Thursday, 19th September 2024

ಬಿಜೆಪಿ ರಥಕ್ಕೆ ಹೊಸ ಸಾರಥಿ ?

ಮೂರ್ತಿ ಪೂಜೆ

ಇತ್ತೀಚಿನ ಬೆಳವಣಿಗೆಗಳು ರಾಜ್ಯ ಬಿಜೆಪಿಯನ್ನು ಮುಜುಗರದ ಮಡುವಿಗೆ ತಳ್ಳಿವೆ. ಅಂದ ಹಾಗೆ ಗುಜರಾತ್ ವಿಧಾನಸಭಾ ಚುನಾವಣೆಗಳು ಮುಗಿದ ಕೂಡಲೇ ಮೋದಿ-ಅಮಿತ್ ಷಾ ಪಡೆ ಕರ್ನಾಟಕಕ್ಕೆ ನುಗ್ಗುತ್ತದೆ ಅಂತ ಬಿಜೆಪಿ ಪಾಳೆಯ ಖುಷಿ ಯಾಗಿತ್ತು.

ಅದರ ಪ್ರಕಾರ ಮೋದಿ, ಅಮಿತ್ ಶಾ, ನಡ್ಡಾ ಸೇರಿದಂತೆ ಕೇಂದ್ರದ ಹಲ ನಾಯಕರು ಕರ್ನಾಟಕಕ್ಕೆ ಬಂದು ಹೋಗುತ್ತಿರುವುದೂ ನಿಜವೇ. ಆದರೆ ಹೀಗೆ ಅವರು ಕರ್ನಾಟಕ ಯಾತ್ರೆ ಆರಂಭಿಸಿದ ನಂತರವೂ ರಾಜ್ಯ ಬಿಜೆಪಿಯ ಗ್ರಾಫ್ ಮೇಲಕ್ಕೇರಿ ದಂತೆ ಕಾಣುತ್ತಿಲ್ಲ. ಇದಕ್ಕೆ ಕಾರಣಗಳೂ ಇವೆ. ಮೊದಲನೆಯ ದಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಇತ್ತೀಚಿನ ಭೇಟಿಯನ್ನೇ ಗಮನಿಸಿ.

ಮೂರು ದಿನಗಳ ತಮ್ಮ ಕರ್ನಾಟಕ ಭೇಟಿಯ ಸಂದರ್ಭದಲ್ಲಿ ಅವರು ಒಂದು ಅನುಮಾನದ ಕಿಡಿಯನ್ನು ಹೊತ್ತಿಸಿ ಹೋದರು. ಕೆಎಂಎಫ್ ಮತ್ತು ಅಮುಲ್ ಅನ್ನು ವಿಲೀನ ಮಾಡುವ ಕುರಿತು ಅವರು ಪ್ರಸ್ತಾಪಿಸಿದ್ದು ಈ ಅನುಮಾನಕ್ಕೆ ಕಾರಣ. ಕೆಎಂಎಫ್ ಮತ್ತು ಅಮುಲ್ ಅನ್ನು ವಿಲೀನಗೊಳಿಸುವುದು ಎಂದರೆ ಕನ್ನಡಿಗರಿಗೆ ಅದರ ಮೇಲಿರುವ ಹಕ್ಕು ಕಳೆದು ಹೋಗುತ್ತದೆ ಅಂತಲೇ ಅರ್ಥ.

