Saturday, 27th July 2024

ಮರೆಯಾದ ಕ್ಷೌರಿಕ ಶಸ್ತ್ರವೈದ್ಯರು

ಹಿಂದಿರುಗಿ ನೋಡಿದಾಗ

ಡಾ.ನಾ.ಸೋಮೇಶ್ವರ

ನಮಗೆ ಆಘಾತ ಉಂಟು ಮಾಡುವ ವಿಷಯವೆಂದರೆ ಅಂದಿನ ದಿನಗಳಲ್ಲಿ ಶಸ್ತ್ರಕ್ರಿಯೆಯನ್ನು ಶಸ್ತ್ರವೈದ್ಯರ ಬದಲು ಕ್ಷೌರಿಕರು ಮಾಡು ತ್ತಿದ್ದರು ಎನ್ನುವ ವಿಚಾರ. ಈ ಕ್ಷೌರಿಕ-ಶಸ್ತ್ರವೈದ್ಯರು ಸಾವಿರಾರು ವರ್ಷಗಳ ಕಾಲ ಶಸಚಿಕಿತ್ಸೆಯನ್ನು ನಡೆಸುತ್ತಿದ್ದರು ಎಂದರೆ ಇಂದು ನಮಗೆ ಆಶ್ಚರ್ಯವಾಗುತ್ತದೆ.

ಸರ್ ಆಸ್ಟ್ಲೆಪ್ಯಾಸ್ಟನ್ ಕೂಪರ್ (1768-1841) ಬ್ರಿಟಿಷ್ ಅಂಗರಚನ ಶಾಸ್ತ್ರಜ್ಞ ಹಾಗೂ ಶಸ್ತ್ರವೈದ್ಯ. ನೀವು ಯಶಸ್ವಿ ಶಸ್ತ್ರವೈದ್ಯ ರಾಗಬೇಕಾದರೆ ನಿಮಗೆ ಹೆಣ್ಣಿಗಿರುವಂಥ ಕರಗಳಿರಬೇಕು, ಅಂದರೆ ರೋಗಿಯನ್ನು ಹಾಗೂ ಶಸ್ತ್ರ ವೈದ್ಯಕೀಯವನ್ನು ಸಾಧ್ಯವಾದಷ್ಟು ಸೌಮ್ಯ ರೀತಿಯಲ್ಲಿ ನೋಡಿ ಕೊಳ್ಳಬೇಕು; ಸಿಂಹಕ್ಕಿರುವಂಥ ಗುಂಡಿಗೆಯಿರ ಬೇಕು, ಅಂದರೆ ಸಿಂಹವು ಎಂಥ ಅಪಾಯಕರ ಸ್ಥಿತಿಯಲ್ಲೂ ಧೈರ್ಯದಿಂದ ಮುನ್ನುಗ್ಗುತ್ತದೆ, ಹಾಗೆಯೇ ಶಸ್ತ್ರ ವೈದ್ಯನು ಸಕಾಲದಲ್ಲಿ ಸೂಕ್ತ ನಿರ್ಧಾರವನ್ನು ತೆಗೆದುಕೊಂಡು ಕ್ಲುಪ್ತವಾಗಿ ಅದನ್ನು ಕಾರ್ಯರೂಪಕ್ಕೆ ತರಬೇಕು; ಹದ್ದಿಗಿರುವಂಥ ಕಣ್ಣುಗಳಿರ ಬೇಕು, ಅಂದರೆ ಶಸ್ತ್ರಚಿಕಿತ್ಸೆಯನ್ನು ನೀಡುವಾಗ ಅನಿರೀಕ್ಷಿತಗಳನ್ನು ನಿರೀಕ್ಷಿಸಿ ಅವನ್ನು ಎದುರಿಸಲು ಸಿದ್ಧನಾಗಿರಬೇಕು ಎಂಬ ಅರ್ಥದ A surgeon should have an eagle’s eye, a lady’s fingers and a lion’s heart  ಎಂಬ ಮಾತುಗಳನ್ನು ಹೇಳಿದ. (ಇಂದಿನ ದಿನಗಳಲ್ಲಿ ಇದಕ್ಕೆ ಮತ್ತೆರಡು ಗುಣಗಳನ್ನು ಸೇರಿಸುವುದಿದೆ.

