Sunday, 8th September 2024

ಗುಂಡಣ್ಣನ ಖದರು ಬಸಣ್ಣಗೆ ನಂದಿದೆ

ಮೂರ್ತಿ ಪೂಜೆ

ಆರ್‌.ಟಿ.ವಿಠ್ಠಲಮೂರ್ತಿ

ಕಳೆದ ವಾರ ಬಿಜೆಪಿಯ ಕೆಲ ಶಾಸಕರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿದರು. ಪಕ್ಷದ ಶಾಸಕರು ತಮ್ಮ ತಮ್ಮ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಹಲ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.

ಇಂತಹ ಸಮಸ್ಯೆಗಳ ಕುರಿತು ನಿಮ್ಮ ಬಳಿ ಮಾತನಾಡುವುದು ಅವರ ಬಯಕೆ. ಹೇಗಿದ್ದರೂ ವಿಧಾನಮಂಡಲ ಅಧಿವೇಶನ ನಡೆಯುತ್ತಿದೆ ಯಲ್ಲ? ಹೀಗಾಗಿ ಪಕ್ಷದ ಶಾಸಕಾಂಗ ಸಭೆ ನಡೆಸಿದರೆ ಅನುಕೂಲ ಎಂಬುದು ಈ ಶಾಸಕರ ಬೇಡಿಕೆ. ಆದರೆ ಶಾಸಕರು ಹೇಳಿದ್ದನ್ನು ಕೇಳಿದ ಸಿಎಂ, ‘ಏ,ಶಾಸಕಾಂಗ ಸಭೆ ನಡೆಸುವುದು ಬೇಡ. ಹೇಗಿದ್ದರೂ ಅಧಿವೇಶನ ನಡೆಯುತ್ತಿದೆಯಲ್ಲ? ಯಾರಿಗಾದರೂ ಸಣ್ಣ ಪುಟ್ಟ ಸಮಸ್ಯೆ ಗಳಿದ್ದರೆ ಇಲ್ಲೇ ಬಂದು ಹೇಳಲಿ’ ಎಂದರು. ಸಾರ್, ಅಧಿವೇಶನ ನಡೆಯುವ ಕಾಲದಲ್ಲಿ ಪಕ್ಷದ ಶಾಸಕಾಂಗ ಸಭೆ ನಡೆಸುವುದು ಹಿಂದಿನಿಂದಲೂ ನಡೆದು ಬಂದ ಸಂಪ್ರದಾಯ. ಇದನ್ನು ಪಾಲಿಸಿದಂತೆಯೂ ಆಗುತ್ತದೆ. ಅದೇ ಕಾಲಕ್ಕೆ ನಿಮ್ಮ ಎದುರು ಶಾಸಕರು ಮುಕ್ತವಾಗಿ ಮಾತನಾಡಲು ಅನುಕೂಲವಾಗುತ್ತದೆ ಎಂದು ಈ ಶಾಸಕರು ಮತ್ತೆ ಮನವಿ ಮಾಡಿಕೊಂಡರು.

ಆದರೆ ಇಂತಹ ಮನವಿಗೆ ಜಗ್ಗದ ಮುಖ್ಯಮಂತ್ರಿಗಳು: ‘ಇಲ್ಲ, ಇಲ್ಲ, ಶಾಸಕಾಂಗ ಸಭೆ ನಡೆಸಿ ಕೇಳುವಂತಹ ಸಮಸ್ಯೆಗಳನ್ನೇನೂ ಶಾಸಕರು ಎದುರಿಸುತ್ತಿಲ್ಲ. ಅವೆಲ್ಲ ನಾರ್ಮಲ್ ಕೋರ್ಸಿನಲ್ಲಿ ಬಗೆಹರಿಯುವಂತವು’ ಎಂದು ಕಡ್ಡಿ ತುಂಡು ಮಾಡಿದಂತೆ ಹೇಳಿದರಂತೆ. ಹಾಗೆಯೇ ಮುಂದುವರಿದು: ‘ನೋಡಿ, ನಾನೇನೂ ಸುಮ್ಮನೆ ಕುಳಿತಿಲ್ಲ. ಈಗ ಮಂಡಿಸಿರುವ ಬಜೆಟ್ ಏನಿದೆ? ಆ ಬಜೆಟ್‌ ನಲ್ಲಿ ಏನೇನು ಭರವಸೆ ನೀಡಲಾಗಿದೆಯೋ?ಅಂತಹ ಎಲ್ಲ ಭರವಸೆಗಳನ್ನು ತುರ್ತಾಗಿ ಈಡೇರಿಸುತ್ತೇನೆ. ಇದೇ ಕಾರಣಕ್ಕಾಗಿ ಅಧಿವೇಶನ ಮುಗಿದ ತಕ್ಷಣ ಕಾರ್ಯಾದೇಶ ಮಾಡುತ್ತೇನೆ’ ಎಂದರಂತೆ.

