Thursday, 19th September 2024

ಸಿನಿ-ಮಾ ಎಂಬುದು ಸಿನ್-ಮಾ ಆಗಬಾರದು

ಪ್ರಾಣೇಶ್ ಪ್ರಪಂಚ

ಗಂಗಾವತಿ ಪ್ರಾಣೇಶ್

60-70ರ ದಶಕಗಳಲ್ಲಿ ಹುಟ್ಟಿದ ನಮಗೆ ತುಂಬಾ ಸಿನಿಮಾಗಳ ಹುಚ್ಚು, ವೈಟ್ ಆಂಡ್ ಬ್ಲಾಕ್ ಸಿನಿಮಾಗಳು, ರಾಜಕುಮಾರ್, ಭಾರತಿ ಬಾಲಕೃಷ್ಣ, ಕಲ್ಪನಾ, ಅಕ್ಷರಶಃ ನಮಗೆ ಹುಚ್ಚೇ ಹಿಡಿಸಿದ್ದರು ಎನ್ನಬಹುದು, ರಾಜಕುಮಾರರ ರೂಪು, ಮೈಕಟ್ಟು, ಡೈಲಾಗ್ ಡೆಲಿವರಿ ನಮಗೆ ಬರಬಾರದೆ , ನಮಗೆ ಕೊಡು ದೇವರೇ ಎಂದು ಬೇಡುತ್ತಿದ್ದ ದಿನಗಳವು.

ಕೌಟುಂಬಿಕ ಸಿನಿಮಾಗಳು ನಮ್ಮನ್ನು ಕುಟುಂಬ, ಪರವಾರ ಪ್ರೇಮಿಗಳನ್ನಾಗಿ ಮಾಡಿದವು. ತಾಯಿ, ತಂದೆ, ತಂಗಿಯರು ಇವರ ನ್ನೆಲ್ಲ ಪ್ರೀತಿಸಬೇಕು, ಇವರಿಗಾಗಿ ದುಡಿಯಬೇಕು, ಗುರು ಹಿರಿಯರ ಮಾತಿನಂತೆ ನಡೆದರೆ ನಮ್ಮ ಬಾಳು ಬಂಗಾರವಾಗುತ್ತದೆ, ನಾವು ಹುಟ್ಟಿದ ಹಳ್ಳಿಯೇ ಶ್ರೇಷ್ಠ, ಹುಟ್ಟಿದ ಊರೇ ಶ್ರೇಷ್ಠ ಎಂಬ ತತ್ವಗಳನ್ನು ಬಿಂಬಿಸಿದ ಭೂಪತಿರಂಗ, ದೂರದ ಬೆಟ್ಟ, ಬಂಗಾರದ ಮನುಷ್ಯ, ಬಂಗಾರದ ಪಂಜರ, ಕಾಸಿದ್ರೆೆ ಕೈಲಾಸ, ಭಲೆ ಜೋಡಿ, ಕಸ್ತೂರಿ ನಿವಾಸ, ಕನ್ನಡದ ಹಿರಿಮೆ ಸಾರಿದ ಮಯೂರ, ಶ್ರೀಕೃಷ್ಣದೇವರಾಯ, ಸತಿಶಕ್ತಿ, ಇಮ್ಮಡಿ ಪುಲಕೇಶಿ ಓಹ್!

