Friday, 20th September 2024

’ಮೆತ್ತು’ವಿಕೆ ಅಲಂಕಾರವಷ್ಟೇ ಅಲ್ಲ, ಉತ್ಪ್ರೇಕ್ಷೆಯೂ !

ತಿಳಿರು ತೋರಣ

ಶ್ರೀವತ್ಸ ಜೋಶಿ

srivathsajoshi@yahoo.com

ಅರ್ಥದ ಬೆನ್ನಟ್ಟಿ ಹೋದಾಗ ಕೆಲವು ಪದಗಳು ತೆರೆದುಕೊಳ್ಳುವ ರೀತಿ ಅನ್ಯಾದೃಶವಾದುದು. ಮೇಲ್ನೋಟಕ್ಕೆ ಸಾಮಾನ್ಯದಲ್ಲಿ ಅತಿಸಾಮಾನ್ಯ ಎನಿಸುವಂಥ ಪದವೇ ಆದರೂ, ಮಾತಿನಲ್ಲಿ ಮತ್ತು ಬರವಣಿಗೆಯಲ್ಲಿ ಅದರ ಬಳಕೆಯ ಬಗೆಗಳನ್ನು ಗಮನಿಸುತ್ತ ಹೋದಂತೆ ಅದ್ಭುತವಾದೊಂದು ಲೋಕವೇ ನಮ್ಮ ಕಣ್ಮುಂದೆ
ಬರುತ್ತದೆ.

ಓಹ್ ಹೌದಲ್ಲ ಇಂಥದೊಂದು ಯಃಕಶ್ಚಿತ್ ಪದದ ಬಗ್ಗೆ ನಾವು ಇಷ್ಟೆಲ್ಲ ಯೋಚಿಸಿಯೇ ಇರಲಿಲ್ಲವಲ್ಲ ಎಂದು ಅನಿಸುತ್ತದೆ. ಪಾವೆಂ ಆಚಾರ್ಯರಂಥ ಪದ ವಿಶ್ಲೇಷ ಕರು, ವೆಂಕಟಸುಬ್ಬಯ್ಯರಂಥ ನಿಘಂಟು ತಜ್ಞರು, ಇದನ್ನು ತಪಸ್ಸಿನಂತೆ ಮಾಡುತ್ತಿದ್ದರು. ಪದಗಳ ಮೇಲೆ ಮೆತ್ತಿಕೊಂಡಿರುವ ಅವಜ್ಞೆಯ ಧೂಳನ್ನು ಒರೆಸಿ, ಜ್ಞಾನಾನುಭವಗಳ ಕುಂಚದಿಂದ ತಿಕ್ಕಿ ತೊಳೆದು ಥಳಥಳಗೊಳಿಸಿ, ಹೊಸ ಹೊಳಪು ನೀಡುತ್ತಿದ್ದರು. ಪಾಂಡಿತ್ಯದ ಗಣಿಗಳಾಗಿದ್ದ ಆ ಪೂರ್ವಸೂರಿಗಳೆದುರು ನಾವೆಲ್ಲ ಪರಮಪಾಮರರು ಎಂದು ಗೊತ್ತು. ಆದರೂ ಈವತ್ತು ಒಂದು ಅತಿಸಾಮಾನ್ಯ ಪದದ ‘ಪದಾರ್ಥ’ ಮಾಡುವ ಮತ್ತು ಅದನ್ನು ನಿಮ್ಮೆಲ್ಲರೊಡನೆ ಹಂಚಿ ಕೊಳ್ಳುವ ಸಾಹಸಕ್ಕೆ ಹೊರಟಿದ್ದೇನೆ, ನನ್ನ ಇತಿಮಿತಿಗಳನ್ನು ಅರಿತುಕೊಂಡೇ. ಈ ಅಡುಗೆಗೆ ನಾನು ಆಯ್ದುಕೊಂಡಿರುವ ಪದ ‘ಮೆತ್ತು’. ಇದೇ ಏಕೆ ಮತ್ತು ಇದು ನನಗೆಲ್ಲಿ ಸಿಕ್ಕಿತು ಎಂಬುದನ್ನೂ ಮೊದಲಿಗೆ ತಿಳಿಸುತ್ತೇನೆ.

ಮೊನ್ನೆ ಒಂದು ದಿನ ನನ್ನ ಬೆಳಗಿನ ವಾಕಿಂಗ್ ಸಮಯವು ಸೂರ್ಯೋದಯದ ಶುಭ ಮುಹೂರ್ತಕ್ಕೆ ಹೊಂದಾ ಣಿಕೆಯಾಗಿದ್ದರಿಂದ, ಮತ್ತು ಈಗ ಇಲ್ಲಿ ಅಮೆರಿಕದಲ್ಲಿ ಬೇಸಗೆ ಕಾಲದಲ್ಲಿ ಸುತ್ತಮುತ್ತಲೆಲ್ಲ ಹಸುರು ವನರಾಜಿ ನಳನಳಿಸುತ್ತಿರುವುದರಿಂದ, ಸೂರ್ಯನ ಎಳೆಬಿಸಿಲು ಗಿಡಮರಗಳ ಮೇಲೆ ಬಿದ್ದದ್ದನ್ನು ನೋಡುವಾಗ ಥಟ್ಟನೆ ನನಗೆ ಪಂಜೆ ಮಂಗೇಶರಾಯರ ‘ಉದಯರಾಗ’ ಪದ್ಯ ನೆನಪಾಯಿತು. ‘ಮೂಡುವನು ರವಿ ಮೂಡುವನು ಕತ್ತಲೊಡನೆ ಜಗಳಾಡುವನು… ಮೂಡಣ ರಂಗಸ್ಥಳದಲಿ ನೆತ್ತರು ಮಾಡುವನು ಕುಣಿದಾಡುವನು…’ ಬಹುಶಃ ಇದು ನಿಮಗೂ ಪ್ರಾಥಮಿಕ ಶಾಲೆಯ ಪಠ್ಯಪುಸ್ತಕದಲ್ಲಿದ್ದ ಪದ್ಯ, ಇಲ್ಲವೆಂದರೂ ಗೊತ್ತಿರುವಂಥ ಪದ್ಯವೇ. ಸರಿ, ಈ ಪದ್ಯದಲ್ಲಿ ಬರುವ ‘ಬಂಗಾರದ ಚೆಲು ಬಿಸಿಲ ಕಿರೀಟದ ಶೃಂಗಾರದ ತಲೆ ಎತ್ತುವನು| ತೆಂಗಿನ ಕಂಗಿನ ತಾಳೆಯ ಬಾಳೆಯ ಅಂಗಕೆ ರಂಗನು ಮೆತ್ತುವನು| ಸಾಲುಗಳು ಆವತ್ತು ನನಗೊಂದು ‘ಯುರೇಕಾ!’ ಕ್ಷಣವನ್ನು ತಂದುಕೊಟ್ಟವು.

