Sunday, 8th September 2024

ನೀ ನಿರೀಕ್ಷೆಯೊಳಗೋ ನಿನ್ನೊಳು ನಿರೀಕ್ಷೆಯೋ

ಅಭಿವ್ಯಕ್ತಿ

ಪರಿಣಿತ ರವಿ

ಯಾವ ನಿರೀಕ್ಷೆಯೂ ಇಲ್ಲದೆ ನಿನ್ನ ಕೆಲಸ ನೀನು ಮಾಡು’ ಎಂಬ ತತ್ವವನ್ನು ಭಗವದ್ಗೀತೆಯಿಂದ ಹಿಡಿದು ಎಲ್ಲಾ ಗ್ರಂಥಗಳು,
ತತ್ವಜ್ಞಾನಿಗಳು, ದಾರ್ಶನಿಕರು, ಚಿಂತಕರು ಹೇಳಿರುದನ್ನು ನಾವು ಕೇಳಿದ್ದೇವೆ, ಓದಿದ್ದೇವೆ.

ನಿರೀಕ್ಷೆಯು ಎಲ್ಲಾ ತಲೆನೋವುಗಳ ಬೇರು ಎಂದು ವಿಲಿಯಮ್ ಶೇಕ್ಸ್‌ಪಿಯರ್, ನಿರೀಕ್ಷೆ ಕೊನೆಯಾದಾಗ ಶಾಂತಿ ಆರಂಭ ವಾಗುತ್ತದೆ ಎಂದು ಗೌತಮ ಬುದ್ಧ, ಜೀವನದಲ್ಲಿ ವಿಜಯಿಗಳಾಗಬೇಕಾದರೆ ಆಸೆ, ನಂಬಿಕೆ, ನಿರೀಕ್ಷೆ ಈ ಮೂರರ ಮೇಲೆ ಒಡೆತನ ಸಾಧಿಸಬೇಕು ಎಂದು ಎ.ಪಿ.ಜೆ.ಅಬ್ದುಲ್ ಕಲಾಂ… ಹೀಗೆ ನಿರೀಕ್ಷೆಯ ಬಗ್ಗೆ ಪ್ರಸಿದ್ಧ ವ್ಯಕ್ತಿಗಳು ನುಡಿದ ಆಣಿಮುತ್ತುಗಳಿವೆ. ಆದರೆ ಯಾರು ಏನೇ ಹೇಳಿದರೂ ನಿರೀಕ್ಷೆಗಳಿಲ್ಲದ ಮನುಷ್ಯನಿರಲು ಸಾಧ್ಯವೇ? ಪ್ರತಿಯೊಬ್ಬ ವ್ಯಕ್ತಿಯಲ್ಲೂ ಒಂದಲ್ಲ ಒಂದು ನಿರೀಕ್ಷೆ ಇದ್ದೇ ಇರುತ್ತದಲ್ಲವೇ? ಯಾವ ಜಾಗವೇ ಆಗಲಿ, ಸಂಬಂಧವೇ ಆಗಲಿ ನಿರೀಕ್ಷೆಗಳಿಂದ ಮುಕ್ತವಾಗಿದೆಯೇ? ಒಂದು ನಿರೀಕ್ಷೆ ಹುಸಿಯಾದರೆ ಮತ್ತೊಂದು ಹುಟ್ಟಿಕೊಳ್ಳದಿರುತ್ತದೆಯೇ?

ಮರದಲ್ಲಿ ಎಲೆಗಳು ಹೇಗೆ ಸಹಜವೋ, ಜೀವನದಲ್ಲಿ ನಿರೀಕ್ಷೆಗಳೂ ಹಾಗೆ ಎಂದು ಅನಿಸದಿರದೇ? ಆದರೆ ನಮ್ಮ ನಿರೀಕ್ಷೆಗಳು ತಾರ್ಕಿಕವಾಗಿರಬೇಕು ಮತ್ತು ವಿವೇಚನೆಯಿಂದ ಕೂಡಿರಬೇಕು ಅನ್ನುವುದನ್ನು ನಾವು ಮರೆಯಬಾರದು. ವಾಸ್ತವವನ್ನು ಅರ್ಥ
ಮಾಡಿಕೊಂಡ ಪ್ರಜ್ಞಾಪೂರ್ವಕವಾದ ನಿರೀಕ್ಷೆಯಿಂದ ಯಾವುದೇ ಹಾನಿಯಾಗಲಾರದು.

