Sunday, 8th September 2024

ಅಮೆರಿಕದಲ್ಲಿ ಗರ್ಭಪಾತದ ಗಲಾಟೆ

ಶಿಶಿರ ಕಾಲ

ಶಿಶಿರ್‌ ಹೆಗಡೆ

shishirh@gmail.com

ಹಕ್ಕಿ ಮೊಟ್ಟೆಯಿಡುತ್ತದೆ, ನಂತರದಲ್ಲಿ ತಾಯಿ ಹಕ್ಕಿ ಕಾವು ಕೊಡಲು ಶುರುಮಾಡುತ್ತದೆ. ತಾಯಿ ಹಕ್ಕಿಯ ದೇಹದಿಂದ ಮೊಟ್ಟೆ ಹೊರಬಂದಾಕ್ಷಣ
ಅದು ಕೇವಲ ಮೊಟ್ಟೆ. ಅದನ್ನು ಹಕ್ಕಿಯೆನ್ನಲಾಗುವುದಿಲ್ಲ.

ಹಾಗೆಯೇ ಮೊಟ್ಟೆ ನಿರ್ಜೀವವೆಂದು ಕೂಡ ಹೇಳುವಂತಿಲ್ಲ. ಕೋಳಿ ಮೊಟ್ಟೆಯನ್ನೇ ಉದಾಹರಣೆಯನ್ನಾಗಿ ತೆಗೆದುಕೊಂಡರೆ, ಮೊಟ್ಟೆ ಹೊರಬಂದ ತಕ್ಷಣ ಕೋಳಿ ಕಾವಿಗೆ ಕೂತ ಮಾರನೆಯ ದಿನವೇ ಮೊಟ್ಟೆಯೊಳಗೆ ಹೃದಯ ಮೊದಲು ರಚನೆಗೊಂಡು ಬಡಿದುಕೊಳ್ಳಲು ಶುರುವಾಗುತ್ತದೆ. ಮೂರನೆಯ ದಿನ ರಕ್ತನಾಳಗಳು ನಿರ್ಮಾಣವಾಗುತ್ತವೆ. ನಾಲ್ಕನೆಯ ದಿನ ಮೆದುಳು ಮತ್ತು ಕಣ್ಣಿನ ರಚನೆ ತೀವ್ರ ಗತಿಯಲ್ಲಿ ಆರಂಭವಾಗುತ್ತದೆ. ಹೀಗೆ- ಎಲ್ಲ ಸರಿಯಾಗಿ ನಡೆದರೆ ಇಪ್ಪತ್ತೊಂದನೇ ದಿನ ಮೊಟ್ಟೆಯೊಡೆದು ಕೋಳಿಮರಿ ಹೊರಕ್ಕೆ ಬರುತ್ತದೆ.

ಮೊದಲನೆಯದು ತಾಯಿಯ ದೇಹದಿಂದ ಮೊಟ್ಟೆಯಾಗಿ ಹೊರಬರುವುದು, ಎರಡನೆಯದು ಮೊಟ್ಟೆ ಒಡೆದು ಮರಿಯಾಗಿ ಹೊರಬರುವುದು. ಹಕ್ಕಿ ಮೊಟ್ಟೆಯಿಟ್ಟಾಗ ಅದು ಜನ್ಮವೇ ಅಥವಾ ಮೊಟ್ಟೆಯೊಡೆದಾಗಲೇ? ಹಕ್ಕಿ ಯನ್ನು ಮತ್ತು ಬ್ರಾಹ್ಮಣರನ್ನು ದ್ವಿಜ ಎಂದು ಕರೆಯುವುದರ ಹಿನ್ನೆಲೆ ಅದುವೇ. ಬ್ರಾಹ್ಮಣನ ಉಪನಯನ ವಾದಾಗ ಅದು ಅವನ ಎರಡನೆಯ ಜನ್ಮ ಎನ್ನುವುದು ಅಲ್ಲಿನ ಸೂಕ್ಷ್ಮ. ಅದಿರಲಿ, ಇಲ್ಲಿಯ ಪ್ರಶ್ನೆ ಬೇರೆ.

