ಶಿಶಿರ ಕಾಲ
ಶಿಶಿರ ಹೆಗಡೆ
shishirh@gmail.com
ಒಲಿಂಪಿಕ್. ಅದೊಂದು ಕ್ರೀಡಾಸ್ಪರ್ಧೆ ಅಷ್ಟೇ ಅಲ್ಲ, ಅದು ಮನುಷ್ಯನ ಗರಿಷ್ಠ ಸಾಧ್ಯತೆ ಪ್ರದರ್ಶನವಾಗುವ ವೇದಿಕೆ. ಅಮೆರಿಕ, ಚೀನಾ, ರಷ್ಯಾ, ಬ್ರಿಟನ್, ಜಪಾನ್‌ನಂಥ ದೇಶಗಳ ಕ್ರೀಡಾಪಟುಗಳು ಅಲ್ಲಿ ಚಿನ್ನ, ಬೆಳ್ಳಿ, ಕಂಚನ್ನು ಬೆರಗಾಗುವ ಸಂಖ್ಯೆಯಲ್ಲಿ ಗೆಲ್ಲುತ್ತಾರೆ.
2020ರ ಒಲಿಂಪಿಕ್ ಅನ್ನೇ ತೆಗೆದುಕೊಳ್ಳಿ. ಅಮೆರಿಕ 113 ಪದಕಗಳನ್ನು ಪಡೆದಿತ್ತು. ಉಳಿದ ದೇಶಗಳಲ್ಲಿ ಹೇಗೆಂದು ಗೊತ್ತಿಲ್ಲ, ಆದರೆ ಅಮೆರಿಕದಲ್ಲಿ ಇಂಥದೊಂದು ಸ್ಪರ್ಧೆಗೆ ಚಿಕ್ಕವರಿರುವಾಗಲೇ ತಯಾರಿ ಶುರುವಾಗುತ್ತದೆ. ಚಿಕ್ಕಮಗುವಷ್ಟೇ ಅಲ್ಲ, ಇಡೀ ಕುಟುಂಬ ವೇ ತಯಾರಾಗಿ ನಿಲ್ಲುತ್ತದೆ. ಹೀಗೆ ವರ್ಷಾನುಗಟ್ಟಲೆ ಹಗಲಿರುಳೂ ತಮ್ಮ ದೇಹವನ್ನು ಒಗ್ಗಿಸಿ ಬಗ್ಗಿಸಿ ತಯಾರಿ ನಡೆಸುವವರು ಲಕ್ಷ ಸಂಖ್ಯೆಯಲ್ಲಿರುತ್ತಾರೆ.
ಆ ಪೈಕಿ ಕೊನೆಗೆ ಆ ವೇದಿಕೆಗೆ ತಲುಪುವವರು ಕೆಲವು ನೂರು ಮಂದಿಯಷ್ಟೇ. ಆ ಸಂಖ್ಯೆ ಗಳನ್ನೆಲ್ಲ ನೋಡಿದರೆ, ಕೊನೆಗೆ ನೂರರ ಲೆಕ್ಕದಲ್ಲಿ ಪದಕ ಗೆಲ್ಲುವವರ ಸಂಖ್ಯೆ ತೀರಾ ಚಿಕ್ಕದು. ಒಲಿಂಪಿಕ್ ಅಥವಾ ಇಂಥ ಯಾವುದೇ ಅಂತಾರಾಷ್ಟ್ರೀಯ ಕ್ರೀಡಾಸ್ಪರ್ಧೆ ಗಳಿರಬಹುದು, ಅದಕ್ಕೆ ದೇಹವನ್ನು ಸಿದ್ಧಪಡಿಸುವುದು, ತರಬೇತಿ ನೀಡುವುದು ಒಂದು ಕಡೆಯಾಯಿತು.
ಅದಕ್ಕಿಂತ ಹೆಚ್ಚಾಗಿ ಅಲ್ಲೊಂದು ಮಾನಸಿಕ ತಯಾರಿ ನಡೆಯುತ್ತದೆ. ಅದು ತೀರಾ ಮುಖ್ಯವೂ ಹೌದು. ದೈಹಿಕವಾಗಿ ಶಕ್ತರಿರು ವವರೆಲ್ಲ ಪದಕ ಗೆಲ್ಲುವುದಿಲ್ಲ. ಮಾನಸಿಕ ಶಕ್ತಿ ದೈಹಿಕಕ್ಕಿಂತ ಒಂದು ಹಿಡಿ ಜಾಸ್ತಿಯೇ ಮಹತ್ವದ್ದು. ಸೋಲನ್ನು ಎದುರಿಸಲು ಹೇಗೆ ಮಾನಸಿಕ ಸ್ಥೈರ್ಯ ಬೇಕೋ, ಗೆಲ್ಲಲು ಮತ್ತು ಗೆಲುವನ್ನು ಎದುರಿಸಲು ಅದಕ್ಕಿಂತ ಜಾಸ್ತಿ ಗಟ್ಟಿತನ ಬೇಕಾಗುತ್ತದೆ. ದೈಹಿಕ ಶಕ್ತಿಯ ಜತೆ ಮಾನಸಿಕ ಶಕ್ತಿ ಇದ್ದವನಿಗೆ ಮಾತ್ರ ಒಲಿಂಪಿಕ್‌ನಂಥ ಸ್ಪರ್ಧೆಯಲ್ಲಿ ಒಂದು ಪದಕ ಗೆಲ್ಲಲು ಸಾಧ್ಯ. ಒಲಿಂಪಿಕ್‌ನಲ್ಲಿ ಭಾಗವಹಿಸಲು ಅರ್ಹರಾಗುವವರೆಲ್ಲ ಹೆಚ್ಚು ಕಡಿಮೆ ಒಂದೇ ಮಟ್ಟದ ದೈಹಿಕ ಸಾಮರ್ಥ್ಯವನ್ನು ಹೊಂದಿರುತ್ತಾರೆ. ಆದರೆ ಆ ಪೈಕಿ ಮಾನಸಿಕ ಗಟ್ಟಿತನ ಜಾಸ್ತಿಯಿರುವವರು ಮಾತ್ರ ಪದಕ ಗೆಲ್ಲುತ್ತಾರೆ.
