ಪ್ರಾಣೇಶ್ ಪ್ರಪಂಚ
ಗಂಗಾವತಿ ಪ್ರಾಣೇಶ್
‘ನನಗೆ ಎಲ್ಲವೂ ಗೊತ್ತು, ನನಗೆ ಎಲ್ಲರೂ ಗೊತ್ತು, ಅವ ನನ್ನ ಸ್ಟೂಡೆಂಟು’ ಈ ವಾಕ್ಯವನ್ನು ನಮ್ಮೂರಿನ ಒಬ್ಬ ನಿವೃತ್ತ ಶಿಕ್ಷಕರು,
ಕರ್ನಾಟಕದ ಮೂರು ಕೋಟಿ (ಈ ಘಟನೆಗಳು ನಡೆದ ಕಾಲಕ್ಕೆ ಅಂದರೆ 1980-81 ರ ದಶದಲ್ಲಿ 3 ಕೋಟಿ ಇತ್ತು) ಜನರ ಬಗ್ಗೆ, ನಡೆದ ವಿದ್ಯಮಾನಗಳ ಬಗ್ಗೆ ಯಾರು ಮಾತಾಡಿಸಿದರೂ, ಯಾರು, ಯಾರ ಬಗ್ಗೆ ಕೇಳಿದರೂ ಅವರ ಬಗ್ಗೆ ಮೇಲಿನ ವಾಕ್ಯ ಹೇಳಿ, ‘ಗೊತ್ತದ ಏಳೋ, ಮುಂದಿನದು ಹೇಳು, ಅವ ನನ್ನ ಭೆಟ್ಟಿಗೆ ಬರದ ಭಾಳ ದಿನ ಆತು, ಸಿಕ್ಕಾಂದ್ರ, ನಾ ಕರೆದೆ, ಕೇಳಿದೆ ಅಂತ ಹೇಳು, ನನ್ನ ಹೆಸರ ಕೇಳಿದರ ಅವ ಕ್ಕಿ ಹಾಕ್ತಾನ, ಹೇತುಗೋತ ಓಡಿ ಬರ‍್ತಾನ’ ಎಂದು ಅಂದೇ ತೀರುತ್ತಿದ್ದರು..
ಲಿಂಗಸಗೂರು, ರಾಯಚೂರು ಜಿಲ್ಲೆಯ ಕುಗ್ರಾಮಗಳ ಏಕೋಪಾಧ್ಯಾಯ ಶಾಲೆಗಳಲ್ಲೇ ತಮ್ಮ ಮೂವತ್ತೈದು ವರ್ಷ ಶಾಲಾ ಮಾಸ್ತರಿಕೆ ಮಾಡಿ, ವಿದ್ಯಾರ್ಥಿಗಳಿಗೆ ಗದರಿಸಿ, ಜಬರಿಸಿ, ಅಂಗಡಿಯಿಂದ ಎಲಿ, ಅಡಿಕಿ, ದೆಹಲಿ ಜರ್ದಾ ತರಿಸಿಕೊಂಡು ಸದಾ ಅದನ್ನು ಮೆಲ್ಲುತ್ತಲೇ ಹುಡುಗರಿಗೆ ಅದೇನು ಪಾಠ ಹೇಳುತ್ತಿದ್ದರೋ ಗೊತ್ತಿಲ್ಲ, ಇಂಗ್ಲಿಷ್ ಬಗ್ಗೆ ಕೇಳಿದರೆ, ‘ನಾ ಗಣಿತ, ಹೇಳಿನೋ ಎನ್ನುತ್ತಿದ್ದರು, ಗಣಿತದ ಬಗ್ಗೆ ಕೇಳಿದರೆ, ‘ನಾ ಇಂಗ್ಲೀಷ್ ಟೀಚರ್ ಇದ್ದೆನೋ’ ಅನ್ನುತ್ತಿದ್ದರು, ಯಾರಾದರೂ ರಾಜಕೀಯದ ಬಗ್ಗೆ ಹೇಳಿದರೆ ‘ಪಾಲಿಟಿಕಲ್ ಸೈನ್ಸ ಪಾಠ ಹೇಳಿದವ ನಾನು, ನನಗ ಹೇಳ್ತಿಯೇನು? ಎನ್ನುತ್ತಿದ್ದರು.