ಮತ್ತೆ ಬಾರವು ಆ ದಿನಗಳು ಎನಿಸುತ್ತದೆ. ಕೇವಲ ಎಂಟಾಣೆ, ಒಂದು ರುಪಾಯಿಗೆ ನೋಡುತ್ತಿದ್ದ ಸಿನಿಮಾಗಳು ಲಕ್ಷ ರುಪಾಯಿಗಳ ಲಾಭದ ಜೀವನ ರೂಪಿಸುತ್ತಿದ್ದವು. ಟಿ.ವಿ, ಕಾರು, ತಿರುಗಾಟ, ಶಾಪಿಂಗ್, ಹೋಟಲ್‌ಗಳಿಲ್ಲದ ಆ ದಿನಗಳಲ್ಲಿ ಸಿನಿಮಾಗಳೇ ಇವೆಲ್ಲ ಆಗಿದ್ದವು. ನಮ್ಮ ತಾಯಿ ನಾಲ್ಕನೆಯ ಕ್ಲಾಸು ಓದಿದ್ದರೂ ಕನ್ನಡದ ಖ್ಯಾತನಾಮರ ಪುಸ್ತಕಗಳನ್ನೆಲ್ಲ ಓದುತ್ತಿದ್ದಳು. ಆಕೆಗೆ ಸರ್ಕ್ಯುಲೇಟಿಂಗ್ ಲೈಬ್ರರಿಯಿಂದ ಕಾದಂಬರಿಗಳನ್ನು ತಂದು ಕೊಡುವ ಕೆಲಸ ನನ್ನದು. ಒಂದು ದಿನಕ್ಕೆ ಒಂದು ಕಾದಂಬರಿಗೆ ಹತ್ತುಪೈಸೆ., ಮೂರು ದಿನ ಬೇಕೆಂದರೆ ನಾಲ್ಕಾಣೆ, ಐದು ಪೈಸೆ ರಿಯಾಯಿತಿ. ಹಾಗೆ ಆಕೆ ಓದಿದ ಕಾದಂಬರಿಗಳು ಸಿನಿಮಾ ಆದ ರಂತೂ ಆಕೆಗೆ ಅವನ್ನು ನೋಡಲೇಬೇಕೆಂಬ ಹುಚ್ಚು. ಆಕೆಯ ದೈವಕ್ಕೊ ಏನೋ ಆಕೆಯ ತಮ್ಮ ಗುರಪ್ಪ ಅಂದರೆ ನನ್ನ ಸೋದರ ಮಾವ, ಸಿನಿಮಾ ಟಾಕೀಸಿನಲ್ಲಿ ಪ್ರೊಜೆಕ್ಟರ್ ಆಪರೇಟರ್ ಆಗಿಯೇ ಕೆಲಸಕ್ಕೆ ಸೇರಿಕೊಂಡ ಮೇಲೆ ಫ್ರೀಯಾಗಿ ಸಿನಿಮಾ ನೊಡುವಂತಾಯಿತು, ಆಗೆಲ್ಲ ಹೆಣ್ಣು ಮಕ್ಕಳು ತೀರಾ ಹಿಂದೆ ಕೂರಬೇಕಿತ್ತು. ಅದೂ ನೆಲದ ಮೇಲೆ, ಜೊತೆಗೆ ಮುಂದೆ ಕುರ್ಚಿ ಗಳಲ್ಲಿ ಕೂತ ಗಂಡಸರು ತಿರು ತಿರುಗಿ ಹೆಂಗಸರನ್ನು ನೋಡಬಾರದೆಂದು ಒಂದು ಉದ್ದನೆಯ ಕರಿ ಪರದೆಯನ್ನು ಹೆಣ್ಣು
ಮಕ್ಕಳು ಕೂತ ನೆಲದ ಆ ತುದಿಯಿಂದ ಈ ತುದಿವರೆಗೆ ಉದ್ದಕ್ಕೆ ಕಟ್ಟಿರುತ್ತಿದ್ದರು.