ಉಳಿದವರ ಹೆಸರು ಕೂಡ ಯಾರಿಗೂ ತಿಳಿಯುವುದಿಲ್ಲ. ಈ ಕಾರಣಕ್ಕೆ ಅಮೆರಿಕದ ಶಾಲೆಗಳಲ್ಲಿನ ದೈಹಿಕ ಶಿಕ್ಷಣದ ಮಾಸ್ತರುಗಳು ಕ್ರೀಡೆಯ ಜತೆಯಲ್ಲಿ ಮನಶ್ಶಾಸ್ತ್ರದಲ್ಲೂ ಕಲಿತಿರಬೇಕು. ಯಾರೇ ಆಗಲಿ, ರಾಜ್ಯಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಾರೆ ಎಂದರೆ, ಅದಾಗಲೇ ಸ್ಪೋರ್ಟ್ಸ್ ಸೈಕಾಲಜಿಸ್ಟ್‌ಗಳು ಕ್ರೀಡಾ ಕೋಚ್‌ಗಳ ಜತೆ ಸೇರಿಕೊಂಡು ತರಬೇತಿ ನೀಡುತ್ತಾರೆ. ಕ್ರೀಡಾ ಜಗತ್ತಿನಲ್ಲಿ ಮನಶ್ಶಾಸ್ತ್ರಜ್ಞರಿಗೆ ಒಂದು ವಿಶೇಷ ಸ್ಥಾನ ಮತ್ತು ಮಾನವಿದೆ. ಈ ಹಿನ್ನೆಲೆಯಲ್ಲಿ ಯಾರೇ ಆಗಲಿ, ಒಲಿಂಪಿಕ್‌ಗೆ ಅಮೆರಿಕದಿಂದ ಭಾಗವಹಿಸುತ್ತಾರೆ ಎಂದಾದರೆ, ಅವರಿಗೆ ಸಾಕಷ್ಟು ಮಾನಸಿಕ ತರಬೇತಿಯೂ ಸಿಕ್ಕಿರುತ್ತದೆ.
ಪಂದ್ಯದಲ್ಲಿ ಸೋತರೆ/ಗೆದ್ದರೆ ಹೇಗೆಲ್ಲ ಎದುರಿಸಬೇಕು ಎಂಬಿತ್ಯಾದಿಗಳೆಲ್ಲ ಸ್ಥೂಲ ವಿಚಾರಗಳಾದವು. ಆದರೆ ಈ ಸೈಕಾಲಜಿಸ್ಟ್ ಗಳು ಪಂದ್ಯದ ಹಿಂದಿನ ದಿನ, ಪಂದ್ಯದ ದಿನ, ಪಂದ್ಯಕ್ಕೆ ಒಂದೆರಡು ತಾಸಿರುವಾಗ, ಪಂದ್ಯ ಇನ್ನೇನು ಶುರು ವಾಗಬೇಕು ಆ ಕ್ಷಣದಲ್ಲಿ, ವಿಸಿಲ್ ಹೊಡೆದು ಪಂದ್ಯ ಶುರುವಾದ ತಕ್ಷಣ, ನಂತರದಲ್ಲಿ ಪಂದ್ಯ ನಡೆಯುವಾಗ ಹೀಗೆ ಪ್ರತಿ ಯೊಂದು ಘಟ್ಟದಲ್ಲೂ ಹೇಗೆ ಮಾನಸಿಕವಾಗಿ ತಮ್ಮ ಜತೆ ಮತ್ತು ಹೊರಜಗತ್ತಿನ ಆಗುಹೋಗುಗಳ ಜತೆ ವ್ಯವಹರಿಸಬೇಕು, ತಯಾರಿ ಮಾಡಿಕೊಳ್ಳಬೇಕು, ಮನಸ್ಸನ್ನು ಹೇಗಿಟ್ಟುಕೊಳ್ಳಬೇಕು ಎಂಬುದೆಲ್ಲದರ ತರಬೇತಿ ನೀಡುತ್ತಾರೆ.
ಸಿಮೋನ್ ಬೈಲ್ಸ್ ಅಮೆರಿಕದ ಜಿಮ್ನಾಸ್ಟ್. ಜಿಮ್ನಾಸ್ಟಿಕ್‌ನಲ್ಲಿ ಅಮೆರಿಕದ್ದು ಯಾವತ್ತೂ ಮೇಲುಗೈ. ಹಾಗಾಗಿ ಅಲ್ಲಿ ಒಲಿಂಪಿಕ್‌ಗೆ ಆರಿಸಿ ಬರಬೇಕು ಎಂದರೆ ಅದೇ ದೊಡ್ಡಸ್ಪರ್ಧೆ. ಅದನ್ನೆಲ್ಲ ಮೀರಿ ತನ್ನ ೧೯ನೇ ವಯಸ್ಸಿಗೆ ಬ್ರೆಜಿಲ್‌ನಲ್ಲಿ ನಡೆದ ಒಲಿಂಪಿಕ್‌ನಲ್ಲಿ ಭಾಗವಹಿಸಿ ೪ ಚಿನ್ನದ ಪದಕ ಪಡೆದವಳು ಸಿಮೋನ್. ಸಾಮಾನ್ಯವಾಗಿ ಚಿನ್ನ ಮತ್ತು ಬೆಳ್ಳಿ ಗೆಲ್ಲುವವರ ನಡುವಿನ ಅಂತರ ತೀರಾ ಚಿಕ್ಕದಿರುತ್ತದೆ. ಆದರೆ ಇವಳ ಮಟ್ಟಿಗೆ ಹಾಗಿರಲಿಲ್ಲ. ಇವಳ ನಂತರದ ಸ್ಥಾನ ಪಡೆದಾಕೆ ಇವಳಿಗಿಂತ ಬಹಳ ಹಿಂದಿದ್ದಳು.
