Sunday, 19th May 2024

ಇದು ಬಿಂದುಪೂರ್ವಕ ಡಕಾರ – ಬ್ರಹ್ಮಾಂಡ ಶಬ್ದಭಾಂಡಾರ !

ತಿಳಿರು ತೋರಣ

srivathsajoshi@yahoo.com

ಬಿಂದುಪೂರ್ವಕ ಡಕಾರ ಅಂದರೆ ಅನುಸ್ವಾರ ಆದ ಮೇಲೆ ಡ ಕಾಗುಣಿತಾಕ್ಷರ ಬರುವುದು. ಅನುಸ್ವಾರಕ್ಕೆ ಮೊದಲಿನ ಅಕ್ಷರ ಯಾವುದಿದ್ದರೂ ಆಗುತ್ತದೆ. ದೇವನಾಗರಿಯಲ್ಲಿ ಅನುಸ್ವಾರವನ್ನು ಅಕ್ಷರದ ಮೇಲೊಂದು ಬಿಂದುವಿನಂತೆ ಬರೆಯುತ್ತಾರಲ್ಲ ಹಾಗಾಗಿ ಬಿಂದುಪೂರ್ವಕ ಡಕಾರ ಎಂದು ಹೆಸರು. ಈ ಲೇಖನವನ್ನೋದಿ ಮುಗಿಸುವ ಹೊತ್ತಿಗೆ ನಿಮಗೆ ಮನದಟ್ಟಾಗುತ್ತದೆ ಏನೋ ವಿಶೇಷವಿದೆ ಈ ಬಿಂದುಪೂರ್ವಕ ಡಕಾರದ್ದು ಅಂತ. ಅದು ಇರುವ ಪದಗಳು ಮಿಕ್ಕೆಲ್ಲಕ್ಕಿಂತ ಹೆಚ್ಚು ಪವರ್‌ಫುಲ್ ಆಗಿ ಕಾಣಿಸುತ್ತವೆ ಮತ್ತು ಕೇಳಿಸುತ್ತವೆ ಅಂತ.

ಅರ್ಜುನ: ‘ಭಂಡರೆದೆ ಗುಂಡಿಗೆಯ ಖಂಡಿಸುತ ರಣಚಂಡಿಗೌತಣವೀವ ಈ ಗಾಂಡೀವಿ… ಗಂಡುಗಲಿಗಳ ಗಂಡ ಉದ್ದಂಡ ಭೂಮಂಡಲದೊಳಖಂಡ ಕೀರ್ತಿಪ್ರಚಂಡ…’ ಬಭ್ರುವಾಹನ: ‘ಚಂಡನೋ ಪ್ರಚಂಡನೋ ಪುಂಡನೋ ನಿರ್ಧರಿಸುವುದು ರಣರಂಗ…’ ಗೀತರಚನಕಾರ ಹುಣಸೂರು ಕೃಷ್ಣಮೂರ್ತಿಯವರ ಅದ್ಭುತ ಶಬ್ದಜಾಲ! ಎಷ್ಟು ಚೆನ್ನಾಗಿ ಪದಗಳನ್ನು ಹೆಣೆದಿದ್ದಾ ರೆಂದರೆ ಚಂಡನೋ ಪ್ರಚಂಡನೋ ಎಂದು ನಾವು ಅವರ ಬಗ್ಗೆಯೇ ಸೋಜಿಗ ಪಡಬೇಕು.

ಇದೇ ರೀತಿ ಭಕ್ತಕುಂಬಾರ ಚಿತ್ರಕ್ಕಾಗಿ ಅವರು ಬರೆದ ‘ಎಲ್ಲಿ ಮರೆಯಾದೆ ವಿಠಲ ಏಕೆ ದೂರಾದೆ…’ ಗೀತೆಯ ‘ಎತ್ತೆತ್ತಲೀಗ ಕಗ್ಗತ್ತ ಲಾಯ್ತು ಗೊತ್ತಾಗದಾಯ್ತೆ ವಿಠಲ… ಮುತ್ತಂಥ ನಿನ್ನ ಕತುತ್ತ ತಿನ್ನೋ ಹೊತ್ತಾಯ್ತು ಬಾರೋ ವಿಠಲ… ಬತ್ತಿರೋ ಬದುಕನೆತ್ತಿ ನೀ ಬೆಳಕ ಹೊತ್ತಿಸಿ ಕಾಯೋ ವಿಠಲ… ಹೆತ್ತವಳಂತೆ ನೀನೆತ್ತಿಕೊಂಡು ನನ್ನತ್ತ ನೋಡೋ ವಿಠಲ…’ ಸಾಲುಗಳಲ್ಲಿ ಒತ್ತರಿಸಿ ಬರುವ ‘ತ್ತ’ಕಾರವೂ ಅಷ್ಟೇ ಚಿತ್ತಾಪಹಾರಿ.

