Thursday, 22nd February 2024

ಭುಗಿಲೆದ್ದಿರುವ ಜಾತಿಗಣತಿಯ ಸಂಘರ್ಷ

ಚರ್ಚಾವೇದಿಕೆ

ಟಿ.ದೇವಿದಾಸ್

ಜಾತ್ಯತೀತತೆ ಒಂದು ಧ್ಯೇಯ, ಅದು ವೃತ್ತಿಯಲ್ಲ. ೧೯೫೦ರ ದಶಕದಲ್ಲಿ ಬ್ರಾಹ್ಮಣ, ಬ್ರಾಹ್ಮಣೇತರ ಎಂಬ ಎರಡೇ ಜಾತಿಗಳನ್ನು ಅಧಿ ಕೃತವಾಗಿ ಗುರುತಿಸ ಲಾಗಿತ್ತು. ಈಗ ಇದು ಒಡೆದು ಚೂರುಚೂರಾಗಿ ಹೋಳುಗಳಾಗಿದೆ. ಈಗ ಕೆಲ ಪ್ರಶ್ನೆಗಳು ಹುಟ್ಟುತ್ತವೆ. ಭಾರತವು ಜಾತ್ಯತೀತ ರಾಷ್ಟ್ರ ಎಂದ ಮೇಲೆ ಜಾತಿಗಣತಿಯ ಉದ್ದೇಶವೇನು? ಇದು ಭಾರತದ ಸಮಗ್ರತೆಗೆ ಭಂಗ ತರುವುದಿಲ್ಲವೇ?

ಸಾರ್ವಭೌಮ ರಾಷ್ಟ್ರವೊಂದಕ್ಕೆ ಜನಗಣತಿಯ ಅಗತ್ಯ ಇದ್ದೇ ಇರುತ್ತದೆ. ಕೊನೆಯ ಪಕ್ಷ ರಾಷ್ಟ್ರದ ಜನಸಂಖ್ಯೆ ಎಷ್ಟು ಎಂಬುದಾದರೂ ತಿಳಿದಿರಬೇಕಲ್ಲ. ಜಾಗತಿಕ ಮಟ್ಟದಲ್ಲಿ ರಾಷ್ಟ್ರವೊಂದರ ಅಸ್ತಿತ್ವವು, ಅದು ಹೊಂದಿರುವ ಜನಸಂಖ್ಯೆಯನ್ನು ಆಧರಿಸಿಯೂ ಇರುತ್ತದೆ. ಅದರಲ್ಲೂ ಭಾರತದಂಥ ಬಹುದೊಡ್ಡ ಪ್ರಜಾಪ್ರಭುತ್ವ
ರಾಷ್ಟ್ರದಲ್ಲಿ ಜನಸಂಖ್ಯೆಯೇ ಅದರ ಶಕ್ತಿಯೂ ಹೌದು, ದೌರ್ಬಲ್ಯವೂ ಹೌದು. ಇಂದಿರಾ ಗಾಂಽಯವರು ಹೇರಿದ್ದ ತುರ್ತು ಪರಿಸ್ಥಿತಿಯ ನಂತರ ತಿದ್ದುಪಡಿಯಾದ ಸಂವಿಧಾನದ ಪೀಠಿಕೆಯಲ್ಲಿ ‘ಸೆಕ್ಯುಲರ್ ಡೆಮಾಕ್ರಟಿಕ್ ರಿಪಬ್ಲಿಕ್ ಸ್ಟೇಟ್’ ಎಂಬ ಪದಗುಚ್ಛ ನುಸುಳಿಕೊಂಡಿತು.