ಒಲಿಂಪಿಕ್ ಮಾತ್ರವಲ್ಲದೆ ಬಹಳಷ್ಟು ಅಂತಾರಾಷ್ಟ್ರೀಯ ಸ್ಪರ್ಧೆಗಳಲ್ಲಿ ಭಾಗವಹಿಸಿ ೨೫ಕ್ಕಿಂತ ಹೆಚ್ಚಿನ ಚಿನ್ನ ಗೆದ್ದ ಗಟ್ಟಿಗಿತ್ತಿ. ೨ ವರ್ಷದ ಹಿಂದೆ ಅವಳು ಟೋಕಿಯೋ ಒಲಿಂಪಿಕ್‌ಗೆ ಹೆಚ್ಚಿನ ಆಂತರಿಕ ಸ್ಪರ್ಧೆಯಿಲ್ಲದೆ ಅರ್ಹತೆ ಪಡೆದಿದ್ದಳು. ಸಾಮಾನ್ಯವಾಗಿ ಒಲಿಂಪಿಕ್ ಅನ್ನು ಉಳಿದ ಆಟಗಳಂತೆ ಕ್ರೀಡಾಪ್ರೇಮಿಗಳು ಅನುಸರಿಸುವುದು ಕಮ್ಮಿ. ಆದರೆ ಇಡೀ ಅಮೆರಿಕ ಆಕೆಯ ಕ್ರೀಡಾ ಪ್ರದರ್ಶನ ನೋಡಲು ತಯಾರಾಗಿ ನಿಂತಿತ್ತು.
ನ್ಯೂಯಾರ್ಕ್ ಟೈಮ್ಸ್‌ನಿಂದ ಹಿಡಿದು ಬಹುತೇಕ ಪತ್ರಿಕೆಗಳು ಆಕೆ ಈ ಸಲ ಇದ್ದಬದ್ದ ಚಿನ್ನದ ಪದಕವನ್ನೆಲ್ಲ ಗೆದ್ದೇ ಬರುತ್ತಾಳೆ ಎಂದೇ ಊಹಿಸಿ ಬರೆದಿದ್ದವು. ‘ಫ್ಯಾಕ್ಸ್ ನ್ಯೂಸ್’ ಅಂತೂ ಆಕೆಯ ಸ್ಪರ್ಧೆಯ ಹಿಂದಿನ ದಿನ, ನಾಳೆ ಇತಿಹಾಸ ಸೃಷ್ಟಿಯಾಗಲಿದೆ ಎಂದೇ ಒಂದರ್ಧ ಗಂಟೆಯ ಪ್ರೈಮ್ ಸಮಯದ ಕಾರ್ಯಕ್ರಮವನ್ನು ಅವಳನ್ನು ಹೊಗಳಲಿಕ್ಕೆಂದೇ ಮೀಸಲಿಟ್ಟಿತ್ತು. ಸ್ಪರ್ಧೆ
ಶುರುವಾಯಿತು. ಸಿಮೋನ್ ನಿರೀಕ್ಷೆಗೂ ಮೀರಿದ ಕಳಪೆ ಪ್ರದರ್ಶನ ನೀಡಿದಳು. ೪ನೆಯ ದಿನವೇ ಆಟದಿಂದಲೇ ಹೊರಬಿದ್ದಳು. ಆದದ್ದಿಷ್ಟೇ- ಅದನ್ನು ಅವಳೇ ಹೇಳಿದ್ದು.
ಸ್ಪರ್ಧೆಗೆ ನಿಂತಾಗ ಆಕೆಗೆ ಎಲ್ಲಿಲ್ಲದೆ ಕಾಡಿದ್ದು ತನ್ನ ಮೇಲೆಯೇ ಹುಟ್ಟಿದ ಅನುಮಾನ. ‘ನನ್ನ ದೇಶದವರು ಅಂದುಕೊಂಡಷ್ಟು
ನಾನು ಸಮರ್ಥಳೇ? ನನ್ನ ಮೇಲೆ ಇಷ್ಟೆಲ್ಲ ನಿರೀಕ್ಷೆಗಳಿವೆ, ಅವಕ್ಕೆ ನಾನು ಅರ್ಹಳೇ?’ ಎಂಬ ಹತ್ತಾರು ಪ್ರಶ್ನೆಗಳು ಅವಳ
ತಲೆಯನ್ನು ವ್ಯಾಪಿಸಿದ್ದವು. ಆಕೆ ತನ್ನ ಮನಶ್ಶಾಸ್ತ್ರಜ್ಞರ ಬಳಿ ಇದನ್ನು ಹೇಳಿಕೊಂಡಳು, ಕೌನ್ಸೆಲಿಂಗ್ ಸೆಷನ್‌ಗಳೂ ಆದವು.
ಆದರೆ ಆ ಅನುಮಾನದ ಹುತ್ತದಿಂದ ಆಕೆ ಹೊರಬರಲಾಗಲೇ ಇಲ್ಲ.
