Sunday, 8th September 2024

’ಚ್ಯವನಪ್ರಾಶ’ ದಿಂದ ನೆನಪಾಗುವ ಚ್ಯವನ ಯಾರೆಂಬ ಕುತೂಹಲ

ತಿಳಿರು ತೋರಣ

ಶ್ರೀವತ್ಸ ಜೋಶಿ

srivathsajoshi@yahoo.com

ಹುಟ್ಟಿದ ಮರುಗಳಿಗೆಯಲ್ಲೇ ಪವಾಡ ತೋರಿದ್ದರಿಂದ ಹಿಡಿದು ಬದುಕಿನುದ್ದಕ್ಕೂ ಒಂದಲ್ಲಒಂದು ವೈಚಿತ್ರ್ಯವನ್ನು ಸೃಷ್ಟಿಸಿದ, ಕೆಲವೊಮ್ಮೆ ತಾನೇ ವೈಚಿತ್ರ್ಯಕ್ಕೆ ಒಳಗಾದ ವಿಶಿಷ್ಟ ವ್ಯಕ್ತಿ ಚ್ಯವನ. ಹತ್ತುಹಲವು ವೈವಿಧ್ಯಗಳಿಂದ ಕೂಡಿದ, ಸಿಹಿ ಕಹಿ ಉಪ್ಪು ಖಾರ ಹುಳಿ ಒಗರು ರುಚಿಗಳೆಲ್ಲದರ ಸಂಗಮವಾದ ಚ್ಯವನನ ಜೀವನಗಾಥೆಯದೂ ಒಂಥರದಲ್ಲಿ ಚ್ಯವನಪ್ರಾಶದ್ದೇ ರುಚಿ.

ಅಶ್ವಿನೀಕುಮಾರರು, ದೇವೇಂದ್ರ, ಚ್ಯವನ ಮಹರ್ಷಿ, ಸುಕನ್ಯೆ, ಮತ್ತು ಶರ್ಯಾತಿ ಮಹಾರಾಜ – ಈ ಐದು ಜನರನ್ನು ಭೋಜನದ ಕೊನೆಯಲ್ಲಿ ಸ್ಮರಿಸಿಕೊಳ್ಳಬೇಕಂತೆ. ಹಾಗೆನ್ನುತ್ತದೆ ಒಂದು ಶ್ಲೋಕ: ‘ಶರ್ಯಾತಿಂ ಚ ಸುಕನ್ಯಾಂ ಚ ಚ್ಯವನಂ ಚೇಂದ್ರಮಶ್ವಿನೌ| ಭೋಜನಾಂತೇ ಸ್ಮರನ್ನಕ್ಷ್ಣೋಃ ಅಂಗುಷ್ಠಾಗ್ರಾಂಬು ನಿಕ್ಷಿಪೇತ್||’ – ಅಂದರೆ ಸ್ಮರಿಸುವುದಷ್ಟೇ ಅಲ್ಲ, ಊಟವಾದ ಮೇಲೆ ಕೈ ತೊಳೆದು ಹೆಬ್ಬೆರಳಿನ ಮೂಲಕ ನೀರನ್ನು ಎರಡೂ ಕಣ್ಣುಗಳಿಗೆ ಬಿಡಬೇಕು.

ಹೀಗೆ ಮಾಡುವುದರಿಂದ ಕಣ್ಣುಗಳಿಗೆ ಸಂಬಂಧಪಟ್ಟ ರೋಗಗಳು ಬರುವುದಿಲ್ಲವಂತೆ. ಇದೊಂದು ಪೂರ್ವಜರ ನಂಬಿಕೆ. ನಾವೇನೂ ಇದನ್ನೀಗ ವಿಜ್ಞಾನದ ಒರೆಗಲ್ಲಿಗೆ ತಿಕ್ಕುವುದು ಬೇಡ. ನೇತ್ರ ದೋಷ ಪರಿಹಾರಕ್ಕೂ ಈ ಐವರ ಸ್ಮರಣೆಗೂ ಏನು ಸಂಬಂಧ ಎಂಬ ಪ್ರಶ್ನೆಗೆ ನಮಗೆ ಉತ್ತರ ಸಿಗಲಿಕ್ಕಿಲ್ಲ. ಅದರ ಅಗತ್ಯ ವೂ ಇಲ್ಲ. ನೇತ್ರ ದೋಷಕ್ಕೆ ಸಂಬಂಧವಿಲ್ಲದೆಯೂ ಪೌರಾಣಿಕ ವ್ಯಕ್ತಿಗಳನ್ನು ನೆನಪಿಸಿಕೊಂಡರೆ ನಷ್ಟವಾಗುವುದು ಏನಿಲ್ಲ. ಆದರೆ ಇದೇ ಐವರ ಹೆಸರುಗಳೇಕೆ ಈ ಪಟ್ಟಿಯಲ್ಲಿವೆ ಎಂಬ ಕುತೂಹಲಕ್ಕೆ ನಮಗೆ ಉತ್ತರ ಸಿಗುವುದು ಚ್ಯವನ ಮಹರ್ಷಿಯ ಕಥೆಯಲ್ಲಿ.

