ಅಶ್ವತ್ಥಕಟ್ಟೆ
ranjith.hoskere@gmail.com
ವಿಶ್ವದಲ್ಲಿಯೇ ಅದ್ಭುತ ಎನಿಸಿಕೊಳ್ಳುವ ಸಂವಿಧಾನ ಯಾವುದು ಎಂದರೆ ಅದು ‘ಭಾರತದ ಸಂವಿಧಾನ’ ಎನ್ನುವು ಮಾತು ಗಳನ್ನು ಇಡೀ ವಿಶ್ವವೇ ಹಲವು ಸಂದರ್ಭದಲ್ಲಿ ಒಪ್ಪಿಕೊಂಡಿದೆ. ಅದು ನಿಜವೂ ಸಹ. ಸಂವಿಧಾನ ಶಿಲ್ಪಿ ಎಂದು ಕರೆಸಿಕೊಳ್ಳುವ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಏಳೆಂಟು ದಶಕದ ಹಿಂದೆಯೇ ‘ಇಂದಿಗೂ ಅನ್ವಯವಾಗುವಂತಹ’ ಸಂವಿಧಾನವನ್ನು ರಚಿಸಿದ್ದಾರೆ ಎನ್ನುವುದರಲ್ಲಿ ಎರಡನೇ ಮಾತಿಲ್ಲ.
ಅಂದ ಮಾತ್ರಕ್ಕೆ ಭಾರತದ ಸಂವಿಧಾನ ಯಾವುದೇ ಸಮಸ್ಯೆಯಿಲ್ಲ ಎಂದಲ್ಲ. ಈಗಲೂ ನಮ್ಮ ಸಂವಿಧಾನದಲ್ಲಿರುವ ಹಲವು gray area ಗಳು ಆಗ್ಗಾಗೆ ನಮ್ಮ ಮುಂದೆ ಬಹುದೊಡ್ಡ ಸವಾಲಾಗಿ ಕಾಣಿಸುತ್ತಲೇ ಇರುತ್ತದೆ. ಹೌದು, ಭಾರತ ಸಂವಿಧಾನ ದಲ್ಲಿರುವ ಅಂಶಗಳನ್ನೇ ಮೂಲವಾಗಿಟ್ಟು ಕೊಂಡು, ಎಲ್ಲ ಕಾನೂನುಗಳನ್ನು ರಚಿಸಲಾಗಿದೆ. ಆದ್ದರಿಂದ ದೇಶದಲ್ಲಿ ಯಾವುದೇ ಸಣ್ಣ ಬದಲಾವಣೆಯಾಗಬೇಕಾದರೂ, ಅದನ್ನು ಸಂವಿಧಾನದ ಒರೆಗಲ್ಲಿಗೆ ಹಚ್ಚಿ ನೋಡಲೇಬೇಕಾಗುತ್ತದೆ.
ಸಂವಿಧಾನಿಕವಾಗಿ ಒಪ್ಪಿತವಾಗಿದ್ದರೆ ಮಾತ್ರ ಕಾನೂನು ರಚಿಸುವುದಕ್ಕೆ ಸಾಧ್ಯ. ಆದರೆ ಕೆಲವೊಮ್ಮೆ ಸಂವಿಧಾನದಲ್ಲಿರುವ ಕೆಲವು loophole ಗಳು ಚರ್ಚೆಗೆ ಬಂದಾಗ ಬಗೆಹರಿಸಲು ಸಾಧ್ಯವಾಗದ ಪರಿಸ್ಥಿತಿ ಎದುರಾಗುವುದನ್ನು ನೋಡಿದ್ದೇವೆ.
