Thursday, 19th September 2024

ಬಿಜೆಪಿ ಹೊಟ್ಟೆಗೆ ಬಿತ್ತು ಬೊಮ್ಮಾಯಿ ಟಾನಿಕ್

Basavaraj Bommai

ಮೂರ್ತಿ ಪೂಜೆ 

ಕಳೆದ ವಾರ ಬೆಂಗಳೂರಿಗೆ ಬಂದ ಬಿಜೆಪಿ ನಾಯಕ ಅಮಿತ್ ಶಾ ಒಂದೇ ಕಲ್ಲಿಗೆ ಎರಡು ಹಕ್ಕಿ ಹೊಡೆದರು. ಮೊದಲ ಹಕ್ಕಿ ಲಿಂಗಾಯತ ಸಮುದಾಯ ವಾದರೆ, ಎರಡನೇ ಹಕ್ಕಿ ಯಡಿಯೂರಪ್ಪ. ಅಂದ ಹಾಗೆ ಈ ಬಾರಿ ಕರ್ನಾಟಕಕ್ಕೆ ಬರುವ ಮುನ್ನ ತಮ್ಮ ಆಪ್ತರು ನೀಡಿದ ಫೀಡ್ ಬ್ಯಾಕು ಅಮಿತ್ ಶಾ ಅವರನ್ನು ಚಿಂತೆಗೆ ದೂಡಿತ್ತಂತೆ.

ಏನೇ ಮಾಡಿದರೂ ಕರ್ನಾಟಕದ ಲಿಂಗಾಯತ ಸಮುದಾಯ ಬಿಜೆಪಿಯಿಂದ ದೂರ ಹೋಗುತ್ತಿದೆ ಎಂಬುದು ಒಂದಾದರೆ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಬೆಂಬಲಿಗರು ಒಬ್ಬೊಬ್ಬರಾಗಿ ಪಕ್ಷ ತ್ಯಜಿಸುತ್ತಿದ್ದಾರೆ ಎಂಬುದು ಅಮಿತ್ ಶಾ ಕಿವಿಗೆ ಬಿದ್ದ ಎರಡನೇ ಫೀಡ್ ಬ್ಯಾಕು. ಮೊದಲನೇ ಫೀಡ್‌ಬ್ಯಾಕ್ ಬಗ್ಗೆ ಅಮಿತ್ ಶಾಗೆ ಗೊತ್ತಿತ್ತು, ಲಿಂಗಾಯತ ಮತ ಬ್ಯಾಂಕಿನ ಷೇರು ಕಡಿಮೆ ಯಾದರೂ ಇತರ ಮತ ಬ್ಯಾಂಕುಗಳ ಮೂಲಕ ಈ ಕೊರತೆಯನ್ನು ನೀಗಿಕೊಳ್ಳಬಹುದು ಎಂಬ ನಂಬಿಕೆ ಅಮಿತ್ ಶಾ ಅವರಿಗೆ ಮುಂಚಿನಿಂದಲೂ ಇದೆ.

ಆದರೆ ಹಿರೇಕೆರೂರಿನ ಯು.ಬಿ.ಬಣಕಾರ್ ಅವರಿಂದ ಹಿಡಿದು ಮೋಹನ್ ಲಿಂಬಿಕಾಯಿ ಅವರ ತನಕ ಇತ್ತೀಚಿನ ದಿನಗಳಲ್ಲಿ ಬಿಜೆಪಿ ತೊರೆದ ಬಹುತೇಕರು ಯಡಿಯೂರಪ್ಪ ಅವರ ಬೆಂಬಲಿಗರು ಎಂಬ ವಿಷಯ ಮಾತ್ರ ಅಮಿತ್ ಶಾ ಅವರಿಗೆ ಜೀರ್ಣವಾಗಿಲ್ಲ. ಹಾಗಂತಲೇ ಕಳೆದ ವಾರ ಅಮಿತ್ ಶಾ ಅವರು, ಯಡಿಯೂರಪ್ಪ ಅವರ ನಿವಾಸಕ್ಕೆ ಭೇಟಿ ನೀಡಿದ್ದಾರೆ. ಈ ಸಂದರ್ಭದಲ್ಲಿ ಒಂದು ಹೈಡ್ರಾಮಾ ಮೂಲಕ ಲಿಂಗಾಯತ ಸಮುದಾಯಕ್ಕೆ ಮೆಸೇಜು ಕೊಟ್ಟಿದ್ದಾರೆ. ಅರ್ಥಾತ್, ಅವತ್ತು ಯಡಿಯೂರಪ್ಪ ಅವರ ನಿವಾಸಕ್ಕೆ ಕಾರಿನಲ್ಲಿ ಬಂದ ಅಮಿತ್ ಶಾ ಕೆಳಗಿಳಿದಾಗ ಅವರಿಗೆ
ಹೂಗುಚ್ಛ ಕೊಡಲು ಯಡಿಯೂರಪ್ಪ ಮುಂದಾಗಿದ್ದಾರೆ.

