Saturday, 27th July 2024

ಬಿಜೆಪಿ ಬಡಪೆಟ್ಟಿಗೆ ಬಗ್ಗದ ಬಂಡೆ !

ಅಶ್ವತ್ಥಕಟ್ಟೆ

ranjith.hoskere@gmail.com

ರಾಜಕೀಯದಲ್ಲಿ ಎದುರಾಳಿ ತಂಡವನ್ನು ಹೊಡೆಯುವುದಕ್ಕಿಂತ ನಾಯಕನ ಜಂಘಾಬಲ ಕುಸಿಯುವಂತೆ ಮಾಡುವ ಅಥವಾ ನಾಯಕನಿಗೆ ಆಲೋಚನೆ ಮಾಡಲು ಸಾಧ್ಯವಾಗದಂತೆ ಕಟ್ಟಿಹಾಕುವುದು ಸರ್ವೇ ಸಾಮಾನ್ಯ ತಂತ್ರಗಾರಿಕೆ. ಈ ರೀತಿಯ ತಂತ್ರಗಾರಿಕೆ ಶತಮಾನಗಳಿಂದಲೂ ನಡೆದು ಕೊಂಡು ಬಂದಿದ್ದರೂ, ಭಾರತದ ರಾಜಕೀಯದಲ್ಲಿ ಈ ತಂತ್ರವನ್ನು ಭಿನ್ನ-ವಿಭಿನ್ನ ರೀತಿಯಲ್ಲಿ ಆಯಾಕಾಲಘಟ್ಟದಲ್ಲಿ ಆಯಾ ಸರಕಾರಗಳು, ನಾಯಕರು ಅಳವಡಿಸಿಕೊಂಡು ಬರುತ್ತಿದ್ದಾರೆ. ಈ ರೀತಿಯ ಒತ್ತಡಕ್ಕೆ ಮಣಿದು ಕೆಲವರು ‘ಕಾಂಪ್ರೊಮೈಸ್’ ಆದರೆ ಇನ್ನು ಕೆಲವರು ಸವಾಲುಗಳನೆಲ್ಲ ಮೀರಿ ನಿಂತು ಹೋರಾಟ ನಡೆಸುತ್ತಾರೆ.

ಅದರಲ್ಲಿಯೂ ಇತ್ತೀಚಿನ ವರ್ಷಗಳಲ್ಲಿ ಚುನಾವಣೆಗಳ ಹತ್ತಿರದಲ್ಲಿ ಇಂತಹ ತಂತ್ರಗಾರಿಕೆಗಳು ಬಹುದೊಡ್ಡ ಮಟ್ಟದಲ್ಲಿ ನಡೆಯುತ್ತಿವೆ. ಇನ್ನಾರು ತಿಂಗಳಲ್ಲಿ  ಲೋಕಸಭಾ ಚುನಾವಣೆ ನಡೆಯಲಿದ್ದುಯ, ಆ ಹೊಸ್ತಿಲಲ್ಲಿ ಸಹಜವಾಗಿ ಎಲ್ಲ ಪಕ್ಷಗಳು ತಮ್ಮ ತಮ್ಮ ತಯಾರಿಯಲ್ಲಿ ತೊಡಗಿಸಿಕೊಂಡಿವೆ. ಬಿಜೆಪಿ ಹ್ಯಾಟ್ರಿಕ್ ಗೆಲುವಿನ ಮೂಲಕ ದೇಶದಲ್ಲಿ ಹೊಸ ಇತಿಹಾಸ ಬರೆಯಬೇಕು ಎನ್ನುವ ಉತ್ಸಾಹದಲ್ಲಿದ್ದರೆ, ಕಾಂಗ್ರೆಸ್ ತನ್ನ ‘ಇಂಡಿಯ’ ಮೈತ್ರಿ ಕೂಟದ ಮೂಲಕ ಬಿಜೆಪಿಯ ಗೆಲುವಿನ ಓಟಕ್ಕೆ ಬ್ರೇಕ್ ಹಾಕುವ ಲೆಕ್ಕಾಚಾರ ದಲ್ಲಿದೆ. ಈ ಗೆಲುವು-ಸೋಲಿನ ಲೆಕ್ಕಾಚಾರಗಳೆಲ್ಲ ಚುನಾವಣೆಯ ದಿನ ಮತದಾರ ನೀಡುವ ಮತದ ಮೇಲೆ ನಿರ್ಣಯವಾದರೂ, ರಣ-ಪ್ರತಿತಂತ್ರಗಳಿಗೇನೂ ಕೊನೆಯಿಲ್ಲ.

