Saturday, 23rd November 2024

ಆಯುಸ್ಸು ಹೆಚ್ಚುತ್ತಿದೆ, ಜಗತ್ತಿಗೆ ವಯಸ್ಸಾಗುತ್ತಿದೆ !

ಶಿಶಿರ ಕಾಲ

shishirh@gmail.com

ಊರಿನ ಸ್ನೇಹಿತರಿಗೆ ಫೋನ್ ಮಾಡಿದಾಗಲೆಲ್ಲ ಈ ವಿಚಾರ ಬಂದೇ ಬರುತ್ತದೆ. ಊರು ಮೊದಲಿನಂತಿಲ್ಲ, ಈಗ ಇಡೀ ಊರಿಗೆ ಊರೇ ವೃದ್ಧಾಶ್ರಮ ವಾಗುತ್ತಿದೆ. ಹೆಚ್ಚಿನ ಮನೆಗಳಲ್ಲಿ ಪ್ರಾಯದವರೇ ಇಲ್ಲ. ಶಾಲೆಗಳಲ್ಲಿ ಮಕ್ಕಳಿಲ್ಲ. ಎಲ್ಲ ಮನೆಗಳಲ್ಲಿ ವೃದ್ಧ ತಂದೆತಾಯಂದಿರು. ತೋಟ ನೋಡಿಕೊಳ್ಳ ಲಾಗದೇ ಗುತ್ತಿಗೆ ಕೊಡುವವರೇ ಜಾಸ್ತಿ – ಹೀಗೆ. ಈ ವಿಚಾರ ಹೌದು. ನಮ್ಮೂರಿನ ಪ್ರತೀ ಮನೆಯ ಮುಂದಿನ ಪೀಳಿಗೆ ಇರೋದು ಬೆಂಗಳೂರಿನಲ್ಲಿ ಅಥವಾ ಇನ್ನೊಂದು ಹೊರ ಶಹರದಲ್ಲಿ. ಮೊದಲೆಲ್ಲ ಪ್ರತೀ ಮನೆಯಲ್ಲಿ ಕೊಟ್ಟಿಗೆಯಿರುತ್ತಿತ್ತು, ಗೋಧಾಮವಾಗಿದ್ದ ಕೊಟ್ಟಿಗೆ ಈಗ ಗೋ’ದಾಮು
ಆಗಿ ಬದಲಾಗಿದೆ. ದನಕರುಗಳಿರುವುದು ಊರಿನ ಕೆಲವೇ ಮನೆಗಳಲ್ಲಿ.

ಅಲ್ಲಿಗೆ ಬೆಳಗ್ಗೆಯೆದ್ದು ಬೈಕ್ ಹತ್ತಿಕೊಂಡು ಹೋಗಬೇಕು, ಹಾಲು ತಂದುಕೊಳ್ಳಬೇಕು. ಬೈಕ್ ಓಡಿಸಲು ವೃದ್ಧರ ಕೈಯಲ್ಲಿ ಆಗುತ್ತಿಲ್ಲ, ಏಕೆಂದರೆ ನಮ್ಮೂರಿನ ರಸ್ತೆಗಳು ಹಾಗಿವೆ. ಉದ್ದಕ್ಕೆ ಒಂದು ಮುಖ್ಯರಸ್ತೆಯಿದೆ. ಆ ರಸ್ತೆಗೆ ಗಟ್ಟಿ ಡಾಂಬರು ಬಿದ್ದದ್ದು ದಶಕದ ಹಿಂದೆ, ಅಂದಿನ ಮುಖ್ಯಮಂತ್ರಿ
ಜಗದೀಶ್ ಶೆಟ್ಟರ್ ನಮ್ಮೂರಿಗೆ ಬಂದಾಗ. ಅದಾದ ನಂತರ ಬರೀ ತೇಪೆಗಳು ಮಾತ್ರ. ಆದರೂ ಈ ಮುಖ್ಯ ರಸ್ತೆ ತಕ್ಕಮಟ್ಟಿಗಿದೆ. ಆದರೆ ಆ ಮುಖ್ಯರಸ್ತೆಯಲ್ಲಿ ಮನೆಗಳು ತೀರಾ ಕಡಿಮೆ.

ಮುಖ್ಯರಸ್ತೆ ಬೆನ್ನುಹುರಿಯಂತೆ, ಅದಕ್ಕೆ ಕವಲಾಗಿ ಚಿಕ್ಕ ಮಣ್ಣಿನ ಒಳರಸ್ತೆಗಳು. ಒಂಟಿಮನೆಗಳು ಒಂದೆರಡು ಕಿಲೋಮೀಟರ್ ಒಳಗೆ. ಈ ರಸ್ತೆಯಲ್ಲಿ ಬೈಕ್ ಓಡಿಸುವುದೆಂದರೆ ಅದು ಮಡ್ ಬೈಕ್ ರೇಸ್ ಮಾಡಿದಂತೆ. ಹೀಗಿರುವಾಗ ಸ್ವಲ್ಪ ಅನಾರೋಗ್ಯವಾಯಿತೆಂದರೂ ಹತ್ತು ಮೈಲಿ ದೂರದ
ತಾಲೂಕಿನ ಆಸ್ಪತ್ರೆಗೆ ಹೋಗಬೇಕು. ಬೈಕು, ಕಾರಿನಲ್ಲಿ ಹೋಗಿ ಚೆಕ್ ಅಪ್ ಮಾಡಿಸಿಕೊಂಡು ಬರೋಣ ಎಂದರೆ ಅದು ಕೂಡ ಕಷ್ಟ. ಇದೆಲ್ಲದರ ನಡುವೆ ಐದು ತಿಂಗಳು ದಿನ ತಾಸು ಬಿಡದಷ್ಟು ಮಳೆ. ಇಂತಹ ನಮ್ಮೂರಿನ ಪರಿಸ್ಥಿತಿಯನ್ನು ನನ್ನ ತಂದೆ ವಿವರಿಸುವಾಗ ಅದೇಕೋ ನಮ್ಮೂರಿ ನವರು ಮಕ್ಕಳನ್ನು ಓದಿ ಸಲೇಬಾರದಿತ್ತು ಎಂದು ಹೇಳಿ ನಿಟ್ಟುಸಿರು ಬಿಟ್ಟಿದ್ದೆ.