ಬಸವರಾಜ ಬೊಮ್ಮಾಯಿ ಅವರ ಮಾತು ಕೇಳಿದ ಶಾಸಕರು ತಬ್ಬಿಬ್ಬು. ಯಾಕೆಂದರೆ ಅಽವೇಶನ ನಡೆಯುವ ಕಾಲದಲ್ಲಿ ಒಂದು
ಸಲವಾದರೂ ಶಾಸಕಾಂಗ ಸಭೆ ನಡೆಸಿ ಎಲ್ಲರ ಅಹವಾಲು ಕೇಳುವುದು ಮುಖ್ಯಮಂತ್ರಿಗಳಾದವರು ಹಿಂದಿನಿಂದಲೂ ನಡೆಸಿಕೊಂಡು ಬಂದ ಪರಿಪಾಠ. ಹೀಗಾಗಿ ಮುಖ್ಯಮಂತ್ರಿಗಳ ಬಳಿ ಹೋಗಿದ್ದ ಶಾಸಕರು ವಿಧಾನಸಭೆಯ ಮೊಗಸಾಲೆಯಲ್ಲಿ ಕುಳಿತಾಗ: ‘ಏನೇ ಆಗಲಿ,
ನಮ್ಮ ಬಸವರಾಜ ಬೊಮ್ಮಾಯಿ ಅವರಿಗೆ ಮಾಜಿ ಸಿಎಂ ಗುಂಡೂರಾಯರ ಖದರು ಬಂದಿದೆ ಕಣ್ರೀ’ ಎಂದು ಮಾತನಾಡಿಕೊಳ್ಳುತ್ತಿದ್ದರು. ಅವರ ಪ್ರಕಾರ, ಬೊಮ್ಮಾಯಿ ಅವರಿಗೆ ಬಾಹ್ಯವಾಗಿ ಗುಂಡೂರಾಯರ ಧಾಡಸಿತನ ಇಲ್ಲದೇ ಇರಬಹುದು.

ಆದರೆ ಆಂತರಂಗಿಕವಾಗಿ ಇದೆ. ಅಂದ ಹಾಗೆ ಇದಕ್ಕೊಂದು ಕಾರಣವೂ ಎಂಬುದು ಈ ಶಾಸಕರ ಅಭಿಪ್ರಾಯ. ಅದೆಂದರೆ, ಗುಂಡೂ ರಾಯರು ಹೇಳಿ ಕೇಳಿ ಕಾಂಗ್ರೆಸ್ ಅಧಿನಾಯಕಿ ಇಂದಿರಾಗಾಂಧಿ ಅವರ ಆಯ್ಕೆ. ಅಂತಹ ಇಂದಿರಾಗಾಂಧಿಯವರು ತಮ್ಮನ್ನು ಇಳಿಸಲು ಬಯಸಿದರೆ ಎಷ್ಟೇ ಶಾಸಕರ ಬೆಂಬಲವಿದ್ದರೂ ಖುರ್ಚಿ ಬಿಟ್ಟು ಇಳಿಯಲೇಬೇಕು. ಖುರ್ಚಿಯ ಮೇಲಿರಲಿ ಎಂದು ಬಯಸಿದರೆ ಎಷ್ಟೇ ಶಾಸಕರ ವಿರೋಧದ್ದರೂ ತಾವು ಸೇಫ್ ಎಂಬುದು ಗುಂಡೂರಾಯರಿಗೆ ಗೊತ್ತಿತ್ತು. ಇದನ್ನವರು ಮನಸ್ಸಿನಲ್ಲಿ ಇಟ್ಟುಕೊಂಡಿರಲಿಲ್ಲ. ಬದಲಿಗೆ ನಾವು ನಿಮ್ಮ ಬೆಂಬಲಕ್ಕಿದ್ದೇವೆ ಎಂದು ಯಾರಾದರೂ ಶಾಸಕರು ಹೇಳಿದರೆ ಬಹಿರಂಗವಾಗಿ ಆಡಿ ತೋರಿಸುತ್ತಿದ್ದರು.

