Sunday, 8th September 2024

ಇಬ್ರಾಹಿಂಗೆ ಪವಾರ್‌ ಫೋನು ಮಾಡಿದ್ದೇಕೆ ?

ಮೂರ್ತಿಪೂಜೆ

ಮಹಾರಾಷ್ಟ್ರದ ಎನ್.ಸಿ.ಪಿ ನಾಯಕ ಶರದ್ ಪವಾರ್ ಮೊನ್ನೆ ಕರ್ನಾಟಕದ ಮುಸ್ಲಿಂ ಲೀಡರ್ ಸಿ.ಎಂ.ಇಬ್ರಾಹಿಂ ಅವರಿಗೆ ಪೋನು ಮಾಡಿದ್ದಾರೆ. ಮುಂಬರುವ ದಿನಗಳಲ್ಲಿ ಜಾತ್ಯಾತೀತ ಶಕ್ತಿಗಳ ಬಲವನ್ನು ಹೆಚ್ಚಿಸುವ ಅನಿವಾರ್ಯತೆಯ ಬಗ್ಗೆ ಚರ್ಚಿಸಿ ಒಂದು ಪ್ರಪೋಸಲ್ಲು ಕೊಟ್ಟಿದ್ದಾರೆ. ಕರ್ನಾಟಕದಲ್ಲಿ ತಮ್ಮ ನೇತೃತ್ವದ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷಕ್ಕೆ ನೀವು ಅಧ್ಯಕ್ಷರಾಗಬೇಕು ಮತ್ತು ಮುಂದಿನ ದಿನಗಳಲ್ಲಿ ಅದೊಂದು ಶಕ್ತಿಯಾಗಿ ನೆಲೆ ನಿಲ್ಲಲು ಶ್ರಮಿಸಬೇಕು ಎಂಬುದು ಶರದ್ ಪವಾರ್ ಅವರು ಕೊಟ್ಟ ಪ್ರಪೋಸಲ್ಲು.

ಅಂದ ಹಾಗೆ ಕಳೆದ ವಿಧಾನಸಭಾ ಚುನಾವಣೆಗೂ ಮುನ್ನ ಕಾಂಗ್ರೆಸ್ ತೊರೆದು ಜೆಡಿಎಸ್ ಪಾಳಯ ಸೇರಿದ್ದ ಸಿ.ಎಂ. ಇಬ್ರಾಹಿಂ ಅವರು ಪಕ್ಷದ ಅಧ್ಯಕ್ಷರಾಗಿ ಇಡೀ ರಾಜ್ಯ ಸುತ್ತಿದ್ದರು. ೨೦೨೩ ರ ವಿಧಾನಸಭಾ ಚುನಾವಣೆಯಲ್ಲಿ ಅತಂತ್ರ ಫಲಿತಾಂಶ ಬರುವುದು ನಿಶ್ಚಿತವಾದ್ದರಿಂದ ಜೆಡಿಎಸ್ ಮತ್ತು
ಬಿಜೆಪಿ ಪರಸ್ಪರ ಕೈಗೂಡಿಸಿ ಸರಕಾರ ರಚಿಸುವುದು ಗ್ಯಾರಂಟಿ ಅಂತ ನಂಬಿದ್ದರು. ಹೀಗೆ ಬಿಜೆಪಿ-ಜೆಡಿಎಸ್ ಮೈತ್ರಿಕೂಟ ಸರಕಾರ ರಚನೆಯಾದರೆ ಪಕ್ಷದ ರಾಜ್ಯಾಧ್ಯಕ್ಷರಾದ ತಮಗೆ ಉಪಮುಖ್ಯಮಂತ್ರಿ ಹುದ್ದೆ ಇಲ್ಲವೇ ಪ್ರಬಲ ಮಂತ್ರಿಗಿರಿ ಸಿಗುತ್ತದೆ ಎಂದು ಇಬ್ರಾಹಿಂ ಭಾವಿಸಿದ್ದರು. ಆದರೆ ರಾಷ್ಟ್ರ ರಾಜಕಾರಣದಲ್ಲಿ ಬಿಜೆಪಿ ವಿರುದ್ಧ ಮುಸ್ಲಿಮರ ಮತಗಳು ಕನ್‌ಸಾಲಿಡೇಟ್ ಆಗಿದ್ದ ಪರಿಣಾಮವಾಗಿ ಕರ್ನಾಟಕದಲ್ಲೂ ಅವು ಕಾಂಗ್ರೆಸ್ ಪಾಲಾದವು.

