Sunday, 8th September 2024

ಡಿಡಿಟಿ: ಅಮೃತವೆಂದುಕೊಂಡ ವಿಷದ ಇತಿಹಾಸ

ಶಿಶಿರ ಕಾಲ

shishirh@gmail.com

ಹಿಂದಿನ ವಾರ ಉಕ್ರೇನಿನ ಸ್ಥಿತಿಯ ಬಗ್ಗೆ, ಅಲ್ಲಿನ ಜನರ ಯುದ್ಧದ ನಡುವೆಯ ಅನನ್ಯ ದೇಶಪ್ರೇಮದ ಬಗ್ಗೆ ಬರೆದಿದ್ದೆ. ಅದು
ಇನ್ನೊಂದು ಆಯಾಮದಲ್ಲಿ ಯುದ್ಧವನ್ನು ನೋಡುವ ದೃಷ್ಟಿಕೋನವಷ್ಟೆ. ಯುದ್ಧವೆಂದರೆ ನೂರೆಂಟು ನೋಟದ ಸಾಧ್ಯತೆ- ಒಂದೊಂದು ಜಾಗದಲ್ಲಿ ನಿಂತು ನೋಡಿದಾಗ ಒಂದೊಂದು ರೀತಿ ಕಾಣಿಸುತ್ತದೆ.

ಯುದ್ಧದಲ್ಲಿ ನಿಜವಾಗಿ ಸೌಂದರ್ಯಕ್ಕೆ ಜಾಗವಿಲ್ಲ; ಆದರೆ ದೇಶಭಕ್ತಿ ಮೊದಲಾದ ಕೆಲವೇ ಸೌಂದರ್ಯದ ಪರಾಕಾಷ್ಠೆ ಪ್ರದರ್ಶನ ವಾಗುವುದು ಕೂಡ ಯುದ್ಧದಲ್ಲಿಯೇ. ಯುದ್ಧವು ದೇಶ-ಪ್ರದೇಶಗಳ ಆಡಳಿತದ ಒಡಕು, ಆಸೆ, ಧಾರ್ಮಿಕ ಕಾರಣಗಳಿಂದ ಹುಟ್ಟುವುದಾದರೂ ದೇಶದ ಮಟ್ಟಿಗೆ ಅತಿಹೆಚ್ಚು ಒಗ್ಗಟ್ಟು ಜಾಗೃತವಾಗುವುದು ಕೂಡ ಯುದ್ಧದಲ್ಲಿಯೇ. ಯುದ್ಧನೆಲದಲ್ಲಿ ಒಂದು ವರ್ಗ ಕ್ರೌರ್ಯದಲ್ಲಿ ತೊಡಗಿದ್ದರೆ, ಇನ್ನೊಂದು ಅದಕ್ಕೆ ವ್ಯತಿರಿಕ್ತವಾಗಿ ಮಾನವೀಯತೆಯನ್ನು ಮೆರೆಯುತ್ತಿರುತ್ತದೆ.

ಜಾತಿ, ಧರ್ಮ, ಪಂಥದಾಚೆ ದೇಶದ ಜನರನ್ನು ಒಗ್ಗೂಡಿಸುವ ಶಕ್ತಿ ಕ್ರೀಡೆಗಿಂತ ಯುದ್ಧಕ್ಕೆ ಜಾಸ್ತಿ. ಯುದ್ಧ ನೆಲದಲ್ಲಿ ಪ್ರತಿ ಯೊಬ್ಬನ ಬದುಕೂ ಒಂದು ಕಥೆ, ಕೆಲವೊಮ್ಮೆ ಒಬ್ಬ ವ್ಯಕ್ತಿಯೇ ನಾಲ್ಕಾರು ಕಥೆಯಾಗುವುದೂ ಇದೆ. ಕೆಲವರು ತಮ್ಮ ಕಥೆ ಹೇಳಿಕೊಳ್ಳಲು ಬದುಕಿರುತ್ತಾರೆ. ಇನ್ನು ಕೆಲವರು ತಮ್ಮ ಕಥೆಯನ್ನು ಜತೆಯಲ್ಲೇ ಒಯ್ದುಬಿಡುತ್ತಾರೆ, ಅವರಿಗೇನಾಯ್ತು ಎಂದು ಯಾರಿಗೂ ತಿಳಿಯುವುದಿಲ್ಲ. ಅಂಥ ಬಹುತೇಕರ ಸಾವಿಗೆ ಇತಿಹಾಸದಲ್ಲಿ ಸಿಗುವ ಮರ್ಯಾದೆ ಸಾವಿನ ಸಂಖ್ಯೆಯಲ್ಲಿ +೧ ಮಾತ್ರ. ಯುದ್ಧಕ್ಕೆ ಹೊಸ ದಿಶೆಯನ್ನು ಕೊಡುವ ಶಕ್ತಿಯೂ ಇದೆ.

