Thursday, 19th September 2024

ಬಣ್ಣ ಬಣ್ಣದ ಚಿತ್ರ ವಿಚಿತ್ರ ಕಪ್ಪೆಗಳು

ಸುಧಕ್ಕನ ಕಥೆಗಳು

ಸುಧಾಮೂರ್ತಿ

‘ಇಂದು ಮನೆಯ ಸ್ವಚ್ಛತೆಯ ದಿನ’ಎಂದು ಅಜ್ಜಿ ಬೆಳಗಿನಿಂದಲೇ ಹೇಳಿದಳು. ಮಕ್ಕಳು ರಜೆಗೆ ಬಂದಾಗ ಒಂದು, ಎರಡು ದಿನ
ಹಳೆಯ ಸಾಮಾನು ಇರಿಸಿದ ಕೋಣೆಯನ್ನು ಸ್ವಚ್ಛಮಾಡಿಸುವುದು ವಾಡಿಕೆಯಾಗಿತ್ತು. ಮಕ್ಕಳಿಗಂತೂ ತುಂಬಾ ಪ್ರೀತಿಯ ಕೆಲಸ. ಆ ಕೋಣೆಯಲ್ಲಿ ಅನೇಕ ಚಿತ್ರ, ವಿಚಿತ್ರ ಸಾಮಾನುಗಳು ಕಾಣಸಿಗುತ್ತಿದ್ದವು.

ಹಳೆಯ ಕಾಲದ ಪಾತ್ರೆ, ಈಳಿಗೆ ಮಣೆ, ಹೊರಸು, ಕಬ್ಬಿಣದ ತೊಟ್ಟಿಲು, ಚೆನ್ನಮಣೆ. ಇಂದು ಎಲ್ಲರೂ ಸೇರಿ ಧೂಳು ಕೊಡವು ತ್ತಿದ್ದಾಗ ಅಜ್ಜಿ ‘ಮಕ್ಕಳೇ, ಇಂದು ರವಿ ಮತ್ತು ರಜನಿ ಬರ‍್ತಾರೆ’ ಎಂದಳು. ಮಕ್ಕಳು ಸಂತೋಷದಿಂದ ‘ಹೌದಾ ಯಾವಾಗ? ಎಷ್ಟು ದಿನ ಇರ‍್ತಾರೆ? ನಮ್ಮ ಮನೆಗೆ ಬರ‍್ತಾರಲ್ಲ !’ ಹೀಗೆ ಅನೇಕ ಪ್ರಶ್ನೆಗಳನ್ನು ಒಂದೇ ಸಮನೆ ಕೇಳಹತ್ತಿದರು. ವಿಷ್ಣು ಕಾಕಾ ಅಜ್ಜನ ಪರಮಮಿತ್ರ. ಎಷ್ಟೋ ವರ್ಷಗಳಿಂದ ಅವರ ಸ್ನೇಹ ಇದೆ. ವಾಸಂತಿ ಕಾಕು ತೀರಿ ಎರಡು ವರ್ಷವಾಗಿದೆ. ವಿಷ್ಣು ಕಾಕಾನಿಗೆ ರವಿ ಮತ್ತು ರಜನಿ ಮೊಮ್ಮಕ್ಕಳು. ಭೂಪಾಲಿನಲ್ಲಿ ಓದುತ್ತಾರೆ. ಆದರೆ ಪ್ರತಿ ವರ್ಷ ರಜೆಗೆ ಬಂದೇ ಬರ‍್ತಾರೆ.

ರಾಮು ಅವರ ಮನೆಯಲ್ಲಿ ಅನೇಕ ವರ್ಷದಿಂದ ಅಡುಗೆ ಕೆಲಸ ಮಾಡಿಕೊಂಡಿದ್ದಾನೆ. ರವಿ ಮತ್ತೂ ರಜನಿ ತಮ್ಮ ಮನೆಗಿಂತ ಅಜ್ಜಿಯ ಮನೆಯಲ್ಲಿಯೇ ಇರುವುದು ಹೆಚ್ಚು. ಅಜ್ಜಿ ಇಲ್ಲದ ಅವರಿಗೆ ಈ ಅಜ್ಜಿಯೆಂದರೆ ತುಂಬಾ ಪ್ರೀತಿ ಸಲುಗೆ. ಅಜ್ಜಿಗೂ ಹಾಗೆ. ಹೀಗಾಗಿ ಮಕ್ಕಳಿಗೆ ರವಿ ಮತ್ತು ರಜನಿ ಎಂದರೆ ತುಂಬಾ ಖುಷಿ. ‘ಈ ಹೊತ್ತು ಸಂಜೆ ಬರ‍್ತಾರಂತೆ. ನಾಳೆ ಅವರಿಗೂ ಇಲ್ಲಿಯೇ ಊಟಕ್ಕೆ ಬರಲು ಹೇಳಿದ್ಧೀನಿ. ಮಕ್ಕಳೇ ನಾನು ಹಪ್ಪಳ ಮಾಡ್ತೇನಿ. ರಾಮೂನೂ ಬರ‍್ತಾನೆ. ನೀವೆಲ್ಲರೂ ನನಗೆ ಸಹಾಯ  ಮಾಡ ಬೇಕು’.