ಹೀಗಾಗಿ ತಮ್ಮ ಸಮುದಾಯದ ಇಬ್ರಾಹಿಂ ಜೆಡಿಎಸ್ ರಾಜ್ಯಾಧ್ಯಕ್ಷರಾಗಿದ್ದರೂ ಮುಸ್ಲಿಮರು ಆ ಪಕ್ಷದ ಕೈಹಿಡಿಯಲಿಲ್ಲ. ಕೆಲವು ಕ್ಷೇತ್ರಗಳಲ್ಲಿ ಬಿಜೆಪಿಗೆ ಪರ್ಯಾಯವಾಗಿ ಜೆಡಿಎಸ್ ಅನ್ನು ಗೆಲ್ಲಿಸಬೇಕಾದ ಅನಿವಾರ್ಯತೆಯಿಂದ ಮುಸ್ಲಿಂ ಮತಗಳು ಜೆಡಿಎಸ್‌ಗೆ ಬಂದವೇ ಹೊರತು ಒಟ್ಟಾರೆಯಾಗಿ ಆ ಮತಗಳು ಜೆಡಿಎಸ್ ಬಲವನ್ನು ಹೆಚ್ಚಿಸಲಿಲ್ಲ. ಯಾವಾಗ ಈ ಬೆಳವಣಿಗೆ ನಡೆಯಿತೋ? ಆಗ ಜೆಡಿಎಸ್ ನಾಯಕರಾದ ದೇವೇಗೌಡ ಮತ್ತು ಕುಮಾರ ಸ್ವಾಮಿ ಅವರು ಇಬ್ರಾಹಿಂ ವಿಷಯದಲ್ಲಿ ನಿರಾಸಕ್ತಿ ತೋರಿಸತೊಡಗಿದರು. ಈ ನಿರಾಸಕ್ತಿ ಮುಂದುವರಿದ ಕಾಲದ ಜೆಡಿಎಸ್ ಮತ್ತು ಬಿಜೆಪಿ ಮೈತ್ರಿಯ ಮಾತುಕತೆ ಶುರುವಾಯಿತು.

ಆದರೆ ಬಿಜೆಪಿ ಜತೆಗಿನ ಮಾತುಕತೆಯ ವಿಷಯದಲ್ಲಿ ಪಕ್ಷದ ರಾಜ್ಯಾಧ್ಯಕ್ಷರಾದರೂ ಇಬ್ರಾಹಿಂ ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದ ಕುಮಾರಸ್ವಾಮಿ ಅವರು ತಾವೇ ನೇರವಾಗಿ ಮೋದಿ-ಅಮಿತ್ ಶಾ ಅವರ ಜತೆ ಮಾತುಕತೆ ನಡೆಸಿದರು. ಫೋನಲ್ಲಿ ತಮ್ಮ ತಂದೆ ದೇವೇಗೌಡರನ್ನು ಮೋದಿಯವರ ಮುಂದೆ ಕೂರಿಸಿ ಸೆಟ್ಲ್‌ಮೆಂಟ್ ಮಾಡಿಕೊಂಡರು. ಯಾವಾಗ ಈ ಬೆಳವಣಿಗೆ ನಡೆಯಿತೋ? ಆಗ ಕ್ರುದ್ಧರಾದ ಸಿ.ಎಂ.ಇಬ್ರಾಹಿಂ, ಪಕ್ಷ ತಮ್ಮದೇ ಎಂದು ಗಲಾಟೆ ಎಬ್ಬಿಸಿದರು. ಆದರೆ ಈ ಗಲಾಟೆಯಿಂದ ಅವರು ಜೆಡಿಎಸ್ ಪಕ್ಷವ ನ್ನೇನೂ ನಿಯಂತ್ರಣಕ್ಕೆ ತೆಗೆದುಕೊಳ್ಳಲು ಆಗಲಿಲ್ಲ. ಸಾಲದೆಂಬಂತೆ ದೇವೇಗೌಡ-ಕುಮಾರಸ್ವಾಮಿ ಜೋಡಿ ವ್ಯವಸ್ಥಿತವಾಗಿ ರಾಜ್ಯಾಧ್ಯಕ್ಷ ಸ್ಥಾನದಿಂದ ಇಬ್ರಾಹಿಂ ಅವರನ್ನು ಕೆಳಗಿಳಿಸಿತು.