ಒಂದು ವೇಳೆ ಯುದ್ಧ ಎನ್ನುವುದೇ ಇಲ್ಲವಾಗಿದ್ದಲ್ಲಿ ಇಂದಿನ ಜಗತ್ತಿನೆಲ್ಲರ ಬದುಕು ಹೀಗಿರುತ್ತಿರಲಿಲ್ಲ, ಇಷ್ಟು ಮುಂದು ವರಿದಿರುತ್ತಿರಲಿಲ್ಲ. ಅದೆಷ್ಟೋ ಆವಿಷ್ಕಾರಗಳು ಸಾವಿನ ನಡುವೆ ಅನಿವಾರ್ಯತೆಯಿಂದಾಗಿ ಆಗಿವೆ. ಯುದ್ಧ ನಡೆದಾಗಲೆಲ್ಲ ಜಗತ್ತು ಬದಲಾಗಿದೆ. ಅಥವಾ ಬದಲಾವಣೆಯ ಓಟದಲ್ಲಿ ಯುದ್ಧ ಅನಿವಾರ್ಯವಾಗುತ್ತದೆ. ಮೊದಲ ವಿಶ್ವಯುದ್ಧ ಶುರುವಾ ಗುವಾಗ ಇದು ಅಲ್ಲಿಯವರೆಗೆ ಮನುಷ್ಯ, ಈ ಭೂಮಿ ಕಂಡು ಕೇಳರಿಯದ ಕ್ರೌರ್ಯದ ಒಂದು ಯುದ್ಧವಾಗಬಹುದು ಎಂದು ಯಾರೂ ಅಂದಾಜಿಸಿರಲಿಕ್ಕಿಲ್ಲ.

ಎಥಿಕ್ಸ್ ಇಲ್ಲದ ಈ ಆಧುನಿಕ ಯುದ್ಧದಲ್ಲಿ ೪ ಕೋಟಿಗಿಂತ ಜಾಸ್ತಿ ಸತ್ತಿರಬಹುದು. ಅದು ಅಂದಾಜು, ಹೆಚ್ಚು ಕಡಿಮೆ ಲೆಕ್ಕಾಚಾರ. ಅಲ್ಲಿ ಸತ್ತ ಎಲ್ಲರಿಗೂ ಸಂಖ್ಯೆಯಾಗುವ ಕನಿಷ್ಠ ಗೌರವವೂ ದೊರಕಿದಂತಿಲ್ಲ. ಸಾವಿನ ಸಂಖ್ಯೆ ಯಾವುದೇ ಲೆಕ್ಕದಲ್ಲಿ ನೋಡಿ ದರೂ ಹೇಳಿದ್ದಕ್ಕಿಂತ ಜಾಸ್ತಿಯೇ ಆಗಿರುತ್ತದೆ ಎನ್ನುವುದೇ ಅಂದಾಜು. ಅದಕ್ಕಿಂತ ಭೀಕರವಾಗಿ ನಡೆದದ್ದು ೨ನೇ ಮಹಾಯುದ್ಧ. ಸೋವಿಯತ್ ಒಕ್ಕೂಟದ ಅಂದಿನ ಜನಸಂಖ್ಯೆಯಿದ್ದದ್ದು ೧೮ ಕೋಟಿ. ಅಲ್ಲಿ ಸತ್ತವರ ಸಂಖ್ಯೆ ೧.೨೫ ಕೋಟಿಗಿಂತ ಜಾಸ್ತಿ. ಜರ್ಮನಿಯ ೬ ಕೋಟಿ ಜನಸಂಖ್ಯೆಯಲ್ಲಿ ೫೪ ಲಕ್ಷ ಮಂದಿ.

ಅಂದಿನ ಜಗತ್ತಿನ ಶೇ.3 ರಷ್ಟು- 2.3 ಬಿಲಿಯನ್ ಜನಸಂಖ್ಯೆಯಲ್ಲಿ ಸುಮಾರು 8.5 ಕೋಟಿ ಜನ ಈ ಯುದ್ಧಕ್ಕೆ ಆಹುತಿಯಾ ಗಿದ್ದರು ಎನ್ನುವುದೂ ಅಂದಾಜೇ. ಅದರ ಭೀಕರತೆ ಇತಿಹಾಸದಲ್ಲಿ ಯಥಾವತ್ತು ದಾಖಲಾಗಿದ್ದರೂ ಅದು ಒಬ್ಬ ವ್ಯಕ್ತಿಯ ಜೀರ್ಣಕ್ಕೆ ಸಿಗುವ ಇತಿಹಾಸವಲ್ಲ. ಬೆಲಾರುಸ್‌ನ ಜನಸಂಖ್ಯೆಯ ಶೇ.೨೫ಕ್ಕಿಂತ ಜಾಸ್ತಿ, ಉಕ್ರೇನಿನ ಜನಸಂಖ್ಯೆಯ ಶೇ.೧೬ಕ್ಕಿಂತ ಜಾಸ್ತಿ ಜನ ಸಂಖ್ಯೆ ಇನ್ನಿಲ್ಲವಾಗಿಸಿದ್ದು ಇದೇ ೨ನೇ ವಿಶ್ವಯುದ್ಧ. ಹೀಗೆ ಎಲ್ಲ ಆ ದೇಶಗಳಲ್ಲಿ ಎರಡಂಕಿಯ ಪ್ರತಿಶತದಲ್ಲಿಯೇ ಸಾವಾಗಿದ್ದು.