ಈ ದೇಶದಲ್ಲಿ ತೆಂಗು-ಕಂಗು, ತಾಳೆ-ಬಾಳೆ ಗಿಡಗಳು ನನಗಿಲ್ಲಿ ಕಾಣಸಿಗುವುದಿಲ್ಲ ನಿಜ; ಇಲ್ಲಿಯ ಗಿಡಮರಗಳ ಹೆಸರು ನನಗೆ ಸರಿಯಾಗಿ ಗೊತ್ತಿಲ್ಲ ಎನ್ನುವುದೂ ನಿಜ; ಆದರೆ ‘ಅಂಗಕೆ ರಂಗನು ಮೆತ್ತುವ’ ಕೆಲಸವನ್ನು ರವಿ ಇಲ್ಲಿಯ ಗಿಡಮರಗಳ ಮೇಲೂ ಅಷ್ಟೇ ಸೊಗಸಾಗಿ ಮಾಡುತ್ತಾನೆ. ಅದು ನನ್ನ ಗಮನಕ್ಕೆ ಬಂದದ್ದೇ ಪಂಜೆಯವರ ಪದ್ಯ ಮತ್ತು ವಿಶೇಷವಾಗಿ ಆ ಸಾಲುಗಳು ನನಗೆ ನೆನಪಾಗುವುದಕ್ಕೆ ಕಾರಣ. ಅದರಲ್ಲೂ ಮತ್ತಷ್ಟು ಚಿಂತನೆಯ ಗ್ರಾಸ ಒದಗಿಸಿದ್ದು ‘ಮೆತ್ತುವನು’ ಎಂಬ  ಪದ. ಪಂಜೆಯವರೇನೋ ಅದನ್ನು ‘ಶೃಂಗಾರದ ತಲೆ ಎತ್ತುವನು’ ಸಾಲಿಗೆ ಪ್ರಾಸಬದ್ಧ ಆಗುವಂತೆ ‘ಅಂಗಕೆ ರಂಗನು ಮೆತ್ತುವನು’ ಎಂದು ಬರೆದದ್ದು. ಆದರೆ ಈ ‘ಮೆತ್ತುವ’ ಪ್ರಕ್ರಿಯೆ ಎಷ್ಟು ಸೋಜಿಗದ್ದು ನೋಡಿ!

ಮೆತ್ತು ಎಂದರೇನು? ಕ್ರಿಯಾಪದ ರೂಪದಲ್ಲಿ ಇದರ ಅರ್ಥ- ದಟ್ಟವಾಗಿ ಹಚ್ಚು, ಬಳಿಯು, ಲೇಪಿಸು, ಸವರು, ಪೂಸು ಇತ್ಯಾದಿ. ಮುಖಕ್ಕೆ ಪೌಡರ್ ಹಚ್ಚು, ಗೋಡೆಗೆ ಸುಣ್ಣ ಬಳಿ, ಗಾಯಕ್ಕೆ ಮುಲಾಮು ಲೇಪಿಸು, ಮೊಣಕೈಗೆ ಜೇನುತುಪ್ಪ ಸವರು, ವಿಗ್ರಹಕ್ಕೆ ಗಂಧವನ್ನು ಪೂಸು… ಇದೆಲ್ಲ ಬಹುಮಟ್ಟಿಗೆ ಮೆತ್ತುವಿಕೆಯೇ. ಆದರೆ ಎಲ್ಲ ಸಂದರ್ಭಗಳಲ್ಲೂ ನಾವು ಮೆತ್ತು ಎಂಬ ಕ್ರಿಯಾಪದವನ್ನು ಬಳಸುವುದಿಲ್ಲ. ಮುಖಕ್ಕೆ ಹಿತಮಿತವಾಗಿ ಪೌಡರ್ ಹಚ್ಚಿಕೊಂಡರೆ ಅದು ‘ಹಚ್ಚು’ವುದು
ಆಗುತ್ತದೆಯೇ ಹೊರತು ‘ಮೆತ್ತು’ವುದಲ್ಲ. ಪೌಡರ್ ಅಲ್ಲದೆ ಬೇರಾವ ಮೇಕ್‌ಅಪ್ ಆದರೂ ಅಷ್ಟೇ, ಹಿತಮಿತವಾಗಿ ಇದ್ದರೆ ‘ಮೇಕಪ್ ಮಾಡುವುದು/ಮಾಡಿ ಕೊಳ್ಳುವುದು’ ಎನ್ನುತ್ತೇವೆಯೇ ಹೊರತು ಮೆತ್ತುವುದು/ಮೆತ್ತಿಕೊಳ್ಳುವುದು ಎನ್ನುವುದಿಲ್ಲ.

ಯಾವಾಗ ಆ ಹಚ್ಚುವಿಕೆ ವಿಪರೀತವಾಗಿ ಮಿತಿಮೀರುತ್ತದೋ, ಆಗ ಮೆತ್ತುವಿಕೆ ಎನ್ನಲ್ಪಡುತ್ತದೆ. ಅಥವಾ, ಹಚ್ಚಿದ್ದು ಹಿತಮಿತದಲ್ಲೇ ಇದ್ದರೂ ಇನ್ನೊಬ್ಬರು
ಅದನ್ನು ಉತ್ಪ್ರೇಕ್ಷೆಯಿಂದ ಬಣ್ಣಿಸಿದರೆ ಆಗಲೂ ಮೆತ್ತಿದ್ದು ಅಂತಾಗುತ್ತದೆ. ‘ಸಹಜ ಸೌಂದರ್ಯವಿರುವ ಆ ಹೆಣ್ಮಗಳು ಮುಖಕ್ಕೆ ಎರಡಿಂಚಿನಷ್ಟು ದಪ್ಪ ಮೇಕಪ್ ಮೆತ್ತಿಕೊಂಡಿದ್ದಾಳೆ; ವಿಕಾರವಾಗಿ ಕಾಣುತ್ತಿದ್ದಾಳೆ’ ಎಂದು ಕೆಲವೊಮ್ಮೆ ಸಿನೆಮಾ ನಟಿಯರ ಬಗ್ಗೆ, ಕೆಲವು (ಕು)ರೂಪದರ್ಶಿಗಳ ಬಗ್ಗೆಯೂ ಹೇಳುತ್ತೇವಲ್ಲ, ಅದೇ ಮೆತ್ತುವಿಕೆಗೆ ಉತ್ತಮ ನಿದರ್ಶನ. ಒಟ್ಟಾರೆಯಾಗಿ ‘ಮೆತ್ತು’ ಕ್ರಿಯಾಪದ ಬಳಸುವಾಗ ಸ್ವಲ್ಪವಾದರೂ ಉತ್ಪ್ರೇಕ್ಷೆ ಇದ್ದೇ ಇರುತ್ತದೆ.

ಇಲ್ಲಿ ಇನ್ನೂ ಒಂದು ಮಜಾ ಇದೆ. ಮೆತ್ತುವುದು ಎನ್ನುವಾಗ ಭೌತಿಕವಾಗಿ ಒಂದು ವಸ್ತುವನ್ನು ಹಚ್ಚಿದ್ದು, ಬಳಿದದ್ದು, ಲೇಪಿಸಿದ್ದು, ಸವರಿದ್ದು, ಪೂಸಿದ್ದು ಇರಲೇ ಬೇಕೆಂದಿಲ್ಲ. ಪಂಜೆಯವರ ಪದ್ಯದ ಸಾಲನ್ನೇ ಮತ್ತೊಮ್ಮೆ ಗಮನಿಸುವಾ. ‘ತೆಂಗಿನ ಕಂಗಿನ ತಾಳೆಯ ಬಾಳೆಯ ಅಂಗಕೆ ರಂಗನು ಮೆತ್ತುವನು’ ಎಂಬಲ್ಲಿ ರವಿಯು ಎಳೆಬಿಸಿಲಿನ ಹೊಂಬಣ್ಣವನ್ನು ಆ ಎಲ್ಲ ಮರಗಳಿಗೆ ಹಚ್ಚುತ್ತಾನೆ; ಆದರೆ ಪೇಂಟ್ ಹಚ್ಚಿದಂತೆ ಅಲ್ಲ. ಭೌತಿಕವಾಗಿ ಏನನ್ನೂ ಹಚ್ಚಿರುವುದಿಲ್ಲ! ಕಣ್ಗಳಿಗಷ್ಟೇ ಹಾಗೆ ಕಾಣುತ್ತದೆಯೇ ವಿನಾ ಆ ಮರಗಳನ್ನು ನಾವೇನಾದರೂ ಕೈಯಿಂದ ಮುಟ್ಟಿದರೆ ರವಿಯು ಮೆತ್ತಿದ ರಂಗು ನಮ್ಮ ಕೈಗಳಿಗೇನೂ ಗೊತ್ತಾಗುವುದಿಲ್ಲ! ನನಗಿಲ್ಲಿ ಅಮೆರಿಕನ್ನರ ‘ವೇರಿಂಗ್ ಎಲ್ಲಾ ನೈಸ್ ಪರ್ಫ್ಯೂಮ್’ ಎಂಬ ಪದ ಬಳಕೆಯೂ ನೆನಪಾಗುತ್ತಿದೆ.

ಮೈ-ಕೈಗೆ ಮತ್ತು ಉಡುಪಿನ ಮೇಲೆಲ್ಲ ಸೆಂಟ್ ಸಿಂಪಡಿಸಿಕೊಂಡು ಘಮಘಮಿಸುವರಿಗೆ ಅಮೆರಿಕನ್ನರು ಕಾಂಪ್ಲಿಮೆಂಟ್ ಕೊಡುವ ರೀತಿ ‘ಯು ಆರ್ ವೇರಿಂಗ್ ಎಲ್ಲಾ ನೈಸ್ ಪರ್ಫ್ಯೂಮ್!’ ಎಂದು. ಬಟ್ಟೆಬರೆ ವೇರ್ ಮಾಡುವುದು ಗೊತ್ತು, ಇದೆಂಥದು ಪರ್ಫ್ಯೂಮ್ ವೇರ್ ಮಾಡುವುದು ಎಂದು ನಾನು ಮೊದಲೆಲ್ಲ ಆಶ್ಚರ್ಯಪಡುತ್ತಿದ್ದೆ. ಈಗ ಪಂಜೆಯವರ ಪದ್ಯದಲ್ಲಿ ರವಿಯು ಮರಗಳ ಅಂಗಕೆ ರಂಗನು ಮೆತ್ತಿದ್ದನ್ನು ನೋಡುವಾಗ ಈ ‘ಪರ್ಫ್ಯೂಮ್ ವೇರಿಂಗ್’ ತರ್ಕಬದ್ಧ ವಾಗಿಯೇ ಇದೆ ಅಂತನಿಸುತ್ತಿದೆ. ‘ಛೇದೇಧಿಪಿ ಚಂದನತರುಃ ಸುರಭಯತಿ ಮುಖಂ ಕುಠಾರಸ್ಯ’ ಎಂಬ ಭರ್ತೃಹರಿಯ ಸುಭಾಷಿತದ ಸಾಲು ಸಹ ಹಾಗೆಯೇ.