ಅಜ್ಜಿ ಅಪ್ಪಣೆ ಕೊಟ್ಟಳು. ಬೇಸಿಗೆಯ ರಜೆಯಲ್ಲಿ ಅಜ್ಜಿಯ ಮನೆಯಲ್ಲಿ ಕಾರ್ಖಾನೆಯೇ ತೆಗೆದಿರುತ್ತದೆ. ಹಪ್ಪಳ, ಸಂಡಿಗೆ, ಉಪ್ಪಿನ ಕಾಯಿ, ಉಪ್ಪು ಮೆಣಸಿನಕಾಯಿ, ಹೀಗೆ ಅನೇಕ ಪದಾರ್ಥ ಇಡೀ ವರ್ಷಕ್ಕೆ ಆಗುವಷ್ಟು ಅಜ್ಜಿ ತಯಾರಿಸುತ್ತಾಳೆ. ಅಲ್ಲದೇ ಮಕ್ಕಳ ಜತೆಗೆ ಅವರವರ ಮನೆಗೂ ಕಳಿಸುತ್ತಾಳೆ. ಹಪ್ಪಳಕ್ಕಿಂತ ಹಪ್ಪಳದ ಹಿಟ್ಟು ತುಂಬಾ ರುಚಿಎಂದು ಮಕ್ಕಳು ಅಜ್ಜಿಗೆ ದುಂಬಾಲು ಬೀಳುತ್ತಾರೆ.

ಹೀಗೆ ಕೋಣೆಯನ್ನು ಸ್ವಚ್ಛ ಮಾಡುವಾಗ ಕೃಷ್ಣನ ಕಣ್ಣಿಗೆ ಬಿದ್ದದ್ದು ಮರದ ಪೆಟ್ಟಿಗೆ. ಅದು ಹಳೆಯ ಹೊರಸಿನ ಕೆಳಗೆ ಇದ್ದಿತು. ಅದನ್ನು ಯಾರೂ ಈವರೆಗೆ ನೋಡಿರಲಿಲ್ಲ. ಅದನ್ನು ಹೊರಗೆ ತಂದು ಮಕ್ಕಳೆಲ್ಲಾ ಬೆಳಕಿನಲ್ಲಿ ನೋಡಿದರು. ಪೆಟ್ಟಿಗೆಯ ಮೇಲೆ ಬಳ್ಳಿ, ಹೂವು, ಪಕ್ಷಿ, ಹಣ್ಣು, ಹೀಗೆ ಸುಂದರವಾಗಿ ಕೆತ್ತನೆ ಮಾಡಿದ್ದರು. ಅದನ್ನು ತೆರೆದಾಗ ಅದರಲ್ಲಿ ಚಿಕ್ಕ ದೊಡ್ಡ ಹೀಗೆ ವಿಭಾಗ ಗಳಿದ್ದವು. ಅದಕ್ಕೆ ಬೀಗ ಹಾಕುವ ವಿಚಿತ್ರವಾದ ಅಡ್ಡಣಿಗೆ ಇದ್ದಿತು. ಮಕ್ಕಳೆಲ್ಲಾ ಕುತೂಹಲದಿಂದ ‘ಇದರಲ್ಲಿ ಏನಿರಬಹುದು? ಏನು ಇದ್ದೀತು ಎಂದು ಅಜ್ಜನ ಮುಖ ನೋಡಿದರು.