ಅದರಲ್ಲ ಅತ್ಯಂತ ಹೆಚ್ಚು ಸತ್ತಿದ್ದು ಯುವಕರು. ಇಷ್ಟೆಲ್ಲ ಸಾವಾಗಿದ್ದು ಜಗತ್ತಿನಲ್ಲಿ ಎಲ್ಲ ಕಡೆ ಅಲ್ಲ. ಭಾರತ, ದಕ್ಷಿಣ ಮತ್ತು ಉತ್ತರ ಅಮೆರಿಕ, ಆಸ್ಟ್ರೇಲಿಯಾಗಳಲ್ಲಿ ಯುದ್ಧದ ಹೊಡೆದಾಟ ನಡೆಯಲಿಲ್ಲ. ಇದೆಲ್ಲ ನಡೆದದ್ದು ಅತಿ ಚಿಕ್ಕ ಪ್ರದೇಶದಲ್ಲಿ. ಹಾಗಾಗಿಯೇ ಸಾವಿನ ಭೀಕರತೆ ಅಲ್ಲಿನ ನೆಲದಲ್ಲಿ ಅಂದಾಜಿಸಲಾಗದಷ್ಟು. ವಿಶ್ವಯುದ್ಧಗಳಲ್ಲಿ ಸತ್ತ ಸೈನಿಕರ, ಸಾಮಾನ್ಯರ, ಬಹುತೇಕರ
ಪಾರ್ಥಿವ ಶರೀರ ಮಣ್ಣು ಮಾಡಲಾಗಲಿಲ್ಲ, ಅವಕ್ಕೆಲ್ಲ ತೆರೆದ ಸಮಾಧಿ.

ಇಷ್ಟು ಪ್ರಮಾಣದ ಸಾವು, ರಕ್ತದಿಂದಾಗಿ ಅದೆಷ್ಟೋ ಹೊಸರೋಗಗಳೂ ಹುಟ್ಟಲು, ಹರಡಲು ಶುರುವಾದವು. ರಷ್ಯಾದಲ್ಲಿ 9 ಲಕ್ಷ, ಚೀನಾದಲ್ಲಿ 1 ಕೋಟಿ, ಇರಾನಿನಲ್ಲಿ 40 ಲಕ್ಷ ಹೀಗೆ ಸಾವುಗಳಾಗಿದ್ದು ಯುದ್ಧದಿಂದ ಹುಟ್ಟಿದ ರೋಗಗಳಿಂದ. ಭಾರತ ದಲ್ಲೂ 2ನೇ ವಿಶ್ವಯುದ್ಧದ ತರುವಾಯ ಸುಮಾರು 30 ಲಕ್ಷ ಸಾವು ರೋಗಗಳಿಂದಾಗಿದ್ದು ಎನ್ನುವುದು ಲೆಕ್ಕಾಚಾರ. ಆಗ ವಿeನ ಇಂದಿನಂತಿರಲಿಲ್ಲ. ಹಾಗಾಗಿ ಸಾವಿಗೆ ಕಡಿವಾಣವಿರಲಿಲ್ಲ. ಒಂದು ಹಂತದಲ್ಲಂತೂ ಸೈನಿಕರು ಬುಲೆಟ್ಟಿಗೆ ಹೆದರುತ್ತಿರಲಿಲ್ಲ, ಆದರೆ ಸಾಂಕ್ರಾಮಿಕ ರೋಗಕ್ಕೆ ಹೆದರುತ್ತಿದ್ದರು.

ಏಕೆಂದರೆ ಆ ಸಾವುಗಳು ಅವರ ಸೈನಿಕ ಕ್ಯಾಂಪ್, ಬ್ಯಾರಕ್‌ಗಳಲ್ಲಿ ಕಣ್ಣೆದುರಿಗೇ ಸಂಭವಿಸುತ್ತಿದ್ದವು. ಇಂತಹ ಸ್ಥಿತಿಯಲ್ಲೇ ಒಂದು ಪವಾಡಸದೃಶ ರಾಸಾಯನಿಕದ ಅವಿಷ್ಕಾರವಾಗಿದ್ದು. ಇದರ ಹೆಸರು ಕೇಳಿರುತ್ತೀರಿ. ಡಿಡಿಟಿ: Dichloro-diphenyl-trichloroethane ಇದು ಅದರ ಪೂರ್ತಿ ಹೆಸರು. ಬಣ್ಣ, ರುಚಿ, ಪರಿಮಳವಿಲ್ಲದ ರಾಸಾಯನಿಕ. 1874ರಲ್ಲೇ ಸಂಶ್ಲೇಷಿಸಿದ್ದರೂ, ಇದನ್ನು ಕೀಟನಾಶಕವಾಗಿ ಬಳಸಬಹುದು ಎಂಬುದನ್ನು ಕಂಡುಹಿಡಿದದ್ದು 1939ರಲ್ಲಿ. 2ನೇ ಮಹಾಯುದ್ಧ 1945ರಲ್ಲಿ ಮುಗಿಯುವಲ್ಲಿ ಯವರೆಗೆ ಈ ರಾಸಾಯನಿಕವನ್ನು ‘ಟಾಪ್ ಸೀಕ್ರೆಟ್’ ಎಂದು ಅಡಗಿಸಿಡ ಲಾಗಿತ್ತು.