ಇಂತಹ ವಿಚಾರ ಬಂದಾಗ ಇದೆಲ್ಲದಕ್ಕೆ ನಾನು ಕೂಡ ಒಂದು ಕಾರಣ ವೆಂದೆನಿಸಿ ಮನಸ್ಸು ಖಿನ್ನವಾಗುವುದಿದೆ. ಇದು ಅನಿವಾರ್ಯವೇ ಅಥವಾ ಹೀಗೆ ಆಗುವುದೇ ಮನುಷ್ಯ ವಿಕಸನದ ಹಾದಿಯೇ? ಗೊತ್ತಿಲ್ಲ. ಮೊದಲೆಲ್ಲ ಊರೆಂದರೆ ಕ್ರಿಕೆಟ್, ಕಬಡ್ಡಿ ಟೂರ್ನಮೆಂಟುಗಳು, ಶಾಲಾ ಗ್ಯಾದರಿಂಗು ಗಳು, ವಾರ್ಷಿಕೋತ್ಸವ, ನಾಟಕ, ಯಕ್ಷಗಾನ, ಭಾಷಣ ಸನ್ಮಾನ ಕಾರ್ಯಕ್ರಮ ಇತ್ಯಾದಿ ಒಂದರ ಹಿಂದೆ ಇನ್ನೊಂದು ಇರುತ್ತಿತ್ತು. ಈಗಲೂ ಇದ್ದರೂ ಅದರ ಪ್ರಮಾಣ ಮತ್ತು ಅದರಲ್ಲಿನ ವೈಭವ ಕಡಿಮೆಯಾಗಿದೆ.

ಇದು ನಮ್ಮೂರಿನದಷ್ಟೇ ಕಥೆಯಲ್ಲ, ಬಹುತೇಕ ಊರುಗಳು ಇಂದು ಹೀಗೆಯೇ. ಅದು ಹೌದೆಂದು ಗಟ್ಟಿ ಸ್ವೀಕರಿಸಲು ಮನಸ್ಸೊಳಗಿನ ತಪ್ಪಿತಸ್ಥಭಾವ ಹಲವರಲ್ಲಿ ಅಡ್ಡ ಬರುತ್ತದೆ. ಒಟ್ಟಾರೆ ನಮ್ಮೂರಿಗೆ, ನಮ್ಮ ಊರುಗಳಿಗೆ ವಯಸ್ಸಾಗುತ್ತಿದೆ. ಅದು ವಾಸ್ತವ. ಈಗ ಕೆಲವು ದಿನಗಳ ಹಿಂದೆ ಡೈಲಿ ಮೇಲ್ ಪತ್ರಿಕೆಯಲ್ಲಿ ಜಪಾನಿನ ಒಂದು ಸುದ್ದಿಯನ್ನು ಓದುತ್ತಿz. ಅಲ್ಲಿನ ಕ್ರೈಂ ಸಿಂಡಿಕೇಟ್ ‘ಯಕೂಜ’. ಈ ಗುಂಪು ಎಸಗುವ ಕ್ರೌರ್ಯ, ಕ್ರೈಂ, ಭೀಕರತೆ ಮೊದಲಾದ ಕಾರಣದಿಂದಾಗಿ ಇದಕ್ಕೊಂದು ವಿಶೇಷ ಕುಖ್ಯಾತಿ ಜಾಗತಿಕ ಮಟ್ಟದಲ್ಲಿ ಬಹಳ ಕಾಲದಿಂದಿದೆ.