ಇರಲಿ, ಸದ್ಯಕ್ಕೆ ನಾವಿಲ್ಲಿ ಬಭ್ರುವಾಹನ ಚಿತ್ರಗೀತೆಯ ರೆಫರೆನ್ಸನ್ನಷ್ಟೇ ಎತ್ತಿಕೊಳ್ಳೋಣ. ಶಬ್ದಾಲಂಕಾರದಿಂದಲೇ ರಣರಂಗದ ದೃಶ್ಯ ನಮ್ಮ ಕಣ್ಮುಂದೆ ಬರುವಂತಾಗುವ ಆ ಶಬ್ದಗಳನ್ನು ಇನ್ನೊಮ್ಮೆ ಸೂಕ್ಷ್ಮವಾಗಿ ಗಮನಿಸೋಣ: ಭಂಡ, ಗುಂಡಿಗೆ, ಖಂಡಿ ಸುತ, ರಣಚಂಡಿ, ಗಾಂಡೀವಿ, ಗಂಡುಗಲಿ, ಗಂಡ, ಉದ್ದಂಡ, ಮಂಡಲ, ಅಖಂಡ, ಪ್ರಚಂಡ, ಚಂಡ, ಪುಂಡ… ಎಲ್ಲದರಲ್ಲೂ ಒಂದು ಸಾಮಾನ್ಯ ಅಂಶವನ್ನು ನೋಡಿದಿರಾ? ಹೌದು ಈ ಎಲ್ಲ ಪದಗಳಲ್ಲೂ ಡ ಅಕ್ಷರ ಬರುತ್ತದೆ ಅಂತಷ್ಟೇ ಹೇಳಿದಿರಾದರೆ ನೀವು ಜಸ್ಟ್ ಪಾಸ್. ಪ್ರತಿಯೊಂದರಲ್ಲೂ ಅನುಸ್ವಾರದ ಬಳಿಕ ಡಕಾರ ಇದೆ ಎಂದು ಹೇಳಿದಿರೋ, ನಿಮಗೆ ಇಂದಿನ ಈ ಬಿಂದು ಪೂರ್ವಕ ಡಕಾರ ಪದಗಳ ಬ್ರಹ್ಮಾಂಡದೊಳಕ್ಕೆ ಬರಲು ಫ್ರೀ ಪಾಸ್!

ಬಿಂದುಪೂರ್ವಕ ಡಕಾರ ಅಂದರೆ ಅದೇ- ಅನುಸ್ವಾರ ಆದ ಮೇಲೆ ಡ ಕಾಗುಣಿತಾಕ್ಷರ ಬರುವುದು. ಅನುಸ್ವಾರಕ್ಕೆ ಮೊದಲಿನ ಅಕ್ಷರ ಯಾವುದಿದ್ದರೂ ಆಗುತ್ತದೆ. ದೇವನಾಗರಿಯಲ್ಲಿ ಅನುಸ್ವಾರವನ್ನು ಅಕ್ಷರದ ಮೇಲೊಂದು ಬಿಂದುವಿನಂತೆ (ನಮ್ಮ ಕನ್ನಡ
ಲಿಪಿಯಲ್ಲಾದರೆ ಸೊನ್ನೆಯಂತೆ) ಬರೆಯುತ್ತಾರಲ್ಲ ಹಾಗಾಗಿ ಬಿಂದುಪೂರ್ವಕ ಡಕಾರ ಎಂದು ಹೆಸರು. ಅದರಲ್ಲೇನು ವಿಶೇಷ,
ಅನುಸ್ವಾರದ ಬಳಿಕ ಡ ಅಲ್ಲದೆ ಬೇರೆ ಅಕ್ಷರ ಬರುವ ಪದಗಳು ಬೇಕಾದಷ್ಟಿವೆಯಲ್ಲ ಎಂದು ನೀವು ಕೇಳಬಹುದು.

ಇಲ್ಲವೆಂದಿಲ್ಲ, ಆದರೆ ಈ ಲೇಖನವನ್ನೋದಿ ಮುಗಿಸುವ ಹೊತ್ತಿಗೆ ನಿಮಗೆ ಮನದಟ್ಟಾಗುತ್ತದೆ ಏನೋ ವಿಶೇಷವಿದೆ ಈ ಬಿಂದು ಪೂರ್ವಕಡಕಾರದ್ದು ಅಂತ. ಅದು ಇರುವ ಪದಗಳು ಮಿಕ್ಕೆಲ್ಲಕ್ಕಿಂತ ಹೆಚ್ಚು ಪವರ್‌ಫುಲ್ ಆಗಿ ಕಾಣಿಸುತ್ತವೆ ಮತ್ತು ಕೇಳಿಸುತ್ತವೆ ಅಂತ. ಉದಾಹರಣೆಗಳನ್ನು ಪಟ್ಟಿಮಾಡಲಿಕ್ಕೆ, ಸತ್ಯವೇ ಭಗವಂತನೆಂದ ಪುಣ್ಯಕೋಟಿಯ ಕಥೆಯನ್ನೇ ಮೊದಲಿಗೆ ಆಯ್ದು ಕೊಳ್ಳೋಣ.

ಇದರಲ್ಲಿ ಬರುವ ‘ಖಂಡವಿದೆಕೋ ಮಾಂಸವಿದೆಕೋ ಗುಂಡಿಗೆಯ ಬಿಸಿ ರಕ್ತವಿದೆಕೋ ಚಂಡವ್ಯಾಘ್ರನೇ ನೀನಿದೆಲ್ಲವ ನುಂಡು ಸಂತಸದಿಂದಿರು…’ ನುಡಿ ಸುಪ್ರಸಿದ್ಧ. ಕರುವನ್ನು ತಬ್ಬಲಿಯಾಗಿಸಿದರೂ ಸ, ಕೊಟ್ಟ ಮಾತಿಗೆ ತಪ್ಪಲಾರೆನೆಂದು ಮರಳಿ ಹುಲಿಯ ಬಳಿ ಬಂದು ಪುಣ್ಯಕೋಟಿ ಹೇಳುವುದಿದು. ಇದರಲ್ಲಿ ಬರುವ ಖಂಡ, ಗುಂಡಿಗೆ, ಚಂಡವ್ಯಾಘ್ರ, ಉಂಡು… ಇವೆಲ್ಲ ಬಿಂದು ಪೂರ್ವಕ ಡಕಾರಗಳು. ಗೋವಿನ ಸ್ವಾಭಿಮಾನದ ಈ ನುಡಿ, ಡಕಾರಗಳಿಂದ ಶಕ್ತಿಯುತವಾಗಿ, ಹುಲಿಯ ಗುಂಡಿಗೆಗೆ ಬಹುಶಃ ಗುಂಡೇಟಿನಂತೆ ಬಂದೆರಗುತ್ತದೆ. ಹುಲಿ ಮನಸ್ಸು ಬದಲಾಯಿಸಿ ತಾನೇ ಸಾಯುವ ನಿರ್ಧಾರ ಮಾಡುತ್ತದೆ.