ಯಾರಾದರೂ ಕಾನೂನು, ಕಾಯಿದೆ ಮಾತಾಡಿದರೆ, ನಮ್ಮ ಹೊಲದ ಕೇಸ್‌ನ್ಯಾಗ ಯಾವ ವಕೀಲನನ್ನು ಇಟ್ಟುಕೊಳ್ಳದೆ, ಕೋರ್ಟುನ್ಯಾಗ ಜಡ್ಜ ಜರ್ಜರಿತ ಆಗುವಹಂಗ ಮಾತಾಡಿದವ ನಾನು, ಎಲ್.ಎಲ್.ಬಿ. ಏನು ಕರೀಕೋಟು ಹಾಕ್ಕೊಂಡು
ಮೆರಿಲಿಕ್ಕೇ ಅಂತ ತಿಳಿದಿಯೇನು. ಕನ್ಯಾ ಸಿಗಲಿ ಅಂತ ವಕೀಲ ಆದಾವ ಅಲ್ಲ ನಾನು ಅನ್ನುತ್ತಿದ್ದರು ನಾ ವಾದ ಮಾಡ್ತಿದ್ದರ
ಜಡ್ಜ, ಜಡ್ಜಮೆಂಟ ಬರಿಯೋದು ಮರತು, ಗಾಬ್ರಿಯಾಗಿ ಕೂಡ್ತಿದ್ದ, ಆಮ್ಯಾಲೆ ತಡಬಡಾಯಿಸಿಕೊಂಡು ಕೂತು ‘ ಕೋರ್ಟ ಇಸ್ ಅಡ್ಜರ್ನಡ’ ಅಂತ ಬರೆದು ಓಡ್ತಿದ್ದ ಯಾಕಂದ್ರ ಲಾ ಕಾಲೇಜನ್ಯಾಗ ಅವನೂ ನನ್ನ ಸ್ಟೂಡೆಂಟ್ ನನ್ನ ಕೈಯಾಗ ಲಾ ಕಲ್ತಾವ, ನನ್ನಗ ಜಡ್ಜಮೆಂಟ್ ಕೊಡ್ತಾನ? ಎಂದು ನಗುತ್ತಿದ್ದರು.
ಹೀಗೆ ಎಲ್ಲವನ್ನು ಓದಿದ್ದೇನೆ ಎನ್ನುತ್ತಿದ್ದ ಇವರು ಏನು ಓದಿದ್ದರೆಂಬುದು ಕೊನೆವರೆಗೆ ರಹಸ್ಯವಾಗಿ ಉಳಿತು. ಇವೆಲ್ಲ ಹಾಳಾಗಲಿ ರೋಗ, ರುಜಿನ, ಕಾಯಿಲೆ, ಕಸಾಲೆ ಬಗ್ಗೆ ಹೇಳಿದರೆ, ಎಂ.ಬಿ.ಬಿಎಸ್. ಮಾಡೀನಿ ಅಂತಿರ್ಲಿಲ್ಲ ಆಯುರ್ವೇದ, ಹೋಮಿಯೋ ಪತಿ ಔಷಧಿ ಬಗ್ಗೆ ಶುರು ಹಚ್ಚಿಕೊಳ್ಳುತ್ತಿದ್ದರು. ಕಾಲು ಉಳುಕಿ ನಡೆಯಲು ಬಾರದೇ ಕಾಲು ಬಾತುಕೊಂಡು ರೋಗಿ ಹಾಸಿಗೆ ಮೇಲೆ ಕೂತು ಪೇಚಾಡುತ್ತಿದ್ದರೆ ಅವನಿಗೆ ಇವರು ಹೇಳುತ್ತಿದ್ದ ಔಷಧಿ ಇಲ್ನೊಡು ಮುಂಜಾನೆ ನಸುಗಿನಾಗ ಎದ್ದು ಯಾರಿಗೂ ಹೇಳದಂಗ, ಒಟ್ಟ ಮಾತಾಡಲಾರದಂಗ, ಕಾಲೇಜು ಹಿಂದಿನ ಗುಡ್ಡ ಏರು ಅಲ್ಲಿ ದೊಡ್ಡ ನಾಗಪ್ಪನ ಬಂಡೆ ಸುತ್ತ ಕೆಂಪು ಕಾಯಿ ಇರೋ ಒಂದು ಹಸಿರುಗಿಡ ಅದ, ಅದರ ತಪ್ಪಲಹರದು, ಕಾಲಿಗೆ ಭೇಷ ಗಸಗಸ ತಿಕ್ಕಿಕೋ ಹಿಂಗ ಮೂರು ದಿನ ಮಾಡು, ನೋಡು ನಿನ್ನ ಕಾಲು ಉಳುಕು, ಬಾವು ಎಲ್ಲ ಮಾಯ ಆಗ್ತದ ಅಂತಿದ್ದರು, ಕಾಲುಬಾತು ಅವನೋ ಮಲ- ಮೂತ್ರಗಳಿಗೇ ಇನ್ನೊಬ್ಬರನ್ನು ಕಾಯುತ್ತಿರುವವನಿಗೆ ಒಬ್ಬನೇ ಗುಡ್ಡ ಏರಿ ಅಲ್ಲಿ ತಪ್ಪಲಾ ಹುಡುಕಿ ತಿಕ್ಕೆನ್ನುತ್ತಿದ್ದ ಇವರನ್ನು ಊರವರು ತಿಕ್ಕಲು ನನ್ನ ಮಗ ಎಂದೇ ಕರೆಯುತ್ತಿದ್ದರು.
ಕಾಲು ನೋವಿನ ಅವನು ಅಲ್ರಿ ಮಾಸ್ತರ್ರ, ಎದ್ದು ನಿಂದರಾಕ ಬರವಲ್ದು ಅಂಥಾದ್ರಾಗ ನೀವು ನನ್ನ ಗುಡ್ಡ ಏರು ಅಂತಿರಲ್ರಿ ಎಂದರೆ ಎಲಾ ನಿನ್ನ, ಎದ್ದು ಓಡಾಡಲಾರದೆ ಕೂತಲ್ಲೇ ಕಾಲು ಬ್ಯಾನಿ ಕಮ್ಮಿ ಆಗ್ಲಿ ಎಂದರ ಹೆಂಗೋ? ಎಂದು, ‘ಇಂಥ ಅಧಿಕ ಪ್ರಸಂಗಿ ಪ್ರಶ್ನೆ ಕೇಳಿದ್ರ ನಾ ಏನು ಉತ್ತರ ಹೇಳಲಿ, ಸಾಯಿ ಹೋಗು, ನನ್ನ ಯಾಕ ಕೇಳಿದಿ ಹಂಗಾದ್ರ ಎಂದು ಎದ್ದು ಹೋಗು ತ್ತಿದ್ದರು.