ಸಜ್ಜನರು ತಮಗೆ ಕೆಡುಕನ್ನುಂಟುಮಾಡುವವರಿಗೂ ಒಳಿತನ್ನೇ ಬಯಸುತ್ತಾರೆ ಎಂಬ ನೀತಿಯನ್ನು ಹೇಳಲು ಭರ್ತೃಹರಿ ಕೊಡುವ ಹೋಲಿಕೆ: ಗಂಧದ ಮರವು ಕೊಡಲಿಯಿಂದ ಕಡಿಯಲ್ಪಟ್ಟರೂ ಆ ಕೊಡಲಿಗೊಂದಿಷ್ಟು ಗಂಧದ ಪರಿಮಳವನ್ನೇ ಮೆತ್ತುತ್ತದೆ ಎಂದು. ಅಂಥ ಇನ್‌ಟ್ಯಾಂಜಿಬಲ್ (ಭೌತಿಕವಾಗಿ ಸ್ಪರ್ಶಿಸಲಾಗದ)
ಮೆತ್ತುವಿಕೆಯ ಉದಾಹರಣೆ ಇನ್ನೊಂದು ಸಂಸ್ಕೃತ ಸೂಕ್ತಿಯಲ್ಲೂ ಇದೆ. ಸಾಮಾನ್ಯವಾಗಿ ಉತ್ಪ್ರೇಕ್ಷಾಲಂಕಾರಕ್ಕೆ ಉದಾಹರಣೆಯಾಗಿ ಬಳಕೆಯಾಗುತ್ತದೆ. ಆ ಸೂಕ್ತಿ ಹೀಗಿದೆ:

‘ಲಿಂಪತೀವ ತಮೋಂಧಿಗಾನಿ ಧಿ ವರ್ಷತೀವಾಂಜನಂ ನಭಃ|
ಅಸತ್ಪುರುಷಸೇವೇವ ದೃಷ್ಟಿರ್ನಿಷಲತಾಂ ಗತಾ| –

ಇದು ಕಗ್ಗತ್ತಲೆಯ ಬಣ್ಣನೆ. ಎಂಥ ಕಗ್ಗತ್ತಲೆಯೆಂದರೆ ಮೈಕೈಗೆಲ್ಲ ಕಪ್ಪು ಮೆತ್ತಿದಂತಾಯ್ತೇನೋ ಅನಿಸುತ್ತಿದೆ. ಆಕಾಶದಿಂದ ಕಾಡಿಗೆಯ ಮಳೆಯೇ ಸುರಿದಿದೆ ಯೇನೋ ಅಂತನಿಸುತ್ತಿದೆ. ಕಣ್ಣುಗಳನ್ನು ತೆರೆದರೂ ಏನೇನೂ ಕಾಣದಾಗಿದೆ. ಅಯೋಗ್ಯನಿಗೆ ಮಾಡಿದ ಸೇವೆಯಂತೆ ಕಣ್ಣನೋಟವು ಉಪಯೋಗ ಇಲ್ಲದ್ದಾಗಿದೆ.

ಕಣ್ಣುಮುಚ್ಚಿದರೂ ಕಣ್ತೆರೆದರೂ ವ್ಯತ್ಯಾಸವಿಲ್ಲ ಎನ್ನುವಷ್ಟರ ಮಟ್ಟಿಗೆ ಕತ್ತಲೆ. ಓಬವ್ವನ ಚಿತ್ರಗೀತೆಯ ಸಾಲಿನಲ್ಲಾದರೂ ‘ಸುತ್ತಮುತ್ತಲೂ ಕಪ್ಪುಕತ್ತಲೆಯು ಮುತ್ತಿರಲು’ ಅಂತ ಇರುವುದು. ಇದು ಅದಕ್ಕಿಂತಲೂ ಹೆಚ್ಚಿನದು: ‘ಸುತ್ತಮುತ್ತಲೂ ಕಪ್ಪುಕತ್ತಲೆಯು ಮೆತ್ತಿರಲು’! ಮತ್ತೊಂದು ನಮೂನೆಯ ಇನ್‌ಟ್ಯಾಂಜಿಬಲ್ ಮೆತ್ತುವಿಕೆ ಕನ್ನಡದ ಶ್ರೇಷ್ಠ ಸಾಹಿತಿ ವಿ.ಸೀತಾರಾಮಯ್ಯನವರು ‘ಕಾಲೇಜು ದಿನಗಳು’ ಕೃತಿಯಲ್ಲಿ ಸರ್ವೇಪಲ್ಲಿ ರಾಧಾಕೃಷ್ಣನ್ ಅವರ ಗುಣಗಾನ ಮಾಡಿದ ಲೇಖನದಲ್ಲಿ ಸಿಗುತ್ತದೆ.

