Sunday, 8th September 2024

ಅಗ್ನಿಪಥ್‌ – ಡೈಯಾನ್ ಪ್ರಶ್ನೆಗಳು

ಶಿಶಿರ ಕಾಲ

shishirh@gmail.com

‘ವಾಟ್ ಇಸ್ ದಿಸ್ ನ್ಯೂಸೆನ್ಸ್ ಹ್ಯಾಪೆನಿಂಗ್ ಇನ್ ಇಂಡಿಯಾ ಶಿಶಿರ್! ಇದೆಲ್ಲ ದಂಗೆಯೇಳುವ ವಿಚಾರವೇ? ಭಾರತೀಯ ಮೌಲ್ಯ ಗಳಿಗೆ, ದೇಶಪ್ರೇಮಕ್ಕೆ ಏನಾಗಿದೆ? ಕ್ರಿಕೆಟ್ ವರ್ಡ್ ಕಪ್ ಗೆದ್ದಲ್ಲಿ ದೇಶಕ್ಕೆ ದೇಶವೇ ಸಂಭ್ರಮಿಸುತ್ತದೆ. ತಮಿಳುನಾಡಿನಲ್ಲಿ ಯಾರೋ ಒಬ್ಬ ಹೀರೋನ ಚಲನಚಿತ್ರ ಬಂದರೆ ಉದ್ಯೋಗಿಗಳೆಲ್ಲ ಸಾಮೂಹಿಕ ರಜೆ ಕೇಳಿ, ಪರಿಸ್ಥಿತಿ ಕುತ್ತಿಗೆಗೆ ತಂದು ನಿಲ್ಲಿಸುತ್ತಾರೆ. ಚಲನಚಿತ್ರ ಮಂದಿರದಲ್ಲಿ ಕುಣಿದು ವಿಡಿಯೊ ಹಂಚಿಕೊಂಡು ಸಂಭ್ರಮಿಸುತ್ತಾರೆ.

ನಾನು ಕಂಡ ಭಾರತೀಯರಿಗೆ ಒಂದಾಗಲು ತೀರಾ ಚಿಕ್ಕ ಚಿಕ್ಕ ಕಾರಣಗಳು ಸಾಕು. ಇನ್ ಫ್ಯಾಕ್ಟ್, ಕಾರಣವೇ ಬೇಕಿಲ್ಲ. ಇನ್ನು ನಾನು ಅತಿ ಹೆಚ್ಚು ನಂಬುವ ಯುವ ಜನಾಂಗ ಭಾರತದ್ದು. ಆಲಸಿ, ಕೆಲಸ ಮಾಡದ ಭಾರತೀಯನನ್ನು ನಾನಂತೂ ನನ್ನ ಕರೀಯರ್‌ ನಲ್ಲಿಯೇ ನೋಡಿಲ್ಲ. ಕೆಲಸದಲ್ಲಿ ಅದೂ ಇದು ಸಬೂಬು ಹೇಳುವ ಜನರೇ ಅಲ್ಲ ಭಾರತೀಯರು. ಭಾರತೀಯರೆಂದರೆ ಸೆನ್ಸಿಬಲ್.

ಆನೆಸ್ಟ್ – ಕಣ್ಣು ಮುಚ್ಚಿ ನಂಬಬಹುದು. ಆದರೆ ಈಗೀಗ ಭಾರತದಿಂದ ಬರುತ್ತಿರುವ ಸುದ್ದಿ ನೋಡುತ್ತಿದ್ದರೆ, ದಂಗೆಗಳ ಹಿಂದಿನ ಕಾರಣಗಳನ್ನು ತಿಳಿಯುತ್ತಿದ್ದರೆ ಏನೋ ಮಿಸ್ ಹೊಡೀತಿದೆ ಅನ್ನಿಸುತ್ತಿದೆ. ದೇಶ ಪ್ರೇಮ ಏನೆಂಬುದು ತಿಳಿಯಬೇಕಿದ್ದರೆ ಭಾರತೀ ಯರನ್ನು ನೋಡಬೇಕು ಎಂದು ಇಂಗ್ಲೆಂಡಿನ ಶಾಲೆಗಳಲ್ಲಿ ನನ್ನ ಟೀಚರ್ ಗಳು ಹೇಳು ತ್ತಿದ್ದರು. ಭಾರತೀಯ ಯುವಜನತೆ ಯನ್ನು ಬಳಸಿಕೊಳ್ಳುವ, ಅವರನ್ನು ಸೈನ್ಯಕ್ಕೆ ತರಲು ಸುಲಭ ಮಾರ್ಗವಾಗುವ ಯೋಜನೆಯ ವಿರುದ್ಧ ದಂಗೆಗಳೆಂದರೆ ನನಗೆ ನಂಬಲಾಗುತ್ತಿಲ್ಲ. ಏಕೆ ಜನ ದಂಗೆಯೇಳುತ್ತಿzರೆ? ಏನಾಗಿದೆ ಭಾರತೀಯರಿಗೆ…?’

