Tuesday, 28th May 2024

ಇಕ್ಕಟ್ಟಿಗೆ ಸಿಲುಕಿಸಿದ ಕಾಂಗ್ರೆಸ್ ಗ್ಯಾರಂಟಿ

ವರ್ತಮಾನ

maapala@gmail.com

ಜನರು ಜಾಗೃತರಾಗಿರುವಾಗ ಯಾವುದೇ ಭರವಸೆಗಳನ್ನು ನೀಡುವ ಮುನ್ನ ಹತ್ತು ಬಾರಿ ಯೋಚಿಸಬೇಕು. ಕಣ್ಣ ಮುಂದೆ ಕೇವಲ ಅಧಿಕಾರದ ಕುರ್ಚಿಯನ್ನು ಮಾತ್ರ ಇಟ್ಟುಕೊಂಡು ಭರವಸೆಗಳನ್ನು ನೀಡಿದರೆ ಅದರಿಂದ ಯಾವ ರೀತಿಯ ಪರಿಣಾಮ ಗಳುಂಟಾಗುತ್ತದೆ ಎಂಬುದಕ್ಕೆ ಕಾಂಗ್ರೆಸ್‌ನ ಗ್ಯಾರಂಟಿ ಯೋಜನೆಗಳೇ ಸಾಕ್ಷಿ. ಈ ಗ್ಯಾರಂಟಿಗಳು ಈಗ ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದೆ.

ಕಾಂಗ್ರೆಸ್‌ನ ಗ್ಯಾರಂಟಿ ಘೋಷಣೆಗಳನ್ನು ನಂಬಿ ರಾಜ್ಯದ ಜನರು ಪಕ್ಷವನ್ನು ಅಧಿಕಾರಕ್ಕೆ ತಂದಿದ್ದಾರೆ. ಯಾವುದೇ ಪಕ್ಷ ಈ ರೀತಿಯ ಭರವಸೆಗಳನ್ನು ನೀಡಿ ಅಧಿಕಾರಕ್ಕೆ ಬಂದಾಗ ಅವುಗಳನ್ನು ಅನುಷ್ಠಾನಗೊಳಿಸಲು ಸ್ವಲ್ಪ ಕಾಲಾವಕಾಶ ಬೇಕಾಗುತ್ತದೆ. ಈ ಹಿಂದೆಯೂ ರಾಜಕೀಯ ಪಕ್ಷಗಳು ಸಾಕಷ್ಟು ಭರವಸೆಗಳನ್ನು ನೀಡಿಯೇ ಅಧಿಕಾರಕ್ಕೆ ಬಂದು ಬಳಿಕ ಹಂತ ಹಂತವಾಗಿ ಅವುಗಳನ್ನು ಈಡೇರಿಸಿಕೊಂಡು ಬರುತ್ತಿತ್ತು.

ಜನರೂ ತರಾತುರಿ ಮಾಡದೆ ಅದಕ್ಕೆ ಹೊಂದಿಕೊಳ್ಳುತ್ತಿದ್ದರು. ಅದೇ ರೀತಿ ಚುನಾವಣೆ ವೇಳೆ ಪಕ್ಷ ನೀಡಿದ ಸಾಕಷ್ಟು ಭರವಸೆ ಗಳು ಅನುಷ್ಠಾನಕ್ಕೆ ಬಾರದೆ ಹೋಗಿದ್ದೂ, ಜನರು ಅದನ್ನು ಮರೆತುಬಿಟ್ಟಿದ್ದೂ ಉಂಟು. ಆದರೆ, ಕರ್ನಾಟಕದಲ್ಲಿ ಮಾತ್ರ ಆ ರೀತಿ ಆಗುತ್ತಿಲ್ಲ. ಸರಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ಗ್ಯಾರಂಟಿ ಘೋಷಣೆಗಳನ್ನು ತಕ್ಷಣದಿಂದ ಜಾರಿಗೊಳಿಸ ಬೇಕು ಎಂದು ಪಟ್ಟು ಹಿಡಿದಿದ್ದಾರೆ. ಅದರಲ್ಲೂ ಪ್ರಮುಖ ವಾಗಿ ಪ್ರತಿ ಮನೆಗೆ ೨೦೦ ಯೂನಿಟ್ ಉಚಿತ ವಿದ್ಯುತ್ ಮತ್ತು ಮಹಿಳೆಯರಿಗೆ ಸಾರಿಗೆ ಸಂಸ್ಥೆ ಬಸ್‌ಗಳಲ್ಲಿ ಉಚಿತ ಪ್ರಯಾಣ ಎಂಬ ಎರಡು ಗ್ಯಾರಂಟಿಗಳು ಇದೀಗ ಸಂಘರ್ಷಕ್ಕೆ ಕಾರಣವಾಗುತ್ತಿವೆ.