ಸುಮಾರು ಹನ್ನೆರಡು ಹದಿಮೂರು ಸಾವಿರ ಜನರ ದೊಡ್ಡ ಸಿಂಡಿಕೇಟ್ ಅದು. ವಿಷಯ ಏನೆಂದರೆ ಈ ಯಕೂಜ ಗ್ಯಾಂಗ್‌ಸ್ಟರ್‌ಗಳಿಗೂ ವಯಸ್ಸಾಗು ತ್ತಿದೆಯಂತೆ. ಅದರಲ್ಲಿನ ಕ್ರಿಮಿನಲ್‌ಗಳ ಸರಾಸರಿ ವಯಸ್ಸು ಈಗ ೫೦ ದಾಟಿದೆಯಂತೆ. ಇತ್ತ ಭಾರತದದರೆ ಜನಸಂಖ್ಯೆ ತಗ್ಗುತ್ತಿಲ್ಲ, ಹೆಚ್ಚುತ್ತಲೇ ಇದೆ. ಆದರೆ ಕೃಷಿಕರ ಮನೆಯವರೆಲ್ಲ ಪರ ಊರು ಸೇರಿ, ಕೃಷಿ ಬಿಡುತ್ತಿರುವುದರಿಂದ ಬೇರೆಯದೇ ತೆರನಾದ ಪರಿಣಾಮವಾಗುತ್ತಿದೆ. ಭಾರತದಲ್ಲಿ ಕೃಷಿ ವಿಮುಖವಾಗಿ ಊರು, ಹಳ್ಳಿಯವರು ವೈಟ್ ಕಾಲರ್ ಕೆಲಸಕ್ಕೆ ವಲಸೆ ಹೋಗುತ್ತಿರುವುದು. ಇದಕ್ಕೆಲ್ಲ ಕಾರಣ ಗೊತ್ತಿದ್ದದ್ದೆ, ಯೋಚಿಸಬೇಕಾದ್ದು.

ಅದರ ಸರಿ ತಪ್ಪುಗಳ ವಾದ ಬೇಡ. ಆದರೆ ಜಪಾನಿನದು ಹಾಗಲ್ಲ. ಅಲ್ಲಿನ ಇಂದಿನ ತಲೆಮಾರಿನವರಿಗೆ ಮಕ್ಕಳು ಬೇಡ. ಮಕ್ಕಳೆಂದರೆ ಖರ್ಚು, ರಗಳೆ, ತಾಪತ್ರಯ, ರಿಟರ್ನ್ ಬಾರದ ಇನ್ವೆಸ್ಟ್ಮೆಂಟ್ ಇತ್ಯಾದಿ. ಜಪಾನಿನಲ್ಲಿ ಜನನ ಪ್ರಮಾಣ ಕುಗ್ಗುವುದಕ್ಕೆ ಮನೆಗಳ ಗಾತ್ರ ಚಿಕ್ಕದು, ಮಕ್ಕಳನ್ನು
ಬೆಳೆಸುವುದು ತುಟ್ಟಿ, ಕಷ್ಟ ಹೀಗೆ ನೂರೆಂಟು ಕಾರಣದ ವರದಿಗಳಿರಬಹುದು. ಆದರೆ ಇದೆಲ್ಲದಕ್ಕೆ ಮಿಗಿಲಾದ ಕಾರಣ ಅಲ್ಲಿನ ಯುವಜನಾಂಗದ ಗಿರುವ, ಸಮಾಜದಲ್ಲಿಯೇ ಆಗಿರುವ ಮಾನಸಿಕ ಬದಲಾವಣೆಗಳು. ಸಮಾಜ ಅದನ್ನು ಹಾಗೆಯೇ ಒಪ್ಪಿಕೊಂಡಿರುವುದು.

ಮಕ್ಕಳನ್ನು ಪಡೆಯದೇ ಇರುವುದೇ ಒಳ್ಳೆಯದೆನ್ನುವ ಸಾಮೂಹಿಕ ನಂಬಿಕೆ, ಪಾಲನೆ. ಇದು ಜೀವಜಗತ್ತಿನ ಅದೆಂತಹ ವಿಕೃತಿ ನೋಡಿ. ಜಪಾನ್ ಸಂಪದ್ಭರಿತ ದೇಶ, ಆದರೆ ಜನಸಂಖ್ಯೆಯ ಕೊರತೆ, ಹುಟ್ಟಿನ ಸಂಖ್ಯೆ ಕ್ಷೀಣಿಸಿರುವುದು ಅಲ್ಲಿನ ಸಮಸ್ಯೆ. ಈ ಸಮಸ್ಯೆ ಬಹಳ ದಶಕದಿಂದ ಇದೆ. ಅಲ್ಲದೇ ಜಪಾನಿಗಳ ಆಯುಸ್ಸು. ವಿಶ್ವಯುದ್ಧದ ನಂತರ ಅವರ ಸರಾಸರಿ ಆಯುಸ್ಸು ವೃದ್ಧಿಸುತ್ತ ಹೋಗಿ ಈಗ ಇಡೀ ದೇಶದ ಸರಾಸರಿ ಆಯುಸ್ಸು
(ವಯಸ್ಸಲ್ಲ) ೮೪ ವರ್ಷ. ಜಪಾನಿಗೆ ವಯಸ್ಸಾಗುತ್ತಿದೆ.