ಕೊನೆಗೆ ಆಕೆ ಒಂದೇ ಒಂದು ವೈಯಕ್ತಿಕ ಚಿನ್ನ ಬಿಡಿ, ಕಂಚು ಗೆಲ್ಲಲೂ ಆಗಲಿಲ್ಲ. ನಮ್ಮ ಮೇಲೆಯೇ ಅನುಮಾನ ಬರುವುದಿದೆ ಯಲ್ಲ, ಇದು ಕಾಡದ ವ್ಯಕ್ತಿಯೇ ಇಲ್ಲ. ಬದುಕಿನ ಒಂದಿಲ್ಲೊಂದು ಹಂತದಲ್ಲಿ ಇದು ಪ್ರತಿಯೊಬ್ಬರನ್ನೂ ಧೃತಿಗೆಡಿಸುತ್ತದೆ.
ಒಂದು ಕ್ಷೇತ್ರದಲ್ಲಿ ಬೆಳೆದಂತೆ ಇಂಥದೊಂದು ಅನುಮಾನ ಕೂಡ ಹೆಚ್ಚೆಚ್ಚು ಒತ್ತರಿಸಿ ಬರಲು ಶುರುವಾಗುತ್ತದೆ. ತೀರಾ
ಬುದ್ಧಿ ಞವಂತರನ್ನು ಹುಚ್ಚರನ್ನಾಗಿಸಿಬಿಡುವಷ್ಟು ತಾಕತ್ತು ತಮ್ಮ ಮೇಲೆಯೇ ಹುಟ್ಟಿಕೊಳ್ಳುವ ಈ ಅನುಮಾನಕ್ಕಿದೆ. ಪ್ರತಿ
ಊರಿನಲ್ಲೂ ಇದಕ್ಕೆ ಉದಾಹರಣೆಗಳು ಸಿಗುತ್ತವೆ.
ನಮ್ಮೂರ ಗೂಡಂಗಡಿ ಸಿದ್ದಪ್ಪನಿಂದ ಹಿಡಿದು ವಿಕ್ಟೋರಿಯಾ ರಾಣಿಯವರೆಗೆ ಎಲ್ಲರಲ್ಲೂ ಈ ಪ್ರಶ್ನೆ ಆಗೀಗ ಉದ್ಭವಿಸುತ್ತದೆ. ‘ಇವೆಲ್ಲದಕ್ಕೆ ನಾನು ಅರ್ಹನೇ? ನನ್ನಿಂದ ಇದೆಲ್ಲ ಸಾಧ್ಯವೇ? ಸೋತರೆ ಸಮಾಜ ನನ್ನನ್ನು ಸ್ವೀಕರಿಸುತ್ತದೆಯೇ? ಉಳಿದವರು ಹೇಳುವಂತೆ ನಿಜವಾಗಿಯೂ ನನ್ನಲ್ಲಿ ಕೌಶಲವಿದೆಯೇ ಅಥವಾ ಇದೆಲ್ಲ ನಾನು ಜನರಿಗೆ ಮಾಡುತ್ತಿರುವ ಮೋಸವೇ?’ ಎಂಬಿ
ತ್ಯಾದಿ ನಾನಾರೂಪದ ಅನುಮಾನಗಳು. ಸಾಧನೆ ಯಾವುದೇ ಮಟ್ಟದ್ದಿರಬಹುದು, ಬುದ್ಧಿವಂತಿಕೆ, ಚಾಣಾಕ್ಷತನ ಯಾವುದೇ
ಲೆವೆಲ್ಲಿನದಿರಬಹುದು, ಮಾಡಲು ಹೊರಟರುವುದು ಯಾವುದೇ ಕೆಲಸ, ಸಾಧನೆಯಿರಬಹುದು.
ಆದರೆ ಈ ಅನುಮಾನ ಹುಟ್ಟುವುದು ಮಾತ್ರ ಸಾರ್ವತ್ರಿಕ. ಪರೀಕ್ಷೆಯ ಬೆಲ್ ಹೊಡೆದಾಗ, ಓದು ಮುಗಿಸಿ ಹೊಸದಾಗಿ ಕೆಲಸಕ್ಕೆ ಸೇರಿದಾಗ, ಇನ್ನೇನು ಭಾಷಣ ಶುರುಮಾಡಬೇಕು ಎನ್ನುವಾಗ ಹೇಗೋ, ಅಂತಂಥ ನಿರ್ಣಾಯಕ ಸಮಯದಲ್ಲಿಯೇ ಇದು
ಭುಗಿಲೇಳುವುದು. ಮಿಷೆಲ್ ಒಬಾಮ ಆತ್ಮಕಥನದಲ್ಲೊಂದು ಕಡೆ ಈ ಬಗ್ಗೆ ಬರೆದುಕೊಂಡಿದ್ದಾರೆ. ಆಕೆಯ ಪತಿ ಬರಾಕ್ ಒಬಾಮ
ಆಗಷ್ಟೇ ಅಮೆರಿಕದ ಅಧ್ಯಕ್ಷರಾಗಿದ್ದರು. ಹೀಗಾಗಿ ಮಿಷೆಲ್ ಅಮೆರಿಕದ ಮೊದಲ ಮಹಿಳೆ. ಅಮೆರಿಕದ ಅಧ್ಯಕ್ಷರ ಪತ್ನಿಗೆ
ಪತಿಯಷ್ಟಲ್ಲದಿದ್ದರೂ ಸಹಜವಾಗಿ ಒಂದಷ್ಟು ಜವಾಬ್ದಾರಿಗಳು ಹೆಗಲೇರುತ್ತವೆ.