ಅದಕ್ಕೆ ಸರಿಯಾಗಿ ಪ್ರತಿಪಕ್ಷಗಳು ವಿದ್ಯುತ್ ಬಿಲ್ ಪಾವತಿಸಬೇಡಿ, ಬಸ್ ಟಿಕೆಟ್ ಪಡೆಯಬೇಡಿ ಎಂದು ಹೇಳುವ ಮೂಲಕ ಉರಿಯುತ್ತಿರುವ ಬೆಂಕಿಗೆ ತುಪ್ಪ ಸುರಿಯುವ ಕೆಲಸ ಮಾಡುತ್ತಿದೆ. ಇದು ನೂತನ ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದೆ.
ಚುನಾವಣೆ ವೇಳೆ ಕಾಂಗ್ರೆಸ್‌ನ ಗ್ಯಾರಂಟಿ ಘೋಷಣೆಗಳ ವಿರುದ್ಧ ಆರಂಭದಿಂದಲೇ ಮುಗಿಬಿದ್ದಿದ್ದ ಬಿಜೆಪಿ ಸಾಕಷ್ಟು ಸವಾಲು ಗಳನ್ನು ಹಾಕಿತ್ತು. ಕಾಂಗ್ರೆಸ್ ಅಧಿಕಾರದಲ್ಲಿರುವ ಇತರೆ ರಾಜ್ಯಗಳಲ್ಲಿ ಈ ರೀತಿಯ ಗ್ಯಾರಂಟಿಗಳು ಘೋಷಣೆಗಳಾಗಿ ಉಳಿದಿವೆಯೇ ಹೊರತು ಅನುಷ್ಠಾನಕ್ಕೆ ಬಂದಿಲ್ಲ.

ಹೀಗಾಗಿ ರಾಜ್ಯದಲ್ಲೂ ಗ್ಯಾರಂಟಿ ಘೋಷಣೆಗಳು ಜಾರಿಗೆ ಬರುವುದಿಲ್ಲ ಎಂದು ಪ್ರಧಾನಿಯಾಗಿ ಬಿಜೆಪಿಯ ಎಲ್ಲಾ ನಾಯಕರೂ ಹೇಳಿಕೊಂಡು ಬಂದಿದ್ದರು. ಅಲ್ಲದೆ, ಇದರಿಂದ ರಾಜ್ಯದ ಆರ್ಥಿಕತೆ ಮೇಲೆ ದುಷ್ಪರಿಣಾಮ ಉಂಟಾಗುತ್ತದೆ. ರಾಜ್ಯ ದಿವಾಳಿ ಯಾಗುತ್ತದೆ ಎಂದೆಲ್ಲಾ ಹೇಳಲಾರಂಭಿಸಿದರು. ಇದರಿಂದಾಗಿ ಜನರು ಗ್ಯಾರಂಟಿಗಳನ್ನು ನಂಬುವುದಿಲ್ಲ ಎಂಬ ಸ್ಥಿತಿ ನಿರ್ಮಾಣ ವಾಗಿದ್ದರಿಂದ ಸರಕಾರ ಅಧಿಕಾರಕ್ಕೆ ಬಂದ ಮೊದಲ ಸಚಿವ ಸಂಪುಟದಲ್ಲೇ ಎಲ್ಲಾ ಐದು ಗ್ಯಾರಂಟಿಗಳನ್ನು ಜಾರಿಗೊಳಿಸುವು ದಾಗಿ ಕಾಂಗ್ರೆಸ್ ನಾಯಕರು ರಾಹುಲ್ ಗಾಂಧಿ ಅವರಿಂದಲೇ ಘೋಷಣೆ ಮಾಡಿಸಿದರು.