ಜಪಾನ್ ಮಾತ್ರವಲ್ಲ, ಹೀಗೆ ಸರಾಸರಿ ಆಯುಸ್ಸು ೮೦ಕ್ಕಿಂತ ಜಾಸ್ತಿಯಿರುವ ದೇಶಗಳು ಬಹಳಷ್ಟಿವೆ. ಹಾಂಕಾಂಗ್, ಮಕಾವು, ಸ್ವಿಟ್ಜರ್ಲೆಂಡ್, ಸಿಂಗಾಪೂರ ಹೀಗೆ ೩೫ ಕ್ಕಿಂತ ಜಾಸ್ತಿ ದೇಶಗಳಲ್ಲಿ ಲೈಫ್ ಎಕ್ಸ್‌ಪೆಕ್ಟೆನ್ಸಿ ೮೦ಕ್ಕಿಂತ ಜಾಸ್ತಿ ಅಥವಾ ಆಸುಪಾಸು. ಭಾರತೀಯರ ಸರಾಸರಿ ಆಯುಸ್ಸು ಸ್ವಾತಂತ್ರ್ಯ ಬರುವಾಗ ೩೭ ಇತ್ತು. ಇಂದು ೭೦ರ ಆಸುಪಾಸಿಗೆ ಬಂದು ನಿಂತಿದೆ. ಆದರೂ ಇಂದು ಆಯುಸ್ಸಿನ ಪ್ರಕಾರ ಭಾರತದ ಸ್ಥಾನ 136ನೇ ಯದು. ಇದರರ್ಥ ನಮಗಿಂತ ಹೆಚ್ಚಿಗೆ ಬಾಳಿಕೆ ಬರುವ ಮನುಷ್ಯರು 135 ದೇಶಗಳಲ್ಲಿದ್ದಾರೆ ಎನ್ನುವುದು.

(ಜಗತ್ತಿನಲ್ಲಿ ಒಟ್ಟೂ ಇರುವ ದೇಶಗಳೇ 195) ಜಗತ್ತು ಈ ಆಯುಸ್ಸನ್ನು ಲೆಕ್ಕವಿಡಲು ಶುರುಮಾಡಿದ್ದು ಎರಡನೇ ಮಹಾ ಯುದ್ಧದ ನಂತರದಿಂದ. ಅಲ್ಲಿಂದ ನಿರಂತರ ಪ್ರತೀ ದೇಶದ ಸರಾಸರಿ ಆಯುಸ್ಸು ವೃದ್ಧಿಸುತ್ತಲೇ ಇದೆ. ಕೆಲವು ಯುದ್ಧ ಪೀಡಿತ ದೇಶಗಳು, ಅಫ್ಘಾನಿಸ್ತಾನ, ಆಫ್ರಿಕಾದ ದೇಶ ಗಳು ಇವೆಲ್ಲ ಅಪವಾದವಿರಬಹುದು. ಕೋವಿಡ್‌ನಿಂದಾಗಿ ಪ್ರಾಣ ಕಳೆದುಕೊಂಡವರು ಹೆಚ್ಚಾಗಿ ೬೦ ವಯಸ್ಸು ದಾಟಿದವರೇ. ಆದರೂ ಈ ಎಲ್ಲ ಆಯಸ್ಸಿನ ಸ್ಟಾಟಿಸ್ಟಿಕ್ ತೀರಾ ಗೋಚರವಾಗುವಷ್ಟು ಬದಲಾಗಿಲ್ಲ.

ಜಾಗತಿಕ ಸರಾಸರಿ ಆಯುಸ್ಸು 1900ರ ಸಮಯದಲ್ಲಿ ೪೦ಕ್ಕಿಂತ ಕಡಿಮೆಯಿತ್ತು. ಹಾಗಂತ ಆಗ ಯಾರೂ ೪೦ ದಾಟುತ್ತಿರಲಿಲ್ಲ ಎಂದೇನೂ ಅಲ್ಲ. ಹಾಗೆ ನೋಡಿದರೆ ಇಂದಿನದಕ್ಕಿಂತ ಶತಾಯುಷಿಗಳ ಸಂಖ್ಯೆ ಅಂದೇ ಜಾಸ್ತಿ ಇದ್ದಿರಬಹುದು. ಆದರೆ ಅಂದು ಹುಟ್ಟಿದ ಮಗು ಬದುಕುವ ಪ್ರಮಾಣ ತೀರಾ ಕಡಿಮೆಯಿತ್ತು. ಹಾಗಾಗಿ ಅಂದಿನ ಆಯುಸ್ಸಿನ ಸರಾಸರಿ ಕೂಡ ಕಡಿಮೆಯಿತ್ತು. ಒಟ್ಟಾರೆ ನಾವು ಲೆಕ್ಕವಿಡಲು ಶುರುಮಾಡಿದಾಗಿನಿಂದ ಅತ್ಯಂತ ಹೆಚ್ಚು ಸರಾಸರಿ ಮನುಷ್ಯನ ಆಯುಸ್ಸು ಇರುವುದು ಈಗ, ಇಂದು. ಜಗತ್ತಿಗೇ ವಯಸ್ಸಾಗುತ್ತಿದೆ.

