Thursday, 19th September 2024

ಕಮ್ಯುನಿಷ್ಟರೇ ಕೇಳಿ, ’ಬಂಡವಾಳ’ವಾದ ವಿಲ್ಲದೇ ’ಸಮಾಜವಾದ’ ಇಲ್ಲ !

ವೀಕೆಂಡ್ ವಿಥ್ ಮೋಹನ್

ಮೋಹನ್ ವಿಶ್ವ

ಜನ ಮರುಳೋ ಜಾತ್ರೆ ಮರುಳೋ’ ಎಂಬ ಮಾತು ಮನುಕುಲದ ಇತಿಹಾಸದುದ್ದಕ್ಕೂ ಸಾಬೀತಾಗಿದೆ. ಜಗತ್ತಿನಲ್ಲಿ ಜನರು ಸುಳ್ಳನ್ನು ನಂಬುವಷ್ಟು ಸತ್ಯವನ್ನು ನಂಬುವುದಿಲ್ಲ, ಜಗತ್ತಿನ ಬಹುದೊಡ್ಡ ಜನ ಜಂಗುಳಿ ಮಹಾನ್ ಸುಳ್ಳನ್ನೇ ನಂಬಿಕೊಂಡು ಒಪ್ಪಿಕೊಂಡು ಬಂದಿದ್ದಾರೆ. ಅದೇ ಸುಳ್ಳುಗಳೊಂದಿಗೆ ನೂರಾರು ವರ್ಷಗಳ ಕಾಲ ತಮ್ಮ ಜೀವನವನ್ನು ಸಾಗಿಸಿಕೊಂಡು ಬಂದಿದ್ದಾರೆ.

ಇದೇ ಸುಳ್ಳುಗಳ ಸಾಲಿಗೆ ಇತ್ತೀಚಿಗೆ ಭಾರತದಲ್ಲಿ ‘ಸಮಾಜವಾದ’ದ ಹೆಸರಿನಲ್ಲಿ ’ಬಂಡವಾಳಶಾಹಿ’ ಸಿದ್ಧಾಂತ ವನ್ನು ತೀರಾ ಕೆಟ್ಟದಾಗಿ ಬಿಂಬಿಸಿ ಪ್ರತಿನಿತ್ಯ ಇಲ್ಲ ಸಲ್ಲದ ಸುಳ್ಳುಗಳನ್ನು ಹೇಳಲಾಗುತ್ತಿದೆ. ಮಾತು ಮಾತಿಗೂ ’ಅದಾನಿ’ ’ಅಂಬಾನಿ’ ಹೆಸರನ್ನು ಜನರ ಮಧ್ಯ ತೇಲಿಬಿಟ್ಟು ಇವರೆಲ್ಲರೂ ಬಡವರ ಸಂಪತ್ತನ್ನು ಕೊಳ್ಳೆ ಹೊಡೆಯಲು ಬಂದಿರುವವರೆಂದು ಹೇಳಲಾಗುತ್ತಿದೆ. ‘ಬಂಡವಾಳಶಾಹಿ’ವಾದವನ್ನು ‘ಸಮಾಜವಾದ’ದ ಎದುರಾಳಿ ಎಂಬಂತೆ ಬಿಂಬಿಸಲಾಗುತ್ತಿದೆ.

ಆದರೆ ’ಸಮಾಜವಾದ’ವು ’ಬಂಡವಾಳಶಾಹಿ’ವಾದದ ಶಿಶುವೆಂಬ ಸಾಮಾನ್ಯ ಜ್ಞಾ ತಿಳಿದಿರಲಿಕ್ಕಿಲ್ಲ. ’ಬಂಡವಾಳಶಾಹಿ’ ವಾದವು ಪ್ರಾಚೀನ ’ಊಳಿಗಮಾನ್ಯ’ ಪದ್ಧತಿಯ ಶಿಶುವಾಗಿ ಹೇಗೆ ಜನ್ಮ ತಾಳಿತೋ, ’ಸಮಾಜವಾದ’ವು ಬಂಡವಾಳಶಾಹಿ ವಾದದಿಂದ ಹುಟ್ಟಿದ ಶಿಶುವೆಂದರೆ ತಪ್ಪಿಲ್ಲ. ಒಂದು ಮಗುವನ್ನು ಹೇಗೆ ಸಂಪೂರ್ಣವಾಗಿ ಬೆಳೆಯಲು ಬಿಡಬೇಕೋ ಹಾಗೆ ಬಂಡವಾಳಶಾಹಿ ವಾದವನ್ನು ಸಂಪೂರ್ಣವಾಗಿ ಬೆಳೆಯಲು ಬಿಡಬೇಕು. ಭಾರತದಲ್ಲಿ ಇನ್ನೂ ಬೆಳೆಯುತ್ತಿರುವ ಬಂಡವಾಳಶಾಹಿ ವಾದವನ್ನು ಬೆಳೆಯುತ್ತಿರುವ ಸಂದರ್ಭ ದಲ್ಲಿಯೇ ಹೊಸಕಿಹಾಕಿ ಸಮಾಜವಾದವನ್ನು ಹುಟ್ಟುತ್ತಲೇ ಸಾಯಿಸುವ ಪ್ರಯತ್ನ ನಡೆಯುತ್ತಿದೆ. ಈ
ಷಡ್ಯಂತ್ರದ ಹಿಂದಿರುವ ದೊಡ್ಡ ಸಂಘಟನೆಯೆಂದರೆ ’ಕಮ್ಯುನಿಸಂ’, ಜಗತ್ತಿನೆಡೆ ತನ್ನ ಸತ್ತು ಹೋದ ಸಿದ್ಧಾಂತ ವನ್ನು ಮತ್ತೆ ಉಸಿರು ನೀಡಿ ಮೇಲೇಳಿಸಲು ಇಲ್ಲ ಸಲ್ಲದ ಸುಳ್ಳುಗಳನ್ನು ಹೇಳಿ ಜನರ ತಲೆಯಲ್ಲಿ ಬಿತ್ತುತ್ತಿದ್ದಾರೆ.