ಜತೆಗೆ ಹೋದ ಬಂದ ಕಡೆಯಲ್ಲೆಲ್ಲಾ ಹೇಳಿಕೊಂಡು ಜನರನ್ನು ನಂಬಿಸಿದರು. ಪರಿಣಾಮ ಕಾಂಗ್ರೆಸ್ ಸ್ಪಷ್ಟ ಬಹುಮತ ದೊಂದಿಗೆ ಅಧಿಕಾರಕ್ಕೆ ಬಂದು ಸರಕಾರ ರಚನೆ ಮಾಡಿತು. ಕಾಂಗ್ರೆಸ್ ಎಡವಿದ್ದು ಇಲ್ಲೇ. ಚುನಾವಣೆ ವೇಳೆ ನೀಡುವ
ಭರವಸೆಗಳನ್ನು ಅನುಷ್ಠಾನ ಮಾಡುವುದು ಆಡಳಿತ ಪಕ್ಷದ ಜವಾಬ್ದಾರಿ. ಹಿಂದೆಲ್ಲಾ ಜನರು ಭರವಸೆಗಳನ್ನು ನಂಬಿ ಮತ
ಹಾಕುತ್ತಿದ್ದಾರಾದರೂ ಅದರ ಜಾರಿ ಕುರಿತು ಹೆಚ್ಚು ತಲೆಕೆಡಿಸಿಕೊಳ್ಳುತ್ತಿರಲಿಲ್ಲ. ಆದರೆ, ಈಗ ಅವರಲ್ಲಿ ಜಾಗೃತಿ ಮೂಡಿದೆ. ಸಾಮಾಜಿಕ ಜಾಲತಾಣಗಳ ಬಳಕೆ ಹೆಚ್ಚಾಗಿದ್ದರಿಂದ ಅದರ ಬಗ್ಗೆ ಚರ್ಚೆಗಳು ನಡೆಯುತ್ತವೆ.

ಅನುಷ್ಠಾನವಾಗದಿದ್ದರೆ ಜನ ತಿರುಗಿ ಬೀಳುತ್ತಾರೆ. ಹೀಗಾಗಿ ಭರವಸೆಗಳನ್ನು ನೀಡುವ ಸಂದರ್ಭದಲ್ಲಿ ಅದರ ಸಾಧಕ- ಬಾಧಕ ಗಳನ್ನು ಅರಿತು, ಅವುಗಳು ಕಾರ್ಯಸಾಧ್ಯವೇ ಎಂಬುದನ್ನು ಯೋಚಿಸಬೇಕಾಗುತ್ತದೆ. ಆದರೆ, ಕಾಂಗ್ರೆಸ್ ಐದು ಗ್ಯಾರಂಟಿ ಗಳನ್ನು ಘೋಷಿಸುವಾಗ ಆ ಬಗ್ಗೆ ಯೋಚಿಸಲೇ ಇಲ್ಲ. ಹೇಗಾದರೂ ಮಾಡಿ ಅಧಿಕಾರಕ್ಕೆ ಬಂದರೆ ಸಾಕು ಎಂಬ ಹಪಹಪಿಯಲ್ಲಿ ಘೋಷಣೆ ಮಾಡಿತು. ಮೊದಲ ಸಂಪುಟದಲ್ಲೇ ಈ ಬಗ್ಗೆ ತೀರ್ಮಾನ ಕೈಗೊಳ್ಳುವ ಭರವಸೆ ನೀಡಿತು. ಅಷ್ಟೇ ಅಗಿದ್ದರೆ ಇಷ್ಟೊಂದು ದೊಡ್ಡ ಮಟ್ಟದ ಸಮಸ್ಯೆ ಸೃಷ್ಟಿಯಾಗುತ್ತಿರಲಿಲ್ಲ.