ಈಗ ಬಸವರಾಜ ಬೊಮ್ಮಾಯಿ ಅವರ ಬೆನ್ನ ಹಿಂದಿರುವುದು ಇಂತಹ ಸತ್ಯವೇ. ಹೀಗಾಗಿ ಅವರೂ ಶಾಸಕಾಂಗ ಪಕ್ಷದ
ಸಭೆ ನಡೆಸಬೇಕೆಂಬ ಶಾಸಕರ ಬೇಡಿಕೆಯನ್ನು ನಿರಾಯಾಸವಾಗಿ ತಳ್ಳಿ ಹಾಕಿದರು. ಅಂದ ಹಾಗೆ ಈ ಹಿಂದೆ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ ಒಮ್ಮೆ ಕ್ಯಾಪಿಟಲ್ ಹೋಟೆಲಿನಲ್ಲಿ ಶಾಸಕಾಂಗ ಸಭೆ ನಡೆಸಿದ್ದರು. ಈ ಸಭೆಯಲ್ಲಿ ಬಸವನಗೌಡ ಪಾಟೀಲ್ ಯತ್ನಾಳ್, ತಿಪ್ಪಾರೆಡ್ಡಿ, ಪೂರ್ಣಿಮಾ ಸೇರಿದಂತೆ ಹಲವು ಶಾಸಕರು ಸರಕಾರದ ಮಟ್ಟ ದಲ್ಲಿ ತಮ್ಮ ಕೆಲಸಗಳಾಗುತ್ತಿಲ್ಲ ಎಂದು ಕೂಗಾಡಿ ಬಿಟ್ಟಿದ್ದರು.

ಅವತ್ತು ಸಭೆಯಲ್ಲಿದ್ದ ಪ್ರಹ್ಲಾದ್ ಜೋಷಿ ಅವರು ಈ ಕೂಗಾಟವನ್ನು ನೋಡಿ, ಶಾಸಕರು ಈ ಮಟ್ಟದಲ್ಲಿ ಸಿಟ್ಟಿಗೆದ್ದಿದ್ದಾರೆ ಎಂದರೆ ಅದು ಒಳ್ಳೆಯ ಬೆಳವಣಿಗೆ ಅಲ್ಲ, ಹೀಗಾಗಿ ಅವರನ್ನು ಸಮಾಧಾನಿಸುವುದು ಒಳ್ಳೆಯದು ಎಂದು ಯಡಿಯೂರಪ್ಪ ಅವರಿಗೇ ಹೇಳಿ ಹೋಗಿದ್ದರು. ಈ ನೆನಪು ಬೊಮ್ಮಾಯಿ ಅವರಲ್ಲಿ ಹಸಿರಾಗಿದೆ. ಹೀಗಾಗಿ ಶಾಸಕಾಂಗ ಸಭೆ ನಡೆಸಿದರೆ ತಾನೇ ಎಲ್ಲರೂ ಕೂಗಾಡುವುದು? ನಡೆಸದೆ ಹೋದರೆ ಏನಾಗುತ್ತದೆ? ಎಂಬ ತೀರ್ಮಾನಕ್ಕೆ ಬಂದಿದ್ದಾರೆ.

ಹೀಗಾಗಿ ಸಭೆ ನಡೆಸಿ ಎಂದು ಶಾಸಕರು ಕೇಳಿದರೆ ಬೇಡ, ಬೇಡ ಎಂದು ತಳ್ಳಿ ಹಾಕಿದ್ದಾರೆ. ಅಚ್ಚರಿ ಎಂದರೆ ಶಾಸಕಾಂಗ ಸಭೆ ನಡೆಸುವುದಿಲ್ಲ ಎಂದು ಬೊಮ್ಮಾಯಿ ಹೇಳಿದ ಮೇಲೆ ಒಬ್ಬ ಶಾಸಕರೂ ಕಂ ಕಿಂ ಅಂದಿಲ್ಲ.
**

ಕಳೆದ ಬುಧವಾರ ವಿಧಾನಸಭೆಯಲ್ಲಿ ಚುನಾವಣಾ ಸುಧಾರಣೆಗಳ ಬಗ್ಗೆ ಗಂಭೀರ ಚರ್ಚೆ ನಡೆಯುತ್ತಿದ್ದರೆ ಉತ್ತರ ಕರ್ನಾಟಕದ ಕೆಲ ಬಿಜೆಪಿ ಶಾಸಕರು ಆಡಳಿತ ಪಕ್ಷದ ಮೊಗಸಾಲೆಯಲ್ಲಿ ಬಿಸಿ-ಬಿಸಿ ಚರ್ಚೆ ನಡೆಸುತ್ತಿದ್ದರು. ಅವರ ಪ್ರಕಾರ, ಈ ಹಿಂದೆ ಜೆ.ಎಚ್.ಪಟೇಲರು ಮುಖ್ಯಮಂತ್ರಿಯಾಗಿದ್ದರಲ್ಲ? ಆ ಟೈಮಿನಲ್ಲಿ ಅವರಿಗೆ ಪ್ರಧಾನ ಕಾರ್ಯದರ್ಶಿಯಾಗಿದ್ದ ಬಿ.ಎಸ್.ಪಾಟೀಲರು ರೋಲ್ ಮಾಡೆಲ್ ಅಧಿಕಾರಿಯಂತೆ.