ಬದಲಾಗಿ ರಾತ್ರಿ ಮಲಗುವಾಗ ನಾಳೆ ಬೆಳಗು ಆಗದಿರಲಿ, ಸೂರ್ಯ ಹುಟ್ಟದಿರಲಿ ಎಂದು ನಿರೀಕ್ಷಿಸಿದರೆ? ಕಷ್ಟಗಳೇ ಬರಬಾರದು ಸುಖ ಮಾತ್ರ ಇರಬೇಕು ಎಂದು ಆಶಿಸಿದರೆ? ಅಂದುಕೊಂಡದ್ದೇ ನೆರವೇರಲೇಬೇಕು ಎಂದು ಅಪೇಕ್ಷಿಸಿದರೆ? ಎಲ್ಲರೂ ನನ್ನನ್ನು  ಚ್ಚಿಕೊಳ್ಳಬೇಕು, ಒಳ್ಳೆಯದೇ ಮಾತಾಡಬೇಕು ಎಂದು ನಿರೀಕ್ಷಿಸಿದರೆ? ಇಂತಹ ನಿರೀಕ್ಷೆಗಳು ಎಷ್ಟು ಅಪ್ರಾಯೋಗಿಕ ಹಾಗೂ ಅವಾಸ್ತವ ಅಲ್ಲವೇ? ಹಾಗೆಯೇ ನಾವು ಯಾರಿಗಾದರೂ ಸಹಾಯ ಮಾಡಿದರೆ ಅವರು ನಮ್ಮನ್ನು ಮನದ ದೇಗುಲದಲ್ಲಿ
ಪ್ರತಿಷ್ಠಾಪಿಸಿ ಆರಾಧಿಸುತ್ತಲೇ ಇರುತ್ತಾರೆ ಎಂಬ ನಿರೀಕ್ಷೆಯೂ ಸಲ್ಲದು.

ಕೆಲವರು ಸಹಾಯ ಪಡೆದು ಮರೆತು ಬಿಡಬಹುದು, ಇನ್ನು ಕೆಲವರು ಸದಾ ಸ್ಮರಿಸಬಹುದು. ಅದೇನೇ ಆದರೂ ಸಹಾಯ
ಮಾಡುವುದು, ಪರರಿಗೆ ಉಪಕಾರ ಮಾಡುವುದು ನಮ್ಮ ತೃಪ್ತಿಗಾಗಿ, ಸಂತೋಷಕ್ಕಾಗಿ ಆಗಬೇಕೇ ಹೊರತು ಬೇರೇನಾದರು ಪ್ರತಿ ಫಲ ನಿರೀಕ್ಷಿಸಿದರೆ ಅಲ್ಲಿ ಖಂಡಿತಾ ನಿರಾಶೆ ತಪ್ಪಿದಲ್ಲ. ಬಹಳ ನಂಬಿಕೆಯಿಂದ ಗೆಳೆಯನ ಜತೆ ಸೇರಿಕೊಂಡು ಆರಂಭಿಸಿದ ವ್ಯವಹಾರದಲ್ಲಿ ಪ್ರಾಣ ಸ್ನೇಹಿತನೇ ಮೋಸ ಮಾಡಬಹುದು.