ಇಂಗ್ಲೆಂಡಿನ, ಐವತ್ತರ ಆಸುಪಾಸಿನ ಡೈಯಾನ್ ಕರೆ ಮಾಡಿ ಒಂದರ ಹಿಂದೆ ಇನ್ನೊಂದರಂತೆ ಪ್ರಶ್ನೆಗಳ ಮಳೆ ಸುರಿಸುತ್ತಿದ್ದಳು. ಆಕೆಗೆ ಭಾರತವೆಂದರೆ ಎಲ್ಲಿಲ್ಲದ ಪ್ರೀತಿ, ಅಭಿಮಾನ, ಒಲವು. ಜಗತ್ತಿನ ಆಗುಹೋಗುಗಳನ್ನು ತೀರಾ ಸೂಕ್ಷ್ಮವಾಗಿ ಗ್ರಹಿಸುವವಳು ಡೈಯಾನ್. ನಮ್ಮಿಬ್ಬರದು ಕಂಪನಿಯ ಒಂದೇ ವಿಭಾಗದಲ್ಲಿ ಕೆಲಸ. ನಾನು ಡಿಪಾರ್ಟ್‌ಮೆಂಟಿನ ಅಮೆರಿಕ ವಹಿವಾಟನ್ನು ನೋಡಿಕೊಂಡರೆ ಆಕೆಯದು ಯುರೋಪ್ ಮಾರ್ಕೆಟ್.

ನನ್ನನ್ನು ಕಳೆದೊಂದು ವಾರ ಕಾಡಿದ್ದು ಆಕೆಯ ತೀರಾ ಸಮಂಜಸ, ಸಹಜ ಪ್ರಶ್ನೆಗಳು. ಆ ಪ್ರಶ್ನೆಗೆ ಕೊಟ್ಟ ವಿವರಣೆ ಇಲ್ಲಿ ಮಹತ್ವ ದ್ದಲ್ಲ. ಆಕೆ ಆ ಪ್ರಶ್ನೆಗಳನ್ನು ಕೇಳುವುದಕ್ಕಿಂತ ಮೊದಲೇ ಅವು ನನ್ನಲ್ಲಿ ಹುಟ್ಟಿ ಬಲವಾಗಿ ಕಾಡಿದ್ದವು ಕೂಡ. ಇಂದು ಈ ಪ್ರಶ್ನೆ ಗಳು ಜಾಗತಿಕ ವಿದ್ಯಮಾನಗಳನ್ನು ಹಿಂಬಾಲಿಸುವ ಬಹುತೇಕರನ್ನು ಕಾಡಿದೆ, ಕಾಡುತ್ತಿದೆ. ಯಾವುದೇ ದೇಶವಿರಲಿ, ಕೆಲವೊಂದು ವಿಚಾರಗಳು ರಾಜಕೀಯದ ಆಟದೊಳಕ್ಕೆ ಬರಲೇ ಬಾರದು. ಅದರಲ್ಲಿ ಸೈನ್ಯ, ಸೈನ್ಯಕ್ಕೆ ಸಂಬಂಧಿಸಿದ ರಾಷ್ಟ್ರೀಯ, ಅಂತಾ ರಾಷ್ಟ್ರೀಯ ವ್ಯವಹಾರಗಳು ಕೂಡ ಒಂದು. ಎಲ್ಲಿ ಸೈನ್ಯ ರಾಜಕೀಯದೊಳಕ್ಕೆ ಸಿಕ್ಕಿಕೊಂಡಿದೆಯೋ ಅಲ್ಲ ಅನಂತರದಲ್ಲಿ ಅರಾಜಕತೆ ದೇಶವನ್ನೇ ಹಿಂಡಿ ಹಿಪ್ಪೆಯಾಗಿಸಿವೆ. ಅದಕ್ಕೆ ಪಾಕಿಸ್ತಾನ, ಜೆಕೊಸ್ಲೊವಾಕಿಯಾ, ಅರ್ಮೇನಿಯಾ, ಬೆಲಾರುಸ್, ಈಜಿಪ್ಟ್ ಹೀಗೆ ಹಲವು ದೇಶಗಳ ಇತಿಹಾಸ ಮುಂದೆಯೇ ಇದೆ. ಈ ಹೇಳಿದ ಯಾವುದೇ ಒಂದು ದೇಶದ ಇಂದಿನ ಸ್ಥಿತಿಗೆ ಕಾರಣ ವೇನು ಎಂದು ಹುಡುಕಿಕೊಂಡು ಹೋದಾಗ ಅಲ್ಲ ಈ ಕಾರಣವೇ ಸಿಗುತ್ತದೆ.