ಹಾರ್ಸಸ್ ಲೆಗ್ ಮತ್ತು ಕ್ಯಾಮೆಲ್ಸ್ ಬೆಲ್ಲಿ; ಅಂದರೆ ಕುದುರೆಯ ಕಾಲುಗಳಿಗಿರುವಂಥ ತ್ರಾಣವು ಶಸ್ತ್ರವೈದ್ಯನ ಕಾಲುಗಳಲ್ಲಿರಬೇಕು; ಏಕೆಂದರೆ ಆತನು ಗಂಟೆಗಟ್ಟಲೇ ನಿಂತು ಶಸ್ತ್ರವೈದ್ಯಕೀಯವನ್ನು ನಡೆಸಬೇಕಾಗುತ್ತದೆ; ಹಾಗೆಯೇ ಒಂಟೆಯಂತಹ ಹೊಟ್ಟೆಯಿರ ಬೇಕಂತೆ! ಒಂಟೆಗೆ ಎಂತಹ ಹಸಿವಾ ದರೂ, ನೀರಡಿಕೆಯಾದರೂ ಅದನ್ನು ಸಹಿಸುವ ಶಕ್ತಿಯಿರುತ್ತದೆ. ಹಾಗೆಯೇ ಶಸ್ತ್ರವೈದ್ಯನೂ ಸಹ ಗಂಟೆಗಟ್ಟಲೆ ಹಸಿವನ್ನು ನಿಗ್ರಹಿಸಿ, ಶಸ್ತ್ರ ಕ್ರಿಯೆಯನ್ನು ನಡೆಸಬೇಕಾಗುತ್ತದೆ; ಇವೆಲ್ಲವು ಸಾಮಾನ್ಯರಿಗೆ ಕಷ್ಟವಾದ ವಿಚಾರ) ಕೂಪರ್ ಈ ಮಾತನ್ನು ಹೇಳಲು ಕಾರಣವಿದೆ.

ಅಂದಿನ ದಿನಗಳಲ್ಲಿ ಎಕ್ಸ್-ರೇ ಆಗಲಿ, ಸ್ಕ್ಯಾನಿಂಗ್ ಅನುಕೂಲತೆಗಳಾಗಲಿ ಇರಲಿಲ್ಲ; ನೋವನ್ನು ಪೂರ್ಣವಾಗಿ ನಿಗ್ರಹಿಸುವ ಅರಿವಳಿಕೆ ಯು ಇರಲಿಲ್ಲ; ಸ್ವಚ್ಛತೆಯ ಮಹತ್ವವನ್ನು ತಿಳಿಯದ ಅಂದಿನ ದಿನಗಳಲ್ಲಿ ಶಸ್ತ್ರಕ್ರಿಯೆಯನ್ನು ಕ್ರಿಮಿಶುದ್ಧ ಪರಿಸರದಲ್ಲಿ ನಡೆಸು ತ್ತಿರಲಿಲ್ಲ; ಛೇದಿಸಿದ ಗಾಯಗಳಿಗೆ ಹೊಲಿಗೆಯನ್ನು ಹಾಕುತ್ತಿರಲಿಲ್ಲ ಹಾಗೂ ಸೋಂಕನ್ನು ತಡೆಗಟ್ಟುವ ಸಮರ್ಥ ಪ್ರತಿಜೈವಿಕ ಔಷಧಗಳು ಇರಲಿಲ್ಲ. ಇಂತಹ ದಿನಗಳಲ್ಲಿ ಶಸ್ತ್ರ ವೈದ್ಯ ಕೀಯವನ್ನು ಮಾಡುವವರಿಗೆ ಎಂಟೆದೆ ಇರಬೇಕು ಎನ್ನುವುದರಲ್ಲಿ ಅತಿಶಯವೇನೂ ಇಲ್ಲ.