ಸದ್ಯದ ಪರಿಸ್ಥಿತಿಯಲ್ಲಿ ಮೂರನೇ ಬಾರಿಯೂ ‘ಕೇಕ್ ವಾಕ್’ ರೀತಿ ಗೆಲುವಿನ ಲೆಕ್ಕಾಚಾರದಲ್ಲಿರುವ ಬಿಜೆಪಿಗೆ ಇರುವ ಬಹುದೊಡ್ಡ ಆತಂಕ ಮತ್ತು ಸವಾಲು ಎಂದರೆ ಕರ್ನಾಟಕ ಮಾತ್ರವೇ ಎನ್ನುವಂತಾಗಿದೆ. ಇನ್ನುಳಿದಂತೆ ಅತಿ ಹೆಚ್ಚು ಲೋಕಸಭಾ ಸ್ಥಾನಗಳನ್ನು ಬಿಜೆಪಿಗೆ ನೀಡಬಹುದಾದ ಉತ್ತರ ಪ್ರದೇಶ, ಗುಜರಾತ್, ರಾಜಸ್ಥಾನ, ಮಧ್ಯಪ್ರದೇಶ ದಂತ ಉತ್ತರ ಭಾರತ ರಾಜ್ಯಗಳಲ್ಲಿ ಚುನಾವಣೆ ನಡೆಸುವುದು ಹೇಗೆ ಎನ್ನುವ ಸ್ಪಷ್ಟತೆ ಬಿಜೆಪಿಗಿದೆ. ಆದರೆ ದಕ್ಷಿಣ ಭಾರತದಲ್ಲಿ ಗಣನೀಯ ಕೊಡುಗೆ ಕೊಡಬಹುದಾದ ಏಕೈಕ ರಾಜ್ಯವೆನಿಸಿರುವ ಕರ್ನಾಟಕದಲ್ಲಿ ಇಂದಿನ ಸ್ಥಿತಿಯಲ್ಲಿ ಸುಲಭವಲ್ಲ ಎನ್ನುವುದು ಬಿಜೆಪಿ ವರಿಷ್ಠರಿಗೂ ಸ್ಪಷ್ಟವಾಗಿದೆ.

ಕಳೆದ ಚುನಾವಣೆಯಲ್ಲಿ ಕರ್ನಾಟಕದಲ್ಲಿ ‘ಕ್ಲೀನ್ ಸ್ವೀಪ್’ ಮಾಡಿದ್ದ ಬಿಜೆಪಿಗೆ ಈ ಬಾರಿ ಕಷ್ಟ ಎನಿಸಲು ಪ್ರಮುಖ ಕಾರಣ, ಕಳೆದ ಬಾರಿ ಆತಂರಿಕವಾಗಿ ಬಿಜೆಪಿಯಲ್ಲಿದ್ದ ಸಂಘಟನೆ ಈಗ ಉಳಿದಿಲ್ಲ. ಮತ್ತೊಂದು ಕಾರಣವೆಂದರೆ, ಈ ಬಾರಿ ಬಿಜೆಪಿಗೆ ಕರ್ನಾಟಕದಲ್ಲಿ ಬಹುದೊಡ್ಡ ಸವಾಲಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮಾಸ್ ನಾಯಕತ್ವದ ಫೇಸ್ ಹಾಗೂ ಉಪಮುಖ್ಯಮಂತ್ರಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಸಂಘಟನೆ ಹಾಗೂ ಡೋಂಟ್‌ಕೇರ್ ಸ್ವಭಾವದಿಂದ ಕರ್ನಾಟಕದಲ್ಲಿ ಸುಲಭಕ್ಕೆ ಗೆಲುವು ಸಿಗುವ ಎನ್ನುವ ವಾತಾವರಣ ಉಳಿದಿಲ್ಲ ಎನ್ನುವುದು ಸ್ಪಷ್ಟ. ಹಾಗೇ ನೋಡಿದರೆ, ಡಿ.ಕೆ. ಶಿವಕುಮಾರ್ ಅವರು ೨೦೧೯ರ ಲೋಕಸಭಾ ಚುನಾವಣೆಯಿಂದಲೇ ‘ರಾಜ್ಯ ಮಟ್ಟದ ನಾಯಕ’ ಎಂದೆನಿಸಿಕೊಂಡಿದ್ದಾರೆ. ೨೦೧೭ರವರೆಗೆ ಡಿಕೆಶಿ ಎಂದರೆ ರಾಮನಗರ, ಮಂಡ್ಯಕ್ಕೆ ಸೀಮಿತ ಎನ್ನುವ ವರ್ಚಸ್ಸನ್ನು ಹೊಂದಿದ್ದರು. ಯಾವಾಗ ಸೋನಿಯಾ ಗಾಂಧಿ ಅವರ ಪರಮಾಪ್ತ ಅಹ್ಮದ್ ಪಟೇಲ್ ಅವರನ್ನು ರಾಜ್ಯಸಭೆಗೆ ಕಳುಹಿಸಲು ನಡೆದ ಚುನಾವಣೆಯಲ್ಲಿ ಬಿಜೆಪಿ ಮೂರನೇ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಮುಂದಾಯಿತೋ ಆಗ, ಡಿ.ಕೆ. ಶಿವಕುಮಾರ್ ಅವರ ಸುಪರ್ದಿಯಲ್ಲಿ ಗುಜರಾತ್‌ನ ಕಾಂಗ್ರೆಸ್ ಶಾಸಕರನ್ನು ಬೆಂಗಳೂರಿನಲ್ಲಿ ಉಳಿಸಿಕೊಳ್ಳಲಾಯಿತು.