ಓಹ್ ಈ ಪೆಟ್ಟಿಗೆ ಇಲ್ಲಿದೆಯಾ? ನಾನು ಅನೇಕ ದಿನಗಳಿಂದ ಹುಡುಕ್ತಾ ಇದ್ದೆ. ಇದನ್ನು ನನ್ನ ಹಳೇ ಸ್ನೇಹಿತರು ಒಂದು ದೀಪಾ ವಳಿಗೆ ಉಡುಗೊರೆ ಕೊಟ್ಟಿದ್ದರು. ಅವರದ್ದು ಬಡಗಿಯ ಅಂದರೆ ಗುಡಿಗಾರರ ಮನೆತನ’ ಎಂದರು. ಅಜ್ಜ ಹಾಗೆಂದರೇನು ಅಜ್ಜ? ಎಂದಳು ಅನುಷ್ಕಾ. ‘ಹಿಂದೆ ನಮ್ಮೂರಲ್ಲಿ ಮರದ, ಕೆತ್ತನೆಯ ಕೆಲಸ ಮಾಡುವ, ರಥದ ಕೆಲಸ ಮಾಡುವವರಿಗೆ ಗುಡಿ ಗಾರರು ಅನ್ನುತ್ತಿದ್ವಿ. ತುಂಬಾ ಸುಂದರವಾದ ಕೆತ್ತನೆಯ ಕೆಲಸ ಮಾಡ್ತಿದ್ರು. ‘ಇದರಲ್ಲಿ ನೀನೇನು ಇಡ್ತಿದ್ದಿ ಅಜ್ಜ?’ ಎಂದು ಕೇಳಿದ ರಘು.

‘ನಾನು ಏನು ಇಡಬೇಕು? ಆದ್ರೆ ಹಿಂದೆ ತುಂಬಾ ಶ್ರೀಮಂತರು ಇಂಥಾ ಪೆಟ್ಟಿಗೇನ್ನ ಗುಡಿಕಾರರಲ್ಲಿ ಮಾಡಿಸಿ, ಅದರಲ್ಲಿ ವಜ್ರ, ಚಿನ್ನದ ನಾಣ್ಯ, ಆಭರಣ ಇಟ್ಟು ಬೀಗಹಾಕಿ ಯಾರಿಗೂ ಕಾಣದಂತೆ ಇಡ್ತಿದ್ರಂತೆ. ನಾನು ಹಳೇ ಸ್ಟ್ಯಾಂಪ್ಸ್ ಅಂದ್ರೆ ಅಂಚೆ ತಿಕೀಟು ಸಂಗ್ರಹ ಮಾಡ್ತೀದ್ದಾಗ ಇದರಲ್ಲಿ ಬೇರೆ ಬೇರೆ ದೇಶದ ತಿಕೀಟು ಇಡ್ತಿದ್ದೆ’ ಎಂದು ಅಜ್ಜ ನೆನಪಿಸಿಕೊಂಡರು. ‘ ಹೌದು ನೀವಿದ್ದೆಲ್ಲಾ ಹೇಳಿದಾಗ ನಮ್ಮಕ್ಕ ನನಗೆ ಇಂಥದೇ ಒಂದು ಕಥೆ ಹೇಳಿದ್ದು ನೆನಪಾಯ್ತು’ ಎಂದಳು ಅಜ್ಜಿ ನಸುನಗುತ್ತ.

ಮಕ್ಕಳು ಕೂಡಲೇ ಎಲ್ಲ ಕೆಲ್ಸ ಬಿಟ್ಟು ಓಡಿ ಹೋಗಿ ‘ ಅಜ್ಜಿ ಆ ಕಥೆ ಹೇಳು’ ಎಂದು ದುಂಬಾಲು ಬಿದ್ದರು. ಮೊದಲು ಕೈಯಲ್ಲಿ ಹಿಡಿದ ಕೆಲ್ಸ ಮುಗ್ಸಿ. ಆ ಮೇಲೆ ಹೇಳ್ತೀನಿ’ ಎಂದು ಅಜ್ಜಿ ತಾಕೀತು ಮಾಡಿದಳು. ಇದು ನನ್ನ ಕಥೆಯಲ್ಲ, ಅಕ್ಕ ಹೇಳಿದ್ದು. ಒಂದಾ
ನೊಂದು ಊರಲ್ಲಿ…. ಅಜ್ಜಿ ಕಥೆ ಶುರು ಮಾಡಿದ್ಲು. ಬನ್ನಿ ನಾವೆಲ್ಲರು ಮಕ್ಕಳೊಂದಿಗೆ ಸೇರಿ ಆ ಅಡಕಲು ಕೋಣೆಯ ತಂಪಾದ ನೆಲದ ಮೇಲೆ ಕುಳಿತು ಕಥೆ ಕೇಳೋಣ. ಶ್ರೀಪತಿ ಒಳ್ಳೆಯ ವ್ಯಾಪಾರಿ. ಅವನಿಗೆ ಒಂದು ಹೊಸ ಜಾಗದಲ್ಲಿ ಹೊಸ ವ್ಯಾಪಾರ ಮಾಡಬೇಕೆನಿಸಿತು. ಅದಕ್ಕೆ ಆತ ವಿಜಯಪುರಕ್ಕೆ ಹೋಗಿ ಅಲ್ಲಿದ್ದವರಲ್ಲಿ ನಾಲ್ಕಾರು ಜನರಿಗೆ ವಿಚಾರಿಸಿ ತನ್ನ ದಿನಸಿಯ ಅಂಗಡಿ ತೆರೆದ. ವ್ಯಾಪಾರ ಚೆನ್ನಾಗಿ ನಡೆಯಿತು. ಅವನೊಂದಿಗೆ ಅವನ ತಾತನೂ ಬಂದಿದ್ದರು.

