Thursday, 19th September 2024

ಬಿಜೆಪಿ ಗೆದ್ದರೆ ಯಾರಾಗ್ತಾರೆ ಸಿಎಂ ?

ಮೂರ್ತಿಪೂಜೆ

ಕರ್ನಾಟಕದಲ್ಲಿ ಪಕ್ಷ ಮರಳಿ ಅಧಿಕಾರಕ್ಕೆ ಬಂದರೆ ಹಿಂದುಳಿದ ವರ್ಗದ ನಾಯಕರೊಬ್ಬರನ್ನು ಸಿಎಂ ಮಾಡಲು ಬಿಜೆಪಿ ವರಿಷ್ಠರು ನಿರ್ಧರಿಸಿದ್ದಾರಂತೆ.
ಕೇಂದ್ರ ಗೃಹಸಚಿವ ಅಮಿತ್ ಶಾ ಮೊನ್ನೆ ರಾಜ್ಯಕ್ಕೆ ಬಂದುಹೋಗುತ್ತಿದ್ದಂತೆಯೇ ಕಮಲ ಪಾಳಯದಲ್ಲಿ ಹರಡಿರುವ ಈ ಸುದ್ದಿ ಕುತೂಹಲ ಕೆರಳಿಸುವಂತಿದೆ.

ಹಿಂದುಳಿದ ವರ್ಗಕ್ಕೆ ಸೇರಿದವರನ್ನು ಸಿಎಂ ಮಾಡಿ ದಲಿತರೊಬ್ಬರನ್ನು ಡಿಸಿಎಂ ಮಾಡಿದರೆ, ಕರ್ನಾ ಟಕದ ರಾಜಕಾರಣದಲ್ಲಿ ಬಿಜೆಪಿ ನೆಲೆಯಾಗು ತ್ತದೆ ಎಂಬುದು ಮೋದಿ- ಶಾ ಜೋಡಿಯ ಈಗಿನ ಲೆಕ್ಕಾಚಾರವಂತೆ. ಕಾರಣ? ಪಕ್ಷಕ್ಕೆ ಬಲಿಷ್ಠ ವರ್ಗದವರು ಮೂಲಶಕ್ತಿಯಾದರೆ ಬಯಸಿದಾಗ ಅವರನ್ನಿಳಿಸುವುದು ಕಷ್ಟ. ಪಕ್ಷಕ್ಕೆ ಬಲಿಷ್ಠ ವರ್ಗಗಳ ಬೆಂಬಲ ಬೇಕು, ಆದರೆ ಆ ವರ್ಗ ಬಯಸಿ ದಂತೆಯೇ ಹೆಜ್ಜೆಯಿಡುವುದು ಕಷ್ಟ ಎಂಬುದು ಈ ಜೋಡಿಯ ಯೋಚನೆ.

ಎಲ್ಲಕ್ಕಿಂತ ಮುಖ್ಯವಾಗಿ, ಕರ್ನಾಟಕದ ನೆಲೆಯಲ್ಲಿ ಒಂದು ಬಲಿಷ್ಠ ವರ್ಗದ ಬೆಂಬಲ ಸಿಕ್ಕರೆ ಮತ್ತೊಂದು ಬಲಿಷ್ಠ ವರ್ಗದ ಬೆಂಬಲ ಸಿಗುವುದು ಕಷ್ಟ. ಕಳೆದ ೨ ದಶಕಗಳ ಕಾಲ ಪಕ್ಷವನ್ನು ಲಿಂಗಾ ಯತರು ಬೆಂಬಲಿಸುತ್ತ ಬಂದಿದ್ದಾರಾದರೂ, ಈ ಬಾರಿ ಅವರು ಸಾಲಿಡ್ಡಾಗಿ ಬಿಜೆಪಿ ಜತೆ ನಿಲ್ಲುವುದಿಲ್ಲ. ಕಾರಣ? ಇದುವರೆಗೆ ಅವರ ಕಣ್ಣಿಗೆ ಭವಿಷ್ಯದ ನಾಯಕರಂತೆ ಕಾಣುತ್ತಿದ್ದ ಯಡಿಯೂರಪ್ಪ ಈಗ ಸೈಡ್‌ವಿಂಗಿಗೆ ಸರಿಯುತ್ತಿದ್ದಾರೆ. ಚುನಾವಣೆಯ ನಂತರ ಬೊಮ್ಮಾಯಿ ಅವರನ್ನು ಮರಳಿ ಸಿಎಂ ಮಾಡುವ ಲಕ್ಷಣವೂ ಕಾಣುತ್ತಿಲ್ಲ.