ಜಾತ್ಯತೀತ, ಆದರೆ ಪ್ರಜಾತಂತ್ರದ ವ್ಯವಸ್ಥೆ ಎಂಬುದು ಇದರ ಅರ್ಥ. ಹೀಗೆ ಸೇರಿದ ಇಂಥದ್ದೇ ಇನ್ನೊಂದು ಪದಗುಚ್ಛ- ‘ಡೆಮಾಕ್ರಟಿಕ್ ಸೋಷಲಿಸ್ಟ್ ರಿಪಬ್ಲಿಕ್’ ಎಂಬುದು. ಅಂತೂ ಭಾರತದ ವ್ಯವಸ್ಥೆ ಅದೋ ಇದೋ? ಎಂಬ ಚಿಂತನೆ/ಗೊಂದಲ ಯಾವತ್ತೂ ಇದ್ದೇ ಇದೆ. ಉತ್ತರ ಮಾತ್ರ ಯಾವಾಗಲೂ ಸ್ಪಷ್ಟವಾಗುವುದೇ ಇಲ್ಲ. ಅಂದರೆ, ಚಿಂತನೆಯಿದೆ, ಅರ್ಥ ದೊರೆಯುವುದಿಲ್ಲ ಎಂದ ಹಾಗೆ. ಇದನ್ನೇ ಹಿರಿಯರು ಅನುಭವ ಅಂತ ಕರೆಯುವುದು. ಕಾಲದೇಶಗಳಿಗೆ ತಕ್ಕಂತೆ ಈ ಅನುಭವ ವ್ಯತ್ಯಯಗೊಳ್ಳಹುದು. ಯಾಕೆಂದರೆ, ಡೆಮಾಕ್ರಸಿಯಲ್ಲಿ ವ್ಯಕ್ತಿ ಮುಖ್ಯ, ಸೋಷಲಿಸಂನಲ್ಲಿ ಸಮಾಜವೇ ಮುಖ್ಯ. ಸಮಾಜವಾದದಲ್ಲೂ ಸಮಾಜದ ಬದಲು ವ್ಯಕ್ತಿಯೇ ಕಾಣುವುದು.

ವ್ಯಕ್ತಿಗಳೇ ಸಮಾಜ ಎನ್ನುವುದು ಅಮೂರ್ತ ಕಲ್ಪನೆ. ಅಂದರೆ, ಸಮಾಜವಾದದಲ್ಲಿ ಸಮಷ್ಟಿ ಎಂಬುದು ಕಾಲ್ಪನಿಕ. ಅದು ವಾಸ್ತವ ಆಗುವುದು ವ್ಯಕ್ತಿಗಳಿಂದಲೇ! ಸೆಕ್ಯುಲರ್ ಎಂಬುದು ಸಂವಿಧಾನದ ಪ್ರಕಾರ ಸತ್ಯ. ಆದರೆ ಜಾತಿಯನ್ನು ಬಿಡಲಾಗುವುದಿಲ್ಲ, ಬಿಟ್ಟರೆ ರಾಜಕೀಯ ನಡೆಯುವುದಿಲ್ಲ. ಇಂದಿನ ಭಾರತದ ರಾಜಕಾರಣದ ವಿರಾಜಮಾನರಲ್ಲಿ ಜಾತಿವಾದಿಗಳೇ ಹೆಚ್ಚು! ಅಂದರೆ, ಜಾತ್ಯಾಧಾರಿತ ಜಾತ್ಯತೀತತೆ ಎಂಬ ಢೋಂಗಿವಾದ ನಮ್ಮದು ಅಥವಾ ನಮ್ಮ ರಾಜಕೀಯ ವ್ಯವಸ್ಥೆ ಅಂತ ಹೇಳಿದರೆ ಅರ್ಧಸತ್ಯವಾಗದು! ಇದು ಬಹುದೊಡ್ಡ ವಿಚಿತ್ರ ಯಾಕೆಂದರೆ, ‘ಸೆಕ್ಯುಲರ್’ ಎಂಬಲ್ಲಿ ‘ಜಾತಿಗಣನೆ ಬೇಡ’ ಎಂಬ ಗ್ರಹಿಕೆಯೇ
ಮೂಲದಲ್ಲಿ ಇರುವಂಥದ್ದು. ಸೆಕ್ಯುಲರ್ (ಜಾತಿಯು ಮುಖ್ಯವಲ್ಲದ) ದೇಶದಲ್ಲಿ ಜಾತಿಗಣತಿಯು ಬಹುತ್ವದ ಪ್ರಜ್ಞೆಗೆ ಆಘಾತವನ್ನು ಕೊಡುತ್ತದೆ ಎಂದಾದಾಗ, ‘ಡೆಮಾಕ್ರಟಿಕ್ ಸೋಷಲಿಸ್ಟ್ ರಿಪಬ್ಲಿಕ್’ ಎಂಬಲ್ಲಿನ ಸಮಾಜವಾದದ ಗೊಂದಲ ದಲ್ಲಿ ಈ ಬಹುತ್ವದ ಪ್ರಜ್ಞೆ ಸಾಯುತ್ತದೆ.