ರಷ್ಯಾ ದೇಶದ ಪರಿಸ್ಥಿತಿಯನ್ನು ನೋಡಿದರೆ ’ಬಂಡವಾಳಶಾಹಿ’ ವಾದವನ್ನು ಹೇಗೆ ಅರ್ಧಾವ್ಯಸ್ತೆಯಲ್ಲಿ ಹೊಸಕಿ ಹಾಕಿ. ’ಸಮಾಜವಾದವಾದ’ದವನ್ನು ಬೆಳೆಯಲು ಬೇಕಿರುವಂತಹ ಸಂಪತ್ತನ್ನು ಸೃಷ್ಟಿ ಮಾಡುವಲ್ಲಿ ವಿಫಲವಾಗಿರುವುದು ಸ್ಪಷ್ಟವಾಗಿ ಕಂಡುಬರುತ್ತದೆ. ರಷ್ಯಾ ಎಂದೂ ಕೂಡ ಸಮಾಜವಾದದ ದೇಶವಾಗಿರಿರಲಿಲ್ಲ, ಅಕಾಲಿಕವಾಗಿ ಅದನ್ನು ಅಲ್ಲಿನ ಸಮಾಜದ ಮೇಲೆ ಹೇರಿ, ಹುಟ್ಟುತ್ತಲೇ ಅದು ಸತ್ತು ಹೋಗುವಂತೆ ಮಾಡಲಾಯಿತು. ಬಡವನ ಹೆಸರಿನಲ್ಲಿ ಶುರುವಾದಂತಹ ಈ ಸಮಾಜವಾದ ರಷ್ಯಾದಲ್ಲಿ ಲಕ್ಷಾಂತರ ಜನರ ಮಾರಣಹೋಮಕ್ಕೆ ಕಾರಣವಾಯಿತು.

ಇತಿಹಾಸವನ್ನು ನೀವೇ ಒಮ್ಮೆ ಇಣುಕಿ ನೋಡಿದರೆ ’ರಷ್ಯಾ’ ಹಾಗೂ ’ಚೀನಾ’ ದೇಶದಲ್ಲಿ ನಡೆದಷ್ಟು ಮಾರಣಹೋಮಗಳು ಜಗತ್ತಿನ ಬೇರೆ ಯಾವ ದೇಶ ದಲ್ಲಿಯೂ ನಡೆದಿಲ್ಲ. ಈ ದೇಶಗಳಲ್ಲಿ ಕಮ್ಯುನಿಸ್ಟರು ಬಲವಂತವಾಗಿ ಹೇರಿದಂತಹ ಸಮಾಜವಾದ ಪರಿಣಾಮವಾಗಿ ಈ ಮಟ್ಟದ ಮಾರಣಹೋಮಗಳು ನಡೆದು ಹೋದವು. ವಿಪರ್ಯಾಸವೆಂದರೆ ತಮ್ಮ ಮುಂದೆಯೇ ಎರಡು ಬಹುದೊಡ್ಡ ದೇಶಗಳು ಬಲವಂತದ ಹೇರಿಕೆಯಿಂದ ಕಾಣಬಾರದ ಸಂಕವನ್ನು ಕಂಡರೂ ಸಹ ’ಬಂಡವಾಳಶಾಹಿ’ ವಾದದ ವಿರುದ್ಧ ಇಲ್ಲ ಸಲ್ಲದ ಅಪಪ್ರಚಾರವನ್ನು ಭಾರತದಲ್ಲಿ ಮಾಡಲಾಗುತ್ತಿದೆ.

’ಸಮಾಜವಾದ’ಲ್ಲಿ ಸಂಪತ್ತನ್ನು ಎಲ್ಲರಿಗೂ ಹಂಚುವ ವಾದವನ್ನು ಮಾಡುವ ಕಮ್ಯುನಿಸ್ಟರಿಗೆ, ಹಂಚುವ ಮೊದಲು ’ಸಂಪತ್ತನ್ನು’ ಸೃಷ್ಟಿ ಮಾಡಬೇಕೆಂಬ ಸಾಮಾನ್ಯ ಜ್ಞಾನವಿಲ್ಲವಿರುವುದು ಅಪಹಾಸ್ಯ. ಸಂಪತ್ತನ್ನು ಸೃಷ್ಟಿ ಮಾಡಿದರಷ್ಟೇಬಡವರಿಗೆ ಹಂಚಲು ಸಾಧ್ಯ. ಮೊದಲು ಸಂಪತ್ತನ್ನು ವೃದ್ಧಿಸಲು ಬಿಡಬೇಕು, ಸಂಪತ್ತು ವೃದ್ಧಿ ಯಾಗಬೇಕಾದರೆ ’ಬಂಡವಾಳಶಾಹಿ’ವಾದವನ್ನು ಮೊದಲು ಪ್ರೋತಾಹಿಸಬೇಕು. ಪ್ರೋತ್ಸಾಹಿಸಿದಷ್ಟೂ ಹೆಚ್ಚಿನ ಸಂಪತ್ತು ಸೃಷ್ಟಿಯಾಗುತ್ತದೆ. ಸಂಪತ್ತನ್ನು ಸೃಷ್ಟಿ ಮಾಡಲು ಎಲ್ಲರಿಗೂ ಸಾಧ್ಯವಿಲ್ಲ, ಕೆಲವೇ ಕೆಲವು ಜನ ಮಾತ್ರ ಸಂಪತ್ತನ್ನು ಸೃಷ್ಟಿ ಮಾಡಬಲ್ಲರು. ಹಾಗಂತ ಮತ್ತೊಬ್ಬರ ತಲೆಯನ್ನು ಒಡೆದು ಸಂಪತ್ತು ಸೃಷ್ಟಿ ಮಾಡುವುದು ’ಬಂಡವಾಳಶಾಹಿ’ ವಾದವಲ್ಲ.