ಹೀಗಾಗಿ ಈ ಬಾರಿ ಲಿಂಗಾಯತ ಮತ ಬ್ಯಾಂಕ್, ಲೋಕಲ್ ಷೇರುಗಳ ಖರೀದಿಗೆ ಆದ್ಯತೆ ಕೊಡುತ್ತದೆಯೇ ಹೊರು ಸ್ಟೇಟ್ ಲೆವೆಲ್ ಷೇರಿಗೆ ಕೈಹಾಕುವುದಿಲ್ಲ ಎಂಬುದು ಮೋದಿ-ಶಾ ಅವರಿಗೆ ತಲುಪಿರುವ ಮಾಹಿತಿ. ಈ ಮಧ್ಯೆ, ಸಾಮೂಹಿಕ ನಾಯಕತ್ವದ ಮಾತನಾಡಿ ಎಲ್ಲ ವರ್ಗಗಳ ಮತ ಪಡೆದು, ನಂತರ ಪೇಶ್ವೆ ಮೂಲದ ಬ್ರಾಹ್ಮಣ ಪ್ರಲ್ಹಾದ್ ಜೋಶಿ ಅವರನ್ನು ಸಿಎಂ ಮಾಡಲು ಆರೆಸ್ಸೆಸ್ ಹುನ್ನಾರ ನಡೆಸಿದೆ ಎಂಬ ಕುಮಾರಸ್ವಾಮಿ ಮಾತು ರಾಷ್ಟ್ರಮಟ್ಟದಲ್ಲಿ ಬಿಜೆಪಿ ಪಾಳಯವನ್ನು ತಲ್ಲಣಗೊಳಿಸಿದೆ.

ಹೀಗಾಗಿ ಈ ಎಲ್ಲ ಅಂಶಗಳನ್ನು ಗಮನದಲ್ಲಿಟ್ಟುಕೊಂಡ ಮೋದಿ-ಶಾ ಜೋಡಿ ತನ್ನ ಗೇಮ್‌ಪ್ಲಾನ್ ಬದಲಿಸಿದೆಯಂತೆ. ಅದರ ಪ್ರಕಾರ, ಮುಂದಿನ ಚುನಾವಣೆಯಲ್ಲಿ ಗೆದ್ದು ಪಕ್ಷ ಅಧಿಕಾರಕ್ಕೆ ಬಂದರೆ ಹಿಂದುಳಿದ ಸಮುದಾಯದವರನ್ನು ಸಿಎಂ ಹುದ್ದೆಗೆ, ದಲಿತ ಸಮುದಾಯದವರನ್ನು ಡಿಸಿಎಂ
ಹುದ್ದೆಗೆ ಏರಿಸುವುದು ಈ ಜೋಡಿಯ ಲೆಕ್ಕಾಚಾರ. ಈ ಪೈಕಿ ಡಿಸಿಎಂ ಹುದ್ದೆಗೆ ಆ ಹೊತ್ತಿನ ಸನ್ನಿವೇಶಕ್ಕನುಗುಣವಾಗಿ ಇನ್ನಷ್ಟು ಮಂದಿ ಬರಬಹುದು. ಆದರೆ ಸಿಎಂ ಹುದ್ದೆಗೆ ಹಿಂದುಳಿದ ಸಮುದಾಯದವರೊಬ್ಬರನ್ನು ತರಲೇಬೇಕು ಅಂತ ಅದು ಸಂಕಲ್ಪ ಮಾಡಿದೆಯಂತೆ. ಈ ಲೆಕ್ಕಾಚಾರ ಹಾಗೇ ಇರುತ್ತದೋ ಅಥವಾ ಬದಲಾಗುತ್ತದೋ ಗೊತ್ತಿಲ್ಲ.