ಆಗ ಅರ್ಥಶೂನ್ಯ ಬಹುತ್ವ ಮಾತ್ರ ಉಳಿಯುತ್ತದೆ. ಯೂನಿವರ್ಸಲ್ ಆದ ಒಂದು ಗ್ರಹಿಕೆಯು ‘ಸೆಕ್ಯುಲರ್’ ಎಂಬಲ್ಲಿಯೂ ಇರುವುದಿಲ್ಲ, ‘ಸೋಷಲಿಸಂ’ ಎಂಬಲ್ಲಿಯೂ ಇರುವುದಿಲ್ಲ. ಜಾತಿ ಮತ್ತು ಜಾತ್ಯತೀತತೆ ಎಂಬುದೇ ಅಪ್ರಶ್ನಿತ ಗ್ರಹಿಕೆ ಯೆಂಬುದು ನನ್ನ ಅಭಿಮತ. ಯಾಕೆಂದರೆ, ಬುದ್ಧ, ಬಸವ, ಗಾಂಧಿ, ಮಾರ್ಕ್ಸ್‌ರನ್ನು ಜಾತ್ಯತೀತತೆ ಎಂಬ ನೆಲೆಯಲ್ಲಿ ಸಮೀಕರಣ ಮಾಡುವ ರೂಢಿಯೊಂದು ಲಾಗಾಯ್ತಿನಿಂದಲೂ ಇದೆ. ಇದು ರಾಜಕೀಯವಾದ ತಪ್ಪುಗ್ರಹಿಕೆಯ ಸಮೀಕರಣ. ಯಾಕೆಂದರೆ, ಬುದ್ಧ ಜಾತಿಯನ್ನು ಬೈಯಲಿಲ್ಲ. ಬಸವಣ್ಣ ಅಧ್ಯಾತ್ಮ ವಿಕಾಸವಾದಿ, ಸಮಾಜ ಸುಧಾರಕ. ಗಾಂಧಿ ಸಮರಸ ವಾದಿ, ಸರ್ವಧರ್ಮದ ಸಮೀಕರಣವಾದಿ. ಹಿಂಸೆಯಿಂದ ಕ್ರಾಂತಿಯನ್ನು ಪ್ರತಿಪಾದಿಸಿದವ ಮಾರ್ಕ್ಸ್. ಬುದ್ಧನು ಹೇಳಿದ್ದನ್ನೇ (ತನ್ನ ಉಪದೇಶವಾದ ಧರ್ಮ ಪದದಲ್ಲಿ ಬ್ರಾಹ್ಮಣ ವರ್ಗ ಎಂಬ ಅಧ್ಯಾಯದಲ್ಲಿ ಸತ್ಯ, ಧರ್ಮಾಚರಣೆ, ಚಾರಿತ್ರ್ಯ ಶುದ್ಧಿಯ ಬಗ್ಗೆ ಹೇಳಿದವನು) ಬಸವಣ್ಣ ಮತ್ತು ಗಾಂಧಿಯಲ್ಲಿ ಕಂಡರೂ (ಬಸವಣ್ಣನವರು ವ್ಯಕ್ತಿತ್ವದ ಶುದ್ಧತೆ, ಅಹಿಂಸೆ, ಸಮಾಜ ಸುಧಾರಣೆಯ ಬಗ್ಗೆ ಹೇಳಿದವರೇ ಹೊರತು ಅಧ್ಯಾತ್ಮ ವಾದಿಯಲ್ಲ; ಗಾಂಧೀಜಿ ವರ್ಣಾಶ್ರಮ ಪದ್ಧತಿಯ ದೋಷ ಗಳನ್ನು ಸರಿಪಡಿಸಿ
ಉಳಿಸಬೇಕೆಂದು ಹೇಳಿದವರು), ಸಮೀಕರಣ ಸಮರ್ಥನೀಯವಾಗಲು ಸಾಧ್ಯವಿಲ್ಲ. ಈ ಮೂವರನ್ನೂ ಅಲ್ಲಗಳೆದವ ಮಾರ್ಕ್ಸ್, ಈತ ಅಧ್ಯಾತ್ಮವನ್ನು ಅಫೀಮಿಗೆ ಹೋಲಿಸಿದ ಪುಣ್ಯಾತ್ಮ.

