Sunday, 8th September 2024

ಸಂವಿಧಾನವನ್ನು ಪಾತಾಳಕ್ಕೆ ತಳ್ಳಿದ್ದ ಇಂದಿರಾ

ವೀಕೆಂಡ್ ವಿತ್ ಮೋಹನ್

camohanbn@gmail.com

ಲೋಕಸಭೆ ಚುನಾವಣಾ ಸಂದರ್ಭದಲ್ಲಿ ಸಂವಿಧಾನ ಬದಲಾವಣೆಯ ಬಗ್ಗೆ ಪುಂಖಾನು ಪುಂಖವಾಗಿ ಸುಳ್ಳುಗಳನ್ನು ಹೇಳಿ ಮೋದಿಯವರ ವಿರುದ್ಧ ಅಪಪ್ರಚಾರ ಮಾಡಿದ ಕಾಂಗ್ರೆಸ್ಸಿಗರು ಇಂದಿರಾ ಗಾಂಧಿಯ ತುರ್ತು ಪರಿಸ್ಥಿತಿಯ ಕರಾಳದಿನವನ್ನು ನೆನಪಿಸಿಕೊಂಡು ಆತ್ಮಾವಲೋಕನ ಮಾಡಿಕೊಳ್ಳ ಬೇಕು.

ಸರ್ವಾಧಿಕಾರಿ ಇಂದಿರಾಗಾಂಧಿ ೧೯೭೧ರ ಚುನಾವಣೆಯಲ್ಲಿ ರಾಯ್ ಬರೇಲಿ ಕ್ಷೇತ್ರದಿಂದ ಸ್ಪರ್ಧಿಸಿ, ತಮ್ಮ ಎದುರಾಳಿ ರಾಜ್ ನಾರಾಯಣ್ ವಿರುದ್ಧ ಜಯಗಳಿಸಿದ್ದರು. ಈ ಚುನಾವಣೆಯಲ್ಲಿ ತಮ್ಮ ಕ್ಷೇತ್ರದಲ್ಲಿ ಇಂದಿರಾಗಾಂಧಿಯವರ ಮೇಲೆ ಹಣದ ಹೊಳೆಹರಿಸಿ ಹಾಗೂ ಸರಕಾರಿ ಅಧಿಕಾರಿಗಳನ್ನು ದುರ್ಬಳಕೆ ಮಾಡಿಕೊಂಡು ಚುನಾವಣೆ ಗೆದ್ದಿರುವ ಆರೋಪವಿತ್ತು. ರಾಜ್ ನಾರಾಯಣ್ ಅಲಹಾಬಾದ್ ನ್ಯಾಯಾಲಯದಲ್ಲಿ ಇಂದಿರಾಗಾಂಧಿ ವಿರುದ್ಧ ಮೊಕದ್ದಮೆ ದಾಖಲಿಸಿದ್ದರು, ಸುಮಾರು ನಾಲ್ಕು ವರ್ಷಗಳ ವಿಚಾರಣೆಯ ನಂತರ ಇಂದಿರಾಗಾಂಧಿ ಚುನಾವಣೆಯಲ್ಲಿ ಅಕ್ರಮವೆಸೆಗಿರುವುದು ಸಾಬೀತಾಗಿ, ನ್ಯಾಯಮೂರ್ತಿಗಳು ಇಂದಿರಾಗಾಂಧಿ ವಿರುದ್ಧ ತೀರ್ಪು ನೀಡಿದ್ದರು.