ತುಂಬಾ ಶ್ರಮಪಟ್ಟು ನಾವೇ ಕಟ್ಟಿದ ಕನಸಿನ ಮನೆ ನಮಗೆ ದಕ್ಕದೇ ಇರಬಹುದು. ನಾವೇ ಹುಟ್ಟು ಹಾಕಿದ ಸಂಘಟನೆಯಿಂದ ನಮಗೇ ಹೊರಗೆ ಹೋಗಬೇಕಾಗಿ ಬರಬಹುದು. ಜೀವವನ್ನೇ ಸವೆಸಿ ಸಾಕಿದ ಮಕ್ಕಳು ತಿರುಗಿ ನಿಲ್ಲಬಹುದು. ಊಹಿಸಲೂ ಸಾಧ್ಯವಾಗದಂತೆ ನಮ್ಮ ಆಪ್ತರೇ ನಮ್ಮನ್ನು ಹಳಿಯಬಹುದು. ಯಾರು ಬೆಂಬಲಕ್ಕೆ ನಿಲ್ಲಬೇಕೋ ಅಂತಹ ಬಂಧುಗಳೇ ಬೆನ್ನಿಗೆ
ಇರಿಯಬಹುದು. ನಿರ್ದಿಷ್ಟವಾದ ಗುರಿಯೊಂದಿಗೆ ವಿದ್ಯಾಭ್ಯಾಸ ಪೂರೈಸಿದ ಬಳಿಕವೂ ನಾವು ಬಯಸಿದ ಉದ್ಯೋಗ ಸಿಗದೇ ಇರಬಹುದು. ಕಷ್ಟಗಳ ಮೇಲೆ ಕಷ್ಟಗಳ ಸುರಿಮಳೆಯಿಂದಾಗಿ ಇಷ್ಟಪಟ್ಟ ಬದುಕು ನಮ್ಮದಾಗದೇ ಇರಬಹುದು.

ಇಂತಹ ನಮ್ಮ ನಿರೀಕ್ಷೆಗಳೆ ತಲೆಕೆಳಗಾಗುವ ಸಂದರ್ಭಗಳು ಜೀವನದಲ್ಲಿ ಎದುರಾಗುತ್ತಲೇ ಇರುತ್ತವೆ. ಆಗ ನಿರಾಶೆಗೊಳ್ಳದೆ
ವಾಸ್ತವವನ್ನು ಒಪ್ಪಿಕೊಂಡು ಮುಂದೆ ಸಾಗುವುದು ಬಹಳ ತ್ರಾಸವಾಗುತ್ತದೆ. ಆದರೆ ಇದನ್ನು ಎದುರಿಸಿ ಜಯಿಸಲೇ ಬೇಕಾಗಿರುವುದು ಅನಿವಾರ್ಯ. ವಿಜ್ಞಾನಿ ತಂದೆ, ಎಂಜಿನಿಯರ್ ತಾಯಿಯ ಏಕೈಕ ಮಗ ೧೨ನೇ ತರಗತಿಯಲ್ಲಿ ಶೇ.೧೦೦ ಅಂಕ ಪಡೆಯುತ್ತಾನೆಂಬ ನಿರೀಕ್ಷೆಯಿಂದ ಪಾರ್ಟಿ ಅರೇಂಜ್ ಮಾಡಿ, ಫಲಿತಾಂಶ ಪ್ರಕಟವಾದಾಗ ಶೇ.೯೪ ಬಂದರೆ ಪಾರ್ಟಿಯ ಮನೆ ಸಾವಿನ ಮನೆಯಾದ ಘಟನೆ ನಮ್ಮ ಸುಸಂಸ್ಕೃತ, ಸುಶಿಕ್ಷಿತ ಸಮಾಜದಲ್ಲಿಯೇ ಕಂಡುಬಂದಿದೆ.