ಪಕ್ಷದ ನಾಯಕರು ಚುನಾವಣಾ ಪ್ರಚಾರದ ವೇಳೆ ೨೦೦ ಯೂನಿಟ್‌ವರೆಗೆ ಉಚಿತ ವಿದ್ಯುತ್ ನಂಗೂ ಇದೆ, ನಿಮಗೂ ಇದೆ. ಎಲ್ಲಾ ಮನೆಯ ಯಜಮಾನಿಗೂ ಮಾಸಿಕ ೨,೦೦೦ ರು. ಕೊಡುತ್ತೇವೆ. ಎಲ್ಲಾ ನಿರುದ್ಯೋಗಿ ಪದವೀಧರರು, ಡಿಪ್ಲೊಮಾ
ಪದವೀಧರರಿಗೂ ಮೂರು ವರ್ಷ ಕ್ರಮವಾಗಿ ೩,೦೦೦ ರು. ಮತ್ತು ೧,೫೦೦ ರು. ನೀಡುತ್ತೇವೆ. ಎಲ್ಲಾ ಮಹಿಳೆಯರಿಗೂ
ಸಾರಿಗೆ ಸಂಸ್ಥೆ ಬಸ್‌ಗಳಲ್ಲಿ ಉಚಿತ ಪ್ರಯಾಣ ಕಲ್ಪಿಸುತ್ತೇವೆ ಎಂದು ಹೇಳಿದರು.

ಬಿಪಿಎಲ್ ಕುಟುಂಬಕ್ಕೆ ಹತ್ತು ಕೆ.ಜಿ. ಅಕ್ಕಿ ಉಚಿತ ಎನ್ನುವ ಬದಲು ಬಿಪಿಎಲ್ ಕುಟುಂಬದ ಪ್ರತಿ ಸದಸ್ಯನಿಗೆ ೧೦ ಕೆ.ಜಿ. ಅಕ್ಕಿ ಉಚಿತ ಎಂದು ಘೋಷಿಸಿದರು. ಇದರಿಂದಾಗುವ ಆರ್ಥಿಕ ಹೊರೆಯ ಬಗ್ಗೆ ಅವರು ಅರಿತದ್ದೇ ಅಧಿಕಾರಕ್ಕೆ ಬಂದ ಮೇಲೆ.
ಏಕೆಂದರೆ, ರಾಜ್ಯದಲ್ಲಿ ಸುಮಾರು ೮೭ ಲಕ್ಷ ಮನೆಗಳಲ್ಲಿ ಮಾಸಿಕ ವಿದ್ಯುತ್ ಬಳಕೆ ೨೦೦ ಯೂನಿಟ್‌ಗಿಂತ ಕಡಿಮೆ ಇದೆ. ಸುಮಾರು ೨ ಕೋಟಿ ಕುಟುಂಬಗಳ ಪೈಕಿ ೧.೩ ಕೋಟಿಗೂ ಹೆಚ್ಚು ಕುಟುಂಬಗಳು ಮನೆ ಯಜಮಾನಿ ಹೆಸರಿನಲ್ಲಿ ನಡೆಯುತ್ತಿವೆ.

ಏಕೆಂದರೆ, ಸರಕಾರದ ಯೋಜನೆಗಳನ್ನು ಪಡೆದುಕೊಳ್ಳಬೇಕಾದರೆ, ಅದರಲ್ಲೂ ಮುಖ್ಯವಾಗಿ ಪಡಿತರ ಚೀಟಿ ಪಡೆಯ ಬೇಕಾದರೆ ಅದು ಮನೆ ಯಜಮಾನಿ ಹೆಸರಿನಲ್ಲೇ ಇರಬೇಕು ಎಂಬ ನಿಯಮ ರೂಪಿಸಲಾಗಿದೆ. ಸುಮಾರು ೧.೨೮ ಕೋಟಿ ಬಿಪಿಎಲ್ ಕುಟುಂಬಗಳಿದ್ದು, ಈ ಕುಟುಂಬಗಳಲ್ಲಿ ,ಸರಿ ಸುಮಾರು ೫ ಕೋಟಿ ಜನರಿದ್ದಾರೆ. ಅದರಲ್ಲಿ ಮಕ್ಕಳನ್ನು ಹೊರತು ಪಡಿಸಿ ಸುಮಾರು ೪ ಕೋಟಿ ವಯಸ್ಕರಿದ್ದಾರೆ. ಈ ಪೈಕಿ ೧.೨೮ ಬಿಪಿಎಲ್ ಕಾರ್ಡ್‌ಗಳಿಗೆ ಕೇಂದ್ರದಿಂದ ೫ ಕೆ.ಜಿ. ಅಕ್ಕಿ ಬರುತ್ತದೆ. ಅಂದರೆ, ೬.೪೦ ಕೋಟಿ ಕೆ.ಜಿ. ಅಕ್ಕಿ ಕೇಂದ್ರದಿಂದ ಉಚಿತವಾಗಿ ಬರುತ್ತದೆ.

