Friday, 19th April 2024

ಯಾವ ಪ್ರಜಾಪ್ರಭುತ್ವಕ್ಕೂ ಸೇನಾಪಡೆಯ ಸರ್ಟಿಫಿಕೇಟ್ ಅಗತ್ಯವಿಲ್ಲ

ಅಕ್ಬರಾಯಣ

ಎಂ.ಜೆ.ಅಕ್ಬರ್‌

ಪಾಕಿಸ್ತಾನವೆಂಬ ಐಡಿಯಾ ಹುಟ್ಟಿಕೊಂಡಿದ್ದೇ ಖೊಟ್ಟಿ ಸಿದ್ಧಾಂತದ ಮೇಲೆ. ಪಾಕಿಸ್ತಾನವು ಬೇರೆಯವರ ಜತೆ ಬದುಕಲು ಸಾಧ್ಯವಿಲ್ಲ ಎಂದು ಇತಿಹಾಸ ಅಥವಾ ಸಂಸ್ಕೃತಿಯ ಯಾವುದೇ ಆಧಾರವಿಲ್ಲದೆ ಕೆಲವೇ ಶ್ರೀಮಂತ ನಾಯಕರು ನಿರ್ಧರಿಸಿದರು. ಆದರೆ, ತಾವು ತಮ್ಮೊಂದಿ ಗಾದರೂ ಬದುಕಲು ಸಾಧ್ಯವೆ ಎಂಬ ಪ್ರಶ್ನೆಯನ್ನು ಕೇಳಿಕೊಳ್ಳುವುದಕ್ಕೆ ಅವರು ಮರೆತುಬಿಟ್ಟರು. ಹಾಗೆ ಕೇಳಿಕೊಳ್ಳುವುದಕ್ಕೆ ಅವರಿಗೆ ಸಾಧ್ಯವೂ ಇರಲಿಲ್ಲ ಬಿಡಿ.

ಅಧಿಕಾರದ ಸಮತೋಲನ ಯಾವಾಗಲೂ ದುರ್ಬಲ ಅಕ್ಷರೇಖೆಯ ಮೇಲೆ ನಿಂತಿರುತ್ತದೆ. ಪಾಕಿಸ್ತಾನದಲ್ಲಿ ನಡೆಯುತ್ತಿರುವ ಈಗಿನ ಅಧಿಕಾರದಾಟದಲ್ಲಿ ನವಾಜ್ ಷರೀಫ್, ಆಸಿಫ್ ಅಲಿ ಜರ್ದಾರಿ ಮತ್ತು ಇಮ್ರಾನ್ ಖಾನ್ ಸಮತೂಕವಿಲ್ಲದ ತ್ರಿಕೋನದಂತಿದ್ದಾರೆ. ತ್ರಿಕೋನ ಪ್ರೀತಿ ತುಂಬಾ ಅಪಾಯಕಾರಿ ಯಾಗಿದ್ದರೆ, ಅಧಿಕಾರದ ತ್ರಿಕೋನ ಅಕ್ಷರಶಃ ವಿಷವಿದ್ದಂತೆ. ಪಾಕಿಸ್ತಾನದ ರಾಜಕೀಯವೆಂಬ ಅಂಕೆಯಿಲ್ಲದ ಕ್ಯಾಸಿನೋ ಜೂಜಿನಲ್ಲಿ ಈ ಮೂವರೂ ಅತಿಹೆಚ್ಚು ಬೆಟ್ಟಿಂಗ್ ಮಾಡುವ ಚಾಣಾಕ್ಷ ಜೂಜುಗಾರರು.

ಈ ಬೆಟ್ಟಿಂಗ್ ದಂಧೆ ನಡೆಸುವ ಮಾಲೀಕ ಬೇರೆ ಯಾರೂ ಅಲ್ಲ, ಪಾಕಿಸ್ತಾನದ ಸೇನೆ ಎಂಬುದು ಮೂವರಿಗೂ ಗೊತ್ತಿದೆ. ಅಷ್ಟೇಕೆ, ಈ ಮೂವರೂ ಒಂದಲ್ಲ ಒಂದು ಸಮಯದಲ್ಲಿ ಸೇನಾ ಜನರಲ್‌ಗಳ ಸ್ನೇಹಿತರಾಗಿದ್ದರು ಅಥವಾ ಸಂತ್ರಸ್ತರಾಗಿದ್ದರು. ಇಮ್ರಾನ್ ಖಾನ್ ಈಗ ನೈತಿಕತೆಯ ಬಗ್ಗೆ ಎಷ್ಟೇ ಮಾತನಾಡಬಹುದು. ಆದರೆ ಕೊಂಚ ಆತ್ಮಾವಲೋಕನ ಮಾಡಿಕೊಂಡರೆ ಹಿಂದೆ ಸೇನಾಪಡೆಯ ನೆರವು ಪಡೆದೇ ತಾವು ಕೂಡ ಪ್ರಧಾನಿ ಹುದ್ದೆಗೆ ಏರಿದ್ದು ಎಂಬುದು ಅವರಿಗೇ ನೆನಪಾಗುತ್ತದೆ. ಆಟ ನಡೆಯುವುದೇ ಹೀಗೆ. ಆದರೆ ಇಲ್ಲಿನ ರೆಫ್ರಿ ಕೈಯಲ್ಲಿ ಸ್ಟಾರ್ಟಿಂಗ್ ಪಿಸ್ತೂಲ್ ಬದಲು ನಿಜವಾದ ಗನ್ ಇರುತ್ತದೆ!