ಅಂದಹಾಗೆ ಪುಣ್ಯಕೋಟಿಯ ಹಾಡು ನಮ್ಮ ಪಠ್ಯಪುಸ್ತಕಗಳಲ್ಲಿದ್ದದ್ದು, ಮತ್ತು ‘ತಬ್ಬಲಿಯು ನೀನಾದೆ ಮಗನೆ’ ಚಿತ್ರದಲ್ಲಿ ಅಳವಡಿಸಿಕೊಂಡಿರುವುದು ಕೆಲವೇ ಚರಣಗಳನ್ನಾಯ್ದುಕೊಂಡ ಸಂಕ್ಷಿಪ್ತ ಆವೃತ್ತಿ. ಮೂಲದಲ್ಲಿ 200ಕ್ಕೂ ಹೆಚ್ಚು ಚರಣಗಳಿವೆ ಆ ಹಾಡಿನಲ್ಲಿ! ಆರಂಭದಲ್ಲಿ ಅರುಣಾದ್ರಿ ಬೆಟ್ಟದ ಬಣ್ಣನೆಯಲ್ಲೂ ಒಂದು ಚರಣ ಬಿಂದುಪೂರ್ವಕ ಡಕಾರಗಳದಿದೆ: ‘ತೊಂಡೆ ತೊಟ್ಟಿಯು ಸೊಂಡೆ ಗಿಡ ಭೂ- ಮಂಡಲದೊಳು ಬೆಳೆವ ತೊಳಸಿಯು| ಉಂಡು ಸಂತಸಗೊಂಬ ಮಾದಳೆ ತಂಡತಂಡದಿ ಮೆರೆದುವು…’ ಹಾಗೆಯೇ, ಕೊನೆಯಲ್ಲಿ ಹುಲಿ ಸತ್ತು ಪುಣ್ಯಕೋಟಿಯ ಸತ್ಯಸಂಧತೆಗೆ ಜಯವಾದಾಗ ಅದನ್ನು ನೋಡಲು ಆಕಾಶದಲ್ಲಿ ತ್ರಿಮೂರ್ತಿಗಳು ಬಂದರು, ಅವರನ್ನು ಪ್ರಾಣಿಗಳೆಲ್ಲ ನಮಿಸಿದವು ಎಂಬ ಬಣ್ಣನೆಯ ಎರಡು ಚರಣಗಳು: ‘ತಂಡದಮರರ ಕೂಡಿ ಬರೆ ಮುಂ- ಕೊಂಡು ಗಿರಿಯಲಿ ಬಿದ್ದ ಮೃಗಗಳ| ಕಂಡು ತ್ರೈಮೂರ್ತಿಗಳು ವಿಸ್ಮಯ- ಗೊಂಡರಾಗಲೆ ಮನದೊಳು…’ ಮತ್ತು, ‘ಕಂಡು ತ್ರೈಮೂರ್ತಿಗಳ ಹರುಷವ- ಕೊಂಡು ಮೃಗಗಳು ಭಕ್ತಿಯಿಂದಲಿ| ತಂಡವಾಗಿಯೆ ಕಮುಗಿದು ಬಲ- ಗೊಂಡು ಸ್ತುತಿಯನು ಗದವು…’ ಇವುಗಳಲ್ಲಿರುವ ಬಿಂದುಪೂರ್ವಕ ಡಕಾರ ಗಮನಿಸಿ.

ಇನ್ನು ಒಂದಷ್ಟು ದಾಸರ ಪದಗಳನ್ನು ನೋಡೋಣ. ‘ಕಂಡೆ ನಾ ಗೋವಿಂದನ ಪುಂಡರೀಕಾಕ್ಷ ಪಾಂಡವಪಕ್ಷ ಕೃಷ್ಣನ…’,
‘ಕಂಡು ಕಂಡು ನೀ ಎನ್ನ ಕಬಿಡುವರೇ ಕೃಷ್ಣ ಪುಂಡರೀಕಾಕ್ಷ ಶ್ರೀ ಪುರುಷೋತ್ತಮ ದೇವ…’ ಮುಂತಾದ ಪಲ್ಲವಿಗಳು, ‘ದಂಡಿಗೆ
ಬೆತ್ತ ಹಿಡಿಯೋದಕ್ಕೆ ಮಂಡೆ ಮಾಚಿ ನಾಚುತಲಿದ್ದೆ… ಹೆಂಡತಿ ಸಂತತಿ ಸಾವಿರವಾಗಲಿ ದಂಡಿಗೆ ಬೆತ್ತ ಹಿಡಿಸಿದಳಯ್ಯ…’
(ಆದದ್ದೆಲ್ಲ ಒಳಿತೇ ಆಯಿತು), ‘ಖಂಡಸಕ್ಕರೆ ಒಲ್ಲದಂತೆ… ಕಂಡಾ ಎಲವು ಕಳೆದೀತಂತೆ… ಹೆಂಡಿರ ಮಕ್ಕಳ ನೆರಹೋದಂತೆ… ಕೊಂಡೊಯ್ವಾಗ ಯಾರಿಲ್ಲವಂತೆ…’ (ಕುರುಡುನಾಯಿ ಸಂತೆಗೆ ಬಂತಂತೆ), ‘ಅಂಡಜವಾಹನ ಅನಂತಶಯನ ಪುಂಡರೀಕಾಕ್ಷ
ಶ್ರೀಪರಮಪಾವನ ಹಿಂಡುದೈವದ ಗಂಡ ಉದ್ದಂಡನೇ ನಮ್ಮ ಪಾಂಡುರಂಗ ಶ್ರೀಪುರಂದರವಿಠಲ…’ (ಜೋ ಜೋ ಶ್ರೀಕೃಷ್ಣ)
ಮುಂತಾದ ಚರಣಗಳು ಬಿಂದುಪೂರ್ವಕ ಡಕಾರದವೇ.

