Thursday, 25th April 2024

ಅಭ್ಯರ್ಥಿ ಆಯ್ಕೆ: ಮಳೆ ನಿಂತರೂ ಹನಿ ನಿಲ್ಲುತ್ತಿಲ್ಲ !

ಅಭಿಮತ

ರಮಾನಂದ ಶರ್ಮಾ

ಒಂದು ಪಕ್ಷಕ್ಕೆ ಚುನಾ ವಣೆಯಲ್ಲಿ ಸ್ವಲ್ಪ ಸಕಾರಾತ್ಮಕ ಒಲವಿದೆ ಎಂಬುವ ಅಭಿಪ್ರಾಯವಿದ್ದರೆ, ಟಿಕೆಟ್‌ಗಾಗಿ ತುರುಸಿನ ಸ್ಪರ್ಧೆ ಇರುತ್ತದೆ. ಟಿಕೆಟ್ ಹಂಚುವಿಕೆಯಲ್ಲಿ ಎಲ್ಲರನ್ನೂ ಎ ಕಾಲಕ್ಕೂ ಸಂತೈಸಲು ಸಾದ್ಯವಿಲ್ಲ. ಕೆಲವರಿಗೆ ನಿರಾಶೆ ಸ್ವಾಭಾವಿಕ.

‘ಮಳೆ ನಿಂತರೂ ಹನಿ ನಿಲ್ಲುತ್ತಿಲ್ಲ’ ಇದು ಕನ್ನಡದ ಹಳೆಯ ಗಾದೆ ಮಾತು. ಆದರೆ ಕರ್ನಾಟಕದಲ್ಲಿ ಲೋಕಸಭಾ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಅಯ್ಕೆಯಾದ ನಂತರದ ಬೆಳಣಿಗೆಗೆ ಈ ಗಾದೆಯನ್ನು ಹೋಲಿಸಬಹುದು. ಲೋಕಸಸಭೆ ಚುನಾವಣೆಗೆ
ರಾಜಕೀಯ ಪಕ್ಷಗಳು ಅಭ್ಯರ್ಥಿಗಳ ಅಯ್ಕೆಯ ಕಸರತ್ತನ್ನು ಬಹುತೇಕ ಮುಗಿಸಿದ್ದು, ರಾಜ್ಯದಲ್ಲಿ ನಡೆಯಲಿರುವ ಮೊದಲ ಹಂತದ ಚುನಾವಣೆಗೆ ನಾಮಪತ್ರ ಸಲ್ಲಿಸಲು ನಾಳೆ (ಗುರುವಾರ) ಕೊನೆಯ ದಿನ. ಆದ್ದರಿಂದ ಇದೀಗ ಎಲ್ಲ ಪಕ್ಷಗಳು ಚುನಾವಣಾ ಪ್ರಚಾರಕ್ಕೆ ಹೊರಡಲು ಸನ್ನದ್ದವಾಗುತ್ತಿವೆ.

ಅದರೆ, ಅಯ್ಕೆಯಲ್ಲಿನ ಗೊಂದಲ, ಮುನಿಸು ಮತ್ತು ಭಿನ್ನಮತ ತಣಿಯದೇ ಮುಂದುವರಿಯುತ್ತಲೇ ಇದೆ ಮತ್ತು ಇದು ಅಂತಿಮ ಫಲಿತಾಂಶದ ಮೇಲೆ ವಕ್ರದೃಷ್ಟಿ ಬೀರುವ ಸಂಭವ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈ ಬೆಳವಣಿಗೆ ಕಣದಲ್ಲಿರುವ ಎರಡೂ ಪ್ರಮುಖ ರಾಜಕೀಯ ಪಕ್ಷಗಳಲ್ಲಿಯೂ ಅವರಿಸಿದ್ದು, ಯಾರೂ ಇನ್ನೊಬ್ಬರತ್ತ ಬೆರಳು ತೋರಿಸುವ ಹೆಚ್ಚುಗಾರಿಕೆ ಅಥವಾ
ಲೇವಡಿ ಮಾಡುವ ಸಾಧ್ಯತೆ ಕಾಣುತ್ತಿಲ್ಲ.