ಸಿನಿಮಾ ಆರಂಭವಾಗಿ ಥೇಟರ್‌ನ ಲೈಟ್‌ಗಳೆಲ್ಲ ಆರಿಸಿ, ಕತ್ತಲಾದ ಮೇಲೆ ಗೇಟ್ ಕೀಪರ್ ಆಕೆಯೂ ಹೆಣ್ಣು ಮಗಳೇ, ಆ ಪರದೆ ಯನ್ನು ಎಳೆದು ಗೋಡೆಯ ಒಂದು ತುದಿಗೆ ಸುರುಳಿ ಸುತ್ತಿ ಸಿಕ್ಕಿಸುತ್ತಿದ್ದಳು, ಸಿನಿಮಾ ಇನ್ನೇನು ಮುಗಿಯುತ್ತಿದೆ ಎನ್ನುವಾಗ,
ಮತ್ತೆ ಬಂದು ಆ ನೀರಿಗೆಯ ಸುರುಳಿ ಬಿಚ್ಚಿ ಉದ್ದಕ್ಕೂ ಎಳೆದು ಆತು ಏಳ್ರಿ ಇನ್ನು’ ಎಂದು ಗದರಿಸುತ್ತಿದ್ದಳು, ತಡಿಯಬೇ ಇನ್ನು ‘ಶುಭಂ’ ಅಂತ ತೋರಿಸಿಲ್ಲ ಎಂದು ಹೆಂಗಸರು ಆ ಪರದೆ ಎತ್ತಿ ಹೊರಗೆ ಗೋಣು ಹಾಕುತ್ತಿದ್ದರು, ಮತ್ತೆ ಥೇಟರಿನ ಎಲ್ಲಾ ಲೈಟು
ಹತ್ತುವುದರೊಳಗೆ ಪರದೆ ಎಳೆಯಬೇಕು, ಸಿನಿಮಾ ಮುಗಿದು, ಲೈಟು ಹತ್ತಿದವೆಂದರೆ, ಸಿನಿಮಾ ಮುಗಿಸಿ ಎದ್ದ ಗಂಡಸರೆಲ್ಲ, ಹೆಂಗಸರ ಸೀಟುಗಳ ಕಡೆ ನೋಡುತ್ತಾ ನಿಂತು ಬಿಡುತ್ತಿದ್ದರು.

ಎಷ್ಟೋ ಹೆಂಗಸರು ಗಂಡನ ಕಣ್ಣು ತಪ್ಪಿಸಿ ಬಂದವರೇ ಆಗಿರುತ್ತಿದ್ದರು, ಹೀಗಾಗಿ, ಕೂತ ಹೆಣ್ಣು ಮಕ್ಕಳೇ ಸಿನಿಮಾ ಮುಗಿ ಮುಗಿ ತ್ತಿದ್ದಂತೆ, ಲೈಟು ಹತ್ತುವದರೊಳಗೆ ಪರದೆ ತಾವೇ ಎಳೆಯುತ್ತಿದ್ದದ್ದು ಉಂಟು. ಆ ಮೇಲೆ ಹೊರಬಂದ ಗಂಡಸರು, ಹೆಂಗಸರು ಹೊರ ಬರುವ ಗೇಟ್ ಬಳಿ ಹೆಂಗಸರನ್ನು ನೋಡಲೆಂದು ನಿಂತು ಬಿಡುತ್ತಿದ್ದರು, ಥೇಟರ್‌ನವರು ‘ಮುಂದೆ ನಡೀರಿ, ನಡೀರಿ’ ಎಂದು ಗದರಿಸುತ್ತಿದ್ದರು. ಕೆಲ ಗಂಡಸರು ಏ ತಡಿಯೋ ನಮ್ಮ ಹೆಣ್ಮಕ್ಕಳು ಬರ್ತಾರ, ನನ್ನ ಹೆಣ್ತಿನೂ ಪಿಚ್ಚರಿಗೆ ಬಂದಾಳ’ ಎಂದು ನೋಡುತ್ತಾ ನಿಂತರೆ, ಥೇಟರ್‌ನವರು ಎಲ್ಲಾರು ನಿನಗೆ ಹೆಂಣ್ತಿರೇ ಏನು? ನಡಿ ಸುಮ್ಮನ, ಹೆಣ್ಣು ಮಕ್ಕಳ ಕೈಯಲ್ಲೆ ಒದಸ್ತಿನಿ ನೋಡು ಅನ್ನುತ್ತಿದ್ದರು.