ಆದರೆ, ಆ ಹೂಗುಚ್ಛವನ್ನು ಅಲ್ಲಿಯೇ ಇದ್ದ ಬಿ.ವೈ.ವಿಜಯೇಂದ್ರ ಅವರಿಗೆ ಕೊಡಲು ಸೂಚಿಸಿದ ಅಮಿತ್ ಶಾ, ಅವರ ಕೈಲೇ ಹೂಗುಚ್ಛವನ್ನು ಸ್ವೀಕರಿಸಿ ಬಲಗೈನಿಂದ ಅವರ ಭುಜವನ್ನು ಅಪ್ಪಿಕೊಂಡಿದ್ದಾರೆ. ಈ ರೀತಿ ಮಾಡುವುದರಿಂದ ಯಡಿಯೂರಪ್ಪನವರ ಬೆಂಬಲಿಗರು. ‘ಬಿಜೆಪಿ ವರಿಷ್ಠರು ಯಡಿ ಯೂರಪ್ಪ ಅವರನ್ನು ನಿರ್ಲಕ್ಷಿಸಿದ್ದಾರೆ ಎಂಬುದು ಸುಳ್ಳು. ವಸ್ತುಸ್ಥಿತಿಯೆಂದರೆ ಯಡಿಯೂರಪ್ಪ ಅವರನ್ನು ದೂರವಿಟ್ಟರೆ ಕರ್ನಾಟಕದಲ್ಲಿ ಪಕ್ಷಕ್ಕೆ ಭವಿಷ್ಯವಿಲ್ಲ ಎಂಬುದು ಮೋದಿ-ಅಮಿತ್ ಶಾ ಅವರಿಗೆ ಗೊತ್ತಿದೆ. ಹೀಗಾಗಿ ಅಮಿತ್ ಶಾ ಯಡಿಯೂರಪ್ಪ ಅವರ ಮನೆಗೆ ಬಂದಿದ್ದಾರೆ. ಎಲ್ಲ ಜವಾಬ್ದಾರಿಯನ್ನು ಅವರಿಗೆ ವಹಿಸಿದ್ದಾರೆ’ ಅಂತ ಈ ಬೆಂಬಲಿಗರು ಪ್ರಚಾರ ಶುರುವಿಟ್ಟುಕೊಳ್ಳುತ್ತಾರೆ.