ಮನುಷ್ಯನಲ್ಲಿ ತಾಯಿ ದೇಹದಿಂದ ಮಗು ಹೊರ ಬಂದಾಕ್ಷಣ ಮಗು ಹುಟ್ಟಿದೆ ಎನ್ನುತ್ತೇವೆ. ಆದರೆ ಮನುಷ್ಯ ಜೀವದ ಹುಟ್ಟು ತಾಂತ್ರಿಕವಾಗಿ, ವೈಜ್ಞಾ ನಿಕವಾಗಿ ಯಾವಾಗ? ವೀರ್ಯಾಣು ಅಂಡಾಣುವಿನೊಳಕ್ಕೆ ಹೊಕ್ಕಾ ಗಲೇ? ವೀರ್ಯಾಣು ಮತ್ತು ಅಂಡಾಣು ಕೂಡಿ zygot ಆದಾಗಲೇ? ವಿಜ್ಞಾನದ ಪ್ರಕಾರ zygot (ಯುಗ್ಮಜ) ವನ್ನು ಜೀವದ ಆರಂಭ ಎನ್ನಲಾಗುತ್ತದೆ. ಗರ್ಭಧರಿಸಿದ ಐದನೆಯ ವಾರದಿಂದ ಹತ್ತನೆಯ ವಾರದೊಳಗೆ ಬಹುತೇಕ ದೇಹ ರಚನೆಗಳು ರೂಪುಗೊಳ್ಳಲು ಶುರು ವಾಗುತ್ತದೆ. ಸುಮಾರು ಐದನೆಯ ವಾರದಲ್ಲಿಯೇ ಭ್ರೂಣದ ಹೃದಯ ಬಡಿತ ಆರಂಭವಾಗಿ ಬಿಡುತ್ತದೆ. ಇದು ಸ್ಕ್ಯಾನಿಂಗ್‌ನಲ್ಲಿ ಈಗ ನೋಡಲು ಸಾಧ್ಯ.

ಅಲ್ಲಿಂದ ಮುಂದೆ ಭ್ರೂಣ ಬೆಳೆಯುತ್ತ ಹೋಗುತ್ತದೆ. ಎಲ್ಲ ಸರಿಯಾದರೆ ನವಮಾಸದಲ್ಲಿ ಮಗುವಿನ ಜನನ. ಆದರೆ 22 ವಾರದ ನಂತರ ಭ್ರೂಣ ಹೊರ ಜಗತ್ತಿನಲ್ಲಿ ಶಕ್ತವಾಗಿ ಬದುಕಬಲ್ಲದು. ಈ ಇಡೀ ಜನನ ಪ್ರಕ್ರಿಯೆಯಲ್ಲಿ ಹೊರಜಗತ್ತಿಗೆ ಮಗು ಬಂದಾಗ ಅದನ್ನು ಜನನ ಎಂದು ನಾವು ಕರೆದರೂ
ಅದಕ್ಕಿಂತ ಮೊದಲೇ ಅಲ್ಲಿ ಜೀವ ರೂಪಗೊಂಡಿರುತ್ತದೆ. ಹಾಗಾದಲ್ಲಿ ಇಂಥzಂದು ಘಟಿಸಿದ ನಂತರ ಅದು ಜನ್ಮ ಎಂದು ಕರೆಯುವುದು ಹೇಗೆ?
ಇದೇ ವಿಚಾರ ಹಲವಾರು ಬಾರಿ ಪ್ರಶ್ನೆಯಾಗಿ ನಮ್ಮ ಇಂದಿನ ಸಮಾಜವನ್ನು ಕಾಡುತ್ತದೆ. ಈಗ ಸದ್ಯ ಅಮೆರಿಕದ ಉದ್ದಗಲಕ್ಕೂ ಗರ್ಭಪಾತದ ತಾಯಿಯ ಹಕ್ಕಿನ ಚರ್ಚೆ, ವಾದ ಮತ್ತು ಮುಂದುವರಿದು ವಿವಾದಗಳು.