ಇರುವ ಕಡಿಮೆ ಸಂಪತ್ತನ್ನೇ ಬಳಸಿಕೊಂಡು ಮತ್ತಷ್ಟು ವೃದ್ಧಿ ಮಾಡುವುದು ಬಂಡವಾಳಶಾಹಿವಾದ. ಅಮೆರಿಕ ದೇಶವನ್ನೇ ನೋಡಿ, ಬಂಡವಾಳಶಾಹಿವಾದವನ್ನು ದಶಕಗಳ ಕಾಲ ಪ್ರೋತ್ಸಾಹಿಸಿದ್ದರ ಪರಿಣಾಮವಾಗಿ ದೊಡ್ಡ ಮಟ್ಟದ ಸಂಪನ್ಮೂಲ ಸೃಷ್ಟಿಯಾಯಿತು. ಸಂಪನ್ಮೂಲ ಸೃಷ್ಟಿಯಾದ ನಂತರ ’ಸಮಾಜ ವಾದ’ ದಡಿಯಲ್ಲಿ ಅಮೆರಿಕ ದೇಶದ ಜನರಿಗೆ ಹಂಚಲಾಯಿತು. ಅಮೆರಿಕದ ಬಡವನೊಬ್ಬ ರಷ್ಯಾದ ಸಾಹುಕಾರನಾಗಿರುತ್ತಾನೆ, ರಷ್ಯಾ ಸಾಹುಕಾರನೊಬ್ಬ ಅಮೆರಿಕ ದಲ್ಲಿ ಬಡವನಾಗಿರುತ್ತಾನೆ. ಅಮೆರಿಕ ಜಗತ್ತಿನ ದೊಡ್ಡಣ್ಣನಾಗಿ ಅಭಿವೃದ್ಧಿಯಲ್ಲಿ ಬೆಳೆಯಲು ಪ್ರಮುಖ ಕಾರಣವಾದದ್ದು ಅಲ್ಲಿನ ’ಬಂಡವಾಳಶಾಹಿ’ವಾದ. ಮನುಷ್ಯನ ನೆಮ್ಮದಿಯ ಜೀವನಕ್ಕೆ ಬೇಕಿರುವ ಸಂಪತ್ತನ್ನು ಮನುಷ್ಯನೇ ಸೃಷ್ಟಿಸಬೇಕು.

ಅಗತ್ಯತೆಗಳು ಹೆಚ್ಚಾದಂತೆ ಸಂಪತ್ತನ್ನು ಸೃಷ್ಟಿಸಲು ಬೇಕಿರುವ ಬಂಡವಾಳವನ್ನು ಹಾಕಬೇಕು. ಸಂಪತ್ತೇ ಇಲ್ಲವೆಂದರೆ ಬಂಡವಾಳ ಹೂಡಿಕೆಯ ಪ್ರಶ್ನೆ ಎಲ್ಲಿ ಬರುತ್ತದೆ ? ಹೂಡಿಕೆಯೇ ಇಲ್ಲವೆಂದರೆ ಉತ್ಪಾದನೆಯ ಪರಿಕಲ್ಪನೆಯು ಹೇಗೆ ತಾನೇ ಬರುತ್ತದೆ ? ಜಗತ್ತಿನಲ್ಲಿರುವ ಸಂಪತ್ತೆಂದರೆ ಮನುಷ್ಯ ತನ್ನ ಬುದ್ದಿವಂತಿಕೆ ಯಿಂದ ಸೃಷ್ಟಿಸಿರುವ ಸಂಪತ್ತು. ಸಮುದ್ರದ ಆಳದಲ್ಲಿ, ಭೂಮಿಯ ಆಳದಲ್ಲಿ ಹುದುಗಿದ್ದಂತಹ ಸಂಪತ್ತನ್ನು ಹೊರ ತೆಗೆದರಷ್ಟೇ ಸಂಪತ್ತಿನ ವೃದ್ಧಿಯಾಗುತ್ತದೆ. ಹಾಗಾದರೆ ಇದನೆಲ್ಲ ಹೊರ ತಗೆಯುವವರ್ಯಾರು ? ಅಕಾಲಿಕ ಸಮಯದಲ್ಲಿ ಸಮಾಜವಾದವನ್ನು ಪ್ರತಿಪಾದಿಸುವ ಕಮ್ಯುನಿಸ್ಟರಿಗೆ ಈ ಸಾಮರ್ಥ್ಯವಿಲ್ಲ.

ಕಳೆದ ಇನ್ನೂರು ವರ್ಷಗಳಲ್ಲಿ ಬಂಡವಾಳಶಾಹಿಗಳು ತೆಗೆದು ಕೊಂಡಂತಹ ನಿರ್ಧಾರಗಳು ಹಾಗೂ ಅದಕ್ಕೆ ಹೂಡಿರುವ ಬಂಡವಾಳ ಮೂಲಕವೇ ಇಂದು ಈ ಮಟ್ಟದ ಸಂಪತ್ತು ಸೃಷ್ಟಿಯಾಗಿದೆಯೇ ಹೊರತು ಕಮ್ಯುನಿಸ್ಟರಿಂದಲ್ಲ. ತೋಳ್ಬಲ ಹಾಗು ಮೆದುಳಿನ ಬಲವನ್ನು ಒಟ್ಟಿಗೆ ತಾಳೆ ಮಾಡಿ ನೋಡಲಾಗುವುದಿಲ್ಲ, ಕೇವಲ ತೋಳ್ಬಲದಿಂದ ಸಂಪತ್ತನ್ನು ಸೃಷ್ಟಿ ಮಾಡಬಹುದೆಂಬ ವಾದವನ್ನಿಟ್ಟುಕೊಂಡು ಮುಂದೆ ಹೋಗಿದ್ದರೆ ಜಗತ್ತಿನಲ್ಲಿ ಇಂದು ಈ ಮಟ್ಟದ ಸಂಪತ್ತು ಸೃಷ್ಟಿ ಯಾಗುತ್ತಿರಲಿಲ್ಲ. ಸಂಪತ್ತು ವೃದ್ಧಿಸಲು ಬೇಕಿರುವ ಸಂಶೋಧನೆಗೆ ಬೇಕಿರುವ ಹಣವನ್ನು ಹೂಡಿಕೆ ಮಾಡುವವರು ಬಂಡವಾಳಶಾಹಿಗಳು.

