Thursday, 19th September 2024

ಸೋಲಿನ ಕಥೆಗಳೆಂದರೆ ನಮಗೇಕೆ ಅಷ್ಟು ಅಪಥ್ಯ !?

ಶಿಶಿರಕಾಲ

ಶಿಶಿರ್‌ ಹೆಗಡೆ ನ್ಯೂಜೆರ್ಸಿ

ಒಲಂಪಿಕ್ – ಪ್ರತೀ ನಾಲ್ಕು ವರ್ಷಕ್ಕೊಮ್ಮೆ ನಡೆಯುವ ಕ್ರೀಡಾ ಮಹೋತ್ಸವವನ್ನು ಕೇವಲ ಆಟದ, ಪದಕ ಗೆಲ್ಲುವ ಸ್ಪರ್ಧೆ ಎಂದು ವಿಶ್ಲೇಷಿಸುವುದು ಅಪೂರ್ಣವಾಗುತ್ತದೆ. ಅಸಲಿಗೆ ಇದು ಮನುಷ್ಯನ ಸಾಮರ್ಥ್ಯದ ಪರಾಕಾಷ್ಠೆಯನ್ನು ಪತ್ತೆ ಹಚ್ಚಲೆಂದೇ ಇರುವ ಸ್ಪರ್ಧೆ.

ಚಿನ್ನದ ಪದಕ ಗೆಲ್ಲುವ ಓಟಗಾರ ಮನುಷ್ಯನ ಓಟದ ವೇಗದ ಹೊಸ ಮಿತಿಯನ್ನು, ಹೈ ಜಂಪ್‌ನಲ್ಲಿ ಗೆದ್ದವ ಮನುಷ್ಯ ಎಷ್ಟು ಎತ್ತರ ಹಾರಬಲ್ಲ ಎನ್ನುವ ಸಾಮರ್ಥ್ಯವನ್ನು ಜಗತ್ತಿಗೆ ತಿಳಿಸಿಕೊಡುತ್ತಾನೆ. ಹೀಗೆ ಒಂದೊಂದು ಕ್ರೀಡೆಯಲ್ಲಿಯೂ ಮನುಷ್ಯನ ತಾಕತ್ತಿನ ಪಿನಾಕಲ್‌ನ ಅರಿವು ನಮಗಾಗುತ್ತದೆ. ಒಬ್ಬ ಆಟಗಾರ ಒಲಂಪಿಕ್‌ನಲ್ಲಿ ಭಾಗವಹಿಸುತ್ತಿದ್ದಾನೆ ಎಂದರೆ ಆತ ಆ ದೇಶ ದಲ್ಲಷ್ಟೇ ಅಲ್ಲ, ಜಾಗತಿಕ ಮಟ್ಟದಲ್ಲಿ ಅತ್ಯತ್ತಮ ಕ್ರೀಡಾಪಟುಗಳ ಸಾಲಿನಲ್ಲಿ ನಿಲ್ಲುವವನೆಂದೇ ಅರ್ಥ.

ಅಲ್ಲಿ ಭಾಗವಹಿಸುವ, ಸ್ಪರ್ಧೆಯಲ್ಲಿ ಸೋಲುವ ಪ್ರತಿಯೊಬ್ಬ ಕ್ರೀಡಾಪಟು ಕೂಡ ತನ್ನ ಇಡೀ ಜೀವನವನ್ನು ಈ ಸ್ಪರ್ಧೆಗೆ
ಅಣಿಗೊಳಿಸಿಕೊಳ್ಳಲು ವ್ಯಯಿಸಿರುತ್ತಾನೆ ಎನ್ನುವುದರಲ್ಲಿ ಅನುಮಾನವೇ ಇಲ್ಲ. ಇಲ್ಲಿ ಗೆಲ್ಲುವವನಷ್ಟೇ ಸಾಧಕನಲ್ಲ –
ಭಾಗವಹಿಸುವವರೆಲ್ಲ ಅಸಾಮಾನ್ಯ ಸಾಧಕರೇ. ಒಂದು ವೇಳೆ ಈ ಸಾಂಕ್ರಾಮಿಕ ಹದ್ದುಬಸ್ತಿಗೆ ಬಂದಲ್ಲಿ, ಇನ್ನೊಂದು ಎಂಟು ತಿಂಗಳಲ್ಲಿ ಮಗದೊಂದು ಒಲಂಪಿಕ್ ಜಪಾನಿನ ಟೋಕಿಯೋ ನಗರದಲ್ಲಿ ನಡೆಯಲಿದೆ. ಇದು ನಡೆಯುತ್ತದೆಯೋ ಇಲ್ಲವೋ ಈಗಂತೂ ಪಕ್ಕಾ ಇಲ್ಲ.

ಆದರೆ ಈ ಅನಿಶ್ಚಿತತೆಯ ಮಧ್ಯೆಯೂ ಜಗತ್ತಿನ ಅದೆಷ್ಟೋ ಲಕ್ಷ ಕ್ರೀಡಾಪಟುಗಳು ಈ ಕ್ರೀಡಾ ಸ್ಪರ್ಧೆಯಲ್ಲಿ ಭಾಗವಹಿಸುವ ಕನಸು ಕಟ್ಟಿಕೊಂಡು ಹಗಲು ರಾತ್ರಿ ತಮ್ಮ ದೇಹವನ್ನು ದಂಡಿಸುತ್ತ ತಯಾರಿ ನಡೆಸಿಕೊಳ್ಳುತ್ತಿದ್ದಾರೆ. ಅವರಲ್ಲಿ ಕೆಲವೇ ಕೆಲವು – ಸುಮಾರು ಹತ್ತು ಹನ್ನೆರಡು ಸಾವಿರ ಮಂದಿ ಮಾತ್ರ ತಮ್ಮ ದೇಶದಲ್ಲಿ ಆಂತರಿಕವಾಗಿ ನಡೆಯುವ ಸ್ಪರ್ಧೆಯಲ್ಲಿ ಗೆದ್ದು, ಈ ಒಲಂಪಿಕ್‌ನಲ್ಲಿ ಭಾಗವಹಿಸುವವರಾಗುತ್ತಾರೆ. ಇನ್ನೊಂದೆರಡು ತಿಂಗಳಲ್ಲಿ ಅದೆಷ್ಟೋ ಲಕ್ಷ ಮಂದಿ ತಮ್ಮ ಜೀವಮಾನದ ಕಷ್ಟದ
ಫಲವನ್ನೆಲ್ಲ ಪರೀಕ್ಷಿಸಿಕೊಳ್ಳುವವರಿದ್ದಾರೆ.

