Friday, 20th September 2024

ಇಂಗ್ಲಿಷ್ ಪತ್ರಿಕೋದ್ಯಮದ ಚಹರೆ ಬದಲಿಸಿದ ಗುಹಾ ಎಂಬ ಮಾಂತ್ರಿಕನ ನಿರ್ಗಮನ !

ಇದೇ ಅಂತರಂಗ ಸುದ್ದಿ

ವಿಶ್ವೇಶ್ವರ ಭಟ್

vbhat@me.com

ಕನ್ನಡದ ಓದುಗರಿಗೆ ಕಳೆದ ವಾರ ನಿಧನರಾದ ಪ್ರದೀಪ ಗುಹಾ ಅಷ್ಟೇನೂ ಪರಿಚಿತರಲ್ಲ. ಅವರು ಭಾರತೀಯ ಪತ್ರಿಕೋದ್ಯಮದ, ಅದರಲ್ಲೂ ಇಂಗ್ಲಿಷ್
ಪತ್ರಿಕೋದ್ಯಮದ ಚಹರೆಯನ್ನು ಬದಲಿಸಿದವರು ಅಂದರೆ ಅನೇಕರಿಗೆ ಆಶ್ಚರ್ಯವಾಗಬಹುದು. ಆದರೆ ಅದು ವಾಸ್ತವ.

ಪ್ರದೀಪ ಗುಹಾ ಪ್ರಣೀತ ಪತ್ರಿಕೋದ್ಯಮ ಸರಿಯೋ, ತಪ್ಪೋ ಎಂಬುದು ಚರ್ಚಾರ್ಹ. ಆದರೆ ಅವರು ಪ್ರತಿಪಾದಿಸಿದ ಮಾರುಕಟ್ಟೆ ನಿಯಮಗಳು, ಮುದ್ರಣ ಮಾಧ್ಯಮದ ಸ್ವರೂಪವನ್ನು ಬದಲಿಸಿದ್ದು ಸುಳ್ಳಲ್ಲ. ಇಂದು 183 ವರ್ಷಗಳ ಭವ್ಯ ಇತಿಹಾಸವಿರುವ ‘ಟೈಮ್ಸ ಆಫ್ ಇಂಡಿಯಾ’ ಪತ್ರಿಕೆ, ಉಳಿದೆ ಇಂಗ್ಲಿಷ್ ಪತ್ರಿಕೆಗಳಿಗಿಂತ ಅಗ್ರ ಸ್ಥಾನದಲ್ಲಿದ್ದರೆ, ವ್ಯವಹಾರಿಕವಾಗಿ ಲಾಭದಾನಿರ್ಯಗಮನ ಕವಾಗಿದ್ದರೆ, ಅದರ ಸಿಂಹಪಾಲು ಪ್ರದೀಪ ಗುಹಾ ಅವರಿಗೆ ಸಲ್ಲಬೇಕು. ಆದರೆ ಈ ಮಾತನ್ನು ಯಾರೂ ಮುಕ್ತವಾಗಿ ಹೇಳುವುದಿಲ್ಲ.

‘ಟೈಮ್ಸ ಆಫ್ ಇಂಡಿಯಾ’ ಪತ್ರಿಕೆ ಭಾರತದ ಮಾಸ್ಟ್ ಹೆಡ್ ಮತ್ತು ಅದರ ಇಂಚಿಂಚು ಜಾಗ, ಭೂಮಿ ಬೆಲೆಗಿಂತ ದುಬಾರಿ ಎಂಬುದನ್ನು ಪ್ರತಿತಿಪಾದಿಸಿದವರು ಗುಹಾ. ಪತ್ರಿಕೆಯನ್ನು ಆ ನಿಟ್ಟಿನಲ್ಲಿ position ಮಾಡಿದವರೂ ಅವರೇ. ಓದುಗರನ್ನು ‘ಗ್ರಾಹಕ’ರು, ‘ಆವೃತ್ತಿ’ಗಳನ್ನು ‘ಮಾರುಕಟ್ಟೆ’, ‘ಸಂಪಾದಕ’ರನ್ನು ‘ಮಾರು ಕಟ್ಟೆ ಮುಖ್ಯಸ್ಥ’ ಮತ್ತು ‘ಪತ್ರಿಕೆ’ಯನ್ನು ’ಪ್ರೊಡಕ್ಟ್’ ಎಂದು ಬಿಂಬಿಸಿದವರೂ ಗುಹಾ ಅವರೇ. ನೂರಾರು ವರ್ಷ ಗಳಿಂದ ಸುದ್ದಿಮನೆಗಳಲ್ಲಿದ್ದ, ‘ಸಂಪಾದಕೀಯ ವಿಭಾಗವೇ ಸರ್ವಶ್ರೇಷ್ಠ’ ಎಂಬ ಪವಿತ್ರ ಮತ್ತು ಸ್ಥಾಪಿತ ಭಾವನೆಯನ್ನು ಹೊಡೆದು ಹಾಕಿ, ‘ಮಾರುಕಟ್ಟೆ ವಿಭಾಗವೇ ಪತ್ರಿಕೆಯ ಗರ್ಭಗುಡಿ’ ಎಂದು ಸಾರಿದ್ದಷ್ಟೇ ಅಲ್ಲ, ಉಳಿದೆ ಪತ್ರಿಕೆಗಳೂ ಇದನ್ನು ನಿಜವೆಂದು ನಂಬುವಂತೆ ಮಾಡಿದವರೂ ಗುಹಾ ಅವರೇ.