ಒಂದು ಒಳ್ಳೆಯ, ಜನಪ್ರಿಯ ಆಡಳಿತವನ್ನು ಕೊನೆಗಾಣಿಸಲಾಗದಾಗ ಶಕ್ತಿಗಳು ಈ ರೀತಿಯ ಅರಾಜಕತೆಗೆ ಕುಮ್ಮಕ್ಕು ನೀಡುವುದು ಹೊಸತಲ್ಲ. ಭಾರತ ಆ ದೇಶಗಳ ಹಾದಿಯಲ್ಲಿ ಸಾಗುತ್ತಿದೆಯೇ ಎನಿಸುವುದು ಈ ಸಮಯದಲ್ಲಿ ಸಹಜ. ಇವೆಲ್ಲ ಅಕಾರಣ ದಂಗೆ ಗಳು ಸದ್ಯ ಭಾರತದಲ್ಲಿ ತೀರಾ ಕರಾರುವಕ್ಕಾಗಿ ನಡೆಯುತ್ತಿದೆ ಎನ್ನುವುದರಲ್ಲಿ ಅನುಮಾನವೇ ಬೇಡ. ರಾಜನಾಥ್ ಸಿಂಗ್, ‘ಅಗ್ನಿಪಥ್’ ಎನ್ನುವ ಮಹತ್ವಕಾಂಕ್ಷಿಯ ಯೋಜನೆಯನ್ನು ಜೂನ್ 14 ರ ಸಂಜೆ ಘೋಷಿಸಿದರು.

ಬಿಹಾರದಲ್ಲಿ ಈ ಕಾರಣಕ್ಕೆ ದಂಗೆಯಾದದ್ದು ಯಾವಾಗ? ಮಾರನೆಯ ದಿನ ಬೆಳಗ್ಗೆ. ಅಲ್ಲಿಂದ ಮುಂದೆ ಎರಡೇ ದಿನಗಳಲ್ಲಿ ದೇಶದ ಆರ್ಥಿಕತೆಯ ಬೆನ್ನೆಲುಬಾದ ರೈಲ್ವೆ ವ್ಯವಸ್ಥೆಯ ಮೇಲೆ ಎಲ್ಲಿಲ್ಲದ ದಾಳಿ ನಡೆದಿದೆ. ಮುನ್ನೂರಕ್ಕೂ ಹೆಚ್ಚು ರೈಲುಗಳನ್ನು ಜಖಂ ಮಾಡಲಾಗಿದೆ. ಇಡೀ ದಂಗೆ ದೇಶವ್ಯಾಪಿಯಾಗಿ ಮೂರನೆಯ ದಿನ ಹರಡಿದೆ. ಇದೆಲ್ಲ ಜನರು ಸ್ವಯಂ ಪ್ರೇರಿತರಾಗಿ, ದೇಶಪ್ರೇಮ ಕಾರಣಕ್ಕೆ ದಂಗೆಯೆದ್ದದ್ದು ಎನ್ನುವುದನ್ನು ಯಾರೂ ಒಪ್ಪಲಾಗುವುದಿಲ್ಲ.

