Sunday, 8th September 2024

ಆಲ್ಜೀಮರ್ಸ್‌ಗೆ ಔಷಧವಾಗಬಲ್ಲದೇ ವಯಾಗ್ರ ?

ವೈದ್ಯ ವೈವಿಧ್ಯ

ಡಾ.ಎಚ್‌.ಎಸ್‌.ಮೋಹನ್

ವಯಾಗ್ರ ಅಕಸ್ಮಾತ್ತಾಗಿ ಮತ್ತೊಂದು ಕಾಯಿಲೆಯಲ್ಲಿ ಉಪಯೋಗವಾಗಬಹುದೆಂದು ಇತ್ತೀಚಿನ ಅಧ್ಯಯನ ತಿಳಿಸುತ್ತದೆ. ಇಲಿಗಳ ಮೇಲೆ ಕೈಗೊಂಡ
ಪ್ರಾಯೋಗಿಕ ಪರೀಕ್ಷೆಗಳು ಈ ಔಷಧ ಆಲ್ಜೀಮರ್ಸ್ ಕಾಯಿಲೆಯಲ್ಲಿ ಉಪಯೋಗವಾಗಬಹುದೆಂದು ಆರಂಭಿಕ ಆಶಾದಾಯಕ ಮಾಹಿತಿ ಲಭ್ಯವಾಗಿದೆ.

ವಯಾಗ್ರ – ನೀಲಿ ಗುಳಿಗೆ – ಈ ಹೆಸರು 1990ರ ದಶಕದ ಅಂತಿಮ ಭಾಗದಲ್ಲಿ ಜನರಲ್ಲಿ ಸೆನ್ಸೇಷನ್ ಉಂಟು ಮಾಡಿದ ಔಷಧ. ವೈದ್ಯಕೀಯವಾಗಿ ನಾವು ಸಿಲ್ಡೆನಾಫಿಲ ಎನ್ನುತ್ತೇವೆ. ಮೂಲಭೂತವಾಗಿ ವಯಾಗ್ರವನ್ನು ವೈದ್ಯ ವಿಜ್ಞಾನಿಗಳು ಹೃದಯದ ರಕ್ತ ನಾಳಗಳ ಹಿಗ್ಗುವಿಕೆಗೆ ಉಪಯೋಗಿಸಬೇಕೆಂದು ಕ್ಲಿನಿಕಲ್
ಟ್ರಯಲ್ ನಡೆಸುತ್ತಿದ್ದಾಗ ಅಕಸ್ಮಾತ್ತಾಗಿ ಅದು ಪುರುಷ ಜನನೇಂದ್ರಿಯದ ರಕ್ತ ನಾಳಗಳನ್ನು ಹಿಗ್ಗಿಸಿದ್ದನ್ನು ಕಂಡುಕೊಂಡರು.

ನಂತರ ಆ ಉಪಯೋಗಕ್ಕೆ ಜನಪ್ರಿಯವಾಗಿ ಅದರ ಉತ್ಪಾದಕ ಕಂಪನಿ ಫೈಜರ್‌ಗೆ ಕೋಟ್ಯಂತರ ಮಿಲಿಯನ್ ಡಾಲರುಗಳ ಲಾಭ ತಂದುಕೊಟ್ಟಿರುವುದು ನಂತರದ ವಿದ್ಯಮಾನ. ಒಂದು ಕಾಯಿಲೆಯಲ್ಲಿ ಈಗಾಗಲೇ ಉಪಯೋಗವಾಗುತ್ತಿರುವ ಔಷಧ ನಂತರ ಹಲವು ಕಾಯಿಲೆಗಳಲ್ಲಿ ಉಪಯೋಗ ಕಂಡುಕೊಂಡ
ಉದಾ ಹರಣೆಗಳು ಬೇಕಾದಷ್ಟಿವೆ. ಹಾಗೆಯೇ ಈ ವಯಾಗ್ರ ಅಥವಾ ಸಿಲ್ಡೆನಾಫಿಲ್ ಔಷಧ ಈಗ ಅಕಸ್ಮಾತ್ತಾಗಿ ಮತ್ತೊಂದು ಬೇರೆ ಕಾಯಿಲೆಯಲ್ಲಿ ಉಪಯೋಗ ವಾಗಬಹುದೆಂದು ಇತ್ತೀಚಿನ ಒಂದು ಅಧ್ಯಯನ ತಿಳಿಸುತ್ತದೆ.