ವಿದ್ಯಾವಂತರಾದ ನಾವೇ ಮಕ್ಕಳನ್ನು ನಮ್ಮ ನಿರೀಕ್ಷೆಗಳನ್ನು ಪೂರೈಸಲಿರುವ ಸರಕುಗಳಂತೆ ಕಾಣುವುದು ಬೇಸರದ ಸಂಗತಿ ಯಾದರೂ ಸತ್ಯ ಅನ್ನುವುದನ್ನು ಒಪ್ಪಲೇಬೇಕು. ನಿರೀಕ್ಷೆಗಳು, ಕಂಡ ಕನಸುಗಳು ಹುಸಿಯಾಗಿ ಹತಾಶೆ ಆವರಿಸಿ ಬದುಕೇ
ಸಾಕು ಅನಿಸುವ ಅದೇ ಸಂದರ್ಭದಲ್ಲಿ ಸುಟ್ಟು ಹೋದ ತನ್ನ ಭಸ್ಮದಿಂದ ಮತ್ತೆ ಉದ್ಭವಿಸುವ ಫಿನಿಕ್ಸ್ ಹಕ್ಕಿಯಂತೆ ದುರಿತಗಳಿಗೆ ಮಣಿಯದೆ ಜೀವನದಲ್ಲಿ ಸಾಧನೆಗೈದ ಅದೆಷ್ಟೋ ಜನರು ನಮ್ಮ ಸುತ್ತಮುತ್ತಲೂ ಕಾಣಸಿಗುತ್ತಾರೆ.

ಅದು ನಮ್ಮೊಳಗೆ ಅಸಾಧಾರಣವಾದ ಸೂರ್ತಿಯ, ಭರವಸೆಯ ಬೆಳಕು ಚೆಲ್ಲಿ ಜೀವಪರತೆಯ ದನಿಯಾಗಬಲ್ಲದು. ಜೀವನದಲ್ಲಿ ನಿರೀಕ್ಷೆಗಳು ಹೇಗಿರಬೇಕು ಎಂಬುದನ್ನು ಈ ‘ರೈತ ಹಾಗೂ ಬಾಲಕ’ನ ಕತೆ ನಮಗೆ ಚೆನ್ನಾಗಿ ತಿಳಿಸಿ ಹೇಳುತ್ತದೆ. ಒಬ್ಬ ವೃದ್ಧ ರೈತ
ತರಕಾರಿಗಳನ್ನು ಬೆಳೆದು ಮಾರ್ಗದ ಬದಿ ರಾಶಿ ಹಾಕಿ ಮಾರಾಟ ಮಾಡುತ್ತಿದ್ದ. ಎಲ್ಲಾ ತರಕಾರಿಗಳೂ ಖಾಲಿ ಆದ ಮೇಲೆ ಬಲಿತದ್ದು, ಒಣಗಿದ್ದು, ಬಾಡಿದ್ದು ಹೀಗೆ ಉಪೇಕ್ಷಿಸಲ್ಪಟ್ಟ ತರಕಾರಿಗಳನ್ನು ಒಂದು ಚೀಲದಲ್ಲಿ ಹಾಕಿ ಮರಳಿ ಕೊಂಡು ಹೋಗುತ್ತಿದ್ದ.

ಇದನ್ನು ಕಂಡ ಒಬ್ಬ ಬಾಲಕ ಕೇಳಿದ, ತಾತ ಈ ಒಳ್ಳೆದಿಲ್ಲದ ತರಕಾರಿಗಳನ್ನು ಯಾಕೆ ಮರಳಿ ಕೊಂಡುಹೋಗುತ್ತಿದ್ದೀರಿ ಎಂದು. ರೈತ ಹೇಳಿದ, ಮಗೂ.. ಯಾರಿಗೂ ಬೇಡವಾದ ಇವುಗಳಲ್ಲಿ ನನ್ನ ನಾಳಿನ ನಿರೀಕ್ಷೆಗಳಿವೆ ಎಂದು. ಅರ್ಥವಾಗದ ಬಾಲಕ, ಎಲ್ಲರೂ
ಬೇಡವೆಂದು ಬಿಟ್ಟು ಹೋದ ಈ ತರಕಾರಿಗಳಲ್ಲಿ ಅದು ಹೇಗೆ ತಾತ ನಾಳಿನ ನಿರೀಕ್ಷೆಗಳಿರುವುದು?. ನೋಡು ಕಂದಾ..ನಾನು ಈ ತರಕಾರಿಗಳಿಂದ ಬೀಜಗಳನ್ನು ಬೇರ್ಪಡಿಸಿ, ಬಿಸಿಲಲ್ಲಿ ಒಣಗಿಸಿ ಬೊಗಸೆ ಬೀಜಗಳನ್ನು ಬಿತ್ತಿದಾಗ ಅವುಗಳಲ್ಲಿ ಬೆರಳೆಣಿಕೆ ಯಷ್ಟಾದರೂ ಮೊಳಕೆಯೊಡೆದು ಗಿಡವಾಗಿ ತರಕಾರಿಗಳನ್ನು ಕೊಡಬಲ್ಲುದು.