ಆದರೆ ಸದ್ಯದ ಸ್ಥಿತಿಯಲ್ಲಂತೂ ಈ ಹಿಂದುಳಿದ ವರ್ಗದ ನಾಯಕ ಯಾರು ಎಂಬ ಬಗ್ಗೆ ರಾಜ್ಯ ಬಿಜೆಪಿಯಲ್ಲಿ ಕುತೂಹಲ ಶುರುವಾಗಿದೆ.

ಶಾ ಹಾಗೇಕೆ ಮಾಡಿದರು?
ಇತ್ತೀಚೆಗೆ ಮಂಗಳೂರಿನಲ್ಲಿ ನಡೆದ ಪಕ್ಷದ ವಿಭಾಗೀಯ ಮಟ್ಟದ ಸಭೆಗೆ ಅಮಿತ್ ಶಾ ಬಂದಿದ್ದರು. ಮಂಗಳೂರು, ಉಡುಪಿ, ಶಿವಮೊಗ್ಗ, ಚಿಕ್ಕಮಗಳೂರು, ಉತ್ತರ ಕನ್ನಡ ಸೇರಿದಂತೆ ವಿವಿಧ ಜಿಲ್ಲೆಗಳ ಶಾಸಕರು, ಸಂಸದರು ಸೇರಿದಂತೆ ೧೫೦ ಮಂದಿ ಪ್ರಮುಖರು ಭಾಗವಹಿಸಿದ್ದ ಈ ಸಭೆಯಲ್ಲಿ ಒಂದು ಅಚ್ಚರಿಯ ಬೆಳವಣಿಗೆ ನಡೆಯಿತು. ಅದೆಂದರೆ, ಅವತ್ತಿನ ಸಭೆಯ ವೇದಿಕೆಯಲ್ಲಿ ೪ ಮಂದಿಗೆ ಕುರ್ಚಿ ಹಾಕಲಾಗಿತ್ತು.

ಅದರಲ್ಲಿ ಯಾರ‍್ಯಾರು ಬಂದು ಕೂರಬಹುದು ಅಂತ ಎಲ್ಲರೂ ಕುತೂಹಲದಿಂದ ನೋಡುತ್ತಿದ್ದಾಗ, ಅಮಿತ್ ಶಾ, ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಯಡಿಯೂರಪ್ಪ, ಪಕ್ಷದ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅಲ್ಲಿಗೆ ಬಂದರು. ಆದರೆ ಈ ಸಂದರ್ಭದಲ್ಲಿ ನಿಂತೇ ಇದ್ದ ಅಮಿತ್ ಶಾ ಅಲ್ಲಿದ್ದ ೪ ಕುರ್ಚಿಗಳನ್ನು ನೋಡಿ ಮತ್ತೊಂದು ಕುರ್ಚಿ ತರಲು ಸೂಚಿಸಿದರು. ನಂತರ ಸಭೆಯ ಕಡೆ ಕಣ್ಣುಹಾಯಿಸಿ ಯಾರನ್ನೋ ಹುಡುಕ ತೊಡಗಿದ ಶಾ, ಕೊನೆಗೊಮ್ಮೆ ೨ನೇ ಸಾಲಿನಲ್ಲಿ ಕುಳಿತಿದ್ದ ಹಿರಿಯ ನಾಯಕ ಕೆ.ಎಸ್. ಈಶ್ವರಪ್ಪ ಅವರನ್ನು ಕರೆದು ತಮ್ಮ ಬಳಿ ಕೂರಿಸಿಕೊಂಡರಂತೆ.

ಶಾ ಅವರ ಈ ನಡೆ ಹಲವರಿಗೆ ಒಂದು ಅನುಮಾನ ಮೂಡಿಸಿದೆ- ವರಿಷ್ಠರು ಹುಡುಕುತ್ತಿರುವ ಹಿಂದುಳಿದ ವರ್ಗದ ಸಿಎಂ ಅಭ್ಯರ್ಥಿ ಈಶ್ವರಪ್ಪ ಅವರೇ ಇರಬಹುದಾ? ಎಂಬುದು ಈ ಅನುಮಾನ. ಅಂದಹಾಗೆ, ಆರೋಪವೊಂದಕ್ಕೆ ಸಿಲುಕಿ ಬೊಮ್ಮಾಯಿ ಸಂಪುಟದಿಂದ ಹೊರಬಂದ ಈಶ್ವರಪ್ಪ ಅವರಿಗೆ ಮರಳಿ ಮಂತ್ರಿಯಾಗಲು ಈ ಕ್ಷಣದವರೆಗೆ ಸಾಧ್ಯವಾಗಿಲ್ಲ. ಜತೆಗೆ, ‘ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ನನಗೆ ಮನಸ್ಸಿಲ್ಲ, ಹೀಗಾಗಿ ನೀನೇ ಸ್ಪರ್ಧಿಸು. ನಾನು ಪಕ್ಷದ ಕೆಲಸ ಮಾಡಿಕೊಂಡಿರುತ್ತೇನೆ’ ಅಂತ ಅವರು ಪುತ್ರ ಕಾಂತೇಶ್ ಅವರಿಗೆ ಹೇಳುತ್ತಿದ್ದಾರೆ.