ಇವೆಲ್ಲ ಮೊದಲೇ ತಯಾರಿ ಮಾಡಿಕೊಂಡು ವ್ಯವಸ್ಥಿತಿಯವಾಗಿ ನಡೆಸಿದ್ದು ಎನ್ನುವುದು ಸ್ಪಷ್ಟವಾಗಿ ಗೋಚರಿಸುತ್ತದೆ. ನಾನೇನು ಇದೆಲ್ಲದರಿಂದ ಭಾರತ ಪಾಕಿಸ್ತಾನವಾಗಿಬಿಡುತ್ತದೆ, ಅಥವಾ ಈಜಿಪ್ಟಿನ ಸ್ಥಿತಿ ಭಾರತಕ್ಕೆ ಬರುತ್ತದೆ ಎನ್ನುತ್ತಿಲ್ಲ. ಇಲ್ಲಿ ಗ್ರಹಿಸ ಬೇಕಾದದ್ದೇನೆಂದರೆ ಅಲ್ಲ ಹೇಗೆ ಈ ಕಂತ್ರಿ ಮಾರ್ಗದಿಂದ ಅರಾಜಕತೆ ಸೃಷ್ಟಿಸಲಾಗಿತ್ತು ಎನ್ನುವುದು ಮತ್ತು ಥೇಟ್ ಅದೇ ಪ್ರಯೋಗ ಭಾರತದಲ್ಲಿ ನಡೆಯುತ್ತಿದೆ, ಅದೇ ಬ್ಲೂಪ್ರಿಂಟ್ ಅನ್ನು ಬಳಸಲಾಗುತ್ತಿದೆ ಎನ್ನುವುದನ್ನು ಇಲ್ಲಿ ಗ್ರಹಿಸಬೇಕಾಗುತ್ತದೆ.

ಯಾವುದೇ ದೇಶವಿರಲಿ, ಯುವಜನತೆಯ ಶಕ್ತಿಯನ್ನು ಸರಿಯಾಗಿ ಚಾನೆಲ್ ಮಾಡಲೇಬೇಕು. ಕೊನೆಯ ಪಕ್ಷ ಅದಕ್ಕೆ ಅವಕಾಶ ವಿರಬೇಕು. ಅಮೆರಿಕದಂತಹ ದೇಶಗಳಲ್ಲಿ ಮಾಲ್‌ಗಳಲ್ಲಿ, ಜನ ಸೇರುವ ಜಾಗಗಳಲ್ಲಿ ಸೈನ್ಯ ಸ್ಟಾಲ್ ಹಾಕಿಕೊಂಡು ಪಾಂಪ್ಲೆಟ್‌ ಗಳನ್ನು, ಅಪ್ಲಿಕೇಶನ್‌ಗಳನ್ನು ಹಂಚುತ್ತದೆ, ಯುವಜನತೆ ಸೈನ್ಯ ಸೇರಲು ಪ್ರೇರೇಪಿಸುತ್ತದೆ. ರಾಜನಾಥ್ ಸಿಂಗ್, ಅಜಿತ್
ದೋವಲ್, ಮೋದಿ ಆಡಳಿತ ಕೂಡ ಯುವಜನತೆಯನ್ನು ಸೈನ್ಯದಲ್ಲಿ ಬರಮಾಡಲಿಕ್ಕೆ ಹೊರಟಿರುವುದು ಮೇಲ್ನೋಟಕ್ಕೇ
ತಿಳಿಯುತ್ತದೆ.