ಅದು ನನ್ನ ನಾಳಿನ ದಿನದ ಅನ್ನದ ದಾರಿಯಾಗಬಲ್ಲದು. ಕುತೂಹಲದಿಂದ ಬಾಲಕ ಮತ್ತೆ ಕೇಳಿದ, ಅದು ಯಾಕೆ ತಾತ ಹಿಡಿ ಬೀಜಗಳಿಂದ ಬೆರಳೆಣಿಕೆಯಷ್ಟು ಮಾತ್ರ ಮೊಳಕೆಯೊಡೆದು ಫಲ ಕೊಡುವುದು?. ತಾತ ಹೇಳುತ್ತಾನೆ, ಮಗೂ…ಅವುಗಳಲ್ಲಿ ಕೆಲವು
ಟೊಳ್ಳಾಗಿರಬಹುದು, ಕೆಲವು ಬಿಸಿಲಲ್ಲಿ ಒಣಗಿದ್ದು ಸಾಕಾಗದೇ ಇರಬಹುದು, ಕೆಲವನ್ನು ಹುಳುಗಳು ತಿಂದಿರಬಹುದು, ಕೆಲವಕ್ಕೆ ನೀರು ಬೆಳಕು ಸರಿಯಾಗಿ ಸಿಗದಿರಬಹುದು, ಇನ್ನು ಕೆಲವಕ್ಕೆ ಸಮರ್ಪಕವಾದ ಆರೈಕೆಯ ಕೊರತೆ ಇರಬಹುದು. ಹಾಗಾಗಿ
ಬಿತ್ತುವುದಷ್ಟೇ ನಮ್ಮ ಕೆಲಸ.

ಫಲ ಕೊಡುವವನು ದೇವರು. ಇದು ಜೀವನಕ್ಕೂ ಅನ್ವಯಿಸುತ್ತದೆ ಅಲ್ಲವೇ? ಬದುಕಿನಲ್ಲೂ ಅಷ್ಟೇ, ನಾವು ರಾಶಿ ರಾಶಿ
ನಿರೀಕ್ಷೆ ಗಳನ್ನು ಇಟ್ಟುಕೊಳ್ಳುತ್ತೇವೆ. ಅದರಲ್ಲಿ ಬೆರಳೆಣಿಕೆಯಷ್ಟು ಮಾತ್ರವೇ ಈಡೇರಬಹುದು. ಉಳಿದವುಗಳು ಹುಸಿಯಾಗ ಬಹುದು. ನಂಬಿಕೆ ದ್ರೋಹವೋ, ತಪ್ಪು ತಿಳಿವಳಿಕೆಯೋ, ಅತಿಯಾದ ವಿಶ್ವಾಸವೋ, ಕಾಣದ ಕೈಗಳ ಕೈವಾಡವೋ, ಶ್ರಮದ
ಕೊರತೆಯೋ ಕಾರಣಗಳು ಹಲವು ಇರಬಹುದು. ಇಲ್ಲಿ ರೈತ ಹೇಳಿದಂತೆ ಹುಸಿಯಾದ ನಿರೀಕ್ಷೆಗಳ ಕುರಿತು ಚಿಂತಿಸದೆ ಮುಂದೆ ಸಾಗುವುದಷ್ಟೇ ನಮ್ಮ ಧ್ಯೇಯವಾಗಬೇಕು.

