Thursday, 22nd February 2024

ಕೇಂದ್ರ-ರಾಜ್ಯ ಸಂಘರ್ಷದಿಂದ ಒಕ್ಕೂಟ ವ್ಯವಸ್ಥೆಗೆ ಆತಂಕ

ವಿದ್ಯಮಾನ

ರಮಾನಂದ ಶರ್ಮಾ

ಒಕ್ಕೂಟ ವ್ಯವಸ್ಥೆಯು ಒಂದು ವಿಶಿಷ್ಟ ಆಡಳಿತ ಸಜ್ಜಿಕೆಯಾಗಿದ್ದು, ಇದರಲ್ಲಿ ಅಧಿಕಾರವು ಕೇಂದ್ರ ಮತ್ತು ರಾಜ್ಯ ಸರಕಾರಗಳ ಮಧ್ಯೆ ಒಂದಷ್ಟು ಮಾನದಂಡಗಳ ಆಧಾರದ ಮೇಲೆ ವಿಭಜಿಸಲ್ಪಟ್ಟಿರುತ್ತದೆ/ಹಂಚಿಕೆಯಾಗಿರುತ್ತದೆ. ಇದು ಒಂದೇ ರೀತಿಯಲ್ಲಿರದೆ, ಸಂಬಂಧಿತ ದೇಶದ ಆಚಾರ-ವಿಚಾರ, ಭಾಷೆ, ಜೀವನ ಪದ್ಧತಿ, ಆರ್ಥಿಕ ಸ್ಥಿತಿಗತಿ, ಭೌಗೋಳಿಕ ಪರಿಸ್ಥಿತಿ, ಆಡಳಿತ ವ್ಯವಸ್ಥೆಯ ಮೇಲೆ ಅವಲಂಬಿತವಾಗಿರುತ್ತದೆ.

ವಿಶ್ವದ ವಿವಿಧ ದೇಶಗಳಲ್ಲಿ ಇಂಥ ವ್ಯವಸ್ಥೆಯಿದ್ದು, ಈ ವಿಭಜನೆ/ಹಂಚಿಕೆ ಒಂದೇ ರೀತಿ ಇರುವುದಿಲ್ಲ. ಭಾರತದಲ್ಲಿ ಈ ಅಧಿಕಾರ ಹಂಚಿಕೆ ೩ ರೀತಿ ಯಲ್ಲಿದ್ದು, ಕೆಲವು ಕೇಂದ್ರ ಸರಕಾರದ, ಮತ್ತೆ ಕೆಲವು ರಾಜ್ಯ ಸರಕಾರದ ಸುಪರ್ದಿಯಲ್ಲಿ ಇರುತ್ತವೆ. ಹಾಗೆಯೇ ಕೆಲವು ಈ ಎರಡರ ವಶದಲ್ಲೂ
ಇರುತ್ತವೆ. ಕೇಂದ್ರ ಸರಕಾರದ ವ್ಯಾಪ್ತಿಯಲ್ಲಿ ೯೭ ವಿಷಯ ಗಳಿದ್ದು, ಇವುಗಳಲ್ಲಿ ರಕ್ಷಣೆ, ಹಣಕಾಸು, ಬ್ಯಾಂಕಿಂಗ್, ಸಂಪರ್ಕ, ವಿದೇಶಾಂಗ ವ್ಯವಹಾರ ದಂಥ ವಿಷಯಗಳು ಮುಖ್ಯ ವಾಗಿರುತ್ತವೆ.