ಹೋದಲ್ಲಿ ಬಂದಲ್ಲಿ ಆಕೆಯ ನಡೆ, ನಡವಳಿಕೆ, ಬಟ್ಟೆ, ಆಕೆ ಪ್ರತಿಕ್ರಿಯಿಸುವ ರೀತಿ, ಮಾತಿಗೆ ಬಳಸುವ ಶಬ್ದದಿಂದ ಹಿಡಿದು, ಆಕೆ ಗಟ್ಟಿ ಕೆಮ್ಮಿದರೂ ಪತ್ರಿಕೆಗಳು ಅದನ್ನೂ ವರದಿ ಮಾಡುತ್ತವೆ. ಹೆಣ್ಣೊಬ್ಬಳಿಗೆ ಅತ್ಯಂತ ಸವಾಲಿನ ಹುದ್ದೆ ಯಾವುದೆಂದರೆ ಅಮೆರಿಕದ ಅಧ್ಯಕ್ಷರಾಗುವುದಲ್ಲ; ಅಧ್ಯಕ್ಷರ ಪತ್ನಿ, ಮೊದಲ ಮಹಿಳೆ ಆಗುವುದು. ಅಧ್ಯಕ್ಷರಾದವರು ಏನೇ ಮಾತಾಡಿ ಅರಗಿಸಿ ಕೊಳ್ಳಬಹುದು; ಆದರೆ ಅಧ್ಯಕ್ಷರ ಪತ್ನಿ ಎಷ್ಟು ಜಾಗ್ರತೆಯಿಂದಿದ್ದರೂ ಕಮ್ಮಿಯೇ. ಹೀಗೆ ಮಿಷೆಲ್ ಮೊದಲ ಮಹಿಳೆ ಯಾದಾಗ ತಮ್ಮನ್ನು ಕಾಡಿದ ತಮ್ಮದೇ ಕುರಿತಾದ ಅನುಮಾನಗಳನ್ನು ಕೆಲ ವೇದಿಕೆಗಳಲ್ಲಿ ಇತ್ತೀಚೆಗೆ ಹೇಳಿಕೊಂಡಿದ್ದಾರೆ.
‘ನಾನು ಇದಕ್ಕೆಲ್ಲ ಅರ್ಹಳೇ?’, ‘ನಾನು ಏನಾದರೂ ತಪ್ಪು ಮಾತಾಡಿಬಿಟ್ಟರೆ?’- ಹೀಗೆ ಆಕೆಗೆ ಕಾಡಿದ ಅನುಮಾನಗಳು ಒಂದೆರಡಲ್ಲ. ಬರಾಕ್ ಅಧ್ಯಕ್ಷರಾಗಿದ್ದ ಎಂಟೂ ವರ್ಷ ಈ ಅನುಮಾನ ಮಿಷೆಲ್‌ರನ್ನು ಕಾಡಿದ್ದಿದೆ. ಆಲ್ಬರ್ಟ್ ಐನ್‌ಸ್ಟೀನ್ ಒಂದು ಕಡೆ, ‘ನಾನು ಜಗತ್ತಿಗೇ ಮೋಸ ಮಾಡುತ್ತಿದ್ದೀನೇನೋ ಎನಿಸುತ್ತದೆ’ ಎಂದು ಹೇಳಿದ್ದರು. ಸಚಿನ್ ತೆಂಡೂಲ್ಕರ್‌ರಿಂದ ಹಿಡಿದು ವರನಟ ರಾಜ್‌ಕುಮಾರ್‌ರವರೆಗೆ ಇದು ಯಾರನ್ನೂ ಬಿಟ್ಟಿಲ್ಲ.
ಅಣ್ಣಾವ್ರು ಅದೆಷ್ಟೋ ಬಾರಿ ತಮ್ಮ ಮೇಲೆ ತಮಗೇ ಹುಟ್ಟಿದ ಅನುಮಾನದ ಕುರಿತು ಸಾರ್ವಜನಿಕವಾಗಿ ಹೇಳಿಕೊಂಡಿದ್ದಿದೆ.
ಸಿನಿಮಾದಲ್ಲಿ ಸೀನ್‌ಗಳನ್ನು ಚಿತ್ರೀಕರಿಸುವಾಗ ಅದೆಷ್ಟೋ ಟೇಕ್‌ಗಳನ್ನು ತೆಗೆದುಕೊಳ್ಳಲಾಗುತ್ತದೆ. ಆದರೆ ಕೊನೆಯಲ್ಲಿ ಪ್ರೇಕ್ಷಕ ನೋಡುವುದು ಎಲ್ಲವೂ ಪ-ಕ್ಟ್ ಅನ್ನಿಸುವ ಸೀನ್ ಮಾತ್ರ. ನಟನಾದವನಿಗೆ ಆಗ, ‘ಜನ ತಿಳಿದುಕೊಂಡಷ್ಟು ಒಳ್ಳೆಯ ನಟ ನಾನು ಹೌದೇ?’ ಎಂಬ ಅನುಮಾನ ಶುರುವಾಗುತ್ತದೆ. ಅದ್ಭುತ ಚಿತ್ರಕಾರನಿಗೆ ತಾನು ಬಿಡಿಸಿದ ಚಿತ್ರದಲ್ಲಿ ಹಲವು ತಪ್ಪುಗಳಿರುವುದು ಗೊತ್ತಿರುತ್ತದೆ, ಕಾಣಿಸುತ್ತದೆ; ಆದರೆ ನೋಡುಗನಿಗೆ ಅವು ಗೋಚರಿಸುವುದಿಲ್ಲ.