ಈ ಮೂವರೂ ಈಗ ಹೆಚ್ಚೂಕಮ್ಮಿ ೭೦ ವರ್ಷದ ಆಸುಪಾಸಿನಲ್ಲಿದ್ದಾರೆ. ಹೀಗಾಗಿ ದಾಳ ಉರುಳಿಸಲು ತಮಗಿದು ಕೊನೆಯ ಅವಕಾಶವೆಂಬುದು ಅವರಿಗೆ ಗೊತ್ತಿದೆ. ಇನ್ನುಮುಂದೆ ಬರುವ ಪ್ರವಾಹದಲ್ಲಿ ಹೊಸ ತಲೆಮಾರಿನ ರಾಜಕಾರಣಿಗಳು ಮುಳುಗಬಹುದು ಅಥವಾ ಈಜಬಹುದು. ಸದ್ಯಕ್ಕೆ ಆಸಿಫ್ ಅಲಿ ಜರ್ದಾರಿ ಚೆನ್ನಾಗಿ ಚೌಕಾಸಿ ಮಾಡಿ ಸರಿಯಾದ ಜಾಗವನ್ನೇ ಗಿಟ್ಟಿಸಿಕೊಳ್ಳುತ್ತಿದ್ದಾರೆ. ಅಧ್ಯಕ್ಷ ಹುದ್ದೆಯೆಂಬುದು ಯಾವುದೇ ಜವಾಬ್ದಾರಿಯಿಲ್ಲದೆ ಸಾಕಷ್ಟು ಅದಿಕಾರ ಪಡೆದುಕೊಳ್ಳುವುದಕ್ಕಿರುವ ಉತ್ತಮ ಅಸ್ತ್ರ.

ಅಧ್ಯಕ್ಷ ಹುದ್ದೆಯಲ್ಲಿ ಕುಳಿತುಕೊಂಡರೆ ಅವರು ಶೆಹಬಾಜ್ ಷರೀಫ್ ಅವರ ತಲೆಯ ಮೇಲೊಂದು ಕತ್ತಿ ಹಿಡಿದುಕೊಂಡೇ ತನ್ನ ಕುಟುಂಬದ ರಾಜಕೀಯ ಇತ್ಯಾದಿ ಹಿತಾಸಕ್ತಿಗಳನ್ನೂ ಕಾಪಾಡಿಕೊಳ್ಳಬಹುದು. ಭಾವುಕತೆಗೆ ಜರ್ದಾರಿಯ ವ್ಯಕ್ತಿತ್ವದಲ್ಲಿ ಜಾಗವಿಲ್ಲ. ಅವರಿಗೆ ಯಾವಾಗ ಖಡ್ಗ ಝಳಪಿಸ ಬೇಕೆಂಬುದು ಗೊತ್ತಿದೆ. ಇದಕ್ಕೆ ಸರಿಯಾಗಿ ಬಿಲಾವಲ್ ಭುಟ್ಟೋ ಕೂಡ ನೆರೇಟಿವ್ ಸೆಟ್ ಮಾಡಲು ಹೊರಟಿದ್ದಾರೆ. ಪಾಕಿಸ್ತಾನದಲ್ಲಿ ಉರಿಯುತ್ತಿರುವ ಬೆಂಕಿಯನ್ನು ಆರಿಸುವ ಶಕ್ತಿ ಯಾರಿಗಾದರೂ ಇದ್ದರೆ ಅದು ನನ್ನ ತಂದೆ ಜರ್ದಾರಿಗೆ ಮಾತ್ರ ಎಂದು ಅವರು ಹೇಳಿದ್ದಾರೆ. ಹಾಗಾಗಿ ಈಗ
ಏರ್ಪಟ್ಟಿರುವ ಷರೀಫ್-ಭುಟ್ಟೋ ಮೈತ್ರಿಯ ಸೂತ್ರ ಇಷ್ಟೆ: ಹೆಡ್ ಬಿದ್ದರೆ ನಾನು ಗೆದ್ದೆ, ಟೇಲ್ ಬಿದ್ದರೆ ನೀನು ಸೋತೆ.