ಹೀಗೆ ರಾಷ್ಟ್ರೀಯ ಮಟ್ಟದ ಸೋತು ಹಿಂದಿಳಿಯುವವರ ಸಂಖ್ಯೆ ಅದೆಷ್ಟೋ ಲಕ್ಷ. ಅವರೆಲ್ಲರೂ ಕೂಡ ತಮ್ಮ ಜೀವನವನ್ನು ಈ ಸ್ಪರ್ಧೆಗೆ ಮುಡುಪಾಗಿಟ್ಟವರು. ಹೀಗೆ ಆಯಾ ರಾಷ್ಟ್ರೀಯ ಮಟ್ಟದಲ್ಲಿ ಗೆಲ್ಲಲಾಗದೇ ಒಲಂಪಿಕ್‌ನಲ್ಲಿ ಭಾಗವಹಿಸಲು ಅವಕಾಶ
ಸಿಗದವರೆಲ್ಲ – ಒಂದು, ತಮ್ಮ ತಾಲೀಮನ್ನು ಮುಂದುವರಿಸಬೇಕು ಮತ್ತು ಮುಂದಿನ ಒಲಂಪಿಕ್‌ನಲ್ಲಿ ಭಾಗವಹಿಸಲು ತಮ್ಮ ಜೀವನದ ಇನ್ನೊಂದು ನಾಲ್ಕು ವರ್ಷ – ಅಪಾರ ದೇಹ ಶ್ರಮ ಎಲ್ಲವನ್ನು ವ್ಯವಯಿಸಬೇಕು.

ಇಲ್ಲವೇ ವಯಸ್ಸಾದಲ್ಲಿ – ದೈಹಿಕವಾಗಿ ಅಸಾಧ್ಯವಾದಲ್ಲಿ ಜೀವನವಿಡೀ ಕಂಡ ಕನಸನ್ನು ಅಷ್ಟಕ್ಕೇ ಅನಿವಾರ್ಯವಾಗಿ ಬಿಟ್ಟು ಮುಂದಿ ಜೀವನವನ್ನು ಸಾಧ್ಯವಾಗದ ಭಗ್ನ ಕನಸಿನ ಜೊತೆ ಜೊತೆಯೇ ಬದುಕಬೇಕು. ನೀವು ಕ್ರೀಡಾಪಟುಗಳಲ್ಲದಿದ್ದಲ್ಲಿ
ಈ ಎಲ್ಲ ಸ್ಪರ್ಧೆಯ ಹಿಂದೆ ಸೋತು ಉಳಿಯುವವರ ಸೋಲುಗಳ ನೋವು ಅಷ್ಟು ಸುಲಭದಲ್ಲಿ ತಿಳಿಯುವುದು ಕಷ್ಟ. ಅಸಲಿಗೆ ಸೋತ ಕಥೆಗಳನ್ನು ಹೇಳುವವರೂ ಇರುವುದಿಲ್ಲ – ಕೇಳುವವರೂ ಇರುವುದಿಲ್ಲ. ಅಂತೆಯೇ ಹೆಚ್ಚಿಗೆ ಕಷ್ಟ ಪಟ್ಟವರಷ್ಟೇ ಗೆಲ್ಲುತ್ತಾರೆ – ಗೆಲ್ಲುವವರೆಲ್ಲ ತುಲಾಮನಾತ್ಮಕವಾಗಿ ಹೆಚ್ಚಿಗೆ ಕಷ್ಟಪಟ್ಟವರೇ ಎನ್ನುವಂತೆಯೂ ಇಲ್ಲ.

ಇವತ್ತು ಹೇಳಲು ಹೊರಟಿರುವ ಕಥೆ ಅಮೆರಿಕದ ಕ್ರೀಡಾ ಪಟು, ಓಟಗಾರ್ತಿ ಸಾರಾ ಬ್ರೌನ್ ಎನ್ನುವವಳದ್ದು. ೨೦೧೨ ರಲ್ಲಿ ಸಾರಾ ಒಲಂಪಿಕ್ ಸ್ಪರ್ಧೆಗೆ ರಾಷ್ಟ್ರೀಯ ನಡೆಯುವ ಮಟ್ಟದಲ್ಲಿ ಆಯ್ಕೆಯ ಸ್ಪರ್ಧೆಯಲ್ಲಿ ಭಾಗವಹಿಸಲು ಎಲ್ಲ ತಯಾರಿ ನಡೆಸಿಕೊಂಡಿ ದ್ದಳು. ದಶಕಗಳ ಕಾಲ ನಡೆಸಿದ ಇಂತಹ ತಯಾರಿಯನ್ನು ಪರೀಕ್ಷಿಸುವ ಸಮಯ ಕೊನೆಗೂ ಬಂದಿತ್ತು. ಆ ಹಿಂದೆ ನಡೆದ ಒಲಂಪಿಕ್ ಓಟದ ಸ್ಪರ್ಧೆಯಲ್ಲಿ ಚಿನ್ನ ಗೆದ್ದ ಓಟಗಾರ್ತಿಗಿಂತ ಸಾರಾಳ ಓಟದ ವೇಗ ಹೆಚ್ಚಿಗೆಯಿತ್ತು.

