Sunday, 8th September 2024

ಮೊಡವೆ ಸಮಸ್ಯೆಗೆ ಆಯುರ್ವೇದ ಪರಿಹಾರ

ಸಲಹೆ

ಡಾ.ಮಹೇಶ್ ಶರ್ಮಾ ಎಂ.

drsharmamysr@gmail.com

ಕಾಂತಿಯುಕ್ತ ಮುಖದ ತ್ವಚೆ ಪಡೆಯುಬೇಕೆಂಬುದು ಎಲ್ಲರ ಬಯಕೆ. ಆದರೆ ಕಪ್ಪು ಕಲೆ, ಮೊಡವೆ, ತುರಿಕೆ, ಸ್ರಾವಯುಕ್ತ ಗುಳ್ಳೆ ಮುಂತಾದ ತೊಂದರೆಗಳು ಮುಖದ ಸೌಂದರ್ಯವನ್ನು ಹಾಳು ಮಾಡುತ್ತದೆ ಮತ್ತು ಇದರಿಂದ ಬಹಳಷ್ಟು ಜನ ಮಾನಸಿಕ ಖಿನ್ನತೆಗೂ ಒಳಗಾಗುತ್ತಾರೆ.

ಮೊಡವೆ ಇತ್ತೀಚಿನ ದಿನಗಳಲ್ಲಿ ಬಹಳ ಸಾಮಾನ್ಯವಾದ ಚರ್ಮದ ತೊಂದರೆಯಾಗಿದೆ. ಅದರಲ್ಲೂ ಹದಿಹರೆಯದ ಯುವಕ ಯುವತಿಯರಿಗೆ ಇದು ತುಂಬಾ ಕಿರಿಕಿರಿಯನ್ನು ಉಂಟುಮಾಡುತ್ತಿದೆ. ಬದಲಾದ ಜೀವನ ಪದ್ಧತಿ, ಆಹಾರ ಪದಾರ್ಥ ಮತ್ತು ಸೇವಿಸುವ ಕ್ರಮ, ಹಾರ್ಮೋನ್‌ಗಳ ಬದಲಾವಣೆ ಮುಂತಾದ ಕಾರಣಗಳಿಂದಾಗಿ ದೀರ್ಘಕಾಲ ಕಾಡುವ ಸಮಸ್ಯೆಯಾಗಿದೆ.

ಚಿಕಿತ್ಸೆಯಾಗಿ ಹೆಚ್ಚಿನ ಜನರು ಸೌಂದರ್ಯವರ್ಧಕ ಸಾಧನಗಳಾದ ಚರ್ಮದ ಲೋಶನ್, ಸೋಪ್, ಆಯಿಂಟ್ಮೆಂಟ್ ಮತ್ತು ಗಿಡಮೂಲಿಕೆ ಲೇಪನಗಳನ್ನು ತಾವೇ ನಿರ್ಧರಿಸಿ ಪಡೆಯುತ್ತಾರೆ. ಆದರೆ ಕೇವಲ ಸೌಂದರ್ಯವರ್ಧಕದಿಂದ ಗುಣವಾಗದ ಈ ಸಮಸ್ಯೆಗೆ ಕಾರಣವನ್ನರಿತು ವೈದ್ಯರಿಂದ ಚಿಕಿತ್ಸೆ ಪಡೆಯುವುದು ಉತ್ತಮ.

ಮೊಡವೆಗೆ ಮುಖ್ಯ ಕಾರಣಗಳು

ಹಲವಾರು ಕಾರಣಗಳಿಂದ ಮೊಡವೆ ಉಂಟಾಗಬಹುದು. ಸೇವಿಸುವ ಆಹಾರ ಅಲ್ಲದೆ ಹಾರ್ಮೋನ್‌ಗಳ ವ್ಯತ್ಯಾಸ ಮತ್ತು ವಾತಾವರಣದ ಪ್ರದೂಷಣೆ ಮುಖ್ಯ ಕಾರಣ ಅತಿಯಾದ ಕರಿದ, ಜಿಡ್ಡಿನ ಪದಾರ್ಥಗಳ ಸೇವನೆ, ಅತಿಯಾದ ಮಾಂಸಾಹಾರಗಳ ಸೇವನೆ ಕ್ರಮೇಣ ರಕ್ತ ಪ್ರದೂಷಣೆ ಮಾಡುತ್ತದೆ.