ಅಂದ ಹಾಗೆ ಪ್ರಧಾನ ಕಾರ್ಯದರ್ಶಿಗಳ ಕೆಲಸವೆಂದರೆ, ಸರಕಾರದ ಮಟ್ಟದಲ್ಲಿ ಮುಖ್ಯಮಂತ್ರಿಗಳ ಆದೇಶ ಪಾಲನೆಯಾಗುವಂತೆ ನೋಡಿಕೊಳ್ಳುವುದು. ಈ ವಿಷಯ ಬಂದಾಗ ಬಿ.ಎಸ್.ಪಾಟೀಲ್ ಅವರು ಡೈನಮಿಕ್ ಆಗಿದ್ದರು. ಹಲವು ಸಲ ಮುಖ್ಯಮಂತ್ರಿ ಪಟೇಲರು ಹೇಳಿದ್ದಕ್ಕೆ ಮುಖ್ಯ ಕಾರ್ಯದರ್ಶಿಗಳ ಮಟ್ಟದಲ್ಲಿ ತಡೆ ಬಿದ್ದರೂ ಬಿ.ಎಸ್ .ಪಾಟೀಲರು ರೈಡರ್ ತರ ವರ್ತಿಸಿ ಅವನ್ನು ಕ್ಲಿಯರ್
ಮಾಡಿ ಸುತ್ತಿದ್ದರು.

ಹಾಗೇನಾದರೂ ಅಸಮಾಧಾನ ಇದ್ದರೆ ಅದು ದೇವೇಗೌಡರಿಗೆ ಮತ್ತು ಸಿದ್ದರಾಮಯ್ಯ ಅವರಿಗೆ ಇತ್ತು. ದೊಡ್ಡ ಮಟ್ಟದಲ್ಲಿ ಕೆಲ ಕಡತ ಗಳಿಗೆ ಸಿದ್ದರಾಮಯ್ಯ ಮಾತಿನಂತೆ ಮುಖ್ಯ ಕಾರ್ಯದರ್ಶಿಗಳು ತಡೆ ಒಡ್ಡಿದರೂ ಬಿ.ಎಸ್.ಪಾಟೀಲರು ಅದನ್ನು ಪಟೇಲರ ಗಮನಕ್ಕೆ ತಂದು ಕಡತ ವಿಲೇವಾರಿಯಾಗುವಂತೆ ನೋಡಿಕೊಳ್ಳುತ್ತಿದ್ದರು. ಇದಕ್ಕಾಗಿಯೇ ದೇವೇಗೌಡ ಮತ್ತು ಸಿದ್ದರಾಮಯ್ಯ ಅವರು ಬಿ.ಎಸ್.ಪಾಟೀಲರ ವಿರುದ್ಧ ಕಿಡಿ ಕಾರುತ್ತಿದ್ದುದು ರಹಸ್ಯವಲ್ಲ.

ಇವತ್ತು ಬಸವರಾಜ ಬೊಮ್ಮಾಯಿ ಅವರಿಗೂ ಬಿ.ಎಸ್ .ಪಾಟೀಲ್ ಅವರಂತಹ ಪ್ರಧಾನ ಕಾರ್ಯದರ್ಶಿ ಬೇಕಿತ್ತು. ಹಾಗಾಗದ ಕಾರಣ ಬಹುತೇಕರ ಅಸಮಾಧಾನವನ್ನು ಖುದ್ದು ಬಸವರಾಜ ಬೊಮ್ಮಾಯಿ ಅವರು ಹೊರಬೇಕಿದೆ. ಈ ಶಾಸಕರ ಪ್ರಕಾರ, ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಮಂಜುನಾಥ ಪ್ರಸಾದ್ ಮತ್ತು ಮುಖ್ಯಕಾರ್ಯದರ್ಶಿ ರವಿಕುಮಾರ್ ಅವರ ಕಾಂಬಿನೇಶನ್ನು ಸರಿಯಾಗಿ ವರ್ಕ್ ಔಟ್ ಆಗುತ್ತಿಲ್ಲ. ಯಾಕೆಂದರೆ ಶಾಸಕರ ಬೇಡಿಕೆಗಳ ಅರ್ಜಿಯನ್ನು ಮುಖ್ಯಮಂತ್ರಿಗಳು ಮಂಜುನಾಥ್ ಪ್ರಸಾದ್ ಕೈಗಿಡುತ್ತಾರೆ.