ಚುನಾವಣೆಗೆ ಅಭ್ಯರ್ಥಿಗಳ ಅಯ್ಕೆ ರಾಜಕೀಯ ಪಕ್ಷಗಳಿಗೆ ಅತಿ ಕ್ಲಿಷ್ಟಕರ ಕೆಲಸ ಎಂದು ರಾಮಕೃಷ್ಣ ಹೆಗಡೆಯವರು ಹೇಳುತ್ತಿ
ದ್ದರು. ಇದು ಚುನಾವಣೆಯನ್ನು ಗೆಲ್ಲುವುದಕ್ಕಿಂತ ಹೆಚ್ಚು ಪ್ರಯಾಸದಾಯಕ ಎನ್ನುತ್ತಿದ್ದರು. ಅದರಲ್ಲೂ ಒಂದು ಪಕ್ಷಕ್ಕೆ ಚುನಾ ವಣೆಯಲ್ಲಿ ಸ್ವಲ್ಪ ಸಕಾರಾತ್ಮಕ ಒಲವಿದೆ ಎಂಬುವ ಅಭಿಪ್ರಾಯವಿದ್ದರೆ, ಟಿಕೆಟ್‌ಗಾಗಿ ತುರುಸಿನ ಸ್ಪರ್ದೆ ಇರುತ್ತದೆ. ಟಿಕೆಟ್ ಹಂಚುವಿಕೆಯಲ್ಲಿ ಎಲ್ಲರನ್ನೂ ಎಲ್ಲಾ ಕಾಲಕ್ಕೂ ಸಂತೈಸಲು ಸಾದ್ಯವಿಲ್ಲ. ಕೆಲವರಿಗೆ ನಿರಾಶೆ ಸ್ವಾಭಾವಿಕ.

ಹೈಕಮಾಂಡ್ ಅಥವಾ ವರಿಷ್ಠರು ಈ ಪ್ರಕ್ರಿಯೆಯಲ್ಲಿ ತಮ್ಮದೇಯಾದ ಮಾನದಂಡವನ್ನು ಅನುಸರಿಸುತ್ತಿದ್ದು, ಅದರಲ್ಲಿ ತೇರ್ಗಡೆಯಾಗಿ ಹೊರಬರದವರಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ಕೈ ತಪ್ಪುತ್ತದೆ. ಬಹುತೇಕ ಈ ಮಾನದಂಡಗಳಂತೆಯೇ ಟಿಕೆಟ್ ನೀಡಲಾಗುತ್ತಿದ್ದರೂ ಅದನ್ನು ದೃಢವಾಗಿ ಅನುಸರಿಸುತ್ತಾರೆ ಎಂದು ಹೇಳಲಾಗುವುದಿಲ್ಲ.

ಎಲ್ಲಾ ಕಾಯಿದೆ-ಕಾನೂನು ಮತ್ತು ನೀತಿ ನಿಯಮಾವಳಿಗಳಿಗೆ ಅಪವಾದವಿರುತ್ತಿದ್ದು, ಅದರಂತೆ ಆಕಾಂಕ್ಷಿಗಳಿಗೆ ಟಿಕೆಟ್ ಹಂಚುವಾಗಲೂ ಈ ಮಾನದಂಡವನ್ನು ನೂರಕ್ಕೆ ನೂರರಷ್ಟು ಪಾಲಿಸುತ್ತಾರೆ ಎನ್ನಲಾಗದು. ಅಲ್ಲಿಯೂ ಕೂಡಾ ಹಲವು ರೀತಿಯ ಒತ್ತಡ, ತಂತ್ರಗಾರಿಕೆ, ಪಟ್ಟುಗಳು, ಎಳೆತ ಇರುತ್ತಿದ್ದು, ಇವುಗಳನ್ನು ಅಳವಡಿಸಿಕೊಂಡು ಒತ್ತಡವನ್ನು ನಿಭಾಯಿಸಿ ಕೊಂಡು ಟಿಕೆಟ್ ಹಂಚಬೇಕಾಗುತ್ತದೆ. ಅಂತೆಯೇ ಮಾನದಂಡದ ಪ್ರಕಾರ ತಮಗೆ ಟಿಕೆಟ್ ನೀಡಬೇಕಾಗಿತ್ತು ಎಂದು ಧ್ವನಿ
ಎತ್ತಲಾಗದು.