ಇದೇನು ಒತ್ತಾಯದ ಕಾನೂನಲ್ಲ. ಆದರೆ ಅದೆಲ್ಲ ಇಲ್ಲಿ ವಿಷಯವೇ ಆಗಿಲ್ಲ. ದಂಗೆಗೆ ಕಾರಣವೇ ಗೌಣವಾದಾಗ ಅದು ರಾಜಕೀಯ ಪ್ರೇರಿತ ಎಂದೇ ತಿಳಿಯ ಬೇಕಾಗುತ್ತದೆ. ಸ್ವಾತಂತ್ರ್ಯ ಬಂದು ಕೇವಲ ಮುಕ್ಕಾಲು ಶತಮಾನವಷ್ಟೇ ಆಗಿದ್ದು. ದೇಶದ ಮಟ್ಟಿಗೆ ತೀರಾ ಸಣ್ಣ ಸಮಯ. ಇಡೀ ಜಗತ್ತು ತೀರಾ ಬದಲಾವಣೆಗೊಳಗಾದದ್ದು ಕೂಡ ಇದೇ ಎಪ್ಪತ್ತೈದು ವರ್ಷದಲ್ಲಿ – ಎರಡನೇ ಮಹಾಯುದ್ಧದ ನಂತರದಲ್ಲಿ. ಸ್ವತಂತ್ರ ಭಾರತ ಹಲವು ಯುದ್ಧಗಳನ್ನು, ಅತಿಯೆನಿಸುವ ಜನಸಂಖ್ಯಾ ಬೆಳವಣಿಗೆ ಯನ್ನು, ಭ್ರಷ್ಟ ಆಡಳಿತವನ್ನು – ಹೀಗೆ ಹತ್ತು ಹಲವನ್ನು ತಡೆದುಕೊಂಡು ಇಲ್ಲಿಗೆ ಬಂದು ನಿಂತಿರುವುದು ಅದೆಷ್ಟೋ ದೇಶಗಳಿಗೆ ಇಂದಿಗೂ ಅಚ್ಚರಿಯ ವಿಚಾರ.

ಇಲ್ಲಿ ದೇಶದ ಸೈನಿಕರ ದೇಶಪ್ರೇಮದ ಅಳತೆ ಮಾಡುತ್ತಿಲ್ಲ. ನಾನು ಇಲ್ಲಿ ಹೇಳುತ್ತಿರುವುದು ಸೈನ್ಯದ ಸಬಲೀಕರಣದ ಬಗ್ಗೆ, ಆಧುನೀಕರಣದ ಬಗ್ಗೆ. ಶಸ್ತ್ರಾಸ್ತ್ರ, ಯುದ್ಧಸಲಕರಣೆಗಳ ತಯಾರಿಕೆಯಲ್ಲಿ ಇತ್ತೀಚೆಗೆ, ಮೋದಿ ಅಧಿಕಾರಕ್ಕೆ ಬಂದ ನಂತರ ಬಹಳಷ್ಟು ಬದಲಾವಣೆಗಳಾಗಿವೆ. ಆದರೆ ಅದಕ್ಕಿಂತ ಮೊದಲು? ಸರಿಯಾದ ಸಮವಸ, ಶಿರಸಾಣಗಳಿರಲಿಲ್ಲ !

ಬಹಳಷ್ಟು ಉದಾಹರಣೆಗಳನ್ನು ಕೊಡಬಹುದು – ತೇಜಸ್ ವಿಮಾನವನ್ನೇ ತೆಗೆದುಕೊಳ್ಳಿ. ಅದರ ಅಭಿವೃದ್ಧಿಗೆ ಸಹಿ ಹಾಕಿದ್ದು 1983ರಲ್ಲಿ, ಅಂದಿನ ಪ್ರಧಾನಿ ಇಂದಿರಾ ಗಾಂಧಿ. ಸೋವಿಯತ್ ಮೇಡ್ ಮಿಗ್ ವಿಮಾನವನ್ನು ಬಿಟ್ಟು ದೇಶೀ ಫೈಟರ್ ಜೆಟ್‌ ಗಳನ್ನು ಬಳಸಬೇಕು ಎನ್ನುವ ಮಹತ್ವಾಕಾಂಕ್ಷೆಯಿತ್ತು. ನಂತರದಲ್ಲಿ ಬಂದ ರಾಜೀವ್ ಗಾಂಧಿ ತಾಂತ್ರಿಕವಾಗಿ ಚಲಾಯಿಸಬಲ್ಲ ವಿಮಾನದ ತಂತ್ರಾಂಶ ಕೊಡಿ ಎಂದು ಅಂದಿನ ಅಮೆರಿಕದ ಅಧ್ಯಕ್ಷ ರೊನಾಲ್ಡ್ ರೇಗನ್ ಹತ್ತಿರ ಕೇಳಿಕೊಂಡಿದ್ದರು.