ವಿಶ್ವಯುದ್ಧದಲ್ಲಿ ಭಾಗಿಯಾದ ಅಮೆರಿಕ, ಬ್ರಿಟನ್, ಚೀನಾ ಮೊದಲಾದವರಿಗಷ್ಟೇ ಈ ವಿಶೇಷ ರಾಸಾಯನಿಕ ಲಭ್ಯವಿತ್ತು. ಅಂದಿನ ಯುದ್ಧದಲ್ಲಿ ಯುದ್ಧಕ್ಕಿಂತ ಹೆಚ್ಚಿಗೆ ಕಾಡುತ್ತಿದ್ದ ವಿಷಯ ರೋಗ ಹರಡುವ ಕೀಟಾಣುಗಳು, ನೊಣ, ಉಣುಗು, ಜಿರಳೆ, ಚಿಗಟ, ಸೊಳ್ಳೆ ಇತ್ಯಾದಿ. ಅದಕ್ಕಿಂತ ಜಾಸ್ತಿ ಸೂಕ್ಷ್ಮಾಣುಗಳು ರೋಗ ಹರಡುತ್ತಿದ್ದವಾದರೂ ಅದರ ಅಂದಾಜು ಅಂದಿನ ವಿeನಕ್ಕೆ ದಕ್ಕಿರಲಿಲ್ಲ. ರೋಗ ಹರಡುತ್ತಿದ್ದುದು ಕಣ್ಣಿಗೆ ಕಾಣುವ ಚಿಕ್ಕಹುಳದಂತಹ ಜೀವಿಗಳು ಎಂದೇ ಅಂದು ಹೆಚ್ಚಿನವರು ನಂಬಿದ್ದರು.

ಹಾಗಾಗಿ ಈ ಚಿಕ್ಕಜೀವಿಗಳನ್ನು ಕೊಂದರೆ ರೋಗ ಹರಡುವುದಿಲ್ಲ ಎಂಬ ಕಾರಣಕ್ಕೆ ಡಿಡಿಟಿ ಬಳಸುವುದಕ್ಕೆ ಮಿತ್ರರಾಷ್ಟ್ರಗಳು ಶುರುವಿಟ್ಟುಕೊಂಡವು. ಇದರ ಪರಿಣಾಮ ತಕ್ಷಣ ಗೋಚರಿಸಲು ಶುರುವಾಯ್ತು. ಕ್ಯಾಂಪ್‌ಗಳಲ್ಲಿ ಡಿಡಿಟಿ ಬಳಸುತ್ತಿದ್ದಂತೆ ರೋಗ ಹರಡುವ ಪ್ರಮಾಣ ಗಣನೀಯವಾಗಿ ಕಡಿಮೆಯಾಯಿತು. ಇದಕ್ಕೆ ಹುಳುಗಾತ್ರದ ಜೀವಿ ಸಾಯುತ್ತಿರುವುದು ಕಾರಣ ಎಂದೇ
ಅಂದುಕೊಂಡಿದ್ದರೂ ಅಸಲಿಗೆ ಅಲ್ಲಿ ಸೂಕ್ಷ್ಮಾಣುಜೀವಿಗಳು ಸಾಯುವುದು ಕೂಡ ಕಾರಣವಾಗಿತ್ತು.

ಮಿತ್ರರಾಷ್ಟ್ರಗಳ (ಅಮೆರಿಕ, ಬ್ರಿಟನ್, ಸೋವಿಯತ್ ಒಕ್ಕೂಟ ಇತ್ಯಾದಿ) ಸೈನಿಕರ ಸಮವಸವನ್ನು ಡಿಡಿಟಿಯಲ್ಲಿ ಅದ್ದಿ ಬಳಸಲಾಗುತ್ತಿತ್ತು. ಅವರಿದ್ದ ಕ್ಯಾಂಪ್‌ನ ಸುತ್ತಲೆಲ್ಲ ಲೆಕ್ಕವಿಲ್ಲದಷ್ಟು ಡಿಡಿಟಿ ಬಳಸಲಾಯಿತು. ಸೈನಿಕರ ಜೋಳಿಗೆಯಲ್ಲೂ ಒಂದಿಷ್ಟು ಡಿಡಿಟಿ ಪುಡಿ ಇದ್ದೇ ಇರುತ್ತಿತ್ತು. ಗಲೀಜು ಕಂಡಲ್ಲಿ, ರಕ್ತ ಹರಿದಲ್ಲಿ ಸೈನಿಕರು ಅದನ್ನು ಸಿಂಪಡಿಸಿಕೊಂಡು ಮುಂದೆ ಹೋಗುತ್ತಿದ್ದರು.