ರಾಜ್ಯಪಟ್ಟಿಯಲ್ಲಿ ೬೬ ವಿಷಯಗಳಿದ್ದು, ವ್ಯಾಪಾರ, ವ್ಯವಸಾಯ ಮತ್ತು ಪೊಲೀಸ್ ವ್ಯವಸ್ಥೆಯಂಥ ಖಾತೆಗಳು ಇದರಲ್ಲಿ ಮುಖ್ಯವಾಗಿರುತ್ತವೆ. ಸಂಯೋಜಿತ ಅಥವಾ ಸಮಾನ ಹಕ್ಕಿನ ಪಟ್ಟಿಯಲ್ಲಿ ೫೨ ವಿಷಯಗಳಿದ್ದು, ಅರಣ್ಯ, ಶಿಕ್ಷಣ, ಕಾರ್ಮಿಕ ಸಂಘಟನೆಗಳು, ದತ್ತು ಸ್ವೀಕಾರ ಮತ್ತು ಉತ್ತರಾಧಿಕಾರದಂಥ ವಿಷಯಗಳು ಇದರಲ್ಲಿ ಮುಖ್ಯವಾಗಿರುತ್ತವೆ. ಕೇಂದ್ರ ಮತ್ತು ರಾಜ್ಯ ಸರಕಾರಗಳು ತಮ್ಮ ಸುಪರ್ದಿಯಲ್ಲಿರುವ ಇಲಾಖೆ ಅಥವಾ ವಿಷಯಗಳಲ್ಲಿ ಕಾನೂನು ಮಾಡಲು, ವ್ಯವಹರಿಸಲು ಸ್ವತಂತ್ರವಾಗಿರುತ್ತವೆ. ಈ ಅಧಿಕಾರ ವಿಭಜನೆ/ ಹಂಚಿಕೆ ವಿಷಯದಲ್ಲಿ ಇವೆರಡರ ನಡುವೆ ಲಾಗಾಯ್ತಿನಿಂದಲೂ ಶೀತಲ ಸಮರ ನಡೆಯುತ್ತಿದೆ. ತಮಗಿರುವ ಅಧಿಕಾರ ಸಾಲದು, ಕೇಂದ್ರ ಸರಕಾರ ತನ್ನ ವ್ಯಾಪ್ತಿ ಮೀರಿ ವರ್ತಿಸುತ್ತಿದೆ ಎಂದು
ರಾಜ್ಯ ಸರಕಾರಗಳು ಆರೋಪಿಸುತ್ತಿರುವುದು ತೀರಾ ಸಾಮಾನ್ಯ.

ಹಾಗೆಯೇ, ರಾಜ್ಯ ಸರಕಾರಗಳು ತಮ್ಮ ಮಿತಿ ಯನ್ನು ದಾಟಿ ತನ್ನ ಮೇಲೆ ಒತ್ತಡ ಹಾಕುತ್ತಿವೆ ಎಂದು ಕೇಂದ್ರ ಸರಕಾರ ಹೂಂಕರಿಸುವುದೂ ಅಷ್ಟೇ ಸಾಮಾನ್ಯ. ಒಕ್ಕೂಟ ವ್ಯವಸ್ಥೆಯಲ್ಲಿ ಕೇಂದ್ರ ಸರಕಾರವು ಎಲ್ಲಾ ರಾಜ್ಯ ಸರಕಾರಗಳನ್ನು ಒಂದೇ ರೀತಿಯಲ್ಲಿ ನಡೆಸಿಕೊಳ್ಳುತ್ತಿಲ್ಲ ಎಂಬ ಗುಮಾನಿ ಮತ್ತು ಆರೋಪ ಬಹಳ ವರ್ಷಗಳಿಂದಲೂ ಇದೆ. ಅಂದರೆ, ಕೆಲವನ್ನು ಸ್ವಂತ ಮಕ್ಕಳಂತೆ, ಮತ್ತೆ ಕೆಲವನ್ನು ಮಲ ಮಕ್ಕಳಂತೆ ಕೇಂದ್ರ ನೋಡುತ್ತದೆ ಎಂಬುದು ಇಲ್ಲಿನ ಆರೋಪ. ಇವುಗಳ ಸತ್ಯಾಸತ್ಯತೆ ಬೇರೆ ವಿಚಾರ ಮತ್ತು ಚರ್ಚಾಸ್ಪದ.

