ಹಿಂದಿರುಗಿ ನೋಡಿದಾಗ
ಭೂಮಿ ಮೇಲೆ ೮೪ ಲಕ್ಷ ಜೀವರಾಶಿಗಳಿವೆ ಎಂದು ಕ್ರಿ.ಶ. ೪ನೇ ಶತಮಾನದಲ್ಲಿ ರಚನೆಯಾದ ಪದ್ಮಪುರಾಣ, ೧೨ನೇ ಶತಮಾನದಲ್ಲಿದ್ದ ಅಲ್ಲಮಪ್ರಭು ಮತ್ತು ೧೬ನೇ ಶತಮಾನದಲ್ಲಿದ್ದ ಕನಕದಾಸರು ಹೇಳಿರುವರು. ಆಧುನಿಕ ವಿಜ್ಞಾನವು ೮೭ + ೧.೨ ಲಕ್ಷ ಜೀವರಾಶಿಗಳಿವೆ (ಪ್ರಭೇದಗಳು=ಸ್ಪೀಸೀಸ್) ಎನ್ನುತ್ತದೆ. ಇವುಗಳ ಪೈಕಿ ಮನುಷ್ಯ ಸರ್ವಶ್ರೇಷ್ಠ ಜೀವಿ. ಈ ಎಲ್ಲ ಜೀವಿಗಳಿಗಿಂತಲೂ ತಾನು ‘ಬುದ್ಧಿವಂತ’ ಎಂಬ ಪ್ರಜ್ಞೆಯಿರುವ ಕಾರಣದಿಂದ ಮನುಷ್ಯ ತನ್ನನ್ನು ‘ಬುದ್ಧಿವಂತ ಮಾನವ’ (ಹೋಮೋ ಸೆಪಿಯನ್ಸ್) ಎಂದು ಕರೆದುಕೊಂಡ.
ಮನುಷ್ಯನಷ್ಟೇ ಏಕೆ ಬುದ್ಧಿವಂತನಾದ? ಮಿಕ್ಕ ಪ್ರಭೇದಗಳೇಕೆ ಬುದ್ಧಿಶಕ್ತಿ ಬೆಳೆಸಿಕೊಂಡು ಮನುಷ್ಯನ ಸಾರ್ವಭೌಮತ್ವಕ್ಕೆ/ದೌರ್ಜನ್ಯಕ್ಕೆ ಸವಾಲೆಸೆದಿಲ್ಲ ಎಂಬ ಪ್ರಶ್ನೆ ನಮ್ಮಲ್ಲಿ ಹುಟ್ಟುತ್ತದೆ.
ರೋಮರಹಿತ ದ್ವಿಪಾದಿ: ಎಂಜಿನಿಯರ್, ರಸಾಯನ ವಿಜ್ಞಾನಿ ಮತ್ತು ಗಣಿತಜ್ಞರನ್ನೊಳಗೊಂಡ ಮೂವರು ಅನ್ಯಗ್ರಹ ವಾಸಿಗಳು ಒಮ್ಮೆ ಈ ಭೂಮಿಗೆ ಬಂದರು. ಇಲ್ಲಿ ಬುದ್ಧಿವಂತ ಜೀವಿಗಳಿವೆಯೇ? ಇದ್ದರೆ ಅವರ ಬುದ್ಧಿಮತ್ತೆ ಯೆಷ್ಟು? ಅವರು ತಮಗಿಂತಲೂ ಬುದ್ಧಿವಂತರೇ? ಎಂಬುದನ್ನು ತಿಳಿದುಕೊಳ್ಳುವುದು ಅವರ ಉದ್ದೇಶವಾಗಿತ್ತು. ಭೂಮಿ ಮೇಲಿನ ಎಲ್ಲ ಪ್ರದೇಶಗಳಿಗೂ ಭೇಟಿಯಿತ್ತ ಅವರು ಜೀವರಾಶಿಗಳನ್ನು ಅಧ್ಯಯನ ಮಾಡಿದರು. ಕೊನೆಗೆ ಎಂಜಿನಿಯರ್, ‘ಇಲ್ಲಿನವರೆಲ್ಲ ಘನಜೀವಿಗಳು. ಕೆಲ ಜೀವಿಗಳ ಒಡಲು ಮಾತ್ರ ಹಲವು ವಲಯಗಳಿಂದಾಗಿದೆ.