ಸಂಪಾದಕೀಯ ವಿಭಾಗದ ಪಾರಮ್ಯ ಮತ್ತು ಸಾರ್ವಭೌಮತ್ವವನ್ನು ನೆಲಸಮ ಮಾಡಿ, ಮಾರುಕಟ್ಟೆಯ ಹಿತಾಸಕ್ತಿಗೆ ತಕ್ಕಂತೆ ಪತ್ರಿಕೆಯನ್ನು ರೂಪಿಸಿದ್ದು ಸಹ ಅವರೇ. ಮೂರ್ನಾಲ್ಕು ದಶಕಗಳವರೆಗೆ, ಪತ್ರಿಕೆಯ ಮುಖಪುಟದಲ್ಲಿ ಜಾಹೀರಾತುಗಳನ್ನು ತೆಗೆದುಕೊಳ್ಳಬೇಕೋ, ಬೇಡವೋ, ಒಂದು ವೇಳೆ ತೆಗೆದುಕೊಂಡರೂ ಅದರ ಗಾತ್ರ ಎಷ್ಟಿರಬೇಕು ಎಂಬುದನ್ನು ಸಂಪಾದಕರು ನಿರ್ಧರಿಸುತ್ತಿದ್ದರು. ಆದರೆ ಪ್ರದೀಪ ಗುಹಾ ‘ಟೈಮ್ಸ ಆಫ್ ಇಂಡಿಯಾ’ ಮಾರುಕಟ್ಟೆ ವಿಭಾಗದ ಮುಖ್ಯಸ್ಥರಾದ ನಂತರ, ಸಂಪಾದಕರನ್ನು ಅಕ್ಷರಶಃ ಸಂಪಾದಕೀಯ ವಿಭಾಗಕ್ಕಷ್ಟೇ ಸೀಮಿತಗೊಳಿಸಿಬಿಟ್ಟರು.

ಪತ್ರಿಕೆಯ ಪುಟಗಳಲ್ಲಿ ಜಾಹೀರಾತುಗಳನ್ನು ಪ್ರಕಟಿಸಿದ ನಂತರ ಜಾಗ ಮಿಕ್ಕಿದ್ದರೆ, ಸುದ್ದಿಯನ್ನು ಪ್ರಕಟಿಸಬಹುದು ಎಂದು ಪ್ರತಿಪಾದಿಸಿದರು. ಪತ್ರಿಕೆ ಕೂಡ ಉಳಿದೆ ಗ್ರಾಹಕ ಉತ್ಪನ್ನಗಳಂತೆ ಒಂದು ಪ್ರೊಡಕ್ಟ್ ಎಂದು ಗುಹಾ ನಂಬಿಸಿದರು. ಪತ್ರಿಕೆ ಒಂದು ಸೇವೆಯಲ್ಲ, ಅದೊಂದು ಬಿಜಿನೆಸ್ ಎಂದು ಹೇಳಿದರು.
ಅದೊಂದು ಬಿಜಿನೆಸ್ ಅಂದ ಮೇಲೆ ಲಾಭವೇ ಮುಖ್ಯ ಎಂದು ವಾದಿಸಿದರು. ಇಡೀ ‘ಟೈಮ್ಸ್ ಆಫ್ ಇಂಡಿಯಾ’ ಕಚೇರಿಯಲ್ಲಿ ‘ನಷ್ಟ’ (loss) ಎಂಬ ಪದವನ್ನು ಯಾರೂ ಕೇಳಿಸಿಕೊಳ್ಳಲೇ ಬಾರದು ಎಂದು ಹೇಳಿದರು. ‘ಹಣವೆಂಬುದು ಯಾವುದೇ ಬಣ್ಣದಲ್ಲಿರಲಿ ಅದು ಸ್ವೀಕಾರ್ಹ’ ಎಂಬುದು ಅವರ ನಂಬಿಕೆಯಾಗಿತ್ತು.
ಅಚ್ಚರಿಯೆಂದರೆ, ಪ್ರದೀಪ ಗುಹಾ ಈ ಮಾತುಗಳನ್ನು ಇತರರು ‘ಪರಮ ಸತ್ಯ’ ಮತ್ತು ‘ದೇವವಾಣಿ’ ಎಂದು ನಂಬಿದ್ದು. ಬರಬರುತ್ತಾ ಪತ್ರಿಕೋದ್ಯಮದ ಸ್ಥಾಪಿತ
ನಿಯಮಗಳೆ ನೆಲಸಮವಾದವು.

