Sunday, 8th September 2024

ಬದಲಾವಣೆಯ ಓಟಕ್ಕೆ ಅಲರ್ಜಿ ಎಂಬ ದೇಹದ ಪ್ರತಿರೋಧ

ಶಿಶಿರಕಾಲ

ಶಿಶಿರ್‌ ಹೆಗಡೆ, ನ್ಯೂಜೆರ್ಸಿ

ಆಕೆಯ ಹೆಸರು ನತಾಶಾ, ಹದಿನೈದು ವರ್ಷ. ಸ್ಪುರದ್ರೂಪಿ ಮತ್ತು ಬುದ್ಧಿವಂತೆ. ದೊಡ್ಡವಳಾದ ಮೇಲೆ ವಕೀಲೆಯಾಗುವುದು ಅವಳ ಕನಸು. ಆಕೆಯ ತಂದೆ ಇಂಗ್ಲೆಂಡಿನ ಆಟಿಕೆಯ ಕಂಪನಿಯೊಂದರ ಒಡೆಯ. ಆಗರ್ಭ ಶ್ರೀಮಂತ. ಮಿಲಿಯನೇರ್. ಅದು
ಶಾಲಾ ರಜೆಯ ಸಮಯ. ತಂದೆಗೆ ಎದರೂ ಸುತ್ತಾಡಲು ಕರೆದುಕೊಂಡು ಹೋಗಲು ದುಂಬಾಲು ಬೀಳುತ್ತಾಳೆ ನತಾಶಾ.

ತಂದೆಗೆ ದೊಡ್ಡ ಕಂಪನಿಯ ಜವಾಬ್ದಾರಿ. ಸಮಯ ಸಿಗುವುದೇ ಅಪರೂಪ. ಆದರೂ ಒಂದು ನಾಲ್ಕು ದಿನ ಬಿಡುವು  ಮಾಡಿ ಕೊಂಡು ಎಲ್ಲಾದರೂ ಹೋಗಿ ಬರೋಣ ಎಂದು ಒಪ್ಪಿಕೊಳ್ಳುತ್ತಾನೆ. ಒಂದೆರಡು ವಾರ ಎಲ್ಲಿಗೆ ಹೋಗುವುದು ಎಂದು ಹುಡು ಕಾಟ. ನಂತರ ದಕ್ಷಿಣ ಫ್ರಾನ್ಸ್ ನ ಸುಂದರ ಊರಾದ ನೀಸ್‌ಗೆ ಹೋಗುವುದು ಎಂದು ನಿರ್ಧಾರವಾಗುತ್ತದೆ. ನೀಸ್ ಇಂಗ್ಲೆಂಡಿನಿಂದ ವಿಮಾನದಲ್ಲಿ ಎರಡು ತಾಸಿನ ದಾರಿ. ಎಲ್ಲಿಲ್ಲದ ಉತ್ಸಾಹದಿಂದ ತಂದೆ ಮಗಳು ಹೊರಟು ನಿಲ್ಲುತ್ತಾರೆ.

ಇಂಗ್ಲೆಂಡಿನ ಹೀತ್ರೋ ವಿಮಾನ ನಿಲ್ದಾಣ ಎಂದರೆ ಅತ್ಯಂತ ಅವಿಶ್ರಾಂತ ವಿಮಾನ ನಿಲ್ದಾಣಗಳಲ್ಲಿ ಒಂದು. ಪ್ರತೀ ದಿನ
ಒಂದೂಕಾಲು ಸಾವಿರ ವಿಮಾನ ಇಲ್ಲಿ ಕೆಳಗಿಳಿದು ಮೇಲಕ್ಕೇರುತ್ತವೆ. ಒಂದು ಟರ್ಮಿನಲ್‌ನಿಂದ ಕೆಲವೊಂದು ಟರ್ಮಿನಲ್‌ಗೆ ಹೋಗಲು ಮಿನಿ ರೈಲು ಇದೆ – ಅಷ್ಟು ವಿಸ್ತಾರ ಆದರೂ ಸದಾ ಕಿಕ್ಕಿರಿದ ಜನಜಂಗುಳಿ. ಅಂತಹ ವಿಮಾನ ನಿಲ್ದಾಣದಿಂದ ನತಾಶಾ ಮತ್ತು ಅವಳ ತಂದೆ ಫ್ರಾನ್ಸ್ ಗೆ ಹೊರಡುತ್ತಾರೆ. ಆ ದಿನ ಮನೆಯಿಂದ ಹೊರಡುವುದು ಕೊಂಚ ತಡವಾಗಿರುತ್ತದೆ.

ಹಾಗಾಗಿ ಮನೆಯಲ್ಲಿ ತಿಂಡಿ ತಿನ್ನದೇ ಹೊರಟಿರುತ್ತಾರೆ. ವಿಮಾನ ಹತ್ತುವ ಸಮಯಕ್ಕೆ ಸರಿಯಾಗಿ ವಿಮಾನ ನಿಲ್ದಾಣ ತಲುಪು ತ್ತಾರೆ. ನತಾಶಾ ಅಲ್ಲಿ, ವಿಮಾನ ನಿಲ್ದಾಣದಲ್ಲಿರುವ ಒಂದು ರೆಸ್ಟೋರೆಂಟ್‌ನಿಂದ ಒಂದು ಸ್ಯಾಂಡ್ವಿಚ್ ಎತ್ತಿಕೊಂಡು ವಿಮಾನ ದೊಳಕ್ಕೆ ತಂದೆಯ ಜೊತೆ ಬಂದು ಕುಳಿತುಕೊಳ್ಳುತ್ತಾಳೆ. ವಿಮಾನ ಹೊರಡುತ್ತದೆ – ರನ್ವೇಯಿಂದ ಮೇಲೆ ನೆಗೆಯುವುದರೊಳಗೆ ನತಾಶಾ ತನ್ನ ಕೈಯ್ಯಲ್ಲಿದ್ದ ಸ್ಯಾಂಡ್ವಿಚ್ ತಿಂದಾಗಿರುತ್ತದೆ.