ಪಾಕಿಸ್ತಾನವನ್ನು ಆಳಿದ ನಾಯಕರಲ್ಲಿ ಆರ್ಥಿಕ ಸುಧಾರಣೆಗೆ ಯೋಜನೆಗಳನ್ನು ಜಾರಿಗೊಳಿಸಿದವರಲ್ಲಿ ಬಿಲಾವಲ್‌ನ ಅಜ್ಜ ಜುಲಿಕರ್ ಅಲಿ ಭುಟ್ಟೋ ಅವರೇ ಕೊನೆಯ ವ್ಯಕ್ತಿ. ದೇಶದ ರೋಟಿ, ಕಪಡಾ ಔರ್ ಮಕಾನ್ (ಆಹಾರ, ಬಟ್ಟೆ ಮತ್ತು ಮನೆ) ಸಮಸ್ಯೆಗೆ ಸೀನಿಯರ್ ಭುಟ್ಟೋ ಇದ್ದಿದ್ದರೆ ಇಷ್ಟು ಹೊತ್ತಿಗೆ ಸಂಪೂರ್ಣ ಪರಿಹಾರ ನೀಡುತ್ತಿದ್ದರು ಅಂತೇನೂ ಅಲ್ಲ. ಆದರೆ ಕೊನೆಯ ಪಕ್ಷ ಅವರು ಜನಮೆಚ್ಚುವ ಘೋಷಣೆಯನ್ನಾದರೂ ಮೊಳಗಿಸಿ, ಈ ಸಮಸ್ಯೆಯ ಬಗ್ಗೆ ಜಾಗೃತಿ ಮೂಡಿಸಿದ್ದರು. ಪಾಕಿಸ್ತಾನವೆಂಬ ದೇಶ ಹುಟ್ಟಿದಾಗಿನಿಂದ ಶ್ರೀಮಂತ ರಾಜಕಾರಣಿಗಳ ಅಟಾಟೋಪವನ್ನು ಬಿಟ್ಟು ಮತ್ತೇನೂ ನೋಡಿರದ ಪ್ರಜೆಗಳಿಗೆ ಜುಲಿಕರ್ ಭುಟ್ಟೋ ಅವರ ಮಾತುಗಳಿಂದ ಅದೇನೋ ಸಮಾಧಾನ ಸಿಗುತ್ತಿತ್ತು.

೧೯೪೭ರಿಂದಲೂ ಪಾಕಿಸ್ತಾನವನ್ನು ವಕೀಲರು, ಭೂಮಾಲೀಕರು ಹಾಗೂ ಉದ್ಯಮಿಗಳ ಮೈತ್ರಿಕೂಟವೇ ಆಳುತ್ತಿದೆ. ಈ ಮೈತ್ರಿಕೂಟವು ಜನರಿಗೆ
ಭಾವನಾತ್ಮಕ, ಧಾರ್ಮಿಕ ಹಾಗೂ ಜನಪ್ರಿಯ ನಂಬಿಕೆಗಳನ್ನೇ ಉಣಬಡಿಸಿ ಬೊಜ್ಜು ಬರುವಂತೆ ನೋಡಿಕೊಂಡಿದೆ. ಏಳು ದಶಕಕ್ಕೂ ಹೆಚ್ಚು ಕಾಲ ಈ ಖೂಳ ಮೈತ್ರಿಕೂಟವು ಪಾಕಿಸ್ತಾನದ ಸಂಪತ್ತನ್ನು ವಿದೇಶಗಳ ಸುರಕ್ಷಿತ ಸ್ವರ್ಗಕ್ಕೆ ಸಾಗಿಸಿದೆ. ಪಾಕಿಸ್ತಾನದಲ್ಲಿ ಒಂದು ಹಂತಕ್ಕಿಂತ ಮೇಲಿನ ಸಂಬಳ ಅಥವಾ ಆದಾಯ ಹೊಂದಿರುವ ಎಲ್ಲಾ ವ್ಯಕ್ತಿಗಳ ಬಳಿಯೂ ವಿದೇಶಿ ಬ್ಯಾಂಕ್ ಖಾತೆಯಿದೆ. ಕಾಯ್ದೆ ಕಾನೂನುಗಳು ಲೆಕ್ಕಕ್ಕಿಲ್ಲ.