ನಮಗೆ ಆಘಾತ ಉಂಟು ಮಾಡುವ ವಿಷಯವೆಂದರೆ ಅಂದಿನ ದಿನಗಳಲ್ಲಿ ಶಸಕ್ರಿಯೆಯನ್ನು ಶಸ್ತ್ರವೈದ್ಯರ ಬದಲು ಕ್ಷೌರಿಕರು ಮಾಡುತ್ತಿದ್ದರು ಎನ್ನುವ ವಿಚಾರ. ಈ ಕ್ಷೌರಿಕ- ಶಸ್ತ್ರವೈದ್ಯರು ಸಾವಿರಾರು ವರ್ಷಗಳ ಕಾಲ ಶಸ್ತ್ರಚಿಕಿತ್ಸೆಯನ್ನು ನಡೆಸುತ್ತಿದ್ದರು ಎಂದರೆ ಇಂದು ನಮಗೆ ಆಶ್ಚರ್ಯವಾಗುತ್ತದೆ. ಅಲೆಗ್ಸಾಂಡರ್, ದಿ ಗ್ರೇಟ್ (ಕ್ರಿ.ಪೂ.೩೫೬-  ಕ್ರಿ.ಪೂ.೩೨೩) ಮೊದಲ ಬಾರಿಗೆ ತನ್ನ ಸೈನಿಕರು ತಮ್ಮ ಉದ್ದನೆಯ ತಲೆಗೂದಲನ್ನು ಹಾಗೂ ಗಡ್ಡವನ್ನು ತೆಗೆಯುವಂತೆ ಆಜ್ಞೆಯನ್ನು ಮಾಡಿದ. ಯುದ್ಧದಲ್ಲಿ ತನ್ನ ಸೈನಿಕರ ಜುಟ್ಟು, ಶತ್ರಗಳ ಕೈಗೆ ಸಿಕ್ಕಿ, ಜುಟ್ಟೇ ಅವರ ಸಾವಿಗೆ ಕಾರಣ ವಾಗಬಾರದು ಎನ್ನು ವುದು ಅವನ ತರ್ಕ.

ಹೀಗೆ ಗ್ರೀಕ್ ಸಮಾಜದಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡ ಕ್ಷೌರ ಮತ್ತು ಕ್ಷೌರಿಕರು ರೋಮನ್ ಸಾಮ್ರಾಜ್ಯದಲ್ಲೂ ಮುಂದುವರೆದರು. ಕ್ರಮೇಣ ಯೂರೋಪಿನ ಎಲ್ಲ ದೇಶಗಳಲ್ಲಿ ಕ್ಷೌರಿಕರು ತಮ್ಮ ಅಸ್ತಿತ್ವವನ್ನು ಕಂಡುಕೊಂಡರು. ಯೂರೋಪಿನ ಕ್ರೈಸ್ತ ಮಠಗಳಲ್ಲಿ ಸನ್ಯಾಸಿ ಗಳು ಗಡ್ಡ-ಮೀಸೆ ಗಳನ್ನು ಬಿಡುವ ಹಾಗಿರಲಿಲ್ಲ. ಹಾಗಾಗಿ ಅವರಿಗೆ ನಿತ್ಯ ಕ್ಷೌರವನ್ನು ಮಾಡಿಕೊಳ್ಳಲಾರಂಭಿಸಿದರು. ಜಗತ್ತಿನ ಹಲವು ಭಾಗಗಳಲ್ಲಿ ಮೂಡಿದ ವಿವಿಧ ಸಂಸ್ಕೃತಿಗಳು ತಮ್ಮದೇ ಆದ ಕ್ಷೌರಿಕ ಕುಲವನ್ನು ಬೆಳೆಸಿತು.