ಬಂಡವಾಳಶಾಹಿ ವ್ಯವಸ್ಥೆಗೂ ಮುನ್ನ ಜಗತ್ತಿನಲ್ಲಿ ಹೆಚ್ಚಾಗಿ ಇದ್ದದ್ದು ಅನಾಗರಿಕ ವ್ಯವಸ್ಥೆಗಳೇ, ಕೇವಲ ಲೂಟಿ ಮಾಡಿ ಕೊಂಡು ಒಬ್ಬರ ಸಂಪತ್ತನ್ನು ಮತ್ತೊಬ್ಬರು ಬಲವಂತವಾಗಿ ಕಿತ್ತುಕೊಳ್ಳುವ ಪದ್ಧತಿಯಿತ್ತು. ಅಫ್ಘಾನಿಸ್ತಾನದಿಂದ ದಂಡೆತ್ತಿ ಬಂದಂತಹ ’ಘಜ್ನಿ’ ಮಾಡಿದ್ದು ಲೂಟಿ, ಭಾರತದ ಮೇಲೆ ದಾಳಿ ಮಾಡಿದ ಮೊಗಲರು ಮಾಡಿದ್ದೂ ಲೂಟಿ, ಬ್ರಿಟಿಷರು ಭಾರತಕ್ಕೆ ಬಂದು ಮಾಡಿದ್ದೂ ಸಹ ಒಂದು ಬಗೆಯ ಲೂಟಿ.

ಇವರೆಲ್ಲರೂ ಸಹ ಜನ ಸಾಮಾನ್ಯರ ಸಂಪತ್ತನ್ನು ಬಲವಂತವಾಗಿ ಕಿತ್ತುಕೊಂಡು ತಮ್ಮ ತಿಜೋರಿಯನ್ನು ತುಂಬಿಸಿಕೊಂಡವರು. ಆದರೆ ಬಂಡವಾಳಶಾಹಿಗಳು ಹಾಗಲ್ಲ, ಈ ವ್ಯವಸ್ಥೆಯಲ್ಲಿ ತನಗೆ ಬೇಕಿರುವ ಸಂಪತ್ತನ್ನು ತಾನೇ ಸೃಷ್ಟಿಸಿದ. ಇದನ್ನು ಅರಿಯದ ಸಮಾಜದ ಕೆಲ ಜನ ಬಂಡವಾಳಶಾಹಿ ವ್ಯವಸ್ಥೆಯನ್ನು ಊಳಿಗ ಮಾನ್ಯ ಪದ್ಧತಿಯೊಡನೆ ಹೋಲಿಕೆ ಮಾಡುತ್ತಾರೆ. ಭಾರತದಲ್ಲಿ ಇಂದಿರಾ ಗಾಂಧಿ ಹಾಗೂ ಅವರ ಸುತ್ತ ಇದ್ದಂತಹ ದಡ್ಡ ಶಿಖಾಮಣಿಗಳು ಏನೆಂದುಕೊಂಡಿ
ದ್ದರೆಂದರೆ ದೇಶದಲ್ಲಿ ಮೊದಲು ’ಸಮಾಜವಾದ’ದ ಗೂಟವನ್ನು ನೆಟ್ಟು ನಂತರ ಸಂಪತ್ತು ಸೃಷ್ಟಿಸಬಹುದು.

ಆದರೆ ಸಂಪತ್ತನ್ನೇ ಸೃಷ್ಟಿಸದೇ ಈ ಆಸಾಮಿಗಳು ಅದನ್ನು ಹಂಚುವ ಬಗ್ಗೆ ಯೋಚಿಸುತ್ತಿದ್ದರು. ಇದರ ಪರಿಣಾಮವಾಗಿ ಭಾರತದ ಆರ್ಥಿಕತೆ ವಿಸ್ತಾರ ಗೊಂಡಿರ ಲಿಲ್ಲ, ಇಡೀ ಭಾರತದಲ್ಲಿ ಗುಲಗಂಜಿಯಷ್ಟೂ ಸಂಪತ್ತು ವೃದ್ಧಿಯಾಗಲಿಲ್ಲ, ಜನರಿಗೆ ಕೊನೆಗೆ ಹಂಚಲು ಉಳಿದಿದ್ದು ಬಡತನ. ಅದನ್ನೇ ಮುಂದಿಟ್ಟುಕೊಂಡು ’ಗರೀಬಿ ಹಟವೋ’ ಎಂಬ ಘೋಷಣೆಯೊಂದಿಗೆ ಮತ್ತೊಮ್ಮೆ ಚುನಾವಣೆಗೆ ಹೊರಟರು, ಬಡತನವನ್ನು ಸೃಷ್ಟಿ ಮಾಡಿ ಅದನ್ನೂ ತಾನೇ ಓಡಿಸುತ್ತೇನೆಂದು ಚುನಾವಣೆಗೆ ಹೊರಟ ಏಕೈಕ ನಾಯಕಿ ಇಂದಿರಾ ಗಾಂಧಿ.