ತೀರ್ಪಿನಲ್ಲಿ ೨೦ ದಿನಗಳಲ್ಲಿ ಇಂದಿರಾಗಾಂಧಿ ಪ್ರಧಾನಮಂತ್ರಿ ಸ್ಥಾನದಿಂದ ಕೆಳಗಿಳಿಯಬೇಕೆಂದು ಹೇಳಲಾಗಲಿತ್ತು. ಆದರೆ ಸ್ವಾರ್ಥ ರಾಜಕಾರಣ ಮಾಡಿ ಅಧಿಕಾರ ಅನುಭವಿಸಿರುವ ನೆಹರು ಕುಟುಂಬದ ಕುಡಿಗೆ ಅಧಿಕಾರವಿಲ್ಲದೆ ಇರಲು ಸಾಧ್ಯವಿರಲಿಲ್ಲ, ಸರ್ವಾಧಿಕಾರಿಯಾಗಿದ್ದ ಇಂದಿರಾಗಾಂಧಿ, ತನ್ನ
ಸ್ಥಾನವನ್ನು ಉಳಿಸಿಕೊಳ್ಳಬೇಕೆಂಬ ಹಠಕ್ಕೆ ಬಿದ್ದಿದ್ದರು. ಇಡೀ ದೇಶವನ್ನೇ ತನ್ನ ಕುಟುಂಬದವರು ಕಟ್ಟಿದರೆಂಬ ಭ್ರಮೆಯಲ್ಲಿದ್ದ ಇಂದಿರಾಗಾಂಧಿ ಭಾರತದ ಸಂವಿಧಾನವನ್ನೇ ಅಲುಗಾಡಿಸುವ ನಿರ್ಧಾರಕ್ಕೆ ಬಂದರು. ನ್ಯಾಯಾಲಯ ನೀಡಿದ್ದಂತಹ ೨೦ ದಿನಗಳ ಗಡುವನ್ನೇ ಸದಾವಕಾಶ ಮಾಡಿ ಕೊಂಡಂತಹ ಇಂದಿರಾಗಾಂಧಿ ತನ್ನ ಸ್ವಾರ್ಥಕ್ಕಾಗಿ ಸಂವಿಧಾನವನ್ನೇ ತಿದ್ದುಪಡಿ ಮಾಡಿಬಿಟ್ಟರು.

ತಿದ್ದುಪಡಿಯ ಮೂಲಕ ನ್ಯಾಯಾಂಗ ವ್ಯವಸ್ಥೆಯು ಪ್ರಧಾನಮಂತ್ರಿಗಳ ಪದವಿಯ ಸತ್ಯಾಸತ್ಯತೆಯನ್ನು ಪರಿಷ್ಕರಿಸುವ ಹಕ್ಕನ್ನೇ ಕಿತ್ತುಕೊಂಡರು.
ಬಾಬಾಸಾಹೇಬರ ಸಂವಿಧಾನದ ಭಾರತದ ನ್ಯಾಯಾಂಗ ವ್ಯವಸ್ಥೆಗೆ ಇಂದಿರಾಗಾಂಽ ದೊಡ್ಡ ಅವಮಾನ ಮಾಡಿದ್ದರು. ಇಂದಿರಾಗಾಂಧಿ ಮಾಡಿದ ಸಂವಿಧಾನದ ತಿದ್ದುಪಡಿಯನ್ನು ಪರಿಶೀಲಿಸಿದ ಸರ್ವೋಚ್ಛ ನ್ಯಾಯಾಲಯ, ಈ ತಿದ್ದು ಪಡಿಯ ಮೂಲಕ ಇಂದಿರಾಗಾಂಧಿ ಭಾರತದ ಸಂವಿಧಾನದ
ಬುಡವನ್ನೇ ಅಲುಗಾಡಿಸಿದ್ದಾರೆಂದು ಹೇಳಲಾಗಿತ್ತು.

ತುರ್ತು ಪರಿಸ್ಥಿತಿಯ ವಿರುದ್ಧ ಹೋರಾಟಕ್ಕಿಳಿದ ವಿದ್ಯಾರ್ಥಿಗಳು, ಪತ್ರಕರ್ತರು, ವಿರೋಧ ಪಕ್ಷದ ನಾಯಕರು, ಕೈಗಾರಿಕೋದ್ಯಮಿಗಳನ್ನು ನಿರ್ದಾಕ್ಷಿಣ್ಯ ವಾಗಿ ಜೈಲಿಗಟ್ಟಿದ ಅಪಕೀರ್ತಿ ಇಂದಿರಾಗಾಂಧಿಯವರಿಗೆ ಸಲ್ಲಬೇಕು. ಬಾಬಾಸಾಹೇಬರು ರಚಿಸಿದ ಸಂವಿಧಾನದ ಪ್ರಮುಖ ಆಶಯವಾದ ಮೂಲಭೂತ ಹಕ್ಕುಗಳಿಗೆ ತಿದ್ದುಪಡಿ ಮಾಡಿ ವಾಕ್ ಸ್ವಾತಂತ್ರ್ಯವನ್ನು ಕಸಿಯಲಾಯಿತು. ಇಂದಿರಾಗಾಂಧಿಯ ಮಗ ಸಂಜಯ್ ಗಾಂಧಿ ರಾಜ್ಯದ ಮುಖ್ಯಮಂತ್ರಿಗಳಿಗೆ
ನೋಟೀಸ್ ನೀಡಿ ಇಂದಿರಾಗಾಂಽಯವರ ಸರ್ವಾಧಿಕಾರದ ವಿರುದ್ಧ ಹೋರಾಟ ಮಾಡುವವರನ್ನು ಬಂಧಿಸುವ ಪಟ್ಟಿಯನ್ನು ತಯಾರು ಮಾಡಿದ್ದರು.