ಮುಂದೆ ಈ ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿದರೂ ಅದರಿಂದ ಇಬ್ರಾಹಿಂ ಅವರಿಗೆ ಹೇಳಿಕೊಳ್ಳುವಂತಹ ಅನುಕೂಲವೇನೂ ಆಗಲಿಲ್ಲ. ಈ ಮಧ್ಯೆ ಮುಖ್ಯಮಂತ್ರಿ ಸಿದ್ದರಾಮಯ್ಯ ಜತೆಗಿನ ಸ್ನೇಹಕ್ಕೆ ರೀಚಾರ್ಜ್ ಮಾಡಲು ಇಬ್ರಾಹಿಂ ಪ್ರಯತ್ನಿಸಿದರೂ ಸಿದ್ದರಾಮಯ್ಯ ಅದಕ್ಕೆ ರೆಡಿ ಇರಲಿಲ್ಲ. ಹೀಗಾಗಿ ಕರ್ನಾಟಕದ ಮಾತಿನ ಮಲ್ಲ ಇಬ್ರಾಹಿಂ ಮೌನಕ್ಕೆ ಶರಣಾಗಿದ್ದರು. ಹೀಗೆ ಮೌನಕ್ಕೆ ಶರಣಾಗಿದ್ದ ಅವರಿಗೆ ಮೊನ್ನೆ ವಿಸ್ಮಯ ಕಾದಿತ್ತು. ಅರ್ಥಾತ್, ಮಹಾ ರಾಷ್ಟ್ರದ ಮಾಜಿ ಮುಖ್ಯಮಂತ್ರಿ, ಎನ್‌ಸಿಪಿ ನಾಯಕ ಶರದ್ ಪವಾರ್ ಅವರು ಇಬ್ರಾಹಿಂ ಅವರಿಗೆ ಫೋನು ಮಾಡಿದ್ದಾರೆ. ಅಷ್ಟೇ ಅಲ್ಲ, ದೇಶದಲ್ಲಿ ಜಾತ್ಯಾತೀತ ಶಕ್ತಿಗಳನ್ನು ಬಲಪಡಿಸುವ ಅಗತ್ಯವಿದ್ದು ಈ ಹಿನ್ನೆಲೆಯಲ್ಲಿ ನೀವು ನಮ್ಮ ಜತೆಗಿರಬೇಕು ಎಂದಿದ್ದಾರೆ.