ಅಮೆರಿಕ ಎಂಜಿನ್‌ಗಳನ್ನು ಭಾರತಕ್ಕೆ ಕಳಿಸಿಕೊಟ್ಟಿತ್ತು. ದೇಶೀ ಫೈಟರ್ ಜೆಟ್ ಅಭಿವೃದ್ಧಿಗೆ ಫ್ರೆಂಚ್ ಎಂಜಿನಿಯರುಗಳು ಭಾರತಕ್ಕೆ
ಬಂದಿದ್ದರು. ಇದೆಲ್ಲ ನಡೆದು 33 ವರ್ಷಗಳ ನಂತರ ತೇಜಸ್ ಸ್ಕ್ವಾಡ್ರನ್ ಸೈನ್ಯವನ್ನು ಸೇರಿಕೊಂಡದ್ದು. ಇದಕ್ಕೆ ಮೂರು ದಶಕ ಬೇಕಾಯ್ತು. ಇದು ಒಂದು ಉದಾಹರಣೆ. ಇಲ್ಲಿ ದೇಶವನ್ನು ಅವಮಾನ ಮಾಡುವ ಉದ್ದೇಶ ನನ್ನದಲ್ಲ. ಆದರೆ ಒಂದು ವಿಮಾನದ ಅಭಿವೃದ್ಧಿಗೆ ಇಷ್ಟು ವಿಳಂಬವಾದಾಗ ಇನ್ನುಳಿದದ್ದು? ಭಾರತೀಯರು ಅಷ್ಟು ದಡ್ಡರೇ? ಅಥವಾ ಭಾರತದಲ್ಲಿ ಎಂಜಿನಿಯರುಗಳ, ವಿಜ್ಞಾನಿಗಳ ಕೊರತೆಯಿದೆಯೇ? ಮೈಕ್ರೋಸಾಫ್ಟ್, ಟ್ವಿಟ್ಟರ್, ಗೂಗಲ್ ಮೊದಲಾದ ಕಂಪನಿಗಳ ಸಿಇಒ ಭಾರತದ ಮೂಲದವರು.

ಅದು ಬಿಡಿ, ನಿನ್ನೆ ಮೊನ್ನೆ ಹುಟ್ಟಿಕೊಂಡ ಎಲಾನ್ ಮಸ್ಕ್‌ನ ಸ್ಪೇಸ್ ಎಕ್ಸ್ ರಾಕೆಟ್ ಕಂಪನಿಯಲ್ಲಿ ಅದೆಷ್ಟೋ ಅತ್ಯುನ್ನತ
ಎಂಜಿನಿಯರುಗಳು ಭಾರತದವರೇ. ಹೀಗಿರುವಾಗ ನಮ್ಮಕೆ ಅದು ಸಾಧಿಸಲಾಗಲಿಲ್ಲ? ಈ ಪ್ರಶ್ನೆ ಕೇಳಿಕೊಳ್ಳಲೇಬೇಕು. ಇದಕ್ಕೆಲ್ಲ ನೇರ ಕಾರಣ ರಾಜಕಾರಣ, ರಾಜಕೀಯ ಹಿತಾಸಕ್ತಿ ಎಂದು ಹೇಳದೆ ಇನ್ನೇನು ಹೇಳಬೇಕು? ಇಂದಿಗೂ ನಾವು ಬ್ರಿಟಿಷರು ಮಾಡಿಟ್ಟು ಹೋದ ರೆಜಿಮೆಂಟುಗಳ ಸೈನ್ಯವನ್ನು ಮುಂದುವರಿಸಿಕೊಂಡು ಬರುತ್ತಿದ್ದೇವೆ. ಅದರಲ್ಲಿ ಬದಲಾವಣೆಗಳಾಗಿರ ಬಹುದು.

ಆದರೆ ಆ ರೆಜಿಮೆಂಟುಗಳನ್ನು ಪ್ರತ್ಯೇಕಿಸಿದ ಆಂಗ್ಲರ ಉದ್ದೇಶವೇ ಸೈನ್ಯ ಒಂದಾಗಿರಬಾರದು ಎನ್ನುವುದು. ಈ ವಿಚಾರ ಹೇಳು ವಾಗ ಭಾರತೀಯ ಸೈನ್ಯಕ್ಕೆ ಅವಮಾನ ಮಾಡುವ ಉದ್ದೇಶ ಕೂಡ ನನ್ನದಲ್ಲ. ಇಂದು ಆಧುನಿಕ ಯುದ್ಧಗಳು ನಡೆಯುವ ರೀತಿ ಸಂಪೂರ್ಣ ಬದಲಾಗಿವೆ. ಫೈಟರ್ ಜೆಟ್, ಯುದ್ಧ ಹಡಗುಗಳು, ಟ್ರೈನ್ ಆದ ಸೈನಿಕರು ಇವೆಲ್ಲದಕ್ಕಿಂತ ಸೈನ್ಯ ಮುಂದು ವರಿಯಬೇಕಾಗಿದೆ.