ಇವತ್ತು ಕರ್ನಾಟಕದ ಗ್ರಾಮೀಣ ಭಾಗದ ಜನರ ಆರ್ಥಿಕ ಶಕ್ತಿಯನ್ನು ಹೆಚ್ಚಿಸಿದ ಕೆಎಂಎಫ್ ಲಕ್ಷಾಂತರ ಕುಟುಂಬಗಳಿಗೆ ಆಸರೆಯಾಗಿ ನಿಂತಿದೆ. ಇಂತಹ ಕೆಎಂಎಫ್ ಅನ್ನು ಅಮುಲ್ ಜತೆ ವಿಲೀನ ಮಾಡಿದರೆ ಕರ್ನಾಟಕದ ಗ್ರಾಮೀಣ ಜನರ
ಬದುಕು ಡೋಲಾಯಮಾನವಾಗುತ್ತದೆ. ಯಾಕೆಂದರೆ ಇಂತಹ ವಿಲೀನದ ನಂತರ ಆ ಸಂಸ್ಥೆಯ ಆಯಕಟ್ಟಿನ ಜಾಗಗಳಿಗೆ ಉತ್ತರ ಭಾರತೀಯ ಅಧಿಕಾರಿಗಳು ಬಂದು ಕೂರುತ್ತಾರೆ. ಇದರ ಪರಿಣಾಮ ಏನಾಗುತ್ತದೆ ಅಂತ ಊಹಿಸುವುದು ಕಷ್ಟವೇನಲ್ಲ.

ಈಗಾಗಲೇ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ವಿಲೀನವಾದ ಕರ್ನಾಟಕದ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು, ಯೂನಿಯನ್ ಬ್ಯಾಂಕಿನಲ್ಲಿ ವಿಲೀನವಾದ ಕಾರ್ಪೊರೇಷನ್ ಬ್ಯಾಂಕು, ಬರೋಡಾ ಬ್ಯಾಂಕಿನಲ್ಲಿ ವಿಲೀನವಾದ ವಿಜಯಾ ಬ್ಯಾಂಕುಗಳ ಕತೆ ಕಣ್ಣ ಮುಂದೆಯೇ ಇದೆ. ಇಲ್ಲ ಈಗ ಉತ್ತರ ಭಾರತೀಯ ಅಧಿಕಾರಿಗಳ ಕೈ ಮೇಲಾಗಿ ಕನ್ನಡ ನಾಡಿನ ಗ್ರಾಹಕರು ಪರಕೀಯ ಭಾವನೆ ಅನುಭವಿಸುತ್ತಿದ್ದಾರೆ.

ಹೀಗಿರುವಾಗ ಕೆಎಂಎಫ್ ಏನಾದರೂ ಅಮುಲ್ ನಲ್ಲಿ ವಿಲೀನಗೊಂಡರೆ ಅನುಮಾನವೇ ಬೇಡ. ಕರ್ನಾಟಕದ ಆಸ್ಮಿತೆಗೆ ಧಕ್ಕೆಯಾಗುತ್ತದೆ ಎಂದೇ ಅರ್ಥ. ಹೀಗಾಗಿ ಅಮಿತ್ ಶಾ ಅವರ ಈ ವಿಲೀನ ಪ್ರಸ್ತಾಪ ಕೇಳಿ ಬಂದಿದ್ದೇ ತಡ, ಕರ್ನಾಟಕದ ಎಡೆಯಿಂದ ವ್ಯಾಪಕ ವಿರೋಧ ವ್ಯಕ್ತವಾಗತೊಡಗಿತು. ಹೀಗೆ ವಿರೋಧದ ಧ್ವನಿ ಕೇಳಿ ಬಂದಿದ್ದೇ ತಡ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ರಾಜ್ಯ ಸಚಿವ ಸಂಪುಟದ ಹಲವರು ಗಾಬರಿಯಿಂದ ‘ಇಲ್ಲ, ಇಲ್ಲ, ವಿಲೀನದ ಪ್ರಸ್ತಾಪವೇ ಇಲ್ಲ’ ಅನ್ನತೊಡಗಿದರು. ಆದರೆ ಅಮಿತ್ ಶಾ ಅವರ ಪ್ರಸ್ತಾಪವನ್ನು ಇವರು ನಿರಾಕರಿಸಿದರೆ ಜನರ ಅನುಮಾನ ಪರಿಹಾರವಾಗಲು ಸಾಧ್ಯವೇ? ಈಗಾಗಲೇ ವಿಲೀನದಂತಹ ವಿಷಯದಲ್ಲಿ ಕೇಂದ್ರ ಸರಕಾರ ಬಹುಮುಂದೆ ಹೋಗಿದೆ. ನಾಳೆ ಕರ್ನಾಟಕದಲ್ಲಿ ಬಿಜೆಪಿ ಮರಳಿ ಅಧಿಕಾರ ಹಿಡಿದರೆ ನಿಶ್ಚಿತವಾಗಿಯೂ ಕೆಎಂಎಫ್ ಹೆಬ್ಬಾಗಿಲಲ್ಲಿ ಅಮುಲ್ ನಿಂತಿರುತ್ತದೆ.