ವಿಮಾನ ಆಕಾಶದಲ್ಲಿ ಹಾರುತ್ತ ಸ್ವಲ್ಪ ಸಮಯ ಕಳೆದಿರುತ್ತದೆ. ಆಗ ನತಾಶಾಳ ಮೈ ಕೈ ಚರ್ಮವೆಲ್ಲ ಕೆಂಪಾಗಟ್ಟಲು
ಶುರುವಾಗುತ್ತದೆ ಮತ್ತು ಉಸಿರಾಟದ ತೊಂದರೆ ಕಾಣಿಸಿಕೊಳ್ಳುತ್ತದೆ. ಮೊದಲೇ ಅಲರ್ಜಿ ತೊಂದರೆಯಿದ್ದದರಿಂದ ಆಕೆಯ ತಂದೆ ತಕ್ಷಣ ಎಪಿಪೆನ್ ಇಂಜೆಕ್ಷನ್ ಅನ್ನು ಆಕೆಗೆ ಕೊಡುತ್ತಾನೆ. ಆದರೆ ಪರಿಸ್ಥಿತಿ ಹದಗೆಡುತ್ತ ಹೋಗುತ್ತದೆ. ತಕ್ಷಣ ಗಗನಸಖಿಯರು ದೌಡಾಯಿಸುತ್ತಾರೆ.

ವಿಮಾನದ ಪ್ರಯಾಣಿಸುತ್ತಿದ್ದ ಒಬ್ಬ ವೈದ್ಯ ನತಾಶಾಳನ್ನು ಪರೀಕ್ಷಿಸಿ ಇನ್ನೊಂದು ಡೋಸ್ ಎಪಿಪೆನ್ ಅನ್ನು ಆಕೆಗೆ ಕೊಡುತ್ತಾನೆ. ಬ್ರಿಟಿಷ್ ಏರ್ವೇಸ್ ವಿಮಾನ ಅದಾಗಲೇ ಅರ್ಧ ದಾರಿ ದಾಟಿಯಾಗಿರುತ್ತದೆ. ಪೈಲಟ್ ಎಮರ್ಜೆನ್ಸಿ ವಿಚಾರವನ್ನು ನೀಸ್‌ನ ವಿಮಾನ ನಿಲ್ದಾಣಕ್ಕೆ ತಿಳಿಸುತ್ತಾನೆ.

ನೀಸ್‌ನಲ್ಲಿ ವಿಮಾನ ಇಳಿಯುತ್ತಿದ್ದಂತೆ ಪ್ಯಾರಾಮೆಡಿಕ್ಸ್ ಆಕೆಯ ಶುಶ್ರೂಷೆಗೆ ವಿಮಾನಕ್ಕೆ ದೌಡಾಯಿಸುತ್ತಾರೆ. ಅದಾಗಲೇ ಆಕೆಗೆ ಸ್ಟ್ರೋಕ್ ಆಗಿರುತ್ತದೆ. ಆಕೆ ಕೊನೆಯುಸಿರೆಳೆಯುತ್ತಾಳೆ. ಇದೆಲ್ಲ ನಡೆದು ಹೋಗುವುದು ಒಂದು ತಾಸಿನಲ್ಲಿ. ನಂತರ ಆಕೆಯ ಸಾವಿನ ಕಾರಣದ ತನಿಖೆ ಶುರುವಾಗುತ್ತದೆ. ಆಕೆಗೆ ಬಹಳ ಕಾಲದಿಂದ ಎಳ್ಳು ಮತ್ತು ಕೆಲವು ಕಾಳುಗಳ ಅಲರ್ಜಿಯಿರುತ್ತದೆ. ಆ ಕಾರಣದಿಂದ ಆಕೆ ತಾನು ಸೇವಿಸುವ ಎಲ್ಲ ಆಹಾರದ ಪದಾರ್ಥಗಳನ್ನು ನೋಡಿ ತನಗಾಗದಿರುವ ಪದಾರ್ಥ / ಕಾಳು ಆಹಾರ ದಲ್ಲಿರದಂತೆ ನೋಡಿಕೊಂಡು ಸೇವಿಸುತ್ತಿರುತ್ತಾಳೆ. ಆದರೆ ಆ ದಿನ ಆಕೆ ಗಡಿಬಿಡಿಯಲ್ಲಿ ಎತ್ತಿಕೊಂಡ ಸ್ಯಾಂಡ್ವಿಚ್‌ನಲ್ಲಿ ಎಳ್ಳು ಇರುತ್ತದೆ. ಅದೆಷ್ಟೇ ಗಡಿಬಿಡಿಯಲ್ಲಿದ್ದರೂ ಆಕೆ ಎಲ್ಲ ಪದಾರ್ಥಗಳ ಪಟ್ಟಿಯನ್ನು ನೋಡಿಯೇ ಆ ಸ್ಯಾಂಡ್ವಿಚ್ ಖರೀದಿಸಿರುತ್ತಾಳೆ.

ಆದರೆ ಆ ರೆಸ್ಟೋರೆಂಟ್ ನವರು ಆ ಸ್ಯಾಂಡ್ವಿಚ್‌ನಲ್ಲಿ ಎಳ್ಳಿರುವುದನ್ನು ನಮೂದಿಸಿರುವುದಿಲ್ಲ. ಈ ಒಂದು ಪ್ರಮಾದದಿಂದ ಆಕೆ ಬ್ರೆಡ್‌ನಲ್ಲಿ ಅಡಗಿದ್ದ ಎಳ್ಳನ್ನು ತಿಳಿಯದೆ ಸೇವಿಸಿ ಸಾವನ್ನಪ್ಪುತ್ತಾಳೆ. ಈ ಘಟನೆ ಬಹಳಷ್ಟು ಸುದ್ದಿಮಾಡುತ್ತದೆ. ಆಕೆ ಸ್ಯಾಂಡ್ವಿಚ್ ಖರೀದಿಸಿದ್ದು ಒಂದು ಪ್ರಸಿದ್ಧ ಚೈನ್ ರೆಸ್ಟೋರೆಂಟ್‌ನಿಂದ. ನಂತರ ಈ ಪ್ರಮಾದದಿಂದ ಆ ರೆಸ್ಟೋರೆಂಟ್ ಮೇಲೆ ಪ್ರಕರಣ
ದಾಖಲಾಗುತ್ತದೆ. ಹೀಗೆ. ನಂತರ ಇಂಗ್ಲೆಂಡಿನಲ್ಲಿ ಇನ್ನಷ್ಟು ಕಠಿಣವಾಗಿ ಆಹಾರಕ್ಕೆ ಲೇಬಲ್ ಮಾಡುವ ಕಾನೂನು ಜಾರಿಯಾಗು ತ್ತದೆ. ಇವೆಲ್ಲ ನಂತರ ನಡೆದದ್ದು. ಆದರೆ ಆಕೆ ಒಂದು ರೆಸ್ಟೋರೆಂಟ್‌ನ ಒಂದು ಚಿಕ್ಕದೆನಿಸುವ ಪ್ರಮಾದದಿಂದ ಜೀವ ಕಳೆದು ಕೊಂಡಾಗಿರುತ್ತದೆ.