ಗರ್ಭಪಾತ ಸರಿಯೇ ಎನ್ನುವ ಸೈದ್ಧಾಂತಿಕ ಚರ್ಚೆಯಲ್ಲಿ ಈ ಮೊದಲು ಹೇಳಿದ ಇದೆಲ್ಲ ವಾದ ಪ್ರತಿವಾದಗಳು. ಗರ್ಭಪಾತ ಎನ್ನವುದು ತಾಯಿಯ ಸ್ವಾತಂತ್ರ್ಯಕ್ಕೆ ಸಂಬಂಧಿಸಿದ್ದು, ಬಯಸದ ಮಗುವನ್ನು ಅಬೋರ್ಟ್ ಮಾಡಿಕೊಳ್ಳಲು ಹೆಣ್ಣಿಗೆ ಹಕ್ಕಿದೆ ಎನ್ನುವುದು, ಮಗು ಜನಿಸಿ ದೇಹದಿಂದ ಹೊರ ಬರದ ಹೊರತು ಅದು ಜೀವವಲ್ಲ, ಅದು ಜನ್ಮವಲ್ಲ ಹಾಗಾಗಿ ಹುಟ್ಟಿನವರೆಗೆ ಭ್ರೂಣವನ್ನು ಜೀವವೆಂದು ಪರಿಗಣಿಸಬಾರದು ಎನ್ನುವುದು ಒಂದು ವರ್ಗ. ಇನ್ನೊಂದು ವರ್ಗದ ಪ್ರಕಾರ ಭ್ರೂಣವೂ ಜೀವವೇ.

ಹೃದಯಬಡಿತ ನಿಂತಾಗ ಅದು ಸಾವೆಂದಾದರೆ ಅದು ಶುರುವಾಗುವುದೇ ಜೀವದ ಹುಟ್ಟು. ಹಾಗಾಗಿ ತಾಯಿಗಿಂತ, ತಾಯಿಯ ಇಚ್ಛೆಗಿಂತ ಮಿಗಿಲಾಗಿ
ಭ್ರೂಣಕ್ಕೇ ಬದುಕುವ ಹಕ್ಕಿದೆ, ಅದನ್ನು ಕಸಿದುಕೊಳ್ಳಲು ಹೆಣ್ಣಿಗೆ ಯಾವುದೇ ಹಕ್ಕಿಲ್ಲ ಎನ್ನುವ ಇನ್ನೊಂದು ವರ್ಗ. ಈ ವಾದ ಪ್ರತಿವಾದ ಅಮೆರಿಕವನ್ನು ಹಿಂದೆ ಮತ್ತು ಇಂದು ಎರಡು ಭಾಗವಾಗಿಸಿದೆ. Pro Life vs Pro Choice. ಈ ಪ್ರೊ ಲೈಫ್- ಸಂಪ್ರದಾಯವಾದಿಗಳ ಗುಂಪು. ಇವರದು ಅಬಾರ್ಷನ್ ಅನ್ನು ನಿಷೇಽಸಬೇಕೆಂದು ನಿಲುವು. ಇದೆಲ್ಲದರ ಹಿನ್ನೆಲೆ ಕ್ರಿಶ್ಚಿಯನ್ ರಿಲೀಜಿಯನ್ ನಂಬಿಕೆಗಳು.