ಹೀಗೆ ಒಂದು ಕಡೆಯಿಂದ ಸೈಡ್‌ವಿಂಗಿಗೆ ಸರಿಯುತ್ತಿರುವ ಈಶ್ವರಪ್ಪ ವರಿಷ್ಠರ ಕಣ್ಣಿಗೆ ಸಿಎಂ ಅಭ್ಯರ್ಥಿಯಾಗಿ ಕಾಣಿಸಲು ಸಾಧ್ಯವಿಲ್ಲ ಎಂಬ ಭಾವನೆ ಬರುವುದು ಸಹಜವಾದರೂ, ರಾಜಕಾರಣದಲ್ಲಿ ಪವಾಡಗಳು ಸಂಭವಿಸುವುದು ಅಸಹಜವೇನಲ್ಲ. ೧೯೯೧ರಲ್ಲಿ ದೇಶದ ಪ್ರಧಾನಿ ಗದ್ದುಗೆಗೇರಿದ ಪಿ.ವಿ. ನರಸಿಂಹರಾವ್, ಇದಾಗುವ ಕೆಲವೇ ದಿನಗಳ ಹಿಂದೆ ವಾನಪ್ರಸ್ಥಾಶ್ರಮಕ್ಕೆ ತೆರಳುವ ತಯಾರಿಯಲ್ಲಿದ್ದರು. ಆದರೆ ಯಾವಾಗ ಎಐಸಿಸಿ ಅಧ್ಯಕ್ಷ ರಾಜೀವ್ ಗಾಂಧಿಯವರ ಹತ್ಯೆಯಾಯಿತೋ, ಆಗ ಇದ್ದಕ್ಕಿದ್ದಂತೆ ನರಸಿಂಹರಾಯರ ದೆಸೆ ತಿರುಗಿ ಪ್ರಧಾನಿ ಹುದ್ದೆಗೇರುವಂತಾಯಿತು.

ಅಂದ ಹಾಗೆ, ಕೆಲವೇ ದಿನದ ಹಿಂದೆ ಈಶ್ವರಪ್ಪನವರ ವಿಷಯ ಬಂದಾಗ, ‘ಈ ಸಲ ಅವರಿಗೆ ಶಿವಮೊಗ್ಗದಲ್ಲಿ ಸ್ಪರ್ಧಿಸಲೂ ಟಿಕೆಟ್ ಸಿಗುವುದಿಲ್ಲ’ ಅಂತ ಬಿಜೆಪಿ ಪಾಳಯದಲ್ಲಿ ಗುಸುಗುಸು ಶುರುವಾಗಿತ್ತು. ಆದರೆ ಮೊನ್ನೆ ಅವರನ್ನು ಕರೆಸಿಕೊಂಡಿದ್ದ ಸಂಘ ಪರಿವಾರದ ನಾಯಕರು ‘ಚುನಾವಣೆ
ಯಲ್ಲಿ ಸ್ಪಽಸಲು ರೆಡಿಯಾಗಿ’ ಎಂದಿದ್ದಾರೆ. ಈ ಬೆಳವಣಿಗೆಯ ನಂತರ ಅವರ ಪುತ್ರ ಕಾಂತೇಶ್ ಕೂಡಾ, ‘ಇದೊಂದು ಸಲ ನೀವೇ ಸ್ಪರ್ಧಿಸಿ’ ಅಂತ ತಂದೆಗೆ ಹೇಳಿ ದ್ದಾರಂತೆ. ಮುಂದೇನೋ ಗೊತ್ತಿಲ್ಲ, ಆದರೆ ಒಂದಂತೂ ನಿಜ. ಇವತ್ತು ರಾಜಕಾರಣದಲ್ಲಿ ಉತ್ಪ್ರೇಕ್ಷೆಯಂತೆ ಕಾಣುವುದು ನಾಳೆ ಸಹಜವಾಗಿ ಕಾಣಬಹುದು. ಅದೇ ರೀತಿ, ಇವತ್ತು ಸಹಜವಾಗಿ ಕಾಣುತ್ತಿರುವುದು ನಾಳೆ ಉತ್ಪ್ರೇಕ್ಷೆಯಾಗಿ ಪರಿವರ್ತಿತವಾಗಬಹುದು.