ರಾಜ್ಯಗಳಿಂದ ಇಂಥ ಆರೋಪ ಹೊಮ್ಮಿದಾಗ, ಕೇಂದ್ರವು ಅಂಕಿ-ಅಂಶಗಳೊಂದಿಗೆ ಅವನ್ನು ನಿರಾಕರಿಸುತ್ತ ಬರುವುದೂ ಮತ್ತು ‘ಈ ಅಂಕಿ-ಅಂಶವು ಸತ್ಯಕ್ಕೆ ದೂರ’ ಎಂದು ರಾಜ್ಯಗಳು ಹೇಳುವುದೂ ಇದೆ. ಈ ವಾದ-ವಿವಾದದ ಮಧ್ಯೆ ಸತ್ಯವು ಎಲ್ಲೋ ಅಡಗಿದೆ ಎನ್ನುತ್ತಾರೆ ತಜ್ಞರು. ಕೇಂದ್ರ ಸರಕಾರ
ದೊಂದಿಗಿನ ಸಂಘರ್ಷದಲ್ಲಿ ತೀರಾ ಇತ್ತೀಚಿನವರೆಗೆ ತಮಿಳುನಾಡು ಮಾತ್ರ ಎದ್ದು ಕಾಣುತ್ತಿತ್ತು; ಈಗ ಈ ಪಟ್ಟಿಯಲ್ಲಿ ಗುಜರಾತ್, ಅಸ್ಸಾಂ ಬಿಟ್ಟು ಬಹುತೇಕ ಎಲ್ಲಾ ಹಿಂದಿಯೇತರ ರಾಜ್ಯಗಳು ಕಾಣುತ್ತಿವೆ. ‘ಡಬಲ್ ಎಂಜಿನ್’ ಸರಕಾರ ಇರುವ ರಾಜ್ಯಗಳು ಮತ್ತು ಹಿಂದಿ ಭಾಷಿಕ ರಾಜ್ಯಗಳು ಈ ಪಟ್ಟಿ ಯಲ್ಲಿ ಕಾಣದಿರುವುದು ವಿಶೇಷ. ಈಗ ಈ ಸಂಘರ್ಷಕ್ಕೆ ‘ಉತ್ತರ- ದಕ್ಷಿಣ’ ಮತ್ತು ‘ಹಿಂದಿ-ಹಿಂದಿಯೇತರ’ ರಾಜ್ಯಗಳು ಎನ್ನುವ ಹೊಸ ಮತ್ತು ಅಪಾಯ ಕಾರಿ ಆಯಾಮವೂ ಸೇರಿಕೊಂಡು ಬಿಟ್ಟಿದೆ.

ದೇಶದಲ್ಲಿ ಉತ್ತರ ಮತ್ತು ದಕ್ಷಿಣ ಎಂಬ ಗ್ರಹಿಕೆಯು ಮೊದಮೊದಲು ಹಿಂದಿ ಭಾಷೆಯ ಹೇರಿಕೆಗೆ ಸೀಮಿತವಾಗಿತ್ತು ಮತ್ತು ತಮಿಳುನಾಡಿನಲ್ಲಿ ಮಾತ್ರವೇ ಅದು ಸದ್ದುಮಾಡುತ್ತಿತ್ತು. ಈಗ ಹಿಂದಿ ಹೇರಿಕೆ ಕ್ರಮೇಣ ಎಲ್ಲಾ ಹಿಂದಿಯೇತರ ರಾಜ್ಯಗಳಿಗೆ ವ್ಯಾಪಿಸುತ್ತಿದೆ. ಹಿಂದಿ ಹೇರಿಕೆ ಬಗ್ಗೆ ಮೃದುಧೋರಣೆಯಿದ್ದ
ಕರ್ನಾಟಕದಲ್ಲಿ ಕ್ರಮೇಣ ತಮಿಳುನಾಡಿನ ಮಾದರಿಯ ಅನುಸರಣೆಯಾಗುವ ಸಾಧ್ಯತೆ ಕಾಣುತ್ತಿದೆ. ಮೆಟ್ರೋ ರೈಲಿನಲ್ಲಿ ಹಿಂದಿ ಹೇರಿಕೆ ವಿರುದ್ಧ ಆರಂಭವಾದ ‘ಹಿಂದಿ-ವಿರೋಧಿ ಅಭಿಯಾನ’ವು ಕ್ರಮೇಣ ಎಲ್ಲ ವಲಯಗಳಲ್ಲಿ ವ್ಯಾಪಿಸುತ್ತಿದೆ.