ಮನಮೋಹನ್ ಸಿಂಗ್ 1991ರಲ್ಲಿ ವಿತ್ತ ಸಚಿವರಾದ ಮೇಲೆ ಸಡಿಲಿಸಿದ ನೀತಿಯ ಪರಿಣಾಮವಾಗಿ ಕೊಂಚ ಆರ್ಥಿಕ ಚೇತರಿಕೆಯನ್ನು ಕಂಡಿತ್ತು. ಸಂಪತ್ತಿನ ಸಮಾನ ಹಂಚಿಕೆ ಅಗತ್ಯ ನಿಜ. ಆದರೆ ಅದಕ್ಕೂ ಮೊದಲು ನಾವು ಸಂಪತ್ತಿನ ಸೃಷ್ಟಿಕರ್ತರಾಗಬೇಕು. ಮೊದಲು ಉತ್ಪಾದನೆ, ನಂತರ ವಿತರಣೆ. ಬಂಡವಾಳ ಶಾಹಿಯು ಯಥೇಚ್ಛವಾಗಿ ಉತ್ಪಾದಿಸಬೇಕು, ಬಳಿಕ ’ಸಮಾಜವಾದಿ’ವ್ಯವಸ್ಥೆಯು ಅದನ್ನು ಎಲ್ಲರಿಗೂ ಹಂಚಬೇಕು. ಬಂಡವಾಳಶಾಹಿ ವ್ಯವಸ್ಥೆಯೇ ಇಲ್ಲವಾದರೆ, ಸಮಾಜವಾದವು ಕೇವಲ ಬಡತನ ಹಾಗು ದಾರಿದ್ರ್ಯವನ್ನು ಮಾತ್ರ ಹಂಚ ಬೇಕಾಗುತ್ತದೆ. ಹಾಗಾಗಿ ಬಂಡವಾಳವಾದವು ಉತ್ತುಂಗಕ್ಕೇರುವ ಮೊದಲೇ ಸಮಾಜ ವಾದವನ್ನು ಬಲಪಡಿಸುತ್ತೇವೆಂದರೆ ನಾವು ಎಂದೆಂದಿಗೂ ಬಡತನದಲ್ಲಿಯೇ ಇರುತ್ತೇವೆ. ಉತ್ತರ ಪ್ರದೇಶದಲ್ಲಿ ಸಮಾಜವಾದದಡಿಯಲ್ಲಿ ಶುರುವಾದಂತಹ ರಾಜಕೀಯ ಪಕ್ಷಗಳಾದ ‘ಸಮಾಜವಾದಿ ಪಕ್ಷ’ ಹಾಗೂ ‘ಬಹುಜನ ಸಮಾಜ ಪಕ್ಷ’ದ ಅಡಳಿತದಲ್ಲಿ ಆದಂತಹ ಅಭಿವೃದ್ಧಿ ಕಾರ್ಯಗಳಾದರೂ ಏನು ? ಉತ್ತರ ಪ್ರದೇಶದಲ್ಲಿ ಸಂಪತ್ತನ್ನು ಬೆಳೆಸುವ ಕೆಲಸ ಮಾಡದೆ ಕೇವಲ ಬಡತನವನ್ನೇ ಹಂಚಲಿಲ್ಲವೇ ? ಯೋಗಿ ಆದಿತ್ಯನಾಥ್ ಮುಖ್ಯಮಂತ್ರಿಯಾಗುವ ಮೊದಲು, ಭಾರತದ ಇತರ ರಾಜ್ಯದ ಜನ ಉತ್ತರ ಪ್ರದೇಶವನ್ನು ಎಷ್ಟು ಕೀಳಾಗಿ ನೋಡುತ್ತಿದ್ದರೆಂಬುದು ಓದುಗರಾದ ನಿಮಗೇ ತಿಳಿದಿದೆ.

ನಾವು ಅರಿತುಕೊಳ್ಳಬೇಕಿರುವ ಮತ್ತೊಂದು ಬಹುಮುಖ್ಯ ಸಂಗತಿಯೆಂದರೆ ಜಗತ್ತಿನ ಪ್ರತಿಯೊಬ್ಬರಿಂದಲೂ ಸಂಪತ್ತಿನ ಸೃಷ್ಟಿ ಸಾಧ್ಯವಿಲ್ಲ, ಅದೇನಿದ್ದರೂ ಕೇವಲ ಬೆರಳೆಣಿಕೆ ಮಂದಿಯಿಂದ ಮಾತ್ರ ಸಾಧ್ಯ. ಸಂಪತ್ತಿನ ವೃದ್ಧಿ ಒಂದು ದೊಡ್ಡ ಜನ ಸಮುದಾಯದಿಂದ ಸಾಧ್ಯವಿಲ್ಲ, ಅಪ್ಪಿ ತಪ್ಪಿ ಒಂದು ಉದಾಹರಣೆಯೂ ಜಗತ್ತಿ ನಲ್ಲಿ ನಮ್ಮ ಕಣ್ಣೆದುರಿಗೆ ಕಾಣ ಸಿಗುವುದಿಲ್ಲ. ಸಮುದಾಯದಲ್ಲಿ ಪ್ರತಿಯೊಬ್ಬರೂ ಸಹ ಪ್ರಮುಖ ನಿರ್ಣಯದಲ್ಲಿ ಮೂಗು ತೂರಿಸುವುದರಿಂದ ಸಂಪತ್ತು ವೃದ್ದಿ ಗಿಂತಲೂ ಸಂಪತ್ತಿನ ವಿನಾಶವೇ ಹೆಚ್ಚು. ಪ್ರತಿಯೊಬ್ಬರೂ ಟಾಟಾ, ಅಂಬಾನಿ, ಅದಾನಿ, ಹೆನ್ರಿ ಫೋರ್ಡ್, ಸ್ಟೀವ್ ಜಾಬ್ಸ್, ಬಿಲ್ ಗೇಟ್ಸ್, ಜೆಫ್ ಬೆಝೋಸ್ ಆಗಲು ಸಾಧ್ಯವಿಲ್ಲ. ತೋಳ್ಬಲ ಹಾಗು ಮೆದುಳಿನ ಬಲವನ್ನು ತಾಳೆ ಹಾಕಲು ಸಾಧ್ಯವಿಲ್ಲ. ಸಂಪತ್ತಿನ ಹಂಚಿಕೆಯ ಬಗ್ಗೆ ಪುಂಗಿ ಊದುವ ಕಮ್ಯುನಿಸ್ಟರಿಗೆ ಲಾಭದಲ್ಲಿ ಮಾತ್ರ ಪಾಲು ಬೇಕು.