ಇದು ಮಹಾಭಾರತದಲ್ಲಿ ಬರುವ ಕಥೆ. ಯುಽಷ್ಠಿರನ ತೀರ್ಥ ಯಾತ್ರಾ ಸಮಯದಲ್ಲಿ ಈ ಕಥೆಯನ್ನು ಋಷಿ ಲೋಮಶನು ಯುಧಿಷ್ಠಿರನಿಗೆ ಹೇಳಿದನು. ಭೃಗು ಮಹರ್ಷಿ ಮತ್ತು ಪುಲೋಮೆ ದಂಪತಿಯ ಮಗ ಚ್ಯವನ. ಶುಕ್ರಾಚಾರ್ಯನ ಸಹೋದರ. ಚ್ಯವನ ಇನ್ನೂ ಗರ್ಭ ದಲ್ಲಿದ್ದಾಗ ಒಮ್ಮೆ ಪುಲೋಮೆಯನ್ನು ಒಬ್ಬ ರಾಕ್ಷಸನು ಅಪಹರಿಸಿಕೊಂಡು ಹೋಗಿದ್ದನು. ಅಪಹೃತಳಾದ ಪುಲೋಮೆ ಭಯಗ್ರಸ್ತೆಯಾಗಿದ್ದರಿಂದ ಅವಳಿಗಾದ ಆಘಾತಕ್ಕೇ ಗರ್ಭಸ್ರಾವವಾಯಿತು. ಆದರೂ ಶಿಶು ಬದುಕುಳಿಯಿತು. ಮಾತ್ರವಲ್ಲ, ಸೂರ್ಯನಿಗೆ ಸಮನಾದ ತೇಜಸ್ಸು ಆ ಶಿಶುವಿಗೆ ಇತ್ತು. ಅದು ಆ ರಾಕ್ಷಸನನ್ನು ಒಮ್ಮೆ ಕ್ರೂರ ದೃಷ್ಟಿಯಿಂದ ನೋಡಿದ್ದೇ ತಡ, ರಾಕ್ಷಸ ಅಲ್ಲಿಯೇ ಸುಟ್ಟು ಬೂದಿಯಾದನು. ಹೀಗೆ ಗರ್ಭದಿಂದ ‘ಚ್ಯುತ’ವಾಗಿ (ಜಾರಿ ಬಿದ್ದು) ಜನಿಸಿದ, ಜನಿಸಿದ ಕೂಡಲೇ ಪವಾಡ ನಡೆಸಿದ ಶಿಶುವಿಗೆ ‘ಚ್ಯವನ’ ಎಂದು ಹೆಸರಿಟ್ಟರು.

ಯುವಕನಾದ ಮೇಲೆ ಚ್ಯವನನು ಮನುಪುತ್ರಿಯಾದ ಆರುಷಿ ಎಂಬ ಕನ್ಯೆಯನ್ನು ಮದುವೆಯಾದನು. ಔರ್ವನೆಂಬ ಪುತ್ರನನ್ನೂ ಪಡೆದನು. ಆಮೇಲೆ ನರ್ಮದಾ ತೀರದಲ್ಲಿ ತಪಸ್ಸಿಗೆ ತೊಡಗಿದನು. ವೀರಾಸನದಲ್ಲಿ ಅಚಲವಾಗಿದ್ದು ಒಂದೇ ಸ್ಥಳದಲ್ಲಿ ಬಹಳಷ್ಟು ಕಾಲ ನಿಂತು ತಪಸ್ಸನ್ನಾಚರಿಸಿದನು. ತಪೋನಿರತನಾ ಗಿದ್ದಾಗ ಮೈಮೇಲೆ ಬಳ್ಳಿಗಳು ಹರಡಿದವು. ದೇಹದ ಸುತ್ತಲೂ ಹುತ್ತ ಬೆಳೆದು ಆತನ ಕಣ್ಣುಗಳು ಮಾತ್ರ ಹುತ್ತದ ರಂಧ್ರಗಳ ಮೂಲಕ ಮಿನುಗುಟ್ಟುತ್ತಿದ್ದವು.

ದೀರ್ಘಕಾಲದವರೆಗೆ ಹೀಗಿರಲು, ಶರ್ಯಾತಿ ಎಂಬ ಹೆಸರಿನ ರಾಜನು ಆ ರಮ್ಯ ತಾಣದಲ್ಲಿ ಬೇಟೆಯಾಡುವುದಕ್ಕಾಗಿ ತನ್ನ ಸೇನೆಯೊಂದಿಗೆ ಬಂದನು. ಚ್ಯವನ ಮುನಿಯು ಇದ್ದ ಹುತ್ತದ ಆಸುಪಾಸಿನಲ್ಲೇ ಬಿಡಾರ ಹೂಡಿದನು. ರಾಜನೊಂದಿಗೆ ಆತನ ಮಗಳಾದ ಸುಕನ್ಯೆಯೂ, ಸಖಿಯರೂ ವನವಿಹಾರಕ್ಕಾಗಿ ಬಂದಿದ್ದರು.
ರೂಪದಲ್ಲಿ ಮತ್ತು ವಯಸ್ಸಿನಲ್ಲಿ ಮದನನ ಮತ್ತೇರುವಂತೆ ಇದ್ದ ಸುಕನ್ಯೆಯು ಆ ವನದಲ್ಲಿ ಎಲ್ಲೆಂದರಲ್ಲಿ ಸ್ವಚ್ಛಂದವಾಗಿ ತಿರುಗಾಡತೊಡಗಿದಳು. ಒಂದೇ ವಸ್ತ್ರ ವನ್ನುಟ್ಟು ಅಲಂಕೃತಳಾಗಿ ಮಿಂಚಿನಂತೆ ಓಡಾಡುತ್ತಿರುವ, ಸಖಿಯರಿಲ್ಲದೇ ಒಬ್ಬಳೇ ಇದ್ದ ಸುಕನ್ಯೆಯನ್ನು ಚ್ಯವನನು ಹುತ್ತದೊಳಗಿಂದಲೇ ನೋಡಿದನು.
ಸೌಂದರ್ಯದ ಖನಿಯಾಗಿದ್ದ ಆಕೆಯನ್ನುದ್ದೇಶಿಸಿ ಮಾತನಾಡಿದನು.