ನಂತರದ ದಿನಗಳಲ್ಲಿ, ಯುದ್ಧದ ಮಧ್ಯಸಮಯದಲ್ಲಿ ಡಿಡಿಟಿ ಎಂದರೆ ಅಮೃತ. ಅದನ್ನು ಸೈನಿಕರು ಆಹಾರದ ಮೇಲೆ ಸ್ವಲ್ಪ ಸಿಂಪಡಿಸಿ, ಸ್ಯಾನಿಟೈಜ್ ಮಾಡಿಕೊಂಡು ತಿನ್ನಲಿಕ್ಕೆ ಕೂಡ ಶುರುಮಾಡಿದ್ದರು. ಇದಕ್ಕೆ ವಾಸನೆ-ರುಚಿ ಇಲ್ಲದ್ದ ಕಾರಣ, ಆಹಾರದ ಮೇಲೆ ಹಾಕಿಕೊಂಡರೆ ರುಚಿಗೆಡುತ್ತಿರಲಿಲ್ಲ. ಇಂದಿಗೂ, ಮಿತ್ರರಾಷ್ಟ್ರಗಳು ೨ನೇ ವಿಶ್ವಯುದ್ಧ ಗೆಲ್ಲಲ್ಲು ಈ ರಾಸಾಯನಿಕವೇ ಕಾರಣ ಎನ್ನುವ ನಂಬಿಕೆಯಿದೆ, ಹೌದು ಕೂಡ. ವಿಜ್ಞಾನದ ಆವಿಷ್ಕಾರಗಳಲ್ಲೇ ಮಹೋನ್ನತವಾದದ್ದು ‘ಡಿಡಿಟಿ’ ಎಂದೇ ಅಂದು ಹೇಳಲಾಗುತ್ತಿತ್ತು.

ಶಸಚಿಕಿತ್ಸೆಯ ಇತಿಹಾಸವನ್ನೇ ಆಂಟಿಸೆಪ್ಟಿಕ್ ಬದಲಿಸಿದ ಹಾಗೆ, ಡಿಡಿಟಿ ಇನ್ನೊಂದು ಇತಿಹಾಸ ಸೃಷ್ಟಿಸಬಲ್ಲ ರಾಸಾಯನಿಕ ಎಂದೇ ಹೇಳಲಾಗುತ್ತಿತ್ತು. ಆಗ ಯುದ್ಧಕಾಲದಲ್ಲಿ ಅತಿಹೆಚ್ಚು ಜೀವಹಾನಿಗೆ ಇನ್ನೊಂದು ಕಾರಣ ಮಲೇರಿಯಾ. ಯುದ್ಧನೆಲದಲ್ಲಿ ಮಲೇರಿಯಾ ಹಿಡಿತಕ್ಕೆ ಸಿಕ್ಕಿದ್ದೇ ಡಿಡಿಟಿಯಿಂದ. ಯುದ್ಧ ಮುಗಿದು ಡಿಡಿಟಿಯ ಆವಿಷ್ಕಾರ ಬಹಿರಂಗ ವಾದಾಗ ಒಮ್ಮಿಂದೊ ಮ್ಮೆಲೆ ಅದೆಷ್ಟು ಖ್ಯಾತವಾಯಿತೆಂದರೆ, ಕೋಕಾಕೋಲಾ ಕಂಪನಿ ಇದನ್ನು ತನ್ನ ಪೇಯದಲ್ಲಿ ಹಾಕಲು ತುದಿಗಾಲಲ್ಲಿತ್ತು.

ಭಾರಿ ಸಂಖ್ಯೆಯಲ್ಲಿ ಸೊಳ್ಳೆಗಳು, ಕೀಟಗಳಿದ್ದ ಕಾರಣ ಆ ಕಾಲದ ಕೆಲವು ದ್ವೀಪಗಳು ಮನುಷ್ಯರಿಗೆ ವಾಸಯೋಗ್ಯ ವೆನ್ನಿಸಿರಲಿಲ್ಲ. ಜಗತ್ತಿನಾದ್ಯಂತದ ಅಂಥ ನೂರಾರು ದ್ವೀಪಗಳಲ್ಲಿ ವಿಮಾನದಿಂದ ಡಿಡಿಟಿ ಸಿಂಪಡಿಸಲಾಯಿತು. ಹೀಗಾಗಿ
ತರುವಾಯದಲ್ಲಿ ಅದೆಷ್ಟೋ ದ್ವೀಪಗಳು ವಾಸಯೋಗ್ಯವೆನಿಸಿ ರೆಸಾರ್ಟ್‌ಗಳು ತಲೆಯೆತ್ತಿದವು. ನೊಣ-ಸೊಳ್ಳೆಯನ್ನು
ಸರ್ವನಾಶ ಮಾಡಿಬಿಡಬೇಕು, ಅದು ಡಿಡಿಟಿಯಿಂದ ಮಾತ್ರ ಸಾಧ್ಯ ಎಂಬ ಗ್ರಹಿಕೆಯಲ್ಲಿ ಮಿತ್ರರಾಷ್ಟ್ರಗಳೆಲ್ಲ ಯುದ್ಧಾನಂತರ
ಮಿತಿಮೀರಿ ಡಿಡಿಟಿ ಬಳಸತೊಡಗಿದವು.