ಆಕೆ ತಾಲೀಮು ನಡೆಸುವಾಗಿನ ಓಟದ ವೇಗದ ಲೆಕ್ಕಾಚಾರದ ಪ್ರಕಾರ ಆಕೆ ಒಲಂಪಿಕ್‌ನಲ್ಲಿ ಭಾಗವಹಿಸಲು ಆಯ್ಕೆಯಾಗುವುದು, ಪದಕ ಗೆಲ್ಲುವುದು ನಿಶ್ಚಿತವಾಗಿತ್ತು. ಇನ್ನೇನು ಈ ರಾಷ್ಟ್ರೀಯ ಮಟ್ಟದ ಆಯ್ಕೆಯಲ್ಲಿ ಭಾಗವಹಿಸಬೇಕು, ದೇಹಕ್ಕಾದ ಒಂದು ಚಿಕ್ಕ ಪೆಟ್ಟಿನಿಂದಾಗಿ ಆಕೆ ಆ ವರ್ಷ ಒಲಂಪಿಕ್ ಅಮೆರಿಕ ತಂಡಕ್ಕೆ ಆಯ್ಕೆಯಾಗಲಿಲ್ಲ. ಆಕೆ ಇದೊಂದು ಆಯ್ಕೆಗೆ ಮತ್ತು ಒಲಂಪಿಕ್‌ಗೆ ತನ್ನ ಇಡೀ ಜೀವನವನ್ನು ಉಳಿದ ಕ್ರೀಡಾಪಟುಗಳಂತೆ ಸವೆಸಿದ್ದಳು. ದೇಹಕ್ಕಾದ ಒಂದು ಅನಿರೀಕ್ಷಿತ ಚಿಕ್ಕ ಗಾಯ ಆಕೆಯ ಕನಸ ನ್ನೆಲ್ಲ ನೀರುಪಾಲಾಗಿಸಿತ್ತು. ಅಷ್ಟಕ್ಕೇ ಸುಮ್ಮನಾಗುವ ಮಾತೇ ಇರಲಿಲ್ಲ. ಆದರೆ ಇಂತಹ ಇನ್ನೊಂದು ಆಯ್ಕೆಗೆ – ಪರೀಕ್ಷೆಗೆ
ಇನ್ನು ನಾಲ್ಕು ವರ್ಷ ಕಾಯಬೇಕು. ಇದು ಸುಮ್ಮನೆ ಕೂತು ಕಾಯುವುದಲ್ಲ. ಆಕೆ ಮುಂದೆ ಆಯ್ಕೆಯಾಗಬೇಕೆಂದರೆ ಇನ್ನಷ್ಟು ವೇಗವಾಗಿ ಓಡಬೇಕು. ನಾಲ್ಕು ವರ್ಷ ಎಂದರೆ ವಯಸ್ಸು ನಾಲ್ಕು ಹೆಚ್ಚಾಗಿರುತ್ತದೆ. ದೇಹ ಬದಲಾಗಿರುತ್ತದೆ, ಮೊದಲಿ ನಂತಿರುವುದಿಲ್ಲ. ಅಲ್ಲದೇ ಸ್ಪರ್ಧೆ ಕೂಡ ಇನ್ನಷ್ಟು ಕಠಿಣವಾಗಿರುತ್ತದೆ, ಸ್ಪರ್ಧಾತ್ಮಕವಾಗಿರುತ್ತದೆ.

ಆಕೆಗಿಂತ ಕಡಿಮೆ ವಯಸ್ಸಿನವರು ವಿರುದ್ಧ ಆಕೆ ನಾಲ್ಕು ವರ್ಷದ ನಂತರ ಸ್ಪರ್ಧಿಸಬೇಕು. ಅಲ್ಲಿ ಗೆಲ್ಲುತ್ತೇನೆಯೋ ಇಲ್ಲವೋ
ಎನ್ನುವ ಅನಿರೀಕ್ಷಿತತೆ ಬೇರೆ. ಮುಂದಿನ ಮೂರು ವರ್ಷ, ಪ್ರತಿದಿನ ಮುಂಬರುವ ಆಯ್ಕೆಗೆ ಆಕೆ ತಾಲೀಮು ನಡೆಸಿದಳು. ಇದೆಲ್ಲ ತಾಲೀಮಿನ ನಡುವೆ ಜೀವನ ಸಹಜವಾಗಿ ನಡೆಯಬೇಕಲ್ಲ. ಆಕೆಗೆ ಮದುವೆಯಾಯಿತು. ಕೌಟುಂಬಿಕ ಬದಲಾವಣೆಗಳಾದವು. ಪತಿ ಕೂಡ ಆಕೆಯನ್ನು ಪ್ರೋತ್ಸಾಹಿಸುವವನೇ ಸಿಕ್ಕಿದ್ದ. ಆಕೆಯ ತಾಲೀಮಿಗೆ ಆತ ಕೂಡ ಆಕೆಯ ಜೊತೆಯೇ ಓಡುತ್ತಿದ್ದ.
ಆಕೆಯ ಟೈಮ್ ಕೀಪರ್ ಆಗಿ, ಕೋಚ್ ಆಗಿ ಪ್ರತೀ ದಿನ ಆಕೆಗೆ ಸಾಥ್ ಕೊಡುತ್ತಿದ್ದ. ಅಮೆರಿಕದ ಟಾಪ್ ಕೋಚ್‌ಗಳು ಆಕೆಯ ಓಟದ ವೇಗವನ್ನು ಕೊಂಡಾಡುತ್ತಿದ್ದರು. ಆಕೆ ಈ ಬಾರಿ ಅಂತೂ ಖಂಡಿತ ಒಲಂಪಿಕ್‌ಗೆ ಆಯ್ಕೆಯಾಗುತ್ತಾಳೆ, ದೇಶಕ್ಕೆ ಚಿನ್ನ ಗೆಲ್ಲುತ್ತಾಳೆ ಎನ್ನುವ ಬಗ್ಗೆ ಅಮೆರಿಕದ ಒಲಂಪಿಕ್ ಕೋಚ್‌ಗಳಿಗೆ ಯಾವುದೇ ಅನುಮಾನವಿರಲಿಲ್ಲ.

ರಾಷ್ಟ್ರೀಯ ಮಟ್ಟದಲ್ಲಿ ನಡೆಯುತ್ತಿದ್ದ ಬಹುತೇಕ ಓಟದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಸಾರಾಗೆ ಸಿಕ್ಕಿತ್ತು. ಹೀಗಿರುವಾಗ ಆಕೆ ಒಂದು ವಿಚಿತ್ರ ಸ್ಥಿತಿಗೆ ಒಳಗಾಗುತ್ತಾಳೆ. ಆಕೆ ಗರ್ಭ ಧರಿಸದೇ ಇರುವಂತೆ ಐಯುಡಿ ಗರ್ಭನಿರೋಧಕ – ಕೊಪ್ಪರ್ ಟಿ ಅನ್ನು
ಬಳಸುತ್ತಿರುತ್ತಾಳೆ. ಐಯುಡಿ ೯೯% ಪರಿಣಾಮಕಾರಿ. ಸಾರಾಳ ಹಣೆಬರಹವೆನ್ನಬೇಕೋ ಅಥವಾ ಇನ್ನೇನೋ ಗೊತ್ತಿಲ್ಲ – ಸರಿಯಾಗಿ ಒಲಂಪಿಕ್‌ಗೆ ಹನ್ನೆರಡು ತಿಂಗಳುಗಳಿರುವಾಗ ಆಕೆ ಗರ್ಭವತಿಯಾಗಿದ್ದು ತಿಳಿಯುತ್ತದೆ.