ಜೂನ್ ೨೫ ರ ಮಧ್ಯರಾತ್ರಿ ಇಂದಿರಾಗಾಂಧಿ ರಾಷ್ಟ್ರಪತಿಯನ್ನು ಭೇಟಿ ಮಾಡಿ ದೇಶದಲ್ಲಿ ತುರ್ತುಪರಿಸ್ಥಿತಿ ಹೇರಿದರು. ಪ್ರಜಾಪ್ರಭುತ್ವದ ಬಗ್ಗೆ ಪುಂಖಾ ನುಪುಂಖವಾಗಿ ಮಾತನಾಡುವ ರಾಹುಲ್ ಗಾಂಧಿ, ತನ್ನ ಅಜ್ಜಿ ಅಂದು ಪ್ರಜಾಪ್ರಭುತ್ವವನ್ನೇ ಕೊಲೆ ಮಾಡಿರುವುದನ್ನು ನೆನಪಿಸಿಕೊಳ್ಳಬೇಕು. ತುರ್ತು ಪರಿಸ್ಥಿಯ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಜಯಪ್ರಕಾಶ್ ನಾರಾಯಣ, ಅಟಲ್ ಬಿಹಾರಿ ವಾಜಪೇಯಿ, ಮೊರಾರ್ಜಿ ದೇಸಾಯಿ, ಎಲ್.ಕೆ.ಅಡ್ವಾಣಿ, ಎಸ್ ಎನ್ ಮಿಶ್ರಾ ಅವರನ್ನು ಬಂಧಿಸಿ ಜೈಲಿನಲ್ಲಿರಿಸಲಾಗಿತ್ತು. ಜೂನ್ ತಿಂಗಳಲ್ಲಿ ದೆಹಲಿಯ ತಾಪಮಾನ ಸುಮಾರು ೪೨ ಡಿಗ್ರಿಗೆ ತಲುಪುತ್ತದೆ, ಅಂತಹ ಬಿಸಿಲಿನಲ್ಲಿ ಇಂದಿರಾಗಾಂಧಿಯ ವಿರುದ್ಧ ಹೋರಾಟ ಮಾಡಿದವರನ್ನು ಜೈಲಿನಲ್ಲಿ ಕುರಿಗಳಂತೆ ತುಂಬಲಾಗಿತ್ತು.

ಇಂದಿರಾಗಾಂಧಿಯವರ ಸರ್ವಾಧಿಕಾರದ ಅಟ್ಟಹಾಸ ಎಷ್ಟಿತ್ತೆಂದರೆ. ೧೨೭೩ ಜನರನ್ನು ಇರಿಸಬಹುದಾದ ಜೈಲುಗಳಲ್ಲಿ ೩೫೦೦ ರಿಂದ ೪೨೦೦ ಜನರನ್ನು
ಇರಿಸಲಾಗಿತ್ತು. ತುರ್ತು ಪರಿಸ್ಥಿಯ ಸಂದರ್ಭದಲ್ಲಿ ದೇಶದಾದ್ಯಂತ ಸುಮಾರು ೧,೧೦,೦೦೦ ಜನರನ್ನು ಮಿಸಾ ಕಾಯ್ದೆಯಡಿಯಲ್ಲಿ ಬಂಧಿಸಲಾಗಿತ್ತು.
ಮೋದಿಯವರ ಆಡಳಿತದಲ್ಲಿ ಪತ್ರಿಕಾ ಸ್ವಾತಂತ್ರ್ಯವೇ ಇಲ್ಲವೆಂದು ಬೊಗಳೆ ಬಿಡುವ ರಾಹುಲ್ ಗಾಂಧಿ, ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಇಂದಿರಾ ಗಾಂಧಿ ತುರ್ತು ಪರಿಸ್ಥಿತಿ ಹೇರಿರುವ ವಿಷಯ ಮರುದಿನ ಪತ್ರಿಕೆಯಲ್ಲಿ ಪ್ರಕಟವಾಗಬಾರದೆಂಬ ಕಾರಣಕ್ಕೆ ಪ್ರತಿಷ್ಠಿತ ಪತ್ರಿಕೆಗಳ ಕಚೇರಿಗಳಿದ್ದ
ದೆಹಲಿಯ ‘ಬಹಾದ್ದೂರ್ ಶಾ ಜಫರ್ ಮಾರ್ಗ’ದಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಳಿಸಿಲಾಗಿತ್ತು.