ಅವಳಿಗೆಲ್ಲಿ ಅದು ಕೇಳಿಬರಬೇಕು? ಆದರೂ ಯಾವುದೋ ಧ್ವನಿ ಹುತ್ತದೊಳಗಿಂದಲೇ ಬಂದಿರಬಹುದು ಎಂದುಕೊಂಡ ಸುಕನ್ಯೆ ಹುತ್ತದ ಬಳಿಗೆ ಹೋದಳು. ಅದರ ರಂಧ್ರಗಳ ಮೂಲಕ ಕಾಣಬರುವ ಬೆಳಕನ್ನು ಕಂಡು ಕುತೂಹಲದಿಂದ ಒಂದು ಮುಳ್ಳಿನ ಮೊನೆಯಿಂದ ಚುಚ್ಚಿದಳು. ಅವು ಚ್ಯವನ ಮುನಿಯ ಕಣ್ಣುಗಳು! ನೋಡ ನೋಡುತ್ತಿದ್ದಂತೆ ಹುತ್ತದ ರಂಧ್ರಗಳಿಂದ ರಕ್ತ ಹರಿಯತೊಡಗಿತು. ಭಯಭೀತಳಾದ ಸುಕನ್ಯೆ ತನ್ನ ಸಖಿಯರನ್ನು ಹುಡುಕಿ ಅವರೊಂದಿಗೆ ಬಿಡಾರಕ್ಕೆ ಓಡಿದಳು. ನಡೆದ ಘಟನೆಯ ಬಗ್ಗೆ ಯಾರಲ್ಲೂ ಹೇಳಲಿಲ್ಲ.

ಒಂದೆರಡು ದಿನಗಳಲ್ಲಿ ಶರ್ಯಾತಿ ರಾಜನ ಸೇನೆಯಲ್ಲಿ ಮತ್ತೊಂದು ವಿಚಿತ್ರ ಘಟನೆ ನಡೆಯಿತು. ಸೇನಾ ಪರಿವಾರ ದವರೆಲ್ಲ ಮಲಮೂತ್ರ ವಿಸರ್ಜನೆ ನಿಂತು ಹೋಗಿ ರೋಗಪೀಡಿತರಾದರು. ಇದಕ್ಕೆ ಕಾರಣವೇನೆಂದು ತಿಳಿಯದೆ ರಾಜನು ಆಶ್ರಮವು ಅಶುಚಿಯಾಗುವ ಕಾರ್ಯವನ್ನು ಯಾರಾದರೂ ಮಾಡಿದಿರಾ ಎಂದು ಪ್ರಶ್ನಿಸಿದನು. ಆಗ ಸೈನಿಕರೆಲ್ಲರೂ ‘ನಾವು ಯಾರೂ ಅಪಕೃತಿಯನ್ನು ಮಾಡಿದ್ದುದು ಗೊತ್ತಿಲ್ಲ. ನಿಮಗಿಷ್ಟವಿದ್ದರೆ ನೀವೇ ಕಂಡುಕೊಳ್ಳಬೇಕು’ ಎಂದರು. ಅನಂತರ ರಾಜನು ಸ್ವತಃ ಸಾಮ ಮತ್ತು ಉಗ್ರ ವಿಧಾನಗಳನ್ನು ಬಳಸಿ ತನ್ನ ಗುಂಪಿನಲ್ಲಿದ್ದ ಎಲ್ಲರನ್ನೂ, ಮಿತ್ರಗಣಗಳನ್ನೂ ಪ್ರಶ್ನಿಸಿದನು. ಆ ಸೇನೆಯು ಮಲಬದ್ಧತೆಯಿಂದ ಪೀಡೆಗೊಳಪಟ್ಟು ದುಃಖಿಸುತ್ತಿರುವುದನ್ನು ಮತ್ತು ತನ್ನ ತಂದೆಯೂ ದುಃಖಿತನಾಗಿರುವುದನ್ನು ಗಮನಿಸಿದ ಸುಕನ್ಯೆ, ನಡೆದಿದ್ದೆಲ್ಲವನ್ನೂ ತಂದೆಗೆ ವಿವರಿಸಿದಳು.

‘ನಾನು ತಿರುಗಾಡುತ್ತಿದ್ದಾಗ ಒಂದು ಹುತ್ತದ ಒಳಗಿಂದ ಹೊರಸೂಸುವ ಬೆಂಕಿಯತೆ ಹೊಳೆಯುತ್ತಿರುವುದನ್ನು ನೋಡಿದೆನು. ಅದೊಂದು ಬೆಂಕಿಯ ಹುಳು ವಾಗಿರಬಹುದು ಎಂದು ತಿಳಿದು ಅದನ್ನು ಚುಚ್ಚಿದೆನು’ ಎಂದಳು. ಇದನ್ನು ಕೇಳಿದ ಶರ್ಯಾತಿಯು ಕೂಡಲೇ ಹುತ್ತದೆಡೆಗೆ ಧಾವಿಸಿದನು ಮತ್ತು ಅಲ್ಲಿ ತಪೋನಿರತ ನಾಗಿದ್ದ ಚ್ಯವನನನ್ನು ಕಂಡನು. ರಾಜನು ಕೈಮುಗಿದು ‘ಅಜ್ಞಾನದಿಂದ ಬಾಲಕಿಯು ಮಾಡಿದುದನ್ನು, ಸೇನೆಗೋಸ್ಕರವಾಗಿ ಕ್ಷಮಿಸಬೇಕು’ ಎಂದು ಯಾಚಿಸಿದನು. ಆಗ ಚ್ಯವನನು ‘ನಾನೀಗ ಕಣ್ಣು ಕಳೆದುಕೊಂಡು ಕುರುಡಾಗಿದ್ದೇನೆ. ನನ್ನ ಶುಶ್ರೂಷೆಗಾಗಿ ಸುಕನ್ಯೆಯನ್ನು ನೀನು ನನಗೆ ಮದುವೆ ಮಾಡಿಕೊಡಬೇಕು’ ಎಂದು ಕೇಳಿದನು.