ಅಂತಿಮವಾಗಿ ಹೈಕಮಾಂಡ್ (ಕಾಂಗ್ರೆಸ್), ವರಿಷ್ಠರು (ಬಿಜೆಪಿ) ಮತ್ತು ಪಾಲಿಟ್ ಬ್ಯೂರೋ (ಕಮ್ಯುನಿಸ್ಟರು) ಅವರ ಮಾತೇ ಫೈನಲ್. ಭಿನ್ನಮತ ಮತ್ತು ನಿರಾಶೆ ಏನೇ ಇರಲಿ ಸಾಮಾನ್ಯವಾಗಿ ಒಮ್ಮೆ ಅಯ್ಕೆಪಟ್ಟಿಯನ್ನು ಬಿಡುಗಡೆ ಮಾಡಿದ ಮೇಲೆ ಅದರಲ್ಲಿ ತಿದ್ದುಪಡಿ, ಬದಲಾವಣೆ ಬಹುತೇಕ ಅಸಾಧ್ಯ.

ಅರಂಭದಲ್ಲಿ ಮುನಿಸು ಮತ್ತು ಭಿನ್ನಮತ ತೀರಾ ಸಾಮಾನ್ಯ. ದಿನಗಳು ಕಳೆದಂತೆ ಎಲ್ಲವೂ ಸರಿ ಹೋಗುತ್ತದೆ ಎನ್ನುವುದು ಪಕ್ಷದ ಹಿರಿಯ ನಾಯಕರ ಅನಿಸಿಕೆ. ಹಾಗೆಯೇ ದೆಹಲಿ ದೊರೆಗಳು ಭಿನ್ನಮತೀಯರೊಡನೆ ಒಮ್ಮೆ ಮಾತನಾಡಿದರೆ ಬಿಗುವು ಕಡಿಮೆ ಯಾಗಿ ಎಲ್ಲವೂ ತಣ್ಣಗಾಗುತ್ತದೆ ಎಂಬುದು ಎರಡೂ ಪಕ್ಷಗಳ ಸಾಮಾನ್ಯ ತಿಳುವಳಿಕೆ. ಅದರೆ,ಲಾಗಾಯ್ತನಿಂದ ಕಾಣುತ್ತಿರುವ ಈ ಎಲ್ಲಾ ನಿರೀಕ್ಷೆಗಳು ತಲೆಕೆಳಗಾಗಿ ಎರಡು ವಾರವಾದರೂ ಭಿನ್ನಮತದ ದೊಡ್ಡ ಹನಿಗಳು ಇನ್ನೂ ಬೀಳುತ್ತಲೇ ಇವೆ. ಸದಾನಂದ ಗೌಡ, ಸಿ.ಟಿ. ರವಿ, ನಳಿನ್ ಕುಮಾರ್ ಕಟೀಲ್ ಮತ್ತು ಪ್ರತಾಪ ಸಿಂಹ ಅವರು ಪಕ್ಷದ ಅಣಿತಿಯಂತೆ ಪಾಲಿಗೆ ಬಂದದ್ದು ಪಂಚಾಮೃತವೆಂದು ವರಿಷ್ಠರು ತೋರಿದ ಗೆರೆಯಲ್ಲಿ ಅಚ್ಚೇದಿನ ನಿರೀಕ್ಷಿಸುತ್ತಾ ಇದ್ದಾರೆ ಮತ್ತು ಪಕ್ಷಕ್ಕೆ ತಮ್ಮ ಬದ್ಧತೆಯನ್ನು ಉಳಿಸಿಕೊಂಡಿದ್ದಾರೆ.