ಇಲಿಗಳಲ್ಲಿ ಕೈಗೊಂಡ ಹಲವಾರು ಅಧ್ಯಯನಗಳು ಹಾಗೂ ಮನುಷ್ಯರಲ್ಲಿ ಕೈಗೊಂಡ ಪ್ರಾಯೋಗಿಕ ಪರೀಕ್ಷೆ ಗಳು ಈ ಔಷಧ ಆಲ್ಜೀಮರ್ಸ್ ಕಾಯಿಯಲ್ಲಿ ಉಪಯೋಗವಾಗಬಹುದೆಂದು ಆರಂಭಿಕ ಆಶಾದಾಯಕ ಮಾಹಿತಿ ಲಭ್ಯವಾಗಿದೆ. ಜೈವಿಕ ಮತ್ತು ಜನಸಂಖ್ಯಾ ಆಧಾರಿತ ಪುರಾವೆಗಳ ಸಹಿತ ಆಲ್ಜೀಮರ್ಸ್ ಕಾಯಿಲೆ ಬರುವು ದನ್ನು ತಡೆಯಬಹುದು, ಹಾಗೆಯೇ ಚಿಕಿತ್ಸೆಯಾಗೂ ಲಭ್ಯವಾಗಬಹುದು ಎನ್ನುತ್ತದೆ ಈ ಅಧ್ಯಯನ.

ಮೆದುಳಿನ ಕಾಯಿಲೆ ಆಲ್ಜೀಮರ್ಸ್‌ಗೆ ಹೊಸದಾಗಿ ಔಷಧ ವನ್ನು ಕಂಡು ಹಿಡಿಯುವುದು ತುಂಬಾ ದುಬಾರಿಯಾದ ಕೆಲಸ, ಹಾಗಲ್ಲದೇ ಅದಕ್ಕೆ ಬಹಳಷ್ಟು ವರ್ಷಗಳು ಬೇಕಾಗುತ್ತದೆ – ಹೀಗೆಂದು ಯುನೈಟೆಡ್ ಕಿಂಗ್ಡಮ್‌ನ ಆಲ್ಜೀಮರ್ಸ್ ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ ಸೂಸನ್ ಕೊಲ್ಹಾಸ್‌ರು ನುಡಿಯುತ್ತಾರೆ. ಈಗಾಗಲೇ ಬೇರೆ ಕಾಯಿಲೆಗೆ ಲೈಸೆನ್ಸ್ ತೆಗೆದುಕೊಂಡು ಉಪಯೋಗದಲ್ಲಿರುವ ಔಷಧವನ್ನು ಇದುವರೆಗೆ ಯಾವುದೇ ನಿರ್ದಿಷ್ಟ ಔಷಧವಿಲ್ಲದ ಮೆದುಳಿನ ಮರೆವೆಯ ಕಾಯಿಲೆ ಆಲ್ಜೀಮರ್ಸ್ ಗೆ ಪ್ರಯತ್ನಿಸುವುದರಿಂದ ಹೊಸ ಔಷಧವಾಗಿ ಈ ಕಾಯಿಲೆಗೆ ಬಳಸುವುದು ಸುಲಭ ಎಂದು ಅವರ ಅಭಿಪ್ರಾಯ.

