Sunday, 8th September 2024

ಭಾರತವನ್ನು ದೂಷಿಸುವ ಕಾಲ ಈಗಿಲ್ಲ

ಹಂಪಿ ಎಕ್ಸ್’ಪ್ರೆಸ್

ದೇವಿ ಮಹೇಶ್ವರ ಹಂಪಿನಾಯ್ಡು

೧೯೮೩ರ ವಿಶ್ವಕಪ್ ಕ್ರಿಕೆಟ್‌ನ ಫೈನಲ್ ಪಂದ್ಯ. ಕಳೆದ ಎರಡೂ ವಿಶ್ವಕಪ್ ಗೆದ್ದು ಕ್ರಿಕೆಟ್‌ನ ದೈತ್ಯರಾಗಿದ್ದ ವೆಸ್ಟ್‌ಇಂಡಿಸ್ ತಂಡ ಮೂರನೇ ಬಾರಿಯೂ ಫೈನಲ್ ತಲುಪಿತ್ತು. ಆ ಪಂದ್ಯದಲ್ಲಿ ಅವರನ್ನು ಎದುರಿಸಲು ಸಜ್ಜಾಗಿದ್ದ ತಂಡ ಭಾರತ. ನಮ್ಮ ದೇಶ
ಫೈನಲ್ ಪಂದ್ಯದವರೆಗೂ ಬಂದದ್ದು ವಿಶ್ವಕ್ಕೆ ಒಂದು ಆಶ್ಚರ್ಯ ಮತ್ತು ಅದೊಂದು ಆಕಸ್ಮಿಕವೂ ಆಗಿತ್ತು.

ಆದರೆ ಅಂಥ ಪಂದ್ಯವನ್ನು ಗೆದ್ದ ಕಪಿಲ್‌ದೇವ್ ನಾಯಕತ್ವದ ತಂಡ ವಿಶ್ವಕಪ್ ಕೈಲಿಡಿದು ದೇಶದ ಕೀರ್ತಿಯನ್ನು ಜಗತ್ತಿಗೇ ತೋರಿತ್ತು. ಅಷ್ಟೇ. ಅಲ್ಲಿಂದ ಬರೋಬ್ಬರಿ ೨೮ ವರ್ಷಗಳು ಆರು ವಿಶ್ವಕಪ್ ಪಂದ್ಯಾವಳಿಗಳಲ್ಲಿ ಬೆವರು, ಕಣ್ಣೀರು ಸುರಿಸಿದ ಭಾರತ ತಂಡ, ಅಜರುದ್ದಿನ್, ಗಂಗೂಲಿ, ಕ್ರಿಕೆಟ್ ದೇವರು ಸಚಿನ್‌ತೆಂಡೂಲ್ಕರ್, ರಾಹುಲ್ ದ್ರಾವಿಡ್, ಅನಿಲ್‌ಕುಂಬ್ಳೆಯಂಥ ಕ್ರಿಕೆಟ್ ಕಲಿಗಳು ನಾಯಕರು ದಶಕಗಳ ಕಾಲ ಆಡಿದರೂ ಮತ್ತೊಂದು ವಿಶ್ವಕಪ್ ಗೆಲ್ಲಲಾಗಲೇ ಇಲ್ಲ.

ವಿಶ್ವಕಪ್ ಎಂಬುದು ಕನಸಾಗೇ ಉಳಿದಿತ್ತು. ಅಂಥ ಕಪ್ ಗೆದ್ದುತರಲು ಮಹೇಂದ್ರ ಸಿಂಗ್ ಧೋನಿಯೇ ಬರಬೇಕಾಯಿತು. ೨೦೧೧ರ ವಿಶ್ವಕಪ್ ಗೆದ್ದು, ೨೦೦೭ರಲ್ಲೇ ಟಿ-೨೦ ವಿಶ್ವಕಪ್‌ನ್ನೂ ಗೆದ್ದು ಅಭಿಮಾನಿಗಳಲ್ಲಿ ಹೊಸ ಭರವಸೆ ಮೂಡಿಸಿದ್ದರು. ಅಷ್ಟೇ ಅಲ್ಲ, ತಮ್ಮ ಸಂಯಮ, ತಾಳ್ಮೆ, ಕ್ರೀಡಾಮನೋಭಾವ, ಛಲದ ಹೋರಾಟದ ಮೂಲಕ ಹಲವು ಪಂದ್ಯಾವಳಿಗಳನ್ನು, ಕೈತಪ್ಪುತ್ತಿದ್ದ ಪಂದ್ಯಗಳನ್ನು ಗೆದ್ದು ಕ್ರಿಕೆಟ್ ಜಂಟಲ್‌ಮ್ಯಾನ್ ಎನಿಸಿದ ಧೋನಿಯನ್ನು ನಮ್ಮ ದೇಶದ ಕ್ರಿಕೆಟ್ ಸಂಸ್ಥೆ ಕೊನೇ
ದಿನಗಳಲ್ಲಿ ನಡೆಸಿಕೊಂಡ ರೀತಿ, ವಿದಾಯದಲ್ಲಿ ತೋರಿದ ಅಗೌರವ ಮಾತ್ರ ತಕ್ಕುದ್ದಲ್ಲವಾಗಿತ್ತು.