ಶರ್ಯಾತಿ ಚಿಂತಾಕ್ರಾಂತನಾದನು. ಮುದ್ದು ಮಗಳನ್ನು ವೃದ್ಧನಾದ ಹಾಗೂ ಅಂಧನಾದ ಈ ಋಷಿಗೆ ಧಾರೆಯೆರೆಯಬೇಕೇ, ಆಗುವುದಿಲ್ಲವೆಂದು ಹೇಳಿದರೆ ಅದರ ಪರಿಣಾಮವೇನಾಗಬಹುದೋ ಎಂದು ಭಯಭೀತನಾದನು. ಆಗ ಸುಕನ್ಯೆ ತನ್ನ ಒಬ್ಬಳ ಸಲುವಾಗಿ ಇಷ್ಟೆಲ್ಲಾ ಮಂದಿ ಪ್ರಾಣ ಕಳೆದುಕೊಳ್ಳುವುದು ಯುಕ್ತವಲ್ಲ ವೆಂದು ತಿಳಿದು, ಚ್ಯವನನೊಂದಿಗೆ ಮದುವೆಗೆ ಮತ್ತು ಅವನ ಸೇವೆ ಮಾಡುವುದಕ್ಕೆ ಒಪ್ಪಿದಳು. ಹಾಗೆಯೇ ನಡೆದುಕೊಂಡಳು. ಶರ್ಯಾತಿಯೂ, ಅಷ್ಟು ಹೊತ್ತಿಗೆಲ್ಲ ಆರೋಗ್ಯ ಹೊಂದಿದ ಸೈನಿಕರೂ, ರಾಜ್ಯಕ್ಕೆ ಮರಳಿದರು.

ಒಂದು ದಿನ ಸುಕನ್ಯೆಯು ಕೊಳದಲ್ಲಿ ಮಿಂದು ಒದ್ದೆಯ ಬಟ್ಟೆಯಲ್ಲಿಯೇ ಹೊರಬರುತ್ತಿದ್ದಾಗ ಮಾರುವೇಷದಲ್ಲಿದ್ದ ಅಶ್ವಿನೀಕುಮಾರರು ಆಕೆಯನ್ನು ಕಂಡು ಮೋಹ ಭರಿತರಾದರು. ಪರಿಚಯ ಕೇಳಿದರು. ಸುಕನ್ಯೆ ತನ್ನ ವಿವರಗಳನ್ನು ತಿಳಿಸಿದಳು. ಅದಕ್ಕೆ ಅಶ್ವಿನೀಕುಮಾರರು ‘ನಿನ್ನ ತಂದೆಯು ನಿನ್ನಂಥ ಸುಂದರಿಯನ್ನು ಮುದುಕನಿಗೆ ಹೇಗೆ ಕೊಟ್ಟನು? ಕಾಡಿನ ಮಧ್ಯದಲ್ಲಿ ನೀನು ಮಿಂಚಿನ ಮಾಲೆಯಂತೆ ಬೆಳಗುತ್ತಿದ್ದೀಯೆ. ದೇವತೆಗಳಲ್ಲಿಯೂ ಕೂಡ ನಿನ್ನ ಸರಿಸಮಳಾದವಳನ್ನು ನಾವು ಕಂಡಿಲ್ಲ. ಸರ್ವಾಭರಣ ಭೂಷಿತೆಯಾಗಿ ಉತ್ತಮ ಉಡುಪುಗಳನ್ನು ಧರಿಸಿದರೆ ನೀನು ಬಹಳವಾಗಿ ಶೋಭಿಸುತ್ತೀಯೆ. ಹೀಗೆ ಕೊಳಕು ತುಂಬಿ ಇದ್ದರೆ ಇಲ್ಲ. ನೀನು ಯಾವ ಕಾರಣಕ್ಕಾಗಿ ಕಾಮಭೋಗಗಳಿಲ್ಲದೇ ಮುದಿತನದಿಂದ ಹಾಳುಬಿದ್ದ, ಪೋಷಣೆ ರಕ್ಷಣೆಗಳಿಗೆ ಅಸಮರ್ಥನಾದ ಗಂಡನ ಸೇವೆಯನ್ನು ಮಾಡು ತ್ತಿದ್ದೀಯೆ? ಚ್ಯವನನನ್ನು ಬಿಟ್ಟು ನಮ್ಮನ್ನು ನಿನ್ನ ಪತಿಯನ್ನಾಗಿ ಸ್ವೀಕರಿಸಿದರೆ ಒಳ್ಳೆಯದು. ವೃಥಾ ನಿನ್ನ ಯೌವನವನ್ನು ಕಳೆಯಬೇಡ!’ ಎಂದು ಪ್ರಲೋಭನೆ ಒಡ್ಡಿದರು.