ಆಫ್ರಿಕಾದಲ್ಲಿ ಅಂದು ಅತಿಹೆಚ್ಚು ಸಾವಿಗೆ ಕಾರಣವಾಗಿದ್ದು ಮಲೇರಿಯಾ. ಅಲ್ಲಿಗೆ ಕ್ರಿಶ್ಚಿಯನ್ ಮಿಷನರಿಗಳು ಡಿಡಿಟಿಯನ್ನು ಒಯ್ದವು. ಆಫ್ರಿಕನ್ನರು ಯಾವುದೇ ರಾಸಾಯನಿಕವನ್ನೂ ಒಪ್ಪುತ್ತಿರಲಿಲ್ಲ. ಅಲ್ಲ ಡಿಡಿಟಿಯನ್ನು ಚಮಚದಲ್ಲಿ ತಿಂದು, ಊಟದ ಮೇಲೆ ಹಾಕಿ ತಿಂದು ತೋರಿಸಿ ‘ಇದು ಹಾನಿಕಾರಕವಲ್ಲ’ ಎಂದು ಅವರನ್ನು ಒಪ್ಪಿಸಲಾಯಿತು. ಇಂದಿಗೂ ಆಫ್ರಿಕಾ ಮೊದಲಾದ ದೇಶಗಳಲ್ಲಿ ಅತಿಹೆಚ್ಚು ಸಾವಿಗೆ ಕಾರಣ ಮಲೇರಿಯಾ.

ಜಗತ್ತಿನಲ್ಲಿ 2020ರಲ್ಲಿ ಮಲೇರಿಯಾದಿಂದ ಸುಮಾರು ೭ ಲಕ್ಷ ಮಂದಿ ಸತ್ತಿದ್ದಾರೆ. ಒಂದೊಮ್ಮೆ ಡಿಡಿಟಿ ಅವಿಷ್ಕಾರ ವಾಗಿರ ದಿದ್ದರೆ ಈ ಸಾವಿನ ಪ್ರಮಾಣ ಲೆಕ್ಕಕ್ಕೆ ಸಿಗುತ್ತಿರಲಿಲ್ಲ. ಡಿಡಿಟಿ ಇಲ್ಲದಿದ್ದಿದ್ದರೆ ಮಲೇರಿಯಾ ಇಂದು ಇಡೀ ಆಫ್ರಿಕಾವನ್ನೇ ಖಾಲಿ ಮಾಡಿ ಬಿಡುತ್ತಿತ್ತು ಎನ್ನುವ ಮಾತು ಅತಿಶಯವೆನ್ನಿಸುವುದಿಲ್ಲ. ಹೀಗೆ ಡಿಡಿಟಿ ಇಡೀ ಜಗತ್ತಿಗೆ, ವಿಶ್ವಯುದ್ಧದ ವೇಳೆ ಮತ್ತು ನಂತರದಲ್ಲಿ ಅಮೃತಸದೃಶವಾಗಿ ಲೆಕ್ಕವಿಲ್ಲದಷ್ಟು ಮನುಷ್ಯ ಜೀವ ಉಳಿಸಿದೆ, ಕೃಷಿ ಉತ್ಪನ್ನವನ್ನು, ಆಹಾರವನ್ನು ಕಾಪಾಡಿದೆ.
ವಿಶ್ವಯುದ್ಧದ ನಂತರ ಅಮೆರಿಕ ಮತ್ತು ವಿಶ್ವದೆಡೆ ಕೃಷಿಕ್ರಾಂತಿಗಳೇ ನಡೆದವು.

ಅಮೆರಿಕದಲ್ಲಂತೂ ಕೃಷಿಗೆ ಕೆಂಪಿರುವೆಯ ಕಾಟ ವಿಪರೀತವಾಗಿತ್ತು. ಅವಕ್ಕೆ ಡಿಡಿಟಿ ಮಾರಕವಾಗಿದ್ದರಿಂದ ಅಮೆರಿಕದ ಇಡೀ ಕೃಷಿಭೂಮಿಯ ಮೇಲೆ ವಿಮಾನಗಳಿಂದ ಡಿಡಿಟಿ ಸಿಂಪಡಿಸಲಾಯಿತು. ಇದು ಒಳ್ಳೆಯ ಪರಿಣಾಮವನ್ನೂ ಕೊಟ್ಟಿತ್ತು. ಇಂಥ ಜೀವರಕ್ಷಕ ರಾಸಾಯನಿಕದ ಬಗ್ಗೆ, ಅದರ ಬಳಕೆಯ ಪರಿಣಾಮದ ಬಗ್ಗೆ ಈ ಪ್ರಮಾಣದಲ್ಲಿ ಬಳಸುವಾಗ ಕೂಡ ಯಾವುದೇ ಪಕ್ಕಾ ರಿಸರ್ಚ್ ನಡೆದಿರಲಿಲ್ಲ- 1962ರಲ್ಲಿ ರೇಚಲ್ ಕಾರ್ಸನ್ ಎಂಬ ವಿಜ್ಞಾನಿ ಡಿಡಿಟಿ ಬಳಕೆಯ ಸಮಗ್ರ ಅಡ್ಡ ಪರಿಣಾಮವನ್ನು ಅಭ್ಯಸಿಸಿ ‘”Silent Spring’’ ಎಂಬ ಪುಸ್ತಕ ಪ್ರಕಟಿಸುವವರೆಗೆ.