ಈ ಕ್ರಿಕೆಟ್‌ನ ದರಿದ್ರವೇ ಅಷ್ಟು. ಎಷ್ಟೇ ಕಪ್ಪುಗಳನ್ನು ಗೆದ್ದುಕೊಟ್ಟರೂ ಅದೆಂಥಾ ಭಯಾನಕ ಪಂದ್ಯಗಳನ್ನು ಗೆದ್ದರೂ ಜನ
ಅದನ್ನು ನೆನಪಿನಲ್ಲಿಟ್ಟುಕೊಂಡು ಸ್ಮರಿಸುವುದಿಲ್ಲ. ಅದೇ ಧೋನಿ ತೀರಾ ಔಪಚಾರಿಕ ಪಂದ್ಯವನ್ನು ಸೋತರೂ ಅಷ್ಟೆಲ್ಲಾ ಹಿಂದಿನ ಸಾಧನೆ ಮಣ್ಣುಪಾಲಾಗಿಸೇ ನಿಂದಿಸುತ್ತಾರೆ. ಕ್ರಿಕೆಟ್ ಪ್ರೇಮಿಗೆ ಪ್ರತಿಯೊಂದು ಪಂದ್ಯವನ್ನೂ ಗೆಲ್ಲಬೇಕು. ಅದರಲ್ಲೂ ಟಾಸ್ ಗೆದ್ದ ನಂತರದ ಆಯ್ಕೆ, ರನೌಟ್, ಕಡಿಮೆ ಸ್ಕೋರು ಗಳಿಸಿದರಂತೂ ಆತ ಶಾಪಗ್ರಸ್ಥನಾಗಿ ಬಿಡುತ್ತಾನೆ.

ಆಯ್ಕೆ ಸಮಿತಿ ಆತನನ್ನು ಅಸ್ಪೃಶ್ಯನಂತೆ, ಆರೋಪಿ ಯಂತೆ ಕಂಡು ಮುಲಾಜಿಲ್ಲದೆ ತಂಡದಿಂದಲೇ ಕೈಬಿಡುತ್ತದೆ. ಥೇಟು ಇದೇ ಮನೋಭಾವ ನಮ್ಮ ದೇಶದ ರಾಜಕೀಯದಲ್ಲೂ ಇದೆ. ದೇಶದ ಸ್ವಾತಂತ್ರದ ನಂತರ ಮೊದಲ ಪ್ರಧಾನಿಯಾಗಲೇ ಬೇಕಿದ್ದ ಉಕ್ಕಿನ ಮನುಷ್ಯ ವಲ್ಲಭಬಾಯ್ ಪಟೇಲರು ಅಯೋಗ್ಯರ ಕುತಂತ್ರ ದಿಂದ ಸಂಭವನೀಯ ಅವಕಾಶವನ್ನು ಬಿಟ್ಟುಕೊಟ್ಟರು.
ದೇಶದ ಸ್ವಾಭಿಮಾನದ ಪ್ರತೀಕದಂತಿದ್ದ ಶಾಸ್ತ್ರೀಜಿ ಯವರು ಅರ್ಧದಾರಿಯಲ್ಲೇ ಅಸುನೀಗಿದರು.

ಇನ್ನು ಅಟಲ್‌ಬಿಹಾರಿ ವಾಜಪೇಯಿಯವರು ವಿಶ್ವವೇ ಮೆಚ್ಚುವಂಥ ಆಡಳಿತ ನೀಡಿದರೂ ನಮ್ಮ ಜನ ಅವರಿಗೆ ಮತ್ತೊಂದು ಅವಕಾಶ ನೀಡಲೇ ಇಲ್ಲ. ಈಗ ಇಂಥವರ ಜನ್ಮದಿನಾಚರಣೆ ಪುಣ್ಯತಿಥಿಗಳನ್ನು ಮಾಡುತ್ತಾ ಇಂಥವರು ಈಗ ಇರಬೇಕಿತ್ತು, ಪ್ರಧಾನಿಗಳಾಗಿರಬೇಕಿತ್ತು ಎಂದು ಸತ್ತಮೇಲೆ ಹೊಗಳುವುದರಿಂದ ಏನುಬಂತು ಭಾಗ್ಯ? ಈಗಿನ ಮೋದಿಯವರೇನು
ಏಕಾಏಕಿ ಪಂಚೆಕಟ್ಟಲು ಎದ್ದುನಿಂತು ಪ್ರಧಾನಿಗಳಾದ ವರಲ್ಲ.