ಜೀವನದಲ್ಲಿ ನಿರೀಕ್ಷೆಗಳೆ ನೆಲಕಚ್ಚಿ, ಬದುಕೇ ಬರಡಾದಂತೆ ಅನಿಸಿದಾಗಲೂ ಕಡಿದ ಮರ ಮತ್ತೆ ಚಿಗುರುವಂತೆ ಆತ್ಮಸ್ಥೆ ರ್ಯವನ್ನು ಬೆಳೆಸಿಕೊಳ್ಳುವುದೊಂದೇ ಪರಿಹಾರವೆಂದು ಈ ನೈಜ ಘಟನೆ ಹೇಳುತ್ತದೆ. ೨೦೧೯, ಜನವರಿಯಲ್ಲಿ ಒಮ್ಮೆ ನಾನು
ಎರ್ನಾಕುಳಂನಿಂದ ಮಂಗಳೂರಿಗೆ ರೈಲಿನಲ್ಲಿ ಪ್ರಯಾಣಿಸುತ್ತಿರುವಾಗ ಒಬ್ಬರು ಮಹಿಳೆ ತ್ರಿಶೂಲ್ ಸ್ಟೇಷನ್‌ನಲ್ಲಿ ಹತ್ತಿದವರು ನನ್ನ ಪಕ್ಕ ಕುಳಿತರು. ಸೌಜನ್ಯ, ಸಜ್ಜನಿಕೆಯೇ ಮೂರ್ತಿವೆತ್ತಂತಿದ್ದ ಅವರು ಆಗಾಗ ಕಣ್ಣೀರೊರೆಸಿಕೊಳ್ಳುವುದನ್ನು ಗಮನಿಸಿದೆ.
ಸುಮಾರು ಎರಡು ತಾಸುಗಳ ಬಳಿಕವೂ ಅವರು ಅದೇ ಸ್ಥಿತಿಯಲ್ಲಿದ್ದಾಗ ‘ಏನಾಯಿತು’ ಎಂದು ಅಳುಕುತ್ತಲೇ ಕೇಳಿದೆ.

ಅಣೆಕಟ್ಟಿನ ಕಟ್ಟೆಯೊಡೆದು ನೀರು ಮುನ್ನುಗ್ಗುವಂತೆ ದುಃಖ ಉಮ್ಮಳಿಸಿ ಬಂತು ಅವರಿಗೆ. ಕೇಳಬಾರದಿತ್ತೇನೋ ಎಂದು ಗಲಿಬಿಲಿ
ಗೊಂಡೆ ನಾನು. ನನಗೆ ಒಬ್ಬನೇ ಮಗನಿದ್ದ. ಸೆಕೆಂಡ್ ಇಯರ್ ಎಂಜಿನಿಯರಿಂಗ್ ಓದುತ್ತಿದ್ದ. ಒಂದು ತಿಂಗಳ ಹಿಂದೆ ದೇವರು ಅವನನ್ನು ಕಿತ್ತುಕೊಂಡ ಅಂದರು. ಏನು ಹೇಳಬೇಕೆಂದೇ ತೋಚಲಿಲ್ಲ ನನಗೆ. ನಿಧಾನಕ್ಕೆ ಮಾತಿಗಿಳಿದಾಗ ತಿಳಿದದ್ದಿಷ್ಟು. ಅವರು
ಹೈಸ್ಕೂಲ್ ಗಣಿತ ಅಧ್ಯಾಪಕಿ. ಪತಿಯೂ ಹೈಸ್ಕೂಲ್ ಅಧ್ಯಾಪಕರು.