ಪತ್ರಿಕೆಗಳಿಗೆ ಸೆನ್ಸಾರ್ ನಿಯಮಗಳನ್ನು ಹಾಕಲಾಯಿತು, ಪತ್ರಿಕೆಗಳು ಪ್ರಕಟಿಸಬೇಕಿರುವ ಸುದ್ದಿಗಳನ್ನು ಸರಕಾರಿ ಅಧಿಕಾರಿಗಳು ನೋಡಿ ಒಪ್ಪಿಗೆ ಸೂಚಿಸಬೇಕಿತ್ತು. ಒಪ್ಪಿಗೆ ಸಿಕ್ಕ ನಂತರವಷ್ಟೇ ಸುದ್ದಿಯನ್ನು ಪ್ರಕಟಿಸಬೇಕಿತ್ತು, ಸಂಪಾದಕರು ಪತ್ರಿಕೆಗಳ ವಿಷಯಗಳನ್ನು ಅಂತಿಮಗೊಳಿಸಿದ ನಂತರ ಮಧ್ಯರಾತ್ರಿ ಅಧಿಕಾರಿಗಳನ್ನು ಭೇಟಿ ಮಾಡುತ್ತಿದ್ದರು. ಅಧಿಕಾರಿಗಳು ಒಪ್ಪಿಗೆ ಸೂಚಿಸಿದ ನಂತರ ತಮ್ಮ ಕಚೇರಿಗೆ ವಾಪಾಸ್ ಬಂದು ಪುಟಗಳನ್ನು ಅಂತಿಮಗೊಳಿಸಿ ಮುದ್ರಣಕ್ಕೆ ಕಳುಹಿಸಲಾಗುತ್ತಿತ್ತು. ಕೇಂದ್ರ ಗೃಹ ಇಲಾಖೆಯು ಸುತ್ತೋಲೆಯೊಂದನ್ನು ಹೊರಡಿಸಿತ್ತು, ಅದರನ್ವಯ ಪತ್ರಿಕೆಗಳು ಇಂದಿರಾಗಾಂಧಿ ಹೇರಿದ್ದ ಸಂವಿಧಾನ ವಿರೋಧಿ ತುರ್ತುಪರಿಸ್ಥಿಯ ವಿರುದ್ಧ ಹೋರಾಟ ಮಾಡಿ ಬಂಧನಕ್ಕೊಳಗಾಗಿರುವವರ ಹೆಸರುಗಳನ್ನು ಪ್ರಕಟಿಸು ವಂತಿರಲಿಲ್ಲ. ಸಂವಿಧಾನದ ಪ್ರತಿಯನ್ನು ಕೈಲಿ ಹಿಡಿದು ಪತ್ರಿಕಾಗೋಷ್ಠಿ ಮಾಡುವ ರಾಹುಲ್ ಗಾಂಧಿ, ಅದೇ ಸಂವಿಧಾನವನ್ನು ಬದಲಾಯಿಸಿ ಪ್ರಜಾಪ್ರಭುತ್ವವನ್ನು ಕೊಲೆ ಮಾಡಿದ ಇಂದಿರಾಗಾಂಧಿಯ ಪಟವನ್ನು ಮತ್ತೊಂದು ಕೈಲಿ ಹಿಡಿಯಬೇಕು.

ಪತ್ರಿಕೆಗಳು ಸಂಸತ್ತಿನೊಳಗೆ ನಡೆಯುವ ಕಾರ್ಯಕಲಾಪಗಳ ಬಗ್ಗೆ ವರದಿ ಮಾಡುವಂತಿರಲಿಲ್ಲ, ಸಂಸತ್ತಿನೊಳಗೆ ಪತ್ರಕರ್ತರಿಗೆ ನಿಷೇಧ ಹೇರಲಾಗಿತ್ತು. ನ್ಯಾಯಾಲಯದಲ್ಲಿ ಇಂದಿರಾಗಾಂಧಿಯವರ ವಿಚಾರಣೆ ನಡೆಯುವುದನ್ನೂ ಪತ್ರಿಕೆಗಳು ವರದಿ ಮಾಡುವಂತಿರಲಿಲ್ಲ, ಪತ್ರಿಕಾ ಸ್ವಾತಂತ್ರ್ಯದ ನೆಪದಲ್ಲಿ ಇಂದಿರಾಗಾಂಧಿಯ ವಿರುದ್ಧ ಪತ್ರಿಕೆಗಳು ದಾಳಿ ನಡೆಸುತ್ತಿವೆಯೆಂದು ಆಕೆ ಹೇಳಿದ್ದರು. ಇಂದಿರಾಗಾಂಧಿಯ ಸರ್ವಾಧಿಕಾರದ ಪರಿಣಾಮ ದೇವ್ ಕಾಂತ್
ಬರೂಹ ‘ಇಂದಿರಾ ಈಸ್ ಇಂಡಿಯಾ, ಇಂಡಿಯಾ ಈಸ್ ಇಂದಿರಾ’ ಎಂದು ಹೇಳಿದ್ದರು.