ಅಚಲ ಪತಿಭಕ್ತಿಯ ಸುಕನ್ಯೆ ಅಶ್ವಿನೀಕುಮಾರರ ಸಕ್ಕರೆಮಾತುಗಳಿಗೆ ಮರುಳಾಗಲಿಲ್ಲ. ಬದಲಿಗೆ ಕುಪಿತಳಾಗಿ ಅವರನ್ನು ಶಪಿಸುವವಳಿದ್ದಳು. ಆಗಲೇ ಅಶ್ವಿನೀಕುಮಾರರು ತಮ್ಮ ನಿಜರೂಪವನ್ನು ತೋರಿ ವರವನ್ನು ಬೇಡುವಂತೆ ಹೇಳಿದರು. ಸುಕನ್ಯೆ ತನ್ನ ಪತಿ ಚ್ಯವನನಿಗೆ ಯೌವನ ಕರುಣಿಸುವಂತೆ ಅವರಲ್ಲಿ ಬೇಡಿದಳು. ಆಗ ಅಶ್ವಿನೀಕುಮಾರರು ಚ್ಯವನನನ್ನು ಬರಮಾಡಿಸಿದರು. ಸಿದ್ಧೌಷಧಿಗಳಿಂದಲೂ ವನಸ್ಪತಿಗಳಿಂದಲೂ ತೆಗೆದ ರಸದ ಮಡುವಿನಲ್ಲಿ
ಚ್ಯವನ ನನ್ನು ಕರೆದೊಯ್ದು ನಿಲ್ಲಿಸಿ ತಾವೂ ಅದರಲ್ಲಿಳಿದರು.

ಮೂವರೂ ಏಕಕಾಲಕ್ಕೆ ಮುಳುಗಿ ಮೇಲೆದ್ದರು. ಮೇಲಕ್ಕೆದ್ದ ಮೂವರೂ ಒಂದೇ ರೂಪ, ವಸ್ತ್ರ, ಆಭರಣಗಳಿಂದ ಕಂಗೊಳಿಸುತ್ತಿರುವುದನ್ನು ಕಂಡ ಸುಕನ್ಯೆ ಗಾಬರಿಯಾದಳು. ಈ ಮೂವರಲ್ಲಿ ತನ್ನ ಪತಿ ಯಾರೆಂಬುದನ್ನು ಕಂಡುಹಿಡಿಯಲಾಗದೆ ಅಶ್ವಿನೀಕುಮಾರರನ್ನು ಸ್ತೋತ್ರ ಮಾಡುತ್ತ ತನಗೆ ತನ್ನ ಪತಿಯನ್ನು
ತೋರಿಸಿಕೊಡುವಂತೆ ಪ್ರಾರ್ಥಿಸಿದಳು. ಅವರ ಅನುಗ್ರಹದಿಂದ, ತನ್ನ ಪಾತಿವ್ರತ್ಯ ಮಹಿಮೆಯಿಂದ, ಚ್ಯವನನನ್ನು ಗುರುತಿಸಿ ಕೈ ಹಿಡಿದಳು. ತಾನು ಬಯಸಿದ್ದ ವಯಸ್ಸನ್ನೂ ರೂಪವನ್ನೂ ಮತ್ತು ಪತ್ನಿಯನ್ನೂ ಪಡೆದು ಸಂತೋಷಗೊಂಡ ಚ್ಯವನನು ಅಶ್ವಿನೀಕುಮಾರರಿಗೆ ವಚನವನ್ನಿತ್ತನು: ‘ವೃದ್ಧನಾಗಿದ್ದ ನನ್ನನ್ನು ಈಗ
ರೂಪಸಂಪನ್ನನೂ ವಯಸ್ಸಿನಲ್ಲಿ ಸರಿಯಾದವನೂ ಆಗುವಂತೆ ಮಾಡಿದ್ದೀರಿ. ಲಾವಣ್ಯವತಿ ಸುಕನ್ಯೆಯನ್ನೇ ಪತ್ನಿಯನ್ನಾಗಿ ಒದಗಿಸಿದ್ದೀರಿ.

ಇದರಿಂದ ಸಂತೋಷಗೊಂಡ ನಾನು ದೇವೇಂದ್ರನ ಕಣ್ಣೆದುರಿಗೇ ನಿಮಗೆ ಯಜ್ಞದಲ್ಲಿ ಹವಿರ್ಭಾಗ ಸಿಗುವ ಹಾಗೆ ಮತ್ತು ನೀವೂ ಸೋಮರಸವನ್ನು ಕುಡಿಯುವ ಹಾಗೆ ಮಾಡುತ್ತೇನೆ.’ ಅದನ್ನು ಕೇಳಿ ಸಂತೋಷಗೊಂಡ ಅಶ್ವಿನೀಕುಮಾರರು ಸ್ವರ್ಗಕ್ಕೆ ತೆರಳಿದರು. ಚ್ಯವನ-ಸುಕನ್ಯೆಯರಾದರೋ ಸುರರಂತೆ ಒಂದಾಗಿ ವಿಹರಿಸಿದರು. ಇತ್ತ ಶರ್ಯಾತಿಯು ತನ್ನ ಮಮತೆಯ ಮಗಳನ್ನು ನರಕದಲ್ಲಿ ನೂಕಿದೆನೆಂದು ದುಃಖಿಸುತ್ತ ಕಾಲಕಳೆಯುತ್ತಿದ್ದನು. ನೆಮ್ಮದಿಗಾಗಿ ಒಂದು ಯಜ್ಞವನ್ನು ಮಾಡಬೇಕು ಎಂದು ನಿಶ್ಚಯಿಸಿ ಅದಕ್ಕೆ ಮಗಳು ಮತ್ತು ಅಳಿಯನನ್ನು ಆಹ್ವಾನಿಸಲು ಆಶ್ರಮಕ್ಕೆ ಬಂದನು.