ಇವು ನೆಲ, ನೀರು ಮತ್ತು ಗಾಳಿಯಲ್ಲಿ ಚಲಿಸಬಲ್ಲವು. ಆದರೆ ಅವುಗಳದ್ದು ತುಂಬಾ ನಿಧಾನ ಚಲನೆ’ ಎಂದ. ರಸಾಯನ ವಿಜ್ಞಾನಿಯು, ‘ಎಲ್ಲ ಜೀವರಾಶಿಗಳು ೪ ಮೂಲಭೂತ ಧಾತುಗಳ ವಿವಿಧ ಕ್ರಮಗತಿ ಮತ್ತು ಸಂಯೋಜನೆಯಿಂದ ರೂಪುಗೊಂಡಿರುವುದು ಬಿಟ್ಟರೆ ಮತ್ತೇನೂ ವಿಶೇಷವಿಲ್ಲ’ ಎಂದ. ಗಣಿತೀಯ ಜ್ಞಾನಗ್ರಹಣದಲ್ಲಿ ಅಗ್ರಗಣ್ಯನಾಗಿದ್ದು ಲಭ್ಯ ಮಾಹಿತಿಯನ್ನೆಲ್ಲ ಗ್ರಹಿಸಿ, ಕ್ಷಣಮಾತ್ರದಲ್ಲಿ ಏನು ಮಾಡಬೇಕು, ಏನು ಮಾಡಬಾರದು ಎಂದು ಲೆಕ್ಕಿಸಿ ತೀರ್ಮಾನಿಸುವ ಸಾಮರ್ಥ್ಯವಿದ್ದ ಗಣಿತಜ್ಞನು, ‘ಈ ಜೀವಿಗಳ ಲೆಕ್ಕಾಚಾರ ಸಾಮರ್ಥ್ಯವು ಏನೇನೂ ಪ್ರಯೋಜನವಿಲ್ಲ; ಆದರೆ ರೋಮಗಳಿಲ್ಲದ, ೨ ಕಾಲಲ್ಲಿ ನಡೆವ, ತನ್ನ ಮೈಯನ್ನು ಕೃತಕ ಆವರಣದಿಂದ ರಕ್ಷಿಸಿ ಕೊಳ್ಳಲು ಯತ್ನಿಸುವ ಆ ಜೀವಿಯು ಈ ನಿಯಮಕ್ಕೆ ವಿನಾಯತಿ.
ಅದರ ಮಾಹಿತಿ ವಿನಿಮಯ ಸಾಮರ್ಥ್ಯ ತೀರಾ ಹಳೆಯ ಕಾಲದ್ದು, ಅಸಮರ್ಪಕವಾದದ್ದಾದರೂ ಉಳಿದ ಜೀವಿಗಳಿಗೆ ಹೋಲಿಸಿದರೆ ಪರವಾಗಿಲ್ಲ. ಅದು ವಿವಿಧ ಚಿಹ್ನೆ, ಸಂಕೇತಗಳನ್ನು ಬಳಸಿ ಸಂವಹಿಸಬಲ್ಲದು. ತನಗೆ ಬೇಕಿರುವ ತಿನಿಸುಗಳನ್ನು ಸಿದ್ಧಪಡಿಸಿ ಸೇವಿಸುತ್ತದೆ. ಆದರೆ ಯಾಕೋ ಗೊತ್ತಿಲ್ಲ, ಒಂದು ಪ್ರದೇಶ ದಲ್ಲಿರುವ ದ್ವಿಪಾದಿಗಳು ಮತ್ತೊಂದರ ದ್ವಿಪಾದಿಗಳ ಸರ್ವನಾಶಕ್ಕೆ ಸದಾ ಹೊಂಚು ಹಾಕುತ್ತಿರುತ್ತವೆ’ ಎಂದು ನಿಟ್ಟುಸಿರುಬಿಟ್ಟ. ಅದಕ್ಕೆ ಎಂಜಿನಿಯರ್,
‘ಇದು ಹೇಗಯ್ಯ ಸಾಧ್ಯ? ಈ ಜೀವಿಗಳ ದೇಹರಚನೆ, ಅದರಲ್ಲಿ ಬಳಕೆಯಾಗಿರುವ ರಾಸಾಯನಿಕಗಳು ಒಂದೇ ರೀತಿಯಲ್ಲಿದ್ದರೂ, ಅವರ ಗಣಿತ, ತರ್ಕ, ಲೆಕ್ಕಾಚಾರಗಳೆಲ್ಲ ಹೇಗೆ ಮತ್ತು ಏಕೆ ಒಂದು ಜೀವಿಯಿಂದ ಮತ್ತೊಂದಕ್ಕೆ ಭಿನ್ನ ವಾಗಿವೆ? ನನಗರ್ತವಾಗಲಿಲ್ಲ’ ಎಂದ.