ಹತ್ತು ವರ್ಷದ ಮೇಲಿನ ಗಂಡು ಹುಡುಗರನ್ನು ಹೆಂಗಸರ ಸೀಟುಗಳ ಕಡೆ ಬಿಡುತ್ತಿದ್ದಿಲ್ಲ, ಹೀಗಾಗಿ ನಾನು, ನಮ್ಮಣ್ಣ ಗಂಡಸರ ಕಡೆ ಕುಳಿತು ಸಿನಿಮಾ ನೋಡಿ, ಬಿಟ್ಟ ಮೇಲೆ ಹೆಣ್ಣು ಮಕ್ಕಳ ಹಿಂಬದಿ ಗೇಟಿಗೆ ಬಂದು ಬರುವ ನಮ್ಮ ಅಮ್ಮನನ್ನು ಕಾದು ಕರೆದು ಕೊಂಡು ದಾರಿಯುದ್ದಕ್ಕೂ ಸಿನಿಮಾ ಬಗ್ಗೆ ಮಾತಾಡುತ್ತಲೇ ಮನೆ ಸೇರುತ್ತಿದ್ದಿ. ಮನೇಲಿ ನಮ್ಮಪ್ಪ ರೌದ್ರಾವತಾರ ತಾಳಿರುತ್ತಿದ್ದ.
ಒಂದು ಮೋಜಿನ ಘಟನೆ, ನನ್ನ ತೀರಿಕೊಂಡ ತಮ್ಮನ ಹೆಸರು ಸ್ವಾಮಿ. ಅವನು 4-5 ವರ್ಷದವನಿದ್ದಾಗ ಸತಿ ಅನಸೂಯಾ
ರೀಲಿಸ್ ಆಗಿತ್ತು. ಅದರಲ್ಲಿ ಅನಸೂಯಾ ಗಂಡನನ್ನು ಕೂಗುತ್ತಾ ‘ಸ್ವಾಮಿ, ಸ್ವಾಮಿ, ಸ್ವಾಮಿ ಎಂದರಂತೆಲ್ಲ ಕೂತಿದ್ದ ನನ್ನ ತಮ್ಮ ಓ..ಓ.. ಎನ್ನುತ್ತಲೇ ಇದ್ದನಂತೆ ಥೇಟರ್ ನವರೆಲ್ಲ ನಕ್ಕಿದ್ದೇ ನಕ್ಕಿದ್ದಂತೆ, ಹಾಗೆಯೇ ಸಿನಿಮಾದಲ್ಲಿ ತೋರಿಸುವ ಹಣ್ಣು, ತಿಂಡಿ, ನೀರು ಬಂದಂತೆಲ್ಲ ಕೊಡಿಸು, ನೀರಡಿಕೆ ನನಗೆ ನೀರು ಬೇಕು ಎಂದು ಅಳುವುದಂತೆ. ಮುಂದೆ ನಾವೆಲ್ಲ ದೊಡ್ಡವರಾಗಿ ವಿ.ಸಿ.ಪಿ.
ಹಾಕಿಕೊಂಡು ಅವೇ ಸಿನಿಮಾಗಳ ಕ್ಯಾಸೆಟ್ ಹಾಕಿಕೊಂಡು ಆ ಸನ್ನಿವೇಶಗಳನ್ನು, ಅದರಲ್ಲಿ ತೋರಿಸುವ ತಿಂಡಿಗಳನ್ನೆೆ ತಿನ್ನುತ್ತಾ
ನೋಡಿದ್ದು, ಮರೆಯಲಾರದ ಘಟನೆ, ಒಂದು ಸಾಧನೆ.