ಆಕೆಯನ್ನು ಪರೀಕ್ಷಿಸುತ್ತಿದ್ದ ಡಾಕ್ಟರ್ ಆಕೆ ಇನ್ನೊಮ್ಮೆ ಗರ್ಭವತಿಯಾಗುವ ಸಾಧ್ಯತೆಯಿಲ್ಲ – ಆಕೆಗಿರುವ ದೈಹಿಕ ಕಾರಣದಿಂದ ಆಕೆ ಒಮ್ಮೆ ಗರ್ಭಧರಿಸಿದ್ದೇ ಅಚ್ಚರಿ ಎಂದು ವರದಿ ಕೊಡುತ್ತಾರೆ. ಹಾಗಿರುವಾಗ ಗರ್ಭಪಾತ ಮಾಡಿಸುವ ಯೋಚನೆ ಕೂಡ ಮಾಡುವಂತಿಲ್ಲ. ಸಾರಾ ಎದುರಿಗೆ ಒಲಂಪಿಕ್ ಇದೆ – ಗರ್ಭದಲ್ಲಿ ಆಗತಾನೆ ಸೊನೊಗ್ರಫಿ ಮಾಡಿದಾಗ ಕೇಳಿಸಿದ ಮಗುವಿನ ಹೃದಯದ ಬಡಿತ. ಒಲಂಪಿಕ್ ಲೆಕ್ಕ ಹಾಕಿದರೆ ಸರಿಯಾಗಿ ಹನ್ನೆರಡು ತಿಂಗಳು ಬಾಕಿ ಇದೆ. ಎರಡರಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳಬೇಕಾದ ಸ್ಥಿತಿ. ಬಹುತೇಕ ಮಹಿಳಾ ಕ್ರೀಡಾಪಟುಗಳ ಎದುರು ಇಂತಹ ಆಯ್ಕೆ ಮಾಡಿಕೊಳ್ಳಬೇಕಾದ ಸ್ಥಿತಿ ಎದು ರಾಗುತ್ತದೆ.

ಒಂದೋ ಕ್ರೀಡೆಯನ್ನು ಆಯ್ಕೆಮಾಡಿಕೊಳ್ಳಬೇಕು, ಮಗುವನ್ನು ಪಡೆಯುವುದನ್ನು ಮುಂದೆ ಹಾಕುವ ನಿರ್ಧಾರ ತೆಗೆದು ಕೊಳ್ಳಬೇಕು ಅಥವಾ ಮಗು ಮತ್ತು ಸಂಸಾರವನ್ನು ನೆಚ್ಚಿಕೊಂಡು ಕ್ರೀಡೆಯ ಕನಸನ್ನೆಲ್ಲ ಅಲ್ಲಿಗೇ ಕೈ ಬಿಡಬೇಕು. ಹೀಗೆ ಕ್ರೀಡೆ ಯನ್ನೇ ಜೀವನವನ್ನು ಮೀರಿ ಆಯ್ಕೆಮಾಡಿಕೊಂಡಲ್ಲಿ , ಕ್ರೀಡೆಯಲ್ಲಿ ಸಾಫಲ್ಯ, ಗೆಲುವು ಪಕ್ಕಾ ಎಂದೇನಿಲ್ಲ. ಆದರೆ ಇಂತಹ ಪರಿಸ್ಥಿತಿಯಲ್ಲ ಎರಡರಲ್ಲಿ ಒಂದನ್ನು ಸಮಾಧಾನದಲ್ಲಿ ಅಳೆದು ತೂಗಿ ಆಯ್ಕೆ ಮಾಡಿಕೊಳ್ಳುವ ಅವಕಾಶ ಉಳಿದ ಮಹಿಳಾ ಕ್ರೀಡಾಪಟುಗಳಿಗೆ ಇರುತ್ತದೆ.

ಆದರೆ ಸಾರಾಳ ಕಥೆ ಭಿನ್ನವಾಗಿತ್ತು. ಆಕೆ ಅಮೆರಿಕದ ಅತ್ಯುತ್ತಮ, ಟಾಪ್ ಓಟಗಾರರಲ್ಲಿ ಒಬ್ಬಳು. ಕಳೆದ ಬಾರಿ ಒಂದು ಚಿಕ್ಕ ಗಾಯದಿಂದಾಗಿ ಒಲಂಪಿಕ್‌ನಲ್ಲಿ ಭಾಗವಹಿಸಲಾಗಿರಲಿಲ್ಲ. ಇಡೀ ಜೀವನ ಮತ್ತು ಕಳೆದ ನಾಲ್ಕು ವರ್ಷಕ್ಕಾದ ಸಮಯ ಇನ್ನೇನು ಬರಬೇಕು ಎನ್ನುವಾಗ ಒಳ್ಳೆಯ ಸುದ್ದಿಯಾದರೂ ಆ ಸುದ್ದಿಗೆ ಇದು ಸರಿಯಾದ ಸಮಯವಾಗಿರಲಿಲ್ಲ. ಡಾಕ್ಟರ್ ಆಕೆ ಗರ್ಭವತಿ ಯಾಗಿದ್ದಾಳೆ ಎಂದು ದೃಢೀಕರಿಸಿ ದಾಗ ಆಕೆಯ ಕಣ್ಣಿನಲ್ಲಿ ಜಿನುಗಿದ ಆ ಹನಿಯಲ್ಲಿ ಸಂತಸ ಮತ್ತು ದುಃಖ ತುಂಬಿದ ಒಂದು ವಿಚಿತ್ರ ಭಾವವಿತ್ತು.

ಗಂಡ ಹೆಂಡತಿ ಎಲ್ಲ ಲೆಕ್ಕ ಹಾಕಿಕೊಂಡರು. ಈಗ ಮೂರು ತಿಂಗಳ ಗರ್ಭಿಣಿ. ಇನ್ನು ಸರಿಯಾಗಿ ಆರು ತಿಂಗಳಿಗೆ ಮಗು ಹುಟ್ಟು ತ್ತದೆ. ಅದಾದ ಮೂರು ತಿಂಗಳ ನಂತರ ನಂತರ ಒಲಂಪಿಕ್ ಆಯ್ಕೆಯ ಸ್ಪರ್ಧೆ – ನಂತರ ಒಲಂಪಿಕ್. ಸಮಯವಿದೆ – ಆದರೆ ಅಲ್ಲಿಯವರೆಗೂ ಆಕೆ ತಾಲೀಮು ನಡೆಸಲೇಬೇಕು. ಒಲಂಪಿಕ್‌ನ ಆಯ್ಕೆಗೆ ಕೇವಲ ಮೂರು ತಿಂಗಳ ತಾಲೀಮು ಸಾಕಾಗುವುದೇ ಇಲ್ಲ. ಮಗುವನ್ನು ಗರ್ಭದಲ್ಲಿ ಹೊತ್ತೇ ಓಡಲು ಶುರುಮಾಡಿದಳು. ತನ್ನ ದೈಹಿಕ ಶ್ರಮ ಮಗುವಿನ ಬೆಳವಣಿಗೆಗೆ ತೊಂದರೆ ಯಾಗುತ್ತಿದೆಯೇ ಎರಡು ದಿನಕ್ಕೊಮ್ಮೆ ಪರೀಕ್ಷೆಮಾಡಿಸಿಕೊಂಡಳು.