ಇತ್ತೀಚಿನ ನೇಚರ್ ಏಜಿಯಿಂಗ್ ಜರ್ನಲ್‌ನಲ್ಲಿ ಪ್ರಕಟವಾದ ಈ ಅಧ್ಯಯನವು ಕ್ಲೀವ್ ಲ್ಯಾಂಡ್‌ನ ಜಿನೋಮಿಕ್ ವೈದ್ಯಕೀಯ ಸಂಸ್ಥೆಯ ನೇತೃತ್ವದಲ್ಲಿ ನಡೆಯಿತು.   ವಯಸ್ಸಾದವರಲ್ಲಿ ಹೆಚ್ಚು ಕಾಣಿಸಿಕೊಳ್ಳುವ ಈ ಆಲ್ಜೀಮರ್ಸ್ ಕಾಯಿಲೆಯಲ್ಲಿ ಮೆದುಳಿನ ನೆನಪಿಗೆ ಸಂಬಂಧಿಸಿದ ನಿರ್ದಿಷ್ಟ ಜೀವಕೋಶಗಳು ಮರಣ ಹೊಂದುತ್ತ ಬರುತ್ತವೆ. ಪರಿಣಾಮ, ವ್ಯಕ್ತಿಗೆ ನಿಧಾನವಾಗಿ ನೆನಪಿನ ಶಕ್ತಿ ಕುಂದುತ್ತ ಬಂದು ಮರೆವು ಆವರಿಸುತ್ತದೆ. ಹಾಗೆಯೇ ಆ ವ್ಯಕ್ತಿಯ ವಿಚಾರ ಶಕ್ತಿಯೂ ತೀವ್ರವಾಗಿ ಕಡಿಮೆಯಾಗುತ್ತ ಬರುತ್ತದೆ. ಈ ಆಲ್ಜೀಮರ್ಸ್ ಕಾಯಿಲೆಯಲ್ಲಿ ಬೀಟಾ ಅಮೈಲಾಯ್ಡ ಮತ್ತು ಟಾವು ಎಂಬ ಎರಡು ಪ್ರೋಟೀನ್‌ಗಳು ಸಾಂಧ್ರಗೊಂಡು ಗಟ್ಟಿಯಾಗಿ ಪ್ಲೇಕ್ ರೀತಿ ನೆನಪಿನ ಕೋಶಗಳನ್ನು ಆವರಿಸಿ ಮರೆವು ಉಂಟಾಗುವಂತೆ ಮಾಡುತ್ತವೆ.

ಈ ಎರಡೂ ಪ್ರೋಟೀನ್‌ಗಳ ಈ ಕ್ರಿಯೆಯನ್ನು ತಡೆಯುವಲ್ಲಿ ವೈದ್ಯ ವಿಜ್ಞಾನಿಗಳು ಈವರೆಗೆ ಹಲವಾರು ರೀತಿಯ ಔಷಧಗಳ ಮತ್ತು ವ್ಯಾಕ್ಸೀನ್ ಗಳನ್ನು ಪ್ರಯತ್ನಿ ಸಿದ್ದಾರೆ. ಅವೆಲ್ಲವೂ ನೀರಿನಲ್ಲಿ ಹೋಮ ಮಾಡಿದಂತೆ ಉಪಯೋಗರಹಿತವಾದವು. ಇಲ್ಲಿ ಗಮನಿಸಬೇಕಾದ ಇನ್ನೊಂದು ವಿಚಾರ ಎಂದರೆ ವ್ಯಕ್ತಿಯ ಜೀನ್‌ಗಳು ವಾತಾವರಣದ ಹಲವಾರು ಅಂಶಗಳ ಭಿನ್ನ ರೀತಿಯ ಸಂಕೀರ್ಣವಾದ ಕ್ರಿಯೆಗಳು ಈ ಆಲ್ಜೀಮರ್ಸ್ ಕಾಯಿಲೆ ಬರಲು ಕಾರಣವಾಗುತ್ತವೆ. ಈಗಾಗಲೇ ಇರುವ ಯಾವ ಔಷಧಗಳು ಈ ಕಾಯಿಲೆಯಲ್ಲಿ ಉಪಯೋಗಕ್ಕೆ ಬರುತ್ತದೆ ಎಂದು ತಿಳಿಯಲು ಸಂಶೋಧಕರು ಆ ಕಾಯಿಲೆಯ ಜೆನೆಟಿಕ್ಸ್ ಮತ್ತು ಅದರ ಮೆಟಬಾಲಿಕ್ ಅಂಶಗಳನ್ನು ಒಳಗೊಂಡ ಕಂಪುಟೇಷನಲ್ ಮಾಡೆಲ್ ಅನ್ನು ಉಪಯೋಗಿಸಿದರು.