ಯೂರೋಪಿಯನ್ನರು ಅಮೆರಿಕಕ್ಕೆ ಹೋಗಿ ನೆಲೆಸಿದಾಗ ಅಲ್ಲಿದ್ದ ಮೂಲವಾಸಿ ಇಂಡಿಯನ್ನರು ಕ್ಷೌರ ಸೇವೆಯನ್ನು ಒದಗಿಸುತ್ತಿದ್ದರು. ಚೀನಾ ದೇಶದಲ್ಲಿ ಕ್ಷೌರಿಕರು ಬೀದಿ ಬೀದಿಗಳಲ್ಲಿ ಅಲೆಯುತ್ತಾ ಗಂಟೆಯನ್ನು ಬಾರಿಸುವುದರ ಮೂಲಕ, ತಾವು ಕ್ಷೌರಸೇವೆಯನ್ನು ಸಲ್ಲಿಸಲು ಸಿದ್ಧವಿರುವುದಾಗಿ ಜಾಹೀರು ಮಾಡುತ್ತಿದ್ದರು. ಚೀನೀಯರು ನಿಗದಿತ ಪುರುಷರನ್ನು ಹಿಜಡಗಳನ್ನಾಗಿ ಮಾಡಲು ಅವರ ಶಿಶ್ನ ಛೇದನ ಕಾರ್ಯವನ್ನು ಕ್ಷೌರಿಕರ ಕೈಯಲ್ಲಿ ಮಾಡಿಸು ತ್ತಿದ್ದರು. ಪ್ರಾಚೀನ ಜಗತ್ತಿನಲ್ಲಿ ಕ್ಷೌರಿಕರು ಸುನ್ನತಿಯನ್ನೂ ಮಾಡುತ್ತಿದ್ದರು.

ಮಾಯಾ ಸಂಸ್ಕೃತಿಯಲ್ಲಿ ಧಾರ್ಮಿಕ ಹಚ್ಚೆಗಳನ್ನು ಹಾಕಲು ಕ್ಷೌರಿಕರಿಗೆ ಆಹ್ವಾನವನ್ನು ನೀಡುತ್ತಿದ್ದರು. ಭಾರತದಲ್ಲಿಯೂ ಕ್ಷೌರಕುಲ ಪರಂಪರೆ ಯನ್ನು ನೋಡಬಹುದು. ಕ್ಷೌರಿಕ ಉಪಾಲಿ, ಬುದ್ಧನ ಹತ್ತು ಪ್ರಮುಖ ಶಿಷ್ಯರಲ್ಲಿ ಒಬ್ಬನಾಗಿದ್ದ. ಮಹಾಪದ್ಮನಂದ, ನಂದ ಸಾಮ್ರಾಜ್ಯವನ್ನು ಸ್ಥಾಪಿಸು ವುದರ ಜತೆಯಲ್ಲಿ ಭಾರತದ ಪ್ರಥಮ ಚಕ್ರವರ್ತಿ ಎನಿಸಿದ. ಭಾರತೀಯ ಶಸ್ತ್ರವೈದ್ಯಕೀಯದ ಪಿತಾಮಹ ಸುಶ್ರುತ ಮತ್ತು ಸಮುದ್ರ ಮಂಥನದಲ್ಲಿ ಜನಿಸಿದ ಎನ್ನಲಾದ ಧನ್ವಂತರಿಯು ಸಹ ಕ್ಷೌರಿಕನಾಗಿದ್ದ.