ಅಂದ ಹಾಗೆ, ಕರ್ನಾಟಕದಲ್ಲಿ ತಮ್ಮ ನೇತೃತ್ವದ ಎನ್ ಸಿಪಿಗೆ ಇಬ್ರಾಹಿಂ ಅಧ್ಯಕ್ಷರಾದರೆ ಹಲವು ಅನುಕೂಲಗಳಿವೆ ಎಂಬುದು ಪವಾರ್ ಲೆಕ್ಕಾಚಾರ. ಎಷ್ಟೇ ಆದರೂ ಮುಂಬೈ- ಕರ್ನಾಟಕ ಮಾತ್ರವಲ್ಲದೆ ಕರ್ನಾಟಕದ ಗಡಿ ಜಿಲ್ಲೆಗಳಲ್ಲಿ ಮರಾಠ ಮತದಾರರ ಪವರ್ ಹೆಚ್ಚಾಗಿದೆ. ಸುಮಾರು ಐವತ್ತಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಮರಾಠ ಮತದಾರರ ಮತಗಳು ಸಾಲಿಡ್ಡಾಗಿವೆ.ನಾಳೆ ಇಲ್ಲಿ ಎನ್‌ಸಿಪಿ ತಲೆ ಎತ್ತಿದರೆ ಮರಾಠ ಮತಬ್ಯಾಂಕಿನ ಮೇಜರ್ ಷೇರನ್ನು ಸೆಳೆಯಬಹುದು. ಮತ್ತು ಅದೇ ಕಾಲಕ್ಕೆ ಬಿಜೆಪಿ-ಜೆಡಿಎಸ್ ಮೈತ್ರಿಕೂಟದ ವಿರುದ್ಧ ಸೆಣಸಾಡುವುದರಿಂದ ಗಣನೀಯ ಸಂಖ್ಯೆಯಲ್ಲಿ  ಮುಸ್ಲಿಮರ ಮತಗಳನ್ನೂ ಸೆಳೆಯಬಹುದು ಎಂಬುದು ಪವಾರ್ ಯೋಚನೆ.

ಯಾವಾಗ ಪವಾರ್ ಅವರು ಈ ಪ್ರಪೋಸಲ್ಲು ಕೊಟ್ಟರೋ? ಇದಾದ ನಂತರ ಮರಳಿ ಮೇಲಕ್ಕೆದ್ದಿರುವ ಸಿ.ಎಂ.ಇಬ್ರಾಹಿಂ ಸದ್ಯದ ಮಹತ್ವದ ಸಭೆ ನಡೆಸಲು ಸಜ್ಜಾಗಿದ್ದಾರೆ. ಈ ಸಭೆಗೆ ವಿವಿಧ ಪಕ್ಷಗಳ ನಾಯಕರನ್ನು ಕರೆಯಲು ತೀರ್ಮಾನಿಸಿದ್ದಾರೆ. ಅಲ್ಲಿಗೆ ಕರ್ನಾಟಕದ ರಾಜಕಾರಣದಲ್ಲಿ ಸಿ.ಎಂ.ಇಬ್ರಾಹಿಂ ಹೊಸ ಇನ್ನಿಂಗ್ಸ್ ಶುರು ಮಾಡುವುದು ಪಕ್ಕಾ ಆದಂತಾಗಿದೆ.

ಅಮಿತ್ ಶಾ ಕೊಟ್ಟ ಡೈರೆಕ್ಷನ್ ಏನು?
ಈ ಮಧ್ಯೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮತ್ತು ವಿಧಾನಸಭೆಯ ಪ್ರತಿಪಕ್ಷ ನಾಯಕ ಅಶೋಕ್
ಅವರನ್ನು ಕಳೆದ ಮಂಗಳವಾರ ಸಂಪರ್ಕಿಸಿದ್ದಾರೆ. ಮೈಸೂರಿನ ಮುಡಾ ಹಗರಣದ ವಿಷಯದಲ್ಲಿ ಪಕ್ಷ ಎಫೆಕ್ಟಿವ್ ಆಗಿ ಹೋರಾಟ ಮಾಡುತ್ತಿಲ್ಲ. ಹಗರಣದ ಆರೋಪ ಮಾಡಿ, ನಾಲ್ಕು ಅಧಿಕಾರಿಗಳ ಎತ್ತಂಗಡಿಯಾದ ತಕ್ಷಣ ಎಲ್ಲವೂ ಸರಿ ಆಗುವುದಿಲ್ಲ. ಹೀಗಾಗಿ ಈ ವಿಷಯದಲ್ಲಿ ನಿಮ್ಮ ಗುರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಎಂಬುದು ನೆನಪಿನಲ್ಲಿರಲಿ. ಎಲ್ಲಕ್ಕಿಂತ ಮುಖ್ಯವಾಗಿ ಈ ಪ್ರಕರಣವನ್ನು ತಾರ್ಕಿಕ ಅಂತ್ಯಕ್ಕೆ ತೆಗೆದುಕೊಂಡು ಹೋಗಿ. ಸಿದ್ದರಾಮಯ್ಯ ರಾಜೀನಾಮೆಯೇ ನಿಮ್ಮ ಟಾರ್ಗೆಟ್ ಆಗಿರಲಿ ಎಂದಿದ್ದಾರೆ. ಯಾವಾಗ ಮುಡಾ ಹಗರಣದ ವಿಷಯದಲ್ಲಿ ಅಮಿತ್ ಶಾ ಡೈರೆಕ್ಷನ್ನು ಬಂತೋ? ಆಗ ವಿಜಯೇಂದ್ರ ಮತ್ತು ಅಶೋಕ್ ದಡಬಡಿಸಿ ಎದ್ದು ನಿಂತಿದ್ದಾರೆ. ಅಷ್ಟೇ ಅಲ್ಲ, ಮುಡಾ ಹಗರಣದ ತಳಬುಡಕ್ಕೆ ಕೈ ಹಾಕಲು ಹೊರಟಿದ್ದಾರೆ.