‘ನನಗೂ ಗೊತ್ತಾ ಗ್ತಿಲ್ಲ’ ಎಂದ ಗಣಿತಜ್ಞ ಅಸಹಾಯಕತೆಯಿಂದ. ಕೊನೆಗೆ, ‘ಈ ರೋಮರಹಿತ ದ್ವಿಪಾದಿಗಳ ಅಭಿವ್ಯಕ್ತಿ ಸಾಮರ್ಥ್ಯವು ಉಳಿದೆಲ್ಲ ಜೀವಿಗಳಿಗಿಂತ ಭಿನ್ನವಾಗಿರುವಂತಿದೆ. ಹಾಗಾಗಿ ಇವನ್ನು ನಾವು ವಿಶೇಷವಾಗಿ ಪರಿಗಣಿಸಬೇಕು, ಉಳಿದ ಜೀವಿಗಳ ಜತೆ ಸೇರಿಸಬಾರದು. ಇವೇನಾದರೂ ಅನ್ಯ ತಾರಾಗಣ ದಿಂದ (ಗೆಲಾಕ್ಸಿ) ಬಂದಿರಬಹುದೇ? ಹಾಗಾಗಿ ಇವುಗಳ ಗುಣಲಕ್ಷಣಗಳನ್ನು ಪ್ರತ್ಯೇಕವಾಗಿ ದಾಖಲಿಸಿ ವರದಿ ಸಿದ್ಧಪಡಿಸೋಣ’ ಎಂದು ಹೇಳಿ ಮೂರೂ
ಅನ್ಯಗ್ರಹಜೀವಿಗಳು ತಮ್ಮ ಬಾಹ್ಯಾಕಾಶ ನೌಕೆಯೇರಿ ಬೆಳಕಿನ ವೇಗದಲ್ಲಿ ಮರೆಯಾದವು.
ಪ್ರತ್ಯೇಕವರ್ಗ: ಪಾಪ! ಆ ಅನ್ಯಗ್ರಹ ಜೀವಿಗಳ ಬಗ್ಗೆ ಕನಿಕರಿಸುವುದು ಬಿಟ್ಟು ನಾವೇನು ಮಾಡಲಾದೀತು? ರೋಮರಹಿತ ದ್ವಿಪಾದಿಯನ್ನು ಪ್ರತ್ಯೇಕವಾಗಿ ವರ್ಗೀಕರಿಸಿದ್ದು ಸರಿಯಾಗಿಯೇ ಇದೆಯಲ್ಲವೇ! ಏಕೆಂದರೆ ೮೭+೧.೨ ಲಕ್ಷ ಜೀವಪ್ರಭೇದಗಳಲ್ಲಿ ಮನುಷ್ಯನಂತೆ ಜಾಮೂನು, ಮಸಾಲೆದೋಸೆ ಮಾಡುವ ಜೀವಿ
ಮತ್ತೊಂದಿಲ್ಲ. ಮುಖಕ್ಕೆ ಬಣ್ಣ ಮೆತ್ತಿಕೊಂಡು ಅನ್ಯಲಿಂಗವನ್ನು ಆಕರ್ಷಿಸಲು ಯತ್ನಿಸುವುದಿಲ್ಲ. ಮರ, ಕಲ್ಲು, ಲೋಹವನ್ನು ಸುಂದರ ಶಿಲ್ಪವಾಗಿಸುವುದಿಲ್ಲ.