ಅದನ್ನು ವಿರೋಧಿಸುವ ಶಕ್ತಿ ರಾಜ್ಯ ಬಿಜೆಪಿಯ ಯಾವ ನಾಯಕರಲ್ಲೂ ಇಲ್ಲ. ಹೀಗಾಗಿ ಕೇಂದ್ರದ ಮನಃಸ್ಥಿತಿಯ ವಿರುದ್ಧ ನಿಂತು ತಾವೇ ಕೆಎಂಎಫ್ ಅನ್ನು ಉಳಿಸಿಕೊಳ್ಳಬೇಕಾಗಬಹುದು ಎಂಬ ಜನರ ಯೋಚನೆ ರಾಜ್ಯ ಬಿಜೆಪಿಯನ್ನು ಕಾಡುವುದು ನಿಜ. ಕಿರಿಕಿರಿಯಾದ ಸ್ಯಾಂಟ್ರೋ ರವಿ ಈ ಮಧ್ಯೆ ರಾಜ್ಯ ಬಿಜೆಪಿಯ ಪಾಲಿಗೆ ಕಿರಿಕಿರಿಯಾಗಿರುವುದು ಸ್ಯಾಂಟ್ರೋ ರವಿ. ಕುಮಾರ ಸ್ವಾಮಿ ನೇತೃತ್ವದ ಜೆಡಿಎಸ್-ಕಾಂಗ್ರೆಸ್ ಮೈತ್ರಿಕೂಟ ಸರಕಾರ ಉರುಳಿಸಲು ಹಲ ಶಾಸಕರು ಬಾಂಬೆಗೆ ಹೋದರಲ್ಲ? ಆ ಸಂದರ್ಭದಲ್ಲಿ ಹನ್ನೆರಡು ಮಂದಿ ಹೆಣ್ಣು ಮಕ್ಕಳನ್ನು ಮುಂಬೈಗೆ ಕಳಿಸಲಾಗಿತ್ತು. ಇದಕ್ಕೆ ಸ್ಯಾಂಟ್ರೋ ರವಿಯ ನೆರವು ಪಡೆಯಲಾಗಿತ್ತು ಎಂಬುದು ಈಗಿನ ಆರೋಪ.

ಇದರ ಹಿನ್ನೆಲೆಯಲ್ಲಿ ಮಾಜಿ ಮುಖ್ಯಮಂತ್ರಿ, ಜೆಡಿಎಸ್ ನಾಯಕ ಕುಮಾರಸ್ವಾಮಿ ಮತ್ತು ಬೊಮ್ಮಾಯಿ ಸರಕಾರದ
ಹಲ ಸಚಿವರ ಮಧ್ಯೆ ವಾಗ್ವಾದ ನಡೆದಿದೆ. ಸದರಿ ಸ್ಯಾಂಟ್ರೋ ರವಿ ಸರಕಾರದ ಮಟ್ಟದಲ್ಲಿ ಪ್ರಭಾವಿಯಾಗಿದ್ದು, ಪೋಲೀಸ್
ವರ್ಗಾವರ್ಗಿಯಲ್ಲಿ ಹಸ್ತಕ್ಷೇಪ ಮಾಡುತ್ತಾನೆ. ಈತನಿಗೆ ರಾಜಕಾರಣಿಗಳು, ಹಿರಿಯ ಅಽಕಾರಿಗಳ ಸಂಪರ್ಕವಿದೆ ಎಂಬ ಮಾತೇನಿದೆ? ಅದು ರಾಜ್ಯ ಬಿಜೆಪಿ ಪಾಳೆಯದ ಮೇಲೆ ಅನುಮಾನದ ಕಾರ್ಮೊಡ ಆವರಿಸುವಂತೆ ಮಾಡಿದೆ.