ವಿದೇಶಗಳಲ್ಲಿ ಬ್ಯಾಂಕ್ ಖಾತೆ ಹೊಂದಿರುವವರನ್ನು ಪೊಲೀಸರು ಕೂಡ ಶಿಕ್ಷಿಸಲು ಸಾಧ್ಯವಿಲ್ಲ. ಏಕೆಂದರೆ ಅವರ ಸೀನಿಯರ್‌ಗಳು ಕೂಡ ವಿದೇಶಿ ಬ್ಯಾಂಕ್ ಖಾತೆ ಹೊಂದಿದ್ದಾರೆ. ಸಾಮಾನ್ಯವಾಗಿ ಹಿರಿಯ ಪೊಲೀಸ್ ಅಽಕಾರಿಗಳೆಲ್ಲ ಬೇನಾಮಿ ಖಾತೆ ಹೊಂದಿರುತ್ತಾರೆ. ಸದಾಕಾಲ ದೇಶವನ್ನು ಕಾಡುವ
ರಾಜಕೀಯ ಮೇಲಾಟ ಮತ್ತು ಆರ್ಥಿಕ ಸಮಸ್ಯೆಗಳಿಂದಾಗಿ ಜನರ ಮಾನಸಿಕ ಸ್ಥಿತಿ ಜಡ್ಡುಗಟ್ಟಿಹೋಗಿದೆ. ಅವರು ದೇಶದ ಆಡಳಿತ ವ್ಯವಸ್ಥೆಯ ಬಗ್ಗೆ ಭ್ರಮನಿರಸನಗೊಂಡಿದ್ದಾರೆ. ಅವರಿಗೆ ತಮ್ಮ ದೇಶದ ಬಗ್ಗೆ ಬಹಳ ಪ್ರೀತಿಯಿದೆ. ತಮ್ಮನ್ನು ಆಳಿದ ನಾಯಕರು ನಿರಂತರವಾಗಿ ಎಲ್ಲರಿಗೂ ಮೋಸ
ಮಾಡಿದ್ದಾರೆಂಬುದು ಗೊತ್ತಿದ್ದರು ಕೂಡ ಅವರು ದೇಶದ ಬಗ್ಗೆ ತಮಗಿರುವ ಪ್ರೀತಿಯನ್ನು ಬಿಟ್ಟುಕೊಡುವುದಿಲ್ಲ. ಆದರೆ ದೇಶಭಕ್ತಿಯಿಂದ ಅನ್ನ
ಸಿಗುವುದಿಲ್ಲ.

ಪಾಕಿಸ್ತಾನವನ್ನು ಆಳುವ ರಾಜಕಾರಣಿಗಳು ಹಾಗೂ ಸೇನಾಪಡೆಯ ಜನರಲ್‌ಗಳು ದೇಶವನ್ನು ಕಾಡುವ ಸಮಸ್ಯೆಗಳಿಗೆ ಪರಿಹಾರ ಹುಡುಕುವು
ದಕ್ಕಾಗಿ ಅಧಿಕಾರಕ್ಕೇರುವುದಿಲ್ಲ. ಬದಲಿಗೆ ತಮ್ಮ ಖಾಸಗಿ ಹಾಗೂ ಸಾಂಸ್ಥಿಕ ಹಿತಾಸಕ್ತಿಗಳನ್ನು ಕಾಪಾಡಿಕೊಳ್ಳುವುದಕ್ಕಾಗಿ ಅಧಿಕಾರ ಹಿಡಿಯುತ್ತಾರೆ. ಬೇರೆ ಬೇರೆ ಸಮಸ್ಯೆಗಳಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಹಾಗೂ ಸಾಧ್ಯವಾದರೆ ಶತ್ರುಗಳನ್ನು ಮುಗಿಸುವುದಕ್ಕಾಗಿ ಅಧಿಕಾರಕ್ಕೆ ಬರುತ್ತಾರೆ. ದೇಶದ
ಆರ್ಥಿಕತೆಯನ್ನು ಪುನರುಜ್ಜೀವನಗೊಳಿಸಲು ಇವರಾರ ಬಳಿಯಲ್ಲೂ ಒಂದು ಯೋಜನೆಯಿಲ್ಲ. ಪಾಕಿಸ್ತಾನವೇನಾದರೂ ಬೆಳೆದರೆ ಅದರಲ್ಲಿ ಅಲ್ಲಿನ ನಾಯಕರ ಪಾತ್ರವೇನೂ ಇರುವುದಿಲ್ಲ. ಎಲ್ಲಾ ದೇಶಗಳೂ ಒಳ್ಳೆಯ ಭವಿಷ್ಯವನ್ನು ಹುಡುಕಿದರೆ ಪಾಕಿಸ್ತಾನ ಮಾತ್ರ ದೇಶ ವಿಭಜನೆ ಸಮಯದ ರೊಮ್ಯಾಂಟಿಕ್ ಭ್ರಮೆಗಳನ್ನೇ ಈಗಲೂ ಮೆಲುಕು ಹಾಕುತ್ತಿರುತ್ತದೆ.