ಅಂದ ಹಾಗೆ ಅಮಿತ್ ಶಾ ಡೈರೆಕ್ಷನ್ನು ಬಂದ ಮೇಲೆ ಯಾವ ಮಟ್ಟದ ಸಂಚಲನ ಉಂಟಾಗಿದೆ ಎಂದರೆ ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಬೀದಿ ಹೋರಾಟಕ್ಕಿಳಿದಿರುವ ರಾಜ್ಯ ಬಿಜೆಪಿ ಅದೇ ಕಾಲಕ್ಕೆ ಕಾನೂನು ಹೋರಾಟಕ್ಕೂ ತಯಾರಿ ಮಾಡಿಕೊಳ್ಳುತ್ತಿದೆ. ಮೂಲಗಳ ಪ್ರಕಾರ ಬಿಜೆಪಿ ನಾಯಕರು ಈ ವಾರ ಲೋಕಾಯುಕ್ತ ಮತ್ತು ಜನಪ್ರತಿನಿದಿಗಳ ನ್ಯಾಯಾಲಯದಲ್ಲಿ ಸಿದ್ದರಾಮಯ್ಯ ಮತ್ತಿತರರ ಮೇಲೆ ಮೊಕದ್ದಮೆ ಹೂಡಲಿದ್ದಾರೆ.

ಆಂಧ್ರದಲ್ಲಿ ಕುಮಾರಣ್ಣ ಪವರ್

ಕೇಂದ್ರದ ಉಕ್ಕು ಮತ್ತು ಭಾರಿ ಕೈಗಾರಿಕಾ ಸಚಿವ ಎಚ್.ಡಿ.ಕುಮಾರಸ್ವಾಮಿ ಒಂದೇ ಒಂದು ಹೆಜ್ಜೆಯ ಮೂಲಕ ಆಂಧ್ರಪ್ರದೇಶದಲ್ಲಿ ಜನಪ್ರಿಯರಾಗಿ ದ್ದಾರೆ. ದೇಶದ ಪ್ರಮುಖ ಉಕ್ಕು ಕಾರ್ಖಾನೆಗಳಂದಾದ ಆಂಧ್ರದ ವೈಜಾಗ್ ಉಕ್ಕು ಕಾರ್ಖಾನೆಯನ್ನು ಪುನಶ್ಚೇತನ ಗೊಳಿಸುವುದಾಗಿ ಅವರು ಹೇಳಿದ್ದೇ ಇದಕ್ಕೆ ಕಾರಣ. ವಸ್ತುಸ್ಥಿತಿಯೆಂದರೆ ಇತ್ತೀಚಿನ ದಿನಗಳಲ್ಲಿ ವೈಜಾಗ್ ಉಕ್ಕು ಕಾರ್ಖಾನೆಯನ್ನು ಖಾಸಗಿಯವರಿಗೆ ವಹಿಸಲು ವ್ಯವಸ್ಥಿತ ಪ್ರಯತ್ನಗಳು ನಡೆದಿದ್ದವು.