ಗರ್ಭಿಣಿಯಾದಾಗಿನಿಂದ ಮಗು ಪಡೆಯುವಲ್ಲಿಯವರೆಗೆ ಮತ್ತು ನಂತರದಲ್ಲಿ ಹತ್ತಾರು ಹಾರ್ಮೋನ್‌ಗಳು ಹೆಣ್ಣಿನ ದೇಹದಲ್ಲಿ
ತಯಾರಾಗುತ್ತವೆ. ದೇಹ ನೂರೆಂಟು ಬದಲಾವಣೆಗಳಾಗುತ್ತವೆ. ಅದೆಲ್ಲದರ ಜೊತೆ ಆಕೆಯ ತಾಲೀಮು ಮುಂದುವರಿಯಿತು. ನಂತರ ಮಗು ಕೂಡ ಸಹಜ ರೀತಿಯಲ್ಲಿ ಹುಟ್ಟಿತು. ಮಗು ಹೆತ್ತ ನಾಲ್ಕು ದಿನದ ಮತ್ತೆ ಓಟದ ತಯಾರಿ ಶುರುಮಾಡಿಕೊಂಡಳು. ಆಯ್ಕೆಯ ಸ್ಪರ್ಧೆಗೆ ಇನ್ನು ಸರಿಯಾಗಿ ಮೂರೇ ತಿಂಗಳು ಉಳಿದಿತ್ತು. ಆಕೆ ಛಲ ಬಿಡಲಿಲ್ಲ. ಆದರೆ ಮಗು ಹುಟ್ಟಿದ ಒಂದು ತಿಂಗಳು ಕಳೆದಾಗ ಆಕೆಗೆ ಸಣ್ಣಗೆ ಬೆನ್ನು ನೋವು ಕಾಣಿಸಿಕೊಂಡಿತು. ಪರೀಕ್ಷಿಸಿಕೊಂಡಾಗ ಆಕೆಯ ಬೆನ್ನು ಮೂಳೆ ಸವೆದ ವಿಚಾರ ತಿಳಿದು ಬಂತು. ಒಂದು ಕಡೆ ಬೆನ್ನು ನೋವು, ಇನ್ನೊಂದು ಕಡೆ ತಾಲೀಮಿನ ದೈಹಿಕ ಶ್ರಮ, ರಾತ್ರಿ ನಾಲ್ಕಾರು ಸಲ ಎದ್ದು ಮಗುವಿಗೆ ಹಾಲುಣಿಸಬೇಕು. ಪ್ರತೀ ಕ್ರೀಡಾಪಟುವಿಗೆ ನಿದ್ರೆ ತೀವ್ರ ಮಹತ್ವಾzಗಿರುತ್ತದೆ, ಆಕೆಗೆ ಅದರ ಲಕ್ಷುರಿ ಇರಲಿಲ್ಲ.

ಎಲ್ಲ ರೀತಿಯಲ್ಲೂ ಆಕೆಯ ಸ್ಥಿತಿ ವೈರುಧ್ಯವನ್ನೇ ಹೊಂದಿತ್ತು. ಇಷ್ಟಾದರೂ ಸೋಲನ್ನು ಒಪ್ಪಿಕೊಂಡು ಕೈ ಚೆಲ್ಲಲಿಲ್ಲ ಸಾರಾ ಬ್ರೌ. ಕೊನೆಗೆ ಆ ಒಲಂಪಿಕ್ ಆಯ್ಕೆಯ ದಿನ ಬರುತ್ತದೆ. ಆಕೆಯ ಬೆನ್ನು ನೋವು ಕೂಡ ಒಂದು ಕಡೆ ಹೆಚ್ಚಾಗಿರುತ್ತದೆ. ಅದೆಲ್ಲ ವನ್ನು ಲೆಕ್ಕಿಸದೇ ಆಯ್ಕೆಯ ಸ್ಪರ್ಧೆಯಲ್ಲಿ ಓಡುತ್ತಾಳೆ. ದುರದೃಷ್ಟವಶಾತ್ ಆಕೆಗೆ ಆ ದಿನ ದೇಹ ಸಾತ್ ಕೊಡುವುದಿಲ್ಲ. ಆಕೆ ಆಯ್ಕೆಯ ಸ್ಪರ್ಧೆಯ ಕೊನೆಯ ಸುತ್ತಿನಲ್ಲಿ ಕುಂಟುತ್ತ ಓಡಿ ಹಿಂದೆ ಬೀಳುತ್ತಾಳೆ. ಆಕೆ ಒಲಂಪಿಕ್‌ಗೆ ಆಯ್ಕೆಯಾಗುವುದಿಲ್ಲ. ಆಕೆಯ ಜೀವಮಾನ ಕಂಡ ಕನಸು ಆ ದಿನ ನುಚ್ಚುನೂರಾಗುತ್ತದೆ.

ಒಂದಿಷ್ಟು ಜಿಜ್ಞಾಸೆಯ ಪ್ರಶ್ನೆಗಳು ಹುಟ್ಟಿಕೊಳ್ಳುವುದೇ ಇಲ್ಲಿ. ಆಕೆ ನಿಜವಾಗಿ ಆ ದಿನ ಸೋತಳೇ? ಆಕೆಯ ಎದುರು ಜೀವನದಲ್ಲಿ ಆಯ್ಕೆಗಳಿದ್ದವೇ? ಆಕೆಯ ದೇಹದ ಗಾಯಕ್ಕೆ, ಗರ್ಭಧರಿಸುವುದೇ ಸಾಧ್ಯವಿಲ್ಲದ ದೇಹದಲ್ಲಿ ಐಯುಡಿ ಇದ್ದರೂ ಆಕೆ ಗರ್ಭ ಧರಿಸಿದ್ದು ಆಕೆಯ ಹಣೆಬರಹವೇ? ಆಕೆಯ ಛಲ ಬಿಡದ ಹಾದಿ ಎಲ್ಲ ವ್ಯರ್ಥವೇ? ಆಕೆಯ ಸೋಲು ನಿಜವಾದ ಸೋಲೇ? ಸಾರಾ ಒಲಂಪಿಕ್ ನಲ್ಲಿ ಸ್ಪರ್ಧಿಸಲಿಲ್ಲ, ಗೆಲ್ಲಲಿಲ್ಲ ಎಂಬ ಒಂದೇ ಕಾರಣಕ್ಕೆ ಆಕೆಯನ್ನು ಸೋತಳೆಂದು ಸಾರಿಬಿಡಬೇಕೆ? ಆಕೆ ಪಟ್ಟ ಶ್ರಮ ಕಡಿಮೆಯಾಯಿತೇ? ಯಾವುದೂ ಅಲ್ಲವಲ್ಲ. ಆಕೆ ಮುಂದೆ ಜೀವನದಲ್ಲಿ ಏನು ಮಾಡಿದಳು, ಈಗ ಹೇಗೆ ಬದುಕುತ್ತಿzಳೆ
ಎಂಬಿತ್ಯಾದಿ ಅಪ್ರಸ್ತುತ. ಇಲ್ಲಿ ಸಾರಾ ತನ್ನ ಸೋಲನ್ನು ಒಪ್ಪಿಕೊಂಡ ರೀತಿ ಮಾತ್ರ ಪ್ರಸ್ತುತ ಮತ್ತು ನಾವು ಗ್ರಹಿಸಬೇಕಾದದ್ದು.