ಇದು ರಾಜಕೀಯ, ಔದ್ಯೋಗಿಕ, ಶೈಕ್ಷಣಿಕ ಅಥವಾ ವ್ಯಕ್ತಿ ಸ್ವಾತಂತ್ರ್ಯ ಯಾವುದೇ ಇರಬಹುದು. ಜಟಿಲ ಸಮಸ್ಯೆಗಳು
ಎದುರಾಗಾದಲೇ, ಸಂವಿಧಾನದಲ್ಲಿರುವ ‘ಕಾನೂನಾತ್ಮಕ ತೊಡಕಿನ’ ಬಗ್ಗೆ ಚರ್ಚೆ ಆರಂಭವಾಗುವುದು. ಈಗ ಈ ವಿಷಯದ ಬಗ್ಗೆ ಪ್ರಸ್ತಾಪಿಸಲು ಕಾರಣವೇನೆಂದರೆ, ತೀರಾ ಇತ್ತೀಚಿಗೆ ಕರ್ನಾಟಕದಲ್ಲಿ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕ ವಿಷಯದಲ್ಲಿ ಎದ್ದಿರುವ ಸಮಸ್ಯೆಯ ಕಾರಣಕ್ಕೆ.
ಕಾನೂನಿನಲ್ಲಿರುವ ಈಗಿರುವ ಕೆಲ ಗೊಂದಲದಿಂದ ಸುಮಾರು ಎರಡು ಸಾವಿರಕ್ಕೂ ಹೆಚ್ಚು ಮಹಿಳಾ ಅಭ್ಯರ್ಥಿಗಳಿಗೆ ಸಮಸ್ಯೆಯಾಗುತ್ತಿದೆ. ಅವರಿಗೆ ಮೀಸಲಿನಲ್ಲಿ ಸಮಸ್ಯೆಯಾಗುತ್ತಿದ್ದರೆ, ಒಟ್ಟಾರೆಯಾಗಿ 1:1 ಪಟ್ಟಿಯಲ್ಲಿರುವ 13 ಸಾವಿರಕ್ಕೂ ಹೆಚ್ಚು ಅಭ್ಯರ್ಥಿಗಳಿಗೆ, ಈ ತಾಂತ್ರಿಕ ಸಮಸ್ಯೆಯಿಂದಾಗಿ ನೇಮಕದ ಆದೇಶ ಸಿಗುವುದು ತಡವಾಗುವ ಸಾಧ್ಯತೆ ದಟ್ಟವಾಗಿದೆ.
ಹೌದು, ಈಗಿರುವ ಸಮಸ್ಯೆ ಏನೆಂದರೆ, ವಿವಾಹವಾಗಿರುವ ಮಹಿಳಾ ಅಭ್ಯರ್ಥಿಗಳು ತಮ್ಮ ತಂದೆಯ ಜಾತಿ ಹಾಗೂ
ಆದಾಯ ಪ್ರಮಾಣ ಪತ್ರವನ್ನು ನೀಡಿದ್ದಾರೆ.
ಆದರೆ ಶಿಕ್ಷಣ ಇಲಾಖೆ ಇದು ‘ಸಿಂಧು’ವಾಗುವುದಿಲ್ಲ. ವಿವಾಹವಾದ ಬಳಿಕ ಪತಿಯ ಜಾತಿ ಹಾಗೂ ಆದಾಯ ಪತ್ರವನ್ನು ನೀಡಬೇಕು ಎನ್ನುವ ಸೂಚನೆಯನ್ನು ಅಂತಿಮ ಕ್ಷಣದಲ್ಲಿ ನೀಡಿದೆ. ಆದರೆ ಅಧಿಸೂಚನೆ ಹೊರಡಿಸುವಾಗ, ಈ ಬಗ್ಗೆ ಪ್ರಸ್ತಾಪ ವಿರಲಿಲ್ಲ ಎನ್ನುವುದು ವಿವಾದದ ಕೇಂದ್ರಬಿಂದು. ಈ ಬಗ್ಗೆ ಸಾಮಾನ್ಯವಾಗಿ ನೋಡಿದಾಗ ಇಬ್ಬರ ವಾದವೂ ಸರಿಯಾಗಿಯೇ ಇದೆ. ಇಲ್ಲಿಯವರೆಗೆ ಮಹಿಳಾ ಅಭ್ಯರ್ಥಿಗಳು ಸಲ್ಲಿಸುವ ಜಾತಿ ಹಾಗೂ ಆದಾಯ ಪ್ರಮಾಣ ಪತ್ರ ಪೋಷಕರದ್ದೋ ಅಥವಾ ಪತಿಯದ್ದೋ ಎನ್ನುವುದನ್ನು ಗಮನಿಸುವ ಗೋಜಿಗೆ ಸರಕಾರ ಹೋಗಿರಲಿಲ್ಲ.