ಬಡತನದಲ್ಲಿ ಗಂಡನಿಂದ ಬೈಸಿಕೊಳ್ಳುತ್ತಲೇ ನಮ್ಮ ತಾಯಿ ಕಾದಂಬರಿ ಓದಿದಳು, ಸಿನಿಮಾಗಳನ್ನು ನೋಡಿದಳು, ಮುಂದೆ
ಮನೆಯಲ್ಲಿಯೇ ಆಕೆಯ ಬಯಸಿದ, ಆಗ ನೋಡಿದ ಎಲ್ಲ ಸಿನಿಮಾಗಳ ಡಿ.ವಿ.ಡಿಗಳನ್ನು ಹಾಕಿಕೊಟ್ಟು ದೊಡ್ಡ ಎಲ್‌ಸಿಡಿ
ಟಿ.ವಿ.ಯಲ್ಲಿ ತೋರಿಸಿದ್ದೇವೆ. ಇಂದಿಗೂ ಆಕೆ ಟಿ.ವಿ.ಯಲ್ಲಿ ಸಿನಿಮಾ ನೋಡುತ್ತಿದ್ದರೆ ಯಾವುದರ ಬಗ್ಗೆಯೂ ಗಮನ ಇರುವು ದಿಲ್ಲ, ಯಾರೂ ಬಂದರೂ ಮಾತನಾಡಿಸುವುದಿಲ್ಲ. ಹೀಗಾಗಿ ಬಂಧುಗಳ, ಮಿತ್ರರ, ಅಕ್ಕ ಪಕ್ಕದವರ ಟೀಕೆಗಳನ್ನು ಎದುರಿಸಿ ದ್ದೇವೆ. ನಾನೇ ಒಂದು ಸಿನಿಮಾದಲ್ಲಿ ಪಾತ್ರ ಮಾಡಿದೆ, ನಿತ್ಯ ಒಂದಲ್ಲ ಒಂದು ಚಾನಲ್‌ನಲ್ಲಿ ನನ್ನ ಹಾಸ್ಯ ಕಾರ್ಯಕ್ರಮ ನಡದೇ ಇರುತ್ತದೆ. ಆದರೂ, ನಾನು ರಾಜಕುಮಾರರ ಭೂಪತಿರಂಗ, ಭಲೇ ಜೋಡಿ, ಸಾಕ್ಷಾತ್ಕಾರ, ದೇವರು ಕೊಟ್ಟ ತಂಗಿ, ವೈಟ್ ಆಂಡ್ ಬ್ಲಾಕ್, ಸಿನಿಮಾಗಳನ್ನು ನೋಡುತ್ತಲೇ ಇರುತ್ತೇನೆ.

ಅರವತ್ತರ ವಯಸ್ಸಿನಲ್ಲಿರುವ ನನ್ನನ್ನಿಂದು ಮತ್ತೆ ನಲವತ್ತು ವರ್ಷ ಹಿಂದಕ್ಕೆ ಕರೆದೊಯ್ಯುವ ಶಕ್ತಿ ದೇವರಿಗೂ ಇಲ್ಲ ಆದರೆ, ರಾಜಕುಮಾರ್ ಸಿನಿಮಾಕ್ಕಿದೆ. ಆ ಸಿನಿಮಾಗಳು ನಮ್ಮ ಬಡತನ, ಕಷ್ಟ, ರೋಗ, ರುಜಿನಗಳನ್ನ ನೆನಪಿಸುತ್ತವೆ, ಮರೆಸುತ್ತವೆ. ಅಷ್ಟೆ ಅಲ್ಲ, ಸತ್ತ ತಮ್ಮ, ತಂದೆಯವರ ದುಃಖವನ್ನು ಮರೆಸಿದವು. ಅವರು ಸತ್ತ ಆ ಸೂತಕದ ದಿನಗಳಲ್ಲೇ ಮಾತನಾಡಿಸಲು ಬಂದ ವರು ದುಃಖ ಹೆಚ್ಚಿಸುತ್ತಾರೆಂದು, ಅವರನ್ನು ಬರಗೊಡದೇ ಹಳೆಯ ಸಿನಿಮಾಗಳನ್ನೆೆ ನೋಡಿ ದುಃಖ ಮರೆತೆವು.