ಇಲ್ಲಇಲ್ಲ, ವಿ.ಸೀ ಅವರು ರಾಧಾಕೃಷ್ಣನ್ ಅವರಿಗೆ ಏನನ್ನೂ ಮೆತ್ತಲಿಕ್ಕೆ ಹೋಗಿಲ್ಲ. ಆದರೆ ಸಾಮಾನ್ಯವಾಗಿ ಶಿಕ್ಷಕರು ಹೇಗಿರುತ್ತಾರೆ ಎಂಬುದನ್ನು ಬಣ್ಣಿಸುತ್ತ ವಿ.ಸೀ ಹೀಗೆ ಬರೆಯುತ್ತಾರೆ: ‘ನಮ್ಮಲ್ಲಿ ಹಲವು ಶಿಕ್ಷಕರಿಗೆ ಕೆತ್ತುವ ಮತ್ತು ಮೆತ್ತುವ ಅಭ್ಯಾಸ. ತಮಗೆ ತಿಳಿದ ವಿಷಯವನ್ನು ಮೆತ್ತಿಮೆತ್ತಿ ಅನಗತ್ಯವಾಗಿ ಲಂಬಿಸಿ ಸಮಯ ವ್ಯರ್ಥ ಮಾಡುವುದು ಮತ್ತು ತಿಳಿಯದೇ ಇರುವ ಹಲವು ವಿಷಯಗಳನ್ನು ಕೆತ್ತಿ ಕಾಣದಂತೆ ಹಾರಿಸಿಬಿಡುವುದು ನಮ್ಮಲ್ಲಿ ಬಹಳ ಜನ ಶಿಕ್ಷಕರು ಮಾಡುವ ಕೆಲಸ. ಇನ್ನು ಅನೇಕರಿಗೆ ಪಾಠ ಮುಗಿಸುವ ಅವಸರ. ಆದರೆ ರಾಧಾಕೃಷ್ಣನ್ ಅವರು ಹಾಗಲ್ಲ.

ಯಾವ ಅವಸರವೂ ಇಲ್ಲದೇ ಅನಗತ್ಯ ಎಳೆದಾಟ ಇಲ್ಲದೇ ಸಾವಧಾನದಿಂದ ಪಾಠ ಮಾಡಿ, ಒಂದಿಷ್ಟು ಹರಟೆಯಿಂದ ಪಾಠ ಕೊನೆಯಾಗುತ್ತಿತ್ತು. ಅವರು ಹೇಳಿದ್ದನ್ನು ಕೇಳಿ, ಅವರು ಬರೆಸಿದುದನ್ನು ಓದಿದವರಿಗೆ ಎಷ್ಟು ದೊಡ್ಡ ತರಗತಿಯ ಪಾಠವಾದರೂ ಆಗಬಹುದಿತ್ತು, ವಿಷಯದ ಸ್ವರೂಪ ಚೆನ್ನಾಗಿ ಮನದಟ್ಟಾಗು ತ್ತಿತ್ತು. ಆ ವಾಗ್ಮಿತೆ, ಆ ವಿಲಾಸ, ಆ ಸ್ಪಷ್ಟತೆ, ನಿಸ್ಸಂಶಯತೆ, ತೀರ್ಮಾನ ಅವರವೇ. ಅವರ ತರಗತಿಗಳೆಂದರೆ ವಿದ್ಯಾರ್ಥಿಗಳಿಗೆ ಹಬ್ಬ…’ ಹೀಗೆ ಮುಂದು ವರಿಯುತ್ತದೆ ವಿ.ಸೀ ಅವರಿಂದ ಗುರುಪ್ರಶಂಸೆ.

ಇದರಲ್ಲಿ ‘ಹಲವರಿಗೆ ಕೆತ್ತುವ ಮತ್ತು ಮೆತ್ತುವ ಅಭ್ಯಾಸ’ ಎಂದು ಬಣ್ಣಿಸಿದ್ದು ನನಗೆ ತುಂಬ ಹಿಡಿಸಿತು. ಬಹುಶಃ ಇದನ್ನು ಶಿಕ್ಷಕರಿಗೆ ಮಾತ್ರವಲ್ಲ, ಈಗಿನ ಕಾಲದಲ್ಲಿ ಭಾಷಣಕಾರರು, ಲೇಖಕರು, ಅಂಕಣಕಾರರು… ಮುಂತಾಗಿ ಎಲ್ಲರಿಗೂ ಅನ್ವಯಿಸಬಹುದು. ಕೆತ್ತುವುದಕ್ಕಿಂತಲೂ ಮೆತ್ತುವುದು ವಿಪರೀತವಾಗಿಬಿಟ್ಟಿದೆ, ಎಲ್ಲ ರಂಗಗಳಲ್ಲೂ. ಈಗಿನ್ನು ಟ್ಯಾಂಜಿಬಲ್ (ಭೌತಿಕವಾಗಿ ಸ್ಪರ್ಶಿಸಲಿಕ್ಕಾಗುವ) ಮೆತ್ತುವಿಕೆಯನ್ನೊಂದಿಷ್ಟು ಅವಲೋಕಿಸೋಣ. ಗಬಗಬ ತಿನ್ನುವವರು ಆಹಾರವನ್ನು ಬಾಯಿಗೆ ಮೆತ್ತಿಕೊಳ್ಳುತ್ತಿದ್ದಾರೇನೋ ಎಂದು ಭಾಸವಾಗುವುದಿದೆಯಷ್ಟೆ? ಬಕಾಸುರವಧೆಗೆ ಮೊದಲು ಭೀಮ ಹಾಗೆಯೇ ಮಾಡಿದನೆನ್ನುತ್ತಾನೆ ಕುಮಾರವ್ಯಾಸ. ‘ಮತ್ತೆ ಶೇಷಾನ್ನದಲಿ ತೋರುತ| ತುತ್ತುಗಳ ತೂಗುತ್ತ ಮಾರುತಿ| ಮೆತ್ತಿಕೊಂಡನು ಬಾಯೊಳವನನು ಬೆರಳಲೇಡಿಸುತ…’ ಬಕಾಸುರನಿಗೆಂದು ಬಂಡಿಯ ತುಂಬ ಆಹಾರವನ್ನೊಯ್ದಿದ್ದ ಭೀಮಸೇನ ಭಕ್ಷ್ಯಾದಿಗಳನ್ನೆಲ್ಲ ಮುಕ್ಕಿ ಖಾಲಿ ಹೆಡಿಗೆಗಳನ್ನಷ್ಟೇ ಉಳಿಸಿದನಂತೆ.