ಅತ್ತ ನೋಡುಗ ಚಿತ್ರಕಾರನ ಕಲೆಯನ್ನು ಹೊಗಳುತ್ತಿದ್ದರೆ, ಇತ್ತ ಚಿತ್ರಕಾರನ ಸುಪ್ತಮನಸ್ಸಿನಲ್ಲಿ ‘ನಾನು ಇವರಂದುಕೊಂಡಷ್ಟು
ಒಳ್ಳೆಯ ಚಿತ್ರಕಾರನಲ್ಲ’ ಎಂಬ ಅನಿಸಿಕೆಯೂ ಹುಟ್ಟಿಕೊಳ್ಳುತ್ತದೆ. ನಾನು ಓದಿದ ಆತ್ಮಚರಿತ್ರೆಗಳಲ್ಲೆಲ್ಲ, ಸ್ವಂತದ ಮೇಲೆ
ಹುಟ್ಟಿಕೊಳ್ಳುವ ಅನುಮಾನದ ಬಗ್ಗೆ ಒಂದು ಅಧ್ಯಾಯ ಇದ್ದೇ ಇರುತ್ತದೆ. ಒಬ್ಬ ವ್ಯಕ್ತಿ ಬೆಳೆದಂತೆಲ್ಲ ಸುತ್ತ ಹುಟ್ಟುವ ನಿರೀಕ್ಷೆ
ಅವನನ್ನು ಒಮ್ಮೆ ನಿಲ್ಲಿಸಿ ಅನುಮಾನ ಪಡುವಂತೆ ಮಾಡುತ್ತದೆ.
‘ಹೀಗೊಂದು ಅನುಮಾನ ಹುಟ್ಟಿದಾಗೆಲ್ಲ ನಾನು ತಲೆತಗ್ಗಿಸಿ ಕೆಲಸ ಮಾಡುತ್ತಲೇ ಹೋದೆ’ ಎನ್ನುತ್ತಾರೆ ಮಿಷೆಲ್ ಒಬಾಮ. ಅದುವೇ ಕೃಷ್ಣ ಭಗವದ್ಗೀತೆಯಲ್ಲಿ ಹೇಳಿದ ‘ಕರ್ಮಣ್ಯೇ ವಾಧಿಕಾರಸ್ತೇ ಮಾ ಫಲೇಷು ಕದಾಚನ’. ಹೀಗೆ ಹುಟ್ಟುವ ಅನುಮಾನ ವನ್ನು ಜಯಿಸುವವನು ಮಾತ್ರವೇ ಸಾಧಕನಾಗುತ್ತಾನೆ. ನಮ್ಮ ಮೇಲೆ ನಮಗೇ ಹುಟ್ಟುವ ಅನುಮಾನವನ್ನು ೨ ರೀತಿಯಲ್ಲಿ ಎದುರಿಸಬಹುದು.
ಮೊದಲನೆಯದು ತೀರಾ ತಲೆಕೆಡಿಸಿಕೊಳ್ಳುವುದು, ಕಂಗಾಲಾಗುವುದು. ಎರಡನೆಯದೇ ಸಾಧಕನ ಹಾದಿ- ಆದದ್ದಾಗಲಿ, ತಾನು ಮಾಡುತ್ತಿರುವುದನ್ನು ಮುಂದುವರಿಸಿಕೊಂಡು ಹೋಗುವುದು. ಅನುಮಾನಕ್ಕೆ ಕ್ಯಾರೇ ಅನ್ನದೆ ಮಾಡಬೇಕಾದ್ದನ್ನು ಮಾಡು ತ್ತಲೇ ಹೋಗುವುದು. ಈ ಎರಡನೆಯ ಹಾದಿ ಸುಲಭದ್ದಲ್ಲ, ಹಾಗಂತ ತೀರಾ ಕಷ್ಟದ್ದೂ ಅಲ್ಲ. ಅದೊಂದು ಸಣ್ಣ ಮಾನಸಿಕ ಅಳವಡಿಕೆ. ಬೆಳೆಸಿಕೊಳ್ಳಬಹುದಾದ ಒಂದು ಚಿಕ್ಕ ದಾಢಸಿತನ.
ಒಂದು ಚಿಕ್ಕ ಹುಂಬಧೈರ್ಯ ಸಾಕು ಇದನ್ನು ಎದುರಿಸಲು. ಆದರೆ ಅನುಮಾನ ಹುಟ್ಟಿದಾಗಲೇ ಎದುರಿಸದೆ ಬಿಟ್ಟರೆ ಆಗಲೇ ಪರಾಮಶಿಯಾಗುವುದು. ಬೆಳೆಯಲು ಬಿಟ್ಟರೆ ಅದೊಂದು ಕ್ಯಾನ್ಸರ್‌ನಂತೆ. ಬೆಳೆದು ಖಿನ್ನತೆಗೆ, ಮಾನಸಿಕ ಒತ್ತಡಕ್ಕೆ, ಕೆಲಸವನ್ನು ಮುಂದೂಡುವುದಕ್ಕೆ, ಭಾವನಾತ್ಮಕ ಅಸ್ಥಿರತೆಗೆ, ಸ್ವಾಭಿಮಾನದ ಕೊರತೆಗೆ, ಅಷ್ಟೇಕೆ ಹಲವು ತಪ್ಪು ನಿರ್ಧಾರಗಳಿಗೂ ಅದು ಕಾರಣವಾಗುತ್ತದೆ. ಸ್ವಂತ ಅನುಮಾನವೇ ‘ಇಂಪೋಸ್ಟರ್ ಸಿಂಡ್ರೋಮ್ ’ಗೆ (ತಾನು ಈ ಜಗತ್ತನ್ನು ಮೋಸಗೊಳಿಸುತ್ತಿದ್ದೇನೆ ಎನ್ನುವ ಅನುಮಾನ) ಕೂಡ ಕಾರಣವಾಗುತ್ತದೆ.