ಅದು ನಿಜವಲ್ಲ ಅಂತ ಖುದ್ದು ಯಡಿಯೂರಪ್ಪ ಅವರಿಗೂ ಗೊತ್ತು. ಆದರೆ ರಾಜಕೀಯ ಭವಿಷ್ಯಕ್ಕಾಗಿ ಅವರನ್ನು ನೆಚ್ಚಿಕೊಂಡವರಿಗೆ ಇಂತಹ ಬಿಲ್ಡಪ್ಪು ಗಳು ಬೇಕು. ಇದು ಸುಳ್ಳು ಅಂತ ಹೇಳುವ ಸ್ಥಿತಿಯಲ್ಲಿ ಯಡಿಯೂರಪ್ಪ ಅವರೂ ಇರುವುದಿಲ್ಲ. ಹೀಗಾಗಿ ವಿಜಯೇಂದ್ರ ಎಪಿಸೋಡಿನ ಮೂಲಕ
ಲಿಂಗಾಯತ ಸಮುದಾಯಕ್ಕೆ ಪಾಸಿಟಿವ್ ಸಂದೇಶ ರವಾನೆಯಾಗಿದೆ ಎಂಬುದು ಅಮಿತ್ ಶಾ ನಂಬಿಕೆ. ಇದು ಎಷ್ಟರ ಮಟ್ಟಿಗೆ ನಿಜವಾಗುತ್ತದೆ ಎಂಬುದು ಗೊತ್ತಿಲ್ಲ. ಆದರೆ ಒಂದು ಮಟ್ಟದ್ದಾದರೂ ಅದು ಪರಿಣಾಮ ಬೀರುವುದು ಗ್ಯಾರಂಟಿ.

ಬಿಜೆಪಿ ಬಾಯಿಗೆ ಬೊಮ್ಮಾಯಿ ಟಾನಿಕ್

ಈ ಮಧ್ಯೆ ಮೀಸಲಾತಿ ಎಪಿಸೋಡಿಗೆ ಜೀವ ತುಂಬಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಿಜೆಪಿ ಬಾಯಿಗೆ ಟಾನಿಕ್ ಸುರಿದಿದ್ದಾರೆ. ಅಂದ ಹಾಗೆ ಅದೇನೇ ಸರ್ವೆ ಮಾಡಿಸಿದರೂ ಕರ್ನಾಟಕದಲ್ಲಿ ಬಿಜೆಪಿಯ ಗ್ರಾಫ್ ಮೇಲೇರುತ್ತಿಲ್ಲ. ಕಾರಣ? ಜನರ ಮನಸ್ಸಿನಲ್ಲಿ ಇದು ಭ್ರಷ್ಟ ಸರಕಾರ ಎಂಬ ಭಾವನೆ ದಟ್ಟವಾಗುವಂತೆ ಕಾಂಗ್ರೆಸ್ ನೋಡಿಕೊಂಡಿದೆ. ಕಾಂಗ್ರೆಸ್ಸಿನ ಈ ಪ್ರಚಾರಕ್ಕೆ ಪ್ರತಿಯಾಗಿ, ಅವರ ಕಾಲದಲ್ಲಿ ಭ್ರಷ್ಟಾಚಾರ ಆಗಿಲ್ವಾ? ಅಂತ ಬಿಜೆಪಿ ನಾಯಕರು ಕೂಗುತ್ತಿದ್ದರೂ ಈ ಕೂಗಿನಲ್ಲಿ ದಮ್ಮೂ ಇಲ್ಲ, ತಾಕತ್ತೂ ಇಲ್ಲ.

ಭ್ರಷ್ಟಾಷಾರದ ಆರೋಪ ಬಂದಾಗ, ಅದು ಸುಳ್ಳು ಅಂತ ಸಾಬೀತು ಮಾಡಬೇಕೇ ಹೊರತು, ನೀನೂ ಭ್ರಷ್ಟ ಅಂತ ಕೂಗುವುದು ಉತ್ತರವಲ್ಲ, ವಿಪರ್ಯಾಸವೆಂದರೆ ಬಿಜೆಪಿ ನಾಯಕರಿಗೆ ಇದು ಅರ್ಥವಾಗುತ್ತಿಲ್ಲ. ಹೀಗಾಗಿ ಬಿಜೆಪಿ ನಾಯಕರು ಸರ್ವೆಗಳ ಮೇಲೆ ಸರ್ವೆ ಮಾಡಿಸಿದರೂ ಅದು ಕುಸಿಯುತ್ತಲೇ ಹೋಗುತ್ತಿದೆಯಲ್ಲದೆ, ಈಗ ಚುನಾವಣೆ ನಡೆದರೆ ಬಿಜೆಪಿಗೆ ಅರವತ್ತರಿಂದ ಅರವತ್ತೈದು ಕ್ಷೇತ್ರಗಳಲ್ಲಿ ಗೆಲುವು ಸಿಗಬಹುದು ಎಂಬ
ಮಾಹಿತಿ ಸಿಗುತ್ತಿದೆ. ಇಂತಹ ಹೊತ್ತಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜಾದೂ ಮಾಡಿದ್ದಾರೆ. ಮುಗಿದು ಹೋಯಿತು ಅನ್ನಿಸಿದ್ದ ಮೀಸ ಲಾತಿಯ ಎಪಿಸೋಡನ್ನು ಎತ್ತಿಕೊಂಡು ಒಳ್ಳೆಯ ಟರ್ನು ಕೊಟ್ಟಿದ್ದಾರೆ.