ನಮಗೆ ಏನೇ ಬದಲಾದರೂ ಸಮಸ್ಯೆಯೇ. ಹಾಗೆಯೇ ಇದು ಕೂಡ ಈಗ ಹಲವು ಸಮಸ್ಯೆಗಳಿಗೆ ಜಾಗತಿಕವಾಗಿ ಕಾರಣವಾಗಿದೆ. ನೋಡಿ ಹೇಗಿದೆ, ಜನರು ಬೇಗ ಸತ್ತರೂ ಸಮಸ್ಯೆ, ಸಾಯದಿದ್ದರೂ ಸಮಸ್ಯೆ. ಯಡಿಯೂರಪ್ಪನವರ ಸರಕಾರವಿರಬೇಕು, ರಾಜ್ಯ ಸರಕಾರೀ ನೌಕರರ ನಿವೃತ್ತಿ ವಯಸ್ಸನ್ನು ೫೮ ರಿಂದ ೬೦ಕ್ಕೆ ಏರಿಸಿದ್ದರು ಎನ್ನುವುದು ನೆನಪು. ಆಗ ಕೆಲವು ಬುದ್ಧಿವಂತ ಲೆಕ್ಕಾಚಾರದವರು ಇದೊಂದು ನರಿಜಾಣ ನಡೆ, ಇದರಿಂದ
ಮುಂದಿನ ಎರಡು ವರ್ಷ ಸರಕಾರಕ್ಕೆ ನಿವೃತ್ತಿಯಾಗುವಾಗ ಕೊಡುವ ಲಂಪ್ಸಮ್ ಹಣವನ್ನು ಕೊಡಬೇಕಾಗಿಲ್ಲ. ಆ ಹಣವನ್ನು ಅಭಿವೃದ್ಧಿಗೆ ಬಳಸುವ ಇರಾದೆ, ಚುನಾವಣಾ ತಯಾರಿ ಇತ್ಯಾದಿಯಾಗಿ ವಿಶ್ಲೇಷಿಸಿದ್ದರು. ಈಗ ಕೆಲವು ವಾರಗಳ ಹಿಂದೆ ಫ್ರಾನ್ಸ್‌ನಲ್ಲಿ ದೊಡ್ಡ ಪ್ರಮಾಣದಲ್ಲಿ ಮುಷ್ಕರಗಳು ನಡೆದ ಸುದ್ದಿಯಾಗಿತ್ತು. ಇದಕ್ಕೆ ಕಾರಣ ಅಲ್ಲಿನ ಸರಕಾರ ನಿವೃತ್ತಿ ವಯಸ್ಸನ್ನು ೬೨ರಿಂದ ೬೪ಕ್ಕೆ ಏರಿಸಲು ತಯಾರಾಗಿದೆಯೆಂದು. ಅಮೆರಿಕ ಮೊದಲಾದ ಕೆಲವು ದೇಶಗಳಲ್ಲಿ, ಬಹುತೇಕ ವೃತ್ತಿಗಳಲ್ಲಿ ನಿವೃತ್ತಿಗೆ ಒಂದು ನಿಗದಿತ ವಯಸ್ಸೆಂದು ಇಲ್ಲ.

ಕೈಯಗುವವರೆಗೆ, ಅವರು ಸಾಕು ಎನ್ನುವವರೆಗೆ ಕೆಲಸ ಮಾಡುವುದು ಅಮೆರಿಕದಲ್ಲಿ ಸಾಮಾನ್ಯ, ಅನಿವಾರ್ಯ. ಇಲ್ಲಿನ ಸರಕಾರೀ ಲೆಕ್ಕದಲ್ಲಿ ನಿವೃತ್ತಿಯ ವಯಸ್ಸು ೬೭! ಈ ಪೆನ್ಶನ್ ಪದ್ಧತಿ ಮೊದಲು ಜಾರಿಗೆ ಬಂದದ್ದು ೧೯ನೇ ಶತಮಾನದಲ್ಲಿ. ಅಂದು ನಿವೃತ್ತಿಯ ವಯಸ್ಸು ೬೦ಕ್ಕೆ ನಿಗದಿ
ಮಾಡಲಾಗಿತ್ತು. ಅದಾದ ನಂತರ ಯಾರೂ ಕೆಲಸಮಾಡುವ ಉಮೇದಿಯಲ್ಲಿರುತ್ತಿರಲಿಲ್ಲ. ಮೊದಲೇ ಹೇಳಿದಂತೆ ಆಗಿನ ಸರಾಸರಿ ಆಯುಸ್ಸೇ ೪೦ ಇತ್ತು. ಇಂದಿನ ಆಯುಷ್ಯದ ಲೆಕ್ಕಾಚಾರದಲ್ಲಿ ಅದು ನೂರು ವರ್ಷಕ್ಕೆ ನಿವೃತ್ತಿಯೆಂದು ಘೋಷಿಸಿದಂತಿತ್ತು ಅಂದಿನ ಸ್ಥಿತಿ.

ಆದರೆ ಕಾಲ ಕಳೆದಂತೆ ಸರಾಸರಿ ಆಯುಸ್ಸು ಹೆಚ್ಚಾಗುತ್ತ ಹೋಯಿತು. ಆದರೆ ಅದಕ್ಕೆ ಅನುಗುಣವಾಗಿ ನಿವೃತ್ತಿಯ ವಯಸ್ಸು ಮಾತ್ರ ಮೇಲಕ್ಕೇರ ಲಿಲ್ಲ. ಒಂದು ದೇಶದ ಸರಾಸರಿ ಆಯುಸ್ಸು ಎಷ್ಟಿರುತ್ತ ದೆಯೋ ಅದು ಆ ದೇಶ ನಿರ್ಧರಿಸಬೇಕಾದ ನಿವೃತ್ತಿಯ ವಯಸ್ಸು ಎನ್ನುವುದು ಅರ್ಥಶಾಸಜ್ಞರ ಶಿಫಾರಸು. ಸುಮ್ಮನೆ ಒಂದು ಲೆಕ್ಕಾಚಾರಕ್ಕೆ ನೋಡೋಣ. ಬಹುತೇಕರು ದುಡಿಯಲು ಶುರುಮಾಡುವುದು ೨೦ನೇ ವಯಸ್ಸಿಗೆ,೬೦ಕ್ಕೆ ರಿಟೈರ್ಮೆಂಟ್. ನಂತರ ೯೦ರ ವರೆಗೆ ಬದುಕಬಹುದು ಎಂದಿಟ್ಟುಕೊಳ್ಳೋಣ. ಈ ಲೆಕ್ಕದಲ್ಲಿ ಆ ವ್ಯಕ್ತಿ ದೇಶಕ್ಕೆ, ಸಮಾಜಕ್ಕೆ ಪ್ರೊಡಕ್ಟಿವ್ ಆಗಿರುವುದು ಕೇವಲ ಆಯುಸ್ಸಿನ ೪೦ ವರ್ಷ ಮಾತ್ರ. ಇನ್ನುಳಿದ ೫೦ ವರ್ಷ ಪರಾವಲಂಬಿ.