ದಶಕಗಳ ಹೋರಾಟದ ನಂತರವೂ ಬ್ಯಾಂಕುಗಳಲ್ಲಿ ಕನ್ನಡೇತರರನ್ನು ನೇಮಕ ಮಾಡಿ, ಕನ್ನಡ ಮತ್ತು ಕನ್ನಡಿಗರನ್ನು ಹತ್ತಿಕ್ಕುವ ಕಾರ್ಯ ಶಿಸ್ತುಬದ್ಧ ವಾಗಿ ನಡೆಯುತ್ತಿದೆ ಎಂಬ ಆರೋಪ ಕೇಳುತ್ತಿದೆ. ಇದರಲ್ಲಿ ಅರ್ಥವಿಲ್ಲದಿಲ್ಲ. ಚುನಾವಣಾಪೂರ್ವದಲ್ಲಿ ಪ್ರಧಾನಿಗಳು ಬೇರೆ ರಾಜ್ಯಗಳಲ್ಲಿ ಸಾವಿರಾರು ಕೋಟಿಯ ಯೋಜನೆಗಳನ್ನು ನೀಡುತ್ತಾರೆ; ಆದರೆ ಕರ್ನಾಟಕದಲ್ಲಿ ಅವರು ಹೊಸ ಯೋಜನೆಗಳನ್ನು ನೀಡಿದ ದಾಖಲೆಯಿಲ್ಲ ಎನ್ನುತ್ತಾರೆ ರಾಜಕೀಯ ವೀಕ್ಷಕರು. ಕಳೆದ ಮೇ ತಿಂಗಳಿನಲ್ಲಿ ನಡೆದ ಕರ್ನಾಟಕ ವಿಧಾನಸಭಾ ಚುನಾವಣಾಪೂರ್ವದಲ್ಲಿ ಕೇಂದ್ರವು ರಾಜ್ಯದಲ್ಲಿ ಎಷ್ಟು ಯೋಜನೆಗಳಿಗೆ ಶ್ರೀಕಾರ ಹಾಕಿದೆ? ಪಂಚರಾಜ್ಯಗಳ ಚುನಾವಣಾಪೂರ್ವದಲ್ಲಿ ಆ ರಾಜ್ಯಗಳಲ್ಲಿ ಕೇಂದ್ರ ದಿಂದ ಹೊಮ್ಮಿದ ಹೂಡಿಕೆಯ ವಾಗ್ದಾನದ ಮೊತ್ತವೆಷ್ಟು? ಎಂದು ಈ ವೀಕ್ಷಕರು ಕೇಳುತ್ತಾರೆ.

೭೦ರ ದಶಕದಲ್ಲಿ ಸುದೀರ್ಘ ಹೋರಾಟದ ನಂತರ, ಕೇಂದ್ರ ಸರಕಾರವು ತಮಿಳುನಾಡಿನ ಸೇಲಂ, ಆಂಧ್ರಪ್ರದೇಶದ ವಿಶಾಖ ಪಟ್ಟಣಂ ಮತ್ತು ಕರ್ನಾ ಟಕದ ಬಳ್ಳಾರಿಗೆ ಉಕ್ಕಿನ ಕಾರ್ಖಾನೆಯನ್ನು ಮಂಜೂರು ಮಾಡಿತ್ತು. ಸೇಲಂ ಮತ್ತು ವಿಶಾಖಪಟ್ಟಣ ದಲ್ಲಿ ತಲೆಯೆತ್ತಿದರೂ ಬಳ್ಳಾರಿಯಲ್ಲಿ ಈ ಕಾರ್ಖಾನೆ ಹೊಗೆ ಉಗುಳಲಿಲ್ಲ. ನಂತರ ಖಾಸಗಿ ವಲಯದ ಜಿಂದಾಲ್ ಇಲ್ಲಿ ಉಕ್ಕಿನ ಕಾರ್ಖಾನೆ ಸ್ಥಾಪಿಸಿದ್ದು ಈಗ ಇತಿಹಾಸ. ತಮಿಳುನಾಡಿನ ಐಐಟಿಯಲ್ಲಿ ತಮಿಳುನಾಡಿನವರಿಗೆ ಶೇ.೨೫ರಷ್ಟು ಮೀಸಲಾತಿ ಇದೆಯಂತೆ; ಧಾರವಾಡದ ಐಐಟಿಯಲ್ಲಿ ಕನ್ನಡಿಗರಿಗೆ ಮೀಸಲಾತಿ ಇದೆಯೇ? ಬೆಂಗಳೂರಿನ ರಾಷ್ಟ್ರೀಯ ಕಾನೂನು ಶಾಲೆಯಲ್ಲಿ ಕನ್ನಡಿಗರಿಗೆ ಮೀಸಲಾತಿ ಇದೆಯೇ? ದಶಕಗಳಿಂದ ಗೋಗರೆಯುತ್ತಿದ್ದರೂ ಕರ್ನಾಟಕದಲ್ಲಿ ‘ಏಮ್ಸ್’ ಆಸ್ಪತ್ರೆ ಯಾಗಲಿಲ್ಲ.