ಇವರಿಗೇ ಒಮ್ಮೆ ಕಾಲು ಮುರಿದು ಆರು ತಿಂಗಳು. ಹಾಸಿಗೆ ಹಿಡಿದರು ಎನ್ನುವದಕ್ಕಿಂತ ಹಾಸಿಗೆ ಹಿಡಿಯದೇ ಹಾಸಿಗೆ ಮೇಲೆ ಕೂತು ಮನೆಯ ಮುಂದೆ ಹಾದು ಹೋಗುವವರನ್ನೆಲ್ಲ ಮಾತಿಗೆ ಎಳೆಯುತ್ತಿದ್ದರು, ಅದು ಜನರ ಪಾಲಿಗೆ ಇನ್ನೂ ಘೋರ ಯಾತನೆ ಯಾಯಿತು. ಇವರಿಗೆ ಕಾಲು ಮುರಿದದ್ದಾದರೂ ಹೇಗೆ ಎಂದರೆ, ಇವರು ಊರಲ್ಲಿ ಎಲ್ಲರಿಗೂ ಪರಿಚಿತರು, ಎಲ್ಲರನ್ನು ಅವರು ಅಲ್ಲವೆಂದು ಆಣೆ ಮಾಡಿ ಹೇಳಿದರೂ ‘ನೀನು ನನ್ನ ಸ್ಟೂಡೆಂಟ್ ಇದ್ದಿಯೋ ನಿನಗ ನೆನಪಿಲ್ಲ, ಕಲಿಸಿದ ನನಗ ನೆನಪು ಅದ ಎಂದೇ ವಾದಿಸುತ್ತಿದ್ದರು, ‘ಏನು ಕಲಿಸೀರಿ’ ಎಂದು ಅವ ಕೇಳಿದರೆ ‘ಕಲಿತ ನಿನಗ ನೆನಪಿರಬೇಕು ಅದು, ನೂರಾರು ಹುಡುಗರಿಗೆ ಹೇಳಿದವ ನಾನು, ನನಗ ನೆನಪಿರ‍್ತದೇನಲೇ ಮಂಗ್ಯಾ ಎಂದು ಗದರಿಸಿ ಬಿಡುತ್ತಿದ್ದರು.
ಈ ಮುದುಕನ ಜೊತೆ ಏನು ವಾದವೆಂದು ಆತೇಳ್ರಿ ಏನೀಗ? ಎಂದರೆ, ನಿನ್ನ ಗಾಡಿ ಮೇಲೆ ನನ್ನ ಆ ಬ್ಯಾಂಕಿನ ತನಕ ಬಿಡು,
ಪೆನಶನ್ ತರಬೇಕು’ ಎಂದು ಅವನ ಗಾಡಿ ಏರಿ ಬಿಡುತ್ತಿದ್ದರು. ಇದು ಅವರ ಡ್ರಾಪ್ ಕೇಳುವ ಒಂದು ವಿಧಾನವೂ ಆಗಿತ್ತು. ಇನ್ನು ಡ್ರಾಪ್ ಕೇಳಿ ಹತ್ತಿದ ಗಾಡಿಯಿಂದ ತಾವು ಹೇಳಿದ ಸ್ಥಳದಲ್ಲಿ ಅವನು ಇಳಿಸಿದಾಗ ಸುಮ್ಮನೆ ಇಳಿಯುತ್ತಿದ್ದರೇನು? ಊಹೂ! ಏನು
ಗಾಡಿ ಇಟ್ಟಿಯಲೆ ಮಂಗ್ಯಾ, ಧಡಕಾಭಡಕಾ ಗಾಡಿ, ಛಲೋ ಗಾಡಿ ತಗೋ ಒಂದು, ಕೂಡುವವರ ಮೈ ಮುಗ್ಗಲು ಮಾಡ್ತಿ
ಆತು ಎಂದೇ ಇಳಿಯುತ್ತಿದ್ದರು.