ಆಕೆ ಅಳಲಿಲ್ಲ, ಬೇಸರಿಸಿಕೊಳ್ಳಲಿಲ್ಲ, ಪ್ರಯತ್ನವೆಲ್ಲ ವ್ಯರ್ಥವಾಯಿತೆಂದು ಖಿನ್ನಳಾಗಲಿಲ್ಲ, ’ಛೆ’ ಎನ್ನಲಿಲ್ಲ, ವಿಧಿಯನ್ನು ಕೂಡ ಶಪಿಸಲಿಲ್ಲ. ಅದಕ್ಕಿಂತ ಹೆಚ್ಚಾಗಿ ಓ ದೇವರೇ ಇದೆಲ್ಲ ನನಗೇ ಏಕೆ ಆಗಬೇಕಿತ್ತು?’ ಎಂದು ಕೇಳಲಿಲ್ಲ. ತನಗಾದ ಸ್ಥಿತಿಯನ್ನು ಯಥಾವತ್ತು ಒಪ್ಪಿಕೊಂಡುಬಿಟ್ಟಳು – ಅಷ್ಟೇ. ನಾವೆ ಜೀವನದಲ್ಲಿ ಒಂದಿಂದು ಸೋಲನ್ನು ನೋಡಿಯೇ ಇರುತ್ತೇವೆ, ನೋಡು ತ್ತಲೇ ಇರುತ್ತೇವೆ. ಸೋತಾಗಲೆಲ್ಲ ಸೋಲೇ ಗೆಲುವಿನ ಸೋಪಾನ ಎಂದುಕೊಳ್ಳಲು ಮುಂದೊಂದು ಗೆಲುವಿಗೆ ಅವಕಾಶವೇ ಇರದ ಪರಿಸ್ಥಿತಿಯೂ ಕೆಲವೊಮ್ಮೆ ಎದುರಾಗುತ್ತದೆ.

ಹಾಗಾದಾಗ ಈ ಎಲ್ಲ ಸ್ಥಿತಿ ನನಗೇ ಏಕೆ ಬರಬೇಕಿತ್ತು ಎಂದು ಪ್ರಶ್ನಿಸುತ್ತೇವೆ. ಪಟ್ಟ ಸರ್ವ ಪ್ರಯತ್ನ ವ್ಯರ್ಥವಾದಾಗ ಹಣೆಬರಹ ಎಂದು ಖಿನ್ನರಾಗುತ್ತೇವೆ. ಇಲ್ಲಿ ಒಂದು ಸೋಲನ್ನು ಒಪ್ಪಿಕೊಳ್ಳಲು ಮನಸ್ಸು ತಯಾರೇ ಇರುವುದಿಲ್ಲ. ಸಾರಾ ಹೀಗೆ ಒಲಂಪಿಕ್ ಭಾಗವಹಿಸಲಾಗಲಿಲ್ಲವಲ್ಲ ಇದೇನು ಒಂದೇ, ವಿಭಿನ್ನ, ಅಪರೂಪದ ಕಥೆಯಲ್ಲ. ಸಾರಾ ಕಥೆ ಹೀಗೆ ಕೊನೆಯ ಗುರಿ ಮುಟ್ಟದ
ಕೋಟಿ ಕೋಟಿ ಕಥೆಗಳ ಮಧ್ಯೆ ಒಂದು ಸ್ಯಾಂಪಲ್ ಅಷ್ಟೇ.

ಅದೆಷ್ಟೋ ಕೋಟಿ ಕ್ರೀಡಾಪಟುಗಳು ಇಂಥದ್ದೊಂದು ಕನಸು ಕಂಡು ಅದು ಈಡೇರದೇ ಸೋತಿರುತ್ತಾರೆ. ಅವರೆಲ್ಲರ ಪ್ರಯತ್ನ ಕೊನೆಯಲ್ಲಿ ಚಿನ್ನ ಗೆಲ್ಲುವ ಕ್ರೀಡಾಪಟುವಿನಷ್ಟೇ ಇದ್ದಿರುತ್ತದೆ. ಆದರೂ ಅವರ ಕಥೆ ಯಾರಿಗೂ ಗೊತ್ತೇ ಇರುವುದಿಲ್ಲ. ಇಡೀ ಜಗತ್ತು ಗೆದ್ದ ಎತ್ತಿನ ಬಾಲವನ್ನಷ್ಟೇ ಹಿಡಿದಿರುತ್ತದೆ.

ಕೆಲವರು ಸೋಲನ್ನು ಯಥಾವತ್ತು ಒಪ್ಪಿಕೊಳ್ಳುತ್ತಾರೆ. ಇನ್ನು ಕೆಲವರು ಜೀವಮಾನವಿಡೀ ತನ್ನ ಸೋಲಿನ ಹೊರೆಯನ್ನು ಹೊತ್ತೇ ಬದುಕುತ್ತಿರುತ್ತಾರೆ. ಕೆಲವೇ ಕೆಲವರನ್ನು ಬಿಟ್ಟರೆ ಉಳಿದವರು ಆ ಸೋಲಿನ ಮಾತನ್ನು ತೆಗೆದಾಗಲೆಲ್ಲ ಅದರ ಮಾತೆಲ್ಲ ಈಗೇಕೆ ಬಿಡು?’ ಎಂದು ಸೋಲಿನ ಬಗ್ಗೆ ಮಾತು ಮುಂದಿವರಿಸಲು ಇಚ್ಚಿಸುವುದಿಲ್ಲ. ಅದೇಕೆ ಹೀಗೆ? ಸೋತ ಬಗ್ಗೆ ನಾವು ಮಾತ ನಾಡುವುದಕ್ಕೆ ಹಿಂಜರಿಯುವುದೇಕೆ? ಅಸಲಿಗೆ ಪ್ರಯತ್ನಿಸುವುದಿದೆಯಲ್ಲ ಅದೇ ನಿಜವಾದ ಗೆಲುವು. ಸೋಲಿನ ಕಥೆ ಎನ್ನುವ ವಿಚಾರವೇ ಇಲ್ಲ. ಸೋಲು ಎನ್ನುವುದಕ್ಕಿಂತ ಪ್ರಯತ್ನಪಟ್ಟದ್ದು ದೊಡ್ಡ ಗೆಲುವು.