ಮಲ್ಲಿಕಾರ್ಜುನ ಖರ್ಗೆಯವರು ರೈಲು ಮಂತ್ರಿಯಾಗಿದ್ದಾಗ ಮಂಜೂರಾಗಿದ್ದ ಗುಲ್ಬರ್ಗಾ ರೈಲುವಿಭಾಗ ತಲೆಯೆತ್ತಲಿಲ್ಲ. ಕೊಂಕಣ ರೈಲನ್ನು ನೈಋತ್ಯ ವಲಯದಲ್ಲಿ ಸೇರಿಸಲಿಲ್ಲ. ಮಂಗಳೂರಿನಲ್ಲಿ ಪ್ರತ್ಯೇಕ ರೈಲುವಿಭಾಗ ಮಾಡಬೇಕೆನ್ನುವ ಬೇಡಿಕೆ ದೆಹಲಿ ದೊರೆಗಳಿಗೆ ಕೇಳಲಿಲ್ಲ. ಕರ್ನಾಟಕದ ಎಲ್ಲಾ ರೈಲುಮಾರ್ಗಗಳು ಕರ್ನಾಟಕ ಕೇಂದ್ರಿತ ನೈಋತ್ಯ ವಲಯಕ್ಕೆ ಸೇರಲಿಲ್ಲ. ಕರ್ನಾಟಕ ಮೂಲದ ವಿಜಯಾ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಮತ್ತು ಕಾರ್ಪೊರೇಷನ್ ಬ್ಯಾಂಕುಗಳನ್ನು ಉತ್ತರ ಭಾರತ ಮೂಲದ ಬ್ಯಾಂಕುಗಳಲ್ಲಿ ವಿಲೀನಗೊಳಿಸಿರುವುದು ಕನ್ನಡಿಗರ ಸ್ವಾಭಿಮಾನಕ್ಕೆ ಘಾಸಿ ಯುಂಟುಮಾಡಿದೆ. ಬರೆಯುತ್ತಾ ಹೋದರೆ ಈ ತಾರತಮ್ಯ, ನಿರ್ಲಕ್ಷ್ಯದ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ.

ಈ ತಾರತಮ್ಯದ ಪರಿಪಾಠವು ಇತ್ತೀಚಿನ ಬೆಳವಣಿಗೆ ಯಾಗಿರದೆ ಸುದೀರ್ಘ ಇತಿಹಾಸವನ್ನೇ ಹೊಂದಿದ್ದರೂ, ಪ್ರಧಾನಿ ಮತ್ತು ಬಿಜೆಪಿಯವರ ತಲೆಗೆ ಇದನ್ನು ಕಟ್ಟುವ ಯತ್ನ ನಡೆದಿದೆ. ವಾಸ್ತವವಾಗಿ ಈವರೆಗೆ ಕೇಂದ್ರದಲ್ಲಿ ಅಧಿಕಾರ ನಡೆಸಿದ ಪ್ರತಿಯೊಂದು ಸರಕಾರದ ಪಾಲೂ ಇದರಲ್ಲಿದೆ. ಈವರೆಗೆ ಮೋದಿ/ಬಿಜೆಪಿಯವರು ಕೇಂದ್ರದಲ್ಲಿ ೧೦ ವರ್ಷ ಆಡಳಿತ ಮಾಡಿದ್ದಾರೆ. ಅನ್ಯಾಯವಾದಾಗಲೆಲ್ಲಾ ಪ್ರತಿಭಟಿಸಿ ದ್ದಿದ್ದರೆ ಇಂಥ ತಾರತಮ್ಯ ಸ್ಥಿತಿಯಿ ರುತ್ತಿರಲಿಲ್ಲ ಎನ್ನುತ್ತಾರೆ ನಾಡಿನ ಪ್ರಜ್ಞಾವಂತರು. ಇಂಥ ಅನ್ಯಾಯವಾದಾಗ ಅದನ್ನು ರಾಜಕೀಯ ಕಣ್ಣಿನಲ್ಲಿ ನೋಡಿ ಬೇಳೆ ಬೇಯಿಸಿಕೊಂಡರೇ ವಿನಾ, ದೃಢವಾಗಿ ನಿಂತು ನ್ಯಾಯಕ್ಕಾಗಿ ದನಿಯೆತ್ತಲಿಲ್ಲ.