ಪಾಕಿಸ್ತಾನವನ್ನು ಕಾಡುತ್ತಿರುವ ಅಸ್ತಿತ್ವದ ಸಮಸ್ಯೆಗೆ ಕಾರಣ ಅದರ ಮೂಲಭೂತ ಸಿದ್ಧಾಂತವೇ ದುರ್ಬಲವಾಗಿರುವುದು. ರಾಷ್ಟ್ರೀಯವಾದಕ್ಕೆ ಧರ್ಮವೊಂದೇ ಸಾಕು ಎಂಬ ಸಡಿಲವಾದ ಮರಳಿನ ದಿಬ್ಬದಂಥ ಐಡಿಯಾದ ಮೇಲೆ ಪಾಕಿಸ್ತಾನ ನಿರ್ಮಾಣಗೊಂಡಿದೆ. ಇದರ ಬಗ್ಗೆ ಯಾರೂ ಗಂಭೀರ ವಾಗಿ ಯೋಚಿಸಿರಲೇ ಇಲ್ಲ. ಏಕೆಂದರೆ ೧೯೪೭ರಲ್ಲಿ ಪಾಕಿಸ್ತಾನವೆಂಬ ಪ್ರತ್ಯೇಕ ದೇಶ ರಚನೆಯಾಗುವುದಕ್ಕೆ ಭಾವನಾತ್ಮಕತೆಯೇ ಸಾಕಾಗಿತ್ತು. ಆದರೆ ಭಾವನಾತ್ಮಕತೆಯೆಂಬುದು ಬೌದ್ಧಿಕತೆಗೆ ವಿರುದ್ಧ. ಕೊಂಚ ಬುದ್ಧಿವಂತಿಕೆ ಬಳಸಿ ಯೋಚನೆ ಮಾಡಿದ್ದರೆ ಮುಸ್ಲಿಂ ಲೀಗ್‌ನ ಚಿಂತಕರಿಗೆ ಕುರಾನ್‌ ನಲ್ಲೇ ಪರಿಹಾರ ಸಿಗುತ್ತಿತ್ತು. ಕುರಾನ್‌ನಲ್ಲಿ ಇಸ್ಲಾಂ ಅನ್ನು ಬ್ರದರ್‌ಹುಡ್ ಎಂದು ಹೇಳಲಾಗಿದೆಯೇ ಹೊರತು ನೇಷನ್‌ಹುಡ್ ಎಂದು ಹೇಳಿಲ್ಲ.

ಅಂದರೆ ಇಸ್ಲಾಂ ಎಂಬುದು ಭ್ರಾತೃತ್ವವೇ ಹೊರತು ರಾಷ್ಟ್ರತ್ವವಲ್ಲ. ರಾಷ್ಟ್ರೀಯವಾದಕ್ಕೆ ಇಸ್ಲಾಂ ಎಂಬ ಧರ್ಮವೇ ಸಾಕಾಗಿದ್ದರೆ ಏಕೆ ೨೦ ಅರಬ್ ದೇಶಗಳಿವೆ? ಆ ಎಲ್ಲಾ ದೇಶಗಳ ಧರ್ಮ ಇಸ್ಲಾಂ. ಅಷ್ಟೇ ಅಲ್ಲ, ದೇಶವನ್ನು ಒಗ್ಗೂಡಿಸಲು ಬೇಕಾದ ಭಾಷೆ ಕೂಡ ಈ ದೇಶಗಳಿಗೆ ಕಾಮನ್ ಇದೆ.
ಹೀಗಾಗಿ ಪಾಕಿಸ್ತಾನವೆಂಬ ಐಡಿಯಾ ಹುಟ್ಟಿಕೊಂಡಿದ್ದೇ ಖೊಟ್ಟಿ ಸಿದ್ಧಾಂತದ ಮೇಲೆ. ಪಾಕಿಸ್ತಾನವು ಬೇರೆಯವರ ಜತೆ ಬದುಕಲು ಸಾಧ್ಯವಿಲ್ಲ ಎಂದು
ಇತಿಹಾಸ ಅಥವಾ ಸಂಸ್ಕೃತಿಯ ಯಾವುದೇ ಆಧಾರವಿಲ್ಲದೆ ಕೆಲವೇ ಶ್ರೀಮಂತ ನಾಯಕರು ನಿರ್ಧರಿಸಿ ದರು. ಆದರೆ, ತಾವು ತಮ್ಮೊಂದಿಗಾದರೂ ಬದುಕಲು ಸಾಧ್ಯವೆ ಎಂಬ ಪ್ರಶ್ನೆಯನ್ನು ಕೇಳಿಕೊಳ್ಳುವುದಕ್ಕೆ ಅವರು ಮರೆತುಬಿಟ್ಟರು. ಹಾಗೆ ಕೇಳಿಕೊಳ್ಳುವುದಕ್ಕೆ ಅವರಿಗೆ ಸಾಧ್ಯವೂ ಇರಲಿಲ್ಲ ಬಿಡಿ.