ಮಧ್ಯಯುಗದ ಯೂರೋಪಿನಲ್ಲಿ ಕ್ರೈಸ್ತ ಸನ್ಯಾಸಿಗಳು ವೈದ್ಯರ ಕೆಲಸವನ್ನೂ ಮಾಡುತ್ತಿದ್ದರು. ಆದರೆ ಅವರು ಕೇವಲ ಔಷಧಗಳನ್ನು ಕೊಡುವುದರಲ್ಲಿ ಉತ್ಸಾಹವನ್ನು ತೋರಿದರೆ ಹೊರತು ಶಸ್ತ್ರಕ್ರಿಯೆಯನ್ನು ಮಾಡಲು ಮುಂದಾಗಲಿಲ್ಲ. ಮಾಡದಂತೆ ಪೋಪ್ ಪ್ರತಿಬಂಧಕಾeಯನ್ನು ಹೊರಡಿಸಿದ್ದರು
(1163) ರಕ್ತ, ಕೀವನ್ನು ಹರಿಸುವುದು ಅವರಿಗೆ ಸರಿ ಬರಲಿಲ್ಲ. ಹಾಗಾಗಿ ಹರಿತವಾದ ಆಯುಧಗಳನ್ನು ಸದಾ ತಮ್ಮ ಜತೆಯಲ್ಲಿ ಇಟ್ಟುಕೊಂಡಿರುತ್ತಿದ್ದ ಕ್ಷೌರಿಕರಿಗೆ ಶಸ್ತ್ರವಿದ್ಯೆಯನ್ನು ಕಲಿಸಿಕೊಟ್ಟರು. ಕ್ಷೌರಿಕರು ಯಾವುದೇ ವೈದ್ಯಕೀಯ ವಿದ್ಯಾಲಯಕ್ಕೆ ಹೋಗಿ, ಶಾಸೀಯವಾಗಿ ವೈದ್ಯಕೀಯವನ್ನು
ಕಲಿಯದೆ, ಹೀಗೆ ದಿಢೀರ್ ವೈದ್ಯರಾದರು. ಅವರು ರಕ್ತ ವಿಮೋಚನ, ಕೀವು ಗುಳ್ಳೆಗಳ ಛೇದನ, ಹಲ್ಲುಗಳನ್ನು ಕೀಳುವುದು, ಕಿವಿಯನ್ನು ಸ್ವಚ್ಛ ಗೊಳಿಸುವುದು, ಮಲಬದ್ಧತೆಗೆ ಎನೀಮಾ ನೀಡುವುದು, ಮುರಿದ ಮೂಳೆಗಳನ್ನು ಜೋಡಿಸಲೆತ್ನಿಸುವುದು, ಅಂಗವಿಚ್ಛೇದನವನ್ನು (ಆಂಪ್ಯುಟೇಶನ್) ಶವ ವಿಚ್ಚೇದನಕ್ಕೆ (ಡಿಸೆಕ್ಷನ್) ನೆರವಾಗುವುದು, ಶವರಕ್ಷಣೆಯನ್ನು ಮಾಡುವುದು (ಎಂಬಾಲ್ಮಿಂಗ್) ಇತ್ಯಾದಿ ಕ್ಷುದ್ರ ಕೆಲಸಗಳನ್ನು ಮಾತ್ರ ಮಾಡು ತ್ತಿದ್ದರು.

ಯುದ್ಧ ಸಮಯದಲ್ಲಿ ಗಾಯಾಳುಗಳಿಗೆ ಚಿಕಿತ್ಸೆಯನ್ನು ನೀಡಲು ಇವರಿಗೆ ಅತಿ ಬೇಡಿಕೆಯಿರುತ್ತಿತ್ತು. ಯುದ್ಧವಿಲ್ಲದ ಸಮಯದಲ್ಲಿ ಇವರು ಸಮಾಜದಲ್ಲಿ
ಜನರ ಕ್ಷೌರ, ಮಾಲೀಶು, ಉಗುರು ಕತ್ತರಿಸುವುದು, ಸ್ನಾನವನ್ನು ಮಾಡಿಸುವುದು ಮುಂತಾದ ಕೆಲಸಗಳ ಜತೆಯಲ್ಲಿ ಶಸ್ತ್ರಚಿಕಿತ್ಸಾ ಸೇವೆಯನ್ನೂ ನೀಡು ತ್ತಿದ್ದರು. ರಕ್ತವಿಮೋಚನೆ ಎನ್ನುವುದು ಒಂದು ಅರ್ಥಹೀನ ಚಿಕಿತ್ಸೆ ಯಾಗಿದ್ದರೂ ಅದು ಜನಪ್ರಿಯವಾಗಿತ್ತು. ರೋಗಿಯ ಸಿರೆಯನ್ನು ಛೇದಿಸಿ, ಇಂತಿಷ್ಟು ರಕ್ತವನ್ನು ಹರಿಯಬಿಟ್ಟರೆ, ರೋಗವು ಗುಣವಾಗುತ್ತದೆ ಎನ್ನುವುದು ಅಂದಿನ ಜನಪ್ರಿಯ ನಂಬಿಕೆ. (ಅಮೆರಿಕದ ಅಧ್ಯಕ್ಷ ಜಾರ್ಜ್ ವಾಷಿಂಗ್ಟನ್‌ರಿಗೆ ಗಂಟಲು ನೋವಾಗಿತ್ತು.