ಇದು ಇಂಟರ್‌ನೆಟ್ಟಿನಲ್ಲಿ, ಯುದ್ಧಭೂಮಿಯಲ್ಲಿ ಡ್ರೋನ್, ರೋಬೋಟ್ ಬಳಸಿ ಯುದ್ಧಮಾಡುವ ಸಮಯ. ಯುದ್ಧ ನೆಲ ಭೂಮಿಯಾಚೆ ಅಂತರಿಕ್ಷಕ್ಕೆ ಸ್ಥಳಾಂತರವಾಗಿದೆ. ಹೀಗಿರುವಾಗ ಇಂತಹ ಸ್ವಾಗತಿಸಬೇಕಾದ ನಡೆಯನ್ನು ನಮ್ಮವರೇ  ದಂಗೆ ಯೆದ್ದು ರೈಲಿಗೆ ಬೆಂಕಿ ಇಡುವ ಸ್ಥಿತಿ ಬಂದzದರೂ ಏಕೆ? ಹೇಗೆ? ಮೊದಲು ಅತಿದೊಡ್ಡ ಸಮಸ್ಯೆಯಾಗಿರುತ್ತಿದ್ದುದು ಪಾಕಿಸ್ತಾನ – ಇಂದು ಆ ದೇಶವೇ ಆರ್ಥಿಕ ಮುಗ್ಗಟ್ಟಿನಲ್ಲಿದೆ.

ಅಲ್ಲಿನ ಹಣದುಬ್ಬರದ ಕಾರಣದಿಂದ ಈ ವರ್ಷದ ಸೈನ್ಯಕ್ಕೆ ತೆಗೆದಿಟ್ಟ ಹಣ ಶೇ.16 ರಿಂದ ಶೇ.12ಕ್ಕೆ ಇಳಿದಿದೆ. ಸದ್ಯ ಪಾಕಿಸ್ತಾನ ಕ್ಕಿಂತ ಹೆಚ್ಚು ತಲೆಕೆಡಿಸಿಕೊಳ್ಳಬೇಕಾದದ್ದು ಚೈನಾಕ್ಕೆ. ಚೈನಾ 2020ರಲ್ಲಿ ಪೂರ್ವ ಲಡಾಕ್‌ನಲ್ಲಿ ತೋರಿಸಿದ ಅಧಿಕಪ್ರಸಂಗ ವನ್ನು ನೋಡಿ ಹೆದರಿಕೊಳ್ಳುವುದಕ್ಕಿಂತ ಅಥವಾ ಅವರನ್ನು ಅಲ್ಲಿಯೇ ನಿಲ್ಲಿಸಿದ್ದೇವೆ ಎಂದು ಬೀಗುವುದಕ್ಕಿಂತ ಜಗತ್ತಿನ ಅತ್ಯಂತ ಬಲಶಾಲಿ ಆರ್ಥಿಕ ಶಕ್ತಿ ಮತ್ತು ಅಮೆರಿಕಕ್ಕೆ ಸಡ್ಡು ಹೊಡೆಯಲು ಮುಂದಾಗಿರುವ ಚೈನಾ ನಮ್ಮ ಪಕ್ಕದ ಶತ್ರು ಎನ್ನುವುದನ್ನು ಮರೆಯುವಂತಿಲ್ಲ.