ಶ್ರೀ ಕೃಷ್ಣ ಹೇಳಿದ್ದೂ ಅದನ್ನೇ. ಪ್ರಯತ್ನವೇ ಪಡದಿದ್ದರೆ ಅದು ಸೋಲಾಗಿರುತ್ತದೆ. ಆದರೆ ಆ ಪ್ರಯತ್ನಿಸದ ಸೋಲಿನಲ್ಲಿ ಶ್ರಮದ ನೋವಿರದ ಕಾರಣ ಅದು ಅಷ್ಟಾಗಿ ಬಾಧಿಸುವುದೇ ಇಲ್ಲ ಮತ್ತು ಯಾರಿಗೂ ಗೊತ್ತಾಗುವುದೇ ಇಲ್ಲ. ಆದರೆ ಅಸಲಿಗೆ ಅದೇ ದೊಡ್ಡ ಸೋಲಾಗಿರುತ್ತದೆ. ಸಮಾಜದಲ್ಲಿನ ಸೋಲಿನೆಡೆಗಿನ ಅಸ್ವೀಕಾರ ಭಾವದ ಕಾರಣದಿಂದಾಗಿ ಸೋಲಿನ ಕಥೆಗಳು ಲೈಮ್ ಲೈಟ್‌ಗೆ ಬರುವುದೇ ಇಲ್ಲ. ಸೋಲಿನ ಪಾಠವನ್ನು ಸಮಾಜ ನಮಗೆ ಹೇಳಿರುವುದೇ ಇಲ್ಲ. ಸಾಧನೆಯ, ಗೆದ್ದ ಕಥೆ ನಾವೆ ತಿಳಿಯ ಬೇಕು, ಅದರಿಂದ ಪ್ರೇರಣೆ ಪಡೆಯಬೇಕು ನಿಜ.

ಆದರೆ ಸೋಲನ್ನು ಸ್ವೀಕರಿಸುವುದು ಕೂಡ ನಮಗೆಲ್ಲರಿಗೆ ತಿಳಿದಿರಬೇಕು ಅಲ್ಲವೇ? ಆದರೆ ಯಾಕೋ ನಮಗೆಲ್ಲರಿಗೆ ಸೋತ ಕಥೆ ಗಳೆಂದರೆ ಅಷ್ಟು ಅಪತ್ಯ. ನಾವು ಗೆಲುವಿನ ಹಿಂದೆ ಅದೆಷ್ಟು ಬಿದ್ದಿರುತ್ತೇವೆಯೆಂದರೆ ನಮಗೆ ಸಿನೆಮಾದಲ್ಲಿ ಹೀರೋ ಕೂಡ ಕೊನೆಯಲ್ಲಿ ಗೆಲ್ಲಬೇಕು, ಸೋತರೆ ರುಚಿಸುವುದಿಲ್ಲ. ಸೋತ ನಂತರ ಮುಂದೇನು ಎನ್ನುವುದು ಆ ಮೇಲಿನ ಮಾತು – ಆದರೆ ಗೆಲುವಿನ ಜತೆ ಜತೆ ಸಾಧಕನಾಗ ಹೊರಟವನು ಒಂದು ಕಡೆ ಸೋಲಿಗೂ ತನನ್ನು ತಯಾರುಮಾಡಿಕೊಂಡಿರಬೇಕು. ಹಾಗಂತ ಸೋಲಿನ ಬಗ್ಗೆ ಹೆದರುವುದು ಎಂದಲ್ಲ ಅಥವಾ ನೆಗೆಟಿವ್ ವಿಚಾರವನ್ನೇ ಮೈ ಮೇಲೆ ಎಳೆದುಕೊಳ್ಳುವುದು ಎಂದು ಕೂಡ ಅಲ್ಲ.

ಸೋಲು ಕೂಡ ಒಂದು ಸಾಧ್ಯತೆ ಎನ್ನುವುದನ್ನು ಅರಿತೇ ಸಾಧನೆಯ ಮೆಟ್ಟಿಲೇರುವ ತಯಾರಿಯಾಗುತ್ತಿರಬೇಕು. ಸೋಲಿನ ಬಗ್ಗೆ ಯೋಚಿಸುವುದು ಕೂಡ ತಪ್ಪು ಎನ್ನುವ ವಾತಾವರಣದಲ್ಲಿ ಬೆಳೆದರೆ ಸೋಲನ್ನು ಅಷ್ಟು ಸುಲಭದಲ್ಲಿ ಸ್ವೀಕರಿಸಲಾಗುವುದಿಲ್ಲ.
ಅಂತೆಯೇ ಸೋಲು ಬರಬಹುದು ಎಂದು ಋಣಾತ್ಮಕವಾಗಿ ಸದಾ ಯೋಚಿಸುತ್ತಿದ್ದರೆ ಗೆಲುವಿಗೆ ಅದೇ ಅಡ್ಡ ಬಂದು ನಿಲ್ಲುತ್ತದೆ. ಆದರೆ ಸೋಲಿನ ಸಾಧ್ಯತೆಯನ್ನು ಸಂಪೂರ್ಣ ಇರ್ಗ್ನೋ ಮಾಡುವಂತಿಲ್ಲ. ಸೋಲು ಯಾವಾಗ ಬೇಕಾದರೂ ಧುತ್ತನೆ ಎದುರಿಗೆ ಬಂದು ನಿಲ್ಲಬಹುದು. ಸೋಲು ಎನ್ನುವುದು ತೀರಾ ದೊಡ್ಡ ಸೋಲಾಗಿರಬೇಕೆಂದೇನಿಲ್ಲ.

ಸೋಲು ಅತೀ ಚಿಕ್ಕದೊಂದು ವಿಚಾರದ್ದಿರಬಹುದು. ಸೋಲಿನ ಪ್ರಮಾಣ ಯಾವುದೇ ಇರಲಿ ಎಲ್ಲ ಸೋಲೂ ಸೋಲೇ – ಅದೆಲ್ಲ ದಕ್ಕೂ ನಾವು, ನಮ್ಮ ಮನಸ್ಸು ಸದಾ ತಾಯಾರಿರಲೇ ಬೇಕು. ಈ ಸೋಲುಗಳ ನಡುವೆ ಪ್ರಯತ್ನಿಸುತ್ತ, ಬದುಕುತ್ತ, ಗೆಲ್ಲುವುದೇ ಜೀವನವಾಗಿರುತ್ತದೆ. ಮೂಲದಲ್ಲಿ ಸೋಲು ಚಿಕ್ಕದಿರಲಿ, ದೊಡ್ಡದಿರಲಿ ಅದನ್ನು ಬಂದ ಹಾಗೆಯೇ ಸ್ವೀಕರಿಸುವುದು ಬಹು ಮುಖ್ಯವಾಗುತ್ತದೆ.