ಆದರೀಗ ಡಿಪಿಆರ್‌ನಲ್ಲಿರುವ ಸೂಚನೆಯ ಪ್ರಕಾರ ‘ವಿವಾಹವಾದ ಮಹಿಳೆಯರು ಪತಿಯ ಜಾತಿ ಹಾಗೂ ಆರ್ಥಿಕ ಪ್ರಮಾಣ
ಪತ್ರವನ್ನೇ ನೀಡಬೇಕು’ ಎಂದು ಹೇಳಿದೆ. ಆದರೆ ಬಹುತೇಕ ಮಹಿಳೆಯರು ವಿವಾಹವಾದರೂ, ತಮ್ಮೆಲ್ಲ ದಾಖಲೆಗಳಲ್ಲಿ
ತಮ್ಮ ತಂದೆಯ ಹೆಸರನ್ನೇ ನಮೂದಿಸುವುದರಿಂದ, ಸರಕಾರ ಕೇಳುತ್ತಿರುವ ದಾಖಲೆಗಳನ್ನು ಮಾಡಿಸಿಕೊಂಡಿರುವುದಿಲ್ಲ.
ಆದರೆ ಕಾನೂನಿನ ಪ್ರಕಾರ ಶಿಕ್ಷಣ ಹೇಳುವುದು ಸರಿಯಿರಬಹುದು. ಆದರೆ ಇಲ್ಲಿಯವರೆಗೆ ಈ ಬಗ್ಗೆ ಯಾರೊಬ್ಬರೂ ಗಮನಿಸಿಯೇ ಇಲ್ಲದಿರುವುದರಿಂದ,
ಇದೀಗ ಜಟಿಲವಾಗಿದೆ. ಶಿಕ್ಷಣ ಇಲಾಖೆಯ ಅಧಿಕಾರಿಗಳು ಹೇಳುವ ಪ್ರಕಾರ, 1983ರ ಡಿ.28ರಂದು ಸಿಬ್ಬಂದಿ ಹಾಗೂ ಆಡಳಿತ ಸುಧಾರಣೆ ಇಲಾಖೆ ಹೊರಡಿಸಿರುವ ಸುತ್ತೋಲೆಯಲ್ಲಿ, ವಿವಾಹವಾದ ಬಳಿಕ ಮಹಿಳೆ ತನ್ನ ಪತಿಯ ಆದಾಯ ಹಾಗೂ ಜಾತಿ ಪತ್ರವನ್ನೇ ಬಳಸಬೇಕು ಎಂದು ಸ್ಪಷ್ಟವಾಗಿದೆ. ‘ಕುಟುಂಬ’ ವನ್ನು ವ್ಯಾಖ್ಯಾನಿಸುವಾಗ ಪತಿ-ಪತ್ನಿ, ಮಕ್ಕಳು ಎಂದು ಹೇಳಲಾಗಿದೆ. ಆದರೆ ಮಹಿಳಾ ಅಭ್ಯರ್ಥಿ ವಿವಾಹವಾದ ಬಳಿಕ ಪತಿಯ ದಾಖಲೆಗಳನ್ನು ನೀಡಬೇಕು ಎನ್ನುವು
ದಾದರೆ, ಆ ಮಹಿಳೆ ವಿವಾಹಪೂರ್ವದಲ್ಲಿ ತಂದೆಯ- ತಾಯಿಯ ಕುಟುಂಬದಲ್ಲಿರುತ್ತಾರೆ.