ಕೂಳಿನಲ್ಲಿ ಅರ್ಧಭಾಗವನ್ನು ಹಾಲುತುಪ್ಪದ ಹರವಿಯೋಜೆಯಲಿ ಹೊಡೆದು ಸುರಿದನಂತೆ. ಉಳಿದ ಅನ್ನವನ್ನು ಕಲೆಸಿ ತುತ್ತುಗಳನ್ನಾಗಿ ಮಾಡಿ ಬಕಾಸುರನಿಗೆ ಆಸೆ ಬರುವ ಹಾಗೆ ತೋರಿಸಿ ತನ್ನ ಬಾಯಿಯೊಳಗೆ ಮೆತ್ತಿಕೊಂಡು, ಅವನನ್ನು ಅಣಕಿಸಿದನಂತೆ. ಅನ್ನ ಮೆತ್ತಿಕೊಂಡ ಭೀಮಸೇನನ ಬಾಯಿಯನ್ನು ಊಹಿಸುವುದು ಕಷ್ಟವಲ್ಲ. ಬೆಣ್ಣೆ ಮೆತ್ತಿಕೊಂಡ ಬಾಲಕೃಷ್ಣನ ಬಾಯಿಯನ್ನು ಊಹಿಸುವುದೂ ಕಷ್ಟವಲ್ಲ. ‘ತಾಯಿ ಬಂದಳೋಡಿ ಕಳ್ಳನ ಕಣ್ಣಿನಲ್ಲಿ ಕೋಡಿ| ಕಣ್ಣಲಿ ಆಕೆ ಸಿಟ್ಟನು ತಾಳಿ ಸೊಂಟಕೆ ಕೈಯಿಟ್ಟು| ಆದಳು ಅರೆ ಚಣ ಭೀಕರ ಕಾಳಿ ದುರುದುರು ಕಣ್‌ಬಿಟ್ಟು| ಹಣೆ ತುಟಿ ಕೆನ್ನೆಗೆ ಬೆಣ್ಣೆ ಮೆತ್ತಿದ ಒರಟನ ನೋಟಕ್ಕೆ| ಇಳಿಯಿತು ಕೋಪ ಅರಳಿತು ಕೆಂದುಟಿ ತುಂಟನ ಆಟಕ್ಕೆ…’ ಎಂದು ನಿಸಾರ್ ಅಹಮ್ಮದ್ ಬಣ್ಣಿಸಿದ ಬೆಣ್ಣೆ ಕದ್ದ ಕೃಷ್ಣ ನಮಗೆಲ್ಲ ಚಿರಪರಿಚಿತ.

ನಾಳೆ ಅವನ ಬತ್ ಡೇ ಬೇರೆ. ನೆನಪು ಮಾಡಿಕೊಳ್ಳಲಿಕ್ಕೆ ಮತ್ತೊಂದು ನೆಪ. ಅದು ಬಾಯಿಗೆ ಮೆತ್ತುವಿಕೆಯ ವಿಚಾರವಾದರೆ ಮುಖಕ್ಕೆ ಮೇಕ್‌ಅಪ್ ಮೆತ್ತುವಿಕೆ ಯನ್ನು ಕುವೆಂಪು ಅವರ ಮಾತುಗಳಲ್ಲಿ ಕೇಳಬೇಕು. ಅದೂ ಬೇರೆಯವರ ಮೇಕ್‌ಅಪ್ ಅಲ್ಲ, ತನಗೇ ಮಾಡಿದ ಮೇಕ್‌ಅಪ್! 1968ರಲ್ಲಿ ಕುವೆಂಪುಗೆ ಜ್ಞಾನಪೀಠ ಪ್ರಶಸ್ತಿ ಘೋಷಣೆಯಾಯ್ತು. ಪ್ರಶಸ್ತಿ ಸ್ವೀಕರಿಸಲು ದಿಲ್ಲಿಗೆ ಹೋಗಿಬಂದ ಅನುಭವಗಳಲ್ಲಿ ಈ ಮಾತು ಬರುತ್ತದೆ.

‘ಮಗಳು ಕಂಡ ಕುವೆಂಪು’ ಪುಸ್ತಕದಲ್ಲಿ ತಾರಿಣಿ ಚಿದಾನಂದ ಹೀಗೆ ದಾಖಲಿಸಿದ್ದಾರೆ: ‘ಎಲ್ಲರೂ ಊಟದ ಸಮಯದಲ್ಲಿ ತಂದೆಯವರೊಡನೆ ಊಟದ ಮೇಜಿನ ಸುತ್ತ ಕುಳಿತು ದಿಲ್ಲಿಯ ಕಾರ್ಯಕ್ರಮದ ವಿಚಾರ ಕೇಳಿದೆವು. ತಂದೆಯವರೂ, ಮಾವನವರೂ ಅವರ ಅನುಭವವನ್ನೆಲ್ಲ ಹೇಳಿದರು. ದಿಲ್ಲಿಯಲ್ಲಿ ರಮಾಜೈನ್ ಮತ್ತು ಶಾಂತಿಪ್ರಸಾದ್ ಜೈನ್ ತಮ್ಮನ್ನು ಚೆನ್ನಾಗಿ ನೋಡಿಕೊಂಡರು, ಒಳ್ಳೆಯ ಆತಿಥ್ಯ ಮಾಡಿದರು ಎಂದರು.