ಅಂದಹಾಗೆ, ಸಿಎಂ ಹುದ್ದೆಗೆ ಹಿಂದುಳಿದ ಸಮುದಾಯ ದವರು ಬರಬಹುದು ಎಂಬ ಮಾತು ಈಶ್ವರಪ್ಪ ಒಬ್ಬರಿಗೇ ಸಂಬಂಧಿಸಿದ್ದಲ್ಲ, ಆದರೆ ಈ ಮಾತು ಬಂದಾಗ ಬಿಜೆಪಿ ಪಾಳಯದಲ್ಲಿ ಬೇರೆ ಹೆಸರುಗಳು ಪ್ರಸ್ತಾಪವಾಗುತ್ತಿಲ್ಲ.

ಮೈತ್ರಿ ಸರಕಾರ ಬೇಡ
ಈ ಮಧ್ಯೆ ಅಮಿತ್ ಶಾ ಅವರು, ‘ನಾವು ಮೈತ್ರಿ ಸರಕಾರದ ಪಾಲುದಾರರಾಗುವುದು ಬೇಡ; ಒಂದೋ ಸ್ವಯಂಬಲದ ಮೇಲೆ ಗೆದ್ದು ಸರಕಾರ ರಚಿಸಬೇಕು, ಇಲ್ಲವೇ ಪ್ರತಿಪಕ್ಷದ ಸ್ಥಾನದಲ್ಲಿ ಕೂರಬೇಕು’ ಎಂದು ರಾಜ್ಯದ ನಾಯಕರಿಗೆ ಹೇಳಿದ್ದಾರೆ. ‘ಚುನಾವಣೆಯ ನಂತರ ಜೆಡಿಎಸ್ ಜತೆ ಮೈತ್ರಿ ಸರಕಾರ ರಚಿಸಿದೆವು ಎಂದುಕೊಳ್ಳಿ, ಆಗ ನಮ್ಮಿಚ್ಛೆಯಂತೆ ಹೆಜ್ಜೆಯಿಡಲು ಸಾಧ್ಯವಿಲ್ಲ. ಪ್ರತಿಯೊಂದಕ್ಕೂ ಅವರನ್ನೇ ಕೇಳಬೇಕಾದ ಸ್ಥಿತಿ ಬರುತ್ತದೆ. ಜತೆಗೆ, ಮೈತ್ರಿ ಸರಕಾರ ಇಟ್ಟುಕೊಂಡು ೨೦೨೪ರ ಲೋಕಸಭಾ ಚುನಾವಣೆಗೆ ಹೋಗುವುದು ಕಷ್ಟ.

೨೦೧೯ರಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಉಭಯ ಪಕ್ಷಗಳಿಗೂ ಹಾನಿಮಾಡಿತು. ಕಾರಣ? ಅವುಗಳ ನಡುವಿನ ಕಚ್ಚಾಟ. ಅರ್ಥಾತ್, ಮೈತ್ರಿ ಸರಕಾರದ ಪಾಲುದಾರರಾಗಿ ಲೋಕಸಭಾ ಚುನಾವಣೆಗೆ ಹೋದರೆ ನಷ್ಟ ಗ್ಯಾರಂಟಿ. ಹೀಗಾಗಿ ಚುನಾವಣೆಯಲ್ಲಿ ಸ್ವಯಂಬಲದ ಮೇಲೆ ಗೆದ್ದು
ಅಽಕಾರ ಹಿಡಿಯೋಣ. ನೀವು ಬೂತ್ ಮಟ್ಟಗಳಲ್ಲಿ ಪಕ್ಷದ ಸಂಘಟನೆಯನ್ನು ಬಲಪಡಿಸಿ. ನಾವು ನಿಶ್ಚಿತವಾಗಿ ೧೨೫ ಕ್ಷೇತ್ರಗಳಲ್ಲಿ ಗೆಲ್ಲುತ್ತೇವೆ. ಈಗಿರುವ ಮಾಹಿತಿಯ ಪ್ರಕಾರ ನಾವು ೯೫ ಕ್ಷೇತ್ರಗಳಲ್ಲಿ ಗೆಲ್ಲುವುದು ಗ್ಯಾರಂಟಿ.