ಈ ವಿಷಯದಲ್ಲಿ ಇಂದಿನ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಪ್ರತಿಷ್ಠೆಗೆ ಅಡಕವಾಗಿದ್ದರಿಂದ, ಡಿಕೆ ಪಕ್ಷಕ್ಕಾಗಿ ನೇರವಾಗಿ ಶಾ ಹಾಗೂ ಮೋದಿ ಅವರನ್ನು ಎದುರು ಹಾಕಿಕೊಂಡು ಪಟೇಲ್ ಅವರ ಗೆಲುವಿನ ಹೊಣೆಯನ್ನು ಹೊತ್ತಿದ್ದರು. ಅಹ್ಮದ್ ಪಟೇಲ್ ಗೆಲುವಿನ ಕಾಂಗ್ರೆಸ್ ಹೈಕಮಾಂಡ್‌ನ ನಂಬಿಕಸ್ತ ಬಂಟನಾ ಗಿಯೇ ಕಾಣಿಸಿಕೊಂಡ ಡಿಕೆ ಇದೀಗ ಪಕ್ಷದಲ್ಲಿ ಕೆಪಿಸಿಸಿ ಅಧ್ಯಕ್ಷರಾಗಿ ಮಾತ್ರವಲ್ಲದೇ, ಪಕ್ಷದ ಎಲ್ಲ ತೀರ್ಮಾನಗಳಲ್ಲಿಯೂ ಡಿಕೆ ಮಾತಿಗೆ ಬೆಲೆ ಕೊಡುವ ರೀತಿಯಲ್ಲಿ ರೂಪುಗೊಂಡಿದ್ದಾರೆ.