ಆದ್ದರಿಂದ ಆ ಕುಟುಂಬವನ್ನು ಆಧರಿಸಬೇಕು ಎನ್ನುವುದು ಮಹಿಳಾ ಅಭ್ಯರ್ಥಿಗಳ ವಾದವಾಗಿದೆ. ಆದರೆ ರೇಷನ್ ಕಾರ್ಡ್‌ನಲ್ಲಿ ವಿವಾಹವಾದ ಬಳಿಕ ಹೆಸರನ್ನು ಪತಿಯ ಕುಟುಂಬದೊಂದಿಗೆ ಸೇರಿಸುವುದರಿಂದ, ಅಲ್ಲಿ ಅನ್ವಯಿಸಲು ಆಗುವುದಿಲ್ಲ ಎನ್ನುವುದು ಅಧಿಕಾರಿಗಳ ವಾದವಾಗಿದೆ. ಆದರೆ, ಕೆಲವರ ಪ್ರಕಾರ ಹುಟ್ಟಿದಾಗಿನಿಂದ ಪೋಷಕರೊಂದಿಗೆ ಬೆಳೆಯುವ ನಾವು ಎಲ್ಲ ದಾಖಲೆಗಳಲ್ಲಿಯೂ ತಂದೆಯ ಹೆಸರನ್ನೇ ನೀಡಿರುತ್ತೇವೆ. ಮದುವೆಯಾದ ಕೂಡಲೇ ಈ ಎಲ್ಲ ದಾಖಲೆಗಳಲ್ಲಿ ಹೆಸರನ್ನು ಬದಲಾಯಿಸಲು ಸಾಧ್ಯವೇ? ಅಥವಾ ಎಸ್‌ಎಸ್‌ಎಲ್‌ಸಿ ಅಂಕಪಟ್ಟಿ, ಪಿಯು ಅಂಕಪಟ್ಟಿಯಲ್ಲಿ ತಂದೆಯ ಹೆಸರಿನ ಬದಲಿಗೆ
ಪತಿಯ ಹೆಸರನ್ನು ನೀಡಲು ಸಾಧ್ಯವೇ? ಒಂದು ವೇಳೆ ಕೆಲ ದಾಖಲೆಗಳಲ್ಲಿ ಹೆಸರನ್ನು ಬದಲಾಯಿಸಲು ಅವಕಾಶವಿದ್ದರೂ, ಅದಕ್ಕೆ ತಿಂಗಳಾನುಗಟ್ಟಲೇ ಅಲೆಯಬೇಕಾಗುತ್ತದೆ.
ಆದ್ದರಿಂದ ಅನೇಕರು ಈ ಬದಲಾವಣೆಗಳನ್ನೇ ಮಾಡಿಕೊಂಡಿರುವುದಿಲ್ಲ ಎನ್ನುವ ವಾದವನ್ನು ಮಂಡಿಸಿದ್ದಾರೆ. ಈ ಬಗ್ಗೆ ಕಾನೂನು, ಸಂವಿಧಾನದಲ್ಲಿ ಪರಿಶೀಲಿಸಿದರೆ, ಸ್ಪಷ್ಟವಾಗಿ ಯಾವುದೇ ಮಾರ್ಗಸೂಚಿಯನ್ನು ನೀಡಿಲ್ಲ. ಆದ್ದರಿಂದ ಗಳ ವಾದದ ಪ್ರಕಾರ ಅಧಿಕಾರಿಗಳು ಹೇಳುವುದು ಸರಿಯಾಗಿದೆ. ಆದರೆ ಮಹಿಳಾ ಅಭ್ಯರ್ಥಿಗಳ ಪ್ರಕಾರ ಅವರು ಹೇಳುವುದು ಸರಿಯಾ ಗಿದೆ. ಈ ರೀತಿಯ ಸಂದಿಗ್ಧ ಪರಿಸ್ಥಿತಿಯನ್ನೇ ‘Gray area’. ಇಂತಹ ಸಮಯದಲ್ಲಿ ಮಹಿಳಾ ಅಭ್ಯರ್ಥಿಗಳದ್ದು ತಪ್ಪು ಎನ್ನಲು ಸಾಧ್ಯವಿಲ್ಲ.