ಅದರೆ, ಇನ್ನೂ ಕೆಲವರು ಭಿನ್ನಮತದ ಬಾವುಟವನ್ನು ಇನ್ನೂ ಇಳಿಸಿಲ್ಲ ಎಂಬುದು ಪಕ್ಷದ ನಾಯಕರಿಗೆ ದೊಡ್ಡ ತಲೆ ನೋವಾ ಗಿದೆ. ಭಾರತೀಯ ಜನತಾ ಪಕ್ಷಕ್ಕೆ ಇಂತಹ ಭಿನ್ನಮತ ಬಹುಶಃ ಮೊದಲ ಅನುಭವ ಮತ್ತು ಅದು ಇದನ್ನು ನಿರೀಕ್ಷಿಸಿರಲಿಲ್ಲ ವೇನೋ? ಬಂಡಾಯ ಮತ್ತು ಭಿನ್ನಮತ ಕೊನೆಗೊಳ್ಳುವ ಸೂಚನೆಗಳು ಕಾಣುತ್ತಿಲ್ಲ. ವರಿಷ್ಠರ ನಿರ್ಣಯವನ್ನು ಪ್ರಶ್ನಿಸುವ ಧಾಷ್ಟ್ಯವನ್ನು ತೋರಿಸುತ್ತಿದ್ದಾರೆ. ಈ ಮೂಲಕ ರಾಜ್ಯದ ಮೇಲೆ ವರಿಷ್ಠರ ಹಿಡಿತ ಸಡಿಲವಾದಂತೆ ಕಾಣುತ್ತಿದೆ.