ಈ ಅರ್ಜಿಗಳ ಪೈಕಿ ಹಲವನ್ನು ಕ್ಲಿಯರ್ ಮಾಡಿ ಮಂಜುನಾಥ ಪ್ರಸಾದ್ ಅವರು ಮುಖ್ಯಕಾರ್ಯದರ್ಶಿಗಳಿಗೆ ಕೊಡುತ್ತಾರೆ. ಆದರೆ ಮಂಜುನಾಥ್ ಪ್ರಸಾದ್ ಅವರು ಕೊಟ್ಟ ಬಹುತೇಕ ಅರ್ಜಿಗಳು ರವಿಕುಮಾರ ಅವರ ಟೇಬಲ್ಲಿನ ಮೇಲೆ ಪೌಡರು ಹಚ್ಚಿಕೊಂಡು ಮಲಗಿವೆ. ಪರಿಣಾಮ? ಸರಕಾರದ ಆಡಳಿತ ಯಂತ್ರ ದೊಡ್ಡ ಮಟ್ಟದಲ್ಲಿ ಕಿಲುಬು ಹಿಡಿದು ಕುಳಿತಿದೆ. ಈ ವಿಷಯದಲ್ಲಿ ಬೊಮ್ಮಾಯಿ ಸಹ ನಿಸ್ಸಹಾ
ಯಕರು. ಯಾಕೆಂದರೆ ಮಂಜುನಾಥ್ ಪ್ರಸಾದ್ ಅವರ ಹಿಂದೆ ಕಂದಾಯ ಸಚಿವ ಆರ್.ಅಶೋಕ್ ಅವರ ನೆರಳು ಕಾಣುತ್ತಿದೆ.

ಹೋಗಲಿ ಎಂದು ಮುಖ್ಯ ಕಾರ್ಯದರ್ಶಿಗಳ ಕಡೆ ನೋಡಿದರೆ ಅವರ ಬೆನ್ನ ಹಿಂದೆ ಖುದ್ದು ಮಾಜಿ ಸಿಎಂ ಯಡಿಯೂರಪ್ಪ ಅವರ ನೆರಳು ಥಕ-ಥಕ ಕುಣಿಯುತ್ತಿದೆ. ಹೀಗಾಗಿ ಈ ಕಾಂಬಿನೇಶನ್ ತಮಗೆ ವರ್ಕ್ ಔಟ್ ಆಗುವುದಿಲ್ಲ ಎಂದರಿತ ಬಸವರಾಜ ಬೊಮ್ಮಾಯಿ ಮೌನವಾಗಿದ್ದಾರೆ.

ತೀರಾ ಹತ್ತಿರ ದವರು ಕೇಳಿದರೆ: ‘ಇನ್ನೇನು ರವಿಕುಮಾರ್ ಅವರು ಸದ್ಯದ ರಿಟೈರ್ ಆಗ್ತಾರೆ. ಆಮೇಲೆ ಎಲ್ಲವೂ ನಾರ್ಮಲ್ ಆಗತ್ತೆ ಬಿಡ್ರೀ’ ಎನ್ನುತ್ತಾರಂತೆ. ಆದರೆ ಅದೇನು ಆಗುತ್ತದೋ ಬಿಡುತ್ತದೋ? ಆದರೆ ಬಹಳಷ್ಟು ಜನರಿಗೆ ಈ ವಿಷಯದಲ್ಲಿ ತುಂಬ ಅಸಮಾ ಧಾನವಿದೆ.
**