ಅದಕ್ಕಿಂತ ಮಿಗಿಲಾದ ಕ್ರಿಸ್ತನ ಹುಟ್ಟಿನ ಸಮಯದ ಘಟನೆ ಮತ್ತು ಬೈಬಲ. ಯೇಸುವಿನ ತಾಯಿ ಮೇರಿ ಗರ್ಭಿಣಿಯಾದಾಗ ಎಲಿಜಬೆತ್‌ಳನ್ನು ಭೆಟ್ಟಿ ಯಾಗುತ್ತಾಳೆ. ಎಲಿಜಬೆತ್ ಕೂಡ ಗರ್ಭಿಣಿ. ಎಲಿಜಬೆತ್‌ನ ಹೊಟ್ಟೆಯಲ್ಲಿದ್ದ ಮಗು ಮೇರಿಯ ಸ್ವರ ಕೇಳಿ ಒಳಗೇ ನೆಗೆಯುತ್ತದೆ. ಅದು ಮೇರಿಯ ಒಳಗಿದ್ದ ಜೀವ ಅಸಾಮಾನ್ಯದ್ದು ಎನ್ನುವುದರ ಸೂಚಕವೆನ್ನುವ ನಂಬಿಕೆ (Luke 1:39-45) ಸಾಂಪ್ರದಾಯಿಕ ಕ್ರಿಶ್ಚಿಯನ್ನರಿಗೆ ಭ್ರೂಣ ಹತ್ಯೆ ದೊಡ್ಡ ಪಾಪ. ಅಷ್ಟೇ ಅಲ್ಲ, ಗರ್ಭನಿರೋಧಕ, ತಡೆಯುವ ಯಾವುದೇ ಇದ್ದರೂ ಅದು ನಿಷಿದ್ಧ. ಅಮೆರಿಕದಲ್ಲಿ ಕೂಡ ಇಂಥ ಖಟ್ಟರ್‌ಗಳು ಇಂದಿಗೂ ಐದಾರು ಮಕ್ಕಳನ್ನು ಈ ಕಾರಣದಿಂದಾಗಿ ಪಡೆಯುವುದು ನಡೆದುಕೊಂಡುಬಂದಿದೆ.

ಇನ್ನೊಂದು ವರ್ಗ ಪ್ರೊ ಚಾಯ್ಸ. ಇದು ಉದಾರವಾದಿಗಳ, ಪ್ರಗತಿಪರರ ವರ್ಗ. ಇವರದು ತಾಯಿಯ ಸ್ವಾತಂತ್ರ್ಯಕ್ಕೆ ಆದ್ಯತೆ. ಬಯಸದೇ ಗರ್ಭಧಾರಣೆ ಯಾದಾಗ ಅದೇಕೆ ತಾಯಿಯಾಗುವವಳು ಅದೆಲ್ಲವನ್ನು ನಿರ್ಧರಿಸುವ ಹಕ್ಕನ್ನು ಹೊಂದಬಾರದು ಎನ್ನುವ ಪ್ರಶ್ನೆ. ಅಷ್ಟಕ್ಕೂ ಮಗುವಿನ ಜನನ ತಾಯಿ ಯಾಗುವ ಹೆಣ್ಣಿನ ಜೀವನವನ್ನೂ ಬದಲಿಸುತ್ತದೆ. ಅಲ್ಲದೇ ಅತ್ಯಾಚಾರವಾಗಿ, ಅನೈತಿಕವಾಗಿ- ಹೆಣ್ಣಿನ ತಪ್ಪಿಲ್ಲದಿದ್ದಾಗ, ಒಪ್ಪಿಗೆಯಿಲ್ಲದಿದ್ದಾಗ ಗರ್ಭ ಧರಿಸಿದಲ್ಲಿ ಅದೇಕೆ ಹೆಣ್ಣು ಅದೆಲ್ಲವನ್ನು ಕೇವಲ ಪ್ರೊ ಲೈಫ್ ಎಂಬ ಕಾರ ಣಕ್ಕೆ ಒಪ್ಪಿಕೊಳ್ಳಬೇಕು ಎನ್ನುವುದು.

ಅಲ್ಲದೆ ಚಿಕ್ಕ ವಯಸ್ಸಿನಲ್ಲಿ ದೈಹಿಕ ಸಹಜ ಆಸೆಗೆ ಕೂಡಿದಾಗ ಹುಟ್ಟುವ ಮಗುವನ್ನು ಜಗತ್ತನ್ನೇ ಸರಿಯಾಗಿ ಅರಿಯದ ಹೆಣ್ಣು- ತಾಯಿ ಅದೇಕೆ
ಅಬೋರ್ಟ್ ಮಾಡಿಕೊಳ್ಳುವ ಸ್ವಾತಂತ್ರ್ಯವನ್ನು ಹೊಂದುವಂತಿಲ್ಲ ಎನ್ನುವ ವಾದ. ಅಮೆರಿಕದ ಮಟ್ಟಿಗೆ ಇಂಥ ವಾದ ಪ್ರತಿವಾದ ಹೊಸತೇನೂ ಅಲ್ಲ. ಅಮೆರಿಕ ಸಾಂವಿಧಾನಿಕವಾಗಿ ಕ್ರಿಶ್ಚಿಯನ್ ದೇಶವಲ್ಲ. ಇದು ಜಾತ್ಯತೀತ, ಧರ್ಮಾತೀತ ದೇಶ. ಪ್ರೊ ಲೈಫ್ ವರ್ಗ ಸಾಮಾನ್ಯವಾಗಿ ಕ್ರಿಶ್ಚಿಯನ್ ರಿಲಿಜಿ ಯನ್ ಹಿನ್ನೆಲೆಯವರು.