ಬೀಟಾ ಅಮೈ ಲಾಯ್ಡ ಮತ್ತು ಟಾವು ಪ್ರೋಟೀನ್‌ಗಳ ಜತೆಗೆ interact ಮಾಡುವ ಕಾಯಿಲೆಯ ನೆಟ್‌ವರ್ಕ್ನ ಪ್ರೋಟೀನ್‌ಗಳ ಬಗ್ಗೆ ಗಮನ ಹರಿಸಿದರು. ನಂತರ ಈಗಾಗಲೇ ಒಪ್ಪಿತ 1600 ಔಷಧಗಳ ಜತೆಗೆ ಗಮನಹರಿಸಿ ನೆಟ್ ವರ್ಕ್ ಪ್ರಾಕ್ಸಿಮಿಟಿ ಮೆಜರ್ಸ್‌ಗಳನ್ನು ಹುಟ್ಟು ಹಾಕಿದರು. ಆಗ ಆಲ್ಜೀಮರ್ಸ್ ಕಾಯಿಲೆಯ ನೆಟ್ ವರ್ಕ್‌ಗೆ ತೀರಾ ಹತ್ತಿರದಲ್ಲಿ ಪ್ರತಿಕ್ರಿಯಿಸುವ ಔಷಧಗಳ ಬಗ್ಗೆ ಸೂಕ್ಷ್ಮವಾಗಿ ಗಮನಹರಿಸಿದರು.

ಈ ಹಂತದಲ್ಲಿ ಆಲ್ಜೀಮರ್ಸ್ ಕಾಯಿಲೆಗೆ ಚಿಕಿತ್ಸೆಗೆ ಒದಗಬಹುದಾದ 66 ಔಷಧಗಳನ್ನು ಪ್ರತ್ಯೇಕಿಸಿದರು. ಹಲವಾರು ರೀತಿಗಳಲ್ಲಿ ತಾಳೆ ಹಾಕಿ, ಹಲವು ಪ್ರಾಣಿಗಳ ಮೇಲೆ ಪ್ರಯೋಗ ನಡೆಸಿ ಅಂತಿಮವಾಗಿ ಸಿಲ್ಡೆನಾಫಿಲ್ (ವಯಾಗ್ರ) ಹೆಚ್ಚು ಪರಿಣಾಮಕಾರಿಯಾಗಬಲ್ಲದು ಎಂದು ಕಂಡುಕೊಂಡರು. ಇದನ್ನು ಅವರು ಮತ್ತೊಂದು ರೀತಿಯಲ್ಲಿ ಒರೆಗೆ ಹಚ್ಚಿದರು. ಅಮೆರಿಕದ 7.23 ಮಿಲಿಯನ್ ಜನರ ಜೀವವಿಮೆ ಮಾಹಿತಿಯನ್ನು ಕ್ರೋಢೀಕರಿಸಿದರು.

ಅವರಲ್ಲಿ ಸಿಲ್ಡೆನಾಫಿಲ್ ಔಷಧವನ್ನು ಉಪಯೋಗಿಸುತ್ತಿರುವ ವ್ಯಕ್ತಿಗಳಲ್ಲಿ ಅದರ ಮುಂದಿನ 6 ವರ್ಷಗಳವರೆಗೆ ಶೇ.69 ಜನರಲ್ಲಿ ಆಲ್ಜೀಮರ್ಸ್ ಕಾಯಿಲೆ ಬರುವ ಸಾಧ್ಯತೆ ಕಡಿಮೆ ಎಂದು ಗೊತ್ತು ಪಡಿಸಿಕೊಂಡರು. ಇದು ಅಂಕಿ ಅಂಶಗಳ ಪ್ರಕಾರವೂ ಗಮನಾರ್ಹ ಎಂಬುದು ವಿಜ್ಞಾನಿಗಳ ಅಭಿಮತ. ಹಾಗೆಯೇ ಅವರು ಈ ಕಾಯಿಲೆಯ ಜತೆ ಇರುವ ಇನ್ನಿತರ ದೈಹಿಕ ಕಾಯಿಲೆಗಳು – ಡಯಾಬಿಟಿಸ್, ಜಾಸ್ತಿ ಪ್ರಮಾಣದ ರಕ್ತದೊತ್ತಡ, ಹೃದಯದ ಕಾರೋ ನರಿ ರಕ್ತ ನಾಳಗಳ ಕಾಯಿಲೆ ಹಾಗೂ ಮೆದುಳಿನಲ್ಲಿ ಗ್ರಹಿಸುವಿಕೆ ಸ್ವಲ್ಪ ಏರುಪೇರಾಗಿರುವುದು, ವಯಸ್ಸು, ಲಿಂಗ, ಜನಾಂಗೀಯ ಭೇದಗಳು – ಈ ಎಲ್ಲವನ್ನೂ ಗಮನದಲ್ಲಿಟ್ಟುಕೊಂಡು ಈ
ಪ್ರಯೋಗ ಕೈಗೊಂಡರು. ಈ ಔಷಧ ಆಲ್ಜೀಮಸ್ ನಲ್ಲಿ ನಿಜವಾಗಿಯೂ ಕೆಲಸ ಮಾಡುತ್ತದೆಯಾ ಎಂದು ಪರೀಕ್ಷಿಸಲು ಈ ಕಾಯಿಲೆ ಇರುವ ವ್ಯಕ್ತಿಗಳ ನರ ಜೀವ ಕೋಶಗಳ ಮೇಲೆ ಸಿಲ್ಡೆನಾಫಿಲ್ ಔಷಧದ ಪರೀಕ್ಷೆ ಮಾಡಿದರು.