ಸೋಲಿನ ಈ ಪರಿಜ್ಞಾನವನ್ನು ಹೊಂದುವ ಮತ್ತು ಅನಿರೀಕ್ಷಿತವೆನ್ನುವಂತೆ ಸೋಲೊಂದು ಎದುರಿಗೆ ಬಂದು ನಿಂತಾಗ ಅದನ್ನು ನಿಭಾಯಿಸುವ ಸಾಮರ್ಥ್ಯವನ್ನು ಧನಾತ್ಮಕವಾಗಿಯೇ ಬೆಳೆಸಿಕೊಳ್ಳದಿದ್ದರೆ ಖಿನ್ನತೆ – ಆತ್ಮಹತ್ಯೆ ಮೊದಲಾದ ಸ್ಥಿತಿ ನಿರ್ಮಾಣ ವಾಗಿ ಬಿಡುತ್ತದೆ. ಈ ಕಾರಣದಿಂದಲೇ ಕೆಲವೊಂದು ಆತ್ಮಹತ್ಯೆಯ ಹಿಂದಿನ ಕಥೆ ಓದಿದಾಗ ’ಛೆ, ಇದೆಲ್ಲ ಜೀವ ತೆಗೆದುಕೊಳ್ಳು ವಂತಹ ವಿಚಾರವಾಗಿತ್ತೇ?’ ಎಂದೆನಿಸುವುದು. ಅಲ್ಲಿ ಅಸಲಿಗೆ ಜೀವ ತೆಗೆದುಕೊಂಡವನ ಮೆಂಟಲ್ ವೀಕ್ನೆಸ್, ಸೋಲನ್ನು ಎದುರಿಸುವ ಶಕ್ತಿ ಬೆಳೆದಿರಲಿಲ್ಲ ಎಂದು ಹೇಳುವುದಕ್ಕಿಂತ ಸೋಲಿಗೆ ಒಂದು ತಯಾರಿ ನಡೆದಿರಲಿಲ್ಲ ಎಂದು ಗ್ರಹಿಸಬೇಕಾಗುತ್ತದೆ. ಚಿಕ್ಕದಿರಲಿ, ದೊಡ್ಡದಿರಲಿ – ಎಲ್ಲ ಸೋಲುಗಳಿಗೆ ಸುಪ್ತವಾದ ಒಂದು ತಾಲೀಮು ಜೀವಮಾನವಿಡೀ ನಡೆಯುತ್ತಲೇ ಇರಬೇಕು.

ಮಕ್ಕಳನ್ನು ಬೆಳೆಸುವಾಗ ಕೂಡ ನಾವು ಸೋಲಿನ ಸಾಧ್ಯತೆಯನ್ನು ಅವರೆದುರು ಆಡಿಯೇ ಇರುವುದಿಲ್ಲ. ಅವರನ್ನು ಒಂದು ಸೋಲಿಗೆ ತಯಾರು ಮಾಡಿಸಿಯೇ ಇರುವುದಿಲ್ಲ. ಕೆಲವು ತಂದೆ ತಾಯಿಯರಂತೂ ಮಗುವಿನ ಜೊತೆ ಸೋಲಿನ ಸಾಧ್ಯತೆಯ ಬಗ್ಗೆ ಯಾವತ್ತೂ ಚರ್ಚಿಸಿಯೇ ಇರುವುದಿಲ್ಲ. ಪರೀಕ್ಷೆಯ ತಯಾರಿ ಮಾಡುವಾಗ ಸೋಲಿನ ಬಗ್ಗೆ ಮಾತನಾಡದಿದ್ದರೂ ರಿಸಲ್ಟ ಬರುವ ಸಮಯದಲ್ಲಿ ಫೇಲ್ ಆದರೆ, ಉತ್ತಮ ಅಂಕ ಬರದಿದ್ದರೆ ಪರವಾಗಿಲ್ಲ ಎನ್ನುವ ಒಂದು ಮಾತು ಅದೆಷ್ಟೋ ಮಕ್ಕಳು ಆತ್ಮಹತ್ಯೆ ಯನ್ನು ಮಾಡಿಕೊಳ್ಳುವುದನ್ನು ತಡೆಗಟ್ಟಬಹುದು. ಇದು ಬಹುತೇಕ ಕಡೆ ಲಾಗುವಾಗುತ್ತದೆ. ಯಾರೊಬ್ಬರೇ ಇರಲಿ – ಪ್ರಯತ್ನ
ಪಟ್ಟ ನಂತರ ಕೂಡ ಸೋಲಾಗಬಹುದು – ಅದು ವಾಸ್ತವ.

ಸೋತ ಕೂಡಲೆ ಪ್ರಯತ್ನ ಕಮ್ಮಿ ಆಯಿತು ಎನ್ನುವ ಹಳಸಲು ವಾದ ಬೇಡ. ಸೋಲು ಗೆಲುವು ಎನ್ನುವುದು ಒಂದೇ ನಾಣ್ಯದ ಎರಡು ಮುಖ ಎಂದು ನಾವೆ ಕಂಡಕಂಡ ಕಡೆ ಅಗ್ಗದ ಮಾತಿನಂತೆ, ಬೇರೆಯವರಿಗೆ ಸೋಲಾದಾಗ ಸಮಾಧಾನ ಮಾಡಲು ಹೇಳುತ್ತಿರುತ್ತೇವೆ. ಆದರೆ ಸೋಲು ನಮಗಾದಾಗ ಮಾತ್ರ ಕಂಗಾಲಾಗುತ್ತೇವೆ. ಗೆಲುವನ್ನು ಚಿಕ್ಕ ಗೆಲುವು ಎಂದು ಸ್ವೀಕರಿಸುವುದು ವಿನಯತೆ. ಸೋಲನ್ನು ಪ್ರಯತ್ನಿಸಿದ ಗೆಲುವು ಎಂದು ಯಥಾವತ್ತು ಸ್ವೀಕರಿಸುವುದು ಅವಶ್ಯಕತೆ. ಅದು ಸಾರಾ ಬ್ರೌ ಮತ್ತು ಆಕೆಯಂತಹ ಅದೆಷ್ಟೋ ದೇಹ, ಜೀವನ ಸಾತ್ ಕೊಡದೇ ಸೋತು ಹಿಂದೆ ಉಳಿದುಬಿಡುವ, ಸುದ್ದಿಯಾಗದ ಕ್ರೀಡಾಪಟುಗಳಿಂದ
ನಾವು ಕಲಿಯಬೇಕಾದ ಪಾಠ.