ದುಃಖದಲ್ಲಿದ್ದಾರಂತ ಮಾತಾಡಿಸಲಿಕ್ಕೆ ಹೋದರೆ, ಸಿನಿಮಾ ನೋಡುತ್ತಿದ್ದರೀ’ ಎಂಬ ಟೀಕೆಯನ್ನೂ ಎದುರಿಸಿದೆವು. ಕಷ್ಟಗಳಿಗೆಲ್ಲ ಸುಖಾಂತ್ಯವಿದೆ ಎಂದು ತೋರಿಸುವ, ಧೈರ್ಯ ತುಂಬುವ, ಛಲ ಹುಟ್ಟಿಸುವ ಆ ಸಿನಿಮಾಗಳೆಲ್ಲಿ? ಮಾತನಾಡಿಸಲು ಬಂದು ಮುಂದ ಹೆಂಗವ್ವಾ? ಹಿಂಗಾತು ಏನು ಕರ್ಮ ಮಾಡಿದ್ಯೋ ಏನೋ? ಸತ್ತವರ ಜೊತೆ ನಾವು ಸಾಯಬೇಕವ್ವಾ, ಇದ್ದು ಏನು ಸುಖ ಅದ್ರ ಹೇಳು? ಎಂದು ಸಾಯಲು ಪ್ರೋತ್ಸಾಹಿಸುವ ಜನರಿಗಿಂತ ಈ ಪಾತ್ರಗಳೇ ಮೇಲೆನಿಸುತ್ತಿದ್ದವು.

ಇಂದಿನ ಸಿನಿಮಾಗಳಿಗೆ ಈ ಶಕ್ತಿಯಿಲ್ಲ, ಹೆಣ್ಣೆಂದರೆ ತಾಯಿ, ತಂಗಿ ಅಲ್ಲ ಎಂಬುದೇ ಇಂದಿನ ದುರಂತ. ಕೊಚ್ಚು, ಕೊಲ್ಲು, ಕತ್ತರಿಸು, ಕೆಡಿಸು, ಕೆರಳಿಸು ಈ ಸೂಕ್ತಗಳೇ ಬಾಕ್ಸ್ ಆಫೀಸ್‌ನ ಹಿಟ್ ತಂತ್ರ. ಹೀಗಾಗಿ ಸಿನಿಮಾಗಳಿಗೆ ಜನ ಕಮ್ಮಿಯಾದರು. ಇನ್ನು ಮಕ್ಕಳ ಕೈಯಲ್ಲಿರುವ ಮೊಬೈಲ್‌ನಲ್ಲೂ ಮಕ್ಕಳು ನೋಡುವರು ಹೊಡಿ, ಬಡಿ ಚಿತ್ರಗಳೇ ಇದರಿಂದ ಮಕ್ಕಳು ಎದುರಿಗೆ ಏನು ದುರ್ಘಟನೆ ನಡೆದರೂ ಗರಬಡಿದವರಂತೆ (ಪ್ಯಾಸಿವ್ ಆನ್ ಲುಕ್ಕರ‍್ಸ್‌) ನಿಂತು ನೋಡುತ್ತಾರೆ, ಸಹಾಯಕ್ಕೆ ಧಾವಿಸುವುದಿಲ್ಲ. ಹತ್ತು ವರ್ಷಕ್ಕೆಲ್ಲ ಮಕ್ಕಳು ಅಶ್ಲೀಲ ವಿಡಿಯೋಗಳನ್ನ ನೋಡುತ್ತಿದ್ದಾರೆ.