ಒಂದೋ ಇನ್ನೊಬ್ಬರು ನೋಡಿಕೊಳ್ಳಬೇಕು, ಇಲ್ಲವೇ ತಾನೇ ದುಡಿದು ಮಿಕ್ಕಿಸಿ ಇಟ್ಟುಕೊಂಡಿರಬೇಕು, ಇಲ್ಲ ಸರಕಾರ (ಉಳಿದವರೆಲ್ಲ ಸೇರಿ) ಅವರ ಖರ್ಚನ್ನು ಭರಿಸಬೇಕು. ಇದರರ್ಥ ವ್ಯಕ್ತಿಯ ಅರ್ಧಾಯುಷ್ಯಕ್ಕಿಂತ ಜಾಸ್ತಿ ಆತ ಅನ್ ಪ್ರೊಡಕ್ಟಿವ್. ಇಂದು ಅಮೆರಿಕ ಮೊದಲಾದ ಸರಾಸರಿ ಆಯುಸ್ಸಿನಲ್ಲಿ ಮುಂಚೂಣಿಯಲ್ಲಿರುವ ಎಲ್ಲ ದೇಶಗಳಲ್ಲಿ ರಿಟೈರ್ಮೆಂಟ್ ಖರ್ಚು ಬಹು ದೊಡ್ಡ ಸರಕಾರೀ ಬಾಬತ್ತಿನದು. ಇದು ಕೇವಲ ಪೆನ್ಶನ್‌ಗೆ ಸೀಮಿತವಾದದ್ದಲ್ಲ. ಬದಲಿಗೆ ಜನರ ಆಯುಸ್ಸು ಹೆಚ್ಚಿದಂತೆ ಅದಕ್ಕೆ ತಕ್ಕನಾಗಿ ಆಸ್ಪತ್ರೆಯ ಸಂಖ್ಯೆಯೂ ಹೆಚ್ಚುತ್ತದೆ. ಇದರಿಂದ ಸರಾಸರಿ ಆರೋಗ್ಯ ವಿಮೆಗೆ ಎಲ್ಲರೂ ವ್ಯಯಿಸುವ ಹಣ ಹೆಚ್ಚುತ್ತ ಹೋಗುತ್ತದೆ.

ಅಮೆರಿಕವನ್ನೇ ತೆಗೆದುಕೊಂಡರೆ, ಉದ್ಯೋಗದಾತನ ಅಡಿಯಲ್ಲಲ್ಲದೇ ಸ್ವತಂತ್ರವಾಗಿ ಆರೋಗ್ಯ ವಿಮೆಯನ್ನು ಪಡೆಯಬೇಕೆಂದರೆ ಸುಮಾರು ಸಾವಿರ ಡಾಲರ್ (೮೨,೦೦೦ ರು.ಗೆ ಸಮ) ಪ್ರತೀ ತಿಂಗಳಿಗೆ ವ್ಯಯಿಸಬೇಕು. ಅಷ್ಟಾಗಿಯೂ, ಇನ್ಶೂರೆನ್ಸ್ ಇದ್ದೂ, ಆಸ್ಪತ್ರೆ ಸೇರಿದರೆ ದಿವಾಳಿಯಾಗುವಷ್ಟು ಪ್ರಮಾಣದಲ್ಲಿ ಹಣ ತೆರಬೇಕು. ಎಲ್ಲ ರೋಗಗಳಿಗೂ ಕವರೇಜ್ ಇರುವುದಿಲ್ಲ. ಔಷಧ ಪ್ರತ್ಯೇಕ. ಆರೋಗ್ಯ ವಿಮೆ ಎಂದರೆ ಅದನ್ನು ಆರೋಗ್ಯವಿರುವವರೂ ಕಟ್ಟಬೇಕು. ನಿಮಗೆ ವಿಮೆ ಹೇಗೆ ಕೆಲಸ ಮಾಡುತ್ತದೆ ಎನ್ನುವುದು ಗೊತ್ತು. ಒಟ್ಟಾರೆ ದೇಶದ ಸರಾಸರಿ ಆಯುಸ್ಸು ಹೆಚ್ಚಿದಂತೆ ದುಡಿಯುತ್ತಿರುವ ವಯೋಮಾನದವರ ಮೇಲೆ ಆ ಹೊರೆ ಬೀಳುತ್ತದೆ, ಹೆಚ್ಚುತ್ತದೆ.