ಹೀಗೆ ಕೆಲವೇ ವರ್ಷದಲ್ಲಿ ಪಕ್ಷದಲ್ಲಿ ಸಾಮಾನ್ಯ ನಾಯಕರಲ್ಲಿ ಒಬ್ಬರೆನಿಸಿದ್ದ ಡಿಕೆಶಿ ಇದೀಗ ಆಯಕಟ್ಟಿನ ನಾಯಕ ಎನಿಸಿಕೊಳ್ಳಲು ತೆಗೆದುಕೊಂಡಿರುವ ‘ರಿಸ್ಕ್’ಗಳು ಒಂದೆರೆಡಲ್ಲ. ಪಕ್ಷದ ಹೈಕಮಾಂಡ್ ಕೃಪೆಗೆ ಒಳಗಾಗುವ ಹೊತ್ತಿಗಾಗಲೇ, ಬಿಜೆಪಿ ವರಿಷ್ಠರ ರಾಡಾರ್‌ಗೆ ಸಿಕ್ಕಿ ಐಟಿ, ಇಡಿ, ಸಿಬಿಐ ಸೇರಿದಂತೆ ಹತ್ತಾರು ಪ್ರಕರಣಗಳ ಬಲೆಯಲ್ಲಿ ಸಿಲುಕಿದರು. ಇದರ ಫಲವಾಗಿಯೇ ೫೦ ದಿನಕ್ಕೂ ಹೆಚ್ಚು ದಿನಗಳ ಕಾಲ ಜೈಲಿನಲ್ಲಿ ಕಳೆಯಬೇಕಾಗಿ ಬಂತು. ಈ ಎಲ್ಲದ
ನಡುವೆಯೂ ಪಕ್ಷದ ಹಿತಕ್ಕಾಗಿ ‘ಬಂಡೆ’ಯಾಗಿ ನಿಂತಿದ್ದ ಡಿ.ಕೆ.ಶಿವಕುಮಾರ್ ಇದೀಗ ಕರ್ನಾಟಕದಲ್ಲಿ ಬಿಜೆಪಿಗಿರುವ ಬಹುದೊಡ್ಡ ಸಮಸ್ಯೆ. ಆ ಕಾರಣಕ್ಕಾಗಿಯೇ ಇದೀಗ ಆ ಬಂಡೆಯನ್ನು ಛಿದ್ರಗೊಳಿಸುವ ನಿಟ್ಟಿನಲ್ಲಿ ಒಂದಿಲ್ಲೊಂದು ಪ್ರಯತ್ನಗಳು ನಡೆಯುತ್ತಲೇ ಇವೆ.

ಟ್ರಬಲ್ ಶೂಟರ್ ಎಂದೇ ಹೆಸರಾಗಿರುವ ಡಿಕೆಶಿಗೆ ಇದೇ ಕಾರಣಕ್ಕೆ ಮೂರು ವರ್ಷಗಳ ಹಿಂದೆ ಕೆಪಿಸಿಸಿ ಅಧ್ಯಕ್ಷ ಸ್ಥಾನವೂ ಸಿಕ್ಕಿತು. ಬಳಿಕ ಸರಕಾರ ಅಽಕಾರಕ್ಕೆ ಬರುತ್ತಿದ್ದಂತೆ ಮುಖ್ಯಮಂತ್ರಿ ಸ್ಥಾನದ ಮೇಲೆ ಕಣ್ಣಿಟ್ಟಿದ್ದ ಅವರಿಗೆ ಸಿಎಂ ಪಟ್ಟದ ಬದಲಿಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನದೊಂದಿಗೆ ಉಪಮುಖ್ಯಮಂತ್ರಿ ಸ್ಥಾನವೂ ಒಲಿದಿದೆ. ‘ಒಬ್ಬರಿಗೆ ಒಂದೇ ಸ್ಥಾನ’ ಎನ್ನುವ ನಿಯಮವನ್ನು ಡಿಕೆಶಿಗಾಗಿಯೇ ಪಕ್ಷದ ಹೈಕಮಾಂಡ್ ಬದಲಾಯಿಸಿ, ಎರಡೆರಡು ಸ್ಥಾನದೊಂದಿಗೆ ಪ್ರಬಲ ಖಾತೆಗಳನ್ನು ನೀಡಿದೆ.

೨೦೧೩ರಲ್ಲಿ ಶಾಸಕರಾಗಿ ಚುನಾಯಿತರಾಗಿದ್ದರೂ, ಸಿದ್ದರಾಮಯ್ಯನೇತೃತ್ವದ ಸಂಪುಟಕ್ಕೆ ಸೇರಲು ತಿಂಗಳುಗಟ್ಟಲೇ ಹೋರಾಟ ನಡೆಸಬೇಕಾ ಗಿತ್ತು. ಆದರೆ ೧೦ ವರ್ಷದ ಅವಧಿಯಲ್ಲಿ ತಮಗೆ ಬೇಕಾದ ವರನ್ನು ಸಂಪುಟಕ್ಕೆ ಸೇರಿಸಿ ಕೊಳ್ಳುವ ಶಕ್ತಿಯನ್ನು ಪಡೆದು ಕೊಂಡಿದ್ದು, ಡಿಕೆ ರಾಜಕೀಯ ಪಯಣ ಯಾವ ಮಟ್ಟಿಗೆ ಬದಲಾಯಿತು ಎನ್ನುವುದಕ್ಕೆ ಸಾಕ್ಷಿ. ಇಷ್ಟೆಲ್ಲವಾದರೂ ಡಿಕೆಶಿಗೆ ಈ ಸರಕಾರದಲ್ಲಿ ‘ಸಂತೃಪ್ತಿ’ ಇಲ್ಲ ಎನ್ನುವುದು ಸ್ಪಷ್ಟ. ಮುಖ್ಯಮಂತ್ರಿ ಗಾದಿ ಮೇಲೆ ಕಣ್ಣಿಟ್ಟು ಕೊನೆಗೆ ಡಿಸಿಎಂ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಯಿತು.