ಅಮೆರಿಕದಲ್ಲಿ ಶೇ. ೬೩ ಕ್ರಿಶ್ಚಿಯನ್ನರು. ಯಾವುದೇ ರಿಲಿಜಿಯನ್ನಿನ ಜತೆ ತಮ್ಮನ್ನು ಗುರುತಿಸಿಕೊಳ್ಳದ ಗುಂಪೇ ಎರಡನೆಯ ದೊಡ್ಡ ವರ್ಗ- ಅದು ಶೇ. ೨೯. ಹಿಂದೂ, ಬೌದ್ಧ, ಜ್ಯು, ಇವರೆಲ್ಲ ತಲಾ ಒಂದು ಪ್ರತಿಶತ. ಇಂಥ ರಿಲಿಜಿ ಯನ್ ಸಂಖ್ಯಾನುಪಾತದಲ್ಲಿ ಕ್ರಿಶ್ಚಿಯನ್ನರೇ ಬಹುಸಂಖ್ಯಾತರು. ಅಲ್ಪಸಂಖ್ಯಾತ ರೆಲ್ಲ ತೀರಾ ಅಲ್ಪ. ನಮ್ಮ ಭಾರತದ ಅಲ್ಪಸಂಖ್ಯಾತರಂತಲ್ಲ. ಹಾಗಾಗಿ ಧರ್ಮಾತೀತ ರಾಷ್ಟ್ರ ಎಂದೇ ಇದ್ದರೂ ಹಲವಾರು ಸರ್ತಿ, ಕ್ರಿಶ್ಚಿಯನ್ ರಿಲಿಜಿ ಯನ್ನು ಒಪ್ಪುವ ವಿಚಾರವೇ ಮುನ್ನೆಲೆಗೆ ಬರುವುದು, ದೇಶ, ವ್ಯವಸ್ಥೆ ಒಪ್ಪುವಂತೆ ಆಗುವುದು ಕಾಣಿಸುತ್ತಲೇ ಇರುತ್ತದೆ.

ಅಬಾರ್ಷನ್ ಕಾನೂನಾತ್ಮಕವಾಗುವಂತೆ ಇಲ್ಲಿನ ಸುಪ್ರೀಂ ಕೋರ್ಟ್ ಲ್ಯಾಂಡ್‌ಮಾರ್ಕ್ ತೀರ್ಪನ್ನು 1973ರಲ್ಲಿ ನೀಡಿತ್ತು. ನೋರ್ಮಾ ಮ್ಯಾಕ್ಕೊರ್ವಿ ಎನ್ನುವ ಮಹಿಳೆ ಮೂರನೇ ಮಗುವಿಗೆ ಜನ್ಮನೀಡಲು ಗರ್ಭಿಣಿಯಾಗಿದ್ದಳು. ಆಕೆ ಟೆಕ್ಸಸ್ ರಾಜ್ಯದವಳು. ಅಲ್ಲಿನ ಅಂದಿನ ಕಾನೂನಿನ ಪ್ರಕಾರ ತಾಯಿ
ಯ ಜೀವಕ್ಕೆ ಅಪಾಯವಿಲ್ಲವೆಂದರೆ ಗರ್ಭಪಾತ ಮಾಡುವಂತಿಲ್ಲ. ಆಕೆಗೆ ಮೂರನೆಯ ಮಗು ಬೇಕಿರಲಿಲ್ಲ. ಅಬೋರ್ಟ್ ಮಾಡಿಕೊಳ್ಳಲು ಕಾನೂನು ಬಿಡುತ್ತಿರಲಿಲ್ಲ- ಏಕೆಂದರೆ ಆ ಗರ್ಭದಿಂದ ಆಕೆಯ ಜೀವಕ್ಕೆ ಅಪಾಯವಿರಲಿಲ್ಲ. ಆಕೆ ಜೇನ್ ರೊ ಎನ್ನುವ ಮಾರು ಹೆಸರಿನಿಂದ ಕೋರ್ಟ್ ಮೆಟ್ಟಿಲೇರಿ ದ್ದಳು.