ಅಂದ ಹಾಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಸ್ಯಾಂಟ್ರೋ ರವಿ ವಿರುದ್ಧ ಸಮಗ್ರ ತನಿಖೆ ನಡೆಸುವುದಾಗಿ ಹೇಳಿದ್ದರೂ ಬಿಜೆಪಿ ಪಾಳೆಯದ ಮೇಲೆ ಆವರಿಸಿರುವ ಕಾರ್ಮೋಡ ಕಡಿಮೆಯಾಗಿಲ್ಲ. ಮುಂದೆ ಈ ಪ್ರಕರಣ ಪಡೆಯುವ ತಿರುವುಗಳು ಕಾರ್ಮೋಡ ದಟ್ಟವಾಗುತ್ತದೋ?ತಿಳಿಯಾಗುತ್ತದೋ?ಎಂಬುದನ್ನು ನಿರ್ಧರಿಸುತ್ತದೆ. ಅಂದ ಹಾಗೆ ಕರ್ನಾಟಕದ ರಾಜಕಾರಣದಲ್ಲಿ ಸ್ಯಾಂಟ್ರೋ ರವಿಯಂತವರ ಹೆಸರು ಕೇಳುತ್ತಿರುವುದು ಹೊಸತೇನಲ್ಲ. ಇಂತವರು ಕಾಲದಿಂದ ಕಾಲಕ್ಕೆ ಮೇಲೆದ್ದು ನಿಲ್ಲುತ್ತಿರುತ್ತಾರೆ.

ಕರ್ನಾಟಕದ ರಾಜಕಾರಣವನ್ನು ಬಲ್ಲವರಿಗೆ ಇಂತವರು ಯಾರು? ಈಗ ಯಾವ ಲೆವೆಲ್ಲಿನಲ್ಲಿzರೆ? ಅವರ ಪವರ್ ಏನು?ಎಂಬುದು ಗೊತ್ತಿರುತ್ತದೆ. ಹೀಗಾಗಿ ಸ್ಯಾಂಟ್ರೋ ರವಿ ಪ್ರಕರಣ ತಾರ್ಕಿಕ ಅಂತ್ಯ ಕಾಣುತ್ತದೆ ಎಂಬುದು ಭ್ರಮೆ. ಹೆಚ್ಚೆಂದರೆ ಅದು ಬಿಜೆಪಿ ಸರಕಾರದ ಮುಖಕ್ಕೆ ಸ್ವಲ್ಪ ಮಸಿ ಹಚ್ಚಬಹುದು ಅಷ್ಟೇ.