ಒಂದು ಮನೆಯನ್ನು ಕೊಂಡು, ಮದುವೆಯಾಗು ಎಂದು ತಾತ ಹೇಳುತ್ತಲೇ ಇದ್ದರು. ಒಂದು ದಿನ ಒಬ್ಬ ವಯಸ್ಸಾದವರು ಅವನ ಬಳಿಗೆ ಬಂದು ‘ಶ್ರೀಪತಿ ಯವರೇ ನೀವು ಮನೇನ್ನ ಖರೀದಿಸಬೇಕು ಅಂತೀರಂತೆ. ನಾನು ನನ್ನ ಮನೇನ ಮಾರ್‌ಬೇಕು ಅಂತಿದ್ದೀನಿ. ಊರ ಮಧ್ಯೆದಲ್ಲಿಯೇ, ಒಳ್ಳೆ ಜಾಗದಲ್ಲಿಯೇ ನನ್ನ ಮನೆ ಇದೆ. ಆದರೆ ತುಂಬಾ ಹಳೇ ಕಾಲದ್ದು’. ಎಂದರು. ‘ಸರಿ ನಾನು ನೋಡ್ತೀನಿ’ ಎಂದರು ಶ್ರೀಪತಿ. ಜಾಗವೇನೋ ಚೆನ್ನಾಗಿತ್ತು. ಆದರೆ ಮನೆ ತೀರಾ ಹಳೆಯದಾಗಿತ್ತು. ಸುಮಾರು ನೂರಕ್ಕೂ ಹೆಚ್ಚು ವರ್ಷದ ಮನೆ.

ತಾತನೂ ಒಪ್ಪಿದರು. ಮನೆ ಖರೀದಿಯೂ ಆಯಿತು. ಮನೆ ಮಾರಿದವರು ಗಿರಿಧರ. ಹೋಗುವಾಗ ಕಣ್ಣೀರಿಟ್ಟು ‘ ನಮ್ಮ ಹಿರಿಯರು ತುಂಬಾ ಶ್ರೀಮಂತರಾಗಿದ್ದರಂತೆ ಏನೋ ಕಾಲಾಂತರದಲ್ಲಿ ನಮ್ಮ ಮನೆತನದಲ್ಲಿ ಸಿರಿವಂತಿಕೆ ಹೋಗಿ ನಾವೆಲ್ಲ ಈಗ ತೀರಾ ಬಡವರಾಗಿ ಮನೆಮಾರಿ ಬೇರೆ ಊರಿಗೆ ಹೋಗುವಂತಾಗಿದೆ. ಹಿರಿಯರಿಂದ ಬಂದ ಮನೆ’ ಎಂದು ಹೇಳಿ ಹೊರಟು ಹೋದರು.
ಶ್ರೀಪತಿ ಸಾಯಂಕಾಲ ಮನೆಯನ್ನು ಮತ್ತೊಂದು ಸಾರಿ ನೋಡಿ ಬರೋಣ ಎಂದು ಹೊರಟ. ಅಂದು ವಿಶೇಷವಾಗಿ ಗಾಳಿ ಮಳೆ ಬಂದಿತು. ಮನೆಯ ಪಕ್ಕದಲ್ಲಿದ್ದ ದೊಡ್ಡ ಬೇವಿನ ಮರ ಹಠಾತ್ತಾಗಿ ಮನೆಯ ಮೇಲೆ ಬಿದ್ದಿತು. ಶ್ರೀಪತಿ ಮನೆಗೆ ಬಂದಾಗ ಅದರ
ಗೋಡೆ ಕುಸಿದು ಬಿದ್ದಿತ್ತು. ಅದರ ಮಧ್ಯೆ ಮರದ ಪೆಟ್ಟಿಗೆ ತುದಿ ಕಾಣುತ್ತಿತ್ತು.