ಈ ಮಧ್ಯೆ ಕಳೆದ ಸೋಮವಾರ ವಿಧಾನಸಭೆಯ ಮಂತ್ರಿಗಳ ಅರಾಮ ಶಾಲೆಯಲ್ಲಿ ಇಬ್ಬರು ಹಿರಿಯ ನಾಯಕರು ಗಂಭೀರ ಚರ್ಚೆ ನಡೆಸುತ್ತಿದ್ದರು. ಬಸವರಾಜ ಬೊಮ್ಮಾಯಿ ಅವರನ್ನು ಸಿಎಂ ಹುದ್ದೆಯಿಂದ ಬದಲಿಸಿ ಅವರ ಜಾಗಕ್ಕೆ ಬೇರೊಬ್ಬರನ್ನು ತರಲು ಚರ್ಚೆ ಶುರುವಾಗಿದೆಯಲ್ಲ? ಹಾಗೇನಾದರೂ ಆದರೆ ಈ ಜಾಗಕ್ಕೆ ಜಗದೀಶ್ ಶೆಟ್ಟರ್ ಬರ್ತಾರೆ, ಶೋಭಾ ಕರಂದ್ಲಾಜೆ ಬರ್ತಾರೆ ಅಂತೆಲ್ಲ ಮಾತು ಕೇಳುತ್ತಿದೆ ಎಂದು ಒಬ್ಬ ಸಚಿವರು ಹೇಳಿದಾಗ ಮತ್ತೊಬ್ಬರು ಗಂಭೀರವಾಗಿ ಉತ್ತರಿಸಿದರು.

‘ಹೇ,ಅವೆಲ್ಲ ಏನೂ ಆಗಲ್ಲ ಕಣ್ರೀ. ಮುಂದಿನ ಎಲೆಕ್ಷನ್ನಿನಲ್ಲಿ ಕರ್ನಾಟಕದ ಜನರ ಮುಂದೆ ಸ್ಟೋರಿ ಬೇ ಪಿಚ್ಚರ್ ತೋರಿಸಲು ಪಕ್ಷದ ವರಿಷ್ಠರು ನಿರ್ಧರಿಸಿದ್ದಾರೆ. ಅವರಿಗೀಗ ಹೊಸ ಹೀರೋ ಬೇಕಾಗಿಲ್ಲ’ ಎಂದರು. ಅದು ಹೇಗೆ ಎಂದು ಇವರು ಕೇಳಿದರೆ: ‘ಈ ಹಿಂದೆ
ಏನೇನಾಗಿದೆ ಅಂತ ನೀವೇ ನೋಡಿ. 2008 ಮತ್ತು 2018 ರಲ್ಲಿ ಜನರ ಮುಂದೆ ರಿಲೀಸ್ ಆಗಿದ್ದುಹೀರೋ (ಯಡಿಯೂರಪ್ಪ)
ಆಧಾರಿತ ಪಿಚ್ಚರು. ಆದರೆ ಸದಾ ಕಾಲ ಹೀರೋ ಆಧಾರಿತ ಪಿಚ್ಚರನ್ನೇ ತೋರಿಸುತ್ತಾ ಕೂತರೆ ಡೇಂಜರು ಜಾಸ್ತಿ ಎಂಬುದು ವರಿಷ್ಠರ ಲೆಕ್ಕಾಚಾರ.’

ಹೀಗೆ ಲೆಕ್ಕಾಚಾರ ಹಾಕುವಾಗ ಅವರು ಪಿಚ್ಚರಿನಲ್ಲಿ ಹೀರೋಗಿಂತ ಸ್ಟೋರಿನೇ ಮುಖ್ಯ ಎಂಬ ಲೆಕ್ಕಾಚಾರಕ್ಕೆ ಬಂದಿದ್ದಾರೆ. ಎಲ್ಲಿಯವರೆಗೆ ಹೀರೋ ಮುಖ್ಯವೋ? ಅಲ್ಲಿಯವರೆಗೆ ಸ್ಟೋರಿ ಮುಖ್ಯವಲ್ಲ. ಆದರೆ 2013 ರಲ್ಲಿ ಕರ್ನಾಟಕದ ಜನರ ಮುಂದೆ ರಿಲೀಸ್ ಆದ ಬಿಜೆಪಿ ಪಿಚ್ಚರಿಗೆ ಹೀರೋನೂ ಇಲ್ಲ, ಸ್ಟೋರಿಯೂ ಇಲ್ಲ ಎಂಬಂತಾಗಿತ್ತು. ಪರಿಣಾಮವಾಗಿ ಪಕ್ಷ ಮೂರನೇ ಸ್ಥಾನಕ್ಕೆ ಕುಸಿಯುವ ಸ್ಥಿತಿ ಬಂತು. ಹೀಗಾಗಿ 2013 ರ ಸ್ಥಿತಿ ಬರಬಾರದು ಅಂತ ವರಿಷ್ಠರೀಗ ಸ್ಟೋರಿಗೆ ಪ್ರಿಪರೆನ್ಸು ಕೊಟ್ಟಿದ್ದಾರೆ.