ಪಂಚಮಸಾಲಿ ಲಿಂಗಾಯತರು ಮತ್ತು ಒಕ್ಕಲಿಗರ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸಿ, ಪರಿಶಿಷ್ಟರಿಗೆ ಒಳಮೀಸಲಾತಿ ನೀಡುವ ಮೂಲಕ ಗೇಮ್ ಚೇಂಜರ್ ಪಾತ್ರ ನಿರ್ವಹಿಸಿದ್ದಾರೆ. ಅಂದ ಹಾಗೆ ಈ ಬೆಳವಣಿಗೆಯಿಂದ ಪಂಚಮಸಾಲಿ ಲಿಂಗಾಯತರು ಖುಷಿಯೆದ್ದು ಹೋಗಿದ್ದಾರೆ ಎಂದಲ್ಲ, ಯಾಕೆಂದರೆ ಆ ಸಮುದಾಯ ೨ ಎ ಪ್ರವರ್ಗದಡಿ ಮೀಸಲಾತಿ ಬಯಸಿತ್ತು. ಹೀಗಾಗಿ ಮೊನ್ನೆ ಬೊಮ್ಮಾಯಿ ಅವರ ಸಂಪುಟ ಕೈಗೊಂಡ ತೀರ್ಮಾನ ದಿಂದ ಆ ಸಮುದಾಯ ಹಿರಿಹಿರಿ ಹಿಗ್ಗುತ್ತಿಲ್ಲ. ಆದರೆ ಈ ವಿಷಯದಲ್ಲಿ ಹಿಂದಿದ್ದ ಅದರ ಅಸಮಾಧಾನದ ಕಾವು ಕಡಿಮೆಯಾಗಿದೆ. ಇದೇ ರೀತಿ ಪರಿಶಿಷ್ಟರಿಗೆ ಒಳಮೀಸಲಾತಿ ನೀಡುವ ಮೂಲಕ ಬೊಮ್ಮಾಯಿ ಮಾಸ್ಟರ್ ಸ್ಟ್ರೋಕ್ ಬಾರಿಸಿದ್ದಾರೆ.

ವಸ್ತುಸ್ಥಿತಿ ಎಂದರೆ ದಲಿತ ವರ್ಗದ ಎಡಗೈ ಸಮುದಾಯ ಒಳಮೀಸಲಾತಿಯ ಕಾರಣಕ್ಕಾಗಿಯೇ ಬಿಜೆಪಿ ಜತೆ ನಿಂತಿದೆ. ಈ ಒಳಮೀಸಲಾತಿ ನೀಡುವ ವಿಷಯದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ನಂಬಿಕೆಯಿಲ್ಲ ಎಂಬುದೇ ಎಡಗೈನವರ ತಕರಾರು. ಮತ್ತು ಇದೇ ಕಾರಣಕ್ಕಾಗಿ ಸುಮಾರು ಎರಡು ದಶಕಗಳಿಂದ ಅವರು ಬಿಜೆಪಿ ಬೆನ್ನಿಗೆ ನಿಂತಿದ್ದಾರೆ.