ಪಾಕಿಸ್ತಾನದ ಆಡಳಿತಗಾರರು ತಮ್ಮ ದೇಶದ ಹುಟ್ಟಿಗೆ ಕಾರಣವಾದ ಸಿದ್ಧಾಂತ ಎಷ್ಟು ದುರ್ಬಲವಾಗಿದೆ ಎಂಬುದನ್ನು ಬಹಳ ಬೇಗ ಮನಗಂಡರು. ೧೯೫೪ರ ನವೆಂಬರ್‌ನಲ್ಲಿ ಗವರ್ನರ್ ಜನರಲ್ ಇಸ್ಕಂ ದರ್ ಮಿರ್ಜಾ (ಆಗಿನ್ನೂ ಪಾಕಿಸ್ತಾನವು ಸಂವಿಧಾನವಿಲ್ಲದ ಪ್ರಭುತ್ವವಷ್ಟೇ ಆಗಿತ್ತು) ಅವರು ಪಶ್ಚಿಮ ಪಾಕಿಸ್ತಾನದ ಎಲ್ಲಾ ಪ್ರಾಂತಗಳನ್ನೂ ಒಂದು ಘಟಕದಲ್ಲಿ ವಿಲೀನಗೊಳಿಸುವುದಾಗಿ ಘೋಷಿಸಿದರು. ಪಶ್ಚಿಮದಲ್ಲಿ ಚಿಗಿತುಕೊಳ್ಳುತ್ತಿದ್ದ ಪ್ರಾದೇಶಿಕ ಸ್ವಾತಂತ್ರ್ಯದ ಕನಸನ್ನು ಹತ್ತಿಕ್ಕುವುದಕ್ಕಾಗಿ ಹಾಗೂ ಪೂರ್ವ ಬಂಗಾಳದಲ್ಲಿ ಉರ್ದುವನ್ನು ರಾಷ್ಟ್ರೀಯ ಭಾಷೆಯಾಗಿ ಸ್ವೀಕರಿಸಲು ನಿರಾಕರಿಸುತ್ತಿದ್ದ ಬಂಗಾಳಿಗಳಿಗೆ ತಿರುಗೇಟು ನೀಡುವುದಕ್ಕಾಗಿ ಹೀಗೆ ಮಾಡಿದ್ದರು.

೧೯೫೫ರ ಅಕ್ಟೋಬರ್‌ನಲ್ಲಿ ಪೂರ್ವ ಬಂಗಾಳವನ್ನು ಪೂರ್ವ ಪಾಕಿಸ್ತಾನವೆಂದು ನಾಮಕರಣ ಮಾಡಲಾಯಿತು. ಈ ಅವಿವೇಕದ ನಿರ್ಧಾರ ಇಡೀ ದೇಶವನ್ನೇ ನಾಶಪಡಿಸಿತು. ೧೯೭೦ರಲ್ಲಿ ಸಿಂಧಿಗಳು, ಪಂಜಾಬಿಗಳು, ಪಠಾಣರು ಮತ್ತು ಬಲೂಚ್‌ಗಳು ತಮ್ಮದೇ ಆದ ಪ್ರಾಂತ್ಯವನ್ನು ಬಯಸಿದ್ದರಿಂದ ಈ ಒಂದು ಘಟಕವನ್ನು ಬಲಿಕೊಡಲಾಯಿತು. ಅಷ್ಟು ಹೊತ್ತಿಗೆ ಪೂರ್ವ ಕೈತಪ್ಪಿಹೋಗಿತ್ತು. ಪೂರ್ವ ಪಾಕಿಸ್ತಾನದ ಬಂಗಾಳಿಗಳು ಪಾಕಿಸ್ತಾನದ ಜನನ ಸಿದ್ಧಾಂತವು ಅಧರ್ಮದಿಂದ ಕೂಡಿದೆ ಎಂದು ತಿರಸ್ಕರಿಸಿದರು. ಅದರಿಂದ ಕಂಗಾಲಾದ ಪಶ್ಚಿಮ ಪಾಕಿಸ್ತಾನದ ಆಡಳಿತಗಾರರು ಸಮಸ್ಯೆ ಬಗೆಹರಿಸುವು ದನ್ನು ಬಿಟ್ಟು, ಬಂಗಾಳಿಗಳು ಪೂರ್ಣಪ್ರಮಾಣದ ಮುಸ್ಲಿಮರೇ ಆಗಿರಲಿಲ್ಲ ಎಂಬ ಸುಳ್ಳಿನ ಮೊರೆಹೋಗಿ ಅದರ ಹಿಂದೆ ಅಡಗಿಕೊಂಡರು. ೧೯೭೧ರಲ್ಲಿ
ಪಾಕಿಸ್ತಾನದಿಂದ ವಿಮೋಚನೆಗೊಂಡು ಉದಯಿಸಿದ ಬಾಂಗ್ಲಾದೇಶವು ಯಾವುದೇ ದೇಶವು ತನ್ನ ನಂಬಿಕೆಯ ಜತೆಗೆ ರಾಜಿ ಮಾಡಿಕೊಳ್ಳದೆಯೂ
ಯಶಸ್ವಿ ದೇಶವಾಗಿ ಹೊರಹೊಮ್ಮಬಹುದು ಎಂಬುದನ್ನು ಸಾಬೀತುಪಡಿಸುತ್ತಾ ಬಂದಿದೆ.