ಪತ್ರಿಕೆ ಅಂದ್ರೆ ಗ್ರಾಹಕರನ್ನು ಮತ್ತು ಉತ್ಪಾದಕರನ್ನು ಒಂದೇ ಸ್ಥಳದಲ್ಲಿ ಸೇರಿಸುವ ಕೂಡುತಾಣ ಎಂಬಂತಾಯಿತು. ಈ ವಾದವನ್ನು ಮನಸ್ಸಿದ್ದೇ, ಇಲ್ಲದೆಯೋ ನಂಬುವ ಮತ್ತು ಸ್ವೀಕರಿಸುವ ಸಂಪಾದಕರು ಉಳಿದುಕೊಂಡರು. ಉಳಿದವರು ಮರು ಮಾತಿಲ್ಲದೇ ಜಾಗ ಖಾಲಿಮಾಡಬೇಕಾಯಿತು. ಕ್ರಮೇಣ ಮಾರುಕಟ್ಟೆ ವಿಭಾಗದವರು ಸಂಪಾದಕರಿಗೆ ಆದೇಶ ಕೊಡಲಾರಂಭಿಸಿದರು. ಮರುದಿನದ ಮುಖಪುಟ ಹೇಗಿರಬೇಕು ಎಂಬುದನ್ನು ಮಾರುಕಟ್ಟೆ ವಿಭಾಗ ನಿರ್ದೇಶಿಸಲಾ ರಂಭಿಸಿತು. ಪತ್ರಿಕೆಗೆ ಸುದ್ದಿಗಿಂತ ಜಾಹೀರಾತೇ ಜೀವಾಳ ಎಂಬುದನ್ನು ಸಂಪಾದಕೀಯ ವಿಭಾಗದ ಸಿಬ್ಬಂದಿ ತಲೆಯಲ್ಲಿ ತುಂಬಲಾಯಿತು. ಪತ್ರಿಕೆಗೆ ಸಂಪಾದಕ ರಿಗಿಂತ ಬ್ರಾಂಡ್ ಮುಖ್ಯ ಎಂದು ಹೇಳಲಾಯಿತು. ಪತ್ರಿಕೆ ಎಂಬ ತೇರನ್ನು ಯಾರು ಬೇಕಾದವರೂ ಎಳೆಯಬಹುದು, ಸಂಪಾದಕರೇ ಎಳೆಯಬೇಕೆಂದೇನೂ ಇಲ್ಲ ಎಂಬ ಭಾವನೆ ಮೂಡಿಸಲಾಯಿತು.

ಪತ್ರಿಕೆಯಲ್ಲಿ ಸಂಪಾದಕರ ಹೆಸರನ್ನು ಮಸೂರ ಹಿಡಿದು ಹುಡುಕುವಷ್ಟು ಚಿಕ್ಕ ಅಕ್ಷರಗಳಲ್ಲಿ ಪ್ರಕಟಿಸುವ ಪರಿಪಾಠ ಆರಂಭವಾಯಿತು. ಅಲ್ಲಿಗೆ, ಪತ್ರಿಕೆಯನ್ನು ಮುನ್ನಡೆಸುವವರು ಸಂಪಾದಕೀಯ ವಿಭಾಗದವರಲ್ಲ ಎಂಬುದನ್ನು ಗೋಡೆ ಮೇಲಿನ ಬರಹಗಳಷ್ಟು ನಿಚ್ಚಳವಾಗಿ, ಗುಹಾ ಮನವರಿಕೆ ಮಾಡಿಕೊಟ್ಟಿದ್ದರು. ಸಂಪಾದಕರು ಬರೆಯಬೇಕಿಲ್ಲ, ಅವರು ಕೇವಲ ಸುದ್ದಿಮನೆಯ ನಿರ್ವಾಹಕರು ಮತ್ತು ಮಾರುಕಟ್ಟೆ ವಿಭಾಗದವರಿಗೆ ಸಹಾಯಕರು ಅಥವಾ ಪ್ರೇಷಿತರು.
ಸಂಪಾದಕೀಯ ವಿಭಾಗ ಉಳಿದೆಲ್ಲವುಗಳಂತೆ ಒಂದು ವಿಭಾಗ, ಅದರ ಮೇಲ್ವಿಚಾರಕನೇ ಸಂಪಾದಕ ಎಂಬ ಹೊಸ ಭಾಷ್ಯ ಬರೆದವರೇ ಪ್ರದೀಪ ಗುಹಾ.