ಆಕೆಯ ವಿರುದ್ಧ ಸರಕಾರಿ ವಕೀಲ ಹೆನ್ರಿ ವೇಡ್ ವಾದಕ್ಕಿಳಿದಿದ್ದ. ಈ ಕೇಸ್‌ನಲ್ಲಿ ನೋರ್ಮಾ ಅಲಿಯಾಸ್ ರೋಗೆ ಗೆಲುವಾಯಿತು. ಆ ಕೇಸ್‌ನ ತೀರ್ಪು- ರೋ ವರ್ಸಸ್ ವೇಡ್ ಎಂದೇ ಪ್ರಸಿದ್ಧ. ಈ ತೀರ್ಪನ್ನು ಅಂದಿನಿಂದ ಇಂದಿನವರೆಗೆ ಸಾಂಪ್ರದಾಯಿಕ ಕ್ರಿಶ್ಚಿಯನ್ನರಿಗೆ ಒಪ್ಪಿಕೊಳ್ಳಲಾಗಿಲ್ಲ. ಆ ಕಾರಣಕ್ಕೆ ಮುಂದಿನ ದಿನಗಳಲ್ಲಿ ರಾಜಕೀಯ ವಿಚಾರವಾಗಿಯೇ ಇದು ಬೆಳೆದು, ಮುಂದುವರಿದುಕೊಂಡು ಬಂತು.

ಈಗ ಈ ಅಬಾರ್ಷನ್ ಅನ್ನು ಅಬೋರ್ಟ್ ಮಾಡುವ, ನಿಷೇಧಿಸುವ ಕಾನೂನು ತರಲು ತಯಾರಾದ ಸುಪ್ರೀಂ ಕೋರ್ಟಿನ ಡ್ರಾಫ್ಟ್ ಒಂದನ್ನು ಇಲ್ಲಿನ ಪತ್ರಿಕೆಯೊಂದು ಲೀಕ್ ಮಾಡಿದೆ. ಅದು ಹೊರಬಿದ್ದಾಗಿನಿಂದ ಎಲ್ಲಿಲ್ಲದ ಚರ್ಚೆ, ಪ್ರತಿಭಟನೆಗಳು ಶುರುವಾಗಿವೆ. ‘ನನ್ನ ದೇಹ, ನನ್ನ ಆಯ್ಕೆ’ ಎಂದು ಸಾವಿರಾರು ಜನರು ವಾಷಿಂಗ್ಟನ್ ಡಿಸಿ, ನ್ಯೂಯಾರ್ಕ್, ಲಾಸ್ ಏಂಜಲೀಸ್ ಮೊದಲಾದ ದೊಡ್ಡ ನಗರಗಳಲ್ಲಿ, ದೇಶದೆಡೆ ಬೀದಿಗಿಳಿದು ಪ್ರತಿಭಟಿಸು ತ್ತಿದ್ದಾರೆ.

