Friday, 13th December 2024

ಸಾಧಕರ ಹೆಸರು ಇಟ್ಟರೆ ಏನು ಸಮಸ್ಯೆ

ಅಭಿಮತ

ಲಿಂಗರಾಜ ಕುರುಬರ

sujayrk@gmail.com

ಒಲಿಂಪಿಕ್ಸ್ ನ ಪದಕಗಳ ಗದ್ದಲದ ಗರಿಮೆಯಲ್ಲಿ ತೆಳುವಾಗಿ ತೇಲಾಡುತ್ತಿದ್ದ ನಮಗೆಲ್ಲ ಆಗ 6ರ ಸಂಜೆಯ ಹೊತ್ತಿಗೆ ಭಾರತದ ಪ್ರಧಾನಿಗಳ ಟ್ವಿಟರ್ ಮೂಲಕ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ ಹೆಸರು ಬದಲಿಸಿಲಾಗಿದೆ.

ಇನ್ನು ಮುಂದೆ ಧ್ಯಾನಚಂದ್ ಖೇಲ್ ರತ್ನ ಎಂಬ ಹೆಸರಿನಿಂದ ಕೊಡಮಾಡಲಾಗುತ್ತದೆ ಎಂಬ ಪೋ ಹಾಕಿದರು. ಈ ಪ್ರಶಸ್ತಿಯ ಬಗೆಗೆ ಎಲ್ಲಿಯೋ ಕೇಳಿದ ನೆನಪು ಎಂದು ಕೆಲವರು ಒಂಟಿಗಣ್ಣನಗಲಿಸಿ ಮೇಲೆ ನೋಡುತ್ತಿದ್ದರೆ, ಇನ್ನು ಕೆಲವರಿಗೆ ಈ ಪ್ರಶಸ್ತಿಯನ್ನು ಮೊನ್ನೆ ಮೊನ್ನೆ ಕೀರ್ತಿಗಳಿಸಿದ ಕ್ರೀಡಾಪಟುವೊಬ್ಬ ರಾಷ್ಟ್ರಪತಿ ಗಳ ಕೈಯಿಂದ ಸ್ವೀಕರಿಸಿದ ಚಿತ್ರಣ ಕಣ್ಣೆದುರಿಗೆ ಬಂದು ನಿಂತಿದ್ದಂತೂ ಸುಳ್ಳಲ್ಲ ಅಲ್ಲವೇ? ಇಂತಹವರ ನಡುವೆ ರಾಜಕೀಯದ ಒಂದು ಬಣ ಕ್ರೋದಕ್ಕೊಳಗಾದರೆ, ಇನ್ನೊಂದು ಬಣ ಸರಿಯಾದ ನಿರ್ಧಾರ ಎಂದು ಶಹಬಾಶ್‌ ಗಿರಿ ಕೊಟ್ಟಿದ್ದು ಇದೆ.

ಹಾಕಿ ಮಾಂತ್ರಿಕ ಧ್ಯಾನಚಂದ್ ಜೀವನ ಸ್ವಾತಂತ್ರ್ಯ ಪೂರ್ವದ ಸ್ವಾರಸ್ಯ ದೇಶ ಪ್ರೇಮದ ಕತೆ ಎಂದರೆ ತಪ್ಪಿಲ್ಲ. ಆಗ 29,1905ರಲ್ಲಿ ಪ್ರಯಾಗ್‌ ರಾಜ್‌ನಲ್ಲಿ ಜನಿಸಿದ ಒಬ್ಬ ಸಾಮಾನ್ಯ ಹುಡುಗ ಮುಂದೆ ಸೇನೆಗೆ ಸೇರಿ, ಬ್ರಿಟಿಷರ ಕೊಳ್ಳೆಯಿಂದ ಬರಿದಾಗಿದ್ದ ತಾಯಿ ಭಾರತಿಯ ಕೊರಳಿಗೆ ಅನುಕ್ರಮವಾಗಿ 1928, 1932, 1936ರ ಒಲಿಂಪಿಕ್ ಹಾಕಿ ಕ್ರೀಡೆಯಲ್ಲಿ ಮೂರು ಬಂಗಾರದ ಪದಕ ತೊಡಿಸಿದವರು ಎಂಬುದು ಪ್ರತಿಯೊಬ್ಬ ಭಾರತೀಯ ನಿಗೂ ನೆನಪಿನಲ್ಲಿರಬೇಕಾದ ವಿಷಯ. ಅಂತೆಯೆ ಮುನ್ನಡೆದು 1928ರಿಂದ 1964ರ ವರೆಗೆ ಒಲಂಪಿಕ್ಸ್ನಲ್ಲಿ ಭಾರತದ ಹಾಕಿತಂಡ ಪ್ರತಿನಿಽಸಿದ ಎಂಟು ಬಾರಿಗೆ ಏಳು ಬಾರಿ ಭಾರತ ಬಂಗಾರದ ನಗು ಬೀರಿದ್ದಂತೂ ಸ್ವರ್ಣಾಕ್ಷರದಲ್ಲಿ ಬರೆದಿಡಬೇಕಾದ ಇತಿಹಾಸ.