ಬಂಗಾಳಿಗಳಿಗೆ ಪಂಜಾಬಿನಿಂದ ಬಂದು ಇಸ್ಲಾಂ ಬಗ್ಗೆ ಪ್ರವಚನ ನೀಡುವವರ ಅಗತ್ಯವಿಲ್ಲ. ಸಿಂಧ್ ಪ್ರಾಂತೀಯರ ವಿರೋಧ ಭುಟ್ಟೋ ಅವರ
ಸಾವಿನೊಂದಿಗೆ ತೀವ್ರಗೊಳ್ಳತೊಡಗಿತು. ಆತಂಕಗೊಂಡ ಜನರಲ್ ಜಿಯಾ ಉಲ್ ಹಕ್ ೧೯೮೦ರ ದಶಕದಲ್ಲಿ ಸಿಂಧಿಗಳ ಪ್ರಾಬಲ್ಯವನ್ನು ಹತ್ತಿಕ್ಕಿದರು. ಅದರಿಂದ ಸಿಂಽಗಳು ಸಿಟ್ಟಾದರು. ಅದು ತಣಿದಿದ್ದೇ ಜಿಯಾ ಉಲ್ ಹಕ್ ನಿಗೂಢವಾಗಿ ವಿಮಾನ ಅಪಘಾತದಲ್ಲಿ ಮರಣ ಹೊಂದಿ, ನಂತರ ನಡೆದ
ಚುನಾವಣೆಯಲ್ಲಿ ಬೆನಜೀರ್ ಭುಟ್ಟೋ ಗೆದ್ದ ಮೇಲೆ. ೧೯೪೭ರ ಪಾಕಿಸ್ತಾನ ತನ್ನ ಮೊದಲ ೩೦ ವರ್ಷಗಳಲ್ಲಿ ಸ್ವಯಂ ವಿನಾಶದತ್ತ ಸಾಗಿತು. ೧೯೭೧ರ ಪಾಕಿಸ್ತಾನವು ನಂತರದ ೫೦ ವರ್ಷಗಳಲ್ಲಿ ದಾರಿ ತಪ್ಪಿತು. ಕೇಂದ್ರಾಭಿಮುಖ ಹಾಗೂ ಕೇಂದ್ರಾಪಗಾಮಿ ಒತ್ತಡಗಳಲ್ಲಿ ಅಸ್ಥಿರತೆ ಹುಟ್ಟಿಕೊಳ್ಳುವುದು ಸರ್ವೇಸಾಮಾನ್ಯ.

ಹೀಗಾಗಿ ಇಂದಿನ ಪಾಕಿಸ್ತಾನವನ್ನು ಮುನ್ನಡೆಸಲು ಪ್ರಜಾಪ್ರಭುತ್ವ ಅಸಮರ್ಥವಾಗಿದೆ. ಪರಿಣಾಮವಾಗಿ ಪ್ರಜಾಪ್ರಭುತ್ವ ವಿರೋಧಿ ಸೇನೆಯೇ ಅಧಿಕಾರ
ನಡೆಸಲು ಸಮರ್ಥ ವ್ಯವಸ್ಥೆ ಎಂಬ ನಂಬಿಕೆ ಬಲವಾಗತೊಡಗಿದೆ. ಹಾಗಿದ್ದರೆ ಪಾಕಿಸ್ತಾನಕ್ಕೆ ಪ್ರಜಾಪ್ರಭುತ್ವಕ್ಕಿಂತ ಹುಸಿ ಪ್ರಜಾಪ್ರಭುತ್ವವೇ ಒಳ್ಳೆಯದೇ? ಆ ದೇಶದ ರಾಜಕೀಯ ವ್ಯವಸ್ಥೆಯಲ್ಲಿ ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾಗಿಲ್ಲದ ಸೇನಾಪಡೆಗೆ ಒಳಗೊಳಗೇ ಬಲವಾದ ಅಸ್ತಿತ್ವವಿದೆ. ೨೦೨೪ರ ಚುನಾವಣೆ ಯನ್ನು ಯಶಸ್ವಿಯಾಗಿ ನಡೆಸಿದ್ದಕ್ಕೆ ಸೇನಾಪಡೆ ತನಗೆ ತಾನೇ ಬಹಿರಂಗವಾಗಿ ಅಭಿನಂದನೆಗಳನ್ನು ಹೇಳಿಕೊಂಡಿದೆ.