ಮಾನಸಿಕ ಒತ್ತಡ ಮತ್ತು ಆತಂಕ ಮೊಡವೆಗೆ ಕಾರಣ ಮತ್ತು ಮೊಡವೆಯನ್ನು ಉಲ್ಬಣಿಸುತ್ತದೆ ರಾತ್ರಿ ಪಾಳಿಯ ದಲ್ಲಿ ಕೆಲಸ ಮಾಡುವುದರಿಂದ, ರಾತ್ರಿ ಜಾಗರಣೆ ಯಿಂದ ಸೌಂದರ್ಯವರ್ಧಕಗಳ ಅತಿಯಾದ ಬಳಕೆ ದೇಹದ ಪ್ರಾಕೃತ ಕಾರ್ಯಚಟುವಟಿಕೆಗಳಲ್ಲಿ ವ್ಯತ್ಯಾಸವಾದಾಗ ವಿಷದಂತಹ ಅನಗತ್ಯ ವಸ್ತುಗಳು (ಟಾಕ್ಸಿನ್ಸ್) ನಮ್ಮ ದೇಹದಲ್ಲಿ ಅತಿಯಾಗಿ ಶೇಖರಣೆಯಾದಾಗ ಪ್ರಾಕೃತಿಕವಾಗಿ ಹದಿಹರೆಯದಲ್ಲಿ ಆಗುವ ಹಾರ್ಮೋನ್‌ಗಳ ಏರುಪೇರಿನ ಪ್ರಭಾವ ಮುಖವನ್ನು ಶುಚಿಯಾಗಿ ತೊಳೆಯದೆ ಇದ್ದರೆ ಅತಿಯಾದ ಬೊಜ್ಜು, ಥೈರಾಯಿಡ್, ಮಧುಮೇಹ, ಮುಟ್ಟಿನ ಸಮಸ್ಯೆ, ಪಿ.ಸಿ.ಓ.ಡಿ ರೋಗಗಳ ತೊಡಕುಗಳಿಂದ ಮೊಡವೆ ಸಂಭವಿಸುತ್ತದೆ ಗರ್ಭಿಣಿಯ ಅವಸ್ಥೆಯಲ್ಲಿ ಹಾರ್ಮೋನ್‌ಗಳ ವ್ಯತ್ಯಾಸದಿಂದ ಬರಬಹುದು. ತಲೆಯಲ್ಲಿ ಹೊಟ್ಟು ಅಥವಾ ಡ್ಯಾನ್‌ಡ್ರಫ್ ನಿಂದಾಗಿ ಸತತವಾದ ಅಜೀರ್ಣ ಮತ್ತು ಮಲಬದ್ಧತೆ ಕೆಲವೊಮ್ಮೆ, ಬಿಸಿಲು, ಅತಿಯಾದ ಉಷ್ಣ ಅಥವಾ ಪಿತ್ತದಿಂದಾಗಿ ಕೆಂಪು ಬಣ್ಣದ ಮೊಡವೆ ಬರುತ್ತದೆ. ಮೊಡವೆಗಳನ್ನು ಉಗುರಿನಿಂದ ಮುಟ್ಟಿಕೊಳ್ಳುವುದರಿಂದ ಹೆಚ್ಚಾಗಿ ತೀವ್ರಸ್ವರೂಪ ಪಡೆದು ಕೊಳ್ಳಬಹುದು.

ಹೇಗಿರುವುದು ಈ ಮೊಡವೆಗಳು

ಸಣ್ಣ ಕೆಂಪು ಅಥವಾ ಕಪ್ಪು ಬಣ್ಣದ ಗುಳ್ಳೆ ನೀರು ಅಥವಾ ಸ್ರಾವತುಂಬಿದ ಗುಳ್ಳೆಗಳು ತುರಿಕೆ, ಉರಿ ಕೆಲಮೊಮ್ಮೆ ನೋವು ಅಂಟಿನಂತಯ ಸ್ರಾವದಿಂದ ಮುಖ ಜಿಡ್ಡಾಗಿ ಕಾಣುತ್ತದೆ. ಪ್ರಾರಂಭದಲ್ಲಿ ತುರಿಕೆ, ಉರಿ, ನೋವು ಇರದಿದ್ದರೂ ಕಾಲ ಕ್ರಮೇಣ ಚಿಕಿತ್ಸೆ ಪಡೆಯದೇ ಇದ್ದರೆ ಅಥವಾ ಪಥ್ಯ ಆಹಾರಗಳ ಸೇವನೆ ಮಾಡದಿದ್ದಲ್ಲಿ ಮೊಡವೆ ಹೆಚ್ಚಾಗಿ, ತುರಿಕೆ, ನೋವು, ಸ್ರಾವದ ಗುಳ್ಳೆಗಳಾಗಿ ಬದಲಾಗಬಹುದು.