ರಾಮಾಯಣ-ಮಹಾಭಾರತದಂಥ ಕಾವ್ಯ ಬರೆಯುವುದಿಲ್ಲ. ಇ=ಎಂಸಿ೨ಥರದ ಸೂತ್ರ ರಚಿಸುವುದಿಲ್ಲ.
ಒಬ್ಬರನ್ನು ಕೊಲ್ಲುವಂತೆ ಫತ್ವಾ ಹೊರಡಿಸುವುದಿಲ್ಲ, ಧಾರ್ಮಿಕ ಕ್ರುಸೇಡ್ ನಡೆಸಿ ಮಕ್ಕಳನ್ನು ಕೊಲ್ಲುವುದಿಲ್ಲ. ಪರಮಾಣು ಬಾಂಬನ್ನು ಸೃಜಿಸಿ ಅಮಾಯಕರ ಮಾರಣ ಹೋಮ ಮಾಡುವುದಿಲ್ಲ. ಹಾಗಾಗಿ ರೋಮರಹಿತ ದ್ವಿಪಾದಿಯನ್ನು ಹಸು, ಎಮ್ಮೆ, ಆನೆ, ಹುಲಿ, ಸಿಂಹ, ಮಂಗ, ಚಿಂಪಾಂಜಿಗಳ ಜತೆ ಸೇರಿಸದೆ, ಅದರದ್ದೇ ಆದ ಪ್ರತ್ಯೇಕ ವರ್ಗವನ್ನು ರೂಪಿಸಿದ್ದು ಸರಿಯೆನಿಸುತ್ತದೆ. ಮನುಷ್ಯ ಆನೆಯಷ್ಟು ಬಲಶಾಲಿಯಲ್ಲ, ಚಿರತೆಯಷ್ಟು ವೇಗವಾಗಿ ಓಡಲಾರ. ಸಿಂಹಕ್ಕಿರು ವಷ್ಟು ಹರಿತವಾದ, ಶಕ್ತಿಶಾಲಿಯಾದ ಪಂಜಗಳಿಲ್ಲ. ಡಾಲಿನ್ ಅಥವಾ ಶಾರ್ಕ್ ನಂತೆ ತ್ವರಿತವಾಗಿ ಈಜಲಾರ, ಹದ್ದಿನಷ್ಟು ಎತ್ತರ ಹಾರಲಾರ.
ವಾಸ್ತವದಲ್ಲಿ ಒಂದು ಹುಚ್ಚು ನಾಯಿಯನ್ನು ಎದುರಿಸುವ ಧೈರ್ಯ ಅವನಿಗಿಲ್ಲ. ದುರ್ಬಲ ಜೀವಿಗಳಲ್ಲಿ ದುರ್ಬಲ ಆತ. ಆದರೂ ಯಾವ ಆಧಾರದ ಮೇಲೆ ಆತ ತನ್ನನ್ನು ‘ಸರ್ವಶ್ರೇಷ್ಠ’ ಎಂದು ಕರೆದುಕೊಂಡ ಎಂಬ ಪ್ರಶ್ನೆ ಮೂಡುತ್ತದೆ. ಮನುಷ್ಯನು ನಿರ್ಮಿಸಿದ ‘ಬೆಲ್‌ಎಝಡ್ ೭೫೭೧೦’ ಎನ್ನುವ ಟ್ರಕ್ ೪,೫೦,೦೦೦ ಕೆ.ಜಿ. ತೂಕವನ್ನು ಹೊತ್ತು ಚಲಿಸಬಲ್ಲುದು. ಒಂದು ಆನೆಯ ಸರಾಸರಿ ತೂಕ ೪,೦೦೦ ಕೆಜಿ. ಅಂದರೆ ೧೧೨ ಅನೆಗಳನ್ನು ಒಮ್ಮೆಲೆ ಹೊತ್ತೊಯ್ಯಬಲ್ಲ ಟ್ರಕ್‌ಗಳನ್ನು ನಿರ್ಮಿಸಿದ್ದಾರೆ. ಇವನ ಫಾರ್ಮುಲಾ ರೇಸಿಂಗ್ ಒನ್ ಕಾರ್, ಗಂಟೆಗೆ ೩೬೦ ಕಿ.ಮೀ. ವೇಗದಲ್ಲಿ ಚಲಿಸಬಲ್ಲದು. ಚಿರತೆ ಗಂಟೆಗೆ ಗರಿಷ್ಠ ೧೩೦ ಕಿ.ಮೀ. ವೇಗದಲ್ಲಿ ಮಾತ್ರ ಓಡಬಲ್ಲದು.