ದಾಸರಾದ ಮೇಲೆ ಕುಮಾರವ್ಯಾಸ. ಕರ್ಣಾಟಭಾರತ ಕಥಾಮಂಜರಿಯ ಸಭಾಪರ್ವದಿಂದ ಒಂದು ಭಾಮಿನಿ ಷಟ್ಪದಿ: ‘ಕಂಡು ಕೃಷ್ಣನನಿವರ ಕಾಣಿಸಿ| ಕೊಂಡನರಸು ಕ್ಷೇಮಕುಶಲವ| ಕಂಡು ಬೆಸಗೊಳಲೇಕೆ ಬಹು ಮಾತಿನಲಿ ಫಲವೇನು| ಕಂಡೆವ
ನಿನ್ನಮಳ ಕರುಣಾ| ಖಂಡ ಜಲಧಿಯ ಭಕ್ತಜನಕಾ| ಖಂಡಲ ಧ್ರುಮವೆಂದು ತಕ್ಕೈಸಿದನು ಹರಿ ಪದವ…’ (ಧರ್ಮರಾಯನು
ಕೃಷ್ಣ ಭೀಮಾರ್ಜುನರನ್ನು ಕಂಡು ಅವರ ಕ್ಷೇಮವನ್ನು ವಿಚಾರಿಸಿ, ಆಸನವನ್ನಲಂಕರಿಸಲು ಕೇಳಿಕೊಂಡು, ಇಂತಹ  ಉಪಚಾರದ ಪ್ರಯಾಸಗಳೇಕೆ? ಅಖಂಡ ಕರುಣಾಸಮುದ್ರನೂ, ಭಕ್ತಜನರಿಗೆ ಕಲ್ಪವೃಕ್ಷದಂತಿರುವವನೂ ಆದ ನಿನ್ನನ್ನು ಕಂಡೆವು, ಇದೇ ಅತ್ಯಂತ ಮುಖ್ಯವಾದುದು ಎಂದು ಹೇಳಿ ಕೃಷ್ಣನ ಪಾದಗಳಿಗೆ ಎರಗಿದನು).

ಹಾಗೆಯೇ ಸರ್ವಜ್ಞನ ವಚನದಲ್ಲೊಂದು ಬಿಂದು ಪೂರ್ವಕ ಡಕಾರ: ‘ಉಂಡು ಕೆಂಡವ ಕಾಸಿ ಉಂಡು ಶತಪಥ ನಡೆದು| ಉಂಡೆಡದ ಮಗ್ಗುಲಲಿ ಮಲಗಿದರೆ ವದ್ಯನ| ಭಂಡಾಟವಿಲ್ಲ ಸರ್ವಜ್ಞ’. ಅಂತೆಯೇ ಮಂಕುತಿಮ್ಮನ ಕಗ್ಗದಲ್ಲೂ ಒಂದು: ‘ಕಂಡ ದವಕ್ಕೆಲ್ಲ ಕಯ ಮುಗಿದೇನಹುದು? ಚಂಡಚv ರೋಪಾಯದಿಂದಲೇನಹುದು? ತಂಡುಲದ ಹಿಡಿಯೊಂದು ತುಂಡು  ಬಟ್ಟೆಯ ದೊಂದು| ಅಂಡಲೆತವಿದಕೇನೊ ಮಂಕುತಿಮ್ಮ’ (ಕಂಡ ಕಂಡ ದವಕ್ಕೆಲ್ಲ ಕ ಮುಗಿದರೇನಾಗುತ್ತದೆ? ಕ್ರೂರವಾದ ಅಥವಾ ಚತುರ ವಾದ ಉಪಾಯದಿಂದಾದರೂ ಏನಾಗುತ್ತದೆ? ನಮಗೆ ಬೇಕಾಗಿರುವುದೇನು? ಹೊಟ್ಟೆ ತುಂಬಲು ಒಂದು ಹಿಡಿ ಅಕ್ಕಿ. ಉಡಲು ಒಂದು ತುಂಡು ಬಟ್ಟೆ.

ಇಷ್ಟಕ್ಕಾಗಿಯೇ ಇಷ್ಟು ಅಲೆತವೇ!?) ಇನ್ನು, ‘ಹಪ್ಪಳ ಸಂಡಿಗೆ ಮುಂದಿನ ಸಂಡೆಗೆ’ ಎನ್ನುತ್ತ ಮಂಡೆಯಲ್ಲಿ ಸದಾ ಪದಪಂಡಿತ ಆಗಿರುವ, ತನ್ನ ಹೆಸರಿನಲ್ಲೇ ಬಿಂದುಪೂರ್ವಕ ಡಕಾರವಿರುವ ಡುಂಡಿರಾಜರನ್ನು ಮರೆಯಲುಂಟೇ? ಆದರೆ ಬಿಂದುಪೂರ್ವಕ ಡಕಾರ ಬರೀ ಕನ್ನಡದ ಡಿಂಡಿಮದಲ್ಲಷ್ಟೇ ವಿಶೇಷ ಅಂತಂದ್ಕೊಳ್ಳಬೇಡಿ. ಸಂಸ್ಕೃತದಲ್ಲಿರುವ ಸ್ತೋತ್ರಗಳ ಉದಾಹರಣೆ ಬೇಕೇ? ತಗೊಳ್ಳಿ, ಮಹಿಷಾಸುರಮರ್ದಿನಿ ಸ್ತೋತ್ರದಲ್ಲಿ ಬರುವ ‘ಅಯಿ ಶತಖಂಡ ವಿಖಂಡಿತರುಂಡ ವಿತುಂಡಿತಶುಂಡ ಗಜಾಧಿಪತೇ…
ರಿಪುಗಜಗಂಡ ವಿದಾರಣಚಂಡ ಪರಾಕ್ರಮಶುಂಡ ಮೃಗಾಧಿಪತೇ… ನಿಜಭುಜದಂಡ ನಿಪಾತಿತಖಂಡ ವಿಪಾತಿತ ಮುಂಡ
ಭಟಾಧಿಪತೇ…’ ಇದನ್ನು ಹೇಳುವಾಗಲೇ ಮೈನವಿರೇಳುತ್ತದಲ್ಲ? ಬಿಂದುಪೂರ್ವಕ ಡಕಾರ ಪವರ್‌ಫುಲ್ ಆಗಿರುತ್ತದೆ ಅಂದಿದ್ದು ಸುಮ್ಮನೆ ಅಲ್ಲ.