ಡಿಡಿಟಿಯು ಬೇಡದ ಜೀವಿಗಳನ್ನಷ್ಟೇ ಅಲ್ಲದೆ, ನಮ್ಮ ಇರುವಿಕೆಗೆ ಬೇಕಾಗುವ ಜೀವರಾಶಿಗಳನ್ನೆಲ್ಲ ಕೊಲ್ಲುತ್ತಿದೆ ಎಂಬುದು ಆಗ ಪ್ರಪಂಚಕ್ಕೆ ತಿಳಿಯಿತು. ಡಿಡಿಟಿಯು ಕೃಷಿ ಉತ್ಪನ್ನವನ್ನು ತಿನ್ನುವ ಕೀಟಗಳನ್ನಷ್ಟೇ ಕೊಲ್ಲುತ್ತಿರಲಿಲ್ಲ, ಕೃಷಿಗೆ ಬೇಕಾದ ಜೇನು ಹುಳು, ಎರೆಹುಳು ಹೀಗೆ ಎಲ್ಲವನ್ನೂ ಕೊಲ್ಲುತ್ತಿತ್ತು. ಇದರಿಂದಾಗಿ ಅಮೆರಿಕದಲ್ಲಿ ಕೃಷಿಯ ಪರಿಸರ ವೃತ್ತಾಂತವೇ (Ecology) ಏರುಪೇರಾಗಿದ್ದು ನಿಧಾನಕ್ಕೆ ಗೋಚರಿಸಲಾರಂಭಿಸಿತು. ಡಿಡಿಟಿಯಿಂದ ಅಕ್ಷರಶಃ ಎಲ್ಲ ವರ್ಗದ ಕೀಟಗಳು ಸಾಯುವಂತಾಗಿ, ‘ಸೈಲೆಂಟ್ ಸ್ಪ್ರಿಂಗ್’ ಎಂಬ ಆಕೆಯ ಆ ಪುಸ್ತಕದ ಹೆಸರಿನಂತೆ ಅಮೆರಿಕದ ವಸಂತ ಸದ್ದಿಲ್ಲದ ವಸಂತ ವಾಗಿಹೋಗಿತ್ತು.

ಅಲ್ಲಿ ಆಗ ಸುಮಾರು 6 ಲಕ್ಷ ಟನ್ ಡಿಡಿಟಿ ಅದಾಗಲೇ ಬಳಕೆಯಾಗಿತ್ತು. ತಕ್ಷಣ ಅಮೆರಿಕ ಸರಕಾರ ‘ಅಮೃತ’ವೆಂದು
ಅಲ್ಲಿಯವರೆಗೆ ಭಾವಿಸಿದ್ದ ಡಿಡಿಟಿಯನ್ನು ಬ್ಯಾನ್ ಮಾಡಿತು. ಇದಾಗಿದ್ದು 1972ರಲ್ಲಿ. ಆ ಪುಸ್ತಕ-ವರದಿ ಪ್ರಕಟವಾದ
ದಶಕದ ನಂತರ. ಅದರ ಮಧ್ಯೆ ಡಿಡಿಟಿ ಒಂದು ರಾಜಕೀಯ ವಿಷಯವಾಗಿ, ಹಲವಾರು ದೊಂಬರಾಟಗಳಿಗೂ ಕಾರಣ
ವಾಯಿತು. ಅದೆಲ್ಲದರ ವಿವರ ಅನಗತ್ಯ. ಡಿಡಿಟಿಯು ವಾತಾವರಣಕ್ಕೆ ಮಹಾವಿಷ ಎಂಬುದು ಬಹಿರಂಗವಾದರೂ, ಮಲೇರಿಯಾದಿಂದಾಗಿ ತಕ್ಷಣಕ್ಕೆ ಅದರ ಬಳಕೆ ನಿಲ್ಲಿಸುವ ಸ್ಥಿತಿ ಆಫ್ರಿಕಾ, ಭಾರತದಂಥ ದೇಶಗಳಲ್ಲಿರಲಿಲ್ಲ; ಮಲೇರಿಯಾ
ಅಥವಾ ಈ ವಿಷ- ಎರಡರಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳಬೇಕಿತ್ತು.