ಆದ್ದರಿಂದ, ರೂಢಿಯಲ್ಲಿ ಬಂದ ಸಮೀಕರಣ ದಾರಿ ತಪ್ಪಿಸುತ್ತದೆ. ರಾಜಕೀಯ ಉದ್ದೇಶಕ್ಕಾಗಿ ಬೇಕಾಗಿ ಮಾಡಿಕೊಂಡ ಈ ಸಮೀಕರಣ ತಿರುಚಿದ್ದೇ ವಿನಾ, ನಿಜಕ್ರಾಂತಿಯಲ್ಲ. ಒಕ್ಕಲಿಗ, ಲಿಂಗಾಯತ, ಕುರುಬ, ನಾಯ್ಡು, ಯಾದವ, ನಾಪಿತ ಹೀಗೆ ನೂರಾರು ಒಳಜಾತಿಗಳು, ಒಳಪಂಗಡಗಳು ಬಯಸುವ ಮೀಸಲು, ಅಧಿಕಾರ, ಸ್ಥಾನಮಾನ, ದುಡ್ಡು ಮಾಡುವ ಹಪಹಪಿ ಇವನ್ನೆಲ್ಲ ಬಿಟ್ಟರೆ, ಜಾತಿ ತೆಗೆದರೆ ಬದುಕುಳಿಯುವವರು ಯಾರು? ಇದರಿಂದ ಜನಸಾಮಾನ್ಯರಿ ಗೇನೂ ತೊಂದರೆ ಯಾಗಲಾರದು. ಆದರೆ ರಾಜಕೀಯ ನಡೆಯುವುದಿಲ್ಲ. ಆದ್ದರಿಂದ ಎಲ್ಲರಿಗೂ ಬದುಕುವುದಕ್ಕಾಗಿ ಜಾತಿಯ ಮುಸುಕು ಬೇಕೇಬೇಕು. ಆ ಮುಸುಕಿನ ಮೇಲೆಯೇ ‘ಜಾತ್ಯತೀತ’ ಎಂಬ ಢೋಂಗಿ -ಷನ್ನಿನ ಲೇಬಲ್ಲು ಬೇಕು.

ಅದರರ್ಥ ಇಷ್ಟೇ: ಬ್ರಾಹ್ಮಣ ಬೇಡ, ಉಳಿದವರೆಲ್ಲರೂ ಬೇಕು ಎಂದಲ್ಲವೇ?! ೧೯೫೦ರ ದಶಕದಲ್ಲಿ ಬ್ರಾಹ್ಮಣ, ಬ್ರಾಹ್ಮಣೇತರ ಎಂಬ ಎರಡೇ ಜಾತಿಗಳನ್ನು ಅಽಕೃತವಾಗಿ ಗುರುತಿಸಲಾಗಿತ್ತು. ಈಗ ಇದು ಒಡೆದು ಚೂರುಚೂರಾಗಿ ಹೋಳುಗಳಾಗಿದೆ. ಈಗ ಇಲ್ಲೊಂದಿಷ್ಟು ಪ್ರಶ್ನೆಗಳು ಹುಟ್ಟುತ್ತವೆ. ಭಾರತವು ಜಾತ್ಯತೀತ
ರಾಷ್ಟ್ರ ಎಂದ ಮೇಲೆ ಜಾತಿಗಣತಿಯ ಉದ್ದೇಶವೇನು? ಇದು ಭಾರತದ ಸಮಗ್ರತೆಗೆ ಭಂಗ ತರುವುದಿಲ್ಲವೇ? ನಾವೆಲ್ಲರೂ ಒಂದಾಗಿ ತಲೆಯೆತ್ತಿ ಬದುಕಬೇಕೋ ಸಾಯಬೇಕೋ? ಭಾರತ ಸಾಯಲಿ, ಜಾತಿಯೇ ಬೇಕು ಎಂಬಂತಿದೆ ಈ ಜಾತಿಗಣತಿ. ಬುದ್ಧ, ಗಾಂಧಿ, ಬಸವರು ಅರ್ಥವ್ಯವಸ್ಥೆಯಲ್ಲಿ ಜಾತಿಯನ್ನು ವೃತ್ತಿಪೋಷಣೆ  ಗಾಗಿ, ಕಾಯಕದ ಅರ್ಥದಲ್ಲಿ ಒಪ್ಪಿದರು. ಜಾತಿ ಇರಬೇಕಾದುದು ವೃತ್ತಿ ನಿರ್ವಹಣೆಗಾಗಿಯೇ ಹೊರತು, ಮೇಲು-ಕೀಳು ಎಂಬ ಗ್ರಹಿಕೆಯಲ್ಲಿ ಅಲ್ಲ!