ಹೀಗೆ ಒಂದು ಗಾಡಿ ಮೇಲೆ ಹಿಂದೆ ಕೂತು ಬರುತ್ತಿರುವಾಗ ನಮ್ಮೂರ ಮಧ್ಯದಲ್ಲಿ ಹರಿಯುತ್ತಿರುವ ದುರ್ಗಮ್ಮನ ಹಳ್ಳದ ಮೇಲಿನ ಸೇತುವೆ ಮೇಲೆ ಗಾಡಿ ಬರುವಾಗ ಗೌಳಿಗೇರ ಎಮ್ಮೆಯ ಹಿಂಡೊಂದು ಎದುರಿಗೆ ಬಂತು, ಗಾಡಿ ಹೊಡೆಯುವವ ಅವುಗಳ ಮಧ್ಯೆಯೇ ದಾರಿಮಾಡಿಕೊಂಡು ಗಾಡಿ ನುಗ್ಗಿಸಿದಾಗ ಇವರು ಸುಮ್ಮನೆ ಕೂರದೇ, ತಮ್ಮ ಕೈಯಲ್ಲಿದ್ದ ಒನಕೆ ಆಕಾರವುಳ್ಳ ವಾಕಿಂಗ್ ಸ್ಟಿಕ್‌ನಿಂದ ಒಂದು ಎಮ್ಮೆಯನ್ನು ತಿವಿದು ಬಿಟ್ಟರು. ಗಾಡಿ ಹೊಡೆಯುವವನ ಬ್ಯಾಲನ್ಸ್ ಔಟ್ ಆಗಿ, ಹ್ಯಾಂಡಲ್ ಶೇಕ್
ಆಗಿ, ಅವನು ಹೊಯ್ದಾಡುವಾಗ ಆ ಎಮ್ಮೆಯನ್ನು ಬಲಗಾಲಿನಿಂದ ಒದ್ದೂ ಬಿಟ್ಟರು ಅಷ್ಟೆ.
ಗಾಡಿ ಸಮೇತ ಇಬ್ಬರೂ ಪಕ್ಕದ ಹಳ್ಳಕ್ಕೇ ಬಿದ್ದು, ಹಿಂದೆ ಕೂತ ಇವರ ಕಾಲು ಮುರಿದೇ ಹೋಯಿತು, ಆರು ತಿಂಗಳು ಮನೆ ಹಿಡಿದ
ವಾಚಾಳಿ ಮಾಸ್ತರ್ರು, ಎಮ್ಮೆ ಸಾಕಣೆ, ಎಮ್ಮೆ ಕಾಯುವವ ಹೇಗಿರಬೇಕು, ನಾನು ಎಮ್ಮೆ ಕಟ್ಟಿ, ಎಮ್ಮೆ ಕಾಯ್ದು, ಹಾಲು ಹಿಂಡಿ ಡೈರಿ ನಡೆಸೇನಿ ಎಂಬ ಟಾಪಿಕ್ ಮೇಲೆ ಆರು ತಿಂಗಳು ಕಣ್ಣಿಗೆ ಕಂಡವರನ್ನೆಲ್ಲ ಬೈದರು. ಸದ್ಯ ಮುಂದಿನ ಜನ್ಮದಲ್ಲಿ ಕೋಣನಾಗಿ ಹುಟ್ಟಿ ಎಮ್ಮೆಗಳ ಮೇಲೆ ಸೇಡು ತೀರಿಸಿಕೊಳ್ಳುತ್ತೇನೆ ಎನ್ನಲಿಲ್ಲ.
ರಾಯಚೂರು, ಲಿಂಗಸಗೂರು ಬಿಟ್ಟರೆ ಇನ್ನೊಂದು ಊರು ನೋಡದ ಈ ಮಾಸ್ತರ್ರು ತಮ್ಮ ವಯಸ್ಸಿನಲ್ಲಿ ಒಮ್ಮೆ ಮಾತ್ರ ಬೆಂಗಳೂರು ನೋಡಿದ್ದರು, ಅದೂ ಆಟೋದಲ್ಲಿ ಕೂತುಕೊಂಡೇ ಬಗ್ಗಿ ಬಗ್ಗಿ ನೋಡಿದ್ದಷ್ಟೆ, ಅಷ್ಟರ ಮೇಲೇ ಬೆಂಗಳೂರಿನ ಗಲ್ಲಿ ಗಲ್ಲಿ ನೋಡಿನೋ ಎಂದೇ ಹೇಳುತ್ತಿದ್ದರು. ಅದು 1972ನೇ ಇಸ್ವಿ ಬೆಂಗಳೂರಲ್ಲಿ ರಾಜಕುಮಾರರ ‘ಭಲೇ ಹುಚ್ಚ ಬಿಡುಗಡೆ ಆಗಿತ್ತು. ಆ ಸಿನಿಮಾನೂ ನೋಡಿ ಬಂದಿದ್ದರು, ಅದರ ಕಥೆಯನ್ನೂ ಬಂದವರಿಗೆಲ್ಲ ಹೇಳಲಾರಂಭಿಸಿದ್ದರಿಂದ, ಊರ ಜನರು ಬೆಂಗಳೂರಿಗೆ ಹೋಗಿ ಬಂದ ಭಲೇ ಹುಚ್ಚ ಮಾಸ್ತರ ಎಂದೇ ಇವರಿಗೆ ಹೊಸ ನಾಮಕರಣ ಮಾಡಿದ್ದರು. ಈಗ ಮಾಸ್ತರಿಕೆಗೆ ಒಂದು
ಗತ್ತು ಗಾಂಭೀರ್ಯ ಬಂದಿದೆ. ಮಾಸ್ತರ್ರಗಿಂತ ಮಕ್ಕಳು, ಮಕ್ಕಳ ಪಾಲಕರು ಬುದ್ಧಿವಂತರಾಗಿರುವದರಿಂದ , ಬೆರಳ ತುದಿಯಲ್ಲೆ ಜಗತ್ತಿನ ವಿದ್ಯಮಾನಗಳನ್ನು ತಿಳಿಸುವ ತಂತ್ರಜ್ಞಾನ ಬಂದಿರುವಾಗ, ಇಂಥ ಮಾಸ್ತರುಗಳು ಈಗಿಲ್ಲ ‘ಸ್ಟೇಷನ್ ಮಾಸ್ತರಗ ನಿದ್ದಿ ಇಲ್ಲ, ಸಾಲಿ ಮಾಸ್ತರಗ ಬುದ್ಧಿ ಇಲ್ಲ. ಎಂಬುದು ನಾಣ್ಣುಡಿಯೇ ಆಗಿ ಹೋಗಿತ್ತು ಆಗ.
ಈಗ ಈ ಇಬ್ಬರೂ, ಅವಿಷ್ಕಾರ ಗೊಂಡಿರುವ ಯಂತ್ರ ತಂತ್ರಜ್ಞಾನದಿಂದಾಗಿ ಈ ಅಪವಾದಗಳಿಂದ ಹೊರಬಂದಿದ್ದಾರೆ. ಆದರೆ ಇಂಥ ರಂಜನೀಯ ವ್ಯಕ್ತಿಗಳ ನಡೆ ನುಡಿಗಳಿಂದ ನಾವುಗಳು ಪಡೆಯುತ್ತಿದ್ದ ಮನೋಆಹ್ಲಾದಗಳಿಂದ ವಂಚಿತರಾಗಿದ್ದಾರೆ. ಗತ್ತು, ಗೈರತ್ತು ಗಾಂಭೀರ್ಯದ ಮುಸುಕಿನಲ್ಲಿದ್ದಾರಾಗಲಿ, ಎಲ್ಲವನ್ನೂ ಮುಕ್ತವಾಗಿ ಆಸ್ವಾದಿಸಿದ ಅದು ಒಳ್ಳೆಯದೋ? ಈಗ
ಅನುಭವಿಸುತ್ತಿರುವ ಇದು ಒಳ್ಳೆಯದೋ? ನನಗೂ ತಿಳಿಯದಂತಾಗಿದೆ. ಬೆರಳ ತುದಿಯಲ್ಲೇ ಎಲ್ಲವೂ ಸಿಕ್ಕಿದೆ ಎಂದು ಹೆಮ್ಮೆ ಪಡುತ್ತಿರುವ ಈ ಹೊತ್ತಿನಲ್ಲೇ ಸಣ್ಣ ಸಣ್ಣ ಸುಖಗಳು ಕೈ ತಪ್ಪಿಯೇ ಹೋಗಿರುವದು ನಮ್ಮ ಗಮನಕ್ಕೆ ಬರುತ್ತಲೇ ಇಲ್ಲ