ಮೂರುಬಾರಿ, ಹನ್ನೆರಡು ವರ್ಷಗಳು ಒಂದು ರಾಜ್ಯದ ಯಶಸ್ವಿ ಮುಖ್ಯಮಂತ್ರಿಯಾಗಿ ದೇಶದ ವಿಶ್ವಾಸ ಗಳಿಸಿ ಎರಡನೇ ಬಾರಿಗೆ ಪ್ರಧಾನಿಗಳಾಗಿದ್ದಾರೆ. ಕಳೆದ ಎಪ್ಪತ್ತು ವರ್ಷಗಳಲ್ಲಿ ಯಾವುದು ‘ತಿರುಕನ ಕನಸು’ ಗಳಾಗಿದ್ದವೋ ಅವುಗಳೆಲ್ಲಾ ದೇಶಾಭಿಮಾನಿ ಗಳ ನನಸಾಗಿದೆ. ಅಂದು ಮಹಾ ವಿಲಾಸಿ ಪುರುಷರು ತಾವೇ ಕೆರೆದುಕೊಂಡು ಗಾಯ ಮಾಡಿಕೊಂಡು ಕಾಲು ಕತ್ತರಿಸಲೇ ಬೇಕಾದ ಗ್ಯಾಂಗ್ರಿನ್ ಗಾಯದಂತಾಗಿದ್ದ ಕಾಶ್ಮೀರದ ೩೭೦ ವಿಧಿಯನ್ನು ಕಿತ್ತೆಸೆದು ದೇಶದ ಕಿರೀಟ ವನ್ನು ಉಳಿಸಿಕೊಳ್ಳುವ ಕ್ರಮ ಈ ಶತಮಾನದ ಅಮೋಘ ಸಾಧನೆಯಾಗಿದೆ.

ಶತಮಾನಗಳ ಹರಕೆಯಾದ ಅಯೋಧ್ಯ ಶ್ರೀರಾಮ ಮಂದಿರ ಸ್ಥಾಪನೆ ಆಧುನಿಕ ಭಾರತದ ಮಹಾ ಮೈಲುಗಲ್ಲಾಗಿದೆ. ಕರೋನಾ ಆರಂಭದಲ್ಲಿ ದೇಶದ ಜನತೆಗೆ ದೀಪ ಬೆಳಗಲು ಚಪ್ಪಾಳೆ ತಟ್ಟಲು ಕೆರೆಕೊಟ್ಟಾಗ ಅದರ ಹಿಂದಿನ ಉದ್ದೇಶವನ್ನು ಅರ್ಥೈಸಿಕೊಳ್ಳದ
ಅವಿವೇಕಿಗಳು ತಮಗೆ ತೋಚಿದಂತೆ ಆಡಿಕೊಂಡು ಅಣುಕಿಸಿದರು. ಕಳೆದ ಮಾರ್ಚ್‌ನಲ್ಲಿ ಪಿಪಿಇ ಕಿಟ್‌ನ್ನು ಆಮದು ಮಾಡಿ ಕೊಂಡ (ಅಲ್ಲಿಯವರೆಗೂ ಪಿಪಿಇ ಕಿಟ್ ಅವಶ್ಯಕತೆಯೇ ಇರಲಿಲ್ಲ) ನಾವು ಇಂದು ಅದೇ ಕರೋನಾ ವೈರಸ್ ವಿರುದ್ಧ ಗೆದ್ದು ಅದನ್ನು ನಶಿಸಲು ವ್ಯಾಕ್ಸಿನ್ ಕಂಡುಹಿಡಿದು ವಿಶ್ವದಲ್ಲಿ ವ್ಯಾಕ್ಸಿನೇಶನ್‌ನಲ್ಲಿ ಭಾರತ ಮೂರನೇ ಸ್ಥಾನದಲ್ಲಿರುವುದು ನಿಜವಾದ
ಆತ್ಮನಿರ್ಭರತಾ ಭಾರತ.

ಈಗ ನೋಡಿ ಇಪ್ಪತ್ತಕ್ಕೂ ಹೆಚ್ಚು ರಾಷ್ಟ್ರಗಳು ವ್ಯಾಕ್ಸಿನ್‌ಗಾಗಿ ಭಾರತದ ಮುಂದೆ ತಟ್ಟೆಲೋಟ ಹಿಡಿದು ನಿಂತಿವೆ. ಇಂದು ದೇಶದ ಯಾವ ಮೂಲೆಗೆ ಹೋದರೂ ಅಲ್ಲಿ ಡಿಜಿಟಲ್ ಪೇ ಮೂಲಕ ಜೇಬಿನಲ್ಲಿ ಹಣವಿಲ್ಲದಿದ್ದರೂ ಒಂದು ರುಪಾಯಿಯ ವ್ಯಾಪಾರ ವನ್ನೂ ಮಾಡಬಹುದಾಗಿದೆ. ಜನ್‌ಧನ್ ಬ್ಯಾಂಕ್ ಖಾತೆಯ ಮೂಲಕ ಕೇಂದ್ರ ಸರಕಾರದಿಂದ ನೇರವಾಗಿ ಪ್ರಜೆಯ ಖಾತೆಗಳಿಗೆ ಹಣಬಂದು ಸೇರುತ್ತಿದೆ. ಭ್ರಷ್ಟಾಚಾರದ ಹೆಡ್ಡಾಫೀಸು ಎನಿಸಿರುವ ಸಾರಿಗೆ ಇಲಾಖೆಯ ಕುಂಡಲಿಯನ್ನೇ ಬದಲಾಯಿಸ
ಲಾಗುತ್ತಿದೆ. ಇವುಗಳೆಲ್ಲವೂ ಓಲೈಕೆ ರಾಜಕಾರಣದಿಂದ ಸಾಧ್ಯವಾದುದ್ದಲ್ಲ.

ಅದರಲ್ಲೂ ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವದ ದೇಶದಲ್ಲಿ ಇಲ್ಲಿನ ರಾಜಕೀಯ ಗುಲಾಮಗಿರಿಗಳು ದೇಶದೊಳಗಿನ ದ್ರೋಹಿಗಳು ಭಯೋತ್ಪಾದನೆ ಮಿಷನರಿಗಳು, ಮತಾಂತರಿಗಳು, ಕುಂತತ್ರಿಗಳು ಇವುಗಳನ್ನು ಎದುರಿಸಿ ಇಂಥ ಸಾಧನೆ ಮಾಡಿದ ಹೆಗ್ಗಳಿಕೆ ದೇಶಕ್ಕೆ ಮತ್ತು ಸರಕಾರಕ್ಕೆ ಸಲ್ಲುತ್ತದೆ. ಮೊನ್ನೆ ಪ್ರಧಾನಿಗಳು ಸಂಸತ್ತಿನಲ್ಲಿ ಮಾತನಾಡುತ್ತಾ ದೇಶದಲ್ಲಿ ಅಂದು ಫುಟ್‌ಪಾತ್ ಜೋಪಡಿಯಲ್ಲಿ ವಾಸಿಸುವ ಮುಗ್ಧರೂ ಸಹ ದೀಪಬೆಳಗಿ ದೇಶದ ಮನೋಬಲಕ್ಕೆ ಸಾಕ್ಷಿಯಾದದ್ದನ್ನು ಅಣುಕಿಸುವ ನಿಮಗೆ
ನಾಚಿಕೆಯಾಗಬೇಕು ಎಂಬಂತೆ ಜಾಡಿಸಿದರು.

ಇಂಥ ಭಾವನಾತ್ಮಕ ವಿಚಾರಗಳೆಲ್ಲಾ ಎಲ್ಲರಿಗೂ ಅರ್ಥವಾಗುವುದಿಲ್ಲ. ಕ್ಯಾಂಟಿನ್ ಮಟ್ಟದ ನಾಯಕರೆಲ್ಲಾ ವಿಶ್ವನಾಯಕ
ಎನಿಸಿರುವ ಮೋದಿ ಯವರ ಮಟ್ಟಕ್ಕೆ ಎಗರಾಡುವುದನ್ನು ನೋಡಿದರೆ ‘ದೂರದ ಹೆಣಕೆ ನರಿ ಕೂಗಿ ನೆಗೆದು ಬಾಯಾರಿ ಸತ್ತಂತೆ’ ಸರ್ವಜ್ಞರ ವಚನ ನೆನಪಿಸುತ್ತದೆ. ಇಂಥವರಿಗೆ ಅಚ್ಚೇದಿನ್ ಎಂದರೆ ಬಿಟ್ಟಿಸಿಕ್ಕ ಅನ್ನವನ್ನು ಬಾಚಿಕೊಂಡು ತಟ್ಟೆತುಂಬ ಉಂಡು ಹೊಟ್ಟೆ ತುಂಬಿಸಿಕೊಂಡು ತೇಗುವಂಥ ಅವಕಾಶಗಳು ಬಂದರೆ ಮಾತ್ರ.

ಸ್ವತಂತ್ರ ಬಂದು ಎಪ್ಪತ್ತು ವರ್ಷಗಳು ಕಳೆದರೂ ಈಗಲೂ ಇವರ ಪ್ರಣಾಳಿಕೆಯಲ್ಲಿ ಗರೀಬಿ ಹಟಾವೋ, ಬಡಜನರ ಹಸಿವು ನೀಗಿಸುವುದೇ ಆಗಿದೆ ಹೊರತು, ನಮ್ಮ ಮನೆಯ ಕಿತ್ತುಹೋದ ನೆಲ, ತೂತುಬಿದ್ದ ಛಾವಣಿ, ಬಿದ್ದುಹೋದ ಗೋಡೆ ಇವುಗಳು ಮುಖ್ಯವೇ ಅಲ್ಲ. ಇಂಥ ನಾಯಕರಿಗೆ ಮತದಾರ ಚಡ್ಡಿತೂತು ಮಾಡಿಕೊಂಡು ಅನ್ನಅನ್ನ ಎಂದು ಗೋಗರೆಯುವ
ಸ್ಥಿತಿಯಲ್ಲೇ ಇರಬೇಕು. ಆತನ ಮನೆ ಸೋರುತ್ತಿದ್ದರೂ ಹೊಟ್ಟೆ ತುಂಬಿಸಿಕೊಂಡು ಹೊದ್ದು ಮಲಗಬೇಕು.