ವಿವಾದಾತ್ಮಕ ಹೇಳಿಕೆಗಳಿಂದ ತಮ್ಮ ಪುನರ್ ಸ್ಪರ್ಧೆಯ ಅವಕಾಶವನ್ನು ಕಳೆದುಕೊಂಡಿದ್ದಾರೆ ಎಂದು ಹೇಳಲಾಗುವ ಉತ್ತರ ಕನ್ನಡ ಜಿಯ ಅನಂತ ಕುಮಾರ ಹೆಗಡೆ ಪಕ್ಷದ ವಿರುದ್ದ ಮಾತನಾಡದಿದ್ದರೂ, ಘೋಷಿಸಲ್ಪಟ್ಟ ಆಭ್ಯರ್ಥಿ ಕಾಗೇರಿಯವರ ಜೋಡೆತ್ತಿನ ಕರೆಗೆ ಇನ್ನೂ ಹೆಗಲು ಕೊಟ್ಟಂತಿಲ್ಲ. ಕಾಗೇರಿಯವರು ಒಂಟೆತ್ತಾಗಿಯೇ ಎಳೆಯುತ್ತಿzರೆ ಎನ್ನಲಾಗುತ್ತಿದೆ. ಕೆಲವು ಮಾಧ್ಯಮ ವರದಿಗಳ ಪ್ರಕಾರ ಕಾಗೇರಿಯವರಿಗೆ ಇನ್ನೂ ಅವರ ಸಂಪರ್ಕ ಸಾಧ್ಯವಾಗಿಲ್ಲವಂತೆ. ಅನಂತ ಕುಮಾರ್ ಅವರು ತಮ್ಮ ಅಪ್ತರನ್ನು ಪಕ್ಷೇತರರಾಗಿ ನಿಲ್ಲಿಸುವ ಹುನ್ನಾರದಲ್ಲಿzರೆ ಎನ್ನುವ ವದಂತಿಗಳಿವೆ. ಕಟ್ಟಾ ಹಿಂದುತ್ವವಾದಿಗಳು ಮತ್ತು
ಸಂಘದ ಬೆಂಬಲ ಅವರಿಗೆ ಇದೆಯೆಂದು ಹೇಳಲಾಗುತ್ತದೆ. ತಮ್ಮ ಹೇಳಿಕೆಗಳಿಂದ ವಿರೋಧಿ ಕಾಂಗ್ರೆಸ್‌ಗೆ ಅಸ್ತ್ರ ಕೊಡುತ್ತಿದ್ದಾರೆ ಎಂದು ಸ್ವತಃ ಪ್ರಧಾನಿಯವರೇ ಅವರಿಗೆ ಟಿಕೆಟ್ ನೀಡಲು ಮನಸ್ಸು ಮಾಡಿರಲಿಲ್ಲವಂತೆ ಮತ್ತು ಒಂದು ಸೀಟು ಹೋದರೂ ಪರವಾಗಿಲ್ಲ ಎಂದು ಹೇಳಿದ್ದಾಗಿ ಕೆಲವು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಸದ್ಯದ ಪರಿಸ್ಥಿತಿಯಲ್ಲಿ ಉತ್ತರ ಕನ್ನಡದಲ್ಲಿ ಭಿನ್ನಮತ ತಣ್ಣಗಾಗುವ ಸೂಚನೆಗಳಿಲ್ಲ. ಅವರ ಮುಂದಿನ ಹೆಜ್ಜೆಯನ್ನು ಜಿಲ್ಲೆಯ ಜನತೆ ಕಾತುರದಿಂದ ನೋಡುತ್ತಿದ್ದಾರೆ. ಕಾಗೇರಿಯವರಿಗೆ ಢವ ಢವ ಅಗುತ್ತಿದೆ ಎಂದು ವಿಶ್ಲೇಷಕರು ಭಾಷ್ಯ ಬರೆಯುತ್ತಿದ್ದಾರೆ. ಚಿತ್ರದುರ್ಗದಲ್ಲಿ ಸ್ಥಳೀಯ ಮತ್ತು ಹೊರಗಿನ ಆಭ್ಯರ್ಥಿ ವಿಷಯವಾಗಿ ಭಿನ್ನಮತ ತಾರಕಕ್ಕೇರಿದೆ. ಮದಕರಿ ನಾಯಕರ ಕೋಟೆ ಯಲ್ಲಿ ಸಂಸತ್ತಿಗೆ ಸ್ಪರ್ಧಿಸಲು ಸ್ಥಳೀಯವಾಗಿ ಯಾರೂ ಇಲ್ಲವೇ ಎಂಬುವ ಗಂಭೀರ ಪ್ರಶ್ನೆಯನ್ನು ಎತ್ತಲಾಗಿದೆ.

ಕಳೆದ ಬಾರಿ ಹೊರಗಿನವರು ಸ್ಪರ್ಧಿಸಿದ್ದು, ಈ ಬಾರಿ ಅವರಿಗೆ ಬೇಡ ಎಂದು ಬದಲಾಯಿಸಲು ಒತ್ತಾಯಿಸದರೆ, ಇನ್ನೊಬ್ಬ ಹೊರಗಿನವರನ್ನು ಮೈದಾನಕ್ಕೆ ಇಳಿಸಿದ್ದು ಅಲ್ಲಿನ ಬಿಜೆಪಿ ನಾಯಕರನ್ನು ಕೆರಳಿಸಿದೆ. ಅಲ್ಲಿ ಪಕ್ಷೇತರರಾಗಿ ಸ್ಥಳೀಯರೊಬ್ಬರನ್ನು ಇಳಿಸುವ ಸಾಧ್ಯತೆಯಿದೆ. ಅಂತಿಮವಾಗಿ ವರಿಷ್ಠರು ಸ್ಥಳೀಯ ಕೂಗಿಗೆ ಮಣಿಯದಿದ್ದರೆ, ಪಕ್ಷಕ್ಕೆ ದುಬಾರಿಯಾಗುವ ಸೂಚನೆ ಕೇಳಿ
ಬರುತ್ತಿದೆ. ದಾವಣಗೆರೆ ಕ್ಷೇತ್ರದಲ್ಲಿ ಕುಟುಂಬ ರಾಜಕಾರಣ ಸದ್ದು ಮಾಡುತ್ತಿದ್ದು, ರೇಣುಕಾಚಾರ್ಯರ ನೇತೃತ್ವದಲ್ಲಿ ಜಿಲ್ಲೆಯ ಕೆಲವು ಶಾಸಕರು ಗಾಯಿತ್ರಿ ಸಿದ್ದೇಶ್ವರಗೆ ಟಿಕೆಟ್ ನೀಡಿರುವ ವಿಷಯದಲ್ಲಿ ಸಿಡಿದೆದ್ದಿದ್ದಾರೆ.