ಆದರೆ, ಕಾಂಗ್ರೆಸ್ ಘೋಷಿಸಿರುವಂತೆ ಬಿಪಿಎಲ್ ಕುಟುಂಬದ ಪ್ರತಿ ವ್ಯಕ್ತಿಗೆ ೧೦ ಕೆ.ಜಿ. ಅಕ್ಕಿ ನೀಡಬೇಕಾದರೆ ೪೦ ಕೋಟಿ ಕೆ.ಜಿ. ಅಕ್ಕಿಯ ಅಗತ್ಯವಿದೆ. ಅಂದರೆ, ಹೆಚ್ಚುವರಿ ಸುಮಾರು ೩೩.೬೦ ಕೋಟಿ ಕೆ.ಜಿ. ಅಕ್ಕಿಗೆ ಬೇಕಾದ ಮೊತ್ತವನ್ನು ರಾಜ್ಯ ಸರಕಾರವೇ ಭರಿಸಬೇಕಿದೆ. ಅದೇ ರೀತಿ ನಿರುದ್ಯೋಗಿ ಪದವೀಧರರು, ಡಿಪ್ಲೊಮಾ ಪದವೀಧರರು ಕನಿಷ್ಠ ೫೦ ಲಕ್ಷದಷ್ಟಿ ದ್ದಾರೆ.

ಇನ್ನು ಈಗಾಗಲೇ ಶಾಲಾ ಮಕ್ಕಳಿಗೆ ರಿಯಾಯಿತಿ ದರದ ಬಸ್ ಪಾಸ್, ಹೆಣ್ಣುಮಕ್ಕಳಿಗೆ ಉಚಿತ ಬಸ್ ಪಾಸ್ ವ್ಯವಸ್ಥೆ ಇದೆ.
ಇದರ ಜತೆಗೆ ವಯಸ್ಕ ಹೆಣ್ಣು ಮಕ್ಕಳ ಸಂಖ್ಯೆ (ಮತದಾರರ ಪಟ್ಟಿಯಂತೆ ೨.೬೨ ಕೋಟಿ ಮಹಿಳೆಯರು) ಸಾಕಷ್ಟಿದ್ದು,
ಅವರಿಗೆ ಉಚಿತ ಬಸ್ ಪ್ರಯಾಣ ಕಲ್ಪಿಸಲು ಸಾವಿರಾರು ಕೋಟಿ ರು. ಬೇಕಾಗುತ್ತದೆ. ನಂಗೂ ಫ್ರೀ, ನಿಂಗೂ ಫ್ರೀ ಎಂದು ಕಾಂಗ್ರೆಸ್ ನಾಯಕರು ಹೇಳಿದಂತೆ ಐದು ಘೋಷಣೆಗಳ ಜಾರಿಗೆ ವಾರ್ಷಿಕವಾಗಿ ಕನಿಷ್ಠ ೨ ಲಕ್ಷ ಕೋಟಿ ರು. ಬೇಕಾಗುತ್ತದೆ. ಬಿಜೆಪಿ ಸರಕಾರದ ಅವಧಿಯಲ್ಲಿ ಮಂಡಿಸಿದ್ದ ರಾಜ್ಯದ ಬಜೆಟ್ ಗಾತ್ರ ೩.೦೩ ಲಕ್ಷ ಕೋಟಿ ರು. ಇದೀಗ ಕಾಂಗ್ರೆಸ್ ಸರಕಾರ ಹೊಸ ಬಜೆಟ್ ಮಂಡಿಸಿದರೂ ಬಜೆಟ್ ಗಾತ್ರ ೩.೨೦ ಲಕ್ಷ ಕೋಟಿ ರು.ಗಿಂತೆ ಹೆಚ್ಚಾಗಲು ಸಾಧ್ಯವಿಲ್ಲ.