ಆತ ಎಂದೂ ಸ್ವಾಭಿಮಾನಿ ಆಗಕೂಡದು. ಅದೇ ಇವರ, ಇವರ ಪಕ್ಷಗಳ ಅಸ್ತಿತ್ವವನ್ನು ಉಳಿಸಿಕೊಂಡು ಬರುತ್ತಿದೆ. ಇಂಥವರು ಅಧಿಕಾರಕ್ಕೆ ಬಂದರೆ ಅಮ್ಮನ ಕ್ಯಾಂಟಿನ್, ಗೂಬೆ ಮಗನ ಕ್ಯಾಂಟೀನ್, ಮಗಳ ಕ್ಯಾಂಟೀನ್, ಕಳ್ಳ ಅಳಿಯ ಕ್ಯಾಂಟೀನ್ ಹೆಸರಿಟ್ಟು ಇನ್ನೂ ಮೂರು ಶತಮಾನ ಹಸಿವು, ಬಡತನ ನಿರ್ಮೂಲನೆ ಅನರ್ಥ ಅಂದ ಆಶ್ವಾಸನೆಗಳೇ ಚುನಾವಣೆಯ ಕುತಂತ್ರ
ಗಳಾಗಿರುತ್ತದೆ. ಇಂಥವರಿಗೆ ಜಾತಿಗಳ ಕಿತಾಪತಿಗಳೇ ಊರುಗೋಲಾಗಿರುತ್ತದೆ. ಇನ್ನು ಪಾಕಿಸ್ತಾನ ಬಾಂಗ್ಲ ದೇಶದ ಭಯೋ ತ್ಪಾದಕರು ರೋಹಿಂಗ್ಯಾಗಳ ವಿರುದ್ಧ ಸೊಲ್ಲೆತ್ತುವುದು ಸ್ಥಳೀಯ ಅಲ್ಪಸಂಖ್ಯಾತರ ವಿರುದ್ಧ ನಿಂತು ಚಡ್ಡಿ ಒದ್ದೆಯಾಗಿಸಿ ಕೊಳ್ಳುವಂಥ ಭಯ.

ಇಂಥ ಪರಿಣಾಮಗಳಿಂದಾಗಿ ದೇಶಭಕ್ತರು – ದೇಶದ್ರೋಹಿಗಳು – ಗುಲಾಮರು ಎಂಬ ವ್ಯತ್ಯಾಸಗಳು ಸ್ಪಷ್ಟತೆಗಳು ಅನಾವರಣ ಗೊಳ್ಳುತ್ತಿವೆ. ಇದು ರಾಜಕೀಯ ಪಕ್ಷಗಳ ವಿಷ್ಯಕ್ಕೇ ಮರ್ಮಾಘಾತ ತಂದೊಡ್ಡಿದೆ. ಆದ್ದರಿಂದಲೇ ದೇಶದ್ರೋಹಿ ಪಕ್ಷಗಳಿಗೆ ರೈತರ ಹೋರಾಟವನ್ನೂ ದುರುಪಯೋಗ ಪಡಿಸಿಕೊಂಡು ನಕಲಿ ರೈತರಿಗೆ ಪರೋಕ್ಷವಾಗಿ ಪ್ರಚೋದನೆ ನೀಡಿ ಅಸ್ತಿತ್ವ ಉಳಿಸಿಕೊಳ್ಳು ವಷ್ಟು ಹೀನಾಯ ಸ್ಥಿತಿ ತಲೆದೋರಿದೆ. ಇವರುಗಳಿಗೆ ಜಾಗತಿಕ ಮಟ್ಟದಲ್ಲಿ ಭಾರತದ ಗೆಲುವು ಏಳಿಗೆ ಸಾಧನೆ ಮುಖ್ಯವಲ್ಲವೇ
ಅಲ್ಲ.

ಭಾರತವೆಂದರೆ ಕೆಳದರ್ಜೆಯ, ಹಾವಾಡಿಗರ ದೇಶ, ತಿರುಪೆ ದೇಶವೆಂಬಂತೆ ಕಾಣುತ್ತಿದ್ದ ರಾಷ್ಟ್ರಗಳು ಇಂದು ಭಾರತವನ್ನು ಸಾಕ್ಷಾತ್ ಶ್ರೀರಾಮನಂತೆ ಕಂಡು ಕೈಮುಗಿದು ಗೌರವಿಸುತ್ತಿದೆ. ವಿಶ್ವಸಂಸ್ಥೆಯಾಗಲಿ ವಿಶ್ವಮಟ್ಟದಲ್ಲಾಗಲಿ ಯಾವುದೇ ವಿಷಯದಲ್ಲೂ ಭಾರತ ವನ್ನು ನಿರ್ಲಕ್ಷಿಸುವುದು ಸಾಧ್ಯವಿಲ್ಲ ವೆಂಬಂತಾಗಿದೆ. ಪರದೇಶಿಗಳು ಭಾರತವನ್ನು ದೂಷಿಸುವ ಕಾಲ ಈಗಿಲ್ಲ. ಆದರೆ ದೇಶದೊಳಗಿರುವ ಕೆಲವರು ದೇಶೀಯರೆ ಎಲ್ಲಕ್ಕಿಂತ ಅಪಾಯಕಾರಿಯಾಗುವ ಲಕ್ಷಣಗಳಿವೆ.