ಬಳಿಕ ಕಾವೇರಿ ನೀರಿನ ವಿಷಯದಲ್ಲಿ ಹಿನ್ನಡೆ, ಅಧಿಕಾರಕ್ಕೆ ಬಂದ ಕೆಲವೇ ತಿಂಗಳಲ್ಲಿ ಗುತ್ತಿಗೆದಾರರಿಂದ ಬಿಬಿಎಂಪಿಯಲ್ಲಿ ಕಮಿಷನ್ ಆರೋಪ ಸೇರಿದಂತೆ ಹತ್ತು ಹಲವು ಸಮಸ್ಯೆಗಳು ಎರಗಿಬಂದಿವೆ. ಈ ಎಲ್ಲದರೊಂದಿಗೆ ೨೦೧೭-೧೮ರ ಅವಽಯಲ್ಲಿ ಮೈಮೇಲೆ ಬಿದ್ದಿರುವ ಸಿಬಿಐ, ಇಡಿ ಹಾಗೂ ಐಟಿ ಪ್ರಕರಣಗಳು ಯಾವಾಗ ಬೇಕಾದರೂ ಎರಗುವ ಆತಂಕವಿದೆ. ಚಕ್ರವ್ಯೂಹದೊಳಗೆ ನುಗ್ಗಿದ ಬಳಿಕವೇ ಆದಾಯ ತೆರಿಗೆ, ಇಡಿ ದಾಳಿಗಳನ್ನು ಎದುರಿಸಿರುವ ಡಿಕೆಗೆ ಇದೀಗ ಈ ವ್ಯೂಹವನ್ನು ಬೇಽಸುವುದು ಬಹುದೊಡ್ಡ ಸವಾಲಿನ ಕೆಲಸವಾಗಿದೆ.

ಇನ್ನು ಡಿಕೆಶಿಗೆ ಪಕ್ಷದ ಅಧಿನಾಯಕಿ ಸೋನಿಯಾ ಗಾಂಧಿ ಅವರ ಶ್ರೀರಕ್ಷೆಯಿದೆ. ಸಿದ್ದರಾಮಯ್ಯ ಅವರನ್ನು ಒಪ್ಪಿಕೊಳ್ಳಬಾರದು ಎನ್ನುವ ಕಾರಣಕ್ಕೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ ಅವರ ಆಪ್ತ ಬಿ.ಕೆ. ಹರಿಪ್ರಸಾದ್, ಕೆ.ಎಚ್. ಮುನಿಯಪ್ಪ ಸೇರಿದಂತೆ ಹಲವರ ಬಲವಿದೆ. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ರಾಜ್ಯದ ಶಾಸಕರ ಬಲವಿದೆ. ಅಂತಿಮವಾಗಿ ಕಾನೂನಾತ್ಮಕ ವಾಗಿ ಶಾಸನ ಸಭೆಯಲ್ಲಿ ಯಾರಿಗೆ ಬಲವಿರುತ್ತದೆಯೇ
ಅವರೇ ‘ರಾಜ’ ಎನ್ನುವುದು ಸ್ಪಷ್ಟವಾಗಿರುವುದರಿಂದ ಡಿ.ಕೆ. ಶಿವಕುಮಾರ್ ಅವರಿಗೆ ರಾಜ್ಯದಲ್ಲಿ ಬಹುದೊಡ್ಡ ಹಿನ್ನಡೆ ಯಾಗುತ್ತದೆ. ಹೈಕಮಾಂಡ್ ಜತೆಗೆ ಹೆಚ್ಚು ಆಪ್ತವಾಗಿರುವುದ ರಿಂದ ಇದನ್ನು ವಿರೋಧಿಸುವುದಕ್ಕೂ ಸಾಧ್ಯವಾಗದೇ ಇಕ್ಕಟ್ಟಿಗೆ ಸಿಲುಕಿದ್ದಾರೆ. ಇದಿಷ್ಟೇ ಅಲ್ಲದೇ, ೧೩೫ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು ಸಾಽಸಿದ ಬಳಿಕ, ಕಾಂಗ್ರೆಸ್‌ನಲ್ಲಿ ಎರಡು ಪ್ರತ್ಯೇಕ ಗುಂಪುಗಳಿದ್ದು, ಒಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತರದ್ದು, ಮತ್ತೊಂದು ಡಿ.ಕೆ. ಶಿವಕುಮಾರ್ ಅವರದ್ದು ಎಂದೇ ಹೇಳಲಾಗಿತ್ತು.