ಒಂದು ತಿಂಗಳ ಹಿಂದೆಯಷ್ಟೇ ಜತೆಗೆ ಕುಳಿತು ಹರಟೆ ಹೊಡೆಯುತ್ತಾ ಜೋರಾಗಿ ನಕ್ಕಮಗನಿಗೆ ಹಠಾತ್ತನೆ ಕೆಮ್ಮು ಬಂದು ಉಸಿರಾಡಲಾಗದೆ ಬಿದ್ದುಬಿಟ್ಟ. ಆಸ್ಪತ್ರೆಗೆ ಸಾಗಿಸುವಾಗಲೇ ಜೀವ ಹೋಗಿತ್ತು. ಹೃದಯಾಘಾತ ಅಂದರು ವೈದ್ಯರು. ಭಾವನಾತ್ಮಕ ವಾಗಿ ಮಾತನಾಡುತ್ತಾ ಸುಮಾರು ಏಳೆಂಟು ತಾಸುಗಳ ಜತೆ ಪ್ರಯಾಣದಲ್ಲಿ ಮನಸಿಗೆ ಬಹಳ ಹತ್ತಿರವಾಗಿಬಿಟ್ಟರು. ಪರಸ್ಪರ ಫೋನ್ ನಂಬರ್ ತೆಗೆದುಕೊಂಡು ವಿದಾಯ ಹೇಳಿದೆವು. ನಾಲ್ಕು ತಿಂಗಳ ಬಳಿಕ ಅವರಿಗೆ ಕರೆ ಮಾಡಿ ಮಾತಾಡಿದ್ದೆ. ತುಂಬಾ ಸಮಾಧಾನ ಹೊಂದಿದ್ದರು.

ಎಲ್ಲಾ ದೇವರ ಆಟ. ಜೀವನದಲ್ಲಿ ಯಾವುದೇ ನಿರೀಕ್ಷೆಗಳನ್ನು ಇಟ್ಟುಕೊಳ್ಳಬಾರದು. ಎಲ್ಲರೂ ಹೋಗುವವರೇ. ಇರುವಷ್ಟು ದಿನ ಹೋದವರನ್ನು ನೆನೆದು ಕೊರಗುವುದಕ್ಕಿಂತ ನನ್ನ ವಿದ್ಯಾರ್ಥಿಗಳಲ್ಲಿ ಮಗನನ್ನೇ ಕಾಣುತ್ತಿದ್ದೇನೆ ಅಂದರು. ಯಾವ ತತ್ತ್ವಜ್ಞಾನಿಗೂ ಕಡಿಮೆಯಿಲ್ಲ ಇವರ ಮಾತು ಅನಿಸಿತು ನನಗೆ. ಹೀಗೆ ನಿರೀಕ್ಷೆಗಳು ಹುಸಿಯಾದಾಗ ನಿರಾಶೆಗೊಳ್ಳದೆ ಧೈರ್ಯ ಗುಂದದೆ ವಾಸ್ತವವನ್ನು ಒಪ್ಪಿಕೊಳ್ಳಬೇಕೆಂಬ ಪಾಠಗಳು ನಮ್ಮ ಸುತ್ತಲೂ ಕಾಣಸಿಗುತ್ತವೆ. ಬದಲಾಗಿ ನಾನು, ನನ್ನದು, ನನ್ನಿಂದ, ನನ್ನವರು ಅನ್ನುವ ಮೋಹದ ಸುತ್ತ ನಮ್ಮ ಯೋಚನೆಗಳು ಸುತ್ತುತ್ತಿದ್ದರೆ ನಿರೀಕ್ಷೆಗಳು ಹುಸಿಯಾದಾಗ ಒಪ್ಪಿಕೊಳ್ಳುವುದು
ಕಷ್ಟವೆನಿಸುತ್ತದೆ. ಅರ್ಥಮಾಡಿಕೊಳ್ಳಬೇಕಾಗಿರುವುದು ಇಷ್ಟೇ.