ವೈದ್ಯರು ಅಧ್ಯಕ್ಷರ ದೇಹದಿಂದ 2365 ಲೀಟರ್ ರಕ್ತವನ್ನು ಅಂದರೆ ಶರೀರದಲ್ಲಿದ್ದ 40% ರಕ್ತ ವನ್ನು ಹೊರಹರಿಸಿದ್ದರು. ವಿಪರೀತ ರಕ್ತಸ್ರಾವದಿಂದ ವಾಷಿಂಗ್ಟನ್ ಸಾಯಬೇಕಾಯಿತು). ರಕ್ತವಿಮೋಚನೆಯನ್ನು ಸಿರೆಯ ಛೇದನದ ಜತೆಯಲ್ಲಿ, ಅವಚರಣ ಹಾಗೂ ಜಿಗಣೆಗಳ ಮೂಲಕವೂ ನಡೆಸು ತ್ತಿದ್ದರು. ಕ್ಷೌರಿಕರು ತಮ್ಮ ವೃತ್ತಿಯನ್ನು ಪ್ರಚುರಪಡಿಸಲು ಕೆಂಪು ಮತ್ತು ಬಿಳಿ ಬಣ್ಣದ ಕಂಬವನ್ನು ನೆಡಲಾರಂಭಿಸಿದರು. ಕೆಂಪು ರಕ್ತವನ್ನು ಹಾಗೂ ಬಿಳಿಯ ಬ್ಯಾಂಡೇಜ್ ಪಟ್ಟಿಯನ್ನು ಸೂಚಿಸುತ್ತಿದ್ದವು. ರಕ್ತ ತುಂಬಿದ ಪಾತ್ರೆಯನ್ನು ಅಂಗಡಿಯ ಕಿಟಕಿಯಲ್ಲಿ ಪ್ರದರ್ಶಿಸುತ್ತಿದ್ದರು. (೧೩೦೭ರಲ್ಲಿ ರಕ್ತ ವಿಮೋಚನೆಯಿಂದ ಸಂಗ್ರಹವಾದ ಎಲ್ಲ ರಕ್ತವನ್ನು ಕಿಟಕಿಯಲ್ಲಿ ಪ್ರದರ್ಶಿಸಬಾರದೆಂದು, ಅದನ್ನು ಥೇಮ್ಸ್ ನದಿಯಲ್ಲಿ ಸುರಿಯಬೇಕೆಂಬ ಕಟ್ಟಳೆಯು ಲಂಡನ್ನಿನಲ್ಲಿ ಜಾರಿಗೆ ಬಂದಿತು) ಹಾಗೆಯೇ ತಾವು ಕಿತ್ತ ಹಲ್ಲುಗಳ ಮಾಲೆಯನ್ನು ತಮ್ಮ ಅಂಗಡಿಯ ಮುಂದೆ ತೂಗುಹಾಕುತ್ತಿದ್ದರು.

ಇದನ್ನು ಕಂಡ ಜಾನ್ ಗೇ ಸಮಕಾಲೀನ ಕ್ಷೌರಿಕ ಶಸ್ತ್ರವೈ ದ್ಯರ ಬದುಕನ್ನು ಕಣ್ಣಿಗೆ ಕಟ್ಟಿದಂತೆ ತನ್ನ ಕವನದಲ್ಲಿ ಚಿತ್ರಿಸಿದ. 12ನೆಯ ಶತಮಾನದ ಯೂರೋಪಿನಲ್ಲಿ ಸಾಂಪ್ರದಾಯಿಕ ವಿಶ್ವವಿದ್ಯಾಲಯಗಳು ಆರಂಭದ ಜತೆಯಲ್ಲಿ, ವೈದ್ಯಕೀಯ ವಿದ್ಯಾಲಯಗಳು ಆರಂಭವಾಗಿ ವೈದ್ಯಕೀಯ ಹಾಗೂ
ಸ್ತ್ರವೈದ್ಯಕೀಯವನ್ನು ಕ್ರಮಬದ್ಧವಾಗಿ ಕಲಿಸಲಾರಂಭಿ ಸಿದರು. ಹಾಗಾಗಿ 13ನೆಯ ಶತಮಾನದ ಕೊನೆಯ ವೇಳೆಗೆ ಈ ಕಲಿತ ಶಸ್ತ್ರವೈದ್ಯರು ಹಾಗೂ ಕ್ಷೌರಿಕ ಶಸ್ತ್ರವೈದ್ಯರ ನಡುವೆ ವ್ಯತ್ಯಾಸವನ್ನು ಅವರು ಧರಿಸುವ ಉಡುಪಿನ ಮೂಲಕ ಪ್ರದರ್ಶಿಸುವ ಪದ್ಧತಿಯು ಆರಂಭವಾಯಿತು.