ಯಾವ ಪ್ರಜಾಪ್ರಭುತ್ವಕ್ಕೂ ಸೇನಾಪಡೆಯ ಸರ್ಟಿಫಿಕೆಟ್ ಅಗತ್ಯವಿರುವುದಿಲ್ಲ. ಇಲ್ಲಿಯವರೆಗೆ ಪಾಕಿಸ್ತಾನದ ಪ್ರಜಾಪ್ರಭುತ್ವದ ವೈಫಲ್ಯದ ಪರಿಣಾಮ ಸೇನಾಪಡೆಯ ಆಳ್ವಿಕೆಯೇ ಆಗಿದೆ. ಸೇನೆಯ ಜನರಲ್‌ಗಳು ಪಾಕಿಸ್ತಾನದ ಇತಿಹಾಸದುದ್ದಕ್ಕೂ ಅಧಿಕಾರ ಕಬಳಿಸಲು ಬಳಕೆ ಮಾಡಿದ ಪದವೆಂದರೆ ರಾಷ್ಟ್ರೀಯ ಹಿತಾಸಕ್ತಿ. ಈಗ ಮತ್ತೆ ಸೇನಾಪಡೆಗೆ ಅಽಕಾರದ ಆಸೆ ಹುಟ್ಟುವುದೇ? ಪಾಕಿಸ್ತಾನದಲ್ಲಿ ಅಂಥದ್ದೊಂದು ಸಾಧ್ಯತೆ ಯಾವತ್ತೂ ಇದ್ದೇ ಇರುತ್ತದೆ. ಹೀಗಾಗಿ ದೇಶಭಕ್ತರು ಯಾವಾಗ ಸರಕಾರದೊಳಗೆ ಬಲವಂತದ ಪ್ರವೇಶ ಮಾಡುತ್ತಾರೆಂಬುದನ್ನು ಹೇಳುವುದು ಕಷ್ಟ. ದೇಶವನ್ನು ನಾಯಿ ನರಿಗಳಿಗೆ ಬಿಡಲಾದೀತೇ? (ಬ್ರಿಟಿಷರು ೧೯೪೭ರಲ್ಲೇ ಮರಳಿ ಹೋದರೂ ಈ ಕ್ಲೀಷೆಯ ಹೇಳಿಕೆ ಇಲ್ಲೇ ಉಳಿದುಕೊಂಡಿದೆ!)

೧೯೭೫ರಲ್ಲಿ ಖ್ಯಾತ ಬ್ರಿಟಿಷ್ ಸಾಹಿತಿ ಸ್ಯಾಮ್ಯುಯೆಲ್ ಜಾನ್ಸನ್ ‘ದೇಶಭಕ್ತಿಯೆಂಬುದು ಹಲಾಲ್ ಕೋರರ ಕೊನೆಯ ನಿಲ್ದಾಣ’ ಎಂದು ಹೇಳಿದ್ದರು. ತಮ್ಮದೇ ದೇಶದ ರಾಜಕಾರಣಿಗಳನ್ನುದ್ದೇಶಿಸಿ ಅವರು ಆಡಿದ್ದ ಈ ಮಾತು ಇಂದಿಗೂ ಜಗತ್ತಿನಾದ್ಯಂತ ಬಹಳ ಪ್ರಸಿದ್ಧವಾಗಿದೆ. ನಾಗರಿಕ ಸರಕಾರ ಮತ್ತು ಸೇನೆಯ ಜನರಲ್‌ಗಳಿಬ್ಬರ ವಿಶ್ವಾಸಾರ್ಹತೆಯೂ ಮಣ್ಣುಪಾಲಾದಾಗ ಏನಾಗುತ್ತದೆ? ಆಗ ದೇಶಕ್ಕಂಟಿಕೊಂಡ ಕ್ಯಾನ್ಸರ್ ಗೆ ಚಿಕಿತ್ಸೆ ನೀಡಲು ಯಾವ ಡಾಕ್ಟರ್‌ಗಳೂ ಉಳಿದಿರುವುದಿಲ್ಲ.

(ಶನಿವಾರ ಪ್ರಕಟವಾದ ಲೇಖನದ ಮುಂದುವರೆದ
ಭಾಗ)
(ಲೇಖಕರು ಹಿರಿಯ ಪತ್ರಕರ್ತರು)

Leave a Reply

Your email address will not be published. Required fields are marked *

error: Content is protected !!