ನಮ್ಮ ನಿರೀಕ್ಷೆಗಳಿಗೆ ಅನುಗುಣವಾಗಿ ಯಾರೂ, ಯಾವುದೂ ಬದಲಾಗಲಾರದು/ರು ಅನ್ನುವ ಸತ್ಯ. ನಮ್ಮ ನಿರೀಕ್ಷೆಗಳನ್ನು ಪೂರೈಸಲು ಇಲ್ಲಿ ಯಾರಿಗೂ ಸಮಯವಿಲ್ಲ ಹಾಗೂ ಅದು ಯಾರಿಗೂ ಬೇಕಾಗಿಲ್ಲ ಅನ್ನುವ ವಾಸ್ತವ. ಎಲ್ಲರೂ ಅವರದೇ
ಲೋಕದಲ್ಲಿ ನಿರತರಾಗಿರುತ್ತಾರೆ ಅನ್ನುವ ವಿವೇಕ. ನಮ್ಮ ನಿರೀಕ್ಷೆಯಂತೆ ಜಗತ್ತು ನಡೆಯಬೇಕೆಂದು ಅಂದುಕೊಳ್ಳುವುದು ಮೂರ್ಖತನ. ಪ್ರತಿಯೊಬ್ಬರ ಪ್ರತಿಕ್ರಿಯೆಗಳೂ ಸಂದರ್ಭ, ಪರಿಸ್ಥಿತಿಯ ಮೇಲೆ ನಿಂತಿದೆಯೇ ಹೊರತು ನಮ್ಮ ನಿರೀಕ್ಷೆಗಳ ಮೇಲಲ್ಲ ಅನ್ನುವ ಪ್ರಜ್ಞೆ.

ಎಲ್ಲಕ್ಕಿಂತ ಮುಖ್ಯವಾಗಿ ಮಾನವನ ಬದುಕು ಸೃಷ್ಟಿಕರ್ತನೆಂಬ ಸಾಹೇಬನ ಮನದಿಚ್ಛೆಯಂತೆಯೇ ನಡೆಯುವುದು ಅನ್ನುವ ಪರಮಸತ್ಯದ ಅರಿವು. ನಮ್ಮ ನಿರೀಕ್ಷೆಗಳು ಈಡೇರದೇ ಹೋದಾಗ ಹತಾಶೆಗೊಳ್ಳುವುದು, ಆಘಾತಕ್ಕೊಳಗಾಗುವುದು,
ಇನ್ನೊಬ್ಬರ ಬಗ್ಗೆ ಕೆಟ್ಟದಾಗಿ ಮಾತನಾಡುವುದು, ಸೇಡು ಸಿಟ್ಟು ಮೊದಲಾದ ಋಣಾತ್ಮಕ ಚಿಂತೆಗಳಲ್ಲಿ ಕಳೆದು ಹೋಗುತ್ತೇವೆ. ಇದರಿಂದ ನಾವು ಮನಸಿನ ಸ್ವಾಸ್ಥ್ಯವನ್ನು ಕಳೆದುಕೊಂಡು ನೆಮ್ಮದಿ ಇಲ್ಲದಂತಾಗುತ್ತದೆ.

ಹಾಗಾಗಿ ‘ನೀ ಮಾಯೆ ಯೊಳಗೋ ನಿನ್ನೊಳು ಮಾಯೆಯೋ’ ಎಂದು ಕನಕದಾಸರು ಹೇಳಿದಂತೆ ನೀ ನಿರೀಕ್ಷೆ ಯೊಳಗೋ ನಿನ್ನೊಳು ನಿರೀಕ್ಷೆಯೋ ಎಂದು ನಾವೇ ಸ್ವವಿಮರ್ಶೆ ಮಾಡುತ್ತಾ ಬಂದುದನ್ನು ಬಂದಂತೆ ಸ್ವೀಕರಿಸಿದಾಗ ಬದುಕು ನಿರಾಳ.

Leave a Reply

Your email address will not be published. Required fields are marked *

error: Content is protected !!