ಮೊನ್ನೆ ನೋಡಿ, ಮೂರೂಬಿಟ್ಟ ದೇಶಿ ಸೆಲಬ್ರಿಟಿಗಳು ನಮ್ಮ ದೇಶದೊಳಗಿನ ರೈತರ ಪ್ರತಿಭಟನೆ ವಿಚಾರವಾಗಿ ಟ್ವೀಟ್ ಮಾಡಿ ದಾಗ ನಮ್ಮ ದೇಶಭಕ್ತ ಕ್ರಿಕೆಟಿಗರು ಸಿನಿಮಾ ತಾರೆಯರು ಉಗಿದು ಪ್ರತಿಕ್ರಿಯೆ ನೀಡಿದರು. ಆದರೆ ಬಾಲಿವುಡ್‌ನ ಒಬ್ಬೇಒಬ್ಬ
‘ಖಾನ್’ ಬಾಯಿ ಬಿಡಲಿಲ್ಲ, ಭಾರತದ ಪರ ಟ್ವೀಟ್ ಮಾಡಲಿಲ್ಲ. ಇವರ ‘ಮೂಲಭೂತ’ ಮನಸ್ಥಿತಿಯನ್ನು ಭಾರತೀಯರು ಇನ್ನಾದರೂ ಅರ್ಥಮಾಡಿಕೊಳ್ಳಬೇಕಿದೆ.

ಕಳೆದ ಎಪ್ಪತ್ತು ವರ್ಷಗಳಿಂದ ಹಿಂದೂಗಳಿಗೆ ದೇಶವನ್ನು ಆಳುತ್ತಿರುವುದು ಅಲ್ಪಸಂಖ್ಯಾತರ ಓಲೈಕೆ ಕೇಂದ್ರಿತ ಸರಕಾರಗಳು ಎಂಬುದು ಅರ್ಥವಾಗಲೇ ಇಲ್ಲ. ಆದರೀಗ ಕೇವಲ ಏಳು ವರ್ಷಗಳಲ್ಲಿ ಭಾರತ ಹಿಂದೂ ರಾಷ್ಟ್ರವಾಗುತ್ತಿದೆ ಎಂಬ ಭೀತಿಯನ್ನು
ಇವರುಗಳು ಬಿತ್ತುತ್ತಿದ್ದಾರೆ. ಇರಲಿ, ಮೋದಿ ಸರಕಾರ ಈಗ ಅರ್ಥ ಮಾಡಿಕೊಳ್ಳಬೇಕಾದ ವಿಚಾರವೆಂದರೆ ನಮ್ಮ ದೇಶ ಕೃಷಿ ಪ್ರಧಾನ ದೇಶ. ಗ್ರಾಮೀಣ ಆಧಾರಿತ, ಹಳ್ಳಿಗಾಡುಗಳೇ ಹೆಚ್ಚಿರುವ ದೇಶವಾಗಿರುವುದರಿಂದ ಅಪರಿಮಿತ ಇಂಟರ್ನೆಟ್ ಡಾಟಾ ಪ್ಯಾಕುಗಳು ಡಿಜಿಟಲ್ ತಂತ್ರಜ್ಞಾನ ಸಿಕ್ಕರೂ ಸಾಮಾನ್ಯನಿಗೆ ದಿನಸಿ ಪದಾರ್ಥ ಗಳು, ಕರೆಂಟು, ಪೆಟ್ರೋಲ್, ಗ್ಯಾಸ್, ಬಸ್ ರೈಲ್ವೇ
ಟಿಕೆಟ್‌ಗಳು ಪಾಸ್‌ಗಳು ಕಡಿಮೆ ಬೆಲೆಗೆ ಸಿಗಲೇ ಬೇಕು.

ಉಪ್ಪು ಸಾಸಿವೆ ಈರುಳ್ಳಿ ಟಮೋಟೊ ದಿನನಿತ್ಯ ಅನಿವಾರ್ಯ ವಸ್ತುಗಳ ದರ ಏರಿಕೆಯಾದರೆ ಮಾತ್ರ ಸಹಿಸಿಕೊಳ್ಳಲಾರ. ಪಕ್ಷಾತೀತವಾಗಿ ಖಂಡಿಸಿ ಪ್ರತಿಭಟಿಸುತ್ತಾನೆ. ಅದರ ನೇರ ಶಾಪ ಸರಕಾರದ ಮೇಲೆಯೇ ಬೀಳುತ್ತದೆ. ಮತ್ತು ಅಂಥವನನ್ನು ಎತ್ತಿಕಟ್ಟಿ ಲಾಭ ಮಾಡಿಕೊಳ್ಳುವುದು ಮಾತ್ರ ಗುಲಾಮರು ಮತ್ತು ಸೋಂಬೇರಿಗಳು ಮತ್ತು ಅವರೊಂದಿಗೆ ಕೋಟ್ಯಾಧಿಪತಿ
ಗಳೂ ಬಂದು ಕೂರುತ್ತಾರೆ. ನಾವು ಮನೆಯೊಳಗೆ ಉಪವಾಸವಿದ್ದರೂ, ಗಂಜಿ ಕುಡಿದರೂ ಸಮಾಜದಲ್ಲಿ ಸ್ವಾಭಿಮಾನದಿಂದ ಮರ್ಯಾದೆಯಿಂದ ಬಾಳಬೇಕು’ಇದು ಪ್ರತೀ ಭಾರತೀಯನ ಆತ್ಮಗೌರವದ ಮೊದಲ ಸಿದ್ಧಾಂತ.