ಆಶ್ರಮದಲ್ಲಿ ತನ್ನ ಮಗಳು ಸುಕನ್ಯೆಯು ಮುಪ್ಪಾದ ಚ್ಯವನ ಋಷಿಯನ್ನು ಬಿಟ್ಟು ಬೇರೆ ತರುಣನೊಂದಿಗಿರುವುದನ್ನು ಕಂಡು ಬಹಳ ಸಿಟ್ಟಿಗೆದ್ದನು. ತಂದೆ ಬಂದದ್ದನ್ನು ಕಂಡು ಸುಕನ್ಯೆಯು ಧಾವಿಸಿ ಬಂದು ನಮಸ್ಕರಿಸಲು, ರಾಜನು ‘ಇದೇನಿದು? ಇಂದ್ರಿಯ ಚಾಪಲ್ಯಕ್ಕೊಳಗಾಗಿ ದಾರಿತಪ್ಪಿರುವೆಯಾ? ಈತ
ನ್ಯಾರು? ಪೂಜ್ಯ ಚ್ಯವನರು ಎಲ್ಲಿ?’ ಎಂದು ದೀನನಾಗಿ ಕೇಳಿದನು. ಸುಕನ್ಯೆಯು ನಗುತ್ತ ‘ಅಪ್ಪಾ ಇವರೇ ನನ್ನ ಪತಿ ನಿನ್ನ ಅಳಿಯ ಚ್ಯವನರು!’ ಎಂದು ನಡೆದ ಘಟನೆಯನ್ನು ವಿವರಿಸಿದಳು.

ಇದನ್ನು ಕೇಳಿದ ಮಹಾರಾಜನು ಆನಂದದಿಂದ ಅವರಿಬ್ಬರನ್ನು ಆಲಂಗಿಸಿ ರಾಜಧಾನಿಗೆ ಕರೆದೊಯ್ದನು. ಚ್ಯವನಋಷಿಯೇ ಪ್ರಧಾನಹೋತೃವಾಗಿ ಯಜ್ಞವು ಸಾಂಗವಾಗಿ ನೆರವೇರಿತು. ಆ ಯಜ್ಞಕ್ಕೆ ಸಕಲ ದೇವತೆಗಳೂ, ಋಷಿಗಳೂ, ಬ್ರಾಹ್ಮಣರೂ, ರಾಜಮಹಾರಾಜರೂ ಬಂದಿದ್ದರು. ಅಶ್ವಿನೀಕುಮಾರರಿಗೂ ಹವಿಸ್ಸನ್ನು ಅರ್ಪಿಸಲಾಯಿತು. ಅಷ್ಟೇಅಲ್ಲ, ಚ್ಯವನಋಷಿ ಅವರಿಗೆ ಸೋಮರಸವನ್ನು ಪಾನಮಾಡಲು ನೀಡಿದನು. ಇದನ್ನು ಕಂಡ ದೇವೇಂದ್ರನು ಬಹಳ ಸಿಟ್ಟಿನಿಂದ ‘ಇವರು ದೇವಪುತ್ರರ ವೈದ್ಯರಾದುದರಿಂದ ಸೋಮಪಾನಕ್ಕೆ ಅರ್ಹರಲ್ಲ. ಇವರಿಗೆ ಸೋಮರಸವನ್ನು ಕೊಡಬೇಡಿ!’ ಎಂದು ಆರ್ಭಟಿಸಿದನು.

ಚ್ಯವನನು ಹೇಳಿದನು: ‘ರೂಪ ಮತ್ತು ಆರ್ಥಿಕ ಸಂಪತ್ತುಗಳನ್ನು ಹೊಂದಿದ ಈ ಮಹಾತ್ಮರನ್ನು ಅಪಮಾನಗೊಳಿಸಬೇಡ! ಇವರಿಬ್ಬರು ನನ್ನನ್ನು ವೃದ್ಧಾಪ್ಯವೇ ಇಲ್ಲದ ದೇವತೆಗಳಂತೆ ಮಾಡಿದ್ದಾರೆ. ಏಕೆ ಇವರು ನಿನ್ನ ಮತ್ತು ಇತರ ದೇವತೆಗಳ ಸಾಲಿನಲ್ಲಿ ಅರ್ಹರಲ್ಲ? ಅಶ್ವಿನೀಕುಮಾರರೂ ದೇವತೆಗಳೇ ಎನ್ನುವುದನ್ನು ತಿಳಿ!’ ಅದಕ್ಕೆ ಇಂದ್ರನು ಇಂತೆಂದನು: ‘ಅವರು ಚಿಕಿತ್ಸಕರು. ಕರ್ಮವನ್ನೆಸಗುವವರು. ಕಾಮರೂಪ ದಿಂದಿರುವವರು.

ಆಗಾಗ ಮರ್ತ್ಯರ ಲೋಕಗಳಿಗೂ ತಿರುಗುತ್ತಿರುತ್ತಾರೆ. ಅಂದಮೇಲೆ ಅವರು ಹೇಗೆ ಸೋಮಕ್ಕೆ ಅರ್ಹರಾಗುತ್ತಾರೆ?’ ಇಂದ್ರನ ಮಾತನ್ನು ಚ್ಯವನನು ಕಡೆಗಣಿಸಲು ಕೋಪಗೊಂಡ ಇಂದ್ರನು ಚ್ಯವನನನ್ನು ಕೊಲ್ಲಲಿಕ್ಕೆಂದು ವಜ್ರಾಯುಧ ಮೇಲಕ್ಕೆತ್ತಿದನು. ಎತ್ತಿದ ಕೈ ಹಾಗೇ ನಿಲ್ಲಲಿ ಎಂದು ಚ್ಯವನಋಷಿ ಶಪಿಸಿದನು. ಇಂದ್ರನ ತೋಳು ಹಾಗೇ ಮೇಲಕ್ಕೆ ನಿಂತುಬಿಟ್ಟಿತ್ತು. ಇದನ್ನು ಕಂಡ ಸಕಲದೇವತೆಗಳೂ ಚ್ಯವನಋಷಿಗೆ ಶರಣಾಗಿ ಇಂದ್ರನನ್ನು ಕ್ಷಮಿಸಲು ಪ್ರಾರ್ಥಿಸಿದರು.