ಪರಿಣಾಮವಾಗಿ ಅಲ್ಲಿಗೆ ಖ್ಯಾತನಾಮ ಸಂಪಾದಕರಾದ ಗಿರಿಲಾಲ ಜೈನ್, ಶ್ಯಾಮಲಾಲ, ದಿಲೀಪ್ ಪಡಗಾಂವಕರ್ ಸಂತತಿ ನಶಿಸಿಹೋಯಿತು. ಮುಖೇಡಿಗಳು, ಪರಾಕು ಹಾಕುವವರು, ಬರೆಯಲು ಬಾರದವರು, ನಾಜೂಕಯ್ಯಗಳು ಆ ಪತ್ರಿಕೆಯ ಸಂಪಾದಕರಾಗುವಂತಾಯಿತು. ವಿಮಾನದಲ್ಲಿ ಪ್ರಯಾಣಿಸುವವರು, ಪೈಲಟ್ ಯಾರು ಎಂಬುದನ್ನು ತಿಳಿಯಲು ಉತ್ಸುಕರಾಗಿರುವುದಿಲ್ಲ. ಹಾಗೆಯೇ ಪತ್ರಿಕೆ ಖರೀದಿಸುವಾಗ ಓದುಗರಿಗೂ ಸಂಪಾದಕರು ಯಾರು ಎನ್ನುವುದು ಮುಖ್ಯವಾಗುವುದಿಲ್ಲ ಎಂಬ ವಾದವನ್ನು ಗುಹಾ ಪ್ರತಿಪಾದಿಸಿದರು. ಅಲ್ಲಿಗೆ ಸಂಪಾದಕೀಯ ವಿಭಾಗ, ಮಾರುಕಟ್ಟೆ ವಿಭಾಗದ ಒತ್ತೆಯಾಳಾಗಿ ಹೋಗಿತ್ತು.
ದುರ್ದೈವವೆಂದರೆ, ಇದೇ ಸರಿಯಾದ ಮಾದರಿ ಎಂದು ಸಾಬೀತಾಗಿ ಹೋಯಿತು.

ಕಾರಣ ಪ್ರದೀಪ ಗುಹಾ ಪತ್ರಿಕೆಯನ್ನು ಚಿನ್ನದ ಮೊಟ್ಟೆಯನ್ನಿಡುವ ಕೋಳಿಯನ್ನಾಗಿ ಮಾಡಿಬಿಟ್ಟರು. ಪತ್ರಿಕೆಯ ಶೀರ್ಷಿಕೆ (ಮಾಸ್ಟ್ ಹೆಡ್) ಸೇರಿದಂತೆ, ಎಲ್ಲವನ್ನೂ ಮಾರಾಟ ಮಾಡಬಹುದು, ಸಂಪಾದಕೀಯ ಪುಟವನ್ನೂ ಬಿಕರಿಗಿಡಬಹುದು ಎಂಬುದನ್ನು ಅವರು ತೋರಿಸಿಕೊಟ್ಟರು. ಜಾಹೀರಾತು ಜಾಗಗಳನ್ನು ಗುತ್ತಿಗೆ
ಆಧಾರದ ಮೇಲೆ ಹರಾಜು ಹಾಕಲಾಯಿತು. ಟೈಮ್ಸ್ ಸಮೂಹದ ‘ಫಿಲಂ ಫೇರ್’ ಪತ್ರಿಕೆ, ಸಿನಿಮಾ ತಾರೆಯರಿಗೆ ಪ್ರಶಸ್ತಿಗಳನ್ನು ಕೊಡುವ event ಸಂಘ ಟಿಸಿಯೇ ಹೆಚ್ಚು ಹಣ ಮಾಡಲಾರಂಭಿಸಿತು.

ಮುಂಬೈಯಲ್ಲಿನ ರಿಯಲ್ ಎಸ್ಟೇಟ್ ಜಾಗಕ್ಕಿಂತ, ‘ಟೈಮ್ಸ’ ಮತ್ತು ಆ ಸಮೂಹದ ಪತ್ರಿಕೆಗಳ ಬಿಳಿಕಾಗದದ ಜಾಗ ಮತ್ತಷ್ಟು ದುಬಾರಿಯಾಯಿತು. ‘ಫಿಲ್ಮ್ ಫೇರ್’ ಪ್ರಶಸ್ತಿ event ಇಡೀ ದೇಶದಲ್ಲಿಯೇ ಅತ್ಯಂತ ದೊಡ್ಡ ತಾರೆಯರ ಮತ್ತು ಗಣ್ಯರ ಮೇಳವೆಂದು ಕರೆಯಿಸಿಕೊಂಡಿತು. ಈ ಕಾರ್ಯಕ್ರಮವನ್ನು ಪ್ರಾಯೋಜಿಸಲು ನೂರಾರು ಕಂಪನಿಗಳು ಪೈಪೋಟಿಗೆ ಬಿದ್ದು ಮುಂದೆ ಬರಲಾರಂಭಿಸಿದವು. ಈ event ಒಂದರಿಂದಲೇ ನೂರಾರು ಕೋಟಿ ರುಪಾಯಿಯನ್ನು ಸಂಪಾದಿಸ ಬಹುದು ಎಂಬುದನ್ನು ತೋರಿಸಿಕೊಟ್ಟವರು ಪ್ರದೀಪ್ ಗುಹಾ. ಇದರ ಜತೆಗೆ ಅದೇ ಸಮೂಹದ ‘ಫೆಮಿನಾ’ ಪತ್ರಿಕೆಯ ಹೆಸರಿನಲ್ಲಿ ‘ಸೌಂದರ್ಯ ಸ್ಪರ್ಧೆ’ಗಳನ್ನು (ಫೆಮಿನಾ ಮಿಸ್ ಇಂಡಿಯಾ.. ಇತ್ಯಾದಿ) ಸಂಘಟಿಸಲಾರಂಭಿಸಿದರು. ಇದೂ ಸಹ ’ಬಿಗ್ ಟಿಕೆಟ್’ event ಎಂದು ಬಿಂಬಿಸಲಾಯಿತು.