ಆದರೆ ನಷ್ಟವಾದರೆ ತಮ್ಮ ಮನೆಯನ್ನು ಅಡವಿಟ್ಟು ಕಂಪನಿಗಳಿಗೆ ಸಹಾಯ ಮಾಡುವುದಿಲ್ಲ. ಜಗತ್ತಿನ ಕಮ್ಯುನಿಸ್ಟ್ ನಾಯಕರ ಯಾವುದೇ ಇತಿಹಾಸವನ್ನು
ಓದಿದರೆ ಈ ವಿಷಯ ಸ್ಪಷ್ಟವಾಗಿ ತಿಳಿಯುತ್ತದೆ. ’ಕಾಫಿ ಡೇ’ ಸಿದ್ಧಾರ್ಥರ ಕಂಪನಿ ಆರ್ಥಿಕ ಸಂಕಷ್ಟದಲ್ಲಿದ್ದಾಗ ಯಾವೊಬ್ಬ ಕೆಂಪು ಬಾವುಟದ ಕಮ್ಯುನಿಸ್ಟ್ ನಾಯಕನೂ ಸಹಾಯಕ್ಕೆ ಬರಲಿಲ್ಲ, ಲಾಭದ ವಿಚಾರವಾಗಿ ಮಾತ್ರ ಬೀದಿಯಲ್ಲಿ ನಿಂತು ಪ್ರತಿಭಟನೆ ಮಾಡುತ್ತಾರೆ. ಕಷ್ಟದಲ್ಲಿರುವ ಕಂಪನಿಯ ಸಹಾಯಕ್ಕಾಗಿ ತನ್ನ ಸ್ವಂತ ಮನೆಯನ್ನು ಬ್ಯಾಂಕುಗಳಲ್ಲಿ ಅಡವಿಟ್ಟು ವ್ಯವಹಾರ ಮಾಡುವವರು ಕೇವಲ ಬಂಡವಾಳಶಾಹಿಗಳು ಮಾತ್ರ. ಸಮಾಜವಾದದ ಹೆಸರಿನಲ್ಲಿ ಕಷ್ಟದಲ್ಲಿ ಪಾಲುದಾರರಾಗದೆ ಕೇವಲ ಲಾಭದಲ್ಲಿ ಮಾತ್ರ ಪಾಲುಬೇಕೆನ್ನುವ ಕಮ್ಯುನಿ ನೀತಿಯಿಂದ ದೇಶವು ಮುಂದುವರಿಯಲು ಎಂದೂ ಕೂಡ ಸಾಧ್ಯವಿಲ್ಲ.

ಬಂಡವಾಳಶಾಹಿವಾದದ ಪ್ರಮುಖ ದೇಶ ಅಮೆರಿಕ ನಾಳೆ ಬೆಳಗ್ಗೆ ಹತ್ತು ಬಂಡವಾಳದಾರರನ್ನೇನಾದರೂ ಹೊರ ಹಾಕಿದರೆ ಅಲ್ಲಿಯೂ ನಮ್ಮಷ್ಟೇ ಬಡತನ ನಿರ್ಮಾಣವಾಗಿ ಬಿಡುತ್ತದೆ. ಕೇವಲ ಮನುಷ್ಯನ ಬೆವರಿನಿಂದ ಮಾತ್ರ ಸಂಪತ್ತು ಸೃಷ್ಟಿಯಾಗುತ್ತದೆಯೆಂಬುದು ಸುಳ್ಳು, ಬೆವರಿನ ಜತೆಗೆ ಮೆದುಳು ಹಾಗು ಧೈರ್ಯ ಬೇಕು. ನಾಗರಿಕತೆ ಬರುವುದಕ್ಕೂ ಮುನ್ನ ಜನರೆಲ್ಲರೂ ಬೆವರು ಸುರಿಸಿ ಕೆಲಸ ಮಾಡುತ್ತಿದ್ದರು, ಅವರ ಕೈಯಿಂದ ಅದೆಷ್ಟು ಸಂಪತ್ತು ಸೃಷ್ಟಿಯಾಯಿತು ? ಸೃಷ್ಟಿಯಾಗಲಿಲ್ಲ. ಭಾರತದಲ್ಲಿ ಇದ್ದ ಸಂಪತ್ತನ್ನು ಬ್ರಿಟಿಷರು ಕೊಳ್ಳೆ ಹೊಡೆದುಕೊಂಡು ಹೋದರಷ್ಟೆ.

ಬಂಡವಾಳಶಾಹಿ ವ್ಯವಸ್ಥೆಯ ಮತ್ತೊಂದು ಮಹತ್ವದ ಸಾಧನೆಯೆಂದರೆ ಮಾನವನ ಶ್ರಮದ ಜಾಗದಲ್ಲಿ ಯಂತ್ರಗಳನ್ನು ತಂದಿದ್ದು, ಮನುಷ್ಯ ಬೆವರು ಹರಿಸಿ ಎಷ್ಟೇ ದುಡಿದರೂ ಸಹ ದೊಡ್ಡ ಸಂಪತ್ತಿನ ಸೃಷ್ಟಿ ಸಾಧ್ಯವಿಲ್ಲ. ಹಾರೆ, ಪಿಕಾಸಿ ಜಾಗದಲ್ಲಿ ಇಂದು ದೊಡ್ಡ ದೊಡ್ಡ ’ಬುಲ್ ಡೋಜರ್’ ಬಂದಿದೆ, ಇವುಗಳು ಇಲ್ಲ ವೆಂದಿದ್ದರೆ ಭಾರತದಲ್ಲಿ ಸಾವಿರಾರು ಕಿಲೋಮೀಟರುಗಳ ರಸ್ತೆ ನಿರ್ಮಾಣವಾಗುತ್ತಿತ್ತೇ ? ಗಣಿಗಳಲ್ಲಿ ಟನ್‌ಗಟ್ಟಲೆ ಸಂಪನ್ಮೂಲಗಳನ್ನು ಹೊರ ತೆಗೆಯ ಲಾಗುತ್ತಿತ್ತೇ ? ಕಳೆದ 10 ವರ್ಷಗಳಲ್ಲಿ ಮಾಹಿತಿ ಹಾಗೂ ತಂತ್ರಜ್ಞಾನದಲ್ಲಿ ಉಂಟಾದ ಬದಲಾವಣೆಯಿಂದ ಕುಳಿತ ಜಾಗದಲ್ಲಿ ಒಂದು ಮೊಬೈಲ್‌ನಿಂದ ಅದೆಷ್ಟು ಕೆಲಸಗಳನ್ನು ಮಾಡಬಹುದಾಗಿದೆ. ಇದೆಲ್ಲದರ ಹಿಂದಿರುವುದು ’ಬಂಡವಾಳಶಾಹಿ’ವಾದ. ಬಂಡವಾಳಶಾಹಿಗಳು ಹಣವನ್ನು ಹೂಡಿಕೆ ಮಾಡದಿದ್ದರೆ ಇಂದು ಈ
ಮಟ್ಟದ ಅಭಿವೃದ್ಧಿಯಾಗುತ್ತಿರಲಿಲ್ಲ.