ಇದೇ ಕಾರಣಕ್ಕಾಗಿ ಹಿಜಾಬು, ಹಲಾಲು ತರದ ಸೀಕ್ವೆನ್ಸುಗಳು ಕಾಣುತ್ತಿವೆ. -ನಲಿ ಶೂಟಿಂಗು ಮುಗಿಸಿ ಎಲೆಕ್ಷನ್ ಟೈಮಿಗೆ ಪಿಚ್ಚರು ರಿಲೀಸ್ ಮಾಡಿದರೆ ಹಂಡ್ರೆಡ್ ಡೇಸ್ ಗ್ಯಾರಂಟಿ ಎಂಬುದು ವರಿಷ್ಠರ ಯೋಚನೆ ಎಂದರು. ಅವರ ಮಾತು ಕೇಳಿ ಮತ್ತೊಬ್ಬ ಸಚಿವರು ಬಿದ್ದು ಬಿದ್ದು ನಕ್ಕರು. ಅದೇನೇ ಆಗಲಿ ಕಣ್ರೀ.ಹೀರೋ(ಯಡಿಯೂರಪ್ಪ) ಇಲ್ಲದಿದ್ದರೆ ಪಿಚ್ಚರಿನ ಪರ್ವ ಕಡಿಮೆ ಅಲ್ಲವಾ? ಎಂದವರು ಮತ್ತೆ ಕೇಳಿದಾಗ; ‘ಪರ್ವ ಕಡಿಮೆಯೋ? ಹೆಚ್ಚೋ? ಆದರೆ ಮತ್ತೆ ಹೀರೋ ಬೇ ಪಿಚ್ಚರು ಮಾಡಲು ಹೊರಟರೆ ಈಗಿರುವ ಹೀರೋ ಮಗನೇ (ವಿಜಯೇಂದ್ರ) ಬಂದು ಕೂರುವುದು ಗ್ಯಾರಂಟಿ. ಇದು ವರಿಷ್ಠರಿಗೆ ಇಷ್ಟವಿಲ್ಲ’ ಅಂತ ಹೇಳಿದರು.
**

ಅಂದ ಹಾಗೆ ಅಽವೇಶನದ ಕೊನೆಯ ಕ್ಷಣಗಳಲ್ಲಿ ಬಿಜೆಪಿಯ ಬಹುತೇಕ ಮಂದಿ ಶಾಸಕರು ಚಿಂತಿತರಾಗಿದ್ದರು. ರಾಜ್ಯ ವಿಧಾನಸಭೆಗೆ ಅವಧಿ ಪೂರ್ವ ಚುನಾವಣೆ ಎದುರಾಗಬಹುದು ಎಂಬ ಸುದ್ದಿ ಹರಡಿದ್ದು ಇದಕ್ಕೆ ಕಾರಣ. ಉತ್ತರ ಪ್ರದೇಶ ಸೇರಿದಂತೆ ಇತ್ತೀಚೆಗೆ ಚುನಾವಣೆ ನಡೆದ ಐದು ರಾಜ್ಯಗಳ ಪೈಕಿ ನಾಲ್ಕರಲ್ಲಿ ಬಿಜೆಪಿ ಜಯಗಳಿಸಿದ ಮೇಲೆ ಮೋದಿ-ಅಮಿತ್ ಶಾ ಜೋಡಿಗೆ, ಕರ್ನಾಟಕ ವಿಧಾನಸಭೆಗೂ ವರ್ಷಾಂತ್ಯದ ವೇಳೆಗೆ ಚುನಾವಣೆ ನಡೆಸುವುದು ಸೂಕ್ತ ಎಂಬ ಲೆಕ್ಕಾಚಾರವಿದೆಯಂತೆ.

ಬಿಜೆಪಿ ಈಗಾಗಲೇ ಪ್ರಯೋಗಿಸಿರುವ ಅಸಗಳಿಗೆ ಕಾಂಗ್ರೆಸ್ ಪಕ್ಷಕ್ಕೆ ಕಣ್ಣುಕತ್ತಲು ಬಂದಂತಾಗಿದ್ದು, ಅದು ಚೇತರಿಸಿಕೊಳ್ಳಲು ಅವಕಾಶ ನೀಡದೆ ಚುನಾವಣೆಗೆ ಹೋದರೆ ಗೆಲ್ಲುವುದು ಸುಲಭ ಎಂಬುದು ಈ ಜೋಡಿಯ ಯೋಚನೆ. ಹೇಗಿದ್ದರೂ ಈ ವರ್ಷದ ಕೊನೆಯಲ್ಲಿ ಗುಜರಾತ್ ವಿಧಾನಸಭೆಗೆ ಚುನಾವಣೆಗಳು ನಡೆಯಲಿವೆ. ಅದರೊಂದಿಗೆ ಕರ್ನಾಟಕದ ವ್ಯವಹಾರವೂ ಮುಗಿದರೆ 2024 ರ ಲೋಕಸಭಾ ಚುನಾವಣೆಗೆ ತಯಾರಿ ನಡೆಸಲು ಸಾಕಷ್ಟು ಕಾಲಾವಕಾಶ ಸಿಗುತ್ತದೆ ಎಂಬುದು ಈ ಯೋಚನೆಯ ಭಾಗ.