ಪ್ರದೀಪ್ ಗುಹಾ ‘ಟೈಮ್ಸ್ ಆಫ್ ಇಂಡಿಯಾ’ ಪತ್ರಿಕೆಯ ಮಾಲೀಕರಿಗೆ ಅತ್ಯಂತ ನಿಕಟವರ್ತಿಯಾಗಿದ್ದರು. ಗುಹಾ ಯಾವುದೇ ಹೊಸ ಯೋಜನೆಗಳನ್ನು ಪ್ರಸ್ತಾಪಿಸಿದರೂ ಆಡಳಿತ ಮಂಡಳಿ ‘ಇಲ್ಲ’ ಎನ್ನುತ್ತಿರಲಿಲ್ಲ. ಅವರ ಮೇಲೆ ಅಂಥ ವಿಶ್ವಾಸ. ಅವರು ಮಾಲೀಕರಿಗೆ ಸಂಪಾದಕರಿಗಿಂತ ಹೆಚ್ಚು ಆತ್ಮೀಯ ಮತ್ತು ಸನಿಹವಾಗಿದ್ದರು. ಅವರು ಇಡೀ ಸಂಸ್ಥೆಯ ನಿಯಮಗಳನ್ನೆಲ್ಲ ಮುರಿದು ಹೊಸತನ್ನು ಜಾರಿಗೆ ತಂದರು. ಗುಹಾ ಏನೇ ಹೇಳಿದರೂ ಅದು ಮಾಲೀಕರ ಅಂಬೋಣ
ಎಂದು ಇಡೀ ಸಂಸ್ಥೆ ಭಾವಿಸುತ್ತಿತ್ತು. ಬ್ರಾಂಡ್, ಅಡ್ವರ್ಟೈಸಿಂಗ್, ಕ್ಯಾಂಪೇನ್, ಇವೆಂಟ್ ಹೊರತಾಗಿ ಅವರು ಬೇರೇನೂ ಮಾತಾಡುವುದಿಲ್ಲ ಎಂದು ಜನ ಮಾತಾಡಿಕೊಳ್ಳುತ್ತಿದ್ದರು.

ಅವರು ಏನೇ ಮಾಡಲಿ, ಅದನ್ನು monetise ಮಾಡುತ್ತಿದ್ದರು. ಅದರ ಸಿಂಹಪಾಲು ಸಂಸ್ಥೆಗೆ ಸಿಗುವಂತೆ ಶ್ರಮಿಸುತ್ತಿದ್ದರು. ಪತ್ರಿಕೆಯ ಬ್ರಾಂಡ್ ಬಳಸಿಕೊಂಡು, event ಗಳನ್ನು ಸಂಘಟಿಸುವ ಹೊಸ ಪರಂಪರೆಯನ್ನು ಗುಹಾ ಹುಟ್ಟು ಹಾಕಿದರು. ದೊಡ್ಡ ಪ್ರಮಾಣದಲ್ಲಿ ಜಾಹೀರಾತುಗಳನ್ನು ಬಿಡುಗಡೆ ಮಾಡುವ ಕಂಪನಿಗಳು ಹಣದ ಬದಲು ತಮ್ಮ ಕಂಪನಿಗಳ ಷೇರುಗಳನ್ನು ಸ್ವೀಕರಿಸುವ ಪರಂಪರೆಯನ್ನೂ ಅವರೇ ಆರಂಭಿಸಿದರು. ಇದರಿಂದ ಜಾಹೀರಾತುಗಳ ಒಳಹರಿವು ಒಂದೇ ಸಮನೆ ಜಾಸ್ತಿಯಾಯಿತು. ಈ ಪ್ರಕ್ರಿಯೆಯಲ್ಲಿ ಅವರು ಭಾರತದ ಎಲ್ಲಾ ಅಡ್ವರ್ಟೈಸಿಂಗ್ ಏಜೆನ್ಸಿಗಳ ಪ್ರಮುಖರಿಗೆ ಆಪ್ತರಾದರು. ಏಜೆನ್ಸಿ ಗಳನ್ನು ನಿಯಂತ್ರಿಸುವ ಮಟ್ಟಕ್ಕೆ ಅವರು ಪ್ರಭಾವವನ್ನು ಬೆಳೆಸಿಕೊಂಡರು. ಅಷ್ಟಕ್ಕೂ ಪತ್ರಿಕೆಗಳಿಗೆ ಜಾಹೀರಾತುಗಳ ಒಳಹರಿವನ್ನು ನಿರ್ಧರಿಸುವವರು, ನಿಯಂತ್ರಿಸುವವರು ಈ ಏಜೆನ್ಸಿ ಗಳ ಮುಖ್ಯಸ್ಥರು ತಾನೇ.