ಬಾಬಾಸಾಹೇಬರ ಸಂವಿಧಾನದ ಮೂಲಭೂತ ಹಕ್ಕುಗಳಿಗೆ ಧಕ್ಕೆ ತಂದಂತಹ ಇಂದಿರಾಗಾಂಧಿ ಮೂಲಭೂತ ಹಕ್ಕುಗಳ ವಿಚಾರದಲ್ಲಿ ದೇಶದ ನಾಗರೀಕರು ನ್ಯಾಯಾಲಯದ ಮೆಟ್ಟಿಲನ್ನು ಏರುವ ಹಾಗಿಲ್ಲವೆಂಬ ತಿದ್ದುಪಡಿಯನ್ನು ತಂದಿದ್ದರು. ಭಾರತದ ಇತಿಹಾಸದಲ್ಲಿ ಇಂದಿರಾಗಾಂಧಿ ಮಗ ಸಂಜಯ್ ಗಾಂಧಿ ಮಾಡಿರುವ ಮಾನವ ಹಕ್ಕುಗಳ ಉಲ್ಲಂಘನೆಯನ್ನು ಬಹುಷಃ ಯಾರೂ ಸಹ ಮಾಡಿರಲಿಕ್ಕಿಲ್ಲ, ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಸಂಜಯ್ ಗಾಂಧಿ ಜನಸಂಖ್ಯಾ ನಿಯಂತ್ರಣೆ ಹೆಸರಿನಲ್ಲಿ ಸಿಕ್ಕ ಸಿಕ್ಕವರನ್ನು ಕರೆತಂದು ಬಲವಂತವಾಗಿ ಶಸ್ತ್ರ ಚಿಕೆತ್ಸೆ ಮಾಡಿಸುತ್ತಿದ್ದರು.

ರಾಜ್ಯಗಳ ಮುಖ್ಯಮಂತ್ರಿಗಳಿಗೆ ಕರೆ ಮಾಡಿ ತಮ್ಮ ತಮ್ಮ ರಾಜ್ಯಗಳಲ್ಲಿ ಜನಸಂಖ್ಯಾ ನಿಯಂತ್ರಣ ಶಸ ಚಿಕಿತ್ಸೆಯನ್ನು ಬಲವಂತವಾಗಿ ಮಾಡಿಸಬೇಕೆಂದು
ಹೇಳಿದ್ದರು. ಒಂದು ಸಮುದಾಯವನ್ನು ಗುರಿಯಾಗಿಸಿಕೊಂಡು ಸಿಕ್ಕ ಸಿಕ್ಕ ಊರುಗಳಲ್ಲಿ ಬಲವಂತವಾಗಿ ಜನಸಂಖ್ಯಾನಿಯಂತ್ರಣ ಶಸ್ತ್ರಚಿಕಿತ್ಸೆಯನ್ನು ಮಾಡಿಸಲಾಗಿತ್ತು. ವಿಪರ್ಯಾಸವೆಂದರೆ ಇಂದು ಆ ಸಮುದಾಯ ಸಾಮೂಹಿಕವಾಗಿ ಕಾಂಗ್ರೆಸ್ ಪಕ್ಷಕ್ಕೆ ದೇಶದೆಡೆ ಮತ ಹಾಕುತ್ತಿದೆ. ಸಂಜಯ್ ಗಾಂಧಿಯ ಅಟ್ಟಹಾಸ ಇಷ್ಟಕ್ಕೆ ನಿಲ್ಲಲಿಲ್ಲ, ದೆಹಲಿಯ ‘ತುರ್ಕ್ ಮೆನ್ ಗೇಟ’ ಬಡವರು ಹೆಚ್ಚಿರುವ ಪ್ರದೇಶವಾಗಿತ್ತು, ಆ ಪ್ರದೇಶ ಕೊಳಗೇರಿಯ ರೀತಿಯಲ್ಲಿದ್ದು
ದೆಹಲಿಯ ಸೌಂದರ್ಯಕ್ಕೆ ಧಕ್ಕೆಯಾಗುತ್ತದೆಯೆಂದು ಹೇಳಿ ‘ಬುಲ್‌ಡೋಜರ್’ ಮೂಲಕ ಇಡೀ ಪ್ರದೇಶವನ್ನೇ ನೆಲಸಮಗೊಳಿಸಲು ಆದೇಶಿಸಿದ್ದರು. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕ್ರಿಮಿನಲ್‌ಗಳ ಅಕ್ರಮ ಮನೆಗಳಿಗೆ ಬುಲ್‌ಡೋಜರ್ ನುಗ್ಗಿಸಿದರೆ ಮೂಲಭೂತ ಹಕ್ಕುಗಳ ಉಲ್ಲಂಘನೆಯೆಂದು ಸುಳ್ಳು ಹೇಳುವ ರಾಹುಲ್ ಗಾಂಧಿ ತನ್ನ ಚಿಕ್ಕಪ್ಪ ಬಡವರ ಮನೆಗಳಿಗೆ ಅಂದು ಬುಲ್ ಡೋಜರ್ ನುಗ್ಗಿಸಿದ್ದ ವಿಷಯವನ್ನು ಮರೆಯಬಾರದು.