ಇಂತಹ ಕಥೆಗಳು ಆಗೀಗ ಸುದ್ದಿಯಾಗುತ್ತಲೇ ಇರುತ್ತವೆ. ಅಲರ್ಜಿ ಎನ್ನುವ ಒಂದು ವಿಚಾರ ಜೀವ ತೆಗೆಯುವಷ್ಟು ದೊಡ್ಡದು ಎಂದು ಸಾಮಾನ್ಯವಾಗಿ ನಮಗೆ ಗೊತ್ತೇ ಇರುವುದಿಲ್ಲ. ನನ್ನ ತಂದೆಯವರಿಗೆ ಧೂಳಿನ ಅಲರ್ಜಿ ಇದೆ. ಸಾಮಾನ್ಯವಾಗಿ ಧೂಳಿಗೆ, ಅಥವಾ ಅಡಿಕೆ ಸಿಪ್ಪೆ ಸುಲಿಯುವಾಗ ಹಾರುವ ಅಡಿಕೆ ಧೂಳಿಗೆ ಪುಂಖಾನುಪುಂಖವಾಗಿ ಸೀನುತ್ತಾರೆ. ಏನಾಯ್ತು ಎಂದು
ಕೇಳಿದರೆ ಅಲರ್ಜಿ ಎನ್ನುತ್ತಾರೆ. ಒಂದು ಹತ್ತು ಸೀನಿನ ನಂತರ ಎಲ್ಲವೂ ಸಹಜ. ನಮಗೆಲ್ಲ ಚಿಕ್ಕಂದಿಂದ ಗೊತ್ತಿದ್ದ ಅಲರ್ಜಿ ಎಂದರೆ ಅಷ್ಟೇ. ಅದು ಬಿಟ್ಟರೆ ಕೆಲವೊಮ್ಮೆ ಜ್ವರಕ್ಕೋ ಅಥವಾ ಇನ್ಯಾವುದಕ್ಕೋ ಗುಳಿಗೆ ತೆಗೆದುಕೊಂಡಾಗ ಅಥವಾ ಊರಿನ ಕೆರೆಯಲ್ಲಿ ಈಜಿದಾಗ ಮೈಕೈ ಸ್ವಲ್ಪ ತುರಿಕೆ ಆಗುವುದು ಇವೆಲ್ಲ ನಾವು ಬೆಳೆಯುತ್ತ ಕಂಡ ಸಣ್ಣ ಪುಟ್ಟ ಅಲರ್ಜಿಗಳು.

ಹಳ್ಳಿಗಳಲ್ಲಿ ಕೆಲವರಿಗೆ ಒಂದಿಷ್ಟು ತರಕಾರಿ ಆಗಿಬರುತ್ತಿರಲಿಲ್ಲ. ಇಲ್ಲವೇ ಕೆಲವರಿಗೆ ಸೊಳ್ಳೆ ಕಡಿದರೆ ಉಳಿದವರಿಗಿಂತ ಜಾಸ್ತಿ
ತುರಿಕೆ, ಚರ್ಮ ಕೆಂಪಾಗುವುದು, ಅದು ಬಿಟ್ಟರೆ ಅಸ್ತಮಾ – ಅದು ಕೂಡ ತೀರಾ ತೀರಾ ವಿರಳ – ಇಡೀ ಊರಿನ ಲೆಕ್ಕ ತೆಗೆದರೆ ಒಂದೋ ಎರಡೋ ಅಷ್ಟೇ. ಈ ಆಹಾರದ ಅಲರ್ಜಿ ಇವೆಲ್ಲ ಊರುಬಿಟ್ಟು ಬಂದಮೇಲೆಯೇ ತಿಳಿದದ್ದು. ಸಾಮಾನ್ಯವಾಗಿ ವೈದ್ಯವೃತ್ತಿಯಲ್ಲಿದ್ದವರಿಗೆ ನಾನಾ ಅಲರ್ಜಿಯ ಪರಿಚಯವಿರುತ್ತದೆ. ಹಾಗಂತ ಅಲರ್ಜಿ ಅಂಥಾ ಅಪರರೂಪದ್ದೇನೂ ಅಲ್ಲ.

ಭಾರತ ಸರಕಾರದ ಅಧಿಕೃತ ವರದಿಯ ಪ್ರಕಾರ ಶೇ.20 ರಿಂದ ಶೇ.30 ಮಂದಿ  ಭಾರತೀಯರು ಒಂದಿಂದು ಅಲರ್ಜಿ ಹೊಂದಿರು ತ್ತಾರೆ. ಆದರೆ ಬಹುತೇಕರಿಗೆ ಅಲರ್ಜಿ ಇದೆ ಎಂದೇ ತಿಳಿದಿರುವುದಿಲ್ಲ. ಬಹುತೇಕ ಅಲರ್ಜಿ ಸೀನಿ, ಮೈ ಕೆರೆದುಕೊಂಡು ಸ್ವಲ್ಪ ತೆಂಗಿನೆಣ್ಣೆ ಹಚ್ಚಿಕೊಂಡು ಹೋಗಿಬಿಡುತ್ತದೆ. ಅದರಲ್ಲೂ ಅಸ್ತಮಾ ಒಂದನ್ನು ಬಿಟ್ಟು ಇನ್ಯಾವುದೋ ಒಂದು ಅಲರ್ಜಿ
ಕಾರಣದಿಂದ ಅಥವಾ ಯಾವುದೋ ಒಂದು ಆಹಾರ ಪದಾರ್ಥ ತಿಂದು ಅಲರ್ಜಿಯಾಗಿ ಸತ್ತರಂತೆ ಎಂದು ಒಂದೇ ಒಂದು ಸುದ್ದಿ ನಾವು ಬೆಳೆಯುತ್ತ ಕೇಳಿದ್ದಿಲ್ಲ.