ಬ್ಯಾಂಕುಗಳಲ್ಲಿ ಭಾಷಾ ವಿಷಯದಲ್ಲಿ ಕನ್ನಡಿಗರಿಗೆ ಆಗಿರುವ ಅನನುಕೂಲತೆಗೆ/ನೋವಿಗೆ ನಮ್ಮ ಎಷ್ಟು ಜನಪ್ರತಿನಿಧಿಗಳು ಬಾಯಿ ತೆರೆದಿದ್ದಾರೆ?
ಕೇಂದ್ರ ಸರಕಾರವು ರಾಜ್ಯಗಳಿಗೆ ನೀಡುವ ತೆರಿಗೆ ಸಂಗ್ರಹದ ಪಾಲಿನ ವಿಚಾರದಲ್ಲಿ ಸಂಘರ್ಷವು ಹಿಮಾಲಯದೆತ್ತರಕ್ಕೆ ಏರಿದೆ. ತೆರಿಗೆ ಸಂಗ್ರಹಣೆ ವಿಷಯದಲ್ಲಿ ೨ನೇ ಅತಿದೊಡ್ಡ ಸ್ಥಾನದಲ್ಲಿರುವ ಕರ್ನಾಟಕವು, ಅದರ ಪಾಲನ್ನು ಕೇಂದ್ರದಿಂದ ಹಿಂಪಡೆಯುವ ನಿಟ್ಟಿನಲ್ಲಿ ೨೨ನೇ ಸ್ಥಾನದಲ್ಲಿರುವುದು ಒಂದು ವಿಪರ್ಯಾಸ ಎನ್ನಬಹುದು. ರಾಜ್ಯದಲ್ಲಿ ೧೪ ಬಜೆಟ್ ಮಂಡಿಸಿದ ಖ್ಯಾತಿಯಿರುವ ಸಿದ್ದರಾಮಯ್ಯನವರು ನಿಖರ ಅಂಕಿ- ಅಂಶಗಳೊಂದಿಗೆ ದೆಹಲಿಯಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಈ ಅಂಕಿ-ಅಂಶಗಳು ತಪ್ಪಾಗಿದ್ದರೆ ರಾಜೀನಾಮೆ ಕೊಡುವು ದಾಗಿಯೂ ಹೇಳಿದ್ದಾರಂತೆ. ರಾಜ್ಯದಿಂದ ೪.೩೦ ಲಕ್ಷ ಕೋಟಿ ರು. ತೆರಿಗೆ ಸಂಗ್ರಹವಾಗುತ್ತಿದ್ದು, ಅದರಲ್ಲಿ ಕೇವಲ ೫೦,೦೦೦ ಕೋಟಿ ತೆರಿಗೆ ಹಣ ರಾಜ್ಯಕ್ಕೆ ವಾಪಸ್ ಬರುತ್ತಿದೆ ಎಂದು ಅವರು ವ್ಯಾಕುಲತೆ ವ್ಯಕ್ತಪಡಿಸಿದ್ದಾರೆ.

ಉತ್ತರ ಪ್ರದೇಶವು ೨.೧೮ ಲಕ್ಷ ಪಡೆದಿದ್ದನ್ನು ಅವರು ಎತ್ತಿ ತೋರಿಸುತ್ತಾರೆ. ಇದರರ್ಥ, ರಾಜ್ಯ ನೀಡುವ ಪ್ರತಿ ೧ ರುಪಾಯಿಗೆ ಕೇವಲ ೧೩ ಪೈಸೆ ರಾಜ್ಯಕ್ಕೆ
ದೊರಕುತ್ತದೆ. ಬರ ಪರಿಹಾರಕ್ಕೆ ೧೮,೧೭೭ ಕೋಟಿಗೆ ಬೇಡಿಕೆ ಯಿಟ್ಟರೂ ಬಿಡಿಗಾಸು ಬಾರದಿರುವುದು, ತೆರಿಗೆ ಪಾಲು ಶೇ.೪.೭೨ರಿಂದ ೩.೬೪ಕ್ಕೆ ಇಳಿದಿರು ವುದು, ಸಹಭಾಗಿತ್ವ ಯೋಜನೆಯಲ್ಲಿ ಸುಮಾರು ೭,೦೦೦ ಕೋಟಿ ಕಡಿತವಾಗಿರು ವುದು, ೧೫ನೇ ಹಣಕಾಸು ಯೋಜನೆಯ ಶಿಫಾರಸಿನ ಪ್ರಕಾರ ೫,೪೯೫ ಕೋಟಿ ಬಾರದಿರುವುದನ್ನು ಅವರು ಪಟ್ಟಿ ಮಾಡುತ್ತಾರೆ.