ಸಂಘಟನೆಗೆ ಇನ್ನಷ್ಟು ಒತ್ತುನೀಡಿದರೆ ಬಹುಮತ ನಿಶ್ಚಿತ. ಒಂದು ವೇಳೆ ನಮ್ಮೆಲ್ಲ ಪ್ರಯತ್ನಗಳ ಹೊರತಾಗಿಯೂ ೧೦೦ ಸೀಟುಗಳ ಗಡಿಯಲ್ಲಿ ನಿಂತೆವು ಎಂದುಕೊಳ್ಳಿ, ಆಗ ೨೦೧೮ರಲ್ಲಿಟ್ಟ ಹೆಜ್ಜೆ ಇಡೋಣ. ಅರ್ಥಾತ್, ಕಾಂಗ್ರೆಸ್-ಜೆಡಿಎಸ್ ಪರಸ್ಪರ ಕೈಜೋಡಿಸಿ ಸರಕಾರ ಮಾಡಲು ಬಿಡೋಣ. ಮುಂದೆ ಆರೇ ತಿಂಗಳಲ್ಲಿ ಉಭಯ ಪಕ್ಷಗಳ ನಡುವೆ ಕಚ್ಚಾಟ ಶುರುವಾಗುತ್ತದೆ. ಆಗ ಆ ಪಕ್ಷಗಳಿಂದ ಶಾಸಕರನ್ನು ಸೆಳೆದು ಸರಕಾರ ಮಾಡೋಣ’ ಎಂಬುದು ಅಮಿತ್ ಶಾ ಸೂಚನೆ.

ಅಂದಹಾಗೆ, ಕಾಂಗ್ರೆಸ್ಸಿನ ಟಿಕೆಟ್ ಗೊಂದಲ ಅದನ್ನು ಮುಳುಗಿಸುತ್ತದೆ, ಬಿಜೆಪಿಯ ಹಡಗು ದಡ ಸೇರುವಂತೆ ಮಾಡುತ್ತದೆ ಎಂಬುದು ಅಮಿತ್ ಶಾ ಅವರಿಗಿರುವ ವಿಶ್ವಾಸ. ಕರ್ನಾಟಕದ ೬೨ ವಿಧಾನಸಭಾ ಕ್ಷೇತ್ರಗಳಲ್ಲಿ ಸಿದ್ದರಾಮಯ್ಯ- ಡಿಕೆಶಿ ಬೆಂಬಲಿಗರ ನಡುವೆ ಟಿಕೆಟ್‌ಗಾಗಿ ‘ಟಫ್ ಫೈಟ್’ ಇದೆ.
ನಮ್ಮ ಪಕ್ಷದಲ್ಲಿ ಅದು ಇಲ್ಲ ಅಂತಲ್ಲ, ಆದರೆ ಇದು ೧೮ ಕ್ಷೇತ್ರಗಳಲ್ಲಷ್ಟೇ ಇದೆ ಅಂತ ಶಾ ವಿವರಿಸಿದ್ದಾರಂತೆ. ನಿಟ್ಟುಸಿರು ಬಿಟ್ಟ ಬಿಜೆಪಿ ಶಾಸಕರು
ಇನ್ನು, ಚುನಾವಣೆಯಲ್ಲಿ ತಮಗೆ ಪಕ್ಷದ ಟಿಕೆಟ್ ತಪ್ಪಬಹುದು ಎಂಬ ಆತಂಕದಲ್ಲಿದ್ದ ಬಿಜೆಪಿ ಶಾಸಕರು ನಿಟ್ಟುಸಿರು ಬಿಡುತ್ತಿದ್ದಾರೆ.