ದಿಲ್ಲಿಯಲ್ಲಿ ಶ್ರೀ ರಾಮಕೃಷ್ಣ ಆಶ್ರಮಕ್ಕೆ ಹೋದ ವಿಚಾರ ಹೇಳಿದರು. ಹಾಗೆಯೇ ರಾಜಘಾಟ್, ಕೆಂಪುಕೋಟೆ, ಜುಮ್ಮಾಮಸೀದಿ ನೋಡಿದ್ದನ್ನು ವಿವರಿಸಿದರು.
ಮಹಾಸಾಮ್ರಾಜ್ಯಗಳ ಮಹಾಶ್ಮಶಾನವೇ ದಿಲ್ಲಿಯಲ್ಲಿದೆ ಎಂದರು. ಪತ್ರಿಕೆಯವರೆಲ್ಲ ಬಂದು ಸಂದರ್ಶಿಸಿದ್ದು ಮತ್ತು ಟಿ.ವಿ ಕಾರ್ಯಕ್ರಮಕ್ಕೆ ಹೋದ ವಿಚಾರವನ್ನೂ ತಿಳಿಸಿದರು. ಆಗ ದಿಲ್ಲಿಯಲ್ಲಷ್ಟೇ ದೂರದರ್ಶನ ಇದ್ದದ್ದು. ಕಾರ್ಯಕ್ರಮಕ್ಕೆ ಹೋಗುವ ಮೊದಲು ಡ್ರೆಸಿಂಗ್ ರೂಮ್‌ಗೆ ಕರೆದೊಯ್ದು ಮುಖದ ತುಂಬಾ ದಪ್ಪಗೆ ಪೌಡರ್ ಮೆತ್ತಿದರು. ಏಕೆಂದರೆ ಗಡ್ಡದ ಕೂದಲು, ಮುಖದ ಸಣ್ಣ ರಂಧ್ರಗಳೆಲ್ಲ ದೊಡ್ಡದಾಗಿ ಕಾಣುತ್ತವೆ ಎಂದು. ಯಾವತ್ತೂ ಪೌಡರ್ ಹಾಕಿಲ್ಲದ ನಾನು
ಸಿನಿಮಾ ನಟನಂತೆ ಮೇಕ್‌ಅಪ್ ಮಾಡಿಕೊಂಡು ಹೋದೆ ಎಂದರು. ಎಲ್ಲರೂ ಜೋರಾಗಿ ನಕ್ಕೆವು.’ ಇನ್ನೊಂದು ಮೆನ್ಷನೆಬಲ್ ಮೆತ್ತುವಿಕೆ ನೆನಪಾಗುವುದು ಕೆ.ವಿ.ತಿರುಮಲೇಶರ ‘ತಾಲೂಕಾಫೀಸು’ ಕವಿತೆಯಲ್ಲಿ.

ಇಲ್ಲಿದೆ ನೋಡಿ ಆ ಕವಿತೆ: ‘ಹಳೇ ಹಂಚಿನ ಕಟ್ಟಡವಿದ್ದರೆ| ಅದರ ಸುತ್ತ ಕಂಪೌಂಡಿದ್ದರೆ| ಎದುರು ದೊಡ್ಡ ಮರಗಳಿದ್ದರೆ| ಕೋಣೆಗಳೊಳಗೆ ಫೈಲುಗಳಿದ್ದರೆ| ವೆರಾಂಡದಲ್ಲಿ ವೆಂಡರರಿದ್ದರೆ| ಕೈಚಾಚುವ ಜವಾನರಿದ್ದರೆ- ಅಷ್ಟಕ್ಕೇ| ಅದೊಂದು ತಾಲೂಕಾಫೀಸು ಆಗುತ್ತದೆಯೇ?|| ಇಲ್ಲ. ಗೋಡೆಗೆ ವೀಳ್ಯದ ಸುಣ್ಣ ಮೆತ್ತುವ| ಬಾಗಿಲಿನಿಂದ ಬಾಗಿಲಿಗೆ ಅಲೆಯುವ| ಮೋರೆಯಿಂದ ಧೋ ಎಂದು ಬೆವರುವ| ನಿರೀಕ್ಷೆಯಿಂದ ಎತ್ತಲೂ ನೋಡುವ| ವಿವಿಧ ಭಂಗಿಗಳಲ್ಲಿ ಕಾಯುವ| ಯಿಸಲ್ಪಡುವ| ಮಂದಿಯಿದ್ದರೇನೆ ಅದೊಂದು ತಾಲೂಕಾಫೀಸು| ಇಲ್ಲದಿದ್ದರೆ ಎಂಥ ಆಫೀಸು?’

ಇದು ಅಂಥದೇನೂ ಸಾಹಿತ್ಯಿಕ ಮೌಲ್ಯದ ಶ್ರೇಷ್ಠ ಕವಿತೆಯಲ್ಲವಿರಬಹುದು. ಆದರೆ ‘ಗೋಡೆಗೆ ವೀಳ್ಯದ ಸುಣ್ಣ ಮೆತ್ತುವ ಎಂಬ ಒಂದು ಚಿಕ್ಕ ಸಾಲು ಕೂಡ ಚಿತ್ರಣವನ್ನು ಕಟ್ಟುವುದರಲ್ಲಿ ಎಷ್ಟು ಶಕ್ತಿಶಾಲಿ ಪಾತ್ರ ವಹಿಸುತ್ತದೆ ಎಂದು ಗೊತ್ತಾಗುತ್ತದೆ. ಗೋಡೆಗೆ ವೀಳ್ಯದ ಕಲೆಗಳು ಮೆತ್ತಿದ್ದರೇನೇ ಅದೊಂದು ಸಾರ್ವಜನಿಕ ಕಟ್ಟಡ ಎಂದು ದೃಢವಾಗುವುದು.

ನಿಜ, ನಾನಾ ನಮೂನೆಯ ಮೆತ್ತುವಿಕೆಗಳು ನಮ್ಮ ಬದುಕಿನ ಭಾಗವೇ ಆಗಿರುತ್ತವೆ. ಕೆಲವು ನಾವೇ ಮಾಡುವಂಥವಾದರೆ ಮತ್ತೆ ಕೆಲವು ಬೇರೆಯವರು ಮಾಡಿ ದ್ದನ್ನು ನೋಡುವಂಥವು. ಶಾಂಪೂ ಮೆತ್ತಿಕೊಂಡ ತಲೆಯ ಟಿಕ್‌ಟಾಕ್ ವಿಡಿಯೊಗಳು ಒಮ್ಮೆ ಸುದ್ದಿಯಾಗಿದ್ದವು. ಹಾಗೆಯೇ ಬೇಸಗೆಯ ಧಗೆ ಕಡಿಮೆ ಮಾಡಲೆಂದು ಹೊಚ್ಚಹೊಸ ಕಾರಿನ ಮೇಲ್ಮೈಗೆಲ್ಲ ಸೆಗಣಿ+ಮಣ್ಣಿನ ಮಿಶ್ರಣ ಮೆತ್ತಿದ ಭೂಪನೊಬ್ಬನ ಸಚಿತ್ರ ಸುದ್ದಿ ಒಂದೆರಡು ವರ್ಷಗಳ ಹಿಂದೆ ಪತ್ರಿಕೆಗಳಲ್ಲಿ ಬಂದಿತ್ತು.