ಮೊಡವೆಗೆ ಸುಲಭ ಪರಿಹಾರಗಳು
ಮುಖವನ್ನು ಶುಭ್ರವಾದ ನೀರಿನಿಂದ ದಿನದಲ್ಲಿ 3-4 ಬಾರಿ ತೊಳೆಯಬೇಕು ಮತ್ತು ಶುಭ್ರವಾದ ಬಟ್ಟೆಯಿಂದ ಶುದ್ಧಮಾಡಿಕೊಳ್ಳಬೇಕು
6-7 ಗಂಟೆಯಷ್ಟು ರಾತ್ರಿ ಗಾಢ ನಿದ್ರೆ ಮಾಡಬೇಕು
ದಿನದಲ್ಲಿ 7-8 ಗ್ಲಾಸ್‌ನಷ್ಟು ಶುದ್ಧವಾದ ನೀರಿನ ಸೇವನೆ
ಮಾನಸಿಕ ಒತ್ತಡ ನಿವಾರಿಸಿಕೊಳ್ಳಲು ಧ್ಯಾನ, ಪ್ರಾಣಾಯಾಮ ಯೊಗಾಸನ ಮಾಡಬೇಕು
ನೀರಿನಂಶ ಹೇರಳವಾಗಿರುವ ಹಣ್ಣು ತರಕಾರಿಗಳನ್ನು ಸೇವಿಸಿ
ಮಲಬದ್ಧತೆ ನಿವಾರಿಸಿಕೊಳ್ಳಬೇಕು ಮೇಕಪ್ ಮಾಡಿಕೊಂದು ರಾತ್ರಿ ಮಲಗಬಾರದು
ರಕ್ತ ಶುದ್ಧಿ ಮಾಡುವ ಕಹಿ ಮತ್ತು ಒಗರು ರುಚಿಯುಳ್ಳ ಔಷಧಿ ಸೇವನೆ

ಆಯುರ್ವೇದ ವಿಶೇಷ ಚಿಕಿತ್ಸೆಗಳು
ರಕ್ತದಲ್ಲಿನ ನಿರುಪಯುಕ್ತ ಅಂಶಗಳನ್ನು ಹೊರಹಾಕಲು, ಹಾರ್ಮೋನ್‌ಗಳ ವ್ಯತ್ಯಾಸವನ್ನು ಸರಿಪಡಿಸಲು ಪಂಚಕರ್ಮ ಚಿಕಿತ್ಸೆ ರಕ್ತ ಶುದ್ಧಿಕರಿಸಲು ಗಿಡಮೂಲಿಕೆ ಗಳ ಕಷಾಯ ಮತ್ತಿತರ ಔಷಧಿಗಳು ದೂಷಿತ ರಕ್ತ ಶುದ್ಧಿಕರಿಸಲು ಲೀಚ್ ಅಥವಾ ಜಲೌಕ ಚಿಕಿತ್ಸೆ ಗಿಡಮೂಲಿಕೆಗಳ ಲೇಪನಗಳು ಥೈರಾಯಿಡ್, ಮುಟ್ಟಿನ ರೋಗಗಳ ಫಲವಾಗಿ ಮೊಡವೆಗಳು ಬಂದರೆ ಮೊದಲು ಈ ರೋಗಗಳಿಗೆ ಚಿಕಿತ್ಸೆ ಪಡೆಯಬೇಕು.

ವಿವಿಧ ಮನೆ ಮದ್ದುಗಳು
೧೦ ಬೇವಿನ ಎಲೆಗಳನ್ನು ನೀರಿನಲ್ಲಿ ಕುದಿಸಿ, ಅರೆದು ಮುಖಕ್ಕೆ ಹಚ್ಚಿ ಪೂರ್ತಿ ಒಣಗಿದ ನಂತರ ಶುದ್ಧವಾದ ನೀರಿನಲ್ಲಿ ತೊಳೆಯುವುದರಿಂದ ತುರಿಕೆ, ಉರಿ ಶಮನವಾಗುತ್ತದೆ.

ಅಲರ್ಜಿ, ಸೋಂಕಿನಿಂದಾಗುವ ಮೊಡವೆಗೆ ಶುದ್ಧವಾದ ಅರಿಶಿನವನ್ನು ನೀರಿನಲ್ಲಿ ಅಥವಾ ರೋಸ್ ವಾಟರ್‌ನಲ್ಲಿ ಬೆರೆಸಿ ಹಚ್ಚಿಬೇಕು.

ಒಣ ಮತ್ತು ಕಲೆ ಯುಕ್ತ ಚರ್ಮಕ್ಕೆ ಜೇನುತುಪ್ಪವನ್ನು ರೋಸ್ ವಾಟರ್‌ನಲ್ಲಿ ಬೆರೆಸಿ ೫ -೬ ನಿಮಿಷ ಹಚ್ಚಿ ತೊಳೆಯಬೇಕು.