ಆದರೆ ಹೀಗೆ ಅವಧಿಪೂರ್ವ ಚುನಾವಣೆಗೆ ಹೋಗುವುದು ರಾಜ್ಯ ಬಿಜೆಪಿಯ ಬಹುತೇಕ ಶಾಸಕರಿಗೆ ಇಷ್ಟವಿಲ್ಲ. ಆರು ತಿಂಗಳಷ್ಟು ಮುಂಚೆ ಜನರ ಮುಂದೆ ಹೋಗುವುದು ಎಂದರೆ ಅಡ್ವಾನ್ಸಾಗಿ ಜೆಸಿಬಿ ಮಷಿನ್ನುಗಳನ್ನು ರೆಡಿ ಮಾಡಿಕೊಳ್ಳಬೇಕು ಎಂಬುದು ಹಲವರ ಮಾರ್ಮಿಕ ಮಾತು. ಈ ಮಧ್ಯೆಯೇ ಕೆಲ ಶಾಸಕರು: ‘ಈ ಹಿಂದೆ 2004 ರಲ್ಲಿ ಅವಧಿಪೂರ್ವ ಚುನಾವಣೆಗೆ ಹೋಗಿ ಎಸ್.ಎಂ.ಕೃಷ್ಣ ನೇತೃತ್ವದ ಕಾಂಗ್ರೆಸ್ ಮಣ್ಣು ಮುಕ್ಕಿತು. ಹೀಗಾಗಿ ಈಗ ನಾವು ಹೋದರೂ ಅದೇ ಗತಿ ಎದುರಾಗಬಹುದು’ ಅನ್ನುತ್ತಾರೆ.

ಇವರ ಕೆಲವರು, ಏಪ್ರಿಲ್ ತಿಂಗಳ ಮೂರನೇ ವಾರ ನಡೆಯಲಿರುವ ಬಿಜೆಪಿಯ ರಾಜ್ಯ ಕಾರ್ಯಕಾರಿಣಿಯ ನಂತರ ನಾಯಕತ್ವ ದಿಂದ ಬೊಮ್ಮಾಯಿ ಕೆಳಗಿಳಿಯಲಿದ್ದಾರೆ. ಯಾಕೆಂದರೆ ವರಿಷ್ಠರಿಗೆ ಈಗಾಗಲೇ ಅವರ ಮೇಲೆ ನಂಬಿಕೆ ಹೋಗಿದೆ. ಹೀಗಾಗಿ ಅವರ ನಾಯಕತ್ವ ದಲ್ಲಿ ಚುನಾವಣೆಗೆ ಹೋಗುವುದು ಅಪಾಯ ಎಂಬುದು ವರಿಷ್ಠರಿಗೆ ಗೊತ್ತಿದೆ ಎನ್ನುತ್ತಾರೆ. ಅದೇ ರೀತಿ, ಅವಧಿಪೂರ್ವ ಚುನಾವಣೆ ನಡೆಸುವ ಯೋಚನೆ ವರಿಷ್ಠರಲ್ಲಿದ್ದಿದ್ದರೆ ನಾಯಕತ್ವ ಬದಲಾವಣೆಯ ಮಾತು ಹೇಗೆ ಜೀವಂತವಾಗಿರುತ್ತಿತ್ತು ಎಂದೂ ಇವರು ಪ್ರಶ್ನೆ ಮಾಡುತ್ತಾರೆ. ಅರ್ಥಾತ್, ರಾಜ್ಯ ಬಿಜೆಪಿಯಲ್ಲಿ ಈಗಿರುವ ಸ್ಥಿತಿಯ ಬಗ್ಗೆ ಸಮಾಧಾನವೂ ಇಲ್ಲ, ಮುಂದೇನು? ಎಂಬ ಬಗ್ಗೆ ಸ್ಪಷ್ಟತೆಯೂ ಇಲ್ಲ

error: Content is protected !!