ಮಾತು ಮಾತಿಗೂ ಅಂಬಾನಿ, ಅದಾನಿ ಎಂದು ಬೊಬ್ಬೆ ಹೊಡೆಯುವವರಿಗೆ, ಅಂಬಾನಿಯ ಒಟ್ಟಾರೆ ಸಾಲದ ಮೊತ್ತ ಒಂದು ಲಕ್ಷ ಕೋಟಿ ದಾಟಿದ್ದು ನೆನಪಿಲ್ಲವೇ ? ಆ ಸಾಲವನ್ನು ತೀರಿಸಲು ಅಮೆರಿಕ ದೇಶದಿಂದ ಬಂಡವಾಳ ಹೂಡಿಕೆ ಮಾಡಿಸಿದ್ದು ಇದೇ ಅಂಬಾನಿ. ಕಮ್ಯುನಿಸ್ಟರೇನಾದರೂ ಅಂಬಾನಿಯ ಸಾಲವನ್ನು ತೀರಿಸಲು ಸಹಾಯ ಮಾಡಿದ್ದರೇ ? ಅಂಬಾನಿಯ ’ಜಿಯೋ’ ಮೊಬೈಲ್‌ನಿಂದಲೇ ಕರೆ ಮಾಡಿ ಅವರ ವಿರುದ್ಧ ಮಾತನಾಡುತ್ತಾರೆ. ಅಂಬಾನಿ ಇಷ್ಟು ಕಡಿಮೆ
ದರದಲ್ಲಿ ಇಂಟರ್‌ನೆಟ್ ಸೇವೆಯನ್ನು ನೀಡದಿದ್ದರೆ ಇಂದು ಶಾಲಾ ಮಕ್ಕಳು ತಮ್ಮ ಶಿಕ್ಷಣವನ್ನು ಕರೋನಾ ಸಮಯದಲ್ಲಿ ಮುಂದುವರಿಸಲು ಸಾಧ್ಯವಾಗು ತ್ತಿರಲಿಲ್ಲ.

ಯಂತ್ರಗಳ ಆವಿಷ್ಕಾರದಿಂದ ತೋಳ್ಬಲಗಳಿಗೆ ಕೆಲಸವಿರುವುದಿಲ್ಲವೆಂದು ಬೊಬ್ಬೆ ಹೊಡೆಯುವವರು, ಯಂತ್ರಗಳು ಬರುವ ಮೊದಲು ತೋಳ್ಬಲಗಳ ಮೂಲಕ ಕೆಲಸ ಮಾಡುತ್ತಿದ್ದವರನ್ನು ‘ಜೀತ’ದಿಂದ ಮುಕ್ತಿಗೊಳಿಸಿ ಎಂದು ಬೊಬ್ಬೆ ಹೊಡೆಯುತ್ತಿದ್ದರು. ಜೀತ ಪದ್ಧತಿಗೆ ಒಂದು ಇತಿಶ್ರೀ ಹಾಡಿ ಕೋಟ್ಯಂತರ ಕಾರ್ಮಿಕರನ್ನು ಜೀತದಿಂದ ಮುಕ್ತಿಗೊಳಿಸಿದ್ದು ಯಂತ್ರಗಳೆಂಬ ಸಾಮಾನ್ಯಜ್ಞಾನ ಇವರಿಗಿಲ್ಲ. ಯಂತ್ರಗಳ ಆವಿಷ್ಕಾರವೇನಾದರೂ ಆಗದೆ ಹೋಗಿದ್ದರೆ ಮಾನವ ಜನಾಂಗದಲ್ಲಿ ಇಂದಿಗೂ ಜೀತ ಪದ್ದತಿಯು ರೂಡಿಯಲ್ಲಿರುತ್ತಿತ್ತು. ಜತೆಗೆ ಈ ಮಟ್ಟಿನ ಸಂಪತ್ತಿನ ವೃದ್ಧಿಯಾಗುತ್ತಲಿರಲಿಲ್ಲ. ಯಂತ್ರಗಳ ಆವಿಷ್ಕಾರದ ಹಿಂದಿರುವುದು
ಮತ್ತದೇ ‘ಬಂಡವಾಳಶಾಹಿ’ವಾದ.

ಉತ್ಪಾದನಾ ಪ್ರಕ್ರಿಯೆಯಲ್ಲಿ ನೂರಾರು ಜನರಿದ್ದರೆ ಪ್ರಯೋಜನವಿಲ್ಲ, ಅದಕ್ಕೆ ಅತ್ಯಗತ್ಯವಾಗಿ ಬೇಕಿರುವುದು ಉತ್ಪಾದನೆಯ ಕನಸು ಕಾಣುವಂತಹ ಹಾಗು ಆ ಕನಸನ್ನು ಸಾಕಾರಗೊಳಿಸುವಂತಹ ವಿವಿಧ ಯೋಜನೆಗಳನ್ನು ಬಲ್ಲ ವ್ಯಕ್ತಿ. ಸಂಪತ್ತು ಕೇವಲ ಕಾರ್ಮಿಕರ ಬೆವರಿನಿಂದ ಸೃಷ್ಟಿಯಾಗುವುದಿಲ್ಲ, ಬೆವರಿಗಿಂತಲೂ ಮುಖ್ಯವಾಗಿ ಬುದ್ಧಿಬಲವಿರಬೇಕು. ಎಲ್ಲರಿಗೂ ಬುದ್ಧಿಬಲವಿರುವುದಿಲ್ಲ, ಕೇವಲ ಕೆಲವೇ ಕೆಲವು ಜನರಿಗೆ ಮಾತ್ರ ಬುದ್ದಿ ಬಲವಿರುತ್ತದೆ. ಸಮಾಜವಾದದ ಅನುವಾ
ದಕರು ಕೇವಲ ಬೆವರಿನಿಂದ ಮಾತ್ರ ಸಂಪತ್ತು ಸೃಷ್ಟಿಯಾಗುತ್ತದೆಯೆಂದು ಸುಳ್ಳು ಹೇಳಿಕೊಂಡು ತಿರುಗುತ್ತಿರುತ್ತಾರೆ.