ಆಂಧ್ರದ ಕರಾವಳಿ ಭಾಗದಲ್ಲಿರುವ ಈ ಕಾರ್ಖಾನೆ ಉಕ್ಕು ತಯಾರಿಕೆಗೆ ಮತ್ತು ಸಾಗಾಣಿಕೆಗೆ ಎಷ್ಟು ಪ್ರಶಸ್ತವಾಗಿದೆ ಎಂದರೆ, ಇವತ್ತು ದೇಶದಲ್ಲಿ ಉಕ್ಕು ತಯಾರಿಕೆ ಮಾಡುವ ಬಹುತೇಕ ಕಾರ್ಖಾನೆಗಳಿಗೆ ಇಲ್ಲದ ಅನುಕೂಲತೆ ವೈಜಾಗ್ ಉಕ್ಕು ಕಾರ್ಖಾನೆಗೆ ಇದೆ. ಲಕ್ಷಾಂತರ ಮಂದಿಯ ಜೀವನೋಪಾಯಕ್ಕೆ ದಾರಿ ಮಾಡಿಕೊಟ್ಟಿರುವ ಇಂತಹ ಕಾರ್ಖಾನೆಯನ್ನು ಖಾಸಗಿಯವರ ವಶಕ್ಕೊಪ್ಪಿಸುವ ತಂತ್ರ ಯಾವಾಗ ಆರಂಭವಾಯಿತೋ? ಆಗ ವೈಜಾಗ್ ಉಕ್ಕು
ಕಾರ್ಖಾನೆಯ ಉಳಿವಿಗಾಗಿ ದೊಡ್ಡ ಹೋರಾಟಗಳೇ ಶುರುವಾಗಿದ್ದವು.

ಆದರೆ ಯಾವಾಗ ಕೇಂದ್ರದಲ್ಲಿ ಮೂರನೇ ಬಾರಿ ಮೋದಿ ನೇತೃತ್ವದ ಬಿಜೆಪಿ ಅಧಿಕಾರಕ್ಕೆ ಬಂತೋ? ಈ ಸರಕಾರದಲ್ಲಿ ಕರ್ನಾಟಕದ ಮಾಜಿ ಮುಖ್ಯ ಮಂತ್ರಿ ಎಚ್.ಡಿ. ಕುಮಾರಸ್ವಾಮಿ ಉಕ್ಕು ಮತ್ತು ಭಾರೀ ಕೈಗಾರಿಕೆ ಸಚಿವರಾದರೋ? ಇದಾದ ನಂತರ ವೈಜಾಗ್ ಉಕ್ಕು ಕಾರ್ಖಾನೆಯ ವಿವರಗಳನ್ನು ತರಿಸಿಕೊಂಡಿದ್ದಾರೆ. ಅಷ್ಟೇ ಅಲ್ಲ, ಏಳೆಂಟು ದಿನಗಳ ಕಾಲ ದಿಲ್ಲಿಯಲ್ಲಿ ಕುಳಿತು ಈ ಕಾರ್ಖಾನೆ ಖಾಸಗಿಯವರ ವಶಕ್ಕೆ ಹೋಗದಂತೆ
ಮಾಡಲು ಸರಣಿ ಸಭೆಗಳನ್ನು ನಡೆಸಿದ್ದಾರೆ.