ಆದರೀಗ ಬದಲಾದ ಸನ್ನಿವೇಶದಲ್ಲಿ, ಸಿದ್ದರಾಮಯ್ಯ ಅವರನ್ನು ಬಹಿರಂಗ ವಾಗಿ ವಿರೋಽಸುವ ಶಾಸಕರ ಸಂಖ್ಯೆ ತೀರಾ ಕಡಿಮೆಯಿದೆ. ಇದೇ ರೀತಿ ಸಚಿವ ಸಂಪುಟದಲ್ಲಿಯೂ ಸಿದ್ದರಾಮಯ್ಯ ಅವರ ಆಪ್ತರ ಬಣ ಒಂದು ಕಡೆಯಾದರೆ, ಹೈಕಮಾಂಡ್ ಬಣ ಇನ್ನೊಂದಾಗಿದೆ. ಇದರಿಂದ ಡಿಕೆಶಿಗೆ ತಾವು ಬಯಸಿ
ದಷ್ಟು, ‘ಹಿಡಿತ’ವನ್ನು ಸಾಽಸಲು ಈವರೆಗೆ ಸಾಧ್ಯವಾಗಿಲ್ಲ ಎನ್ನುವುದು ಸ್ಪಷ್ಟ. ಮತ್ತೊಂದು ನಿರ್ದಶನವೆಂದರೆ, ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತಿದ್ದಂತೆ ನಿಗಮ-ಮಂಡಳಿಗಳ ನೇಮಕಕ್ಕೆ ಸಂಬಂಧಿಸಿದಂತೆ ಕಸರತ್ತು ಆರಂಭವಾಯಿತು. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು, ಜಿಲ್ಲಾಧ್ಯಕ್ಷರಿಂದ ಶಿಫಾರಸು ಮಾಡಿಸಿ
ಕೊಂಡು, ಆ ಶಿಫಾರಸು ಪತ್ರಗಳ ಪರಿಶೀಲಿಸಿ ಅಂತಿಮ ಪಟ್ಟಿ ಬಿಡುಗಡೆ ಮಾಡಲಾಗುವುದು.

ಅದರಲ್ಲಿ ಬಹುತೇಕ ನಿಗಮ-ಮಂಡಳಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳನ್ನು ಪಕ್ಷದ ಕಾರ್ಯಕರ್ತರಿಗೆ ನೀಡಲಾಗುವುದು ಎನ್ನುವ ಮಾತನ್ನು ಬಹಿರಂಗವಾಗಿಯೇ ಹೇಳಿದ್ದರು. ಆದರೆ ಇಷ್ಟೆಲ್ಲ ಸಿದ್ಧತೆ ಮಾಡಿಕೊಂಡು ಪಟ್ಟಿ ಅಂತಿಮಗೊಳಿಸುವ ವೇಳೆಗೆ, ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರು ಆಯಕಟ್ಟಿನ ನಿಗಮ- ಮಂಡಳಿಗಳನ್ನು ಪಕ್ಷದ ಹಿರಿಯ ಶಾಸಕರಿಗೆ ನೀಡಬೇಕು ಎನ್ನುವ ‘ಚೆಕ್’ ನೀಡಿದ್ದರು. ಇದನ್ನು ವಿರೋಧಿಸುವ ಪ್ರಯತ್ನವನ್ನು ಮಾಡಿದರೂ, ಹೈಕಮಾಂಡ್ ಮಟ್ಟದಲ್ಲಿ ಸಿದ್ದರಾಮಯ್ಯ ಅವರು ಸುಮಾರು ೩೦ ನಿಗಮ-ಮಂಡಳಿಗಳ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನವನ್ನು ಶಾಸಕರು ಹಾಗೂ ವಿಧಾನ ಪರಿಷತ್ ಸದಸ್ಯರಿಗೆ ಇನ್ನುಳಿದವುಗಳನ್ನು ಪಕ್ಷದ ಕಾರ್ಯ ಕರ್ತರಿಗೆ ಎಂದು ಹೇಳಿ ಒಪ್ಪಿಗೆ ಪಡೆದುಕೊಂಡಿದ್ದರು.