ಬಾಲ್ಯ – ಯೌವ್ವನವಾಗುತ್ತಿದೆ, ಯೌವ್ವನದೊಳಗೇ ಮುಪ್ಪು, ಸಾವುಗಳೂ ಬರುತ್ತಿವೆ. ಬಭ್ರುವಾಹನ ಚಿತ್ರದಲ್ಲಿ ಅರ್ಜುನ ತೀರ್ಥ ಯಾತ್ರೆಗೆ ಹೊರಟು ನಿಂತಾಗ ಧರ್ಮರಾಯ ಈ ಯೌವ್ವನದಲ್ಲಿ ತೀರ್ಥಯಾತ್ರೆಯೇ?  ಏಕೆ ಎಂದಾಗ ‘ಬಿಲ್ಲು ಬಾಣಗಳನ್ನು ತರಲು ಶಸ್ತ್ರಾಗಾರದ ಕಡೆ ಹೋದಾಗ… ಎಂದು ಮಾತು ನಿಲ್ಲಿಸುತ್ತಾನೆ. ಆಗ ಧರ್ಮರಾಯನೇ ’ ಓ ನಾನು, ದ್ರೌಪದಿಯೂ ಏಕಾಂತ ದಲ್ಲಿದ್ದುದು ಕಣ್ಣಿಗೆ ಬಿತ್ತೇನು ಎಂದು ಸಂಕೋಚದಿಂದ ನುಡಿಯುತ್ತಾನೆ, ಅರ್ಜುನ ಹೌದೆಂದು ತಲೆ ತಗ್ಗಿಸುತ್ತಾನೆ. ಆಗ ದೊಡ್ಡ ವರು ಏಕಾಂತದಲ್ಲಿರುವದನ್ನ ಚಿಕ್ಕವರು ನೋಡಿದರೆ ತಪ್ಪಿಲ್ಲ. ಆದರೆ, ಚಿಕ್ಕವರು ಏಕಾಂತದಲ್ಲಿರುವದನ್ನ ದೊಡ್ಡವರು ನೋಡಬಾರದು ಎಂದು ಪರಿಹಾರ ಹೇಳಿದರೂ ಅರ್ಜುನ ಪ್ರಾಯಶ್ಚಿತಕ್ಕಾಗಿ ತೀರ್ಥಯಾತ್ರೆ ಹೊರಡುತ್ತಾನೆ.

ಈಗಿನ ಮಕ್ಕಳೋ ಏಕಾಂತ ಕತ್ತಲಿನ ಸ್ಥಳಗಳಲ್ಲಿ, ಮರಗಳ ಮರೆಯಲ್ಲಿ, ಬೆಟ್ಟ ಗುಡ್ಡಗಳ ಏಕಾಂತದಲ್ಲಿ ಮೊಬೈಲುಗಳಲ್ಲಿ
ದೊಡ್ಡವರ ರಾಸಕ್ರೀಡೆಗಳನ್ನೆ ನೋಡುತ್ತಿರುತ್ತಾರೆ. ದೊಡ್ಡವರೊ ಚಿಕ್ಕವರದನ್ನು ನೋಡುತ್ತಿರುತ್ತಾರೆ. ಆ ವೆಬ್ ಲಿಂಕ್‌ಗಳಿಗೆ ಎಲ್ಲಿಲ್ಲದ ಬೇಡಿಕೆ, ಮಕ್ಕಳು, ಯುವಕರು, ಮುದುಕರೆನ್ನದೇ ಮುಗಿಬಿದ್ದು ನೋಡುತ್ತಿದ್ದಾರೆ – ಇವರೆಲ್ಲ ಪ್ರಾಯಶ್ಚಿತಕ್ಕಾಗಿ ಬಾರ್‌ಗಳೆಂಬ ತೀರ್ಥಕ್ಷೇತ್ರಕ್ಕೂ ಹೋಗುತ್ತಾರೆ ಇಲ್ಲವೇ ತೀರ್ಥ ಕ್ಷೇತ್ರದಿಂದ ಬಂದ ಮೇಲೂ ಇವನ್ನು ನೋಡುತ್ತಿರುತ್ತಾರೆ. ಅಪ್ರಾಪ್ತರಿಂದ ಹೆಣ್ಣು ಮಕ್ಕಳ ಜೀವನ ದುಸ್ತರವಾಗುತ್ತಿರುವದಕ್ಕೇ ಈ ಅಂಶವೇ ಬಹು ಮುಖ್ಯವಾದದ್ದು. ಬೀಜವಿರುವಾಗಲೇ ಕಾಯಾಗಿ, ಸುಕಿ, ಪೌಡರ್ ಹೊಡೆದು ಹಣ್ಣಗಿ ದೊಪ್ಪನೆ ನೆಲಕಚ್ಚುವ ಹಣ್ಣುಗಳ ಸ್ಥಿತಿಯೇ ಇಂದಿನ ಈ ದೇಶದ ಮಕ್ಕಳ, ಯುವಕರ ಸ್ಥಿತಿ.