ಪಂಚಮಸಾಲಿ ಫೈಟ್ ಶುರು
ಇದೇ ರೀತಿ ಬಿಜೆಪಿ ಸರಕಾರವನ್ನು ಮುಜುಗರಕ್ಕೆ ಸಿಲುಕಿಸಿರುವ ಮತ್ತೊಂದು ವಿಷಯವೆಂದರೆ ಪಂಚಮಸಾಲಿ ಫೈಟು.
ಪಂಚಮಸಾಲಿ ಲಿಂಗಾಯತರಿಗೆ ಪ್ರವರ್ಗ ೨ ಎ ಅಡಿ ಮೀಸಲು ಸೌಲಭ್ಯ ನೀಡಬೇಕು ಎಂಬ ಕೂಗೇನಿದೆ? ಈ ಕೂಗಿಗೆ ಸ್ಪಂದಿಸಿ ಲಿಂಗಾಯತ ಮತ ಬ್ಯಾಂಕ್ ಅನ್ನು ಭದ್ರಪಡಿಸಿಕೊಳ್ಳಬೇಕು ಎಂಬ ಯೋಚನೆ ಬೊಮ್ಮಾಯಿ ಅವರಿಗಿತ್ತು.
ಹೀಗಾಗಿ ಪಂಚಮಸಾಲಿ ಲಿಂಗಾಯತ ಸೈನ್ಯದ ದಂಡ ನಾಯಕ ಬಸವನಗೌಡ ಪಾಟೀಲ್ ಯತ್ನಾಳ್ ಅವರಿಗೆ ಬೊಮ್ಮಾಯಿ ಭರವಸೆಯನ್ನೂ ಕೊಟ್ಟಿದ್ದರು. ಆದರೆ ಈ ಭರವಸೆಯನ್ನು ಈಡೇರಿಸಬೇಕು ಎಂಬಷ್ಟರಲ್ಲಿ ರಾಜ್ಯ ಬಿಜೆಪಿಯ ಟಾಪ್ ಲೀಡರ್ ಒಬ್ಬರು ಹೈಕಮಾಂಡ್ ಮೇಲೆ ಪ್ರಭಾವ ಬೀರಿ ಇದಕ್ಕೆ ಬ್ರೇಕ್ ಹಾಕಿಸಿದರು.

ಪರಿಣಾಮ? ಪಂಚಮಸಾಲಿ ಲಿಂಗಾಯತರನ್ನು ಪ್ರವರ್ಗ ೨ ಎ ಅಡಿ ಸೇರಿಸುವ ಬದಲು ೨ (ಡಿ) ಅಡಿ ಸೇರಿಸಿ ಬೊಮ್ಮಾಯಿ ಉಸ್ಸಪ್ಪಾ ಅಂದರು. ಹೀಗಾಗಿ ಬಸವನಗೌಡ ಪಾಟೀಲ್ ಯತ್ನಾಳ್ ಮತ್ತು ಕೂಡಲಸಂಗಮದ ಪೀಠಾಧಿಪತಿಗಳು ಮತ್ತೆ ತಿರುಗಿ ಬಿದ್ದಿದ್ದಾರೆ. ಅಷ್ಟೇ ಅಲ್ಲ, ಪಂಚಮಸಾಲಿಗಳಿಗೆ ೨ ಎ ಮೀಸಲು ನೀಡದಿದ್ದರೆ ಮುಂದಿನ ಚುನಾವಣೆಯಲ್ಲಿ ಬಿಜೆಪಿಗೆ ಘಾಸಿಯಾಗುವುದು ನಿಶ್ಚಿತ ಎಂಬ ಸಂದೇಶ ರವಾನೆಯಾಗುವಂತೆ ಮಾಡಿದ್ದಾರೆ.