ಇವರ ಸುಳ್ಳೆನಾದರೂ ಮೇಲಾದರೆ ಮನುಷ್ಯನ ಬುದ್ದಿ ಬಲಕ್ಕೆ ಬೆಲೆಯೇ ಇಲ್ಲದಂತಾಗುತ್ತದೆ, ಕೇವಲ ತೋಳ್ಬಲಕ್ಕೆ ಮಾತ್ರ ರಾಜ ಮರ್ಯಾದೆ ಸಿಕ್ಕಂತಾಗುತ್ತದೆ. ಆಗ ಇಡೀ ಮನುಕುಲವೇ ಬಡತನ ಹಾಗೂ ಉಪವಾಸಗಳಿಂದ ಆವರಿಸಿಕೊಂಡು ನೂರಾರು ವರ್ಷಗಳ ಹಿಂದಕ್ಕೆ ಅಭಿವೃದ್ಧಿ ತಳ್ಳಲ್ಪಡುತ್ತದೆ. ಬಂಡವಾಳಶಾಹಿ ವ್ಯವಸ್ಥೆ ಯಾರನ್ನೂ ಸಹ ಶೋಷಿಸುವುದಿಲ್ಲ ಬದಲಾಗಿ ಸಂಪತ್ತನ್ನು ಸೃಷ್ಟಿಸುತ್ತದೆ. ಆದರೆ ಆ ಸಂಪತ್ತನ್ನು ಕಂಡಾಕ್ಷಣ ಕೆಲವರ ಮನಸ್ಸು ಕರುಬುತ್ತದೆ. ಸಮಾಜ ವಾದವು ಮೇಲ್ನೋಟಕ್ಕೆ ಮನುಷ್ಯ ಮನುಷ್ಯರ ನಡುವಿನ ಸಮಾನತೆಯೇ ನನ್ನ ಗುರಿಯೆಂದು ಹೇಳುತ್ತದೆ, ಆದರೆ ವಾಸ್ತವದಲ್ಲಿ ಅದು ಸಾಧ್ಯವಿಲ್ಲ.

ಹೊಟ್ಟೆಕಿಚ್ಚಿನ ಸ್ವಭಾವದಿಂದ ಮತ್ತೊಬ್ಬರು ಮೇಲೆ ಬಂದರೆ ಕರುಬುವ ಮನಸ್ಸು ಇಲ್ಲಸಲ್ಲದ ಸುಳ್ಳುಗಳ ಹಿಂದೆ ಹೋಗುತ್ತದೆ. ರಷ್ಯಾದಲ್ಲಿ ನಡೆದಂತಹ ಕ್ರಾಂತಿಯೂ ಅಷ್ಟೇ ಅಸೂಯೆಯ ಫಲ, ಚೀನಾದಲ್ಲಿಯೂ ನಡೆದ ಕ್ರಾಂತಿಯು ಅಸೂಯೆಯ ಫಲವೇ, ಇತ್ತೀಚಿಗೆ ’ಅಲಿಬಾಬಾ’ ಸಂಸ್ಥಾಪಕ ’ಜಾಕ್‌ಮಾ’ನ ಪ್ರಖ್ಯಾತಿಯನ್ನು ಸಹಿಸದ ಚೀನಾದ ಅಧ್ಯಕ್ಷ ಎಲ್ಲಿ ಆತನ ಖ್ಯಾತಿಯಿಂದ ತನ್ನ ಕುರ್ಚಿ ಅಲುಗಾಡುತ್ತದೆಯೆಂಬ ಭಯದಿಂದ ಅನಾಮಿಕ ಸ್ಥಳದಲ್ಲಿ ಆತನನ್ನು ಅಪಹರಿಸಲಾಗಿತ್ತೆಂದು ಹಲವರು ಹೇಳಿದ್ದರು.

ಸಮಾಜವಾದದ ಚಿಂತನೆ ತಪ್ಪಲ್ಲ, ಆದರೆ ಸಮಾನವಾಗಿ ಸಂಪತ್ತನ್ನು ಹಂಚುವ ಮೊದಲು ಅದನ್ನು ಸೃಷ್ಟಿ ಮಾಡುವತ್ತ ನಿರ್ಧಾರಗಳನ್ನು ಕೈಗೊಳ್ಳಬೇಕಿದೆ. ಸಂಪತ್ತು ವೃದ್ಧಿಗೊಂಡರೆ ಮಾತ್ರ ಸಮಾನವಾಗಿ ಸಮಾಜದಲ್ಲಿನ ಜನರಿಗೆ ಹಂಚಬಹುದು, ಅದನ್ನು ಬಿಟ್ಟು ಮಮತಾ ಬಾನ್ಯರ್ಜಿಯ ರೀತಿಯಲ್ಲಿ ಸಂಪತ್ತು ವೃದ್ಧಿಯ ಕಡೆಗೆ ಗಮನ ಹರಿಸದೆ ಇರುವ ಸಂಪತ್ತನ್ನು ಹಂಚುವಲ್ಲಿ ನಿರತವಾಗಿದ್ದರೆ ಇಡೀ ದೇಶವೇ ಪಶ್ಚಿಮ ಬಂಗಾಳವಾಗಿಬಿಡುತ್ತದೆ. ಕೊನೆಯದಾಗಿ ಓಶೋ ಹೇಳಿದ ಹಾಗೆ ’ಬಂಡವಾಳಶಾಹಿ’ವಾದವಿಲ್ಲದೆ ’ಸಮಾಜವಾದ’ವಿಲ್ಲ.