ಅಧಿಕಾರಿಗಳದ್ದು ತಪ್ಪನ್ನು ಎನ್ನಲು ಆಗುವುದಿಲ್ಲ. ಮೇಲ್ನೋಟಕ್ಕೆ ಇದೊಂದು ಸಾಮಾನ್ಯ ಪ್ರಕರಣ ಎನಿಸಿದರೂ, ಕೋರ್ಟ್ ನಲ್ಲಿ ವಾದ ಮಾಡುವಾಗ ‘ವಕೀಲನ’ ಬುದ್ಧಿಗೆ ಹೆಚ್ಚು ಕೆಲಸವನ್ನು ನೀಡುವ ಪ್ರಕರಣಗಳು ಎಂದರೂ ತಪ್ಪಿಲ್ಲ. ಈಗ ಎದ್ದಿರುವ ಮಹಿಳಾ ಅಭ್ಯರ್ಥಿಗಳ ಜಾತಿ ಹಾಗೂ ಆದಾಯ ಪ್ರಮಾಣ ಪತ್ರದ ಸಮಸ್ಯೆ ಮಾತ್ರವಲ್ಲ. ದೇಶದ ಹಲವು ಕಾನೂನುಗಳಲ್ಲಿ ಈ ರೀತಿಯ ಸಮಸ್ಯೆಗಳಿವೆ.
ಉದಾಹರಣೆಗೆ ರಾಜ್ಯದ ಮಟ್ಟಿಗೆ ನೋಡುವುದಾದರೆ, ಇಡೀ ರಾಷ್ಟ್ರದಲ್ಲೇ ಸದ್ದು ಮಾಡಿರುವ ಹಿಜಾಬ್ ಪ್ರಕರಣವಿರಬಹುದು, ಪಕ್ಷಾಂತರ ಕಾಯಿದೆ ಇರಬಹುದು ಅಥವಾ ಗೋಹತ್ಯೆ ನಿಷೇಧವಿರಬಹುದು. ಈ ಎಲ್ಲ ವಿವಾದಲ್ಲಿಯೂ ನಮಗೆ ಪ್ರಸ್ತಾಪಿಸಿರುವ ‘Gray area’ ಕಾಣುತ್ತದೆ. ಹಿಜಾಬ್ ವಿಷಯ ಭಾರಿ ಪ್ರಮಾಣದಲ್ಲಿ ಗದ್ದಲವಾದಾಗ ರಾಜ್ಯ ಸರಕಾರ ಸಮವಸ ನೀತಿಯನ್ನು ಉಲ್ಲೇಖಿಸಿ, ಹಿಬಾಜ್ ಧರಿಸುವುದಕ್ಕೆ ಅವಕಾಶವಿಲ್ಲ ಎನ್ನುವ ಆದೇಶವನ್ನು ಹೊರಡಿಸಿತ್ತು. ಇದೇ ಆದೇಶವನ್ನು ರಾಜ್ಯ ಹೈಕೋರ್ಟ್ ಸಹ ಎತ್ತಿ ಹಿಡಿದಿತ್ತು.