ಇದೇ ರೀತಿಯ ಪ್ರತಿಭಟನೆ 40 ವರ್ಷದ ಹಿಂದೆ ರೋ ವರ್ಸಸ್ ವೇಡ್ ಸಮಯದಲ್ಲೂ ನಡೆದಿತ್ತು. ಈಗ ಮತ್ತೆ ಶುರುವಾಗಲು ಕಾರಣ ಸುಪ್ರೀಂ ಕೋರ್ಟಿನ ಲೀಕ್ ಆದ ಡ್ರಾಫ್ಟ್ ತೀರ್ಪು. ಇದೆಲ್ಲದಕ್ಕೆ ಡೊನಾಲ್ಡ್ ಟ್ರಂಪ್ ನೇಮಿಸಿದ ಸಂಪ್ರದಾಯವಾದಿ ಸುಪ್ರೀಂ ಕೋರ್ಟಿನ ಜಡ್ಜು ಗಳು ಕಾರಣವೆನ್ನುವ ಆಪಾದನೆ ಇದೆ. ಯಥೇಚ್ಛ ಪ್ರಮಾಣದಲ್ಲಿ ಜನರು ಪ್ರತಿಭಟನೆಯ ಮೂಲಕ ಇಂಥದ್ದೊಂದು ಅಬಾರ್ಷನ್ ಸಂಪೂರ್ಣವಾಗಿ ನಿಷೇಧಿಸುವ ಕಾನೂನು ಜಾರಿಗೆ ತರದಂತೆ ಸುಪ್ರೀಂ ಕೋರ್ಟಿನ ಮೇಲೆ ಒತ್ತಡ ಹೇರುತ್ತಿದ್ದಾರೆ.

ಅಬಾರ್ಷನ್ ನಿಷೇಧಿಸುವುದು ಸರಿಯಲ್ಲ ಎಂದು ಡೆಮಾಕ್ರೆಟಿಕ್ ಪಕ್ಷ, ಅಧ್ಯಕ್ಷ ಜೋ ಹೇಳುತ್ತಿದ್ದರೆ ಅತ್ತ ಸಂಪ್ರದಾಯವಾದಿ ರಿಪಬ್ಲಿಕನ್ ಪಕ್ಷ ಗರ್ಭಪಾತ ವನ್ನು ನಿಷೇಧಿಸುವತ್ತ ಹೇಳಿಕೆ ನೀಡುತ್ತಿದೆ. ಪ್ರೊ ಲೈಫ್ ಪ್ರತಿಭಟನೆಯ ವಿರುದ್ಧ ಕೂಡ ಪ್ರತಿಭಟನೆಗಳಾಗುತ್ತಿವೆ. ಈ ಎರಡು ಗುಂಪಿನ ನಡುವೆ ಘರ್ಷಣೆ ಗಳಾಗುತ್ತಿವೆ. ಇದು ಧಾರ್ಮಿಕ, ಸಾಮಾಜಿಕ ನಿಲುವುಗಳ ನಡುವಿನ ಹೊಡೆದಾಟ. ಗರ್ಭಪಾತಕ್ಕೆ ಯಾವುದೇ ನಿರ್ಬಂಧಗಳು ಇಲ್ಲದ ದೇಶಗಳು- ಅಮೆರಿಕ ಸೇರಿದಂತೆ ಆಸ್ಟ್ರೇಲಿಯಾ, ಕೆನಡಾ, ರಷ್ಯಾ, ಸ್ವೀಡನ್, ನಾರ್ವೆ, ದ.ಆಫ್ರಿಕಾ ಬಹುತೇಕ ಯುರೋಪಿಯನ್ ದೇಶಗಳು ಹೀಗೆ ಹಲವಿವೆ. ಕೆಲವು ಆಯ್ದ ಕಾರಣಗಳಿದ್ದಲ್ಲಿ ಓಕೆ ಎನ್ನುವ ದೇಶಗಳಲ್ಲಿ ಭಾರತವೂ ಸೇರಿದಂತೆ ಕೆಲ ದೇಶಗಳಿವೆ. ಮಡಗಾಸ್ಕರ್, ಕಾಂಗೋ, ಅಂಗೋಲ, ಈಜಿಪ್ಟ್, ಇರಾಕ್, ಫಿಲಿಪೈನ್ಸ್ ಇಲ್ಲ ಗರ್ಭಪಾತಕ್ಕೆ ಸಂಪೂರ್ಣ ನಿಷೇಧ. ಈಗ ನಿಷೇಧವಿಲ್ಲದ ಅಮೆರಿಕಕ್ಕೆ ಧರ್ಮ ದೊಡ್ಡದೋ ಅಥವಾ ಈ ವ್ಯವಸ್ಥೆ ಪ್ರಗತಿಪರರ ಜತೆ
ನಿಲ್ಲುತ್ತದೆಯೋ ಎನ್ನುವುದು ನಿರ್ಧಾರವಾಗಬೇಕಾಗಿದೆ.