ಕರ್ನಾಟಕದಲ್ಲಿರುವ ಆಯಕಟ್ಟಿನ ನಿಗಮ-ಮಂಡಳಿಗಳ ಸಂಖ್ಯೆಯೇ ೩೦ರಿಂದ ೪೦. ಇನ್ನುಳಿದ ೭೦ರಿಂದ ೮೦ ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವ ರೀತಿಯಲ್ಲಿವೆ. ಇದೀಗ ಸಿದ್ದರಾಮಯ್ಯ ಆಯಕಟ್ಟಿನ ನಿಗಮಗಳನ್ನು ತಾವು ಶಿಫಾರಸು ಮಾಡಿದವರಿಗೆ ಕೊಡಿಸುವ ಪ್ರಯತ್ನದಲ್ಲಿದ್ದು, ಈ ಮೂಲಕ ಮತ್ತೊಮ್ಮೆ ಡಿಕೆ ಶಿವಕುಮಾರ್ ಅವರ ಓಟಕ್ಕೆ ತಡೆ ಒಡ್ಡುವ ಪ್ರಯತ್ನವನ್ನು ಮಾಡಿದ್ದಾರೆ ಎಂದರೆ ಸುಳ್ಳಲ್ಲ. ಕಳೆದ ಮೂರು ವರ್ಷಗಳಿಂದ ಪಕ್ಷದ ರಾಜ್ಯಾಧ್ಯಕ್ಷರಾಗಿ ಸೇವೆ ಸಲ್ಲಿಸಿ, ರಾಜ್ಯಾದ್ಯಂತ ಸಂಘಟನೆ ಮಾಡುತ್ತಿದ್ದು, ತನು-ಮನ-ಧನದಿಂದ ಸಂಘಟನೆಯಲ್ಲಿ ತೊಡಗಿಸಿಕೊಂಡರೂ ಪೂರ್ಣ ಪ್ರಮಾಣದಲ್ಲಿ ಪಕ್ಷದ ಹಿಡಿತ ಸಿಕ್ಕಿಲ್ಲ.

ಪಕ್ಷದ ಮೊಗಸಾಲೆಯಲ್ಲಿ ರಾಜಕೀಯದ ವಿವಿಧ ಮೂಲೆ ಗಳನ್ನು ಅರೆದು ಕುಡಿದಿರುವ ಸಿದ್ದರಾಮಯ್ಯ ಅವರ ‘ತಂತ್ರ’ ಗಾರಿಕೆ ಒಂದು ತೊಡಕಾದರೆ, ಬಿಜೆಪಿ ವರಿಷ್ಠರಿಂದ ಬಳಕೆಯಾಗುತ್ತಿರುವ ವಿವಿಧಾಸಗಳು ಮತ್ತೊಂದು ಕಡೆಯಿಂದ ಸಾಲುಸಾಲಾಗಿ ತೇಲಿ ಬರುತ್ತಿವೆ. ಈ ಎರಡನ್ನು ಮೆಟ್ಟಿ ನಿಲ್ಲುವುದೇ ಈಗಿರುವ ಬಹುದೊಡ್ಡ ಸವಾಲು. ಸಾಲು ಸಾಲು ಸಂಘಟನೆಯ ಮೂಲಕ ಕಾಂಗ್ರೆಸ್ ಹೈಕಮಾಂಡ್‌ನ ‘ಆಪತ್ಬಾಂಧವ’ ಎನಿಸಿರುವ ಡಿಕೆ ಈ ಎರಡು ಸವಾಲನ್ನು
ಯಾವ ರೀತಿ ನಿಭಾಯಿಸಲಿದ್ದಾರೆ ಎನ್ನುವುದೇ ಈಗಿರುವ ಬಹುದೊಡ್ಡ ಕುತೂಹಲ.

Leave a Reply

Your email address will not be published. Required fields are marked *

error: Content is protected !!