ಶಂಕರಾಚಾರ್ಯರ ರಚನೆ ಶಿವಭುಜಂಗಂ ಸ್ತೋತ್ರದ್ದೊಂದು: ‘ಗಲದ್ದಾನಗಂಡಂ ಮಿಲದ್ಭೃಂಗಷಂಡಂ ಚಲಚ್ಚಾರುಶುಂಡಂ ಜಗತ್ತ್ರಾಣಶೌಂಡಮ್| ಕನದ್ದಂತಕಾಂಡಂ ವಿಪದ್ಭಂಗಚಂಡಂ ಶಿವಪ್ರೇಮಪಿಂಡಂ ಭಜೇ ವಕ್ರತುಂಡಂ…’ ಇನ್ನೊಂದು ನಮ್ಮೆಲ್ಲರ ಫೇವರಿಟ್ ವಕ್ರತುಂಡನನ್ನು ಕುರಿತಾದ್ದು: ‘ದೋರ್ದ್ಯೋತದ್ದಂತಖಂಡಃ ಸಕಲಸುರಗಣಾಡಂಬರೇಷು ಪ್ರಚಂಡಃ| ಸಿಂದೂರಾಕೀರ್ಣಗಂಡಃ ಪ್ರಕಟಿತ ವಿಲಸಚ್ಚಾರುಚಾಂದ್ರೀಯಖಂಡಃ| ಗಂಡಸ್ಥಾನಂತಘಂಡಃ ಸ್ಮರಹರತನಯಃ ಕುಂಡಲೀಭೂತಶುಂಡೋ| ವಿಘ್ನಾನಾಂ ಕಾಲದಂಡಃ ಸ ಭವತು ಭವತಾಂ ಭೂತಯೇ ವಕ್ರತುಂಡಃ|’ ವಾದಿರಾಜರು ರಚಿಸಿದ
ದಶಾವತಾರ ಸ್ತೋತ್ರದಲ್ಲಿಯೂ ಒಂದು ಚರಣ ಹೀಗೆ ಬರುತ್ತದೆ: ‘ಖಂಡೀಭವದ್ಬಹುಲ ಡಿಂಡೀರಜೃಂಭಣ ಸುಚಂಡೀಕೃತೋದಧಿಮಹಾ| ಕಾಂಡಾತಿಚಿತ್ರಗತಿ ಶೌಂಡಾದ್ಯಹಮರದ ಭಾಂಡಾಪ್ರಮೇಯಚರಿತ| ಚಂಡಾಶ್ವಕಂಠಮದ ಶುಂಡಾಲದುರ್ಹೃದಯ ಗಂಡಾಭಿಖಂಡಕರದೋ| ಚಂಡಾಮರೇಶಹಯ ತುಂಡಾಕೃತೇದೃಶಮ ಖಂಡಾಮಲಂಪ್ರದಿಶಮೇ…’ ಇವುಗಳನ್ನು ದೊಡ್ಡ ಧ್ವನಿಯಲ್ಲಿ ಪಠಿಸಿದರೆ, ಹೇಳುವವರಿಗೂ ಕೇಳುವವರಿಗೂ ಕಿವಿಯಲ್ಲಿ ಡಂ ಡಂ ಡಮರು ಅಥವಾ
ಯಕ್ಷಗಾನದ ಚೆಂಡೆ ಬಡಿದಂಥ ಅನುಭವ!

ಕೇಳುವ ಕಿವಿಯಿರಲು ನೋಡುವ ಕಣ್ಣಿರಲು ಎಲ್ಲೆಲ್ಲೂ ಸಂಗೀತವೇ ಎಂಬಂತೆ ಎಲ್ಲೆಲ್ಲೂ ಬಿಂದುಪೂರ್ವಕ ಡಕಾರವೇ.
ಮನೆಯಲ್ಲಿ ಗಂಡ-ಹೆಂಡತಿ ಅನ್ಯೋನ್ಯವಾಗಿರಲಿಕ್ಕೆ ಅದು ಬೇಕೇಬೇಕು. ಇಲ್ಲವಾದರೆ ‘ಗಂಡ ಬೇ(ಭೇ)ರುಂಡ’ ಆಗಬಾರದಲ್ವಾ? ಹಾಗೆಯೇ ‘ಗಂಡಹೆಂಡಿರ ಜಗಳ ಉಂಡು ಮಲಗುವತನಕ’ದಂಥ ಗಾದೆಯಲ್ಲಿ, ‘ಹೆಂಡ-ಸಾರಾಯಿ ಸಹವಾಸ ಹೆಂಡತಿಮಕ್ಕಳ ಉಪವಾಸ’ದಂಥ ಘೋಷಣೆಯಲ್ಲಿ, ‘ತೊಂಡೆಕಾಯಿ ಬೆಂಡೆಕಾಯಿ ತೋಟದಲ್ಲಿದೆ… ಉಂಡೆಉಂಡೆ ಬೆಲ್ಲಬೆಲ್ಲ ಡಬ್ಬಿಯಲ್ಲಿದೆ’ ಮತ್ತು ‘ದದಧೋಂ ಧೋಂಡ… ಬಾಳೇಕಾಯಿ ಬೋಂಡ… ಬೋಂಡ ತಿಂದ ಗುಂಡ… ಭಾಳ ತಿಂದ ಭಂಡ… ಭಂಡ ಮಲಗಿಕೊಂಡ’ ನಂಥ ಶಿಶುಗೀತೆಗಳಲ್ಲಿ, ‘ಸಂಡೇ ಹೋ ಯಾ ಮಂಡೇ ರೋಜ್ ಖಾವೋ ಅಂಡೇ…’ನಂಥ ಜಾಹಿರಾತುಗಳಲ್ಲಿ, ಕೊನೆಗೆ ‘ದಂಡ ಪಿಂಡ’ದಂಥ ಬೈಗುಳದಲ್ಲೂ ಅದು ನಮಗೆ ಕಾಣಿಸಿಕೊಳ್ಳಬೇಕು.