ವೃದ್ಧಾಶ್ರಮಗಳು, ವೃದ್ಧರಿಗೆ ಬೇಕಾಗುವ ಎಲ್ಲ ವ್ಯವಸ್ಥೆಗಳ ಹೊರೆ ಬೀಳುವುದು ಸರಕಾರದ ಮೇಲೆ, ದುಡಿಯುವವರ ಮೇಲೆ. ಇದು ಸರಿ, ತಪ್ಪು ಎಂದು ವಯಸ್ಸಾದವರನ್ನು ದೂಷಿಸುತ್ತಿಲ್ಲ. ಆದರೆ ಆರ್ಥಿಕ ದೃಷ್ಟಿಕೋನದಲ್ಲಿ ವಿಶ್ಲೇಷಿಸುವಾಗ ಇದನ್ನು ಬಿಡಲಿಕ್ಕಾಗುವುದಿಲ್ಲ. ವ್ಯಕ್ತಿಯ ಆಯುಸ್ಸು ಮತ್ತು ಆತನ ಆರ್ಥಿಕತೆಗೆ ನೇರ ಸಂಬಂಧ ಉಂಟು. ಭಾರತದಲ್ಲಿಯೇ ಮಿಡ್ಲ್‌ಕ್ಲಾಸ್ ಮತ್ತು ಅಪ್ಪರ್ ಮಿಡ್ಲ್‌ಕ್ಲಾಸ್‌ನವರ ಸರಾಸರಿ ಆಯುಸ್ಸಿನಲ್ಲಿ ೭ ವರ್ಷ ವ್ಯತ್ಯಾಸವಿದೆ.

ಅಮೆರಿಕದಲ್ಲಿ ಇದು ೯ ಇದೆ. ಶ್ರೀಮಂತರಿಗೆ ರೋಗ ಜಾಸ್ತಿ ಎನ್ನುವ ಒಂದು ಪ್ರತೀತಿ. ಆದರೆ ಶ್ರೀಮಂತರಾದಷ್ಟು ಸರಾಸರಿ ಆಯುಸ್ಸು ಹೆಚ್ಚು ಎನ್ನುವುದು ಖರೆ. ಏಕೆಂದರೆ ಅವರಿಗೆ ಲಭ್ಯವಾಗುವ ಆರೋಗ್ಯ ವ್ಯವಸ್ಥೆ ಕೂಡ ಜಾಸ್ತಿ ಎನ್ನುವುದು ಕಾಮನ್ ಸೆನ್ಸ್. ೧೯೫೦ರಲ್ಲಿ ಜಾಗತಿಕ ಜನಸಂಖ್ಯೆ ಇದದ್ದು ಕೇವಲ ೨೫೦ ಕೋಟಿ. ಈಗ ಇಂದು ಭಾರತ ಮತ್ತು ಚೀನಾದ ಸೇರಿದ ಜನಸಂಖ್ಯೆಯೇ ಅದಕ್ಕಿಂತ ಜಾಸ್ತಿ. ಈಗ ಜಗತ್ತಿನ ಜನಸಂಖ್ಯೆ ೮ ಬಿಲಿಯನ್, ಎಂಟುನೂರು ಕೋಟಿ. ಇದರಲ್ಲಿ ೬೫ ದಾಟಿ ದವರ ಜನಸಂಖ್ಯೆ ೮೦ ಕೋಟಿ. ಎಂದರೆ ೧೦ ಪ್ರತಿಶತ.

ಇಂದಿನ ಲೆಕ್ಕಾಚಾರದಂತೆ, ಇನ್ಯಾವುದೋ ದೊಡ್ಡ ರೋಗ ಬಾಧಿಸದಿದ್ದಲ್ಲಿ ೨೦೫೦ರ ವೇಳೆಗೆ ಇದು ಶೇ.೧೬ಕ್ಕೆ ಏರಲಿದೆ. ನಾನೂ ಸೇರಿದಂತೆ ಈ ಲೇಖನವನ್ನು ಓದುವ ನಿಮ್ಮಲ್ಲಿ ಹಲವರು ಈ ಸಂಖ್ಯೆಗೆ ಕರಣವಾಗಿರುತ್ತೇವೆ. ಅದಲ್ಲದೇ ೨೦೫೦ರ ವೇಳೆಗೆ ಸುಮಾರು ೬೧ ದೇಶಗಳ ಜನಸಂಖ್ಯೆ,
ಹೆಚ್ಚುವುದರ ಬದಲಿಗೆ ಶೇ.೧ರಷ್ಟು ಕಡಿಮೆಯಾಗಲಿದೆ. ಇದ್ದರಿಂದ ಈ ಎಲ್ಲ ದೇಶಗಳು ಅನಿವಾರ್ಯವಾಗಿ ಅನ್ಯದೇಶದ ವಲಸಿಗರಿಗರನ್ನು ಆಹ್ವಾ ನಿಸಲಿಕ್ಕಿದೆ. ಈಗಾಗಲೇ ಕೆನಡಾ, ಆಸ್ಟ್ರೇಲಿಯಾ ಆ ಕೆಲಸ ಮಾಡುತ್ತಿದೆ. ಅಲ್ಲದೇ, ಆಗ ಜಗತ್ತಿನ ೧೯೫ದೇಶಗಳ ಒಟ್ಟೂ ಜನಸಂಖ್ಯೆಯ ಅರ್ಧದಷ್ಟು ಕೇವಲ ಎಂಟು ದೇಶಗಳಲ್ಲಿ ಜಮಾವಣೆಯಾಗಲಿಕ್ಕಿದೆ.