ಧ್ಯಾನ್‌ಚಂದ್ ಅವರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ಪ್ರತಿನಿಧಿಸಿದ್ದು 1926ರಿಂದ 1949 ರವರೆಗೆ ಆಡಿದ ಒಟ್ಟು ಪಂದ್ಯಗಳು 185 ಅದರಲ್ಲಿ ಗಳಿಸಿದ ಗೋಲುಗಳ ಸಂಖ್ಯೆ 570 ಈ ಸಾಧನೆ ಸಾಮಾನ್ಯರಿಗೆ ಎಟುಕುವಂತಹದೆ ಅಲ್ಲ. ಭಾರತದ ಸೇನೆಯಲ್ಲಿ ಮೇಜರ್ ಆಗಿ ಕಾರ್ಯನಿರ್ವಹಿಸಿದ ಇವರು ಜಗತ್ತಿಗೆಲ್ಲ ’ಮೇಜರ್ ಧ್ಯಾನಚಂದ್’ ಎಂದೇ ಚಿರಪರಿಚಿತ ಇದಿಷ್ಟು ಮಹನೀಯ ಧ್ಯಾನಚಂದ್ ರ ಬಗ್ಗೆ ಆದರೆ ಇಲ್ಲಿರುವ ಮುಖ್ಯ ವಿಷಯ ಪ್ರಶಸ್ತಿಯ ಮರು ನಾಮಕರಣ.

ರಾಜೀವ್ ಗಾಂಧಿ ಖೇಲ್ ರತ್ನ ವಿಶೇಷತೆಯನ್ನು ಅರಿಯಲೇ ಬೇಕು ಈ ಪ್ರಶಸ್ತಿಯು ನಮ್ಮ ದೇಶದ ಅತ್ಯುನ್ನತ ಸಾಧನೆಗೈದ ಕ್ರೀಡಾ ಪಟುಗಳಿಗೆ ನೀಡುವ ಅತ್ಯುನ್ನತ ಗೌರವ, ಈ ಪ್ರಶಸ್ತಿಯೊಂದಿಗೆ ಒಟ್ಟು 25ಲಕ್ಷ ರುಪಾಯಿಗಳ ಬಹುಮಾನದ ಹಣ ಹೊಂದಿರುತ್ತದೆ. ಈ ಪ್ರಶಸ್ತಿಯ ಮೊದಲ ವಿಲೇವಾರಿ ನಡೆದದ್ದು
1991-1992 ರ ಸಾಲಿನಲ್ಲಿ ಮೊದಲು ಪ್ರಶಸ್ತಿ ಸ್ವೀಕರಿಸಿದವರು ಚೆಸ್ ದಂತಕಥೆ ಗ್ರ್ಯಾಂಡ್ ಮಾಸ್ಟರ್ ವಿಶ್ವನಾಥ ಆನಂದ್ ಅವರು ಅಂದಿನಿಂದ 2020 ರವರೆಗೆ ರೋಹಿತ್ ಶರ್ಮಾ, ವಿರಾಟ್ ಕೋಹ್ಲಿ, ಸಚಿನ್ ತೆಂಡೂಲ್ಕರ್, ಸೈನಾ ನೆಹ್ವಾಲ ಸೇರಿದಂತೆ ಒಟ್ಟು ೪೫ ಜನ ಕ್ರೀಡಾ ಸಾಧಕರಿಗೆ ಈ ಪ್ರಶಸ್ತಿ ದೊರೆತಿದೆ.
ಆದರೆ, ಇಲ್ಲಿರುವ ಮುಖ್ಯವಿಷಯ ಪ್ರಶಸ್ತಿ ಹೆಸರು ಬದಲಿಕೆಯದ್ದು. ಭಾರತವನ್ನ ಸುಮಾರು ಅರವತ್ತು ವರ್ಷಗಳ ಕಾಲ ಆಳಿದ ಕಾಂಗ್ರೆಸ್‌ನವರು ಅವರ ಆಳ್ವಿಕೆಯಲ್ಲಿ ಹೊರ ತಂದ ಎಲ್ಲ ಯೋಜನೆಗಳಿಗೆ ಮತ್ತು ಸರಕಾರದ ಅನುದಾನಿತ ಎಲ್ಲ ಕಾರ್ಯಕ್ರಮಗಳಿಗೆ ಇಟ್ಟಂತಹ ಹೆಸರುಗಳೆಲ್ಲ ಗಾಂಧಿ ಮನೆತನದ್ದೇ.

ಮೊನ್ನೆ ಮೊನ್ನೆಯ ಸರಕಾರದ ಆಽಕಾರ ಮುಗಿಸಿದ ಕರ್ನಾಟಕದ ರಾಜ್ಯ ಕಾಂಗ್ರೆಸ್ ತಾವು ಮಾಡಿದ ಬಡವರಿಗೆ ಅನ್ನ ನೀಡುವ ಕ್ಯಾಂಟೀನ್‌ಗೆ ಇಟ್ಟಿದ್ದು ಕೂಡ ಇಂದಿರಾ. ರಾಜಕೀಯ ನಾಯಕರುಗಳ ಹೆಸರಿಡುವ ಬದಲು ದೇಶಕ್ಕಾಗಿ ಪ್ರಾಣಕೊಟ್ಟ ಸ್ವಾತಂತ್ರ್ಯ ಹೋರಾಟಗಾರರು, ದೇಶಕ್ಕಾಗಿ ಪ್ರಾಣಕೊಟ್ಟ ಯೋಧರು, ದೇಶದ ಹಿರಿಮೆ ಹೆಚ್ಚಿಸಿದ ಕ್ರೀಡಾ ಪಟುಗಳು, ಸದಾ ಸಮಾಜದ ಒಳಿತಿಗಾಗಿ ಜೀವನ ಸವೆಸಿದ ಜನರು, ವಿಜ್ಞಾನಿಗಳು ಹಿಂಗೆ ಅವರವರ ರಂಗಕ್ಕೆ ಸಂಬಂಧಿಸಿದ ಯೋಜನೆಗಳಿಗೆ ಮಹನೀಯರ ಹೆಸರಿಟ್ಟು ಪೋಷಿಸಿದರೆ ಸಮಾಜಕ್ಕೆ ಒಳ್ಳೆಯ ಸಂದೇಶ ಕೊಟ್ಟಂತಾಗುತ್ತದೆ.