ಪ್ರಾಥಮಿಕ ಶಿಕ್ಷಣದಿಂದಲೇ ಕಟ್ಟಿ ಹಾಕಿ ನೈತಿಕತೆ, ಚಾರಿತ್ರ್ಯಗಳ ಶೀಲಗಳನ್ನು ತುಂಬಬೇಕಾದ ಅನಿವಾರ್ಯತೆ ಬಂದಿರುವ
ಕಾಲವಿದು. ಜಾತಿ, ಪಂಥ, ಧರ್ಮಗಳನ್ನು ಮೀರಿದ ಒಂದು ನೀತಿ ಸಂಹಿತೆ ಬರಬೇಕಾಗಿದೆ, ಅದನ್ನು ಗಡ್ಡಧಾರಿ ವಿಚಾರ
ಚಿಂತಾಕ್ರಾಂತರೂ ಬೆಂಬಲಿಸಬೇಕಿದೆ, ತತ್ತ್ವ, ನೀತಿ, ಧರ್ಮಗಳ ಜಾಗೃತಿ ಎಲ್ಲ ರಂಗಗಳಲ್ಲೂ ಬರಬೇಕಿದೆ ಅದು ಟಿ.ವಿ.
ಸಿನಿಮಾ ಗಳಿಂದಲೇ ಮತ್ತೆ ಶುರುವಾಗಬೇಕಿದೆ. ಡಬಲ್ ಮೀನಿಂಗ್ ಮತ್ತು ದೃಶ್ಯಗಳನ್ನು ಸರಕಾರವೇ ನಿಷೇಧಿಸಬೇಕಿದೆ. ಕೇವಲ ಇಪ್ಪತ್ತು ಪರ್ಸೆಂಟ್ ಇಂತಹುಗಳನ್ನು ಇಷ್ಟಪಡುವವರಿಗಾಗಿ ಎಂಬತ್ತು ಪರ್ಸೆಂಟ್ ಜನ ಇವನ್ನು ವಾಕರಿಸುತ್ತಾ ಸಹಿಸ
ಬೇಕಾಗಿದೆ. ಟೀವಿಗಳಿಗೆ ಟಿ.ಆರ್.ಪಿ, ಸಿನಿಮಾಗಳಿಗೆ ಬಾಕ್ಸಾಫೀಸು ಇವನ್ನು ಬಿಟ್ಟರೆ ಬೇರೆ ಮಾನದಂಡಗಳೇ ಇಲ್ಲದಂತಾಗಿದೆ.

ಹೀಗೆ ದುರಾಸೆಗೆ ಗಬಗಬ ತಿಂದದ್ದರಿಂದಲೇ ಕರೋನಾದ ಈ ವರ್ಷ ಎಲ್ಲ ಕಕ್ಕಿದಿರಿ, ಖಾಲಿ ಕೂತಿರಿ, ಖಲಾಸೂ ಆದಿರಿ ಎಂಬ ಮಾತು ಖರೆ. ಇನ್ನಾದ್ರೂ ಪಾಠ ಕಲಿಯೋಣ. ಸಿನಿ-ಮಾ, ಅಂದರೆ ಅದು ತಾಯಿ ಆಗಬೇಕು. ಸಿನ್-ಮಾ ಆಗಬಾರದು ಅಂದರೆ ಸಿನ್ ಅಂದ್ರೆ ಪಾಪ, ಮಾ – ಅಂದರೆ ತಾಯಿ, ಜನನಿ – ಪಾಪದ ಜನನಿ ಆಗಬಾರದು, ಪಾಪವನ್ನು ಹುಟ್ಟು ಹಾಕಬಾರದು. ಮಟ್ಟಹಾಕ ಬೇಕು. ಹಳೇ ಸಿನಿಮಾಗಳಿಗೆ ಆ ಶಕ್ತಿ ಇತ್ತು.

Leave a Reply

Your email address will not be published. Required fields are marked *