ಹೊಸ ನರ ಜೀವಕೋಶಗಳನ್ನು ಈ ಔಷಧ ಹೆಚ್ಚಿಸುತ್ತದೆ ಹಾಗೂ ಟಾವು ಪ್ರೋಟೀನ್ ಜೀವಕೋಶಗಳಲ್ಲಿ ಶೇಖರ ವಾಗುವುದನ್ನು ತುಂಬಾ ಕಡಿಮೆ ಮಾಡುತ್ತದೆ.
ಇದು ಆರಂಭಿಕ ಪ್ರಯೋಗದ ಮೊದಲಿನ ಮಾಹಿತಿ ಮಾತ್ರ. ಹಾಗಾಗಿ ವಿವರವಾದ ಕ್ಲಿನಿಕಲ್ ಟ್ರಯಲ್ ನಡೆಸಿಯೇ ಅಂತಿಮ ತೀರ್ಮಾನಕ್ಕೆ ಬರಬೇಕೆಂದು ಮೇಲಿನ ಸಂಶೋಧಕರು ಅಭಿಪ್ರಾಯ ಪಡುತ್ತಾರೆ. ಮತ್ತೊಂದು ಅಂಶ ಎಂದರೆ ಹಿಂದೆ ತಿಳಿಸಿದ ವಿಮೆಯ ಮಾಹಿತಿಯಲ್ಲಿ ಜೆನೆಟಿಕ್‌ಗೆ ಸಂಬಂಧ ಪಟ್ಟ ಮಾಹಿತಿ ಲಭ್ಯವಿರಲಿಲ್ಲ. ಏಕೆಂದರೆ ಒಂದು ನಿರ್ದಿಷ್ಟ ಜೀನ್ apolipoprotein ಜೀನ್ ಹೊಂದಿರುವವರಲ್ಲಿ ಆಲ್ಜೀಮರ್ಸ್ ಕಾಯಿಲೆ ಬರುವ ಸಾಧ್ಯತೆ ಜಾಸ್ತಿ ಎನ್ನಲಾಗಿದೆ.

ಸಾಮಾನ್ಯವಾಗಿ ಈ ಸಿಲ್ಡೆನಾಫಿಲ್ ಔಷಧವು ಪುರುಷರಲ್ಲಿ ಮಾತ್ರ ಬಳಕೆ ಆಗುತ್ತಿರುವುದರಿಂದ ಮಹಿಳೆಯರಲ್ಲಿ ಈ ಔಷಧದ ಪರಿಣಾಮ ಅಧ್ಯಯನದಿಂದ
ಗೊತ್ತಾಗಬೇಕಷ್ಟೇ. ಹಾಗಾಗಿ ಪುರುಷ ಮತ್ತು ಮಹಿಳೆಯರಲ್ಲಿ ಔಷಧ ಮತ್ತು ಪ್ಲಾಸಿಬೋ ಉಪಯೋಗಿಸಿ ದೊಡ್ಡ ಪ್ರಮಾಣದ ಕ್ಲಿನಿಕಲ್ ಟ್ರಯಲ್ ನಡೆಸಿದ ನಂತರ ವಿವರವಾದ ಮಾಹಿತಿ ಲಭ್ಯವಾಗುತ್ತದೆ ಎಂದು ಈ ವೈದ್ಯ ವಿeನಿಗಳ ಅಭಿಮತ.