ಕಲಿತ ಶಸ್ತ್ರವೈದ್ಯರು ಉದ್ದ ನಿಲುವಂಗಿಯನ್ನು ಹಾಗೂ ಕ್ಷೌರಿಕ ಶಸ್ತ್ರವೈದ್ಯರು ಗಿಡ್ಡ ನಿಲುವಂಗಿಯನ್ನು ಧರಿಸುವುದು ಕಡ್ಡಾಯವಾಯಿತು. ೧೩೬೧ರ ವೇಳೆಗೆ ಫ್ರಾನ್ಸ್ ದೇಶದಲ್ಲಿ ಉದ್ದ ಹಾಗೂ ಗಿಡ್ಡ ನಿಲುವಂಗಿಯ ಶಸವೈದ್ಯರಿಬ್ಬರಿಬ್ಬರೂ ಸೇರಿ ವೃತ್ತಿಪರ ಸಂಘಟನೆಯನ್ನು ಆರಂಭಿಸಿದರು. ಆದರೆ ಇವರಿಬ್ಬರಿಗೂ ದೊರೆಯುತ್ತಿದ್ದ ಗೌರವ ಹಾಗೂ ಶುಲ್ಕವು ಭಿನ್ನವಾಗಿರುತ್ತಿದ್ದವು. ಕಲಿತ ಶಸವೈದ್ಯರು ಶರೀರದ ಒಳಗಿನ ಶಸ್ತ್ರಚಿಕಿತ್ಸೆಗಳನ್ನು ಮಾಡಿದರೆ, ಕ್ಷೌರಿಕ ಶಸ್ತ್ರವೈದ್ಯರು ಮೇಲ್ಮೈ ಶಸ್ತ್ರಚಿಕಿತ್ಸೆಗೆ ತಮ್ಮನ್ನು ಸೀಮಿತಗೊಳಿಸಿಕೊಳ್ಳಬೇಕಾಯಿತು. ಕೊನೆಗೆ 1743 ರಲ್ಲಿ ಫ್ರಾನ್ಸ್ ಹಾಗೂ 1745ರಲ್ಲಿ ಉದ್ದ ಮತ್ತು ಗಿಡ್ಡ ನಿಲುವಂಗಿಯ ಶಸ್ತ್ರವೈದ್ಯರು ತಮ್ಮದೇ ಆದ ಪ್ರತ್ಯೇಕ ಸಂಘಗಳನ್ನು ಸ್ಥಾಪಿಸಿದರು. ಹಾಗಾಗಿ ತಲೆಗೂದಲನ್ನು ಕತ್ತರಿಸುತ್ತಿದ್ದ ಕ್ಷೌರಿಕರು ಶಸ್ತ್ರವೈದ್ಯವನ್ನು ಮಾಡಬಾರದೆಂಬ ಉಗ್ರ ನಿಲುವಳಿ ಜಾರಿಗೆ ಬಂದಿತು. 1800ರ ಹೊತ್ತಿಗೆ ಇಂಗ್ಲೆಂಡಿನಲ್ಲಿ ರಾಯಲ್ ಕಾಲೇಜ್ ಆಫ್ ಸರ್ಜನ್ಸ್ ಆರಂಭವಾಯಿತು.