ಮೆತ್ತುವಿಕೆಯ ವಿಷಯದಲ್ಲಿ ದೇವರನ್ನೂ ಬಿಟ್ಟಿಲ್ಲ ನಾವು. ಆಂಜನೇಯನ ದೇವಸ್ಥಾನಗಳಲ್ಲಿ ಬೆಣ್ಣೆಯಲಂಕಾರ ಎಂದು ಮಾರುತಿಯ ಮೂರುತಿಗೆ ಮೈಯೆಲ್ಲ ಬೆಣ್ಣೆ ಮೆತ್ತುತ್ತೇವೆ. ಉತ್ತರಕರ್ನಾಟಕದ ಯಾವುದೋ ಒಂದು ಹಳ್ಳಿಯಲ್ಲಿ ಮಳೆ ಬಾರದಿದ್ದರೆ ಊರ ದೇವಸ್ಥಾನದ ನಂದಿ ವಿಗ್ರಹಕ್ಕೆ ಸಗಣಿ ಮೆತ್ತುತ್ತಾರಂತೆ. ನಂದಿ ಬಸವಣ್ಣ ಗಲೀಜಾದರೆ ಅವನನ್ನು ತೊಳೆಯಲು ಮಳೆರಾಯ ಬಂದೇಬರುತ್ತಾನೆ ಎಂದು ಗ್ರಾಮದ ಜನರ ನಂಬಿಕೆ. ತಿರುಪತಿಯಲ್ಲಿ ತಿಮ್ಮಪ್ಪನ ಗಲ್ಲಕ್ಕೆ ಕರ್ಪೂರ ಮೆತ್ತುವ ಸೇವೆ ಬಹಳ ಪ್ರಸಿದ್ಧ. ಅಂತೆಯೇ ಪುರಿಯಲ್ಲಿ ಜಗನ್ನಾಥನಿಗೆ ಅಕ್ಷಯತದಿಗೆಯಂದು ಚಂದನ ಮೆತ್ತುವ ಸೇವೆ.

ಹೀಗೆ ಮೂಢನಂಬಿಕೆಗಳಿಗಾಗಿಯೋ, ಸಂಪ್ರದಾಯವೆಂದೋ, ಆಡಂಬರದ ಭಕ್ತಿಯ ಪ್ರದರ್ಶನಕ್ಕಾಗಿಯೋ ಒಂದಲ್ಲ ಒಂದು ರೀತಿಯ ಮೆತ್ತುವಿಕೆ ಎಲ್ಲಕಡೆಗಳಲ್ಲೂ ಇರುತ್ತದೆ. ಸ್ವಲ್ಪ ಸಾಲದು ಅಂತ ಮತ್ತೂಮತ್ತೂ ಮೆತ್ತುತ್ತೇವೆ. ಆದರೆ ಮನುಷ್ಯರಾಗಿ ಮನುಷ್ಯತ್ವವನ್ನು ಮಾತ್ರ ದಿನೇದಿನೇ ಕಳೆದುಕೊಳ್ಳುತ್ತ ಸ್ವಾರ್ಥ ಸಂಕು ಚಿತತೆಗಳನ್ನೇ ಮೈಮನಸ್ಸುಗಳಿಗೆಲ್ಲ ಮೆತ್ತಿಕೊಳ್ಳುತ್ತೇವೆ. ನಮ್ಮ ರಾಜಕಾರಣಿಗಳು ಪುಢಾರಿಗಳು ತಾವೂ ಮೆತ್ತಿಕೊಳ್ಳುವ, ಇತರರಿಗೂ ಮೆತ್ತುವ ಕೊಳಕುತನಕ್ಕೆ ಕಳಂಕಗಳಿಗೆ ಮಿತಿಯೇ ಇಲ್ಲ. ಅವರೆಲ್ಲ ಅಕ್ಷರಶಃ ಮತ್ತಷ್ಟು ದಪ್ಪ ಚರ್ಮದವರಾಗುವುದಕ್ಕೆ, ಸಂವೇದನಾರಹಿತರಾಗುವುದಕ್ಕೆ ಅದೂ ಒಂದು ಕಾರಣವಿರಬಹುದು.

ಇನ್ನು, ಪ್ರಚಲಿತ ವಿದ್ಯಮಾನಗಳನ್ನು ಗಮನಿಸಿದರೆ ‘ಅತ್ತರು ಮೆತ್ತಿಕೊಳು’ವವರು ಅಮಾಯಕರನ್ನೆಲ್ಲ ‘ನೆತ್ತರು ಮೆತ್ತಿಕೊಳ್ಳುವಂತೆ ಮಾಡುತ್ತಿರುವುದಂತೂ ಮತ್ತೂ ಭಯಾನಕ, ಘನಘೋರ ಬೆಳವಣಿಗೆ. ಈ ಮೆತ್ತುವಿಕೆ ಉತ್ಪ್ರೇಕ್ಷೆಯಲ್ಲ, ಮನುಕುಲಕ್ಕೆ ಅಲಂಕಾರವಂತೂ ಅಲ್ಲವೇಅಲ್ಲ. ಇದನ್ನೊರೆಸಲು ದೇವರೇ
ಅವತರಿಸಬೇಕೇನೋ.