ತುರ್ತು ಪರಿಸ್ಥಿಯ ಮೂಲಕ ಇಂದಿರಾಗಾಂಧಿ ಬಾಬಾಸಾಹೇಬರ ಸಂವಿಧಾನವನ್ನು ಕೊಲೆ ಮಾಡಿದ್ದ ರೀತಿ ಭಾರತದ ಇತಿಹಾಸದಲ್ಲಿ ಕ್ಷಮಿಸಲಾಗದ ಅಪರಾಧ, ಪ್ರಧಾನ ಮಂತ್ರಿ, ರಾಷ್ಟ್ರಪತಿ, ಸ್ಪೀಕರ್ ಮತ್ತು ಉಪರಾಷ್ಟ್ರ ಪತಿ ಚುನಾವಣೆಯ ಆಯ್ಕೆಯನ್ನು ನ್ಯಾಯಾಲಯ ಪ್ರಶ್ನಿಸದಂತೆ ಸಂವಿಧಾನ ವನ್ನು ಬದಲಾಯಿಸಿದ್ದರು. ಕೇವಲ ಒಂದು ವಾರದಲ್ಲಿ ಸಂಸತ್ತಿನಲ್ಲಿ ಚರ್ಚಿಸದೆ, ಹೋರಾಟಗಾರರ ಧ್ವನಿ ಅಡಗಿಸಿ ಜೈಲಿನಲ್ಲಿಟ್ಟು ತಮ್ಮ ಚುನಾವಣಾ ಅಕ್ರಮವನ್ನು ಸಮರ್ಥಿಸಿಕೊಂಡು ಬಾಬಾ ಸಾಹೇಬರ ಸಂವಿಧಾನವನ್ನು ಇಂದಿರಾಗಾಂಧಿ ಬದಲಾಯಿಸಿದ್ದರು. ೧೯೭೫ ರ ಆಗ ೭ ರಂದು ಲೋಕಸಭೆ, ಆಗ ೮ ರಂದು ರಾಜ್ಯಸಭೆಯಲ್ಲಿ ಸಂವಿಧಾನದ ತಿದ್ದುಪಡಿಯನ್ನು ಮಂಡಿಸಿ ಒಂದು ದಿನದಲ್ಲಿ ಸಂಸತ್ತಿನಲ್ಲಿ ಅಂಗೀಕರಿಸಲಾಯಿತು. ಆಗ ೯ ರಂದು ರಾಜ್ಯಗಳ ವಿಧಾನಸಭೆಯಲ್ಲಿ ಅಂಗೀಕರಿಸಿ, ಆಗ ೧೦ ನೇ ತಾರೀಕಿನಂದು ರಾಷ್ಟ್ರಪತಿಗಳ ಅಂಕಿತವನ್ನು ಹಾಕಲಾಯಿತು.