ಏಜೆನ್ಸಿಗಳ ಬೇಡಿಕೆಗಳಿಗೆ ಪೂರಕವಾಗಿ ಪತ್ರಿಕೆಗಳನ್ನು ರೂಪಿಸುವ ಹೊಸ ಸಂಪ್ರದಾಯ ಆರಂಭವಾಯಿತು. ಜಾಹೀರಾತುದಾರರ ಅಗತ್ಯಗಳಿಗೆ ತಕ್ಕಂತೆ ಮುಖಪುಟವನ್ನು ರೂಪಿಸುವ ಹೊಸ ಚಾಳಿ ಶುರುವಾಯಿತು. ಪ್ರೀಮಿಯಂ ಹಣ ಕೊಡುವುದಾದರೆ, ಪತ್ರಿಕೆಯ ಹೆಸರನ್ನು ಜಾಹೀರಾತುದಾರರಿಗೆ ಕಡ ಕೊಡುವು ದನ್ನೂ ಟೈಮ್ಸ್ ಆಫ್ ಇಂಡಿಯಾ’ ಆರಂಭಿಸಿತು. ಟೈಮ್ಸ್ ಸಮೂಹದ ಪತ್ರಿಕೆಗಳು ಅಖಿಲ ಭಾರತ ಮಟ್ಟದ ಎಲ್ಲಾ ಜಾಹೀರಾತು ಕ್ಯಾಂಪೇನ್‌ಗಳನ್ನೂ ಕೊಳ್ಳೆ ಹೊಡೆಯಲಾರಂಭಿಸಿತು. ನೂರು ವರ್ಷಗಳಲ್ಲಿ ಆಗದ ಪ್ರಗತಿ ಕೇವಲ ಹತ್ತು ವರ್ಷಗಳಲ್ಲಿ ಆಯಿತು. ಅಡ್ವರ್ಟೈಸಿಂಗ್, ಮಾರ್ಕೆಟಿಂಗ್ ಪದಗಳು ’ರೆಸ್ಪಾ’ ಆಗಿ ಮಾರ್ಪಾಡಾದವು.

ಹಣ ಕೊಟ್ಟು ಸುದ್ದಿ ಹಾಕಿಸಿಕೊಳ್ಳುವ ಅಥವಾ ಪ್ರಾಯೋಜಿತ ಸುದ್ದಿ ’ರೆಸ್ಪಾ ಕನೆಕ್ಸ್’ ಆದವು. ಜಾಹೀರಾತು ಜಾಗಗಳು ’ಹೋಲಿ ಸ್ಪೇಸ್’ಗಳಾದವು. ದಿನವೂ ಪತ್ರಿಕೆಗಳಲ್ಲಿ ಕಾಣಿಸಿಕೊಳ್ಳುವ ಶ್ರೀಮಂತ ಷೋಕಿದಾರರಿಗಾಗಿ ’ಪೇಜ್ ಥ್ರೀ’ ಪುಟಗಳನ್ನು ಆರಂಭಿಸಿದ ಅಗ್ಗಳಿಕೆಯೂ ಪ್ರದೀಪ್ ಗುಹಾ ಅವರದೇ. ಅದಕ್ಕಾಗಿ ಅವರು ’ಬಾಂಬೆ ಟೈಮ್ಸ್’ ಆರಂಭಿಸಿದರು. ಶುರುವಾತಿನಲ್ಲಿ ಅವರೇ ಅದರ ಸಂಪಾದಕರಾಗಿದ್ದರು. ಅದು ಸಮಾಜದ ಗಣ್ಯವ್ಯಕ್ತಿಗಳು, ಸಿನಿಮಾ ತಾರೆಯರು, ಉದ್ಯಮಿಗಳು, ವಿಶಿಷ್ಟ ವ್ಯಕ್ತಿಗಳಿಗಾಗಿಯೇ ಮೀಸಲಾದ ’ಲೈಫ್ ಸ್ಟೈಲ್’ ಪುರವಣಿ.

ಇದನ್ನು ನಿಯಂತ್ರಿಸುವುದಕ್ಕಾಗಿಯೇ ’ಮೀಡಿಯಾನೆಟ್’ ಎಂಬ ಹೊಸ ವಿಭಾಗವನ್ನು ತೆರೆದರು. ಪತ್ರಿಕೆಗಳಲ್ಲಿ ರಾರಾಜಿಸುವ ಖಯಾಲಿ ಇರುವ ದಿಢೀರ್
ಶ್ರೀಮಂತರಿಗೆ, ಸಮಾಜದ ಎದುರು ತಮ್ಮ ದೌಲತ್ತನ್ನು ಪ್ರದರ್ಶಿಸುವ ವಿಲಕ್ಷಣ ಆಸೆಯಿರುತ್ತದೆ. ಅಂಥವರನ್ನು ಈ ’ಮೀಡಿಯಾನೆಟ್’ ಸೆಳೆದು, ಪತ್ರಿಕೆಯಲ್ಲಿ ಜಾಗ ಮಾಡಿಕೊಟ್ಟಿತು. ಸಾಮಾನ್ಯ ಓದುಗರಿಗೆ ಅದು ದೊಡ್ಡವರ ಸುದ್ದಿ. ಅವರಂತೆ ತಾವೂ ಆಗಬೇಕೆಂಬ ಆಸೆಯನ್ನು ಹುಟ್ಟಿಸುವ ಮೂಲಕ ಹೊಸ ಪೀಳಿಗೆಯ ಓದುಗರನ್ನು ಸೆಳೆಯುವುದು ಉದ್ದೇಶ. ಜತೆಗೆ ಆ ಸುದ್ದಿಗೆ ಹಣ ಪೀಕುವುದು ಕೂಡ. ಬಾಂಬೆ ಟೈಮ್ಸ್’ ಬಹುಬೇಗನೆ ಯಶಸ್ವಿಯಾಯಿತು.