ಇಲ್ಲದಿದ್ದರೆ ನಾವೇ ಗಮನವಿಟ್ಟು ‘ಕಂಡುಕೊಂಡೇನ್ ಕಂಡುಕೊಂಡೇನ್’ ಮಾಡಿಕೊಳ್ಳಬೇಕು. ಏಕೆಂದರೆ ಆಘ್ರಾಣಿಸುವ
ಮನಸ್ಸಿದ್ದರೆ ಪರಿಮಳವು ದುಂಡುಮಲ್ಲಿಗೆಯಲ್ಲೂ ಸಿಗುತ್ತದೆ, ಕೆಂಡಸಂಪಿಗೆಯಲ್ಲೂ ಸಿಗುತ್ತದೆ. ಎಷ್ಟೆಂದರೂ ‘ಮಾನವನಾಗಿ
ಹುಟ್ಟಿದ್ಮೇಲೆ ಏನೇನ್ ಕಂಡಿ? ಸಾಯೋತನ್ಕಾ ಸಂಸಾರ್‌ದೊಳಗೆ ಗಂಡಾಗುಂಡಿ| ಹೇರಿಕೊಂಡು ಹೋಗೋದಿಲ್ಲ ಸತ್ತಾಗ್ ಬಂಡಿ|
ಇರೋದ್ರೊಳ್ಗೆ ಒಮ್ಮೆ ನೋಡು ಜೋಗದ್ ಗುಂಡಿ’ ಅಲ್ಲವೇ? ಅಮೆರಿಕನ್ನಡಿಗ ಕವಿ, ಲೇಖಕ ಡಾ. ಮೈ. ಶ್ರೀ. ನಟರಾಜ
ಅವರದೊಂದು ಭಂಡಕವಿತೆ ಇದೆ, ‘ಹ್ಯೂಸ್ಟನ್ ಹುಳಿ ಹೆಂಡ’ ಎಂದು ಅದರ ಶೀರ್ಷಿಕೆ.

ಅವರು ಅಮೆರಿಕ ದೇಶಕ್ಕೆ ಬಂದ ಹೊಸತರಲ್ಲಿ ಬರೆದದ್ದಿರಬೇಕು. ಅವರ ಸಮಕಾಲೀನ ಅಮೆರಿಕನ್ನಡಿಗರು ಅಪರೂಪಕ್ಕೆ ಒಂದೆಡೆ ಸೇರಿದಾಗ, ಅದರಲ್ಲೂ ಗುಂಡುಪಾರ್ಟಿ ಏನಾದರೂ ಏರ್ಪಡಿಸಿದರೆ ಈ ಕವಿತೆ ಪಾರ್ಟಿಯ ನಶೆಯನ್ನು ಮತ್ತಷ್ಟು ಏರಿಸುತ್ತದಂತೆ. ‘ಡೊಳ್ಳು ಕುಣಿತದ ದೋಂಡೂಬಾಯಿ… ಅಮೆರಿಕಾ ನೋಡಿ ಬಿಟ್ಟಳು ಬಾಯಿ… ಟೆಕ್ಸಾಸ್‌ನಲ್ಲೂ ತೆಂಗಿನ ಕಾಯಿ… ಮೆಕ್ಸಿಕೊ ಮಣ್ಣಿನ ಮೆಣಸಿನಕಾಯಿ…’ ಎಂದು ಶುರುವಾಗುತ್ತದೆ ಕವಿತೆ.

ಮಾಮೂಲಿ ಅಂತ್ಯಪ್ರಾಸವು ಮುಂದಿನ ಒಂದು ಚರಣದಲ್ಲಿ ಬಿಂದುಪೂರ್ವಕ ಡಕಾರ ಪ್ರಾಸವಾಗುತ್ತದೆ- ‘ಹಿಂದೂಮುಂದೂ
ನೋಡದೆ ದೋಂಡೂ… ತರಿಸಿದಳಣ್ಣ ಘಂ ಘಂ ಗುಂಡು… ಕುಡಿಯುವ ಇವಳ ವಖರಿ ಕಂಡು… ಮುತ್ತಿದರಣ್ಣ ಗಂಡ್ಗಳ
ಹಿಂಡು!’ ಆಮೇಲೆ ಮತ್ತಷ್ಟು ಬಿಂದುಪೂರ್ವಕ ಡಕಾರ. ದೋಂಡೂಬಾಯಿ ಜೊತೆ ಸೇರಿದ ಗಂಡಸರ (ಗಂಡಂದಿರ?) ವಿವರ. ತಂಡದ ಭಂಡರ ದೊಡ್ಡ ಮುಖಂಡ ಕೌಬಾಯಿ ಹ್ಯಾಟಿನ ಮಹಾ ಪ್ರಚಂಡ… ಹೀಗೆ ಸಾಗುತ್ತದೆ ಭಂಡಕವಿತೆ.