ಸಿಲ್ಡೆನಾಫಿಲ್ ಔಷಧದ ಚರಿತ್ರೆ: ಫೈಜರ್ ಕಂಪನಿಯು ಈ ಔಷಧವನ್ನು ಏರುರಕ್ತದೊತ್ತಡ ಮತ್ತು ಎದೆನೋವು ಲಕ್ಷಣ ಇರುವ ಎಂಜೈನಾ ಪೆಕ್ಟೋರಿಸ್ ಕಾಯಿಲೆಗೆ ಎಂದು ಅಭಿವೃದ್ಧಿ ಪಡಿಸಿತು. ಈ ಬಗ್ಗೆ ಕ್ಲಿನಿಕಲ್ ಟ್ರಯಲ್ ನಡೆಯುತ್ತಿರುವಾಗ ನರ್ಸ್ ಒಬ್ಬರು ಇದರಲ್ಲಿನ ಪುರುಷರು ಒಂದು ರೀತಿ ನಾಚಿಕೊಂಡು ಏನೋ
ಮುಚ್ಚಿಡುವ ರೀತಿಯಲ್ಲಿ ವರ್ತಿಸುತ್ತಿರುವುದನ್ನು ಗಮನಿಸಿದರು. ಆಗ ಆ ಟ್ರಯಲ್ ನ ಮೇಲ್ವಿಚಾರಕರು ಬಂದು ಸೂಕ್ಷ್ಮವಾಗಿ ಗಮನಿಸಿದಾಗ ಪುರುಷರ ಗುಪ್ತಾಂಗದ ಉದ್ರೇಕತೆ ಗಮನಕ್ಕೆ ಬಂದಿತು.

ಅಕಸ್ಮಾತ್ತಾಗಿ ಗೊತ್ತಾದ ಈ ಔಷಧದ ಪಾರ್ಶ್ವ ಪರಿಣಾಮವನ್ನು ತಮಗೆ ಅನುಕೂಲವಾಗುವಂತೆ ಮಾರ್ಪಡಿಸಬಹುದೆಂದು ಫೈಜರ್ ಕಂಪನಿಯವರು ತಿಳಿದು ಅದನ್ನು ಪುರುಷರ ಗುಪ್ತಾಂಗದ ನಿಮಿರು ದೌರ್ಬಲ್ಯ (Erectile Dysfunction) ಗಾಗಿಯೇ ಅಭಿವೃದ್ಧಿ ಪಡಿಸಿ ಅಮೆರಿಕದ FDA ಅನುಮತಿ ಕೋರಿ ಅರ್ಜಿ
ಹಾಕಿದರು. 1998 ರಲ್ಲಿ ಈ ಔಷಧಕ್ಕೆ FDA ಅನುಮತಿ ಕೊಟ್ಟ ಮೇಲೆ ಈ ಔಷಧ ವಯಾಗ್ರ ಹೆಸರಿನಲ್ಲಿ ಬಹಳ ಜನಪ್ರಿಯವಾಯಿತು.