ಇಂದ್ರನೂ ಕೂಡ ಮೆತ್ತಗಾಗಿ ‘ಪೂಜ್ಯರೇ ನನ್ನ ಅಪರಾಧವನ್ನು ಕ್ಷಮಿಸಿ. ಅಶ್ವಿನೀಕುಮಾರರು ಇಂದಿನಿಂದ ದೇವತೆಗಳ ಸಾಲಿನಲ್ಲಿ ಕುಳಿತು ಸೋಮ ಪಾನ ಮಾಡಲು ನನ್ನ ಒಪ್ಪಿಗೆ ಇದೆ’ ಎಂದು ಹೇಳಿದನು. ದಯಾಳುವಾದ ಚ್ಯವನಋಷಿಯು ಇಂದ್ರನಿಗೆ ಕೃಪಾದೃಷ್ಟಿ ಬೀರಲು ಇಂದ್ರನ ತೋಳು ಮೊದಲಿ ನಂತಾಯಿತು. ಅಂದಿನಿಂದ ಅಶ್ವಿನೀಕುಮಾರರಿಗೂ ಸೋಮಪಾನದ ಅರ್ಹತೆ ಪ್ರಾಪ್ತವಾಯಿತು. ಹೀಗೆ ಚ್ಯವನನ ಕಥೆಯಲ್ಲಿ ಅಶ್ವಿನೀಕುಮಾರರು, ದೇವೇಂದ್ರ, ಶರ್ಯಾತಿ ಮಹಾರಾಜ ಮತ್ತು ಸುಕನ್ಯೆ- ಇವರೆಲ್ಲರೂ ಬರುತ್ತಾರೆ. ಈಗ ಗೊತ್ತಾಯಿತಲ್ಲ ‘ಐ’ಪ್ರಾಬ್ಲೆಮ್ಸ್ ನಿವಾರಣೆಯ ಆ ಶ್ಲೋಕದಲ್ಲಿ ಐವರ ಹೆಸರು ಏಕೆ ಬರುವುದೆಂದು? ಆದರೆ ಚ್ಯವನನ ಕಥೆ ಅಲ್ಲಿಗೇ ನಿಲ್ಲುವುದಿಲ್ಲ.

ಚ್ಯವನ ಮತ್ತೆ ತಪಸ್ಸನ್ನು ಮುಂದುವರಿಸುತ್ತಾನೆ. ಈ ಬಾರಿ ನೀರಿನಲ್ಲಿ ಮುಳುಗಿ ತಪಸ್ಸು! ಹಾಗೆ ತಪಸ್ಸು ಮಾಡುತ್ತಿದ್ದಾಗ ಒಮ್ಮೆ ಅಕಸ್ಮಾತ್ತಾಗಿ ಬೆಸ್ತರ ಬಲೆಗೆ ಸಿಕ್ಕಿಬೀಳುತ್ತಾನೆ. ಬಲೆಯಲ್ಲಿದ್ದದ್ದು ಮೀನಲ್ಲ ಒಬ್ಬ ಋಷಿಯೆಂದರಿತ ಬೆಸ್ತರು ತಮಗೆ ಸಿಗಲಿದ್ದ ಮೀನು ನಷ್ಟವಾಯಿತೆಂದು ಹಲುಬುತ್ತಾರೆ. ಅಷ್ಟರಲ್ಲಿ ಆ ದಾರಿ ಯಾಗಿ ಬಂದ ನಹುಷ ರಾಜನು ಚ್ಯವನನನ್ನು ಬಿಡಿಸುವ ಉದ್ದೇಶದಿಂದ ಆ ಬೆಸ್ತರನ್ನು ಕಂಡು, ಅಯ್ಯಾ ಈತನನ್ನು ಬಿಟ್ಟುಬಿಡಿ, ಈತನ ತೂಕದಷ್ಟು ಚಿನ್ನವನ್ನು ನಿಮಗೆ ಕೊಡುತ್ತೇನೆಂದು ಹೇಳುತ್ತಾನೆ. ಬೆಸ್ತರೂ ಅದಕ್ಕೆ ಒಪ್ಪಿಕೊಳ್ಳುತ್ತಾರೆ. ಬಳಿಕ ಚ್ಯವನಋಷಿಯನ್ನು ತಕ್ಕಡಿಯಲ್ಲಿ ಕುಳ್ಳಿರಿಸಿ ತೂಕ ಮಾಡ ತೊಡಗಿದಾಗ, ನಹುಷನ ರಾಜ್ಯವನ್ನೆಲ್ಲ ಅರ್ಪಿಸಿದರೂ ಸಾಕಾಗುವುದಿಲ್ಲ. ನಹುಷ ದಿಕ್ಕುತೋರದವನಾಗುತ್ತಾನೆ.