ಸಾಧನೆಯ ಹಾದಿಯಲ್ಲಿ ಹೊರಟವನಿಗೆ ಒಂದಿಷ್ಟು ಸ್ವಸಹಾನುಭೂತಿಯ ಅವಶ್ಯಕತೆಯಿರುತ್ತದೆ. ಅದು, ‘ನಾನು ಕೂಡ ಮನುಷ್ಯ, ನನ್ನಿಂದಲೂ ತಪ್ಪಾಗಬಹುದು’ ಎನ್ನುವ ಮನೋಭಾವವನ್ನು ಬೆಳೆಸಿಕೊಳ್ಳುವುದು. ಇದರಿಂದಾಗಿ, ಅಕಸ್ಮಾತ್ ತನ್ನಿಂದ ಯಾವುದೇ ತಪ್ಪು ನಡೆದುಹೋದಲ್ಲಿ ಅದನ್ನು ಹಾಗೆಯೇ ಸ್ವೀಕರಿಸುವ ಮನಸ್ಥಿತಿ ಬೆಳೆಯುತ್ತದೆ. ಇನ್ನು, ಇದರ ಜತೆಗೆ ನಮ್ಮ ಹಿಂದಿನ ಸಾಧನೆಯನ್ನು ನೆನಪಿಸಿಕೊಳ್ಳುವುದು ಕೂಡ ಮನಸ್ಸಿಗೆ ಒಂದಿಷ್ಟು ಧೈರ್ಯ ತುಂಬುತ್ತದೆ.
ನೀವು ಚಿಕ್ಕವರಿರುವಾಗ ಗೆದ್ದ ಟ್ರೋಫಿಗಳು, ಪ್ರಶಸ್ತಿಪತ್ರಗಳು ಅಥವಾ ಇನ್ನೇನೋ ಒಂದು ಕೂಡ ಇಂಥ ಧೈರ್ಯ ತುಂಬುವ ಕೆಲಸ ಮಾಡಬಹುದು. ಇನ್ನೊಬ್ಬರಿಗೆ ತನ್ನನ್ನು ಹೋಲಿಸಿಕೊಳ್ಳುವುದು ಮನುಷ್ಯನ ಒಂದು ಸಹಜ ಸ್ವಭಾವ. ಇದು ಒಂದಿಷ್ಟು ಮಟ್ಟಿಗೆ ಪ್ರೇರಣೆ ನೀಡಬಹುದು, ಆದರೆ ಹೋಲಿಕೆ ಮಿತಿಮೀರಿದಾಗ ಅದು ಉಲ್ಟಾ ಹೊಡೆಯುತ್ತದೆ. ಹಾಗಾಗಿ ಅನ್ಯರಿಗೆ ಹೋಲಿಸಿ ಕೊಳ್ಳುವುದನ್ನು ಮೊದಲು ಬಿಡಬೇಕು. ತಾನೆಲ್ಲಿದ್ದೇನೆ ಎಂಬುದನ್ನು ಕಂಡುಕೊಳ್ಳಲು ಹೋಲಿಕೆ ಅವಶ್ಯಕ; ಆದರೆ ಎರಡು ಮೆಟ್ಟಿಲು ಹತ್ತಿದವನಿಗೆ ಮೌಂಟ್ ಎವರೆಸ್ಟ್ ಹತ್ತಿದವ ಪ್ರೇರಣೆಯೂ ಆಗಬಹುದು ಅಥವಾ ಇದ್ದ ಧೈರ್ಯವನ್ನು ಹಾಳು ಮಾಡಲೂಬಹುದು.
ಕಾರಣವಿದ್ದೇ ನಕಾರಾತ್ಮಕ ಚಿಂತನೆಗಳು ನಮ್ಮ ಮಿದುಳಿನಲ್ಲಿ ಹುಟ್ಟಿಕೊಳ್ಳುತ್ತವೆ. ಸಕಾರಾತ್ಮಕ-ನಕಾರಾತ್ಮಕ ವಿಚಾರಗಳು ಮನಸ್ಸಿನೊಳಗೆ ಸದಾ ಹೊಡೆದಾಡುತ್ತಲೇ ಇರುತ್ತವೆ; ಆದರೆ ಯಾವುದನ್ನು ಗೆಲ್ಲಿಸಬೇಕೆನ್ನುವುದು ಮಾತ್ರ ಸಂಪೂರ್ಣ ನಮ್ಮ ಕೈಯಲ್ಲೇ ಇರುವಂಥದ್ದು. ಒಂದು ಕ್ಷಣ ನಿಂತು, ‘ನಾನು ಯಾವ ರೀತಿ ಯೋಚಿಸುತ್ತಿದ್ದೇನೆ, ನನ್ನ ಮನಸ್ಸಿನ ವಿಚಾರಗಳು, ಅನುಮಾನಗಳು ಯಾವ ಮಾರ್ಗ ಹಿಡಿದು ಹೊರಟಿವೆ’ ಎಂದು ಕೇಳಿಕೊಂಡರೆ ಸಾಕು, ಮುಕ್ಕಾಲುವಶಿ ಸಮಸ್ಯೆ ಪರಿಹಾರ ವಾದಂತೆ.