ಬಿಂದುಪೂರ್ವಕ ಡಕಾರ ಎಂಬ ಪದಪುಂಜವನ್ನು ನಾನು ಮೊದಲಿಗೆ ಕಂಡಿದ್ದು ಶತಾವಧಾನಿ ಡಾ. ಆರ್. ಗಣೇಶ್ ಅವರು
ಬರೆದ ‘ಬ್ರಹ್ಮಪುರಿಯ ಭಿಕ್ಷುಕ’ ಪುಸ್ತಕದಲ್ಲಿ. ಡಿವಿಜಿಯವರ ಜೀವನದ ರಸಪ್ರಸಂಗಗಳನ್ನು ಬಣ್ಣಿಸಿರುವ ಈ ಪುಸ್ತಕದಲ್ಲಿ
ಬಿಂದುಪೂರ್ವಕ ಡಕಾರದ ಸ್ವಾರಸ್ಯಕರ ಉಲ್ಲೇಖಗಳಿವೆ. ಗುಂಡಪ್ಪನವರದು ಬಾಲ್ಯದಿಂದಲೂ ತಿಂಡಿಪೋತ ಸ್ವಭಾವವಂತೆ. ಅವರ ಸೋದರತ್ತೆ ‘ಗುಂಡಂ ಭಂಡಂ ತಿಂಡಿಕಿ ಶೂರಂ ಚಂಡಾಲ ಮುಂಡೇಗಂಡಂ’ ಎಂದು ಗೇಲಿ ಮಾಡುತ್ತಿದ್ದರಂತೆ.

ಇನ್ನೊಂದು ಪ್ರಸಂಗ ಶಿವಶಂಕರ ಶಾಸ್ತ್ರಿಗಳೆಂಬ ಪ್ರಕಾಂಡ ಪಂಡಿತರು ಸ್ವರಚಿತ ಕಾವ್ಯವಾಚನ ಮಾಡಿದ್ದು. ಅದರಲ್ಲಿ ‘ಹೇ
ರುಂಡಮಾಲೀ! ಕಾದು ಕೆಂಡವಾಗಿರುವೀ ಬಂಡೆಯ ಮೇಲೆ ನಾಂ ಬಂದು ಕುಂಡೆಯೂರಲು…’ ಎಂಬ ಭಾಗವನ್ನೋದಿದಾಗ
ಡಿವಿಜಿಯವರನ್ನೂ ಒಡಗೂಡಿ ಅಲ್ಲಿದ್ದವರಿಗೆಲ್ಲ ಅಸಾಧ್ಯ ನಗು. ಆದರೆ ಪಂಡಿತರಿಗೆ ಅವಮಾನವಾಗಬಾರದೆಂದು ತಡೆದು ಕೊಂಡರು. ವೆಂಕಣ್ಣಯ್ಯನವರಿಗಂತೂ ನಗುತಡೆದು ಕೆಮ್ಮು ಬರಲಾರಂಭಿಸಿದಾಗ ಶಾಸ್ತ್ರಿಗಳೇ ನೆರವಿಗೆ ಬರಬೇಕಾಯ್ತು.

ಆಮೇಲೆ ಡಿವಿಜಿಯವರು ‘ಏನಿಲ್ಲ, ನಿಮ್ಮ ಕಾವ್ಯದ ಬಿಂದುಪೂರ್ವಕ ಡಕಾರ ಪ್ರಾಸದ ಪದಗಳು ತ್ರಾಸ ಕೊಟ್ಟವು. ಇಂಥ ಶಬ್ದಾಲಂಕಾರ ವಿಕಾರವೆಂಬುದಕ್ಕೆ ನನ್ನ ಹೆಸರೇ ಸಾಕ್ಷಿ!’ ಎಂದು ಶಾಸ್ತ್ರಿಗಳಿಗೆ ವಿವರಿಸಿದರಂತೆ. ಮತ್ತೊಮ್ಮೆ ಯಾವುದೋ ಸಭೆಗೆ ಡಿವಿಜಿಯವರನ್ನು ಮುಖ್ಯ ಅತಿಥಿಯಾಗಿ ಆಹ್ವಾನಿಸಲು ಕಾರ್ಯಕರ್ತರು ಬಂದಿದ್ದರು. ಮೊದಲೇ ಮೂಲವ್ಯಾಧಿಯಿಂದ
ನರಳುತ್ತಿದ್ದ ಗುಂಡಪ್ಪನವರಿಗೆ ಆ ಸಭೆಗೆ ಹೋಗಲಿಕ್ಕಾಗುವುದಿಲ್ಲ ಎಂದು ಗೊತ್ತಿತ್ತು.

ಕಡೇಪಕ್ಷ ಸಂದೇಶವನ್ನಾದ್ರೂ ಕೊಡಿ ಸಭೆಯಲ್ಲಿ ವಾಚಿಸುತ್ತೇವೆ ಎಂದು ಕಾರ್ಯಕರ್ತರು ದುಂಬಾಲು ಬಿದ್ದಾಗ ಹಾಸ್ಯದ ತುಂಟತನದಿಂದ ಡಿವಿಜಿ ಹೀಗೆ ಸಂದೇಶ ಬರೆದುಕೊಟ್ಟಿದ್ದರಂತೆ- ‘ಗುಂಡಪ್ಪನಾದೊಡೇಂ ಕುಂಡೆಯದು ನೋಯದೇಂ?’
ಈ ಹಿಂದೆ ವಿಜಯಕರ್ನಾಟಕದಲ್ಲಿ ಪರಾಗಸ್ಪರ್ಶ ಅಂಕಣದಲ್ಲೊಮ್ಮೆ ಬಿಂದುಪೂರ್ವಕ ಡಕಾರವನ್ನೆತ್ತಿಕೊಂಡಿದ್ದೆ. ಆ ಲೇಖನ ವನ್ನೋದಿ ವಿರಾಜಪೇಟೆಯಿಂದ ಡಾ. ಎಸ್. ವಿ.ನರಸಿಂಹನ್ ಒಂದು ಸ್ವಾರಸ್ಯಕರ ಸಂಗತಿಯನ್ನು ಹಂಚಿಕೊಂಡಿದ್ದರು.