ಸರಳ ಭಾಷೆಯಲ್ಲಿ ಅಲರ್ಜಿ ಎಂದರೇನು ಎಂದು ಒಂದೇ ವಾಕ್ಯದಲ್ಲಿ ವಿವರಿಸುವುದಾದರೆ : ನಮ್ಮ ದೇಹದ ನಿರೋಧಕ
ಶಕ್ತಿ ಕೆಲವೊಂದು ಆಹಾರ ಅಥವಾ ವಸ್ತುಗಳು ದೇಹಕ್ಕೆ ಹೊಕ್ಕ ತಕ್ಷಣ ಅದನ್ನು ದೇಹಕ್ಕೆ ಹಾನಿಮಾಡುವ ವಸ್ತು ಎಂದು
ಪರಿಗಣಿಸಿ ದೇಹ ಅತಿಯಾಗಿ ಪ್ರತಿಕ್ರಿಯಿಸುವುದು. ಈ ಪ್ರತಿಕ್ರಿಯೆ ಮನುಷ್ಯನಿಗೆ ತೀರಾ ಅವಶ್ಯಕ – ಉದಾಹರಣೆಗೆ ಕರೋನಾ ದೇಹಕ್ಕೆ ಹೊಕ್ಕಲ್ಲಿ ಅದನ್ನು ಕೊಲ್ಲುವುದು ಕೂಡ ಇದೇ ನಿರೋಧಕ ಶಕ್ತಿ. ಆದರೆ ವಸ್ತು ಹಾನಿಕಾರಕವೋ ಅಲ್ಲವೋ ಎಂದು ಗುರುತಿಸುವಲ್ಲಿ ತಪ್ಪಿಬೀಳುವ ದೇಹ ಅತಿಯಾಗಿ ವರ್ತಿಸುವುದರಿಂದ ಆಗುವ ಭಾನಗಡಿಯೇ ಅಲರ್ಜಿ.

ಆದರೆ ಕಳೆದ ಎರಡು ದಶಕದಿಂದ ಈ ಅಲರ್ಜಿ ಅದರಲ್ಲಿಯೂ ಆಹಾರದ ಅಲರ್ಜಿ ಎಲ್ಲಿಲ್ಲದ ಪ್ರಮಾಣದಲ್ಲಿ ಹೆಚ್ಚುತ್ತಿದೆ. ನನ್ನ ಪರಿಚಯದವರ ಐದು ವರ್ಷದ ಚಿಕ್ಕ ಮಗುವಿಗೆ ಪೀನಟ್ – ಶೇಂಗಾ ಎಂದರೆ ಅಲರ್ಜಿ. ಇದರ ತೀವ್ರತೆ ಅದೆಷ್ಟು ಎಂದರೆ ಅಡುಗೆ ಮನೆಯ ಕಪಾಟಿನ ಮೇಲೆ ಒಂದು ಡಬ್ಬದಲ್ಲಿ ಶೇಂಗಾ ಇಟ್ಟಿದ್ದು, ಮಗು ಕೆಳಗೆ ಆಡುತ್ತಿದ್ದರೆ ತಕ್ಷಣ ಆ ಮಗುವಿನ ಮೂಗು ಬಾಯಿ
ಊದಿಕೊಳ್ಳುತ್ತದೆ. ಅವರು ಯಾರ ಮನೆಗೆ ಹೋಗುವುದಿದ್ದರೂ ಮೊದಲು ಶೇಂಗಾ ಡಬ್ಬಿಯನ್ನು ಮನೆಯಿಂದ ಆಚೆ ಇಡುವಂತೆ ಹೇಳಿಯೇ ಹೋಗುವುದು.

ಅವರು ಮನೆಗೆ ಬರುತ್ತಿದ್ದಾರೆ ಎಂದರೆ ಶೇಂಗಾ ಒಂದು ವಾರದಿಂದ ಅಡುಗೆಮನೆಯಲ್ಲಿರುವಂತಿಲ್ಲ. ಈ ಶೇಂಗಾ ಮತ್ತು ಕಾಳಿನ ಅಲರ್ಜಿ ಅಮೆರಿಕಾ ಮತ್ತು ಹಲವು ಪಾಶ್ಚಾತ್ಯ ದೇಶಗಳಲ್ಲಿ ದೊಡ್ಡ ಪ್ರಮಾಣದಲ್ಲಿದೆ. ಬಹುತೇಕ ಮಕ್ಕಳಲ್ಲಿ ಈ ಅಲರ್ಜಿ ಸಾಮಾನ್ಯವೆನ್ನುವಂತಾಗಿದೆ. ಈ ಕಾರಣಕ್ಕೆ ಅಮೆರಿಕಾದ ಶಾಲೆಗಳಲ್ಲಿ ಮಕ್ಕಳ ಊಟದ ಡಬ್ಬಿಯಲ್ಲಿ ಯಾವುದೇ ಕಾಳು ಪದಾರ್ಥ ಬಳಸಿದ ಆಹಾರವನ್ನು ಒಯ್ಯುವಂತೆಯೇ ಇಲ್ಲ. ಶೇಂಗಾ ಸೇರಿಸಿದ ಆಹಾರ ಸಂಪೂರ್ಣ ನಿಷಿದ್ಧ. ಶಾಲೆಗೆ ಸೇರಿಸುವಾಗಿನ
ಅರ್ಜಿಯ ಮಗುವಿಗೆ ಯಾವ ಅಲರ್ಜಿ ಇದೆ ಎಂದು ತಿಳಿಸಲು ಒಂದು ಪ್ರತ್ಯೇಕ ಕಾಲಂ ಇರುತ್ತದೆ.