ಆದರೆ ಒಳಮೀಸಲಾತಿ ನೀಡುವ ವಿಷಯದಲ್ಲಿ ಬಿಜೆಪಿಯ ವಿಳಂಬ ಧೋರಣೆ ಎಡಗೈ ಸಮುದಾಯದಲ್ಲಿ ಅಪನಂಬಿಕೆಗೆ ಮೂಡಿಸಿತ್ತು. ಅಷ್ಟೇ ಅಲ್ಲ, ಸಣ್ಣ ಮಟ್ಟದ್ದಾದರೂ ಅದರ ಮತಗಳು ಚದುರಿ ಹೋಗುವ ಲಕ್ಷಣಗಳು ಕಂಡಿದ್ದವು. ಆದರೆ ಈಗ ಒಳ ಮೀಸಲಾತಿ ಸವಲತ್ತು ಪ್ರಕಟವಾಗಿ ರುವುದರಿಂದ ಎಡಗೈ ಸಮುದಾಯ ಚೆಪಿಲ್ಲಿಯಾಗುವ ಅಪಾಯ ತಪ್ಪಿದೆ.

ಅಂದ ಹಾಗೆ ಈ ಹಿಂದೆ ಪರಿಶಿಷ್ಟರಿಗೆ ಮೀಸಲಾತಿಯ ಪ್ರಮಾಣವನ್ನು ಹೆಚ್ಚಿಸಿದ್ದ ಬೊಮ್ಮಾಯಿ ಸರಕಾರ, ಆ ಮೂಲಕ ಬಲಗೈನವರಿಗೂ ಸಮಾಧಾನ ನೀಡಿತ್ತು. ಈಗಿನ ಒಳಮೀಸಲಾತಿಯಿಂದ ಬಲಗೈನವರಲ್ಲಿ ಅಸಮಾಧಾನ ಕಂಡಿದೆಯಾದರೂ, ಅದು ದೊಡ್ಡ ಮಟ್ಟದ ವಿರೋಧಕ್ಕೆ
ಕಾರಣವಾಗಲಾರದು ಎಂಬುದು ಬೊಮ್ಮಾಯಿ ನಂಬಿಕೆ. ಹೀಗೆ ಮಲಗಿದ್ದ ಮೀಸಲಾತಿಯ ಎಪಿಸೋಡನ್ನು ಮೇಲೆತ್ತಿ ಸೆಟ್ಲ್ ಮಾಡಿರುವ ಬೊಮ್ಮಾಯಿ, ರಾಜ್ಯ ಬಿಜೆಪಿಯ ಗ್ರಾಫನ್ನು ನಿಶ್ಚಿತವಾಗಿ ಮೇಲಕ್ಕೇರಿಸಿದ್ದಾರೆ.

ಬಿಜೆಪಿಯ ಹಿರಿಯ ಸಚಿವರೊಬ್ಬರ ಪ್ರಕಾರ, ಮೀಸಲಾತಿ ಎಪಿಸೋಡನ್ನು ಬೊಮ್ಮಾಯಿ ಹ್ಯಾಂಡಲ್ ಮಾಡಿರುವ ರೀತಿಯಿಂದ ಬಿಜೆಪಿಯ ಗ್ರಾಫ ಎಂಭತ್ತೈದಕ್ಕೇರಿದೆ.

ಜೆಡಿಎಸ್ ನಾಯಕರು ಖುಷಿಯಾಗಿದ್ದಾರೆ

ಕುತೂಹಲದ ಸಂಗತಿ ಎಂದರೆ ಬಿಜೆಪಿ ಪಾಳಯದಲ್ಲಿ ನಡೆದ ಈ ಎರಡು ಬೆಳವಣಿಗೆ ಗಳಿಂದ ಜೆಡಿಎಸ್ ನಾಯಕರು ಖುಷಿಯಾಗಿದ್ದಾರೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಯಾರಿಗೆ ಎಷ್ಟು ಸ್ಥಾನ ದಕ್ಕುತ್ತವೆ?ಎಂಬ ಸರ್ವೆ ರಿಪೋರ್ಟುಗಳು ಬಂದಾಗ ಜೆಡಿಎಸ್ ನಾಯಕರು ಆತಂಕಗೊಂಡಿದ್ದರಂತೆ.