ಇದೇನು ಆತಂಕ ಪಡಬೇಕಾದದ್ದೇ? ಹೌದು ಮತ್ತು ಅಲ್ಲ. ಆ ನಿಟ್ಟಿನಲ್ಲಿ ಎಲ್ಲ ದೇಶಗಳು ಕೆಲಸಮಾಡಬೇಕಾಗಿದೆ. ಜನಸಂಖ್ಯೆಯ ಜತೆ ಸರಾಸರಿ ವಯಸ್ಸಿಗೆ, ಆಯುಸ್ಸಿಗೆ ತಕ್ಕದಾಗಿ, ವ್ಯವಸ್ಥೆ ನಿರ್ಮಿಸಿಕೊಳ್ಳಬೇಕಾಗಿದೆ. ಮೂಲಸೌಕರ್ಯದ ಬೆಳವಣಿಗೆಯ ದಿಶೆ ಬದಲಿಸಿಕೊಳ್ಳಬೇಕಿದೆ. ಇದೆಲ್ಲದರ ಜತೆ ಹೆಚ್ಚು ವಯಸ್ಸಿನವರೆಗೆ ದುಡಿಯಲೇಬೇಕಾದ ಅನಿವಾರ್ಯದತ್ತ ಕೂಡ ನಾವು ಸಾಗುತ್ತಿದ್ದೇವೆ. ಆದರೆ ಇಲ್ಲಿರುವ ಸಮಸ್ಯೆಯೆಂದರೆ ಇದೆಲ್ಲದಕ್ಕೆ ಇನ್ನು ಹೆಚ್ಚು ಸಮಯ ಮಿಕ್ಕಿಲ್ಲ. ಒಂದೆಡೆ ಸರಾಸರಿ ಆಯುಸ್ಸಿನ ಹೆಚ್ಚಳ, ಇನ್ನೊಂದೆಡೆ ಜ್ಞಾನಪ್ರಮಾಣದಲ್ಲಿ ಭಯವಾಗುವಷ್ಟು ಇಳಿಕೆ.

ಇವೆರಡೂ ಕಾರಣಕ್ಕೆ ಇನ್ನೊಂದು ಐವತ್ತು ವರ್ಷದ ನಂತರದ ಜಗತ್ತಿನ ದೇಶಗಳ ಪರಿಸ್ಥಿತಿ ಹೇಗೆ ಎನ್ನುವ ಪ್ರಶ್ನೆ ಮೂಡುತ್ತದೆ. ತನ್ನಿಮಿತ್ತ ಚೀನಾ, ಜಪಾನ್, ಫ್ರಾನ್ಸ್, ಅಮೆರಿಕ, ಹೀಗೆ ಹಲವು ದೇಶಗಳಲ್ಲಿ ಆತಂಕ ಈಗಾಗಲೇ ಇದೆ. ಇಡೀ ವ್ಯವಸ್ಥೆ, ಆರ್ಥಿಕತೆ, ಮೂಲ ಸೌಕರ್ಯ ಇವೆಲ್ಲವೂ ಆಯಾ ದೇಶಗಳ ಇಂದಿನ ವಯಸ್ಸು ಮತ್ತು ಅದರ ಪ್ರಮಾಣಕ್ಕನುಗುಣವಾಗಿ ರೂಪಗೊಂಡಿರುತ್ತದೆ. ಆ ಎಲ್ಲ ವ್ಯವಸ್ಥೆಯನ್ನು ಕೆಲವೇ ವರ್ಷಗಳಲ್ಲಿ ಬೇರೆ ಪ್ರಮಾಣಕ್ಕೆ ಒಗ್ಗಿಸಿಕೊಳ್ಳುವುದು ಸುಲಭವಲ್ಲ. ಸರಾಸರಿ ವಯಸ್ಸು ಮತ್ತು ಆಯುಸ್ಸು ಎರಡೂ ಆರ್ಥಿಕವಾಗಿ ಏನೆಲ್ಲ ಪರಿಣಾಮ ಬೀರಲಿಕ್ಕಿದೆ ಎಂದು
ಊಹಿಸಿಕೊಳ್ಳಬಹುದು.

ದೇಶಗಳು ಇದೆಲ್ಲದಕ್ಕೆ ಮುಂಗಡವಾಗಿ ಸನ್ನದ್ಧವಾಗದಿದ್ದರೆ ಕಷ್ಟವನ್ನು ಎಲ್ಲರೂ ಸೇರಿ ಅನುಭವಿಸಬೇಕಾಗುತ್ತದೆ. ಮುಂದಿನ ದಿನಗಳಲ್ಲಿ ಜನಸಂಖ್ಯೆ ಮಾತ್ರ ಸಮಸ್ಯೆಯಾಗಿರುವುದಿಲ್ಲ, ಅದರ ಜೊತೆ ಬದಲಾದ ವಯೋ ಗುಂಪು ಕೂಡ ಸಮಸ್ಯೆಯಾಗಲಿದೆ. ತಿಳಿದಿರಲಿ.