ಅದರಲ್ಲಿ ೨ ಲಕ್ಷ ಕೋಟಿ ರು. ಗ್ಯಾರಂಟಿ ಯೋಜನೆಗಳಿಗೆ ವೆಚ್ಚವಾದರೆ, ಇನ್ನು ಸರಕಾರಿ ನೌಕರರ ವೇತನ, ಅಭಿವೃದ್ಧಿ ಯೋಜನೆಗಳಿಗೆ ಅನುದಾನ ಒದಗಿಸುವುದು ಹೇಗೆ ಸಾಧ್ಯ? ಈ ಕಾರಣಕ್ಕಾಗಿಯೇ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ಗ್ಯಾರಂಟಿ ಯೋಜನೆಗಳಿಗೆ ಷರತ್ತು ವಿಧಿಸಿದೆ. ಆ ಷರತ್ತುಗಳು ಯಾವುವು ಎಂಬುದು ಯೋಜನೆಯ ಮಾರ್ಗ ಸೂಚಿಗಳು ಪ್ರಕಟವಾದ ಮೇಲೆಯೇ ಗೊತ್ತಾಗಬೇಕಷ್ಟೆ. ಆದರೆ, ಪ್ರತಿ ವ್ಯಕ್ತಿಗೆ ೧೦ ಕೆ.ಜಿ. ಅಕ್ಕಿ ಎಂಬ ಘೋಷಣೆ ಹೊರತುಪಡಿಸಿ ಉಳಿದ ನಾಲ್ಕು ಗ್ಯಾರಂಟಿಗಳು ಎಲ್ಲರಿಗೂ ಅನ್ವಯವಾಗುತ್ತದೆ ಎಂದು ಕಾಂಗ್ರೆಸ್ ನಾಯಕರು ಚುನಾವಣೆ ವೇಳೆ ಹೇಳಿದ್ದರು. ಹೀಗಾಗಿ ಈಗ ಷರತ್ತುಗಳನ್ನು ವಿಧಿಸಿದರೆ ಜನರು ಅದನ್ನು ಒಪ್ಪಿಕೊಳ್ಳುವ ಸ್ಥಿತಿಯಲ್ಲಿ ಇಲ್ಲ.

ಗ್ಯಾರಂಟಿ ನಂಬಿ ಮತ ಹಾಕಿದ್ದೇವೆ. ನಮಗೆ ಸೌಲಭ್ಯ ಕೊಡಿ ಎಂದು ಕೇಳುತ್ತಾರೆ. ಕೊಡದಿದ್ದರೆ ಪ್ರತಿಭಟಿಸುತ್ತಾರೆ. ಒಂದೊಮ್ಮೆ ಜನರು ಸುಮ್ಮನಾದರೂ ಪ್ರತಿಪಕ್ಷಗಳು ಸುಮ್ಮನಾಗುವುದಿಲ್ಲ. ಇದರಿಂದ ಮುಂದಿನ ಐದು ವರ್ಷ ಬಹುಮತದ ಸರಕಾರಕ್ಕೇನೂ ಅಪಾಯ ಆಗಲಾರದಾದರೂ ಜನರು ಕಾಂಗ್ರೆಸ್ ಮೇಲಿನ ಭರವಸೆಯನ್ನು ಸಂಪೂರ್ಣ ಕಳೆದುಕೊಳ್ಳು ತ್ತಾರೆ.

ಕೆಲ ದಿನಗಳ ಬಳಿಕ ಜನರು ಮರೆಯಬಹುದಾದರೂ ಪ್ರತಿಪಕ್ಷಗಳು ಮರೆಯಲು ಅವಕಾಶ ನೀಡುವುದಿಲ್ಲ. ಹೀಗಾಗಿ ಕಾಂಗ್ರೆಸ್‌ನ ಗ್ಯಾರಂಟಿಗಳೇ ಈಗ ಅದಕ್ಕೆ ಮುಳುವಾಗುವ ಲಕ್ಷಣಗಳು ಕಾಣಿಸುತ್ತಿವೆ.

ಲಾಸ್ಟ್ ಸಿಪ್: ಕೊಟ್ಟೋನು ಕೋಡಂಗಿ, ಇಸ್ಕೊಂಡೋನು ವೀರಭದ್ರ ಎಂಬ ಗಾದೆಮಾತು ಕಾಂಗ್ರೆಸ್‌ನ ಗ್ಯಾರಂಟಿ
ಯೋಜನೆ ಗಳ ಪಾಲಿಗೆ ಕೊಡೋನು ಕೋಡಂಗಿ, ಇಸ್ಕೊಳ್ಳೋನು ವೀರಭದ್ರ ಎನ್ನುವಂತಾಗಿದೆ.

error: Content is protected !!