ಇಂಥ ಆತ್ಮಾಭಿಮಾನವನ್ನೇ ವಿಶ್ವಮಟ್ಟದಲ್ಲಿ ಇಲ್ಲಿಯ ವರೆಗೂ ಸಾಧಿಸಿಕೊಂಡು ಬಂದಿರುವ ಕೇಂದ್ರ ಸರಕಾರ ಇನ್ನು ಮುಂದೆ ಎಚ್ಚೆತ್ತುಕೊಂಡು ಶ್ರೀಸಾಮಾನ್ಯನ ಸ್ನೇಹಿ ಯಾಗುವಂಥ ದಿಟ್ಟ ನಿರ್ಧಾರಗಳನ್ನು ತೆಗೆದುಕೊಳ್ಳಲೇ ಬೇಕಿದೆ. ಹತ್ತರಿಂದ ಹದಿನೈದು ಸಾವಿರ ರುಪಾಯಿಗಳ ತಿಂಗಳ ಸಂಬಳಕ್ಕೆ ದುಡಿಯುವ ಪ್ರಜೆ ಗಳದ್ದೇ ನಮ್ಮ ದೇಶದ ದೊಡ್ಡ ಜನಸಂಖ್ಯೆ. ಮೊದಲಿಗೆ ಪೆಟ್ರೋಲ್ ದರವನ್ನು ಹೇಗಾದರು ಮಾಡಿ ನಿಯಂತ್ರಿಸಿ ತಗ್ಗಿಸಲೇ ಬೇಕು.

ಗ್ಯಾಸ್ ಸಿಲಿಂಡರ್ ಬೆಲೆಯನ್ನು ಏರಿಸದೆ ಮುಗ್ಧ ಮಹಿಳೆಯರ ಹಿತವನ್ನು ಕಾಪಾಡ ಬೇಕಿದೆ. ದಿನಸಿ ಧಾನ್ಯ ತರಕಾರಿ ನಿತ್ಯ ಅಗತ್ಯ ವಸ್ತುಗಳ ಬೆಲೆಗಳು ಏರಿಕೆ ಯಾಗದಂತೆ ನೋಡಿಕೊಳ್ಳ ಬೇಕಿದೆ. ಬಸ್, ರೈಲಿನ ಪ್ರಯಾಣ ವಿದ್ಯುತ್ ದರಗಳನ್ನು ಪಂಚವಾರ್ಷಿಕ ಯೋಜನೆಯಂತೆ ಯಾವುದೇ ಪಕ್ಷಗಳ ಸರಕಾರವಿದ್ದರೂ ನಿರ್ದಿಷ್ಟ ಕಾಲಾವಧಿಯಲ್ಲಿ ಮಾತ್ರ ಪರಿಶೀಲಿಸುವಂಥ ವ್ಯವಸ್ಥೆ ಶಾಸನಬದ್ಧವಾಗಿ ರೂಪಿಸಬೇಕಿದೆ.

ಇನ್ನು ಶಿಕ್ಷಣ ಕ್ಷೇತ್ರದಲ್ಲಿ ಹನ್ನೆರಡು ತರಗತಿಗಳನ್ನಾದರೂ ಉಚಿತ ವಾಗಿಯೋ ಅಥವಾ ಕನಿಷ್ಠ ಶುಲ್ಕದಲ್ಲಿ ಸಿಗುವಂತೆ ಮಾಡಿದರಂತೂ ಅದೊಂದು ದೊಡ್ಡ ಸಾಧನೆ ಮತ್ತು ಕೊಡುಗೆಯಾಗುತ್ತದೆ. ಇವುಗಳೆಲ್ಲಾ ಸಾಕಾರವಾದರೆ ಮಾತ್ರ ಆತನಿಗೆ
‘ಅಚ್ಚೇದಿನ್’. ಹೀಗೆ ವಿಶ್ವಮಟ್ಟದಲ್ಲಿ ಭಾರತವನ್ನು ಬೆಳಗಿಸಿದಷ್ಟೇ ಗಣ್ಯವಾಗಿ ದೇಶದ ಕಟ್ಟಕಡೆಯ ಪ್ರಜೆಯನ್ನೂ ತಲುಪಿ ಮನಗೆದ್ದು ತಳಮಟ್ಟದಲ್ಲಿ ಭದ್ರ ಬುನಾದಿ ನಿರ್ಮಿಸಿಕೊಳ್ಳಬೇಕಿದೆ.