ಇವನ .೨೨೦ ಸ್ವಿ-ಬಂದೂಕಿನಿಂದ ಚಿಮ್ಮುವ ಗುಂಡು ಸೆಕೆಂಡಿಗೆ ೧,೨೦೦ ಮೀ. ದೂರವನ್ನು ಕ್ರಮಿಸಬಲ್ಲದು. ಈ ಮಿಂಚಿನ ವೇಗದ ಮುಂದೆ ಸಿಂಹದ ಪಂಜದ ವೇಗವು ಯಾವ ಲೆಕ್ಕಕ್ಕೂ ಬರುವುದಿಲ್ಲ. ಇವನು ನಿರ್ಮಿಸಿರುವ ಸಬ್‌ಮೆರೀನ್, ಗಂಟೆಗೆ ೮೦ ಕಿ.ಮೀ. ವೇಗದಲ್ಲಿ ಚಲಿಸಬಲ್ಲದು. ಯಾವ ಜಲಚರವೂ ಈ
ವೇಗದಲ್ಲಿ ಗಂಟೆಗಟ್ಟಲೆ ಚಲಿಸಲಾರದು. ಹಾಗೆಯೇ ಇವನು ತಯಾರಿಸಿದ ಎಕ್ಸ್-೧೫ ವಿಮಾನವು ಗಂಟೆಗೆ ೭,೨೭೪ ಕಿ.ಮೀ. ವೇಗದಲ್ಲಿ ಚಲಿಸಬಲ್ಲದು. ಹದ್ದುಗಳು ಈ ವೇಗದಲ್ಲಿ ಚಲಿಸುವುದು ಕನಸಿನ ಮಾತು. ಮನುಷ್ಯ ಹೀಗೆ ಭೂಮಿ ಮೇಲೆ ಎಲ್ಲ ಜೀವರಾಶಿಗಳ ಶಕ್ತಿ ಸಾಮರ್ಥ್ಯವನ್ನು ಮೀರಿ ಬೆಳೆದಿರುವು ದರಿಂದ ತನ್ನನ್ನು ‘ಪೃಥ್ವೀ ಸಾರ್ವಭೌಮ’ ಎಂದು ಕರೆದುಕೊಂಡಿರುವುದರಲ್ಲಿ ಆಶ್ಚರ್ಯವಿಲ್ಲ.
ವಿಕಾಸಪಥ: ‘ಅತ್ತೆಗೊಂದು ಕಾಲ, ಸೊಸೆಗೊಂದು ಕಾಲ’ ಎಂಬ ಗಾದೆಮಾತನ್ನು ನೆನಪಿಸಿಕೊಳ್ಳೋಣ. ಈಗ ಮನುಷ್ಯ ಸಾರ್ವಭೌಮನಾಗುವ ಕಾಲ ಬಂದಿದೆ. ಇದಕ್ಕೆ ಮೊದಲು ಸಮುದ್ರದ ತುಂಬಾ ಮೆಗಲೋಡಾನ್, ಡಂಕ್ಲಿಯೋಸ್ಟಿಯಸ್, ಹೆಲಿಕೋಪ್ರಿಯಾನ್ ಮುಂತಾದ ಶಾರ್ಕ್‌ಗಿಂತಲೂ ಕ್ರೂರವಾದ ಜೀವರಾಶಿಗಳೇ ತುಂಬಿದ್ದವು. ಭೂಮಿಯ ಮೇಲೆ ಡೈನಾಸರುಗಳು ದರ್ಬಾರ್ ನಡೆಸಿದ ದಿನಗಳೂ ಇದ್ದವು. ಹಾಗೆಯೇ ಹುಲಿ, ಸಿಂಹ, ಚಿರತೆ ಮುಂತಾದ ಕ್ರೂರ ಪ್ರಾಣಿಗಳು ಮನುಷ್ಯನನ್ನೊಳಗೊಂಡಂತೆ ಎಲ್ಲ ಸಸ್ಯಾಹಾರಿಗಳನ್ನು ಬೇಟೆಯಾಡುತ್ತಿದ್ದವು (ವೂಲಿ ಮ್ಯಾಮಥ್, ಸೇಬರ್ ಟೂತ್ ಟೈಗರ್ ಮುಂತಾದವು ಈಗಿಲ್ಲ). ಆಗ ಮನುಷ್ಯ ಸಿಂಹವನ್ನು ಕಂಡರೆ ಥರಥರ ನಡುಗುತ್ತಾ ಮರವೇರಿ ಜೀವ ಉಳಿಸಿಕೊಳ್ಳುತ್ತಿದ್ದ. ಹಾಗೆಯೇ ದೈತ್ಯಹಕ್ಕಿಗಳೂ ಒಂದು ಕಾಲದಲ್ಲಿ ಆಧಿಪತ್ಯ ನಡೆಸಿದ್ದವು.