ಯಡಿಯೂರಪ್ಪನವರು ಸಂಧಾನ ನಡೆಸಿದರೂ ಎಲ್ಲವೂ ಬೂದಿ ಮುಚ್ಚಿದ ಕೆಂಡದಂತೆ ಕಾಣುತ್ತಿದೆ. ಮೇಲ್ನೋಟಕ್ಕೆ ಸಂಧಾನ ಯಶಸ್ವಿಯಾದಂತೆ ತೋರಿದರೂ, ಮುಂದಿನ ದಿನಗಳಲ್ಲಿ ಬೆಳವಣಿಗೆ ಎನಾಗುತ್ತದೆ ಎನ್ನುವುದನ್ನು ದೃಢವಾಗಿ ಹೇಳಲಾಗದು. ರಾಜಕೀಯದಲ್ಲಿ ಹೊರ ಏಟಿಗಿಂತ ಒಳಯೇಟು ತೀವ್ರವಾಗಿರುತ್ತದೆ. ಸಂಧಾನ, ಮಾತುಕತೆ ಯಾವುದಕ್ಕೂ ಬಗ್ಗದ ಈಶ್ವರಪ್ಪ ನವರು ತಮ್ಮ ನಿಲುವಿಗೆ ದೃಢವಾಗಿ ಅಂಟಿಕೊಂಡಿದ್ದು, ಯಡಿಯೂರಪ್ಪನವರ ವಿರುದ್ಧ ಮತ್ತು ಪರಿವಾರ ರಾಜಕಾರಣದ
ವಿರುದ್ಧ ತಮ್ಮ ವಿರೋಧವನ್ನು ಮುಂದುವರೆಸಿದ್ದಾರೆ.

ಅವರು ಪಕ್ಷೇತರರಾಗಿ ಸ್ಪರ್ಧಿಸಲು ಸಿದ್ಧತೆ ನಡೆಸಿದ್ದು, ರಾಘವೇಂದ್ರರ ಹೆದ್ದಾರಿ ಓಟಕ್ಕೆ ಅಡೆತಡೆಯಾಗುವ ಲಕ್ಷಣ ಗೋಚರಿಸು ತ್ತಿದೆ. ವದಂತಿಗಳ ಪ್ರಕಾರ ವರಿಷ್ಠರು ಅವರು ಏನಾದರೂ ಮಾಡಕೊಳ್ಳಲಿ ಎನ್ನುತ್ತಿದ್ದಾರಂತೆ. ಅಂತೆಯೇ ಯಾವುದೇ ರೀತಿಯ ಹೊಂದಾಣಿಕೆ ಸದ್ಯ ಕಾಣುತ್ತಿಲ್ಲ. ವಿಶ್ಲೇಷಕರ ಪ್ರಕಾರ ಅವರು ತಮ್ಮ ಹಿಂದಿರುವ ಬೆಂಬಲದ ಲೆಕ್ಕಾಚಾರದಲ್ಲಿ ತಮ್ಮ ನಿಲುವಿಗೆ ಅಂಟಿಕೊಂಡಿರಬೇಕು. ತುಮಕೂರಿನಲ್ಲಿ ಮಾಧುಸ್ವಾಮಿ ಮತ್ತು ಸೋಮಣ್ಣ ನವರ ಬಿರುಕು ಮುಚ್ಚಿರುವ ಬಗೆಗೆ ಕೊನೆಯ ಮಾತು ಕೇಳುತ್ತಿಲ್ಲ. ರಾಜ್ಯ ನಾಯಕರ ಸಂಧಾನಕ್ಕೆ ಭಿನ್ನಮತೀಯರು ಕೇರ್ ಮಾಡಿದಂತೆ ಕಾಣುತ್ತಿಲ್ಲ.