ಕ್ಷೌರಿಕರ ಸಂಘಟನೆಯು ಇಂದಿಗೂ ಲಂಡನ್ನಿನಲ್ಲಿದೆ. ಅವರು ಇಂದು ಶಸ್ತ್ರಚಿಕಿತ್ಸೆಯನ್ನು ನೀಡದಿದ್ದರೂ ಸಹ, ಸಮಾಜ ದಲ್ಲಿ ಹಲವು ವೃತ್ತಿಗಳು- ಶಸ್ತ್ರವೈದ್ಯರು, ದಂತವೈದ್ಯರು, ಹಚ್ಚೆ ಹಾಕುವವರು, ಕೇಶಾಲಂಕರ ಪರಿಣತರು, ವಿಗ್ ತಯಾರಕರು, ಕೈ ಮತ್ತು ಕಾಲು ಉಗುರುಗಳ ಸುರೂಪ ತಜ್ಞರು
ಹಾಗೂ ಅಂಗಮರ್ದನ (ಮಾಲೀಶು)ವನ್ನು ಮಾಡುವವರು ಆರಂಭವಾಗಲು ಕಾರಣರಾಗಿದ್ದಾರೆ ಎನ್ನುವುದು ವಾಸ್ತವವಾಗಿದೆ.

ಕ್ಷೌರಿಕ ಶಸವೈದ್ಯರ ಕುರುಹಾಗಿ ಕೆಂಪು-ಬಿಳಿಯ ಕಂಬವನ್ನು ಇಂದಿಗೂ ಲಂಡನ್ನಿನ ಕ್ಷೌರಿಕರ ಅಂಗಡಿಗಳ ಮುಂದೆ ನೋಡಬಹುದು. ಜತೆಗೆ ಔಷಧ ಗಳನ್ನು ನೀಡುವ ವೈದ್ಯರನ್ನು ಡಾಕ್ಟರ್‌ಎಂದು ಗೌರವದಿಂದ ಸಂಬೋಧಿಸಿದರೆ, ಶಸ್ತ್ರವೈದ್ಯರನ್ನು ಮಿಸ್ಟರ್ ಎಂದೇ ಇಂದಿಗೂ ಕರೆಯುತ್ತಾರೆ. ಎಂ.ಆರ್
.ಸಿ.ಎಸ್ ಹಾಗೂ ಎಫ್.ಆರ್.ಸಿ.ಎಸ್ ಮುಂತಾದ ಉನ್ನತ ಶಸ್ತ್ರವೈದ್ಯಕೀಯ ಪದವೀಧರರನ್ನೂ ಮಿಸ್ಟರ್ ಎಂದೇ ಕರೆಯುವ ಪದ್ಧತಿಯು ಯುನೈಟೆಡ್ ಕಿಂಗ್‌ಡಮ್, ಐರ್ಲೆಂಡ್, ದಕ್ಷಿಣ ಆಫ್ರಿಕ, ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್ ದೇಶಗಳಲ್ಲಿವೆ.

ಅಂದು ಕ್ಷೌರಿಕ ಶಸ್ತ್ರವೈದ್ಯರಿಗೆ ಯಾವುದೇ ಸಾಂಪ್ರದಾಯಿಕ ಕಾಲೇಜು ಶಿಕ್ಷಣವಿರುತ್ತಿರಲಿಲ್ಲ. ಹಾಗಾಗಿ ಅವರನ್ನು ಮಿಸ್ಟರ್ ಎಂದೇ ಕರೆಯುವ ಪದ್ಧತಿಯು ಬೆಳೆಯಿತು. ಈ ದೇಶಗಳ ಇಂದಿನ ವೈದ್ಯರು ಎಲ್ಲ ರೀತಿಯ ಸಾಂಪ್ರದಾಯಿಕ ಶಿಕ್ಷಣವನ್ನು ಅಧಿಕೃತವಾಗಿ ಪಡೆದಿದ್ದರೂ, ಅವರು ಮಿಸ್ಟರ್
ಎಂದು ಕರೆಸಿಕೊಳ್ಳುವುದು ಒಂದು ವಿಪರ್ಯಾಸವಾಗಿದೆ.

error: Content is protected !!