ಈ ಪ್ರಯೋಗವನ್ನು ಎಲ್ಲಾ ಆವೃತ್ತಿಗಳಲ್ಲೂ ಜಾರಿಗೊಳಿಸಲಾಯಿತು. ಆಗ ದಿಲ್ಲಿ ಟೈಮ್ಸ್, ಬೆಂಗಳೂರು ಟೈಮ್ಸ್, ಪೂನಾ ಟೈಮ್ಸ್.. ಹೀಗೆ ಆಯಾ ಊರುಗಳ ಹೆಸರಿನ ಪುರವಣಿಗಳು ಆರಂಭವಾದವು. ಅವು ಆ ನಗರಗಳಲ್ಲೂ ಮೇನ್ ಪೇಜ್‌ನ್ನು ಮೀರಿಸುವಂತೆ ಬೆಳೆದಿದ್ದು ಗಮನಾರ್ಹ. ಬರಬರುತ್ತಾ, ಅದರ ಜಾಹೀರಾತು ಗಳಿಕೆಯೂ ಮುಖ್ಯ ಪತ್ರಿಕೆಯನ್ನು ಮೀರಿಸಲಾರಂಭಿಸಿತು. ಅಂದು ಪ್ರದೀಪ್ ಗುಹಾ ರೂಪಿಸಿದ ನಿಯಮಗಳನ್ನು, ಅವರ ಜತೆಯಲ್ಲಿದ್ದವರು ‘ವೇದವಾಕ್ಯ’ ಎಂಬಂತೆ ಪ್ರಚಾರ ಮಾಡಿದರು. ಅವರಿಗೆ ಗುಹಾ, ಮಾಂತ್ರಿಕನಂತೆ ಕಂಡರು.

ಅವರ ಸುತ್ತ ಪ್ರಖರ ಪ್ರಭಾವಳಿ ನಿರ್ಮಾಣವಾಯಿತು. (ಗುಹಾ ಅವರ ಪ್ರಭಾವ ಬಾಲಿವುಡ್ ಅನ್ನು ಸಹ ವ್ಯಾಪಿಸಿತ್ತು) ಇಂದು ಬಹುತೇಕ ಎಲ್ಲಾ ಪತ್ರಿಕೆಗಳೂ ಶಿರಸಾ ಪಾಲಿಸುತ್ತಿವೆ. ಮುದ್ರಣ ಮಾಧ್ಯಮ ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಈ ನಿಯಮಪಾಲನೆ ಅತ್ಯಗತ್ಯ ಎಂಬ ಭಾವನೆಯೂ ಬೇರೂರಿದೆ. ನಾನು ‘ವಿಜಯ ಕರ್ನಾಟಕ’ದ ಸಂಪಾದಕನಾಗಿದ್ದಾಗ, ಸಂಸ್ಥೆಯ ಅಂದಿನ ಸಿಇಒ ಆಗಿದ್ದ ಚಿನ್ನನ್ ದಾಸ್ ಅವರ ಜತೆ, ಪ್ರದೀಪ್ ಗುಹಾ ಅವರನ್ನು ಭೇಟಿ ಮಾಡುವ ಮತ್ತು ಅವರ
ಜತೆ ಇಡೀ ದಿನ ಕಳೆಯುವ ಮತ್ತು ‘ಗುಹಾ ಪ್ರಣೀತ ವಾದ’ಗಳನ್ನು ಕೇಳುವ ಅವಕಾಶ ಸಿಕ್ಕಿತ್ತು. ‘ನಿಮ್ಮ ನಿಯಮಗಳನ್ನು ಒಪ್ಪಿಕೊಳ್ಳುವುದು ಕಷ್ಟ’ ಎಂದೇ ನಾನು
ಮಾತು ಆರಂಭಿಸಿದಾಗ, ‘ನನ್ನ ನಿಯಮಗಳನ್ನು ಪಾಲಿಸದಿದ್ದರೆ, ಪತ್ರಿಕೆಗಳಿಗೆ ಉಳಿಗಾಲ ಇಲ್ಲ’ ಎಂದು ಖಡಾಖಡಿ ಹೇಳಿದ್ದು ನನಗಿನ್ನೂ ನೆನಪಿದೆ.

ಇಂದು ಅವರ ನಿಯಮ ಒಂದಿಂದು ರೀತಿಯಲ್ಲಿ, ಸ್ವರೂಪದಲ್ಲಿ ಜಾರಿಯಲ್ಲಿದೆ. ಅದು ಸರಿಯೋ, ತಪ್ಪೋ ಎಂದು ನಿರ್ಧರಿಸುವ ವಿವೇಚನೆ ಬಗ್ಗೆ ಯಾರೂ ತಲೆ ಕೆಡಿಸಿಕೊಳ್ಳುತ್ತಿಲ್ಲ. ಸರಿ-ತಪ್ಪು ನಡುವಿನ ತೆಳುವಾದ ಗೆರೆ ಅಳಿಸಿ ಹೋಗಿದೆ.