ಎಲ್ಲವೂ ಸುಗಮ ಮತ್ತು ತಮ್ಮ ಹಾದಿ ಬೆಂಗಳೂರು- ಮುಂಬೈ ಇಂಡಷ್ಟ್ರಿಯಲ್ ಕಾರಿಡಾರ್‌ನಂತೆ ಎಂದು ನಿಶ್ಚಿಂತೆಯಲ್ಲಿರುವ
ಪ್ರಲ್ಹಾದ ಜೋಶಿಯವರಿಗೆ ಕೆಲವು ಸ್ವಾಮಿಗಳಿಂದ ಸ್ವಲ್ಪ ತೊಡಕಾಗುವಂತೆ ಕಾಣುತ್ತಿದೆ. ಅದು ಅಂತಹ ಗಂಭೀರ ವಿಷಯವಲ್ಲ ದಿದ್ದರೂ ಕಸಿವಿಸಿಗೆ ಕಾರಣವಾಗಬಹುದೇನೋ? ಸದ್ಯದ ಮಟ್ಟಿಗೆ ಗಾಳಿ ಬೀಸಿ ಹೋಗಿದೆ. ಅದರೆ,ರಾಜಕೀಯದಲ್ಲಿ ದಿಢೀರ್ ಎಂದು ಬೆಳವಣಿಗೆ ಕಾಣುವುದನ್ನು ಹೇಳಲಾಗದು.

ಭಾರತೀಯ ಜನತಾ ಪಕ್ಷದಲ್ಲಿನ ಭಿನ್ನಮತ ಮತ್ತು ಮುನಿಸಿಗೆ ಹೋಲಿಸಿದರೆ, ಕಾಂಗ್ರೆಸ್ ಪಕ್ಷದ ಸ್ಥಿತಿಗತಿ ಅಷ್ಟು ಗಭೀರವಾಗಿಲ್ಲ.
ಬಾಗಲಕೋಟೆ ಮತ್ತು ಕೋಲಾರ ಈ ಎರಡು ಕ್ಷೇತ್ರಗಳಲ್ಲಿ ಮಾತ್ರ ಹೈಕಮಾಂಡ್ ತಲೆಯನ್ನು ಸಾಕಷ್ಟು ಬಿಸಿ ಮಾಡಿವೆ. ಕೋಲಾರದಲ್ಲಿ ಕುಟುಂಬ ರಾಜಕಾರಣದ ವಿರುದ್ದ ಅಸಹನೆ ಸಿಡಿದೆದ್ದಿದ್ದು, ಸದ್ಯ ಇಬ್ಬರ ಜಗಳದಲ್ಲಿ ಮೂರನೇಯವರಿಗೆ ಲಾಭವಾಗಿದೆ. ಸದ್ಯದ ಮಟ್ಟಿಗೆ ಸಂಘರ್ಷವನ್ನು ನಿವಾರಿಸಲಾಗಿದೆ.