ವಿಪರ್ಯಾಸವೆಂದರೆ, ಸಿದ್ದರಾಮಯ್ಯನವರು ಹೆಚ್ಚಿನ ತೆರಿಗೆ ಪಾಲಿಗಾಗಿ ಹೋರಾಡುವಾಗ, ಬಿಜೆಪಿಯು ಕೇಂದ್ರ ಸರಕಾರದ ಪರವಾಗಿ ನಿಂತಿರುವುದು. ಇದನ್ನೇ ಪಕ್ಷ ರಾಜಕಾರಣ ಎನ್ನುವುದು. ಬಹುಶಃ ಕನ್ನಡಿಗರು ಇದನ್ನು ಗಂಭೀರವಾಗಿ ಪರಿಗಣಿಸಬಹುದು. ಕೊಡಲು ಮನಸ್ಸಿಲ್ಲದ ಕೇಂದ್ರ ಸರಕಾರಕ್ಕೆ ಈಗ ಉಚಿತ ಸಮರ್ಥನೆ ಸಿಕ್ಕಂತಾಗಿದೆ. ‘ದೆಹಲಿಯಲ್ಲಿ ರಾಜ್ಯದ ಮಾನ ಹರಾಜು ಹಾಕಿದರು’ ಎಂಬ ಬಿಜೆಪಿ ಧುರೀಣರೊಬ್ಬರ ಹೇಳಿಕೆ ಪ್ರಜ್ಞಾವಂತರಿಗೆ ಹಿಡಿಸಲಿಲ್ಲ. ರಾಜ್ಯದ ಹಿತಾಸಕ್ತಿ ಕಾಯುವ ವಿಷಯ ಬಂದಾಗ, ತಮಿಳುನಾಡಿನ ರಾಜಕಾರಣಿಗಳು ಪಕ್ಷಭೇದವಿಲ್ಲದೆ ಯತ್ನಿಸುತ್ತಾರೆ.

ಕರ್ನಾಟಕದ ಇಂದಿನ ಸಮಸ್ಯೆಗೆ ಕಾರಣ ‘ಬಿಟ್ಟಿ ಗ್ಯಾರಂಟಿಗಳು’ ಎಂದು ಜರಿಯುವವರು, ಇತ್ತೀಚೆಗೆ ಗ್ಯಾರಂಟಿಗಳ ಮೂಲಕವೇ ಅಧಿಕಾರ ಹಿಡಿದ ಪಂಚ ರಾಜ್ಯಗಳ ಸರಕಾರಗಳ ಆರ್ಥಿಕ ಪರಿಸ್ಥಿತಿಯನ್ನು ಮುಂದಿನ ದಿನಗಳಲ್ಲಿ ಅವಲೋಕಿಸಬೇಕು. ಆಗ ಅವರು ತಮ್ಮ ಲೇವಡಿ ಮತ್ತು ಟೀಕೆಯನ್ನು ಹಿಂಪಡೆ ಯುವ ಸಾಧ್ಯತೆಯನ್ನು ಅಲ್ಲಗಳೆಯಲಾಗದು. ಕರ್ನಾಟಕದ ನಂತರ ಕೇರಳ ಸರಕಾರವು ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ರಾಜ್ಯಗಳು ಈ ಪಟ್ಟಿಗೆ ಸೇರಿದರೆ ಅಚ್ಚರಿಯಿಲ್ಲ. ದೇಶದ ಸಮಗ್ರತೆ ಮತ್ತು ಏಕತೆಯ ಪರಿಗಣನೆಯಲ್ಲಿ ಇದು ಸೂಕ್ಷ್ಮ ಹಾಗೂ ಆತಂಕಕಾರಿ ವಿಷಯ. ಯಾವುದೇ ಸಮಸ್ಯೆಯು ಹೆಮ್ಮರವಾಗುವುದಕ್ಕೆ ಬಿಡದೆ, ಮೊಳಕೆಯಲ್ಲೇ ಅದನ್ನು ಚಿವುಟಬೇಕು. ಕೆಲವರ ಮಹತ್ವಾಕಾಂಕ್ಷೆಗೆ ದೂರಗಾಮಿ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ.

(ಲೇಖಕರು ಅರ್ಥಿಕ ಮತ್ತು ರಾಜಕೀಯ ವಿಶ್ಲೇಷಕರು)

Leave a Reply

Your email address will not be published. Required fields are marked *

error: Content is protected !!