ಪಾದ್ರಿಯ ಪ್ರವಚನ
ಮುಂದಿನ ಭಾನುವಾರ ನನ್ನ ಉಪನ್ಯಾಸದ ವಿಷಯ – ಸುಳ್ಳುಬುರುಕರು. ನಾನು ನಿಮಗೆ ಒಂದು ಸಣ್ಣ ಹೋಮ್ ವರ್ಕ್ ಕೊಡುತ್ತೇನೆ. ನೀವು ಉಪನ್ಯಾಸ ಕೇಳಲು ಬರುವಾಗ ಬೈಬಲ್ ನಲ್ಲಿರುವ ಮಾರ್ಕನ ಹದಿನೇಳನೇ ಅಧ್ಯಾಯವನ್ನು ತಪ್ಪದೇ ಓದಿಕೊಂಡು ಬರಬೇಕು’ ಎಂದು ಪಾದ್ರಿ ಚರ್ಚಿನ ಪ್ರಾರ್ಥನೆ ಮುಗಿದ ಬಳಿಕ ಘೋಷಿಸಿದರು. ಎಲ್ಲರೂ ಆಗಬಹುದು ಎಂಬಂತೆ ತಲೆ ಅಲ್ಲಾಡಿಸಿದರು.

ಭಾನುವಾರ ಬಂದಿತು. ಪಾದ್ರಿ ತಮ್ಮ ಉಪನ್ಯಾಸ ಆರಂಭಿಸುವ ಮುನ್ನ, ನಿಮ್ಮಲ್ಲಿ ಎಷ್ಟು ಜನ ಬೈಬಲ್ ನಲ್ಲಿರುವ ಮಾರ್ಕನ ಹದಿನೇಳನೇ ಅಧ್ಯಾಯವನ್ನು ಓದಿಕೊಂಡು ಬಂದಿದ್ದೀರಿ? ಎಂದು ಕೇಳಿದರು. ಒಬ್ಬೊಬ್ಬರಾಗಿ ಕೈಯೆತ್ತಲಾರಂಭಿಸಿದರು. ನೋಡನೋಡುತ್ತಿರುವಂತೆ ಅಲ್ಲಿ ನೆರೆದಿದ್ದ ಎಲ್ಲರೂ ಕೈಯೆತ್ತಿದರು. ಕೆಲವರಂತೂ ಎರಡೂ ಕೈಗಳನ್ನು ಎತ್ತಿದ್ದರು. ಅವರೆಲ್ಲರನ್ನೂ ನೋಡಿದ ಪಾದ್ರಿ, ’ನನಗೆ ನಿಮ್ಮಂಥ ಸಭಿಕರು ಬೇಕು. ನಿಮ್ಮನ್ನೇ ಉದ್ದೇಶಿಸಿ ಮಾತಾಡಬೇಕು
ಎಂಬುದು ನನ್ನ ಉದ್ದೇಶವಾಗಿತ್ತು. ಅದು ಇಂದು ಈಡೇರುತ್ತಿದೆ’ ಎಂದು ಹೇಳಿದಾಗ ಸಭಿಕರೆಲ್ಲ ಮುಖಮುಖ ನೋಡಿಕೊಂಡರು.

ಪಾದ್ರಿ ಮುಂದುವರಿಸಿದರು – ’ಬೈಬಲ್ ನಲ್ಲಿರುವ ಮಾರ್ಕನ ಹದಿನೇಳನೇ ಅಧ್ಯಾಯವನ್ನು ತಪ್ಪದೇ ಓದಿಕೊಂಡು ಬರಬೇಕು ಎಂದು ನಿಮಗೆ ಹೇಳಿದ್ದೆ. ನೀವೆಲ್ಲಾ ಓದಿಕೊಂಡು ಬಂದಿದ್ದೇನೆ ಎಂದು ಹೇಳಿದ್ದೀರಾ. ಆದರೆ ಆ ಕೃತಿಯಲ್ಲಿ ಇರುವುದೇ ಹದಿನಾರು ಅಧ್ಯಾಯಗಳು. ನೀವೆಲ್ಲರೂ ಸುಳ್ಳುಬುರುಕರು ಎಂಬುದನ್ನು ಒಪ್ಪಿಕೊಂಡಿದ್ದೀರಾ. ನಿಮ್ಮನ್ನು ಉದ್ದೇಶಿಸಿ ಮಾತಾಡಲು ಬಹಳ ಸಂತಸವಾಗುತ್ತಿದೆ.’ ಎಲ್ಲರೂ ಮುಖ ಕೆಳಕ್ಕೆ ಹಾಕಿ ಕುಳಿತುಕೊಂಡಿದ್ದರು. ಪಾದ್ರಿ ಹೇಳಿದರು – ’ಇವತ್ತಿನ ಪ್ರವಚನ ಮುಗಿಯಿತು.’