ಅಮೆರಿಕ ಇಲ್ಲಿನ ಬಹುಸಂಖ್ಯಾತ ರಿಲಿಜಿಯನ್ ವಿಚಾರದ ಹಿನ್ನೆಲೆಯನ್ನು ಪೋಷಿಸುತ್ತದೆಯೋ ಅಥವಾ ಸಮಾಜದ ಆಶಯವನ್ನೋ ಎನ್ನುವುದನ್ನು ಕಾದು ನೋಡಬೇಕು. ಅಷ್ಟೇ ಅಲ್ಲ- ಅಮೆರಿಕ ಇಂಥ ವಿಚಾರಗಳಲ್ಲಿ ಕೂಡ ಉಳಿದ ದೇಶಗಳ ಮೇಲೆ, ಅದರಲ್ಲೂ ಜಾತ್ಯತೀತ, ಆದರೆ ಕ್ರಿಶ್ಚಿಯನ್
ಬಹುಸಂಖ್ಯಾತ ದೇಶಗಳ ಕಾನೂನಿನ ಮೇಲೆ ಪ್ರಭಾವ ಬೀರಬಲ್ಲದು. ಬಹಳಷ್ಟು ಕ್ರಿಶ್ಚಿಯನ್ ಮೆಜಾರಿಟಿ ದೇಶಗಳಲ್ಲಿ ಇದೇ ವಾದ-ಪ್ರತಿವಾದ ಸುಪ್ತವಾಗಿ, ಇನ್ನು ಕೆಲವೆಡೆ ಬಹಿರಂಗವಾಗಿ ನಡೆಯುತ್ತಿವೆ.

ಇಂಥದ್ದೇ ವಿವಾದಗಳು ಅಲ್ಲಿ ಕೂಡ ನಡೆಯುತ್ತಿರುವುದರಿಂದ ಈ ತೀರ್ಪು ಅಲ್ಲ ಬಹುಮಹತ್ವವನ್ನು ಪಡೆದುಕೊಂಡಿದೆ. ಮುಂದಿನ ದಿನಗಳಲ್ಲಿ
ಅಮೆರಿಕದ ಹಾದಿಯನ್ನೇ ಈ ದೇಶಗಳೂ ಮಾದರಿಯಾಗಿ ಅನುಸರಿಸಬಹುದು ಎನ್ನುವ ಮಾತಿದೆ. ಇದೆಲ್ಲದಕ್ಕೆ ಮೂಲವಾದ ಪ್ರಶ್ನೆ ಜೀವದ ಜನ್ಮ ಯಾವಾಗ, ಯಾವ ಹಂತದಲ್ಲಿ ಎನ್ನುವುದು. ಅದಕ್ಕೆ ಕ್ರಿಶ್ಚಿಯನ್ ಅಥವಾ ಬಾಕಿ ಸೆಮಿಟಿಕ್ ರಿಲಿಜಿಯನ್ನುಗಳಲ್ಲಿ ವಿವರಣೆಗಳಿಲ್ಲ. ಒಟ್ಟಾರೆ ಯಾವುದೇ ದೇಶವಿರಲಿ- ಅದು ಇಂಥ ಧಾರ್ಮಿಕ ಹಿನ್ನೆಲೆಯ ಒಲವು ನಿಲುವುಗಳಿಗೆ ಹೊರತಲ್ಲ ಎನ್ನುವುದು ಇಲ್ಲಿನ ವಿಚಾರ. ಇದೆಲ್ಲ ಕಂಡಾಗ ರಿಲಿಜಿಯನ್ ದೇಶವನ್ನು ಇಬ್ಭಾಗವಾಗಿಸುತ್ತದೆ ಎನ್ನುವ ವಾದವನ್ನು ಒಪ್ಪಬೇಕೋ, ಒಪ್ಪದಿರಬೇಕೋ?

error: Content is protected !!