ ದೊಳೋಡಿದೇ| ಮೆಲ್ಲುವಾಸೆಯ ಗೆಲ್ಲಲಾಗದೆ ಬೇಲಿಯಂ ಜಿಗಿದಾಡಿದೇ| ಫಲ್ಲನೇತ್ರನೆ ವೇಣುನಾದಕೆ ಸೋತು ನನ್ನನೆ ನೀಡಿದೇ| ಮಲ್ಲಿಕಾ ಸುಮ ಮಾಲೆಯಾಗಿರುವೆನ್ನನೆತ್ತಿದೆ ಮೋದದೇ|’ ಪ್ರತಿಭಾವಂತ ನಂಜುಂಡ ಭಟ್ಟರಂತೂ ‘ತಾನ ತಾನನ…’ ಗುನುಗುನಿಸುಕೆಯನ್ನೇ ಒಂದು ಪದ್ಯವಾಗಿಸಿ, ತ, ನ, ಬ ಮತ್ತು ರ ನಾಲ್ಕೇ ವ್ಯಂಜನಗಳನ್ನು ಬಳಸಿ ಪಕ್ಕಾ ಮಲ್ಲಿಕಾ ಮಾಲೆ ಹೆಣೆದಿದ್ದಾರೆ.

ಸಾಲದೆಂಬಂತೆ ಪ್ರತಿ ಸಾಲನ್ನೂ ಎಡದಿಂದ ಬಲಕ್ಕೆ ಬಲದಿಂದ ಎಡಕ್ಕೆ ಓದಿದರೆ ಸಮವಾಗಿರುವಂತೆ ಚಮತ್ಕಾರ ತೋರಿದ್ದಾರೆ!
ಅವರಿವರ ಮಾತೇ ಆಯ್ತು, ನಮ್ಮ ಪದ್ಯ ಎಲ್ಲಿ? ಇದೆ ಇದೆ ಒಂದಲ್ಲ ಎರಡಲ್ಲ ಮೂರು! ಮೊದಲಿಗೆ, ‘ದೋಣಿ ಸಾಗಲಿ…’ಯ ಕೈಡಿದುಕೊಂಡೇ ನಡೆಯುವ ಪ್ರಯತ್ನ ಮಾಡಿದ್ದು, ಈ ಪರಿಯಲ್ಲಿ: ‘ಬೋಟು ಸಾಗಲಿ ಮುಂದೆ ಹೋಗಲಿ ಫಾರು ಷೋರನು ಸೇರಲಿ| ಬ್ರೀಝು ವಿಂಡಿಗೆ ಫಾಲು ರೈಸುತ ವೇವ ಮೇಗಡೆ ಸೈಲಲಿ’. ನಗಾಡಬೇಡಿ!

ಟಿ.ಪಿ.ಕೈಲಾಸಂ ನಾಟಕಗಳಲ್ಲಿ ಆ ರೀತಿ ಡೈಲಾಗುಗಳಿರಬಹುದಾದರೆ, ಜಿ.ಪಿ.ರಾಜರತ್ನಂ ‘ಕಲ್ಟು ಕಾವ್ಯದ ಮಸಿಯ ಕುಡಿಕೆಯ| ಟಿಲ್ಟು ಮಾಡುವ ಮೊದಲು ಹಾವಿನ| ಬೆಲ್ಟು ಹಾಕಿದ ಗಣಪನ…’ ಅಂತೆಲ್ಲ ಬರೆಯಬಹುದಾದರೆ ‘ಬ್ರೀಝು ವಿಂಡಿಗೆ ಫಾಲು
ರೈಸುತ…’ ಏಕೆ ಕೂಡದು? ಆಯ್ತು, ಆರೀತಿ ಕಂಗ್ಲಿಷ್‌ದು ಬೇಡ ಅಂತಾದರೆ ಇದನ್ನು ನೋಡಿ. ಬಿಲಕ್ಕೆ ಹೊಗೆ ಬಿದ್ದಾಗ ವಿಲವಿಲ
ಒದ್ದಾಡುತ್ತ ಹೊರಬರುವ ಹೆಗ್ಗಣಗಳಂತೆ, ನೋಟು ಅಮಾನ್ಯೀಕರಣದಿಂದ ಅಂಡು ಸುಟ್ಟ ಬೆಕ್ಕಿನಂತಾಗಿರುವ ಮೋದಿವಿರೋಧಿ
ಗಳಿಗೆ ಇದು ಅರ್ಪಣೆ: ‘ಮೋದಿ ಮಾಡಿದ ಒಳ್ಳೆ ಕೆಲಸವು ನೋಟುಗಳ ಬದಲಾವಣೆ| ಕಾಳಧನ ಕೂಡಿಟ್ಟ ಖಳರನು ಬಗ್ಗು ಬಡಿದು ಸುಧಾರಣೆ’. ಓಕೆ, ಅದು ಎರಡೇ ಸಾಲುಗಳದಾಯಿತು.

ಈಗ ನಾಲ್ಕು ಸಾಲುಗಳ ಪರಿಪೂರ್ಣ ಪದ್ಯದೊಂದಿಗೆ ಮುಕ್ತಾಯ ಗೊಳಿಸೋಣ. ಕೋವಿಡ್ ಕಾಟದಿಂದ ಜಗವೆಲ್ಲ ಅಯೋಮಯ ವಾಗಿರುವಾಗ, ನಾಳೆ ಹೇಗೋ ಏನೋ ಎಂಬ ಆತಂಕ ಎಲ್ಲರಲ್ಲೂಮನೆ ಮಾಡಿರು ವಾಗ, ಪ್ರಾಣದ ಹಂಗು ತೊರೆದು ‘ಕೊರೊನಾ
ವಾರಿಯರ್ಸ್’ ಹಗಲಿರುಳೂ ಹೆಣಗಾಡು ತ್ತಿರುವಾಗ, ನವರಾತ್ರಿಯ ಸಂದರ್ಭದಲ್ಲಿ ದುರ್ಗಾದೇವಿಯ ಪಾದಗಳಿಗೆ ಪೊಡಮಡುತ
ಲೋಕಕಲ್ಯಾಣವನ್ನು ಬಯಸುತ್ತ, ದೇವಿಯಲ್ಲಿ ಬೇಡುತ್ತ ಈ ಮಾಲೆ: ‘ಸಾವಿನಾರ್ಭಟದಿಂದ ವೈರಸ ಬಾಳನಡಿಮೇಲ್ ಮಾಡಿದೆ|

ಜೀವವುಳಿಸಿದ ಯೋಧರಿಗೆ ನಾ ಧನ್ಯವಾದವ ಹೇಳುವೆ| ಹೂವನರ್ಪಿಸಿ ನಿನ್ನ ಚರಣಕೆ ಕರವ ಮುಗಿಯುತ ಕೋರುವೆ|ಕೋವಿಡಾ ಯಣ ಬೇಗ ಮುಗಿಯಲಿ ದೇವಿ ನಿನ್ನನು ಬೇಡುವೆ.’

Leave a Reply

Your email address will not be published. Required fields are marked *