ಪ್ರಜಾ ಪ್ರಭುತ್ವದ ಕಗ್ಗೊಲೆಗೈದಿದ್ದ ಇಂದಿರಾಗಾಂಧಿಯವರ ಸರ್ವಾಧಿಕಾರಿ ಧೋರಣೆಯನ್ನು ಅಂತ್ಯಗೊಳಿಸಿ, ಭಾರತದಲ್ಲಿ ಪ್ರಜಾಪ್ರಭುತ್ವವನ್ನು ಪುನರ್ ನಿರ್ಮಾಣಗೊಳಿಸುವುದು ಬಹಳ ಕಷ್ಟದ ಕೆಲಸವಾಗಿತ್ತು.ದೇಶದ ಕಾರ್ಯಾಂಗ, ಶಾಸಕಾಂಗ, ನ್ಯಾಯಾಂಗವನ್ನೇ ತನ್ನ ಹತೋಟಿಗೆ ತೆಗೆದು ಕೊಂಡಿದ್ದ ಇಂದಿರಾಗಾಂಧಿಯನ್ನು ಕೆಳಗಿಳಿಸಲು ದೊಡ್ಡ ದೊಂದು ಚಳುವಳಿಯ ಅವಶ್ಯಕತೆ ಇತ್ತು. ಮಾಧ್ಯಮಗಳ ಸಂಪರ್ಕವಿಲ್ಲದೆ ಹಳ್ಳಿ ಹಳ್ಳಿಗಳಲ್ಲಿ ಜನರನ್ನು ಸಂಪರ್ಕಿಸಿ ಹೋರಾಟಕ್ಕೆ ಸಜ್ಜುಗೊಳಿಸುವುದು ಸುಲಭದ ಮಾತಾಗಿರಲಿಲ್ಲ. ‘ರಾಷ್ಟ್ರೀಯ ಸ್ವಯಂ ಸೇವಕ ಸಂಘ’ದ ಕಾರ್ಯಕರ್ತರು ದೇಶದೆಡೆ ಇದ್ದುದ್ದರಿಂದ ಇಂದಿರಾಗಾಂಧಿಯವರ ವಿರುದ್ಧದ ಚಳುವಳಿಗೆ ವೇಗ ಸಿಕ್ಕಿತ್ತು. ಸಂಘದ ಸರಸಂಘಚಾಲಕರನ್ನು ಜೈಲಿಗೆ ಹಾಕಿದರೆ ತನ್ನ ವಿರುದ್ಧದ ಹೋರಾಟವನ್ನು ಹತ್ತಿಕ್ಕಬಹುದೆಂದುಕೊಂ ಡಿದ್ದ ಸರ್ವಾಧಿಕಾರಿ ಇಂದಿರಾಗಾಂಧಿಯವರಿಗೆ, ಸಂಘದ ವಿಸ್ತಾರವಾದ ಬೇರುಗಳು ದೇಶದಾ ದ್ಯಂತ ಹಬ್ಬಿರುವುದರ ಅರಿವಿರಲಿಲ್ಲ.

ರಾಷ್ಟ್ರರಕ್ಷಣೆ ಎಂದೊಡೆನೆ ಮುನ್ನೆಲೆಗೆ ಬಂದು ಹೋರಾಟ ಮಾಡುವ ಪ್ರವೃತ್ತಿ ಸಂಘದ ಕಾರ್ಯಕರ್ತರಿಗೆ ಹೊಸತಾಗಿರಲಿಲ್ಲ, ಕಾಡ್ಗಿಚ್ಚಿನಂತೆ ದೇಶದಾ ದ್ಯಂತ ಯುವಕರು ಚಳವಳಿಯಲ್ಲಿ ಧುಮುಕಿದರು. ಜಯಪ್ರಕಾಶ್ ನಾರಾಯಣ್ ನೇತೃತ್ವದಲ್ಲಿ ನಡೆದ ಚಳುವಳಿ ದೇಶದಾದ್ಯಂತ ಸಂಚಲವನ್ನೇ ಮೂಡಿಸಿತ್ತು. ಜೈಲಿನಿಂದಲೇ ಗುರೂಜಿ ಕಾರ್ಯಕರ್ತರಿಗೆ ರಾಷ್ಟ್ರರಕ್ಷಣೆಯ ಚಳುವಳಿಯ ಬಗ್ಗೆ ಆಯಾ ಸಮಯಕ್ಕೆ ಬೇಕಾದಂತಹ ಮಾರ್ಗದರ್ಶನ ವನ್ನು ನೀಡುತ್ತಿದ್ದರು.