ಅಂತಿಮವಾಗಿ ಕಳೆದ ಬುಧವಾರ ವೈಜಾಗ್ ಉಕ್ಕು ಕಾರ್ಖಾನೆಯ ಬಗ್ಗೆ ಹೇಳಿಕೆ ನೀಡಿದ ಕುಮಾರಸ್ವಾಮಿ, ಕೆಲವರು ಹೇಳುವಂತೆ ವೈಜಾಗ್ ಉಕ್ಕು ಕಾರ್ಖಾನೆಯ ಪರಿಸ್ಥಿತಿ ಅಷ್ಟೇನೂ ವಿಷಮವಾಗಿಲ್ಲ. ಹೀಗಾಗಿ ಸದರಿ ಉಕ್ಕು ಕಾರ್ಖಾನೆಗೆ ಪುನಶ್ಚೇತನ ನೀಡುವುದಾಗಿ ನೇರವಾಗಿ ಹೇಳಿದ್ದಾರೆ. ಯಾವಾಗ ಕುಮಾರಸ್ವಾಮಿ ಈ ಮಾತುಗಳನ್ನಾಡಿದರೋ? ಇದಾದ ನಂತರ ಆಂಧ್ರಪ್ರದೇಶದಲ್ಲಿ ಕುಮಾರಸ್ವಾಮಿ ಜನಪ್ರಿಯರಾಗತೊಡಗಿದ್ದಾರೆ. ಅಂದ ಹಾಗೆ ವೈಜಾಗ್ ಉಕ್ಕು ಕಾರ್ಖಾನೆಯ ಪುನಶ್ಚೇತನಕ್ಕೆ ಸಂಬಂಧಿಸಿದಂತೆ ಕುಮಾರಸ್ವಾಮಿ ದಿಲ್ಲಿಯಲ್ಲಿ ಸಭೆ ನಡೆಸಲು ಶುರು ಮಾಡಿದಾಗ ಕೆಲ ಅಧಿಕಾರಿಗಳು ಈ ರೋಗಗ್ರಸ್ತ ಕಾರ್ಖಾನೆಯನ್ನು ನಡೆಸಲು ನಾವು ಬಂಡವಾಳ ಹೂಡಿದರೆ ಅದು ನೀರಿನಲ್ಲಿ ಹುಣಸೆ ಹಣ್ಣು ತೊಳೆದಂತಾಗುತ್ತದೆ. ಹೀಗಾಗಿ  ಖಾಸಗಿಯವ ರಿಗೆ ಇದನ್ನು ವಹಿಸುವುದೇ ಬೆಸ್ಟು ಎಂದರಂತೆ. ಆದರೆ ಈ ಸಂದರ್ಭದಲ್ಲಿ ಕಾರ್ಖಾನೆಗಿದ್ದ ಆಸ್ತಿಯ ವಿವರ ನೋಡಿದ ಕುಮಾರಸ್ವಾಮಿ ಹೌಹಾರಿದ್ದಾರೆ.

ಕಾರಣ? ಆರು ಸಾವಿರ ಎಕರೆಗೂ ಹೆಚ್ಚು ಭೂಮಿ ಹೊಂದಿರುವ ವೈಜಾಗ್ ಉಕ್ಕು ಕಾರ್ಖಾನೆಯ ಆಸ್ತಿ ಮೌಲ್ಯ ಸುಮಾರು ಐದು ಲಕ್ಷ ಕೋಟಿ ರುಪಾಯಿಗಳಷ್ಟಿದ್ದರೆ, ಅದನ್ನು ಖಾಸಗಿಯವರಿಗೆ ಕೇವಲ ಮೂವತ್ತು ಸಾವಿರ ಕೋಟಿ ರುಪಾಯಿಗಳಿಗೆ ಮಾರಾಟ ಮಾಡುವ ತಂತ್ರ ನಡೆದಿದ್ದು ಅವರ ಗಮನಕ್ಕೆ ಬಂದಿದೆ. ಹೀಗಾಗಿ ಸರಣಿ ಸಭೆಗಳನ್ನು ಮಾಡಿದ ಕುಮಾರಸ್ವಾಮಿ ಅಂತಿಮವಾಗಿ ವೈಜಾಗ್ ಉಕ್ಕು ಕಾರ್ಖಾಣೆಯನ್ನು ಪುನಶ್ಚೇತನಗೊಳಿಸುವ ಮಾತನಾಡಿದ್ದಾರೆ. ಇಂತಹ ಮಾತುಗಳ ಮೂಲಕ ಒಂದೇ ದಿನದಲ್ಲಿ ಆಂಧ್ರಪ್ರದೇಶದಲ್ಲಿ ಸಂಚಲನ ಸೃಷ್ಟಿಸಿದ್ದಾರೆ.