ಅದಕ್ಕೆ ಮುಖ್ಯ ಕಾರಣ ಎಂದರೆ ಪುರುಷರ ಗುಪ್ತಾಂಗದ ನಿಮಿರು ದೌರ್ಬಲ್ಯಕ್ಕೆ ಅಲ್ಲಿಯವರೆಗೆ ಸೂಕ್ತವಾದ ಔಷಧವೇ ಇರಲಿಲ್ಲ. ಆ ತೊಂದರೆ ಇರುವ ಮಿಲಿಯನ್ ಗಟ್ಟಲೆ ಪುರುಷರು ತಮ್ಮ ಲೈಂಗಿಕ ಜೀವನದ ಬಗ್ಗೆ ತೀರಾ ಅಸಹಾಯಕರಾಗಿದ್ದರು. ಹಾಗಾಗಿ ವಯಾಗ್ರ ಜನಪ್ರಿಯವಾಗಿ 2008ರ ಹೊತ್ತಿಗೆ ಸುಮಾರು 2 ಬಿಲಿಯನ್‌ಗೂ ಅಧಿಕ ಡಾಲರುಗಳನ್ನು ಗಳಿಸಿತು. ಪುರುಷರಲ್ಲಿ ಗುಪ್ತಾಂಗದ ನಿಮಿರು ದೌರ್ಬಲ್ಯ ಇರುವವರಲ್ಲಿ ವೈದ್ಯರು ಹಲವು ಪರಿಣಾಮಗಳನ್ನು ಗುರುತಿಸಿ ದ್ದಾರೆ. ಅವುಗಳೆಂದರೆ – ವ್ಯಕ್ತಿಯ ಆತಂಕ ಹೆಚ್ಚಾಗುವಿಕೆ, ವ್ಯಕ್ತಿಯ ಆತ್ಮಸ್ಥೈರ್ಯ ಕುಂದುವುದು, ಕೆಲವೊಮ್ಮೆ ಆತ ತೀವ್ರ ಮಾನಸಿಕ ಖಿನ್ನತೆಗೆ ( Depre ssion) ಒಳಗಾಗುವುದು.

ವಯಾಗ್ರದ ವಿಶೇಷ ಮತ್ತು ವಿಚಿತ್ರ ಮಾಹಿತಿ: ವಯಾಗ್ರದ ಜನಪ್ರಿಯತೆ ಮತ್ತು ಅದರ ಅತ್ಯಧಿಕ ಮಾರಾಟ ಗಮನಿಸಿ ಹಲವಾರು ಡುಪ್ಲಿಕೇಟ್ ಬ್ರಾಂಡ್ ಗಳು ಮಾರುಕಟ್ಟೆಗೆ ಬಂದು ಜನರನ್ನು ದಾರಿ ತಪ್ಪಿಸುತ್ತಿವೆ. 2019 ರಲ್ಲಿ ಯುನೈಟೆಡ್ ಕಿಂಗ್ಡಮ್ ಒಂದರಲ್ಲೇ 3.5 ಮಿಲಿಯನ್ ಫೇಕ್ ವಯಾಗ್ರ ರೀತಿಯ ಮಾತ್ರೆ ಗಳನ್ನು ಸೀಜ್ ಮಾಡಿದ್ದರು. ಆನ್‌ಲೈನ್‌ನಲ್ಲಿ ಮಾರಾಟವಾಗುತ್ತಿರುವ ಹೆಚ್ಚಿನ ವಯಾಗ್ರ ರೀತಿಯ ಔಷಧಗಳು ಫೇಕ್ ಔಷಧಗಳು ಎಂದು ಒಂದು ಅಂದಾಜು.

ವಯಾಗ್ರದ ಇನ್ನಿತರ ಉಪಯೋಗಗಳು :

ಕತ್ತರಿಸಿ ಬೇರ್ಪಡಿಸಿದ ಹೂಗಳನ್ನು ನೇರವಾಗಿ ನಿಲ್ಲಿಸಿ ಹೆಚ್ಚು ಸಮಯ ಬಾಳಿಕೆ ಬರುವಂತೆ ಮಾಡಬಹುದು ಎಂದು ಇಸ್ರೇಲ್ ಮತ್ತು ಆಸ್ಟ್ರೇಲಿಯಾದ ಸಂಶೋ ಧಕರು ಕಂಡುಕೊಂಡಿದ್ದಾರೆ. ? ವಿಮಾನದಲ್ಲಿ ಖಂಡಾಂತರ ದೇಶಗಳಿಗೆ ಹೆಚ್ಚು ಪ್ರಯಾಣ ಮಾಡುವವರಿಗೆ ಜೆಟ್ ಲ್ಯಾಗ್ ಉಂಟಾಗುತ್ತದೆ. ಅಂದರೆ ಹಗಲು ರಾತ್ರಿಯ ವ್ಯತ್ಯಾಸವಾಗಿ ಪ್ರಯಾಣಿಕರಿಗೆ ತಲುಪಿದ ದೇಶದ ಸಮಯಕ್ಕೆ ಹೊಂದಿಕೊಳ್ಳುವುದು ಕಷ್ಟವಾಗುತ್ತದೆ. ಅಂತಹ ಸಂದರ್ಭದಲ್ಲಿ ವಯಾಗ್ರ ಉಪ ಯೋಗವಾಗುತ್ತದೆ ಎಂದು 2007 ರಲ್ಲಿ ಅರ್ಜಂಟೀನಾದ ಸಂಶೋಧಕರು ಕಂಡುಕೊಂಡಿದ್ದಾರೆ.