ಅಂದಹಾಗೆ, ಹಲವು ಮಾನದಂಡಗಳನ್ನು ರಚಿಸಿ, ಇದರ ವ್ಯಾಪ್ತಿಗೆ ಬರುವ ಶಾಸಕರನ್ನು ಕಿತ್ತುಹಾಕುವ ಯೋಚನೆ ಬಿಜೆಪಿಯ ವರಿಷ್ಠರಿಗಿತ್ತು. ಆದರೆ ದಿನಗಳೆದಂತೆ, ‘ಕರ್ನಾಟಕವು ಗುಜರಾತ್ ಅಲ್ಲ’ ಎಂಬುದು ವರಿಷ್ಠರಿಗೆ ಸ್ಪಷ್ಟವಾಗಿದೆ. ಹೀಗಾಗಿ ಕರ್ನಾಟಕದಲ್ಲಿ ಪಕ್ಷದ ಬಹುತೇಕ ಶಾಸಕರಿಗೆ ಟಿಕೆಟ್ ನೀಡುವ ಇಂಗಿತ ಅಮಿತ್ ಶಾ ಅವರಿಂದ ವ್ಯಕ್ತವಾಗಿದೆ. ತೀರಾ ಅನಿವಾರ್ಯವಾದರೆ ೪-೫ ಮಂದಿ ಶಾಸಕರಿಗೆ ಟಿಕೆಟ್ ತಪ್ಪಿಸಬಹುದೇ ಹೊರತು ತುಂಬ ಜನರಿಗಲ್ಲ ಎಂಬುದು ಶಾ ಇಂಗಿತ. ಕಾರಣ? ಪ್ರತಿಯೊಬ್ಬ ಶಾಸಕರೂ ಕ್ಷೇತ್ರದಲ್ಲಿ ನೆಟ್‌ವರ್ಕ್ ಇಟ್ಟುಕೊಂಡಿರುತ್ತಾರೆ.

ಹೀಗಿರುವಾಗ ಅವರಿಗೆ ಟಿಕೆಟ್ ತಪ್ಪಿಸಿದರೆ ಉಲ್ಟಾ ಹೊಡೆಯುತ್ತಾರೆ. ಹೀಗಾಗಿ ಟಿಕೆಟ್ ತಪ್ಪಿಸುವ ಮುನ್ನ ಅವರನ್ನು ಸಮಾಧಾನಿಸುವುದು ಮುಖ್ಯ ಎಂಬುದು ಶಾ ನಿಲುವು. ಅಂದಹಾಗೆ, ಈ ಬಾರಿ ಪಕ್ಷದ ಹಾಲಿ ಶಾಸಕರ ಪೈಕಿ ೨೬ ಮಂದಿಗೆ ಟಿಕೆಟ್ ಕೊಡಬಾರದು ಎಂಬ ಇಂಗಿತ ಆರೆಸ್ಸೆಸ್
ನಲ್ಲಿದೆಯಂತೆ. ವಯೋಮಿತಿ ಮೀರಿದವರು, ಕ್ರಿಯಾಶೀಲರಲ್ಲದವರು, ಜನರ ಪ್ರೀತಿ ಕಳೆದುಕೊಂಡವರು, ಸಂಘದ ಸಭೆಗಳನ್ನು ನಿರ್ಲಕ್ಷಿಸಿದವರು ಆರೆಸ್ಸೆಸ್‌ನ ಬ್ಲಾಕ್ ಲಿಸ್ಟ್ ನಲ್ಲಿದ್ದಾರೆ. ಆದರೆ ಇಂಥ ಪಟ್ಟಿ ತಯಾರಿಸಲು ಈ ಹಿಂದೆ ಹೇಳಿದ್ದ ಅಮಿತ್ ಶಾ ಈಗ ಇದ್ದಕ್ಕಿದ್ದಂತೆ ಈ ಪಟ್ಟಿಯ ಬಗ್ಗೆ
ಆಸಕ್ತಿ ಕಳೆದುಕೊಂಡಿದ್ದಾರೆ. ಮುಂದೇನಾಗುತ್ತದೋ? ಕಾದುನೋಡಬೇಕು.