ಶಾಲೆಯಲ್ಲಿ ಕಾಳಿನ ಅಲರ್ಜಿ ಇರುವ ಮಗುವಿರಲಿ ಇಲ್ಲದಿರಲಿ – ಕಾಳು ಇರುವ ಯಾವುದೇ ಆಹಾರ ಪದಾರ್ಥ ಶಾಲೆ ಹೊಕ್ಕು ವಂತಿಲ್ಲ. ಆಹಾರದ ಪ್ಯಾಕೆಟ್‌ಗಳಲ್ಲಿ ಶೇಂಗಾ ಅಥವಾ ಇನ್ಯಾವುದೇ ಕಾಳು ಇದ್ದರೆ ಅದನ್ನು ನಮೂದಿಸಲೇ ಬೇಕು ಎನ್ನುವುದು
ಕಾನೂನು. ಅಷ್ಟೇ ಅಲ್ಲ, ಯಾವುದೇ ಆಹಾರ ತಯಾರಿಕಾ ಘಟಕದಲ್ಲಿ ಶೇಂಗಾ ಅಥವಾ ಕಾಳು ಬಳಸುವ ಆಹಾರ
ತಯಾರಿಸುತ್ತಿದ್ದರೆ ಅದರ ಧೂಳು ಕಾಳು ಇಲ್ಲದ ಆಹಾರಕ್ಕೂ ಸೇರಿಕೊಳ್ಳಬಹುದಾದ್ದರಿಂದ ಅದನ್ನು ಕೂಡ ಆಹಾರದ
ಪ್ಯಾಕೆಟ್ ಮೇಲೆ ನಮೂದಿಸಿರಬೇಕು. ಅದರಲ್ಲಿ ಸ್ವಲ್ಪವೇ ತಪ್ಪಿದರೂ, ಅದನ್ನು ಸೇವಿಸಿ ಏನಾದರು ಹೆಚ್ಚು ಕಡಿಮೆಯಾದರೆ ಇಡೀ ಕಂಪನಿಯೇ ಮುಚ್ಚುವಷ್ಟು ಕಾನೂನು ಗಟ್ಟಿಯಾಗಿಸಿಡಲಾಗಿದೆ. ಈ ಶೇಂಗಾ ಅಲರ್ಜಿಯಿಂದ ಸಾವಿನ ಪ್ರಮಾಣ ಕಡಿಮೆಯಾದರೂ ಈ ಅಲರ್ಜಿಯಿಂದ ದೇಹದಗುವ ತ್ರಾಸು ಮತ್ತು ಏರುಪೇರು ತೀರಾ ವಿಪರೀತದ್ದು. ಶೇಂಗಾ ಅಲರ್ಜಿಗೆ ಕಾರಣ
ಅದರಲ್ಲಿರುವ ಒಂದು ಪ್ರೊಟೀನ್. ಆದರೆ ಈಗೀಗ, ಕಳೆದ ಎರಡು ದಶಕದಿಂದ ಶೇಂಗಾ ಮತ್ತು ಇತರ ಕಾಳುಗಳಿಂದಾಗುವ ಅಲರ್ಜಿ ಹೆಚ್ಚುತ್ತಿದೆ – ಅದಕ್ಕೆ ಕಾರಣವೇನು ಎನ್ನುವುದಕ್ಕೆ ಮಾತ್ರ ಸಮಂಜಸ ಉತ್ತರವಿಲ್ಲ.

ಕೆಲವರು ಇದಕ್ಕೆಲ್ಲ ಕಾರಣ ನಮ್ಮ ಕೃಷಿಯದ ಬದಲಾವಣೆಗಳು ಮತ್ತು ಕೀಟ ಬಾಧೆ ತಪ್ಪಿಸಲು ಬೇರೆ ಬೇರೆ ಜೀನ್‌ಗಳನ್ನು ಸೇರಿಸಿ ಮಾರ್ಪಾಡು ಕೃಷಿ ಮಾಡಿ ಆಹಾರ ಉತ್ಪಾದಿಸುವುದರಿಂದ ಎನ್ನುತ್ತಾರೆ. ನಮ್ಮಗೆಲ್ಲ ಇಂದು ಒಂದು ಚಾಳಿ. ನಮಗೆ ತರಕಾರಿ ಅಂಗಡಿಗೆ ಹೋದರೆ ಒಂಚೂರೂ ಮುಕ್ಕಿಲ್ಲದ ತರಕಾರಿಯೇ ಆಗಬೇಕು. ಸ್ವಲ್ಪ ಅಕಾರ ಹೆಚ್ಚು ಕಮ್ಮಿಯಿದ್ದರೂ ಅದನ್ನು ಎತ್ತಿಕೊಳ್ಳಲು ಹಿಂದೆ ಮುಂದೆ ನೋಡುತ್ತೇವೆ. ಈ ಎಲ್ಲ ಕಾರಣದಿಂದ ಈಗೀಗ ಜೆನೆಟಿಕಲ್ ಮಾರ್ಪಾಡಾಗಿರುವ ತರಕಾರಿಗಳದ್ದೇ ರಾಜ್ಯ.

ಕಾಳು ಬೇಳೆಗಳೂ ಅದಕ್ಕೆ ಹೊರತಲ್ಲ. ಹಾಗಾಗಿ ಈ ಒಂದು ಕಾರಣದಿಂದ ಜೀನ್‌ಗಳನ್ನೂ ಬದಲಾಯಿಸುವ ಮಟ್ಟಕ್ಕೆ ನಾವು ಇಳಿದಿದ್ದೇವೆ. ಇದನ್ನು ಏರಿದ್ದೆ ಇಳಿದಿದ್ದೆ ಏನೆಂದು ಹೇಳಬೇಕೋ ಗೊತ್ತಿಲ್ಲ. ಇದೇ ಇಂದಿನ ಹಲವು ನವನವೀನ ಅಲರ್ಜಿಗಳಿಗೆ ಕಾರಣ ಎನ್ನಲಾಗುತ್ತಿದೆ. ಇವೆಲ್ಲ ತೀವ್ರ ಬದಲಾವಣೆಗಳು ಕಳೆದ ಕೆಲವೇ ದಶಕಗಳಗಿದ್ದು ಮನುಷ್ಯ ದೇಹ ಅದೆಲ್ಲದಕ್ಕೆ ಇನ್ನೂ ಒಗ್ಗಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎನ್ನಲಾಗುತ್ತಿದೆ. ಆಹಾರ ಸಂಬಂಧಿ ಅಲರ್ಜಿಗಳಲ್ಲಿ ಇಂಥದ್ದೇ ಕಾರಣ ಎನ್ನುವುದೇ ತಿಳಿದಿಲ್ಲದ
ಪಟ್ಟಿಯೇ ದೊಡ್ಡದಿದೆ.