ಶುಕ್ರವಾರದ ಸೀಕ್ರೆಟ್ ಮೀಟಿಂಗು
ಕಳೆದ ಶುಕ್ರವಾರ ಕೇಂದ್ರದ ಉಕ್ಕು ಮತ್ತು ಭಾರೀ ಕೈಗಾರಿಕಾ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರನ್ನು ಕರ್ನಾಟಕದ ಹಿರಿಯ ಸಚಿವರೊಬ್ಬರು ರಹಸ್ಯವಾಗಿ ಭೇಟಿ ಮಾಡಿದ್ದರಂತೆ. ಈ ಭೇಟಿಯ ಸಂದರ್ಭದಲ್ಲಿ ಅವರು ಮಾತಾಡಿದ್ದೇನು? ಎಂಬುದೇ ರಾಜ್ಯ ಬಿಜೆಪಿ ಪಾಳಯದ ಲೇಟೆ ಹಾಟ್ ನ್ಯೂಸು.

ಮೂಲಗಳ ಪ್ರಕಾರ, ಕುಮಾರಸ್ವಾಮಿ ಅವರನ್ನು ಇತ್ತೀಚೆಗೆ ಸತತವಾಗಿ ಭೇಟಿಯಾಗುತ್ತಿರುವ ಈ ಸಚಿವರು ಮೊನ್ನೆ ಶುಕ್ರವಾರ ಈಗಿನ ಸ್ಥಿತಿಯ ಬಗ್ಗೆ ಚರ್ಚಿಸಿದ್ದಾರೆ. ಅದೇ ಕಾಲಕ್ಕೆ, ಬಿಜೆಪಿ-ಜೆಡಿಎಸ್ ಮೈತ್ರಿಕೂಟದ ಜತೆ ಬರಲು ನಾನು ತಯಾರಿದ್ದೇನೆ. ಈಗಾಗಲೇ ನನ್ನ ಜತೆ ಕಾಂಗ್ರೆಸ್ಸಿನ ನಲವತ್ತೆರಡು ಶಾಸಕರು ಬರಲು ತಯಾರಿದ್ದು, ಪರ್ಯಾಯ ಸರಕಾರ ರಚಿಸುವುದು ಖಚಿತವಾದರೆ ಇನ್ನಷ್ಟು ಮಂದಿ ಬರುತ್ತಾರೆ ಎಂದಿದ್ದಾರೆ.

ಹೀಗೆ ಪರ್ಯಾಯ ಸರಕಾರ ರಚನೆಯಾದರೆ ಎರಡು ವರ್ಷದ ಮಟ್ಟಿಗೆ ನನ್ನನ್ನು ಸಿಎಂ ಮಾಡಬೇಕು. ತದನಂತರ ಬಿಜೆಪಿ, ಜೆಡಿಎಸ್‌ನಿಂದ ಯಾರಾದರೂ ಸಿಎಂ ಆಗಲಿ ಅಂತ ಈ ಸಚಿವರು ಕುಮಾರಸ್ವಾಮಿ ಅವರಿಗೆ ಹೇಳಿದ್ದಾರೆ ಎಂಬುದೇ ಬಿಜೆಪಿ ಪಾಳಯಕ್ಕಿರುವ ಸದ್ಯದ ಹಾಟ್ ನ್ಯೂಸು.
ಅಂದ ಹಾಗೆ ಪರ್ಯಾಯ ಸರಕಾರ ರಚನೆಯ ಮಾತು ಸರಳವಾಗಿಲ್ಲವಾದರೂ ಅಧಿಕಾರ ಹಂಚಿಕೆಯ ಮಾತು ಶೀಘ್ರದ ಕಾಂಗ್ರೆಸ್ಸನ್ನು ತಲ್ಲಣ ಗೊಳಿಸಲಿದೆ. ಈ ಅಂಶವೇ ಕಾಂಗ್ರೆಸ್ಸಿನ ಬಹುತೇಕ ಶಾಸಕರ ಪಕ್ಷಾಂತರಕ್ಕೆ ಕಾರಣವಾಗಲಿದೆ ಎಂಬುದು ಈ ಸಚಿವರ ಲೆಕ್ಕಾಚಾರವಂತೆ.

Leave a Reply

Your email address will not be published. Required fields are marked *

error: Content is protected !!