ಹತ್ತಿರದ ಕಲ್ಲಿನಿಂದ ಸುತ್ತಲಿನ ಮಣ್ಣು ತೆಗೆದು ಶ್ರೀಪತಿ ಪೆಟ್ಟಿಗೆಯನ್ನು ಗೋಡೆಯಿಂದ ಹೊರತೆಗೆದ. ಅದನ್ನು ಮನೆಗೆ ತೆಗೆದುಕೊಂಡು ಬಂದು ತಾತನಿಗೆ ತೋರಿಸಿದ. ರಾತ್ರಿ ಅವರಿಬ್ಬರೇ ಕುಳಿತು ಆಪೆಟ್ಟಿಗೆಯನ್ನು ತೆರೆದಾಗ ಬಣ್ಣ ಬಣ್ಣದ ಕಪ್ಪೆಗಳು ಹೊರಬಂದವು. ಶ್ರೀಪತಿ ಗಾಬರಿಯಿಂದ ಪೆಟ್ಟಿಗೆ ಮುಚ್ಚಿದ. ತಾತಾ ಶಾಂತವಾಗಿ ಹೇಳಿದರು. ಈ ಮನೆಯಲ್ಲಿ ಬಾಳಿದವರು ಸಿರಿವಂತರು. ತಮ್ಮ ಕಷ್ಟಕಾಲಕ್ಕೆ ಇರಲಿ ಅಂತಾ ಬಹುಶಃ ಚಿನ್ನದ ನಾಣ್ಯ, ಆಭರಣ ಇಂಥಾ ಪೆಟ್ಟಿಗೆಯಲ್ಲಿ ಇರಿಸಿ ಗೋಡೆಯ ಮಧ್ಯದಲ್ಲಿ ಇರಿಸಬಹುದು. ಮುಂದಿನ ಜನರಿಗೆ ಹೇಳಿದ್ದರೋ, ಬಿಟ್ಟಿದ್ದರೋ ಗೊತ್ತಿಲ್ಲ. ಈ ಸೊತ್ತು ಅವರದ್ದು. ನಾವು ಮುಟ್ಟುವುದು ಬೇಡ’.

‘ಎಂಥಾ ಸ್ವತ್ತು ತಾತ. ಇದರಲ್ಲಿ ಕಪ್ಪೆ ಕಂಡವು. ನಾಲ್ಕು ಹೊರಕ್ಕೂ ಬಂದಿವೆ’ ಎಂದ ಶ್ರೀಪತಿ. ‘ ಹೌದು, ನಮ್ಮ ಕಣ್ಣಿಗೆ ಕಪ್ಪೆ. ಅದನ್ನು ಮಂತ್ರವಾದಿಯ ಕೈಯಿಂದ ಈ ಥರ ಮಾಡಿಸಿರಬಹುದು. ಇದನ್ನೆ ಅವರ ಮನೆತನದವರು ನೋಡಿದರೆ ನಿಜವಾದ ಸ್ವತ್ತು ಕಾಣಿಸುತ್ತದೆ. ಪರರ ಸ್ವತ್ತು ಮುಟ್ಟಬಾರದು’ ಎಂದು ವಿವೇಕ ಹೇಳಿದರು.