ಅಮೆರಿಕಾ ಮೊದಲಾದ ಭೂಮಿಯ ಉತ್ತರಾರ್ಧದಲ್ಲಿ, ಸಮಭಾಜಕ ವೃತ್ತದ ಮೇಲಕ್ಕೆ ಇರುವ ದೇಶಗಳಲ್ಲಿ ವರ್ಷದಲ್ಲಿ ಅರ್ಧಭಾಗ ಚಳಿಗಾಲ. ಈ ಕಾರಣದಿಂದಾಗಿ ಇಲ್ಲಿನ ಮರಗಿಡಗಳು, ಸಸ್ಯಜಗತ್ತು ಈ ಹವಾಮಾನಕ್ಕೆ ತಮ್ಮನ್ನು ಅಳವಡಿಸಿ ಕೊಂಡಿರುತ್ತವೆ. ಎಲೆ ಉದುರಿಸುವ ಕಾಡುಗಳು’ ಎಂದು ನೀವು ಭೂಗೋಳ ಓದಿದ್ದು ನೆನಪಿರಬಹುದು. ಚಳಿಗಾಲ ಇನ್ನೇನು ಶುರುವಾಗಬೇಕು, ಅತ್ಯಂತ ಚಳಿಯಾಗುವ ಪ್ರದೇಶದ ಗಿಡಗಳು ತಮ್ಮ ಎಲೆಗಳನ್ನು ಉದುರಿಸಿಕೊಂಡುಬಿಡುತ್ತವೆ.

ಭಾರತದಲ್ಲಿನ ಮರಗಳು, ಅದರಲ್ಲೂ ದಕ್ಷಿಣ ಭಾರತದ ಮರಗಳಲ್ಲಿ ಎಲೆ ಉದುರಿಸಿಕೊಳ್ಳುವ ಮರಗಳ ಪ್ರಬೇಧಗಳಿದ್ದರೂ
ಈ ರೀತಿ ಇಲ್ಲಿನಂತೆ ಸಾಮೂಹಿಕವಾಗಿ ಕಾಡು ತನ್ನ ಎಲೆ ಉದುರಿಸಿಕೊಂಡು ಬೋಳಾಗುವುದಿಲ್ಲ. ಈ ಗಿಡಗಳಿಗೆ ಬೇಸಿಗೆಯಲ್ಲಿ – ಅರ್ಧವರ್ಷ ಮಾತ್ರ ಬೀಜ ತಯಾರಿಸಿ ವಂಶಾಭಿವೃದ್ಧಿ ಮಾಡಿಕೊಳ್ಳಲು ಇರುವ ಸಮಯ. ಆ ಕಾರಣಕ್ಕೆ ಹೀಗೆ ಚಳಿಗಾಲ ಶುರುವಾಗುವಾಗ ಎಲೆ ಉದುರಿಸಿಕೊಳ್ಳುವ ಮರಗಳು ಇನ್ನೇನು ಚಳಿಗಾಲ ಮುಗಿಯುತ್ತಿರುವಂತೆ ಎಲೆ ಬಿಡುವುದಕ್ಕಿಂತ ಮೊದಲು ಹೂ ಬಿಡುತ್ತವೆ.

ಹಾಗೆ ಹೂವು ಮೊದಲು ಬಿಟ್ಟು ಕಾಯಿ ಮೊಳೆಯುತ್ತ ನಂತರ ಎಲೆ ಹುಟ್ಟಿಕೊಳ್ಳುತ್ತದೆ. ಇದನ್ನು ಸ್ಪ್ರಿಂಗ್ ಕಾಲ ಎನ್ನಲಾಗುತ್ತದೆ. ಅಮೆರಿಕಾ, ಕೆನಡಾ, ಯುರೋಪ್ ದೇಶಗಳಲ್ಲಿ ಸ್ಪ್ರಿಂಗ್ ಕಾಲದಲ್ಲಿ ಗಿಡಗಳನ್ನು ನೋಡಲು ಈ ಕಾರಣಕ್ಕೆ ಅತ್ಯಂತ ಸುಂದರ. ಈ
ಗಿಡಗಳೆಲ್ಲ ಈ ಸ್ಪ್ರಿಂಗ್ ಕಾಲದಲ್ಲಿ ವಿಪರೀತ ಕ್ರಿಯಾಶೀಲವಾಗುತ್ತವೆ. ಈ ಒಮ್ಮಿಂದೊಮ್ಮೆಲೇ ಎಲ್ಲ ಗಿಡಗಳು ಹೂವು ಬಿಡುವುದರಿಂದ ಗಾಳಿಯಲ್ಲಿ ಎಲ್ಲಿಲ್ಲದ ಪ್ರಮಾಣದಲ್ಲಿ ಪೊಲನ್ – ಪರಾಗ ಧೂಳು ಹೆಚ್ಚುತ್ತದೆ.

ಅವು ಮನುಷ್ಯ ಶ್ವಾಸ ಸೇರಿಕೊಂಡು ಅಸ್ತಮಾ ಮತ್ತು ಇತರ ಉಸಿರಾಟ ಸಂಬಂಧಿ ಅಲರ್ಜಿಗೆ ಕಾರಣವಾಗುತ್ತದೆ.
ಈಗ ಕಳೆದ ಎರಡು ದಶಕದಿಂದ ವಾತಾವರಣದ ಇಂಗಾಲದ ಡೈ ಆಕ್ಸೆ ಡ್ ಪ್ರಮಾಣದ ಹೆಚ್ಚಳದಿಂದ ಗಿಡಗಳಿಗೆ ಹೆಚ್ಚಿನ ಅನುಕೂಲವಾಗಿರುವುದರಿಂದ ಅವು ಬಿಡುವ ಹೂವಿನ ಪ್ರಮಾಣ ಮತ್ತು ಅದರಿಂದ ಉಂಟಾಗುವ ಪರಾಗಧೂಳು ಕೂಡ ಹತ್ತು ಪಟ್ಟು ಹೆಚ್ಚಿದೆ. ಕಳೆದ ಐವತ್ತು ವರ್ಷದಲ್ಲಿ ಮನುಷ್ಯ ಕಿತಾಪತಿಯಿಂದಾಗಿ ಇಂಗಾಲದ ಡೈ ಆಕ್ಸೆ ಡ್ ಉತ್ಪತ್ತಿಯ ಪ್ರಮಾಣದಲ್ಲಿ ಶೇ.೨೫ ಹೆಚ್ಚಿದ್ದು ಅದರ ನೇರ ಅಡ್ಡ ಪರಿಣಾಮಗಳಲ್ಲಿ ಇದು ಕೂಡ ಒಂದು.