ಇದೆಲ್ಲದರ ನಡುವೆ ಡಿಡಿಟಿಯಿಂದ ಯಾವುದೇ ಹಾನಿಯಿಲ್ಲ ಎನ್ನುವ ಪಿತೂರಿ ವಾದಗಳನ್ನು ಈ ಕೆಮಿಕಲ್ ತಯಾರಕ ಕಂಪನಿಗಳು ನಡೆಸಿದವು, ವಶೀಲಿಗಿರಿಯೂ ನಡೆಯಿತು. ಇಂದಿಗೂ ಅದು ನಡೆಯುತ್ತಲೇ ಇದೆ. ಅಮೆರಿಕ ಮತ್ತಿತರ ದೇಶಗಳಲ್ಲಿ ಡಿಡಿಟಿ ಕ್ರಮೇಣ ನಿಷೇಧಕ್ಕೊಳಗಾಗುತ್ತಿದ್ದಂತೆ ಕೆಲ ಕಂಪನಿಗಳು ನಿಷೇಧವಿಲ್ಲದ ದೇಶಕ್ಕೆ ವರ್ಗಾವಣೆ ಗೊಂಡವು. ಕಂಪನಿಗಳ ವಶೀಲಿಗಿರಿ, ಮಲೇರಿಯಾ ಅನಿವಾರ್ಯತೆಯಿಂದಾಗಿ ಇದು ಅಲ್ಲ ನಿಷೇಧಿಸಲ್ಪಡಲೇ ಇಲ್ಲ. ಭಾರತದಲ್ಲಂತೂ ೨೦೦೮ರಲ್ಲಿ, ಡಿಡಿಟಿಯನ್ನು ಕೃಷಿಗೆ ಬಳಸಬಾರದು ಎನ್ನುವ ಭಾಗಶಃ ನಿಷೇಧ ಜಾರಿಯಾದದ್ದು.

ಇಂದಿಗೂ ಭಾರತ ಅತಿಹೆಚ್ಚು ಪ್ರಮಾಣದಲ್ಲಿ ಡಿಡಿಟಿ ತಯಾರಿಸುವ, ರಫ್ತು ಮಾಡುವ ದೇಶ. ಇಂದಿಗೂ ಪೇಟೆ-ಪಾರ್ಕು ಗಳಲ್ಲಿ ಸೊಳ್ಳೆಗಳಿಗೆ ಬಿಳಿಯ ಹೊಗೆ ಬಿಡುವುದನ್ನು ನೋಡಿರುತ್ತೀರಿ. ಡಿಡಿಟಿಯು ಸ್ತನ ಮತ್ತು ಹಲವು ಕ್ಯಾನ್ಸರ್‌ಗೆ ನೇರಕಾರಣ ಎಂಬುದೀಗ ಜಗಜ್ಜಾಹೀರು. ಡಿಡಿಟಿಯು ಅಜ್ಜಿಯ ದೇಹ ಹೊಕ್ಕರೆ ಆಕೆ ಸೇರಿದಂತೆ ಮುಂದಿನ ೪ ತಲೆಮಾರಿನ ಹೆಣ್ಣುಗಳಿಗೆ ಸ್ತನ ಕ್ಯಾನ್ಸರ್ ತರಬಲ್ಲದು.

ಅಮೆರಿಕದಲ್ಲಿ ಡಿಡಿಟಿ ನಿಷೇಧವಾಗುತ್ತಿದ್ದಂತೆ ಯಥೇಚ್ಛ ಪ್ರಮಾಣದಲ್ಲಿ ಅದನ್ನು ಕ್ಯಾಲಿಫೋರ್ನಿಯಾ ಸಮುದ್ರಕ್ಕೆ ಎಸೆಯ ಲಾಯಿತು. ಇದು ಪೆಸಿಫಿಕ್ ಸಮುದ್ರತೀರದಲ್ಲಿ ಸೀಲ್ ಸೇರಿದಂತೆ ಬಹುತೇಕ ಜಲಚರಗಳಲ್ಲಿ 5 ದಶಕದ ನಂತರವೂ ಕ್ಯಾನ್ಸರ್‌ಗೆ ಕಾರಣ ವಾಗಿದೆ. ಇಷ್ಟಿದ್ದರೂ ಭಾರತ ಸೇರಿದಂತೆ ಜಗತ್ತಿನ ಸುಮಾರು 80 ದೇಶಗಳಲ್ಲಿ ಹಲವು ಕಾರಣಗಳಿಂದ ಡಿಡಿಟಿಯ ಬಳಕೆ ಯಾಗುತ್ತಲೇ ಇದೆ. ಇದು ಆಧುನಿಕ ವಿಜ್ಞಾನದ, ವ್ಯವಸ್ಥೆಯ ವಿಡಂಬನೆಯಲ್ಲವೇ? ಇನ್ನಾದರೂ ಡಿಡಿಟಿ ನಿಷೇಧಿಸಿ ಮಲೇರಿಯಾ ನಿರ್ಮೂಲನೆಗೆ ಶುಚಿತ್ವದ ಮೊರೆಹೋಗ ಬೇಕಿದೆ.

ಇದನ್ನು ಆಳುಗರು ಸವಾಲಾಗಿ ಸ್ವೀಕರಿಸಬೇಕಿದೆ.

error: Content is protected !!