ಕಾರಣ? ಬಿಜೆಪಿಯ ಪರಿಸ್ಥಿತಿ ಕಷ್ಟದಲ್ಲಿದೆ. ಈಗಿನ ಸ್ಥಿತಿಯಲ್ಲಿ ಚುನಾವಣೆ ನಡೆದರೆ ಬಿಜೆಪಿಯ ಗಳಿಕೆ ಅರವತ್ತು ಮೀರುವುದಿಲ್ಲ ಅಂತ ಈ ಸರ್ವೆ ರಿಪೋರ್ಟು ಹೇಳಿತ್ತಂತೆ. ಹಾಗೇನಾದರೂ ಆದರೆ ಕಾಂಗ್ರೆಸ್ ಪಕ್ಷ ಸ್ವಯಂಬಲದ ಮೇಲೆ ಅಧಿಕಾರಕ್ಕೆ ಬರುವ ಸಾಧ್ಯತೆ ಹೆಚ್ಚಾಗುತ್ತದೆ ಎಂಬುದು ಜೆಡಿಎಸ್ ನಾಯಕರ ಆತಂಕ. ಅರ್ಥಾತ್, ಕರ್ನಾಟಕದ ನೆಲೆಯಲ್ಲಿ ಎಂಭತ್ತು-ಎಂಭತ್ತೈದು ಸೀಟುಗಳನ್ನು ಬಿಜೆಪಿ ಗೆದ್ದರೆ ಅತಂತ್ರ ವಿಧಾನಸಭೆ ನಿರ್ಮಾಣವಾಗುತ್ತದೆ. ಮತ್ತು ಜೆಡಿಎಸ್ ಪಕ್ಷವೇ ನಿರ್ಣಾಯಕವಾಗುತ್ತದೆ.

ಹಾಗಾಗಲಿ ಎಂಬುದು ಜೆಡಿಎಸ್ ನಾಯಕರ ಬಯಕೆ. ಆದರೆ ತಮ್ಮ ಈ ಬಯಕೆಗೆ ವಿರುದ್ಧವಾದ ಸನ್ನಿವೇಶ ನಿರ್ಮಾಣವಾಗುತ್ತಿದೆ ಅಂತ
ಸಹಜವಾಗಿಯೇ ಅವರಿಗೆ ಕಸಿವಿಸಿಯಾಗಿದೆ. ಆದರೆ ಅಷ್ಟೊತ್ತಿಗೆ ಸರಿಯಾಗಿ ಬಿಜೆಪಿ ಪಾಳಯದಲ್ಲಿ ನಡೆದ ಈ ಎರಡು ಬೆಳವಣಿಗೆಗಳು ಜೆಡಿಎಸ್ ನಾಯಕರಿಗೆ ಸಮಾಧಾನ ತಂದಿವೆಯಂತೆ. ಅಂದ ಹಾಗೆ ಬಿಜೆಪಿಯ ಪರಿಸ್ಥಿತಿ ಉತ್ತಮವಾಗಲಿ ಅಂತ ಬಯಸಿದ ಮಾತ್ರಕ್ಕೆ ಜೆಡಿಎಸ್ ನಾಯಕರು ಬಿಜೆಪಿ ಬಗ್ಗೆ ಮೃದುವಾಗಿದ್ದಾರೆ ಎಂದಲ್ಲ. ಆದರೆ ಮುಂದಿನ ದಿನಗಳಲ್ಲಿ ತಮ್ಮನ್ನು ಬಿಟ್ಟು ಯಾರೂ ಸರಕಾರ ರಚಿಸಬಾರದು ಎಂಬುದು ಅವರ ಯೋಚನೆ.