ಅವರನ್ನು ಎದುರಿಸಲು ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಫೀಲ್ಡಿಗೆ ಇಳಿದಿzರಾದರೂ ರಾಜ್ಯದ ಪಂಚಮಸಾಲಿ ಸೈನ್ಯದ ಮುಂದೆ ಯತ್ನಾಳ್ ಮತ್ತು ಕೂಡಲ ಸಂಗಮದ ಪೀಠಾಽಪತಿಗಳ ಪವರ್ ಹೆಚ್ಚಾದಂತೆ ಕಂಡು ಬರುತ್ತಿದೆ. ಮರಳಿ ಕರ್ನಾಟಕದ ಅಧಿಕಾರ ಸೂತ್ರ ಹಿಡಿಯಲು ಹಪಹಪಿಸುತ್ತಿರುವ ಬಿಜೆಪಿ ಈ ವಿಷಯವನ್ನು ಬಗೆಹರಿಸದಿದ್ದರೆ ನಿಶ್ಚಿತವಾಗಿ ಹೊಡೆತ ತಿನ್ನಲಿದೆ. ಅಂದ ಹಾಗೆ ೨೦೦೮ ಮತ್ತು ೨೦೧೮ ರ ವಿಧಾನಸಭಾ ಚುನಾವಣೆಯಲ್ಲಿ ಲಿಂಗಾಯತ ಬಲ ಅಖಂಡವಾಗಿದ್ದರೂ ಬಿಜೆಪಿ ಸ್ವಯಂಬಲದ ಮೇಲೆ ಅಽಕಾರ ಹಿಡಿದಿರಲಿಲ್ಲ. ಅದರೆ ಈಗ ಲಿಂಗಾಯತ ಸೈನ್ಯದ ನಂಬರ್ ಒನ್ ರೆಜಿಮೆಂಟ್ ಅನ್ನಿಸಿಕೊಂಡ
ಪಂಚಮಸಾಲಿಗಳ ಮನಸ್ಸಿನಲ್ಲಿ ಅಸಮಾಧಾನದ ಬೀಜ ಬಿದ್ದಿದೆ.

ಹೀಗಿರುವಾಗ ಲಿಂಗಾಯತ ಸೈನ್ಯ ಈ ಹಿಂದಿನಂತೆ ಬಿಜೆಪಿ ಜತೆ ನಿಲ್ಲುತ್ತದೆ ಎಂಬುದು ಅನುಮಾನ. ಅಂದ ಹಾಗೆ ಈವರೆಗೆ ಲಿಂಗಾಯತ ಸೈನ್ಯ ಒಗ್ಗಟ್ಟಾಗಿ ನಿಲ್ಲಲು ಕಾರಣರಾಗಿದ್ದ ಯಡಿಯೂರಪ್ಪ ತೆರೆಯ ಹಿಂದೆ ಸರಿಯುತ್ತಿದ್ದಾರೆ. ಹೀಗೆ ಹಲವು ರೀತಿಯಿಂದ ತನ್ನ ವಿಷಯದಲ್ಲಿ ಲಿಂಗಾಯತರು ನಂಬಿಕೆ ಕಳೆದುಕೊಳ್ಳುತ್ತಿರುವಾಗ ಅದನ್ನು ಸರಿಪಡಿಸಿಕೊಳ್ಳುವುದು ಬಿಜೆಪಿಗೆ ಅನಿವಾರ್ಯ. ಅದು ಸಾಧ್ಯವಾಗುತ್ತದಾ? ಎಂಬುದೂ ಈಗ ಬಿಜೆಪಿ ಪಾಳೆಯದಲ್ಲಿರುವ ಅನುಮಾನ.

ರಾಜ್ಯ ಬಿಜೆಪಿಗೆ ಹೊಸ ಸಾರಥಿ?
ಇಂತಹ ಗೊಂದಲಗಳ ನಡುವೆ ಮುಳುಗಿರುವ ಬಿಜೆಪಿ ಪಾಳೆಯದಲ್ಲಿ ಹೊಸ ನಿರೀಕ್ಷೆಗಳೂ ಕಾಣಿಸಿಕೊಂಡಿವೆ. ಅದೆಂದರೆ ರಾಜ್ಯ ಬಿಜೆಪಿಯ ಅಧ್ಯಕ್ಷ ಸ್ಥಾನಕ್ಕೆ ಸಿ.ಟಿ.ರವಿ ಬಂದು ಕೂರಲಿದ್ದಾರೆ ಎಂಬುದು. ಹಿಂದುತ್ವದ ಅಜೆಂಡಾ ಎತ್ತಿ ಹಿಡಿದು ಹೋರಾಡುವ ವಿಷಯದಲ್ಲಿ ಸಿ.ಟಿ.ರವಿ ಅವರಷ್ಟು ಪರಿಣಾಮಕಾರಿಯಾಗಿ ಯಾರೂ ಹೋರಾಡುತ್ತಿಲ್ಲವಂತೆ. ಹೀಗಾಗಿ ಹಾಲಿ ಅಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅವರ ಜಾಗಕ್ಕೆ ಸಿ.ಟಿ.ರವಿ ಅವರನ್ನು ತಂದು ಕೂರಿಸುವುದು ಸೂಕ್ತ ಅಂತ ಸಂಘ ಪರಿವಾರದ ಪ್ರಮುಖರು ವರಿಷ್ಠರಿಗೆ ಸಂದೇಶ ರವಾನಿಸಿದ್ದಾರಂತೆ.

ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಎದುರಿಸುವ ಪರೀಕ್ಷೆಯಲ್ಲಿ ಸಿ.ಟಿ.ರವಿ ಡಿಸ್ಟಿಂಕ್ಷನ್ ನಲ್ಲಿ ಪಾಸಾಗಿದ್ದಾರೆ ಎಂಬುದು ಈ ನಾಯಕರ ವಾದ. ಪ್ರಧಾನಿ ನರೇಂದ್ರ ಮೋದಿ ತಮ್ಮ ಎದುರಾಳಿಗಳನ್ನು ಎದುರಿಸುವ ಭಂಗಿಯಲ್ಲಿಯೇ ಸಿ.ಟಿ.ರವಿ ಕೂಡಾ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ನಾಯಕರನ್ನು ಎದುರಿಸುತ್ತಿದ್ದು ಈ ಅಂಶ ಕೂಡಾ ಅವರಿಗೆ ಪ್ಲಸ್ಸು ಎಂಬುದು ಈ ನಾಯಕರ ವರಸೆ. ಆದರೆ ಸಿ.ಟಿ.ರವಿ ಅವರನ್ನು ಅಧ್ಯಕ್ಷ ಸ್ಥಾನಕ್ಕೆ ತಂದು ಕೂರಿಸುವುದನ್ನು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಇಷ್ಟ ಪಡುವುದಿಲ್ಲ.

ಹೀಗಾಗಿ ಯಡಿಯೂರಪ್ಪ ಅವರ ಮನವೊಲಿಸಿ ಸಿ.ಟಿ. ರವಿ ಅವರಿಗೆ ಪಟ್ಟ ಕಟ್ಟುವ ಕಸರತ್ತುಗಳು ನಡೆದಿವೆಯಂತೆ. ಅದರ ಪ್ರಕಾರ, ಸದ್ಯದ ನಡೆಯಲಿರುವ ರಾಜ್ಯ ಸಚಿವ ಸಂಪುಟ ವಿಸ್ತರಣೆಯ ಸಂದರ್ಭದಲ್ಲಿ ಯಡಿಯೂರಪ್ಪ ಸೂಚಿಸಿದ ಹೆಸರು ಗಳಿಗೆ ಆದ್ಯತೆ ನೀಡಬೇಕು, ಅದಕ್ಕೆ ಪ್ರತಿಯಾಗಿ ಸಿ.ಟಿ.ರವಿ ಅಧ್ಯಕ್ಷರಾಗಲು ಯಡಿಯೂರಪ್ಪ ಒಪ್ಪಬೇಕು ಎಂಬ ಸೂತ್ರ ಚರ್ಚೆಯಲ್ಲಿದೆಯಂತೆ. ಈ ಚರ್ಚೆಯ ಫಲಶೃತಿ ಏನಾಗುತ್ತದೋ ಗೊತ್ತಿಲ್ಲ. ಆದರೆ ಇತ್ತೀಚಿನ ದಿನಗಳಲ್ಲಿ ಪದೇ ಪದೇ ವಿವಾದಕ್ಕೆ ಸಿಲುಕುತ್ತಿರುವ ರಾಜ್ಯ ಬಿಜೆಪಿಗೆ ಇದು ಟಾನಿಕ್ ನೀಡುವ ಪ್ರಯತ್ನ ಎಂಬುದಂತೂ ನಿಜ.