’ಹಾಗಾದರೆ ನಾನು ಏನು ಮಾಡಲಿ?’ ಈ ಪೆಟ್ಟಿಗೆಯನ್ನು ಜೋಪಾನವಾಗಿರಿಸು. ಈ ಮನೆಯನ್ನು ಮಾರಿದ ಗಿರಿಧರನನ್ನು ಹುಡುಕು. ಸಿಗದಿದ್ದರೆ ನಿನ್ನ ಅಂಗಡಿಯ ಮುಂದಿರುವ ಕೊಳದಲ್ಲಿ ಈ ನಾಲ್ಕು ಕಪ್ಪೆಯನ್ನು ಇರಿಸು. ಬಂದವರು ನೋಡಲಿ. ಆಮೇಲೆ ನೋಡೋಣ’ ಎಂದರು. ತಾತಾ ಹೇಳಿದಂತೆ ಮಾಡಿದ ಶ್ರೀಪತಿ. ಹೊಸಮನೆ ಕಟ್ಟಿಸಿದ. ಗಿರಿಧರನನ್ನು ಬೇಕಾದಷ್ಟು ಹುಡುಕಿಸಿದರೂ ಸಿಗಲೇ ಇಲ್ಲ. ಕಾಲಾಂತರದಲ್ಲಿ ತಾತನೂ ತೀರಿಕೊಂಡರು. ಶ್ರೀಪತಿಯ ವ್ಯಾಪಾರವೂ ಚೆನ್ನಾಗಿತ್ತು. ಅವನ ಅಂಗಡಿಗೆ ಜನ ಈಗ ಕಪ್ಪೆ ಅಂಗಡಿ ಅನ್ನುತ್ತಿದ್ದರು. ಅಂಗಡಿಗೆ ಬಂದವರು, ಕೊಳದಲ್ಲಿದ್ದ ಕಪ್ಪೆ ನೋಡಿ ‘ಶ್ರೀಪತಿ ಈ ಕಪ್ಪೆ ಎಷ್ಟು ಬಣ್ಣ ಬಣ್ಣದ್ದಿದೆ.

ಎಲ್ಲಿಂದ ತಂದೆ. ಯಾಕೆ ಸಾಕ್ತೀಯಾ? ಕಪ್ಪೆ ಇದ್ದರೆ ಹಾವು ಬರ‍್ತದೆ’ ಹೀಗೆ ಹಲವಾರು ಪ್ರಶ್ನೆ ಕೇಳಿದರೂ ಶ್ರೀಪತಿ ನಕ್ಕು ಸುಮ್ಮನಾಗು ತ್ತಿದ್ದ. ಕಪ್ಪೆ ಇದ್ದರೂ ಹಾವು ಬರಲೇ ಇಲ್ಲ. ಒಂದು ದಿನ ಮಧ್ಯಾಹ್ನ ಒಬ್ಬ ತರುಣ ಬಂದ. ಬಾಯಾರಿಕೆ ಎಂದು ನೀರು ಕೇಳಿದ. ನೀರು ಕುಡಿ ಯುತ್ತಾ ಕೊಳದ ಕಡೆ ನೋಡಿ ‘ಯಜಮಾನ್ರೆ ಚಿನ್ನದ ನಾಲ್ಕು ನಾಣ್ಯ ಕೊಳದಲ್ಲಿ ಬಿದ್ದಿದೆ. ನಿಮ್ಮದ್ದೇಯಾ? ಎತ್ತಿ ಕೊಳ್ಳಿ. ಅದುಹೇಗೆ ಚಿನ್ನನ ನೀರಿಗೆ ಎಸದೀರಿ?’ ಎಂದು ಕೇಳಿದ. ಅವನ ಪ್ರಶ್ನೆ ಶ್ರೀಪತಿಗೆ ಸಂತೋಷ ತಂದಿತು.

‘ಅಯ್ಯೋ ನಿನ್ನ ಹೆಸರೇನು? ‘ನನ್ನ ಹೆಸರು ಗಿರಿಧರ’ ‘ನಿನ್ನ ತಾತನ ಹೆಸರು’ ‘ಅವರೂ ಗಿರಿಧರರಂತೆ. ಇದೇ ಊರಿನವರಂತೆ.
ಇಲ್ಲಿ ಮನೆಮಾರಿ, ಅದನ್ನೇ ಮನಸ್ಸಿಗೆ ಹಚ್ಚಿಕೊಂಡು ಹೋಗಿಬಿಟ್ರಂತೆ. ‘ಈಗ ನೀನ್ ಏನ್ ಮಾಡ್ತೀಯಾ’ ‘ಬಡತನದಿಂದ ಅರ್ಧಕ್ಕೆ ಓದು ನಿಲ್ಸಿದಿನಿ’ ಶ್ರೀಪತಿ ಆತನನ್ನು ಒಳಗೆ ಕರೆದೊಯ್ದು ಪೆಟ್ಟಿಗೆ ಕೊಟ್ಟು ‘ಇನ್ನು ಓದು ನಿಲ್ಲಿಸಬೇಡ’ ಎಂದು ಹೇಳಿದ.

Leave a Reply

Your email address will not be published. Required fields are marked *