ಡಿಕೆ-ಸಿದ್ದು ಗಪ್ ಚುಪ್
ಅಂದ ಹಾಗೆ ರಾಜ್ಯ ಕಾಂಗ್ರೆಸ್ಸಿನ ಮೊದಲ ಕಂತಿನ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗಿದೆ. ೧೨೪ ಮಂದಿ ಅಭ್ಯರ್ಥಿಗಳ ಈ ಪಟ್ಟಿಯನ್ನು ನೋಡಿ ಕಾಂಗ್ರೆಸ್ ವಿರೋಧಿಗಳು ನಿರಾಸೆಗೊಂಡಿದ್ದಾರೆ. ಕಾರಣ? ಪಟ್ಟಿ ಬಿಡುಗಡೆಯಾಗುತ್ತಿದ್ದಂತೆಯೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ಸಿದ್ದರಾಮಯ್ಯ ಬೆಂಬಲಿಗರ ಸಿಟ್ಟು ತಾರಕಕ್ಕೇರುತ್ತದೆ ಎಂಬ ಲೆಕ್ಕಾಚಾರ ವಿರೋಧಿಗಳಿಗಿತ್ತು.

ಬಿಜೆಪಿ ನಾಯಕರಂತೂ ಸಿಕ್ಕಲ್ಲ,ನೋಡ್ತಾ ಇರಿ, ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ನಡುವಣ ಫೈಟು ಕಾಂಗ್ರೆಸ್ ಪಕ್ಷವನ್ನು ಮುಳುಗಿಸಲಿದೆ ಎನ್ನುತ್ತಿದ್ದರು. ಆದರೆ ಸಣ್ಣ-ಪುಟ್ಟ ಅಸಮಾಧಾನಗಳನ್ನು ಬಿಟ್ಟರೆ ಡಿಕೆ, ಸಿದ್ದರಾಮಯ್ಯ ನಡುವೆ ಸಂಘರ್ಷ ಶುರುವಾಗಿಲ್ಲ. ಅಂದ ಹಾಗೆ ಮೊದಲ ಪಟ್ಟಿ ಇಷ್ಟು ಕೂಲಾಗಿ ಹೊರಬರಲು ರಾಜ್ಯ ಕಾಂಗ್ರೆಸ್ ನ ಉಸ್ತುವಾರಿ ಹೊಣೆ ಹೊತ್ತ ರಣದೀಪ್ ಸಿಂಗ್ ಸುರ್ಜೇವಾಲ ಕಾರಣರಂತೆ. ಡಿಕೆ ಇರಲಿ, ಸಿದ್ರಾಮಯ್ಯನವರೇ ಇರಲಿ, ಇನ್ಯಾರೇ ಇರಲಿ, ಇಂತಲ್ಲಿ ಇಂತವರಿಗೆ ಟಿಕೆಟ್ ಬೇಕು ಎಂದರೆ ಹೈಕಮಾಂಡ್ ವತಿಯಿಂದ ನಡೆಸಿದ ಸರ್ವೆ ರಿಪೋರ್ಟು ಮುಂದಿಡುತ್ತಿದ್ದರಂತೆ.

ಈ ಬಾರಿ ಈ ಕ್ಷೇತ್ರದಲ್ಲಿ ಗೆಲ್ಲುವ ಸಾಧ್ಯತೆ ಇರುವುದು ಇಂತವರಿಗೆ ಅಂತ ಅವರು ಹೇಳಿದರೆ ಡಿಕೆ, ಸಿದ್ದರಾಮಯ್ಯ ಅವರಿಗೆ ಪಟ್ಟು ಹಾಕಲು ಸಾಧ್ಯ ವಾಗುತ್ತಿರಲಿಲ್ಲವಂತೆ. ಪರಿಣಾಮ? ಇಷ್ಟವೋ ಕಷ್ಟವೋ?ಅವರು ಹೇಳಿದ್ದನ್ನು ಎಲ್ಲ ನಾಯಕರೂ ಒಪ್ಪಿದ್ದಾರೆ. ಹೇಳಿ ಕೇಳಿ ಸುರ್ಜೆವಾಲ ಎಂದರೆ ರಾಹುಲ್ ಗಾಂಧಿ ಅವರಿಗೆ ಅಪಾರ ನಂಬಿಕೆ. ಹೀಗಾಗಿ ಸೀಟಿಗಾಗಿ ಫೈಟು ನಡೆಯದೆ ಕಾಂಗ್ರೆಸ್‌ನ ಮೊದಲ ಕಂತಿನ ಅಭ್ಯರ್ಥಿಗಳ ಪಟ್ಟಿ ಬಂದಿದೆ.