ಮುಖದಲ್ಲಿರುವ ಅಂಟಿನಂತಹ ಅಂಶವನ್ನು ತೆಗೆದು ಶುದ್ದೀಕರಿಸಲು ತುಳಸಿ ಎಲೆಗಳನ್ನು ಜಜ್ಜಿ ಅದರ ರಸವನ್ನು ಮುಖಕ್ಕೆ ಹಚ್ಚಿ ೧೫-೨೦ ನಿಮಿಷದ ನಂತರ ತೊಳೆಯಬೇಕು

ಮುಖದಲ್ಲಿ ಉರಿ ಇದ್ದಾಗ ಶ್ರೀಗಂಧದ ಲೇಪನವನ್ನು ಅಥವಾ ರಕ್ತಚಂದನದ ಲೇಪವನ್ನು ಹಚ್ಚಬೇಕು.

ನಿತ್ಯ ನೆಲ್ಲಿ ಕಾಯಿ ಅಥವಾ ಇದರ ರಸವನ್ನು ಸೇವಿಸುವುದರಿಂದ ರಕ್ತ ಶುದ್ಧಿಯಾಗುತ್ತದೆ, ದೇಹದ ಪಿತ್ತದ ಅಂಶ ನಿಯಂತ್ರಣಕ್ಕೆ ಬರುತ್ತದೆ.

ಲಾವಂಚ, ಸೊಗದೆ ಬೇರು, ನಿಂಬೆ ಹಚ್ಚಿನ ಪಾನಕ ರಕ್ತ ಶುದ್ಧಿ ಕರಿಸಲು ಅತ್ಯುತ್ತಮ.

ಕೊತ್ತಂಬರಿ ಬೀಜ, ನೆಲ್ಲಿಕಾಯಿ ಪುಡಿ, ಸ್ವಲ್ಪ ಅರಿಶಿಣ, ಸೋಂಪಿನ ಪುಡಿಯನ್ನು ಸಮಪ್ರಮಾಣದಲ್ಲಿ ಬೆರೆಸಿ ಅರ್ಧ ಚಮಚ ಬೆಚ್ಚಗಿನ ನೀರಿನಲ್ಲಿ ಸೇವಿಸುವುದರಿಂದ ದೇಹದಲ್ಲಿನ ಅನಗತ್ಯ ಅಂಶ ನಿವಾರಣೆಯಾಗುತ್ತದೆ.

ಸೇವಿಸಬೇಕಾದ ಆಹಾರ ಪದಾರ್ಥಗಳು
ನೀರು, ಮಜ್ಜಿಗೆ, ಎಳನೀರು, ಕಲ್ಲಂಗಡಿ, ಸೋರೆಕಾಯಿ, ಸೌತೆಕಾಯಿ, ಪಡುವಲಕಾಯಿ, ಹೀರೆಕಾಯಿ, ಬೂದಗುಂಬಳ ಕಾಯಿ, ತೊಂಡೆಕಾಯಿ, ನೆಲ್ಲಿಕಾಯಿ, ಕೋಕಂ, ಹೆಸರು ಬೇಳೆ, ಹೆಸರು ಕಾಳು.

ವರ್ಜಿಸಬೇಕಾದ ಆಹಾರಗಳು  
ಬೇಕರಿ ತಿಂಡಿಗಳು, ಮೀನು, ಮೊಟ್ಟೆ, ಮಾಂಸಾಹಾರಗಳು, ಧೂಮಪಾನ, ಮದ್ಯಪಾನ, ತುಪ್ಪ, ಬೆಣ್ಣೆ, ಕರಿದ ತಿಂಡಿಗಳು, ಝ್ಂಕ್ ತಿಂಡಿಗಳು, ಅಣಬೆ, ಸುವರ್ಣಗೆಡ್ಡೆ, ಪನ್ನೀರ್, ಅತಿಯಾದ ಚಹ, ಕಾಫಿ, ಬೆಳ್ಳುಳ್ಳಿ, ಉದ್ದು, ಬಾಳೆಹಣ್ಣು, ಹಲಸಿನಹಣ್ಣು, ಬದನೆಕಾಯಿ, ಮೂಲಂಗಿ, ಬೆಂಡೆಕಾಯಿ, ಹುರುಳಿಕಾಳು, ಹಗಲಲ್ಲಿ ನಿದ್ರೆ

Leave a Reply

Your email address will not be published. Required fields are marked *

error: Content is protected !!