ಹರ್ಯಂಕರು, ಶಿಶುನಾಗರು, ನಂದರು, ಮೌರ್ಯರು, ಗುಪ್ತರು, ಘಜ್ನಿ, ಖಿಲ್ಜಿ, ತುಘಲಕ್, ಮೊಘಲ್, ವಿಜಯ ನಗರ ಅರಸರು ತಮ್ಮ ಕಾಲದಲ್ಲಿ ಸಾರ್ವಭೌಮರಾಗಿದ್ದರು. ಆದರೆ ಕಾಲ ಸದಾ ಚಲಿಸುತ್ತಲೇ ಇರುತ್ತದೆ. ಹಾಗಾಗಿ ಈಗ ಮನುಷ್ಯನ ಸರದಿ. ಪ್ರಸ್ತುತ ಮನುಷ್ಯನೇ ಸರ್ವಶಕ್ತನಾದ ಕಾರಣ, ಅವನೇ ಸಾಟಿಯಿಲ್ಲದ ಸಾರ್ವಭೌಮ! ಮನುಷ್ಯನನ್ನು ಮೀರಿಸುವಂಥ ಮತ್ತೊಂದು ಜೀವಿ ಭವಿಷ್ಯದಲ್ಲಿ ಹುಟ್ಟಬಹುದೇನೋ! ಸೈದ್ಧಾಂತಿಕವಾಗಿ ಅದನ್ನು
ತಳ್ಳಿಹಾಕಲಾಗದು ಎಂಬುದು ನಿಜವಾದರೂ, ಮನುಷ್ಯನ ಓಟಕ್ಕೆ ತಡೆಯೊಡ್ಡಬಲ್ಲ ಅಂಥ ಶಕ್ತಿಶಾಲಿ ಜೀವಿಯ ಉಗಮ ಸನಿಹದಲ್ಲಿಲ್ಲ ಎಂದು ನಿರ್ಭೀತವಾಗಿ ಸಾರಬಹುದು!