? ವಯಾಗ್ರವು ಕೆಲವು ಅಥ್ಲೀಟ್‌ಗಳ ಅದರಲ್ಲೂ ಬೆಟ್ಟ ಗುಡ್ಡ ಪ್ರದೇಶಗಳಲ್ಲಿ ಸೈಕ್ಲಿಂಗ್ ಮಾಡುವ ಅಥ್ಲೀಟ್‌ಗಳ ನಿರ್ವಹಣೆಯನ್ನು ಹೆಚ್ಚಿಸುತ್ತದೆ ಎಂದು 2006 ರಲ್ಲಿ ಸಂಶೋಧಕರು ಕಂಡುಕೊಂಡಿದ್ದಾರೆ.
? ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಜತೆಗೆ ಯುದ್ಧದ ಸಮಯದಲ್ಲಿ ತಾಲಿಬಾನ್ ಯೋಧರ ಅಡಗುತಾಣವನ್ನು ತಿಳಿಯಲು ಅಮೆರಿಕದ CIA ಯು ಸ್ಥಳೀಯ ಮಾಹಿತಿ ದಾರರಿಗೆ ವಯಾಗ್ರದ 4 ಮಾತ್ರೆಗಳನ್ನು ಕೊಟ್ಟು ಅವರಿಂದ ಮಾಹಿತಿ ಕಲೆ ಹಾಕುತ್ತಿದ್ದರು. ಒಂದಕ್ಕಿಂತ ಹೆಚ್ಚು ಹೆಂಡಿರುಗಳನ್ನು ಹೊಂದಿದ್ದ ಅಲ್ಲಿನ ಸ್ಥಳೀಯ ಆಫ್ಘಾನಿಗಳು 21 ನೇ ಶತಮಾನದ ಈ ಹೊಸ ಮಾತ್ರೆಗಳ (ಅವರಿಗೆ ಅಲ್ಲಿ ಲಭ್ಯವಿರಲಿಲ್ಲ) ಪ್ರಯೋಜನ ಪಡೆದು ಅವಶ್ಯ ಮಾಹಿತಿಯನ್ನು ಹೊರಗೆ ಡಹುತ್ತಿದ್ದರು.

? ಚಳಿ ಪ್ರದೇಶಗಳಲ್ಲಿ ಕೈಕಾಲುಗಳ ರಕ್ತ ನಾಳಗಳು ಚಳಿಯ ಪ್ರಭಾವ ಮತ್ತು ಮಾನಸಿಕ ಸ್ಥಿತ್ಯಂತರಗಳ ಪ್ರಭಾವದಿಂದ ಒಮ್ಮೆಲೇ ಸಂಕುಚಿತಗೊಳ್ಳುತ್ತವೆ. ಅದು ಕೈ ಮತ್ತು ಕಾಲು ಬೆರಳುಗಳ ಸೂಕ್ಷ್ಮ ಸಂವೇದನೆಯ ಮೇಲೆ ಪ್ರಭಾವ ಬೀರಿ ವಿಪರೀತ ನೋವು ಕೊಡಲಾರಂಭಿಸುತ್ತವೆ. ಇದಕ್ಕೆ ರೇನಾಡ್ ಕಾಯಿಲೆ ಎಂದು ಹೆಸರು. ಕೈಕಾಲುಗಳ ಅಂಚಿನ ಭಾಗಗಳ ರಕ್ತ ನಾಳಗಳನ್ನು ಹಿಗ್ಗಿಸಿ ನೋವು ಕಡಿಮೆ ಮಾಡಲು ವಯಾಗ್ರ ಬಳಕೆಯಾಗುತ್ತದೆ. ಹೀಗೆ ಸಿಲ್ಡೆನಾಫಿಲ್ ಔಷಧ
ವಿವಿಧ ರೀತಿಯಲ್ಲಿ ಉಪಯೋಗವಾಗುತ್ತಿದೆ.

error: Content is protected !!