ಇದೆಲ್ಲದರ ಜತೆ, ಸದಾ ಬೆಂಬಲಿಸುವ, ತಪ್ಪಿದಲ್ಲಿ ಧೈರ್ಯ ತುಂಬಿ ಸಮಾಧಾನಿಸುವ ಕುಟುಂಬ, ಸ್ನೇಹಿತರ ವರ್ಗ ಕೂಡ ಅಷ್ಟೇ
ಮುಖ್ಯವಾಗುತ್ತದೆ. ಕುಟುಂಬವು ವ್ಯಕ್ತಿಯ ಆಯ್ಕೆಯದ್ದಲ್ಲ, ಆದರೆ ಸ್ನೇಹಿತವರ್ಗ ಆರಿಸಿಕೊಳ್ಳಬಹುದಾದದ್ದು. ಒಂದಂತೂ ನೆನಪಿಟ್ಟುಕೊಳ್ಳಿ- ವ್ಯಕ್ತಿಯೊಬ್ಬನಿಗೆ ಸ್ವತಃ ತನ್ನಷ್ಟು ಕಟುವಿಮರ್ಶಕ ಇನ್ನೊಬ್ಬನಿರುವುದಿಲ್ಲ. ನಮ್ಮೊಳಗೆ ಹುಟ್ಟುವ ಆತ್ಮ ವಿಮರ್ಶೆಯನ್ನು ಸ್ವೀಕರಿಸುವ ವಿಧಾನ ಕೂಡ ನಮ್ಮ ಕೈಯಲ್ಲೇ ಇದೆ. ‘ನನ್ನ ಉದ್ದೇಶವೇನು? ಸಾಧನೆಯ ಮೊದಲ ಹೆಜ್ಜೆಯಿ ಟ್ಟಾಗ ನನ್ನ ಮೇಲೆ ನಾನೇ ಇಟ್ಟುಕೊಂಡ ನಿರೀಕ್ಷೆಗಳೇನು? ನಾನು ಅಂದುಕೊಂಡಿದ್ದೇನು?’ ಎಂಬಿತ್ಯಾದಿ ಪ್ರಶ್ನೆಯನ್ನು ನಮಗೆ ನಾವೇ ಕೇಳಿಕೊಳ್ಳುವುದಿದೆಯಲ್ಲ, ಅದು ಇಂತಹ ಸಂದರ್ಭದಲ್ಲಿ ನಮ್ಮನ್ನು ಸರಿದಾರಿಗೆ ತಂದು ನಿಲ್ಲಿಸುತ್ತದೆ.
ಸ್ವಂತದ ಮೇಲೆ ಅನುಮಾನ ಹುಟ್ಟದ ಸಾಧಕನೇ ಇಲ್ಲ. ಅದನ್ನು ಮೀರುವುದೇ ಸಾಧನೆ, ಹಾಗೆ ಹೇಳುವ ಮನಸ್ಸಿನ ಆ ಭಾಗ ವನ್ನು ಸೋಲಿಸುವುದು. ಯಾವುದೇ ಉದ್ಯೋಗವಿರಲಿ, ಹಿಡಿದ ಹಾದಿ ಯಾವುದೇ ಇರಲಿ, ಇದನ್ನು ಮೆಟ್ಟಿ ನಿಂತವನು ಮಾತ್ರ ಸಾಧಕನೆನಿಸಿಕೊಳ್ಳುತ್ತಾನೆ, ಭಿನ್ನವಾಗಿ ಗೆಲ್ಲುತ್ತಾನೆ. ಒಲಿಂಪಿಕ್ ಆಟಗಾರರಿಂದ ಹಿಡಿದು ರಾಜ್‌ಕುಮಾರ್‌ರವರೆಗೆ ಎಂಥೆಂಥ ಘಟಾನುಘಟಿಗಳನ್ನೇ ಬಿಡದ ಇದು ನಮ್ಮನ್ನೂ ಬಿಡುವುದಿಲ್ಲ.
ಇದು ಸಹಜ. ಸೋತಾಗ ಮೇಲೊಂದು ಕಲ್ಲು ಎಸೆಯುವವರು, ಕೊಂಕು ಮಾತಾಡುವವರು, ‘ನಿನ್ನ ಹತ್ತಿರ ಇದೆಲ್ಲ ಆಗುವುದಿಲ್ಲ ಬಿಡು’ ಎನ್ನುವ ರೀತಿಯ ಮಾತನ್ನು ಹೊಗಳುತ್ತಲೇ ಪರೋಕ್ಷವಾಗಿ, ದುರುದ್ದೇಶವಿಲ್ಲದೆ ಹೇಳುವವರು ಬದುಕಿನ ದಾರಿ ಯುದ್ದಕ್ಕೂ ಸಿಗುತ್ತಲೇ ಇರುತ್ತಾರೆ. ಅವರಿಲ್ಲದಾಗ ನಿಮ್ಮ ಮನಸ್ಸೇ ಹಾಗೆ ಹೇಳುವ ಕಿತಾಪತಿ ಮಾಡುತ್ತದೆ. ಸಾಧನೆಯ ಹಾದಿಯಲ್ಲಿ ಆತ್ಮಸಂಶಯ ‘ಪಿಟ್ ಸ್ಟಾಪ್’ನಂತೆ. ಅದು ಎದುರಾಗುತ್ತಿದ್ದರೆ ಮಾತ್ರ ಸರಿದಾರಿಯಲ್ಲಿದ್ದೀರಿ ಎಂದರ್ಥ. ಪಿಟ್ ಸ್ಟಾಪ್‌ನಲ್ಲೊಂದು ರೀಚಾರ್ಜ್ ಮಾಡಿಕೊಂಡು ಮುಂದಕ್ಕೆ ಹೊರಟುಬಿಡಬೇಕು- ಕೂತಲ್ಲಿನ ಧೂಳು ಬಟ್ಟೆಗೆ ಅಂಟಿದ್ದನ್ನು ಝಾಡಿಸಿ ಎದ್ದು ಹೊರಟಂತೆ.
ಚಿಯರ್ಸ್!