ದೇಶದಲ್ಲಿ ಸರ್ವಾಧಿಕಾರಿ ಇಂದಿರಾಗಾಂಧಿ ವಿರುದ್ಧ ಮತ್ತೊಂದು ರಾಜಕೀಯ ಸಂಘಟನೆ ಜಯಪ್ರಕಾಶ್ ನಾರಾಯಣ್ ನೇತೃತ್ವದಲ್ಲಿ ಶುರುವಾಯಿತು. ತನ್ನ ಸರ್ವಾಧಿಕಾರಿ ಧೋರಣೆಯ ಮೂಲಕ ಇಂದಿರಾಗಾಂಧಿ ಸಂಘಧ ಕಾರ್ಯಕರ್ತರಿಗೆ ಹಿಂಸೆ ನೀಡಿದ್ದರು, ಆದರೂ ಸಂಘದ ಕಾರ್ಯಕರ್ತರು ಜಗ್ಗಿರಲಿಲ್ಲ, ಇಂದು ಸಂಘದ ವಿರುದ್ಧ ನಾಲಿಗೆ ಹರಿಬಿಡುವ ಸಿದ್ದರಾಮಯ್ಯನವರು ಅಂದು ಇಂದಿರಾಗಾಂಧಿಯವರ ವಿರುದ್ದ ನಡೆದ ಜಯಪ್ರಕಾಶರ
ಚಳವಳಿಯ ಬಗ್ಗೆ ಯಾಕೆ ಮಾತನಾಡುವುದಿಲ್ಲ? ಜಯ ಪ್ರಕಾಶರ ಚಳವಳಿಯಲ್ಲಿ ಸಂಘದ ಪಾತ್ರವೆಷ್ಟಿತ್ತೆಂಬುದು ಸಿದ್ದರಾಮಯ್ಯರಿಗೆ ಗೊತ್ತಿಲ್ಲವೇ? ಸಂವಿಧಾನ ವಿರೋಧಿ ಧೋರಣೆಯಿಂದ ಇಂದಿರಾಗಾಂಧಿ ಹೇರಿದ್ದ ತುರ್ತು ಪರಿಸ್ಥಿತಿಯ ವಿರುದ್ದದ ಹೋರಾಟದಲ್ಲಿ ಸಂಘದ ೩೨೫೪ ಮಂದಿಯನ್ನು ಬಂಧಿಸಲಾಗಿತ್ತು, ಜನಸಂಘದ ೭೭೨ ಜನರನ್ನು ಬಂಧಿಸಲಾಗಿತ್ತು.

೨೦೨೪ ರ ಲೋಕಸಭಾ ಚುನಾವಣೆ ಪ್ರಚಾರದ ಸಂದರ್ಭದಲ್ಲಿ ಸಂವಿಧಾನದ ಬದಲಾವಣೆಯ ಕುರಿತು ಮೋದಿಯವರ ವಿರುದ್ಧ ಸುಳ್ಳು ಹೇಳಿದ ರಾಹುಲ್ ಗಾಂಧಿಯ ಕಾಂಗ್ರೆಸ್ ಪಕ್ಷ ಇದುವರೆಗೂ ೭೫ ಬಾರಿ ಸಂವಿಧಾನದವನ್ನು ತಿದ್ದುಪಡಿ ಮಾಡಿದೆ. ನೆಹರು ೧೬ ಬಾರಿ, ಇಂದಿರಾಗಾಂಧಿ ೩೨ ಬಾರಿ ಮತ್ತು ರಾಜೀವ್ ಗಾಂಧಿ ೧೦ ಬಾರಿ ಸಂವಿಧಾನದವನ್ನು ತಿದ್ದುಪಡಿ ಮಾಡಿದ್ದಾರೆ. ‘ಸಂವಿಧಾನವೆಂಬ ಪ್ರಗತಿಯ ತೇರನ್ನು ಇಲ್ಲಿಯವರೆಗೂ ಎಳೆದು ತಂದಿದ್ದೇನೆ, ಸಾಧ್ಯವಾದರೆ ಮುಂದಕ್ಕೆ ತಳ್ಳಿ ಆದರೆ ಹಿಂದಕ್ಕೆ ತಳ್ಳುವ ಕೆಲಸ ದಯವಿಟ್ಟು ಯಾರೂ ಮಾಡಬೇಡಿ’ ಎಂದು ಬಾಬಾಸಾಹೇಬರು
ಹೇಳಿದ್ದರು.

ಆದರೆ ಕಾಂಗ್ರೆಸ್ ಸರಕಾರ ಇಂದಿರಾಗಾಂಧಿಯ ಸ್ವಾರ್ಥಕ್ಕಾಗಿ ಅಧಿಕಾರ ಉಳಿಸಿ ಕೊಳ್ಳಲು ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ಸಂವಿಧಾನವನ್ನು ಬದಲಾಯಿಸಿ ಬಾಬಾಸಾಹೇಬರ ಪ್ರಗತಿಯ ತೇರನ್ನು ಹಿಂದಕ್ಕೆ ತಳ್ಳಿತು ಮತ್ತು ಪಾತಾಳಕ್ಕೂ ತುಳಿದಿತ್ತು.

Leave a Reply

Your email address will not be published. Required fields are marked *

error: Content is protected !!