ಅಂತರವನ್ನು ಸೃಷ್ಟಿಸಿ ಒಡಕನ್ನು ಹುಟ್ಟಿಸುವುದಕ್ಕಲ್ಲ. ಈಗ ಎದ್ದಿರುವ ಜಾತಿಗಣತಿ ವರದಿ ಸಂಘರ್ಷದ ಕಾರಣ ಗಳೇ ವಿಚಿತ್ರವಾಗಿ ಕಾಣುತ್ತಿವೆ. ಕಾಂತರಾಜು ವರದಿಯಿನ್ನೂ ಬಿಡುಗಡೆಯೇ ಆಗಿಲ್ಲ; ಅದಾಗಲೇ ಒಕ್ಕಲಿಗರು ‘ಇದೊಂದು ಅವೈಜ್ಞಾನಿಕ ವರದಿ, ಸ್ವೀಕಾರ ಬೇಡ’ ಅಂತಲೂ, ಉಳಿದ ಸಮುದಾಯದವರು ಬೇಕು ಅಂತಲೂ ಕೂಗುತ್ತಿದ್ದಾರೆ. ‘ಬೇಕು’ ಅಂತ ಸಿಎಂ, ‘ಬೇಡ’ ಅಂತ ಡಿಸಿಎಂ ವಿರುದ್ಧ ದಿಕ್ಕಿನಲ್ಲಿ ನಿಂತಿದ್ದಾರೆ. ಕಾಂಗ್ರೆಸ್‌ನ ಒಳರಾಜಕೀಯವಿದು ಎಂಬುದು
ನೂರಕ್ಕೆ ನೂರು ನಿಶ್ಚಿತ! ಇದೊಂದು ಸಾಮಾಜಿಕ ಮತ್ತು ಶೈಕ್ಷಣಿಕ ವರದಿಯೇ ಹೊರತು ಜಾತಿಗಣತಿಯಲ್ಲ ಎಂದು ಕಾಂತರಾಜು ಅವರು ಟಿವಿಯಲ್ಲಿ ಹೇಳಿಕೆ ಕೊಟ್ಟಿದ್ದಾರೆ. ಅಷ್ಟಕ್ಕೂ ಈ ಜಾತಿಗಣತಿಯಾದರೂ ಯಾಕೆ? ಈ ಸರಕಾರಕ್ಕೆ ಯಾವುದು ಮೊದಲ ಆದ್ಯತೆಯಾಗಬೇಕು ಎಂಬುದರಲ್ಲಿ ಆಸಕ್ತಿಯಿಲ್ಲ, ವಿವೇಕವೂ ಇಲ್ಲ. ದೊಡ್ಡ ಬಹುಮತದೊಂದಿಗೆ ಗೆದ್ದು ಬಂದ ಈ ಸರಕಾರ ಇನ್ನೂ ಹಳಿಗೆ ಬಂದಿಲ್ಲ.