ಏಕೆಂದರೆ ಈಗ ಒಂದು ಸಿಎಎ, ಕೃಷಿ ಕಾಯಿದೆಗಳಿಗೆ ಇಷ್ಟೊಂದು ಪ್ರತಿರೋಧ ಏಳುವಂತೆ ಕುತಂತ್ರಗಳು ನಡೆಯುತ್ತಿದ್ದರೆ, ಮುಂದೆ
ಎನ್‌ಆರ್‌ಸಿ, ಏಕರೂಪ ನಾಗರಿಕ ನೀತಿಸಂಹಿತೆ, ಜನಸಂಖ್ಯೆ ನಿಯಂತ್ರಣ ಕಾಯಿದೆಗಳು ಮತ್ತು ನೈಜ ಭಾರತವನ್ನು ಪುನರ್ ಪ್ರತಿಷ್ಠಾಪಿಸುವ ದಿಟ್ಟ ಕ್ರಮ ಗಳನ್ನು ಕೈಗೊಳ್ಳಬೇಕಾದ ಗುರಿ ಭಾರತ ಸರಕಾರಕ್ಕಿದೆ.

ಹಿಂದೆ ಮುಂದೆ ಯಾರೂ ಇಲ್ಲದ ಪ್ರಧಾನಿ ಯೊಬ್ಬರು ರಜೆಯನ್ನೇ ತೆಗೆದುಕೊಳ್ಳದೆ ದಿನದ ಹದಿನೆಂಟು ಗಂಟೆ ದೇಶಕ್ಕಾಗಿ ದುಡಿದು, ಯಾವುದೇ ಹಗರಣಗಳಿಗೆ ಒಳಗಾಗದೆ, ದೇಶ ದೇಶಗಳನ್ನು ಸುತ್ತಿ ದೇಶದ ಘನತೆ ಸ್ವಾಭಿಮಾನವನ್ನು ಹೆಚ್ಚಿಸಿದ ಪರಿ, ಜಾಗತಿಕ ಖ್ಯಾತಿ, ವಿಶ್ವಕೀರ್ತಿ, ಇಸ್ರೋ ಸಾಧನೆ, ಉಪಗ್ರಹಗಳ ಉಡಾವಣೆ, ದಾಖಲೆಯ ರಸ್ತೆಗಳು, ಸುರಂಗ ಮಾರ್ಗ ಗಳು, ಸೇತುವೆಗಳು, ಸೈನ್ಯ ಬಲವರ್ಧನೆ,  ರೆಫೆಲ್, ಸರ್ಜಿಕಲ್ ಸ್ಟ್ರೆ ಕ್, ಏರ್ ಸ್ಟ್ರೆಕ್, ಭಯೋತ್ಪಾದನೆ ನಿಗ್ರಹ, ಅಯೋಧ್ಯೆ ಶ್ರೀರಾಮ ಮಂದಿರ ಇವುಗಳನ್ನೆಲ್ಲಾ ಅರ್ಥ ಮಾಡಿಕೊಳ್ಳಲು ನಮ್ಮ ಹಳ್ಳಿ ಜನತೆಗೆ, ಶ್ರೀಸಾಮಾನ್ಯನಿಗೆ (ಈಗಾಗಲೇ ದೀಪ ಬೆಳಗುವುದು ತಟ್ಟೆ ಗಂಟೆ ಬಾರಿಸುವುದರ ಭಾವನೆಯನ್ನು ಈಗಾಗಲೆ ಅರಿತಿದ್ದಾನೆ) ಸಾಕಷ್ಟು ಸಮಯ ಬೇಕಾಗುತ್ತದೆ.

ಇಷ್ಟೆಲ್ಲಾ ಅಭ್ಯುದಯಕ್ಕೆ ಶ್ರಮಿಸಿರುವ ಮೋದಿ ಯವರೇನಾದರು ದಲಿತನಾಗಿದಿದ್ದರೆ ಇಷ್ಟೊತ್ತಿಗೆ ದೇಶದ ಮನೆಗಳಲ್ಲಿ ಅವರ
ಪೋಟೋ ಇಟ್ಟು ಪೂಜಿಸುತ್ತಿದ್ದರು. ಆದರೆ ಯಾವುದೇ ‘ಪ್ರಬಲ’ ಜಾತಿಯವರಾಗಿಲ್ಲದಿರುವುದು ಅವರ ದುರಾದೃಷ್ಟ. ಆದರೂ, ‘ಪೆಟ್ರೋಲ್ ಬೆಲೆ ನೂರು ರುಪಾಯಿ ಆದರೂ ಪರವಾಗಿಲ್ಲ, ಅಯೋಗ್ಯರಿಗೆ ದೇಶದ ಆಡಳಿತ ವನ್ನು ನೀಡುವುದಿಲ್ಲ’ ಎಂಬ
ಜಾತ್ಯಾತೀತ ದೇಶಾಭಿಮಾನಿಗಳು ಹೆಚ್ಚಾಗುತ್ತಿರುವುದಂತೂ ಸ್ಪಷ್ಟ ಮತ್ತು ಸತ್ಯ.

Leave a Reply

Your email address will not be published. Required fields are marked *

error: Content is protected !!