ಚೈನಾ ಭಾಯಿ ಎಂದು ಹಿಂದೆ ನಾವು ಮಾಡಿಕೊಂಡ ಯಡವಟ್ಟು ಮರೆಯುವಂತಿಲ್ಲ. ಚೈನಾ ಎಂದಿಗೂ ಭಾರತಕ್ಕೆ ತಲೆನೋವು ಮತ್ತು ಮೊದಲ ಶತ್ರು ಎನ್ನುವ ಅರಿವಿನ ಜತೆಜತೆಗೆ ಜಗತ್ತಿನ ಎಲ್ಲ ದೇಶಗಳೂ ಇಂದು ತಮ್ಮ ಸೈನ್ಯವನ್ನು ಅತ್ಯಂತ ಮುಂದಿವರಿ ಯುವತ್ತ ಕೆಲಸ ಮಾಡುತ್ತಿವೆ ಎನ್ನುವ ಅರಿವು ಜನಸಾಮಾನ್ಯರಿಗಿರಲೇ ಬೇಕು. ಏನೇ ಇರಲಿ – ಸೈನ್ಯವನ್ನು ಎಲ್ಲರೂ ಸೇರಲು ಸಾಧ್ಯವಿಲ್ಲ. ಅದಕ್ಕೆ ಹಲವು ಕಾರಣಗಳಿರಬಹುದು. ಸೈನ್ಯಕ್ಕೆ ದೇಶಪ್ರೇಮವೊಂದೇ ಅರ್ಹತೆಯೂ ಅಲ್ಲ. ಹಾಗಾಗಿ ಸೈನ್ಯಕ್ಕೆ ಸೇರಿ ದೇಶಸೇವೆ ಮಾಡಲಾಗದವರು ಕನಿಷ್ಠ ಈ ರೀತಿಯ ಕುಮ್ಮಕ್ಕುಗಳಿಗೆ ಕಿವಿಕೊಡಬಾರದು ಮತ್ತು ಇದೆಲ್ಲವನ್ನು ಸರಿಯಾಗಿ ಗ್ರಹಿಸ ಬೇಕು ಮತ್ತು ಖಂಡಿಸಬೇಕು ಕೂಡ. ಇದೆಲ್ಲವನ್ನು ಸರಿಯಾಗಿ ತಿಳಿದುಕೊಂಡು ದಾರಿ ತಪ್ಪದಿರುವುದಿದೆವಲ್ಲ ಅದು ಸದ್ಯ ನಾವೆಲ್ಲ ಮಾಡಬಹುದಾದ ಅತ್ಯಂತ ದೊಡ್ಡ ದೇಶ ಸೇವೆ.

ನಮ್ಮ ರಾಜಕೀಯ ನಿಲುವುಗಳೇನೇ ಇರಬಹುದು – ಆದರೆ ದೇಶ, ಮುಂದಿನ ನಮ್ಮ ಮಕ್ಕಳ ಭವಿಷ್ಯ ಇವೆಲ್ಲವನ್ನು ಮೀರಿ ಸ್ವಹಿತಾಸಕ್ತಿಗೆ, ಅಲ್ಪ ರಾಜಕೀಯ ಲಾಭಕ್ಕೆ, ಮೂರ್ಕಾಸಿಗೆ, ಬಿರ್ಯಾನಿಗೆ ನಮ್ಮ ದೇಶಪ್ರೇಮವನ್ನು ಅಡವಿಡುವುದಿದೆಯಲ್ಲ ಅದು ದೇಶದ್ರೋಹವೇ ಸರಿ. ಅಕಾರಣ ದಂಗೆಯನ್ನು ನೋಡಿ ಒಪ್ಪಿದಲ್ಲಿ, ಏನೋ ಇರಬಹುದು ಎಂದು ಅನುಮಾನ ಪಟ್ಟಲ್ಲಿ ನಮ್ಮ ಕಾಲಮೇಲೆ ನಾವೇ ಕಲ್ಲು ಜಜ್ಜಿಕೊಂಡಂತಾಗುತ್ತದೆ. ಅದು ಅನುಭವಕ್ಕೆ ಬರುವಾಗ ಕಾಲ ಮೀರಿರುತ್ತದೆ. ಭಾರತದಂತಹ ದೇಶಕ್ಕೆ ಸತ್ಪ್ರಜೆಯಾದವನ ಮೌನಕ್ಕಿಂತ, ನಿಷ್ಕ್ರಿಯತೆಗಿಂತ ದೊಡ್ಡ ತೊಡಕು ಇನ್ನೊಂದಿಲ್ಲ. ಡೈಯಾನ್ ಕೇಳಿದ ಕೊನೆಯ ಪ್ರಶ್ನೆ
– ಭಾರತೀಯರಿಗೆ ದೇಶಪ್ರೇಮ ಕಡಿಮೆಯಾಗುತ್ತಿದೆಯೇ?

error: Content is protected !!