ಸರಕಾರವೊಂದು ಈ ರೀತಿಯಲ್ಲೂ ಕಾರ್ಯನಿರ್ವಹಿಸುತ್ತದೆಯೇ ಎಂಬ ಭಾವ ಜನರಲ್ಲಿ ಹುಟ್ಟಿಕೊಂಡಿದೆ. ಕಾರಣ, ಅಭಿವೃದ್ಧಿ ಎಂಬ ಮಂತ್ರ ಅಳಿಸಿಹೋಗಿದೆ, ಯಾವುದಕ್ಕೂ ಹಣವಿಲ್ಲದೆ ಸರಕಾರವು ‘ಗ್ಯಾರಂಟಿ’ಗಳನ್ನು ಕೊಡುವುದಕ್ಕೆ ಹರಸಾಹಸ ಪಡುತ್ತಿದೆ. ಸರಕಾರ ಮತ್ತು ವಿಪಕ್ಷಗಳು ಹಾದಿಬೀದಿಯಲ್ಲಿ ನಿಂತು
ರಂಪಾಟವನ್ನು ಮಾಡುತ್ತಿರುವುದನ್ನು ನೋಡಿದರೆ, ಈ ಸಂಪತ್ತಿಗೆ ನಾವು ಇವರಿಗೆ ವೋಟು ಹಾಕಿದ್ದಾ? ಅಂತ ಜನರು ಕೇಳುವಂತಾಗಿದೆ. ಆಡಳಿತಾತ್ಮಕವಾಗಿ ಎದ್ದಿರುವ ಗೊಂದಲ- ಗೌಜುಗಳಿಗೆ ಯಾರು ಹೊಣೆ? ಸರಕಾರವೊಂದು ಅಸ್ತಿತ್ವಕ್ಕೆ ಬಂದ ಮೇಲೆ, ಅದು ಏನು ಮಾಡಿದರೂ ವೋಟು ಕೊಟ್ಟ ಜನ ನೋಡಿಕೊಂಡು ಸುಮ್ಮನಿರಬೇಕೇ? ಸರಕಾರವನ್ನು, ಅದರ ಆಡಳಿತವನ್ನು, ನೀತಿ-ನಿಯಮಗಳನ್ನು ಪ್ರಶ್ನಿಸಬಾರದೇ? ಹಾಗೆ ಪ್ರಶ್ನಿಸುವ ಹಕ್ಕು ಜನತೆಗಿಲ್ಲವೇ? ಆರಿಸಿ ಬಂದ
ಮೇಲೆ ಮುಗಿಯಿತು, ನಮ್ಮನ್ನು ಏನೂ ಮಾಡುವುದಕ್ಕೆ ಜನರಿಗೆ ಸಾಧ್ಯ ವಿಲ್ಲ ಎಂಬ ಧಾರ್ಷ್ಟ್ಯ ಸರಕಾರಕ್ಕೆ ಇರುವುದು ಸರಿಯೇ? ಜಾತ್ಯತೀತತೆ ಒಂದು ಧ್ಯೇಯ, ಅದು ವೃತ್ತಿಯಲ್ಲ.

ಜಾತಿ ಎಂಬುದು ವೃತ್ತಿವಾಚಕ. ಯಾವ ವೃತ್ತಿಗಳು ಬೇಡ ಹೇಳಿ? ಎಲ್ಲ ವೃತ್ತಿಗಳೂ ಬೇಕು, ಎಲ್ಲರೂ ಬೇಕು. ಎಲ್ಲದರಲ್ಲೂ ಇರಬೇಕಾದುದೇ ಜಾತ್ಯತೀತತೆ ಎಂಬ ಧ್ಯೇಯ. ಈ ಜಾತ್ಯತೀತತೆಯ ಸಾಧನೆಗಾಗಿ ಜಾತಿಗಣತಿ ಖಂಡಿತವಾಗಿಯೂ ಭಂಗ ತರುತ್ತದೆ. ವಿಷಮ ಸ್ಥಿತಿಯನ್ನು ಹುಟ್ಟಿಸುತ್ತದೆ. ಸರಕಾರದ ಇಂಥ
ಕ್ರಮಗಳಿಗೆ ಉಚ್ಚ ನ್ಯಾಯಾಲಯ ಕಡಿವಾಣ ಹಾಕಬೇಕು. ಅಂದ ಹಾಗೆ, ಕ್ರೈಸ್ತ, ಮುಸ್ಲಿಂ ಜಾತಿಯನ್ನು ಏನು ಮಾಡುತ್ತೀರಿ?

(ಲೇಖಕರು ಹವ್ಯಾಸಿ ಬರಹಗಾರರು)

Leave a Reply

Your email address will not be published. Required fields are marked *

error: Content is protected !!