ಆದರೆ ಇದು ಸುಪ್ರೀಂ ಕೋರ್ಟ್ ಮುಂದೆ ಹೋದಾಗ, ಸಮವಸ್ತ್ರ ನೀತಿಯ ಜತೆಜತೆಗೆ ಧಾರ್ಮಿಕ ಹಕ್ಕುಗಳನ್ನು ಕಾಪಾಡು ವುದು ಮುಖ್ಯವೆಂದು ಸಂವಿಧಾನದಲ್ಲಿರುವ ವಿಷಯವನ್ನು ಪ್ರಸ್ತಾಪಿಸಲಾಯಿತು. ಆ ಸಮಯ ದಲ್ಲಿ ಹಿಜಾಬ್ ವಿರುದ್ಧ ಇರುವವರು ಸಮವಸ್ತ್ರ ಕಾಯಿದೆಯೇ ಮುಖ್ಯವೆಂದರೆ, ಹಿಜಾಬ್ ಪರವಿದ್ದವರು ‘ಧಾರ್ಮಿಕ ಹಕ್ಕುಗಳೇ ಮುಖ್ಯ’ವೆಂದು ವಾದ ಮಂಡಿಸಿದರು. ಆ ಸಮಯದಲ್ಲಿ ತಟಸ್ಥವಾಗಿ ನಿಂತು ನೋಡಿದಾಗ ಇಬ್ಬರ ವಾದವೂ ಸರಿಯೆನಿಸುತ್ತದೆ.
ಇದೇ ರೀತಿ ಕರ್ನಾಟಕದ ಉದಾಹರಣೆಯನ್ನೇ ನೋಡುವುದಾದ ಗೋಹತ್ಯೆ ನಿಷೇಧದ ಬಗ್ಗೆ ಭಾರಿ ಚರ್ಚೆ ನಡೆಯಿತು. ಗೋವನ್ನು ಸಂರಕ್ಷಿಸುವುದು ಪ್ರತಿಯೊಬ್ಬ ನಾಗರೀಕನ ಕರ್ತವ್ಯವೆಂದು ಬಿಜೆಪಿ ನಾಯಕರು ಹೇಳಿದರೆ, ಸೇವಿಸುವ ಆಹಾರದ ಸ್ವಾತಂತ್ರ್ಯ ವ್ಯಕ್ತಿಗತವಾಗಿರುತ್ತದೆ. ಅದನ್ನು ಪ್ರಶ್ನಿಸುವುದು ಸಂವಿಧಾನದ ಉಲ್ಲಂಘನೆ ಎನ್ನುವ ಮಾತನ್ನು ಕಾಂಗ್ರೆಸ್ ನಾಯಕರು ಹೇಳಿದ್ದರು. ಆದರೆ ಈ ಎರಡರ ನಡುವಿನ ‘ಸಂಧಾನ ಸೂತ್ರ’ ಮಾತ್ರ ಯಾರ ಬಳಿಯೂ ಇಲ್ಲ.
ಈ ರೀತಿಯ ‘ವ್ಯಾಖ್ಯಾನಿಸದೇ ಇರುವ’ ವಿಷಯಗಳನ್ನೇ ಮುಂದಿಟ್ಟುಕೊಂಡು ಹಲವು ಸಮಯದಲ್ಲಿ ಅನೇಕರು ಲಾಭ ಪಡೆದುಕೊಳ್ಳುತ್ತಾರೆ. ಅದಕ್ಕೆ ಉತ್ತಮ ಉದಾಹರಣೆ ಎಂದರೆ ‘ಪಕ್ಷಾಂತರ ನಿಷೇಧ ಕಾಯಿದೆ’. ಹೌದು, ಒಂದು ಪಕ್ಷದಿಂದ ಜನಪ್ರತಿನಿಧಿಯಾಗಿ ಆಯ್ಕೆಯಾದ ಬಳಿಕ ಮತ್ತೊಂದು ಪಕ್ಷಕ್ಕೆ ‘ಲೋಭ’ಕ್ಕೆ ಮಣಿದು ಹೋಗುವುದನ್ನು ತಪ್ಪಿಸುವ ಉದ್ದೇಶ ದಿಂದ ಈ ಕಾಯಿದೆಯನ್ನು ಜಾರಿಗೊಳಿಸಲಾಯಿತು. ಆದರೆ ಈ ಕಾಯಿದೆಯಲ್ಲಿರುವ ‘ಸಮಸ್ಯೆ’ಯನ್ನೇ ಬಳಸಿಕೊಂಡೇ ಅನೇಕರು ಪಕ್ಷದಿಂದ ಪಕ್ಷಕ್ಕೆ ಹಾಕುತ್ತಿದ್ದಾರೆ.