ಅದರೆ, ಇದು ಚುನಾವಣೆಯಲ್ಲಿ ಪಕ್ಷವನ್ನು ದಡ ಸೇರಿಸುತ್ತಿದೆಯೋ ಎನ್ನುವುದು ಇನ್ನೂ ಅಸ್ಪಷ್ಟವಾಗಿದೆ. ದಶಕಗಳಿಂದ ಅಧಿಕಾರ ಅನುಭವಿಸುತ್ತಿರುವ ಮುನಿಯಪ್ಪನವರ ಕುಟುಂಬದ ವಿರುದ್ಧ ಕೆಲವರು ಸಿಡಿಮಿಡಿಗೊಂಡಿದ್ದಾರೆ ಮತ್ತು ಬೇರೆಯ ವರಿಗೂ ಅವಕಾಶ ಸಿಗಲಿ ಎನ್ನುತ್ತಿದ್ದಾರೆ. ಬಾಗಲಕೋಟೆಯಲ್ಲಿಯೂ ಕುಟುಂಬ ರಾಜಕಾರಣದ ಸದ್ದು. ಟಿಕೆಟ್ ನಿರಾಕರಿಸಲ್ಪಟ್ಟ ವೀಣಾ ಕಾಶ್ಯಪ್ಪನವರು ಪಕ್ಷೇತರರಾಗಿ ಸ್ಪರ್ಧೆಯ ಚಿಂತನೆಯಲ್ಲಿದ್ದಾರಂತೆ. ಸದ್ಯದ ಮಟ್ಟಿಗೆ ಟಿಕೆಟ್ ಬದಲಾವಣೆ ಅಸಂಭವ ವಾಗಿದ್ದು, ಮುನಿಸಿಕೊಂಡು ಭಿನ್ನಮತದ ಬಾವುಟ ಹಾರಿಸಿದವರು ಬೇರೆ ಪಕ್ಷ ಸೇರಿ ಅಥವಾ ಪಕ್ಷೇತರ ರಾಗಿ ಸ್ಪರ್ದಿಸಬೇಕು.

ಜಗದೀಶ್ ಶೆಟ್ಟರ್ ಉದಾಹರಣೆ ಮುಂದಿರುವಾಗ ಈ ಹಾದಿಯನ್ನು ಹಿಡಿಯುವವರು ಕಡಿಮೆ ಎನ್ನಬಹುದು. ಪಕ್ಷದೊಳಗೆ ಇದ್ದು ಪಕ್ಷಕ್ಕೆ ಒಳಯೇಟು ನೀಡಿ ವಿಕೃತ ಸಂತೊಷಿಗಳಾಗ ಬೇಕು. ಈ ಸಾಧ್ಯತೆ ಕಡಿಮೆಯಿದ್ದು, ಇನ್ನೊಮ್ಮೆ ಮಗದೊಮ್ಮೆ ಪ್ರಯತ್ನಿಸಿ ಒಳ್ಳೆಯ ದಿನಗಳಿಗಾಗಿ ಕಾಯುವ ಪ್ರ ಮೇಯವೇ ಹೆಚ್ಚು. ಒಂದು ದುಡುಕಿನ ನಿರ್ಣಯ ರಾಜಕೀಯ ಭವಿಷ್ಯವನ್ನೇ ಬಲಿ ತೆಗದುಕೊಂಡ ಉದಾಹರಣೆಗಳು ಸಾಕಷ್ಟಿರುವಾಗ ಕಾದು ನೋಡುವ ತಂತ್ರಕ್ಕೆ ಶರಣಾಗಬಹುದು. ಈ ಹನಿಗಳು ದೊಡ್ಡದಾಗಿ ಜಲಪಾತವಾಗದಿರಲಿ ಎನ್ನುವುದು ಜನರ ಆಶಯ.

(ಲೇಖಕರು : ಅರ್ಥಿಕ ಮತ್ತು ರಾಜಕೀಯ
ವಿಶ್ಲೇಷಕರು)

Leave a Reply

Your email address will not be published. Required fields are marked *

error: Content is protected !!