ಅಲ್ಲದೇ ಇದೇ ಹಸಿರುಮನೆ ಕಾರಣದಿಂದ ಚಳಿಗಾಲ ಚಿಕ್ಕದಾಗುತ್ತಿದ್ದು ಅದರಿಂದ ಕೂಡ ಗಿಡಗಳಿಗೆ ಹೆಚ್ಚಿನ ಸಂತಾನೋತ್ಪತ್ತಿಯ
ಸಮಯ ಸಿಗುತ್ತಿದ್ದು ಈ ಪರಾಗ ಧೂಳಿನ ಸಮಯ ಕೂಡ ವರ್ಷದಲ್ಲಿ ಸುಮಾರು ಇಪ್ಪತ್ತು ದಿನ ಹೆಚ್ಚಿರುವುದರಿಂದ ಈ
ಪೊಲನ್ ಅಲರ್ಜಿ ಈ ಬಹುತೇಕ ದೇಶಗಳಲ್ಲಿ ಸುಮಾರು ಇಪ್ಪತ್ತು ಪಟ್ಟು ಹೆಚ್ಚಿದೆ. ಈ ಪರಾಗ ಧೂಳಿನ ಅಲರ್ಜಿ ಮನುಷ್ಯನನ್ನು ಕಾಡುವ ಅತಿ ದೊಡ್ಡ ಅಲರ್ಜಿ. ಒಬ್ಬೊಬ್ಬರಿಗೆ ಒಂದೊಂದು ಗಿಡದ ಪರಾಗದಿಂದ ಅಲರ್ಜಿ ಉಂಟಾಗುವುದರಿಂದ ಇಂಥದ್ದೇ
ಗಿಡದಿಂದ ಅಲರ್ಜಿಯಾಗುತ್ತಿದೆ ಎಂದು ಕಂಡುಹಿಡಿಯುವುದೇ ಒಂದು ದೊಡ್ಡ ಸಮಸ್ಯೆ.

ಅಲ್ಲದೇ ಈಗೀಗ ಸ್ಥಳೀಯವಲ್ಲದ ಗಿಡಗಳನ್ನು ವ್ಯಾಪಾರೀ ದೃಷ್ಟಿಯಿಂದ ಬೆಳೆಸುವ ಹೊಸ ಚಾಳಿಯಿಂದಾಗಿ ಕೂಡ ನೂರಾರು ಹೊಸ ಅಲರ್ಜಿಗಳು ಹುಟ್ಟಿಕೊಂಡಿವೆ. ಇದಕ್ಕೆ ಒಂದು ಒಳ್ಳೆಯ ಉದಾಹರಣೆಯೆಂದರೆ ಅಕೇಶಿಯಾ ಗಿಡ. ಇದರ ಹತ್ತಾರು ವೈವಿಧ್ಯ ಭಾರತದಲ್ಲೂ ಬೆಳೆಸಲ್ಪಡುತ್ತಿದ್ದು ಇಲ್ಲಿ ಕೂಡ ಹೊಸ ಹೊಸ ಅಲರ್ಜಿಗಳು ಸದ್ದಿಲ್ಲದಂತೆ ಶುರುವಾಗುತ್ತಿವೆ, ಅಲ್ಲಲ್ಲಿ ವರದಿಯಾಗುತ್ತಿವೆ. ಈಗೀಗ ಹಾಲು, ಮೊಟ್ಟೆ, ಬದನೆ, ನುಗ್ಗೆಕಾಯಿ,  ಬಾಳೆಹಣ್ಣು, ಸೇಬು ಹೀಗೆ ಹೊಸ ಹೊಸ ತರಕಾರಿಗಳಿಂದ
ಉಂಟಾಗುವ ಅಲರ್ಜಿಗಳು ಹೆಚ್ಚುತ್ತಿವೆ. ಹಾಲಿನ ಸತ್ವವನ್ನು ದೇಹ ಅಪಾಯಕಾರಿ ಎಂದು ಪರಿಗಣಿಸುವುದು ಹೈನುಗಾರಿಕೆ ಯನ್ನು ಅಮಾನವೀಯ ಉದ್ಯಮ ವಾಗಿಸಿಕೊಂಡ ಬಹುತೇಕ ದೇಶಗಳಲ್ಲಿ ನೋಡಬಹುದು.

ಇನ್ನು ಮಾಂಸದ ಅಲರ್ಜಿ ಕೂಡ ದೊಡ್ಡ ಮನುಷ್ಯವರ್ಗವನ್ನು ಕಾಡಲು ಶುರುಮಾಡಿದೆ. ಈ ಕಾರಣಕ್ಕೆ ಕೆಲವರು ಸಸ್ಯಾಹಾರಿಗಳಾಗುತ್ತಿzರೆ, ಅನಿವಾರ್ಯತೆಯಿಂದ. ಇಂದು ಮನುಷ್ಯ ಸೇವಿಸುವ ಸುಮಾರು ನಾಲ್ಕು ನೂರು ಆಹಾರ ಪದಾರ್ಥ ಗಳಿಂದ ಅಲರ್ಜಿ ಕಾಣಿಸಿಕೊಳ್ಳಲು ಶುರುವಾಗಿದೆ ಎನ್ನುವುದು ಅಮೆರಿಕನ್ ಅಕಾಡೆಮಿ ಆಫ್ ಅಲರ್ಜಿಯ ವರದಿ. ಈ ಸಂಖ್ಯೆ ಇಪ್ಪತ್ತು ವರ್ಷಗಳ ಹಿಂದೆ ಕೇವಲ ಎಂಭತ್ತು ಆಹಾರ ಪದಾರ್ಥಗಳಿಗಷ್ಟೇ ಸೀಮಿತವಾಗಿತ್ತು. ಈ ಲೆಕ್ಕ ಏನನ್ನು ಹೇಳುತ್ತದೆ? ಒಂದೋ ಮನುಷ್ಯನ ದೇಹದ ನಿರೋಧಕ ವ್ಯವಸ್ಥೆ ತೀವ್ರ ಪ್ರಮಾಣದಲ್ಲಿ ಬದಲಾಗಿರಬೇಕು ಅಥವಾ ನಾವು ತಾಯಾರಿಸುವ,
ತಯಾರಿಸಲು ಬಳಸುವ ಆಹಾರ ಸಾಮಗ್ರಿಗಳಲ್ಲಿ ಬದಲಾವಣೆಯಾಗಿರಬೇಕು.