ಮನುಷ್ಯ ಎಷ್ಟು ಶಕ್ತಿಶಾಲಿಯಾಗಿದ್ದಾನೆಂದರೆ ಆನೆ, ಸಿಂಹ, ಚಿರತೆ, ಖಡ್ಗಮೃಗ, ತಿಮಿಂಗಲ, ಡಾಲಿನ್, ಹದ್ದು, ಡೇಗೆ ಮುಂತಾದ ಜೀವರಾಶಿಗಳೆಲ್ಲ ಮನುಷ್ಯನ
ಕೃಪಾಛತ್ರದಡಿ ಬದುಕುವುದು ಅನಿವಾರ್ಯವಾಗಿದೆ. ಅವನು ಮನಸ್ಸು ಮಾಡಿದರೆ ೧ ವರ್ಷದೊಳಗೆ ಈ ಭೂಮಿ ಮೇಲೆ ಆನೆ, ಸಿಂಹ, ಚಿರತೆ, ಖಡ್ಗಮೃಗಗಳು ಇರದಂತೆ ಮಾಡಬಲ್ಲ. ಈಗಾಗಲೇ ಡೋಡೋ ಹಕ್ಕಿ ಮರೆಯಾಗಿದೆ. ಕ್ಯಾಲಿಫೋರ್ನಿಯ ಗ್ರಿಜ್ಲಿ ಕರಡಿ ಒಂದೂ ಉಳಿದಿಲ್ಲ. ೧೫ ಕೆ.ಜಿ. ತೂಗುತ್ತಿದ್ದ ಹಾಸ್ಟ್ ಹದ್ದನ್ನು (ಹೈರೇಟಸ್ ಮೂರೆಲ್) ಜಗತ್ತಿನ ಯಾವ ದೇಶದ ಆಕಾಶದಲ್ಲೂ ಕಾಣಲಾರಿರಿ. ದಕ್ಷಿಣ ಆಫ್ರಿಕದ ಕಪ್ಪು ಖಡ್ಗಮೃಗಗಳನ್ನು ಚಿತ್ರದಲ್ಲಷ್ಟೇ ನೋಡಬೇಕು. ಒಂದು ಕಾಲಕ್ಕೆ ಪಶ್ಚಿಮ ಏಷ್ಯಾದಲ್ಲಿ ಸ್ವಚ್ಛಂದವಾಗಿದ್ದ ಸಿರಿಯನ್ ಆನೆ ಇಂದಿಲ್ಲ. ಇಂಡೋನೇಷಿಯದಲ್ಲಿದ್ದ ಶಕ್ತಿಶಾಲಿ ಜಾವನ್ ಹುಲಿ (ಪ್ಯಾಂಥೆರಾ ಟೈಗ್ರಿಸ್ ಸುಂಡೈಕ) ಇಂದು ನಾಮಾವಶೇಷವಾಗಿದೆ. ಆದರೆ, ಮನುಷ್ಯ ಕರುಣಾಮಯಿ ಆಗಿರುವುದರಿಂದ, ಜಗತ್ತಿನ ಯಾವುದೇ ಜೀವರಾಶಿಯ ನಿರ್ನಾಮಕ್ಕೆ ಯೋಚಿಸುವ ಬದಲು, ಅವನ್ನು ಸಂರಕ್ಷಿಸಲು ರಾಷ್ಟ್ರೀಯ ಉದ್ಯಾನ, ಅಭಯಾರಣ್ಯವೇ ಮುಂತಾದ ಸಂರಕ್ಷಿತ ಪ್ರದೇಶಗಳನ್ನು ರೂಪಿಸಿ, ಅವುಗಳ ಉಳಿವಿಗೆ ಅವಿರತವಾಗಿ
ಯತ್ನಿಸುತ್ತಿದ್ದಾನೆ.
ಮನುಷ್ಯರು ತಿಳಿದೋ ತಿಳಿಯದೆಯೋ ಕೆಲ ಜೀವರಾಶಿಗಳ ನಿರ್ನಾಮ ಮಾಡಿರುವುದು ಸತ್ಯ. ಅದಕ್ಕಾಗಿ ಈಗ ನಾವು ಖೇದ ವ್ಯಕ್ತಪಡಿಸುವುದು ಅನಿವಾರ್ಯ. ಇನ್ನು ಮುಂದೆ ಹೀಗಾಗದಂತೆ ತಡೆಗಟ್ಟುವ ಎಲ್ಲ ಯತ್ನಗಳನ್ನು ಮನುಷ್ಯ ನಡೆಸುತ್ತಿದ್ದಾನೆ. ಮನುಷ್ಯ, ಸಾಟಿಯೇ ಇಲ್ಲದ ಮಹಾನ್ ಶಕ್ತಿಶಾಲಿ ಎನ್ನುವುದರಲ್ಲಿ
ಅನುಮಾನವಿಲ್ಲ. ಆದರೆ ಅವನು ಆ ಶಕ್ತಿಯನ್ನು ನಕಾರಾತ್ಮಕವಾಗಿ ಬಳಸುವ ಬದಲು ಸಕಾರಾತ್ಮಕವಾಗಿ ಬಳಸುವಂತಾದರೆ ಎಷ್ಟು ಚೆನ್ನಾಗಿರುತ್ತದೆ ಅಲ್ಲವೆ!