ಪ್ರಮುಖವಾಗಿ ಯಾವುದೇ ಪಕ್ಷದಿಂದ ಆಯ್ಕೆಯಾದ ವ್ಯಕ್ತಿ ಆಯ್ಕೆಯಾದ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ, ಅನುಮೋದನೆ ಯಾಗುವ ತನಕ ‘ಅಧಿಕೃತ’ವಾಗಿ ಇನ್ನೊಂದು ಪಕ್ಷಕ್ಕೆ ಹೋಗುವಂತಿಲ್ಲ. ಆದರೆ ಬಹುತೇಕರು ಮತ್ತೊಂದು ಪಕ್ಷದೊಂದಿಗೆ ‘ಡೀಲ್’ ಕುದುರಿಸಿದ ಬಳಿಕ ರಾಜೀನಾಮೆ ನೀಡುತ್ತಾರೆ. ಅನುಮೋದನೆಯಾಗುವ ತನಕ ಈ ಬಗ್ಗೆ ‘ನ್ಯಾಯಾಲಯದ ಕಣ್ಣಿಗೆ ಕಾಣುವ ಸಾಕ್ಷ್ಯ’ ರೂಪದಲ್ಲಿ ಪಕ್ಷ ಬಿಡುವುದಾಗಿ ಹೇಳುವುದಿಲ್ಲ. ಅನುಮೋದನೆಗೊಂಡ ಬಳಿಕ ಪಕ್ಷಾಂತರ ಮಾಡುತ್ತಾರೆ. ಎಲ್ಲರಿಗೂ ಇದರ ಬಗ್ಗೆ ಮಾಹಿತಿಯಿದ್ದರೂ, ನ್ಯಾಯಾಲಯ ಕೇಳುವ ದಾಖಲೆ ಇರುವುದಿಲ್ಲವಾದ್ದರಿಂದ ಅವರೆಲ್ಲ ಬಜಾವ್
ಆಗುತ್ತಾರಷ್ಟೇ!
ಸಂವಿಧಾನದಲ್ಲಿರುವ ಈ ರೀತಿಯ ಗೊಂದಲಗಳು ಸಮಯ ಬಂದಾಗಲೇ ಗೊತ್ತಾಗುವುದು. ಆ ಕಾರಣಕ್ಕಾಗಿಯೇ ಸಂವಿಧಾನ ರಚಿಸುವಾಗಲೇ ಈ ರೀತಿಯ ಗೊಂದಲದ ಸಮಯದಲ್ಲಿ ‘ತಿದ್ದುಪಡಿ’ಗೆ ಅವಕಾಶ ನೀಡಲಾಗಿದೆ. ಈಗ ಎದ್ದಿರುವ ಮಹಿಳಾ ಶಿಕ್ಷಕಿಯರ ಸಮಸ್ಯೆಗೂ ತಕ್ಷಣಕ್ಕೆ ಯಾರ ಬಳಿಯೂ ಉತ್ತರವಿಲ್ಲ. ‘ಅದು ಆಗಬಹುದು, ಇದು ಆಗಬಹುದು’ ಎನ್ನುವುದೇ ಅನೇಕರ ಅಭಿಪ್ರಾಯವಾಗಿದೆ. ಈ ವಿಷಯವೂ ಕೋರ್ಟ್‌ಗೆ ಹೋಗುವುದು ಖಚಿತ, ಏನಾಗಲಿದೆ ಕಾದು ನೋಡಬೇಕಷ್ಟೆ.