ಮನುಷ್ಯ ದೇಹವಾಗಲಿ  ಅಥವಾ ಯಾವುದೇ ಜೀವಿಯ ದೇಹ ವ್ಯವಸ್ಥೆಯಾಗಲಿ – ಎರಡು ದಶಕದಲ್ಲಿ ಈ ಪ್ರಮಾಣದಲ್ಲಿ ಬದಲಾಗಿಬಿಡುವ ಸಾಧ್ಯತೆ ಕಡಿಮೆ. ಇದರರ್ಥ ನಾವು ಇಂದು ಸೇವಿಸುವ ಆಹಾರ ತಯಾರಿಕೆಗೆ ಬಳಸುವ ಸಾಮಗ್ರಿಯಲ್ಲಿ ಏನೋ
ಬದಲಾಗಿದೆ ಎಂದಾಯಿತಲ್ಲ. ಇದಲ್ಲದೇ ಅತ್ಯಂತ ಸೌಮ್ಯ ಬಟ್ಟೆಯಾದ ಕಾಟನ್ ಕೂಡ ಇತ್ತೀಚೆ ಅಲ್ಲಲ್ಲಿ ತುರಿಕೆಗೆ, ಅಲರ್ಜಿಗೆ ಕಾರಣವಾಗಿರುವುದು ವರದಿಯಾಗುತ್ತಿವೆ.

ಇವೆಲ್ಲ ಮನುಷ್ಯ ಗರ್ವದಿಂದ ಹೇಳಿಕೊಳ್ಳುವ ಜೆನೆಟಿಕ್ ಬದಲಾವಣೆ ಮಾಡಬ ಎಂದು ಬೀಗುವ ತಂತ್ರಜ್ಞಾನವೇ ಕಾರಣವೇನೋ ಎನ್ನುವ ಅನುಮಾನಕ್ಕೆ ಎಡೆ ಮಾಡಿಕೊಡುತ್ತಿದೆ. ಇದೆಲ್ಲವನ್ನು ಜಾಸೂಸಿ ಮಾಡಿ ಇಂಥದ್ದೇ ಕಾರಣ ಎಂದು ಹೇಳುವುದು ಸುಲಭದ ಮಾತಲ್ಲ. ಆಹಾರದ ಅಲರ್ಜಿ, ಚರ್ಮದ ಅಲರ್ಜಿ, ಧೂಳಿನ ಅಲರ್ಜಿ, ಕೀಟಗಳಿಂದಾಗಿ ಅಲರ್ಜಿ, ಸಾಕುಪ್ರಾಣಿಗಳಾದ ನಾಯಿ ಬೆಕ್ಕುಗಳಿಂದ, ಔಷಧದಿಂದ, ರಬ್ಬರ್ ಬಳಸುವುದರಿಂದ, ಶಿಲೀಂದ್ರದಿಂದ, ಜಿರಳೆಯಿಂದ ಹೀಗೆ
ಅದೆಷ್ಟೋ ಅಲರ್ಜಿಗಳು.

ಇವುಗಳಲ್ಲಿ ಕೆಲವು ಅನಾದಿ ಕಾಲದಿಂದ ಇದ್ದವಾದರೂ ಬಹಳಷ್ಟು ಹೊಸ ಅಲರ್ಜಿಗಳು ಈ ಪಟ್ಟಿಗೆ ದಿನಗಳೆದಂತೆ ಸೇರಿಕೊಳ್ಳುತ್ತಲಿವೆ. ಈ ಹೊಸ ಪಟ್ಟಿಯ ಉದ್ದ ಕಳೆದ ಎರಡೇ ದಶಕದಲ್ಲಿ ಹೆಚ್ಚಿದ್ದು ಇಲ್ಲಿ ಗಮನಿಸಬೇಕಾದದ್ದು. ಇದೆಲ್ಲ ಮತ್ತದೇ ಹಾಡಿನಂತೆ – ನಾವು ಈಗ ಕಳೆದ ಒಂದೆರಡು ದಶಕದಲ್ಲಿ ನಮ್ಮನ್ನು ಮತ್ತು ನಮ್ಮ ಸುತ್ತಲಿನದನ್ನು, ನಾವು ಬಳಸುವ
ವಸ್ತು, ಆಹಾರ ಇವೆಲ್ಲವನ್ನು ಆಧುನಿಕತೆಯ ಹೆಸರು ಕೊಟ್ಟು ಅತ್ಯಂತ ವೇಗದಲ್ಲಿ ಬದಲಿಸಿಕೊಳ್ಳುತ್ತಿದ್ದೇವೆ.

ನಮ್ಮ ದೇಹ ಈ ಬದಲಾವಣೆಗಳನ್ನು ಅಷ್ಟು ಸುಲಭದಲ್ಲಿ ಒಪ್ಪಿಕೊಳ್ಳದೇ ಅಲರ್ಜಿ ಎಂಬ ಹೆಸರಿನಲ್ಲಿ ತನ್ನ  ಪ್ರತಿರೋಧವನ್ನು ಹೊರಹಾಕುತ್ತಿದೆ. ಈಗ ಸದ್ಯ ಭಾರತ ಮತ್ತು ಸಮಶೀತೋಷ್ಟ್ಣ ದೇಶಗಳಲ್ಲಿ ಈ ಅಲರ್ಜಿಗಳು ಆ ಪ್ರಮಾಣದಲ್ಲಿ ಮನುಷ್ಯನನ್ನು ಕಾಡುತ್ತಿಲ್ಲವಾದರೂ ಕ್ರಮೇಣ ಇದೆಲ್ಲ ಪಾಶ್ಚಾತ್ಯ -ಶನ್‌ನಂತೆ ನಮಗರಿವಿಗೆ ಬಾರದಂತೆ ಒಳಮನೆ ಸೇರಿಕೊಳ್ಳಬಹುದು.

Leave a Reply

Your email address will not be published. Required fields are marked *

error: Content is protected !!