ಏನೆಂದರೆ- ಕೊಡವರಲ್ಲಿ ಪ್ರತಿಯೊಂದು ಕುಟುಂಬಕ್ಕೂ ಒಂದೊಂದು ಹೆಸರಿರುತ್ತದೆ. ಸುಮಾರು 1200ಕ್ಕೂ ಹೆಚ್ಚು ಇಂಥ
ಕುಟುಂಬಗಳಿವೆ. ಇದು ಒಂಥರ ನಮ್ಮಲ್ಲಿ ಗೋತ್ರವಿದ್ದಂತೆ. ಇದನ್ನವರು ‘ಮನೆ-ಪೆದ’ (ಮನೆಹೆಸರು) ಎನ್ನುತ್ತಾರೆ. ಹೊಸಬರನ್ನು ಕಂಡಾಗ ಆತ ‘ಯಾರ’ ಮನೆಯವನು ಎಂದು ತಿಳಿದುಕೊಳ್ಳುವುದು ಅವರಿಗೆ ಅತಿಮುಖ್ಯ! ಒಂದು ಚಿಕ್ಕ ಮಗುವನ್ನು ‘ನೀ ದಾಡ’ (ನೀನು ಯಾರು?) ಎಂದು ಕೇಳಿದರೂ ಅದು ಹೆಮ್ಮೆಯಿಂದ ನಾ ಅಡ್ಡಂಡ, ಅಜ್ಜಿನಿಕಂಡ, ಅಮ್ಮುಣಿ ಚಂಡ, ಅಮ್ಮಣಕುಟ್ಟಂಡ, ಬಿದ್ದಂಡ, ಬಿದ್ದಾಟಂಡ, ಚೆರಿಯಪಂಡ, ಚೇಂದಂಡ, ಮನಿಯಪ್ಪಂಡ, ಮಂಡೆಪಂಡ, ಮಾದಂಡ, ನಾಯಕಂಡ, ಕೂತಂಡ, ಕೇಳಪ್ಪಂಡ, ಕುಞಂಡ, ಕುಪ್ಪಂಡ, ಪಾಂಡಂಡ, ಪಂದಿಯಂಡ, ಪಳಂಗಂಡ, ಪೆಮ್ಮಂಡ, ಪಾಲೆಕಂಡ, ಶಿವಚಾಳಿಯಂಡ… ಹೀಗೆ ನಿರ್ದಿಷ್ಟವಾದೊಂದು ಮನೆತನದ ಹೆಸರನ್ನು ಹೇಳುತ್ತದೆ.

ಕೊಡವರು ವೀರರೂ ಶೂರರೂ ಆಗಿರುವುದಕ್ಕೆ ಅವರ ಡಿಎನ್‌ಎಯಲ್ಲಿ ಪವರ್‌ಫುಲ್ ಬಿಂದುಪೂರ್ವಕ ಡಕಾರ ಇರುವುದೇ ಕಾರಣ. ಕೊನೆಯದಾಗಿ, ಬಿಂದುಪೂರ್ವಕ ಡಕಾರ ಪವರ್‌ಫುಲ್ ಅನಿಸುವುದೇಕೆ ಎಂಬುದಕ್ಕೆ ಒಂದು ಥಿಯರಿಯನ್ನು ಮಂಡಿಸಿ
ಎಂಡ್ ಮಾಡುತ್ತೇನೆ. ಅನುಸ್ವಾರ ಆದಮೇಲೆ ಡ ಬರೆಯುವುದಾದರೆ ಸಾಂಪ್ರದಾಯಿಕವಾಗಿ, ಟ-ವರ್ಗದ ಅನುನಾಸಿಕ ಅಕ್ಷರ ಬಳಸಿ ಅದನ್ನು ‘ಣ್ಡ’ ಎಂದು ಬರೆಯಬೇಕು (ಉದಾ: ಖಣ್ಡ, ಗಾಣ್ಡೀವ, ಪ್ರಚಣ್ಡ, ದಣ್ಡಿ, ಮಣ್ಡಲ ಇತ್ಯಾದಿ). ಆದಿಕವಿ ಪಂಪನು ಭೀಮಸೇನನ ಬಾಯಿಯಿಂದ ‘ಎನ್ನ ನುಡಿ ಟಾಠಡಾಢಣಂ’ ಎಂದು ಹೇಳಿಸಿದ್ದಾನೆ.

ಅಂದರೆ ಭೀಮಸೇನನ ಮಾತುಗಳು ಟ-ವರ್ಗದ ಟಠಡಢಣ ಮೂರ್ಧನ್ಯ ಅಕ್ಷರಗಳಂತೆ ನಿಶ್ಚಿತ, ನಿಷ್ಠುರ, ಖಂಡತುಂಡ ರೀತಿ ಯವು, ಗಟ್ಟಿತನದವು ಎಂದು. ಠ ಅಕ್ಷರದ ಉಚ್ಚಾರಕ್ಕೂ ಹೃದಯದ ಆರೋಗ್ಯಕ್ಕೂ ಇರುವ ಸಂಬಂಧ ಈಗಾಗಲೇ ವೈಜ್ಞಾನಿಕ ವಾಗಿ ಸಾಬೀತಾಗಿದೆ. ‘ಣ್ಡ’ ಸಹ ಅದಕ್ಕೆ ಕಮ್ಮಿಯದೇನಲ್ಲ!

 
Read E-Paper click here

error: Content is protected !!