ಆಗ ಅಲ್ಲಿಗೆ ಬಂದ ಗವಿಜಾತ ಮುನಿಯು ‘ಪವಿತ್ರವಾದ ಬ್ರಾಹ್ಮಣನ ದೇಹಕ್ಕೆ ಸರಿದೂಗುವಂಥ ವಸ್ತು ಆಕಳೇ ಹೊರತು ಬೇರೆ ಯಾವುದೂ ಆಗಲಾರದು’ ಎನ್ನುತ್ತಾನೆ. ಒಂದು ಗೋವನ್ನು ತರಿಸಿ ತೂಗಿದಾಗ ತಕ್ಕಡಿ ಸಮತೂಕವಾಗುತ್ತದೆ! ಇನ್ನೊಮ್ಮೆ ಚ್ಯವನ ಕಾಣಿಸಿಕೊಳ್ಳುವುದು ಕುಶಿಕನ ವೃತ್ತಾಂತದಲ್ಲಿ. ಚಂದ್ರವಂಶದ ಪುರುರಾಜನ ಸಂತತಿಯಲ್ಲಿ ಜನಿಸಿದ ಕುಶ ರಾಜನ ಮಗ ಕುಶಿಕ. ಇವನ ಮಗ ಗಾಧಿ ರಾಜ. ಈತನು ಪುತ್ರ ಪ್ರಾಪ್ತಿಗಾಗಿ ಬಹಳ ಕಾಲ ತಪಸ್ಸು ಮಾಡುತ್ತಾನೆ. ಭೃಗುವಂಶವೂ ಕುಶಿಕವಂಶವೂ ಬೆರೆಯುವುದೆಂಬ ಸಮಾಚಾರ ಚ್ಯವನ ಋಷಿಯ ಕಿವಿಗೆ ಬೀಳುತ್ತದೆ. ಅದನ್ನು ಸಹಿಸಲೊಲ್ಲದೆ ಏನಾದರೊಂದು ಎತ್ತುಗಡಿಯಿಂದ ಕುಶಿಕವಂಶವನ್ನೇ ನಿರ್ಮೂಲಗೊಳಿಸಬೇಕೆಂಬ ದುರುದ್ದೇಶದಿಂದ ಚ್ಯವನ ಕುಶಿಕನ ಅರಮನೆಗೆ ಹೋಗುತ್ತಾನೆ. ರಾಜದಂಪತಿಯು ಭಯಭಕ್ತಿ ಗಳಿಂದ ಸತ್ಕರಿಸುತ್ತಾರೆ. ಚ್ಯವನ ಎಷ್ಟೋ ದಿನಗಳವರೆಗೆ ಅಲ್ಲಿಯೇ ನಿಲ್ಲುತ್ತಾನೆ.

ಇವರ ಭಕ್ತಿವಿಶ್ವಾಸಗಳು ಹೆಚ್ಚುತ್ತಲೇ ಇರುತ್ತವೆ. ಚ್ಯವನನು ನಾನಾ ಪ್ರಕಾರಗಳಿಂದ ರಾಜದಂಪತಿಯನ್ನು ಪೀಡಿಸಿದರೂ ಅವರು ಆ ಕಷ್ಟಗಳನ್ನೆಲ್ಲ ಸಂತೋಷ ದಿಂದಲೇ ಸಹಿಸಿಕೊಳ್ಳುತ್ತಾರೆ. ಕೊನೆಗೂ ಚ್ಯವನ ಕರ್ತವ್ಯಶೂನ್ಯನಾಗಿ ಆ ದಂಪತಿಯ ಸಹನೆಗೆ ಮೆಚ್ಚಿ ‘ನಿಮ್ಮ ವಂಶದಲ್ಲಿ ಬ್ರಹ್ಮತೇಜಸ್ಸಿನಿಂದ ಮೆರೆದು ಕೀರ್ತಿಶಾಲಿ ಯಾಗುವ ಮಹಾಪುರುಷನು ಬೇಗನೆ ಹುಟ್ಟುವನು. ನಿಮ್ಮ ವಂಶವೂ ವಿಖ್ಯಾತವಾಗುವುದು’ ಎಂದು ಹರಸಿ ಬೀಳ್ಕೊಡುತ್ತಾನೆ. ಆ ತರುವಾಯ ಕುಶಿಕನ ವಂಶದಲ್ಲಿ ವಿಶ್ವಾಮಿತ್ರನು ಗಾಽ ರಾಜನಿಗೆ ಮಗನಾಗಿ ಹುಟ್ಟುತ್ತಾನೆ. ಕೌಶಿಕ ಗೋತ್ರ ಮುಂದುವರಿಯುತ್ತದೆ.

ಅಂತೂ, ಹುಟ್ಟಿದ ಮರುಗಳಿಗೆಯಲ್ಲೇ ಪವಾಡ ತೋರಿದ್ದರಿಂದ ಹಿಡಿದು ಬದುಕಿನುದ್ದಕ್ಕೂ ಒಂದಲ್ಲಒಂದು ವೈಚಿತ್ರ್ಯವನ್ನು ಸೃಷ್ಟಿಸಿದ ಅಥವಾ ಕೆಲವೊಮ್ಮೆ ತಾನೇ ವೈಚಿತ್ರ್ಯಕ್ಕೆ ಒಳಗಾದ ವಿಶಿಷ್ಟ ವ್ಯಕ್ತಿ ಚ್ಯವನ. ದೇವತೆಗಳ ವೈದ್ಯರಾದ ಅಶ್ವಿನೀಕುಮಾರರು ಚ್ಯವನನ ಮುಪ್ಪನ್ನು ಹೋಗಲಾಡಿಸಿ ಆತನನ್ನೊಬ್ಬ ಕಾಂತಿಯುಕ್ತ ತರುಣನನ್ನಾಗಿ ಮಾಡಲು ಉಪಯೋಗಿಸಿದ್ದ ಔಷಧಿಯೇ ಇಂದಿನ ‘ಚ್ಯವನಪ್ರಾಶ’ ಇರಬಹುದೇ? ನನಗನಿಸುತ್ತದೆ, ಹತ್ತು ಹಲವು ವೈವಿಧ್ಯಗಳಿಂದ ಕೂಡಿದ, ಸಿಹಿ ಕಹಿ ಉಪ್ಪು ಖಾರ ಹುಳಿ ಒಗರು ರುಚಿಗಳೆಲ್ಲದರ ಸಂಗಮವಾದ ಚ್ಯವನನ ಜೀವನಗಾಥೆ ಯದೂ ಒಂಥರದಲ್ಲಿ ಚ್ಯವನಪ್ರಾಶದ್ದೇ ರುಚಿ. ನೀವೇನಂತೀರಿ?

error: Content is protected !!